ನನ್ನ ಗೆಳತಿ ಪ್ರಿಯಾಳ ತಾಯಿ ತಂದೆ ಇತ್ತೀಚೆಗೆ  ದುರ್ಘಟನೆಯೊಂದರಲ್ಲಿ ತೀರಿಕೊಂಡಿದ್ದರು. ಅಂದಿನಿಂದ ಮೊಮ್ಮಗಳ ಪೂರ್ತಿ ಪಾಲನೆ ಪೋಷಣೆ, ಶಾಲೆ ಕಾಲೇಜಿನ ಖರ್ಚಿಲ್ಲ ಅಜ್ಜಿ ತಾತನ ಜವಾಬ್ದಾರಿ ಆಗಿತ್ತು. ನನ್ನ ಗೆಳತಿಯ ತಾಯಿಯ ತವರಿನಲ್ಲಿ ಹೆಚ್ಚಿನ ಅನುಕೂಲ ಇರಲಿಲ್ಲ. ಹೀಗಾಗಿ ಪ್ರಿಯಾ ತಂದೆಯ ಮನೆಯಲ್ಲೇ ಉಳಿದುಬಿಟ್ಟಳು, ಆ ಕಡೆ ಅಜ್ಜಿ ತಾತನ ಸಂಪರ್ಕ ಬಹಳ ಕಡಿಮೆ ಆಯಿತು.

ಅಂತೂ ಇವಳು ಡಿಗ್ರಿ ಮುಗಿಸಿದಾಗ ಈ ಅಜ್ಜಿ ತಾತಾ ತಮ್ಮ ಅಂತಸ್ತಿಗೆ ಮೀರಿ ಡಾಕ್ಟರ್‌ರನ ಸಂಬಂಧ ಕುದುರಿಸಿದ್ದರು. ತಾಂಬೂಲ ಬದಲಾಯಿಸುವ ಸಂದರ್ಭದಲ್ಲಿ ಹೆಣ್ಣಿನ ಕಡೆಯವರಾಗಿ ಗಂಡಿನ ಕಡೆಯವರಿಗೆ ವರದಕ್ಷಿಣೆ, ವರೋಪಚಾರ ಏನೇನು ಕೊಡಬೇಕು ಎಂದು ತಾತಾ ಮಾತುಕಥೆ ಆರಂಭಿಸಿದರು.

ಅನುಕೂಲಸ್ಥರಾದ ವರನ ಕಡೆಯವರು ತಮಗೇನೂ ವರದಕ್ಷಿಣೆ ಬೇಡ, ಸರಳವಾಗಿ ಮದುವೆ ಮಾಡಿ, ಸೊಸೆಯನ್ನು ಮನೆ ತುಂಬಿಸಿ ಕೊಡಿ ಎಂದು ಹೇಳಿ ಲಗ್ನಪತ್ರಿಕೆ ಗಟ್ಟಿ ಮಾಡಿಸಿ ಹೊರಟರು. ವೃದ್ಧರಾದ ತಮ್ಮನ್ನು ಕಂಡು ಸಂಕೋಚಕ್ಕೆ ಹಾಗೆ ಹೇಳಿರಬೇಕೆಂದು ತಾತಾ ಹೆಣ್ಣಿನ ಕಡೆಯವರಾಗಿ ಪೇಚಾಡಿಕೊಂಡರು.

ಅಂತೂ ಲಗ್ನಪತ್ರಿಕೆ ದಿನ ವಧೂವರರಿಗೆ ಹಾರ ಹಾಕಿ ಆರತಿ ಬೆಳಗಿದ್ದಾಯಿತು. ಇನ್ನೇನು ಪತ್ರಿಕೆ ಓದಬೇಕು, ಅದಕ್ಕೆ ಮುಂಚೆ ತಾತಾ ವರನ ತಂದೆಯನ್ನು ಬದಿಗೆ ಕರೆದು, ವರದಕ್ಷಿಣೆ ಮೊತ್ತ ಹೇಳಲೇ ಇಲ್ಲ…. ಎಂದು ಸಂಕೋಚದಿಂದ ಹೇಳಿದರು. “ಹಾಗಿದ್ದರೆ ನಮಗೆ ಭಾರಿ ಮೊತ್ತದ ವರದಕ್ಷಿಣೆಯೇ ಬೇಕು!” ಎಂದು ಬೀಗರು ಪಟ್ಟು ಹಿಡಿದು ನಿಂತರು.

ವರನ ಕಡೆಯವರ ಬೇಡಿಕೆ ಕೇಳಿ ವಧು ಪಕ್ಷದವರು ಜಂಘಾಬಲವೇ ಉಡುಗಿಹೋಯಿತು. ತಾತಾ ಹೇಳಿದರು, “ನಾನು  ಮೊದಲಿನಿಂದಲೇ ನಿಮಗೆಲ್ಲ ನಮಗಿರುವ ಶಕ್ತಿ ಸಾಮರ್ಥ್ಯದ ಬಗ್ಗೆ ಹೇಳುತ್ತಾ ಬಂದಿದ್ದೇನೆ. ಆದರೆ ನೀವೇ ಕೇಳಲಿಲ್ಲ. ಈಗ ಲಗ್ನಪತ್ರಿಕೆ ಓದಿಸುವ ಸಮಯದಲ್ಲಿ ಈ ಪಾಟಿ ದೊಡ್ಡ ಮೊತ್ತ ಕೇಳಿದರೆ ಎಲ್ಲಿಂದ ಒದಗಿಸಲಿ?” ಅವರ ಕಣ್ಣು ತುಂಬಿ ಬಂತು.

ಆಗ ವರನ ತಂದೆ, “ಅದೆಲ್ಲ ನಮಗೆ ಗೊತ್ತಿಲ್ಲ. ನಮ್ಮ ಮಗ ಏನು ಕೇಳುತ್ತಾನೋ ನೀವು ಅದನ್ನು ಕೊಡಲೇಬೇಕು,” ಎಂದು ಒತ್ತಾಯಿಸಿದರು.

ತಾತಾ ಧೈರ್ಯವಹಿಸಿ ಅಳಿಯನ ಕಡೆಗೆ ತಿರುಗಿ ಕೇಳಿದರು, “ಏನಪ್ಪ, ಗಾಡಿ ಸೈಟು ಅಂತ ಕೇಳಬೇಡ. ಖಂಡಿತಾ ಅಷ್ಟೆಲ್ಲ ನಮ್ಮ ಕೈಗೆಟುಕಲ್ಲ….” ಎಂದರು.

“ನನಗೆ ಬೇಕಿರುವುದು ಒಂದೇ ವಸ್ತು…. ನಮ್ಮ ಮನೆಯಲ್ಲಿ ಯಾರೂ ವಯಸ್ಸಾದ ಹಿರಿಯರಿಲ್ಲ. ಹೀಗಾಗಿ ನಮ್ಮಿಬ್ಬರಿಗೂ ಮುಂದೆ ಅಜ್ಜಿ ತಾತಾ ಆಗಿ ನೀವೇ ಜೊತೆಯಲ್ಲಿರಬೇಕು. ನೀವಿಬ್ಬರೇ ನನಗೆ ವರದಕ್ಷಿಣೆ!” ಎಂದಾಗ ಅಲ್ಲಿದ್ದ ಎಲ್ಲರೂ ವರನ ಹೃದಯ ವೈಶಾಲ್ಯಕ್ಕೆ ತಲೆದೂಗಿದರು. ಲಗ್ನ ಪತ್ರಿಕೆಯಾದ ಮರು ತಿಂಗಳೇ ಸರಳವಾಗಿ ಮದುವೆ ನಡೆಯಿತು. ಅಜ್ಜಿ ತಾತಾ ಹಾಯಾಗಿ ಮೊಮ್ಮಗಳು ಅಳಿಯನ ಜೊತೆಯೇ ನೆಲೆಸಿದರು.

– ಪಿ. ನಳಿನಿ, ಹಾಸನ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ