ದೇಶದಲ್ಲಿ ಉದ್ಯೋಗ ಮಾಡುವ ಮಹಿಳೆಯರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆ ಆಗುತ್ತಿದೆ. ಸ್ವಾತಂತ್ರ್ಯ ದೊರೆತ 7 ದಶಕಗಳ ಬಳಿಕ ಮೊದಲ ಬಾರಿಗೆ ನೌಕರಿಯಲ್ಲಿ ನಗರ ಪ್ರದೇಶದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿರುವುದು ಕಂಡುಬಂದಿದೆ. ಅದಕ್ಕೆ ಸಂಬಂಧಪಟ್ಟ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 52.1%ರಷ್ಟು ಮಹಿಳೆಯರು ಹಾಗೂ 45.7%ರಷ್ಟು ಪುರುಷರು ಉದ್ಯೋಗಿಗಳಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಈಗಲೂ ಪುರುಷರಿಗಿಂತ ಹಿಂದೆ ಇದ್ದಾರೆ.
ಮಹಿಳೆಯರಲ್ಲಿ ಹೆಚ್ಚುತ್ತಿರುವ ಪ್ರೊಫೆಶನ್ ಹಾಗೂ ಟೆಕ್ನಿಕ್ ಎಜುಕೇಶನ್
ಅವರಲ್ಲಿನ ಈ ಬದಲಾವಣೆಗೆ ಕಾರಣವಾಗಿದೆ ಎನ್ನಬಹುದು. ಈಗ ಪುರುಷರು ಕೂಡ ಮಹಿಳೆಯರಿಗೆ ಸಹಕಾರ ನೀಡುತ್ತಿದ್ದಾರೆ. ಅವರ ಮಾನಸಿಕತೆ ಮಹಿಳಾ ಸಪೋರ್ಟಿವ್ ಆಗುತ್ತಿದೆ.
ಮನೆಗಿಂತ ಹೆಚ್ಚಿನ ಸಂತೋಷ
ಮಹಿಳೆಯರು ಈಗ ಕೇವಲ ತಮ್ಮ ಅವಶ್ಯಕತೆಗಾಗಿ ಅಲ್ಲ, ತಮ್ಮ ಮನಸ್ಸಿನ ಖುಷಿಗಾಗಿಯೂ ಉದ್ಯೋಗಸ್ಥೆಯರಾಗಲು ಇಷ್ಟಪಡುತ್ತಾರೆ. ಆಫೀಸಿನ ನೆಪದಲ್ಲಿ ಅವರು ಮನೆಯ ಒತ್ತಡಗಳಿಂದ ಹೊರಬರುತ್ತಾರೆ. ಆ ಮೂಲಕ ತಮ್ಮ ಪಡಿಯಚ್ಚು ಮೂಡಿಸುತ್ತಾರೆ.
ಇದಕ್ಕೆ ಮತ್ತೊಂದು ಕಾರಣವೇನೆಂದರೆ, ಮಹಿಳೆಯರಿಗೆ ತಮ್ಮ ಉದ್ಯೋಗ ಇಷ್ಟವಾಗದೇ ಹೋದರೆ ಅವರು ತಮ್ಮ ಉದ್ಯೋಗವನ್ನು ಬದಲಿಸುತ್ತಾರೆ. ಎಲ್ಲಿ ತಮಗೆ ಇಷ್ಟವಾಗುತ್ತೋ ಅಲ್ಲಿಯೇ ಅವರು ಉದ್ಯೋಗ ಮಾಡುತ್ತಾರೆ. ಆದರೆ ಪುರುಷರು ಮಾತ್ರ ಹಾಗೆ ಮಾಡುವುದಿಲ್ಲ. ತಮ್ಮ ಜಾಬ್ ಬಗ್ಗೆ ತೃಪ್ತಿ ಇರದೇ ಇದ್ದರೂ ಸಹ ಅವರು ಅದೇ ಕಂಪನಿಯಲ್ಲಿ ಮುಂದುವರಿಯುತ್ತಾರೆ. ಆ ಕಾರಣದಿಂದ ಅವರು ಆಫೀಸಿನಿಂದ ಖುಷಿಯಿಂದಿರುವುದಿಲ್ಲ. ಇದರ ಹೊರತಾಗಿ ಪುರುಷರಲ್ಲಿ ಹೆಚ್ಚಿನ ಅಧಿಕಾರ ಪಡೆಯುವ ಸಂಘರ್ಷ ಕೂಡ ಮುಂದುವರಿಯುತ್ತಿರುತ್ತದೆ. ಅವರ ಅಹಂಗೆ ಪೆಟ್ಟಾದರೆ ಬಹಳ ನೋವಾಗುತ್ತದೆ.
ಉದ್ಯೋಗಸ್ಥ ಹೆಂಡತಿಯರು
ಅಚ್ಚರಿದಾಯಕ ಸಂಗತಿಯೆಂದರೆ, ಜನರು ಮುಂಚೆ ಮದುವೆಯಾಗುವ ಸಂದರ್ಭದಲ್ಲಿ ಮನೆಗೆಲಸದಲ್ಲಿ ನಿಪುಣ ಹಾಗೂ ಸಂಸ್ಕಾರವಂತ ಮನೆತನದ ಹುಡುಗಿಯರನ್ನು ಇಷ್ಟಪಡುತ್ತಿದ್ದರು. ಆದರೆ ಈಗ ಆ ಟ್ರೆಂಡ್ ಬದಲಾಗಿ ಹೋಗಿದೆ. ಪುರುಷರು ಈಗ ಮನೆಯಲ್ಲಿ ಕುಳಿತ ಹುಡುಗಿಯನ್ನಲ್ಲ, ಉದ್ಯೋಗಸ್ಥ ಹುಡುಗಿಯರನ್ನು ಇಷ್ಟಪಡುತ್ತಿದ್ದಾರೆ. ತಮ್ಮ ಉದ್ಯೋಗಸ್ಥ ಹೆಂಡತಿಯನ್ನು ಬೇರೆಯವರ ಮುಂದೆ ಪರಿಚಯ ಮಾಡಿಕೊಡಲು ಅವರಿಗೆ ಹೆಮ್ಮೆ ಎನಿಸುತ್ತದೆ.
ಪುರುಷರ ಈ ಬದಲಾದ ಯೋಚನೆಯ ಕುರಿತು ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು :
ಗಂಡನ ಪರಿಸ್ಥಿತಿಯನ್ನು ಅರಿಯುತ್ತಾರೆ : ಒಂದು ವೇಳೆ ಹೆಂಡತಿ ಸ್ವತಃ ಉದ್ಯೋಗಸ್ಥೆಯಾಗಿದ್ದರೆ, ಆಕೆ ಗಂಡನಿಗೆ ಸಂಬಂಧಪಟ್ಟ ಪ್ರತಿಯೊಂದು ಆಗುಹೋಗುಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತಾಳೆ. ಆಕೆ ಗಂಡನಿಗೆ ಮೇಲಿಂದ ಮೇಲೆ ಫೋನ್ ಮಾಡಿ ಮನೆಗೆ ಬರಲು ಹೇಳುವುದಿಲ್ಲ. ಅಷ್ಟೇ ಅಲ್ಲ, ಮನೆಗೆ ಬಂದ ಬಳಿಕ ಪ್ರಶ್ನೆಗಳ ಸುರಿಮಳೆಗೈಯ್ಯುವುದಿಲ್ಲ. ಈ ರೀತಿಯಾಗಿ ಗಂಡ ಹೆಂಡತಿಯ ಸಂಬಂಧ ಸ್ಮೂತ್ ಆಗಿ ನಡೆಯುತ್ತಿರುತ್ತದೆ. ಇಬ್ಬರು ಸಾಧ್ಯವಾದಷ್ಟು ಮಟ್ಟಿಗೆ ಪರಸ್ಪರರಿಗೆ ನೆರವಾಗಲು ಸನ್ನದ್ಧರಾಗುತ್ತಾರೆ. ಅದೇ ಕಾರಣದಿಂದ ಅವರು ಉದ್ಯೋಗಸ್ಥ ಮಹಿಳೆಯರನ್ನು ಹುಡುಕುತ್ತಾರೆ.
ತಮ್ಮ ಖರ್ಚನ್ನು ತಾವೇ ಮಾಡುತ್ತಾರೆ : ಯಾವ ಮಹಿಳೆಯರು ಉದ್ಯೋಗ ಮಾಡುವುದಿಲ್ಲವೇ, ಅವರು ತಮ್ಮ ಖರ್ಚಿಗಾಗಿ ಪರಿಪೂರ್ಣವಾಗಿ ಗಂಡನನ್ನೇ ಅವಲಂಬಿಸಿರುತ್ತಾರೆ. ಚಿಕ್ಕಪುಟ್ಟ ವಸ್ತುಗಳಿಗಾಗಿಯೂ ಅವರು ಗಂಡ ಹಾಗೂ ಮನೆಯವರ ಮುಂದೆ ಕೈ ಒಡ್ಡಬೇಕಾಗುತ್ತದೆ. ಇನ್ನೊಂದೆಡೆ ಉದ್ಯೋಗಸ್ಥ ಮಹಿಳೆ ತಮ್ಮ ಖರ್ಚುಗಳನ್ನು ನಿಭಾಯಿಸಲು ಗಂಡನ ಮೇಲೆ ಅವಲಂಬಿಸಬೇಕಾಗಿ ಬರುವುದಿಲ್ಲ. ಅವಳು ಕೇವಲ ತನ್ನ ಖರ್ಚನ್ನು ತಾನೇ ಮಾಡುವುದಿಲ್ಲ, ಸಮಯ ಬಂದಾಗ ಕುಟುಂಬಕ್ಕೂ ಬೆಂಬಲವಾಗಿ ನಿಲ್ಲುತ್ತಾಳೆ.
ಪಾಸಿಟಿವ್ ಆಗಿರುತ್ತಾರೆ : ಉದ್ಯೋಗಸ್ಥ ಮಹಿಳೆಯರ ಮೇಲೆ ನಡೆಸಲಾದ ಒಂದು ಸಂಶೋಧನೆಯ ಪ್ರಕಾರ, ಹೆಚ್ಚಿನ ಉದ್ಯೋಗಸ್ಥ ಮಹಿಳೆಯರು ಪಾಸಿಟಿವ್ ಎನರ್ಜಿ ಹೊಂದಿರುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ಹಾಗೂ ವಸ್ತುಗಳನ್ನು ನಿರ್ವಹಣೆ ಮಾಡುವ ವಿಶಿಷ್ಟ ಸಾಮರ್ಥ್ಯ ಇರುತ್ತದೆ. ಯಾವ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕು ಎನ್ನುವುದು ಕೂಡ ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ.
ಹೀಗಾಗಿ ಚಿಕ್ಕಪುಟ್ಟ ಸಂಗತಿಗಳ ಮೇಲೆ ಉದ್ವೇಗಕ್ಕೆ ಒಳಗಾಗುವುದಿಲ್ಲ ಹಾಗೂ ಗಾಬರಿಯೂ ಆಗುವುದಿಲ್ಲ. ಪ್ರಯತ್ನ ಮಾಡಿದರೆ ನಾನು ಯಶಸ್ಸಿನತ್ತ ಸಾಗಬಹುದು ಎಂದು ಆಕೆಗೆ ಚೆನ್ನಾಗಿ ಗೊತ್ತಿರುತ್ತದೆ.
ಖರ್ಚು ಕಡಿಮೆ ಉಳಿತಾಯ ಹೆಚ್ಚು : ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಗಂಡಹೆಂಡತಿ ಇಬ್ಬರೂ ದುಡಿದರೆ ಮಾತ್ರ ಜೀವನ ಸುಲಭವಾಗುತ್ತದೆ. ಅವರಿಗೆ ಜೀವನಕ್ಕಾಗಿ ಯೋಜನೆ ರೂಪಿಸುವಾಗ ಹೆಚ್ಚು ಯೋಚಿಸಬೇಕಾಗಿ ಬರುವುದಿಲ್ಲ. ಭವಿಷ್ಯಕ್ಕಾಗಿ ಉಳಿತಾಯವನ್ನು ಕೂಡ ಮಾಡುತ್ತಾರೆ. ಮನೆ, ವಾಹನ ಅಥವಾ ಬೇರೆ ಯಾವುದೇ ಅವಶ್ಯಕತೆಗಳಿಗಾಗಿ ಸಾಲ ಪಡೆಯಬೇಕಾಗಿ ಬಂದರೆ ಇಬ್ಬರೂ ಸೇರಿ ಪಡೆಯುತ್ತಾರೆ ಹಾಗೂ ಸಾಲದ ಕಂತುಗಳನ್ನು ಕೂಡ ಇಬ್ಬರೂ ಸೇರಿಯೇ ತೀರಿಸುತ್ತಾರೆ.
ಇಂದಿನ ದಿನಗಳಲ್ಲಿ ಮಹಿಳೆಯರು ಸಾಲ ಪಡೆಯುವುದು ಹಾಗೂ ಅದನ್ನು ತೀರಿಸುವ ನಿಟ್ಟಿನಲ್ಲಿ ಮಹಿಳೆಯರು ಪುರುಷರಿಗಿಂತ ಮುಂದೆ ಇದ್ದಾರೆ.
ಸಾಲ ಪಡೆಯುವುದರಲ್ಲಿ ಮುಂದೆ
ಕ್ರೆಡಿಟ್ ಇನ್ಫರ್ಮೇಶನ್ ಕಂಪನಿ ಟ್ರಾನ್ಸ್ ಯೂನಿಯನ್ ಸಿಬಿಲ್ನ ಇತ್ತೀಚಿನ ವರದಿಯ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಸಾಲ ಬೇಕೆಂದು ಅರ್ಜಿ ಹಾಕುವ ಮಹಿಳಾ ಖಾತೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.
ಒಂದು ವರದಿಯ ಪ್ರಕಾರ, 2015 ರಿಂದ 2018ರ ನಡುವೆ ಸಾಲ ಪಡೆಯುವಲ್ಲಿ ಯಶಸ್ವಿಯಾದ ಮಹಿಳೆಯರ ಸಂಖ್ಯೆ 48%ರಷ್ಟು ಹೆಚ್ಚಳವಾಗಿದೆ. ಇದಕ್ಕೆ ಹೋಲಿಸಿದರೆ ಪುರುಷರ ಸಂಖ್ಯೆಯಲ್ಲಿ 35%ರಷ್ಟು ಮಾತ್ರ ಹೆಚ್ಚಳವಾಗಿದೆ.
ಒಂದು ವರದಿಯ ಪ್ರಕರ, 5.64 ಕೋಟಿ ಒಟ್ಟು ಸಾಲದ ಅಕೌಂಟ್ಗಳಲ್ಲಿ ಈಗಲೂ ಹೆಚ್ಚಿನ ಸಾಲಗಳು ಗೋಲ್ಡ್ ಲೋನ್ನದ್ದೇ ಆಗಿವೆ. 2018ರಲ್ಲಿ ಅದರಲ್ಲಿ 18%ರಷ್ಟು ಇಳಿಕೆ ದಾಖಲಿಸಿತ್ತು.
ಆ ಬಳಿಕದ ಸ್ಥಾನ ಬಿಸ್ನೆಸ್ ಲೋನ್ನದ್ದು. ಕಂಝ್ಯೂಮರ್ ಲೋನ್, ಪರ್ಸನಲ್ ಲೋನ್ ಹಾಗೂ ಟೂ ವೀಲರ್ ಲೋನ್ಗಾಗಿ ಮಹಿಳೆಯರಿಂದ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೊರಟಿದೆ.
ಈಗ ಪ್ರತಿ 4 ಸಾಲಗಾರರಲ್ಲಿ ಒಬ್ಬಳು ಮಹಿಳೆಯಾಗಿದ್ದಾಳೆ. ಈ ಅನುಪಾತ ಮುಂದಿನ ದಿನಗಳಲ್ಲಿ ಬದಲಾಗಬಹುದು. ಏಕೆಂದರೆ ಸಾಲ ಪಡೆಯುವ ಮಹಿಳೆಯರ ಸಂಖ್ಯೆ ಪುರುಷರಿಗೆ ಹೋಲಿಸಿದರೆ ಹೆಚ್ಚುತ್ತಲೇ ಹೊರಟಿದೆ. ಅತ್ಯುತ್ತಮ ಶಿಕ್ಷಣ ಹಾಗೂ ಉದ್ಯೋಗ ಜೀವನದಲ್ಲಿ ಉತ್ತಮ ಪಾಲುದಾರಿಕೆಯಿಂದ ಈಗ ಹೆಚ್ಚೆಚ್ಚು ಮಹಿಳೆಯರು ತಮ್ಮ ಹಣಕಾಸು ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಿದ್ದಾರೆ.
– ಶರಣ್ಯಾ
ಆಫೀಸಿನಲ್ಲಿ ಕಡಿಮೆ ಒತ್ತಡ
ಫೋನ್ ಸ್ಟೇಜ್ ಯೂನಿರ್ಸಿಟಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಮಹಿಳೆಯರಿಗೆ ತಮ್ಮ ಮನೆಗೆ ಹೋಲಿಸಿದರೆ ಆಫೀಸಿನಲ್ಲಿ ಕಡಿಮೆ ಒತ್ತಡದ ಸ್ಥಿತಿ ಇರುತ್ತದೆ. ಅಧ್ಯಯನದ ಪ್ರಕಾರ, 1 ವಾರದ ಕಾಲ ಸತತ 122 ಜನರ ಕಾರ್ಟಿಸೋಲ್ ಹಾರ್ಮೋನ್ನ (ಒತ್ತಡ ಉಂಟು ಮಾಡಲು ಕಾರಣ ಆಗುವಂಥದ್ದು) ಮಟ್ಟವನ್ನು ಪರಿಶೀಲಿಸಲಾಯಿತು. ಅದರ ಜೊತೆಗೆ ದಿನದ ಬೇರೆ ಬೇರೆ ಸಮಯದಲ್ಲಿ ಅವರ ಮೂಡ್ ಬಗ್ಗೆ ಕೇಳಲಾಯಿತು. ಅದರಲ್ಲಿ ಕಂಡುಬಂದ ಸಂಗತಿಯೇನೆಂದರೆ, ಮಹಿಳೆಯರಿಗೆ ಮನೆಗಿಂತ ಆಫೀಸಿನಲ್ಲಿ ಕಡಿಮೆ ಒತ್ತಡ ಇರುತ್ತದೆ. ಈ ಅಧ್ಯಯನದಲ್ಲಿ ಬೇರೆ ಬೇರೆ ಹಿನ್ನೆಲೆಯಿಂದ ಬಂದವರನ್ನು ಸೇರ್ಪಡೆಗೊಳಿಸಲಾಗಿತ್ತು. ಸಂಶೋಧಕರ ಪ್ರಕಾರ ಮಹಿಳೆಯರು ಆಫೀಸಿನಲ್ಲಿ ಹೆಚ್ಚು ಖುಷಿಯಾಗಿರುತ್ತಾರೆ. ಪುರುಷರು ಮಾತ್ರ ಮನೆಯಲ್ಲಿ ಹೆಚ್ಚು ಖುಷಿಯಿಂದಿರುತ್ತಾರೆ.