ಪ್ರ : 22 ವರ್ಷದ ಯುವತಿ. ವಿ.ವಿ.ಯಲ್ಲಿ ಎಂ.ಎ ವ್ಯಾಸಂಗ ಮಾಡುತ್ತಿದ್ದೇನೆ. ಕಳೆದ ಕೆಲವು ತಿಂಗಳುಗಳಿಂದ ನನ್ನ ಬಾಯಿಯಲ್ಲಿ ಗುಳ್ಳೆಗಳಾಗುತ್ತಿವೆ. ನಾನು ಸದಾ ಗೆಳತಿಯರೊಂದಿಗೆ ಅದೂ ಇದೂ ತಿನ್ನುತ್ತಿರುತ್ತೇನೆ. ಒಬ್ಬರ ಎಂಜಲು ತಗುಲುವುದರಿಂದಲೂ ಸಮಸ್ಯೆಯಾಗುತ್ತದೆ ಎಂದು ಅಮ್ಮ ಹೇಳಿದ ಬಳಿಕ ನಾನು ಈಗ ಬಹಳ ಎಚ್ಚರ ವಹಿಸುತ್ತಿದ್ದೇನೆ. ಆದರೆ ಬಾಯಿಯ ಗುಳ್ಳೆಗಳ ಸಮಸ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ಈ ಸಮಸ್ಯೆ ಯಾವ ಕಾರಣದಿಂದ ಆಗುತ್ತಿದೆ, ಅದಕ್ಕೆ ಪರಿಹಾರ ಏನು ಎಂಬುದರ ಬಗ್ಗೆ ತಿಳಿಸಿ.

ಉ : ಬಾಯಲ್ಲಿ ಗುಳ್ಳೆಗಳಾಗುವುದು ಸಾಮಾನ್ಯ ಸಂಗತಿ. ಬಾಯಿಯ ಒಳಭಾಗ, ಕೆನ್ನೆಯ ಆಂತರಿಕ ಭಾಗ, ತುಟಿ ಮತ್ತು ನಾಲಿಗೆಯ ಕೆಳಭಾಗದ ತನಕ ಎಲ್ಲಿಯಾದರೂ ಇವು ಕಾಣಿಸಿಕೊಳ್ಳುತ್ತವೆ. ಮೊದಲಿನ ಗುಳ್ಳೆ ಮರೆಯಾಗುತ್ತಿದ್ದಂತೆ, ಇನ್ನೊಂದು ಗುಳ್ಳೆ ಪ್ರತ್ಯಕ್ಷವಾಗುತ್ತದೆ. ಖುಷಿಯ ಸಂಗತಿಯೆಂದರೆ, ಬಹಳಷ್ಟು ಗುಳ್ಳೆಗಳು ತಂತಾನೇ ಮಾಯವಾಗುತ್ತವೆ. ಅವುಗಳಿಂದ ಯಾವುದೇ ಕೆಟ್ಟ ಪರಿಣಾಮ ಆಗುವುದಿಲ್ಲ. ಗುಳ್ಳೆಗಳು ಏಕೆ ಏಳುತ್ತವೆ ಎಂದು ಹೇಳುವುದು ಕಷ್ಟ. ಅವು ಹಲವು ಸಂಗತಿಗಳನ್ನು ಅವಲಂಬಿಸಿ ಮುಂದೆ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಶುರುವಾಗಬಹುದು. ಜ್ವರದ ವೈರಸ್‌ಗಳಿಂದ ಗುಳ್ಳೆಗಳು ಎದ್ದಿದ್ದರೆ ಅವು ತಂತಾನೇ ಹೊರಟುಹೋಗುತ್ತವೆ.

ಕೆಲವು ಮಹಿಳೆಯರಲ್ಲಿ ಮುಟ್ಟು ಶುರುವಾಗುವ ಮೊದಲೇ ಕಾಣಿಸಿಕೊಂಡು, ಸ್ವಲ್ಪ ದಿನ ತೊಂದರೆ ಕೊಟ್ಟು ಪುನಃ ಹೊರಟುಹೋಗುತ್ತವೆ. ಹಾರ್ಮೋನುಗಳ ಏರುಪೇರು ಹಾಗೂ ಉತ್ಪತ್ತಿಗೂ ಸಂಬಂಧವಿದೆ. ಇನ್ನೂ ಕೆಲವು ಮಹಿಳೆಯರಲ್ಲಿ ಸಮಸ್ಯೆ ಗಂಭೀರವಾಗಿರುತ್ತದೆ. ದೇಹದಲ್ಲಿ ಫಾಲಿಕ್‌ ಆ್ಯಸಿಡ್‌ ಹಾಗೂ ವಿಟಮಿನ್‌ ಬಿ12ನ ಕೊರತೆ, ಅನೀಮಿಯ, ಕರುಳಿನ ಸಮಸ್ಯೆ, ಹರ್ಪಿಸ್‌ ಸಿಂಪ್ಲೆಕ್ಸ್ ಮುಂತಾದ ಕಾರಣಗಳಿಂದಲೂ ಬಾಯಿ ಗುಳ್ಳೆಗಳು ಬರುತ್ತವೆ. ಒಬ್ಬ ವ್ಯಕ್ತಿಯ ಎಂಜಲು ಸೇವನೆಯಿಂದ ಅವು ಕಾಣಿಸಿಕೊಳ್ಳುತ್ತವೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ.

ಬಾಯಿಯ ಗುಳ್ಳೆಗಳಿಂದ ಗುಣಮುಖರಾಗಲು ಕೆಲವು ಸರಳ ಉಪಾಯಗಳು :

ಸಾಧಾರಣ ಬೆಚ್ಚಗಿನ ನೀರಿನಲ್ಲಿ ಉಪ್ಪು ಮಿಶ್ರಣ ಮಾಡಿ ಬಾಯಿ ಮುಕ್ಕಳಿಸಿ : ಒಂದು ಗ್ಲಾಸ್‌ ನೀರಿನಲ್ಲಿ ಅರ್ಧ ಚಮಚ ಉಪ್ಪು ಮಿಶ್ರಣ ಮಾಡಿ ನಿಧಾನವಾಗಿ ಮುಕ್ಕಳಿಸಿ. ದಿನಕ್ಕೆ 2-3 ಸಲ ಈ ರೀತಿ ಮಾಡಿ.

ಔಷಧಿಗಳೂ ಉಪಯುಕ್ತ : ಔಷಧಿ ಅಂಗಡಿಯಲ್ಲಿ ಲಭ್ಯವಾಗುವ ಹೈಡ್ರೋಕಾರ್ಟಿಸೋನ್‌ ಎಂಬ ಚೀಪು ಮಾತ್ರೆ ಅಥವಾ ಹೈಡ್ರೊಕಾರ್ಟಿಸೋನ್‌ ಇರುವ ಮೌತ್‌ ಜೆಲ್ ಲೇಪಿಸುವುದರಿಂದಲೂ ಗುಳ್ಳೆಗಳಿಂದ ಬಹು ಬೇಗ ಮುಕ್ತಿ ದೊರಕುತ್ತದೆ. ಹತ್ತಿಯ ತುಂಡಿನಲ್ಲಿ ಬೊರೋ ಗ್ಲಿಸರಿನ್‌ ಲೇಪಿಸಿ ಅಥವಾ ದೇಸಿ ತುಪ್ಪ ಅಥವಾ ಬೆಣ್ಣೆ ಸರುವುದರಿಂದಲೂ ಗುಳ್ಳೆಗಳಿಂದ ಉಂಟಾಗುವ ಉರಿತವನ್ನು ಕಡಿಮೆ ಮಾಡಬಹುದು.

ನೋವು ನಿವಾರಕ ಸೇವನೆ ಯಾವಾಗ ಸೂಕ್ತ? : ಹೆಚ್ಚು ನೋವಿದ್ದಾಗ ಯಾವುದಾದರೂ ಸಾಧಾರಣ ನೋವು ನಿವಾರಕ ಅಂದರೆ 500 ಮಿಲಿ ಗ್ರಾಂ ಪ್ಯಾರಾಸಿಟಮಲ್ ಸೇವನೆ ಸೂಕ್ತ. ಆದರೆ ವೈದ್ಯರ ಪರಾಮರ್ಶೆಯಿಲ್ಲದೆ ಔಷಧಿ ಸೇವನೆ ಸೂಕ್ತವಲ್ಲ.

ಮಲ್ಟಿ ವಿಟಮಿನ್‌ ಕ್ಯಾಪ್ಸೂಲ್ ‌: ದೇಹದಲ್ಲಿ ಫಾಲಿಕ್‌ ಆ್ಯಸಿಡ್‌ ಅಥವಾ ವಿಟಮಿನ್‌ ಬಿ12 ಕಡಿಮೆಯಾದಾಗ ಇಲ್ಲಿ ಅಧಿಕ ಒತ್ತಡದ ದಿನಗಳಲ್ಲಿ ಮಲ್ಟಿ ವಿಟಮಿನ್‌ ಕ್ಯಾಪ್ಸೂಲ್ ‌ಹಾಗೂ ಮಾತ್ರೆಗಳ ಸೇವನೆ ಲಾಭಕರಾಗಬಹುದು.

ಏನೇನು ಬಿಡಬೇಕು? : ನೋವು ಇರುವ ದಿನಗಳಲ್ಲಿ ಹುಳಿ ಹಣ್ಣುಗಳು, ಮಸಾಲೆ ಪದಾರ್ಥ, ಚಾಕಲೇಟ್‌ ಮುಂತಾದವನ್ನು ಸೇವಿಸಬೇಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ