ಅದೇ ಬೆಂಗಳೂರಿನ ಜಯನಗರ ಸೌತ್ ಎಂಡ್ ವೃತ್ತದ ಬಳಿ ಇರುವ `ರಣಧೀರ ಕಂಠೀರವ' ಉದ್ಯಾನವನ. ಇದು ಜಗತ್ಪ್ರಸಿದ್ಧ ಲಾಲ್‌ಬಾಗ್ ಉದ್ಯಾನವನದಿಂದ ಕೇವಲ ಒಂದೇ ಮೆಟ್ರೋ ಸ್ಟೇಷನ್ ಅಂತರದಲ್ಲಿದೆ. ಲಾಲ್‌ಬಾಗ್ ಸುತ್ತಾಡಲು ಬಂದರು ಈ ಪಾರ್ಕಿನ ಅಂದಚೆಂದವನ್ನು ಕಣ್ತುಂಬಿಸಿಕೊಳ್ಳುವುದರ ಜೊತೆಗೆ ಕನ್ನಡ ನಾಡನ್ನು ಆಳಿದ ರಾಜರನ್ನು ಕಣ್ತುಂಬಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಅವರ ಮಾಹಿತಿಯನ್ನು ಓದುವುದರ ಮೂಲಕ ನಿಮ್ಮ ಇತಿಹಾಸ ಜ್ಞಾನವನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು.
ಸಿಂಹ ಸ್ವಾಗತ ರಣಧೀರ ಕಂಠೀರವ ಪಾರ್ಕಿನೊಳಗೆ ಕಾಲಿಡುತ್ತಿದ್ದಂತೆ ಎರಡೂ ಬದಿಯ ಸುಂದರ ಸಿಂಹಾಕೃತಿಗಳು ನಿಮ್ಮನ್ನು ಸ್ವಾಗತಿಸುತ್ತವೆ. ಅಲ್ಲಿಂದ ಒಳಗೆ ಬರುತ್ತಿದ್ದಂತೆ ಮೈಸೂರನ್ನಾಳಿದ ರಣಧೀರ ಕಂಠೀರವ ನರಸಿಂಹರಾಜ ಒಡೆಯರ್ ಅವರ ಸಿಂಹಾಸನಾರೂಢ ವಿಶಾಲ ಪ್ರತಿಮೆ ಗೋಚರಿಸುತ್ತದೆ. ಅಲ್ಲಿಂದ ಸ್ವಲ್ಪ ಸ್ವಲ್ಪ ಅಂತರದಲ್ಲಿ ಕನ್ನಡ ನಾಡಿನ ಇತರೆ ಪ್ರಖ್ಯಾತ ದೊರೆಗಳಾದ ಮಯೂರವರ್ಮ, ವಿಷ್ಣುವರ್ಧನ, ಶ್ರೀಕೃಷ್ಣ ದೇವರಾಯ, ಇಮ್ಮಡಿ ಪುಲಿಕೇಶಿ, ಅಮೋಘವರ್ಷ, ನೃಪತುಂಗ ಇವರೆಲ್ಲ ವಿಶಿಷ್ಟ ಭಂಗಿಯಲ್ಲಿ ನಿಂತಿರುವುದು ಕಂಡುಬರುತ್ತದೆ. ಆಯಾ ಪ್ರತಿಮೆಗಳ ಕೆಳಭಾಗದಲ್ಲಿ ಅವರವರ ಸಂಪೂರ್ಣ ಮಾಹಿತಿ ಕೂಡ ಬರೆಯಲ್ಪಟ್ಟಿದೆ. ಅಂದಹಾಗೆ ಈ ಎಲ್ಲ ಪ್ರತಿಮೆಗಳು ಡಾ. ರಾಜ್ ಕುಮಾರ್ ಅವರ ಮುಖಭಂಗಿಯಲ್ಲಿ ಗೋಚರಿಸುತ್ತವೆ. ಕಾವೇರ ಮಾತೆಯ ಪ್ರತಿಮೆ ಕೂಡ ಗಮನ ಸೆಳೆಯುತ್ತದೆ.
ಮಕ್ಕಳಿಗೆ ಮನರಂಜನೆ
ಪ್ರತಿಮೆಗಳನ್ನು ಅವಲೋಕಿಸುತ್ತ ಹಾಗೆಯೇ ಮುಂದುವರಿದರೆ, ಕೈಗಳ ಆಕೃತಿಯ ನಾಲ್ಕು ಆಸನಗಳು ಕಣ್ಣಿಗೆ ಬೀಳುತ್ತವೆ. ಅಲ್ಲಿಗೆ ಬಂದವರೆಲ್ಲ ಫೋಟೋ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿರುವುದು ಗೋಚರಿಸುತ್ತದೆ.
ಅದೇ ರೀತಿ ಕಮಲಾಕೃತಿ, ಸೇಬು ವಿನಾಯಕ ಆಸನಗಳು ಮುಂದೆ ಹೋಗುವವರನ್ನು ತಡೆದು ನಿಲ್ಲಿಸಿ, ಫೋಟೋ ತೆಗೆಸಿಕೊಂಡು ಹೋಗಿ ಎಂಬಂತೆ ಸೂಚಿಸುತ್ತವೆ.
ನಡುನಡುವೆ ಮಕ್ಕಳಿಗೆ ಆಟ ಆಡಲು ಬಗೆಬಗೆಯ ಜಾರು ಬಂಡಿಗಳು ಅವರನ್ನು ಅಲ್ಲಿಯೇ ಏಕಾಗ್ರಚಿತ್ತದಿಂದ ಆಟ ಆಡುವಂತೆ ಪ್ರೇರೇಪಿಸುತ್ತದೆ.
ಕಲ್ಲಂಗಡಿ ಹೋಳಿನ ಬೃಹತ್ ಪ್ರತಿಕೃತಿ ಫೋಟೋ ಕ್ಲಿಕ್ಕಿಸುವವರನ್ನು ತನ್ನತ್ತ ಸೆಳೆಯುತ್ತದೆ.
ಫ್ರಾನ್ಸ್ ಮಾದರಿಯ ಕೊಳ
ಉದ್ಯಾನದ ಮಧ್ಯಭಾಗದಲ್ಲಿ ಫ್ರಾನ್ಸ್ ಮಾದರಿಯ ಕೊಳವೊಂದಿದೆ. ಅದರಲ್ಲಿ ನೀರು ಬುಗ್ಗೆ, ಜೊತೆಗೆ ದಾಹ ನೀಗಿಸಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರ ಪ್ರತಿಮೆ ನೀರಿನ ಮಹತ್ವವನ್ನು ಬಿಂಬಿಸುತ್ತದೆ.
ಹಸಿರು ಸಿರಿಯ ಮಧ್ಯೆ ತಂಪಾದ ಗಾಳಿಯ ಅನುಭವ ಪಡೆಯುತ್ತ ಆಲದ ಮರದ ಬುಡದಲ್ಲಿ ಪೊಟರೆ ಜೊತೆಗೆ ಬಿಳಲು ಚಾಚಿಕೊಂಡ ವೃದ್ಧನ ಆಕೃತಿ ಮಕ್ಕಳನ್ನು ಬಹಳ ಆಕರ್ಷಿಸುತ್ತದೆ. ಮಕ್ಕಳು ಒಳಹೊಕ್ಕು ಹೋ ಎಂದು ಜೋರಾಗಿ ಕೂಗುತ್ತಾರೆ.
ಅಲ್ಲಿಯೇ ನಿಕಟ ಪ್ರಕೃತಿ ವನದ ಮಧ್ಯೆ ತಲೆಯ ಇಕ್ಕೆಲಗಳಿಂದ ನೀರು ಸುರಿಸುತ್ತಿರುವ ಸುಂದರ ದೃಶ್ಯ ಕಣ್ಮನ ಸೆಳೆಯುತ್ತದೆ.
ಪಾರ್ಕಿನ ರೂವಾರಿ
ರಣಧೀರ ಕಂಠೀರವ ಪಾರ್ಕಿನ ಮುಖ್ಯ ರೂವಾರಿ ಯಡಿಯೂರು ವಾರ್ಡಿನ ಕಾರ್ಪೊರೇಟರ್ ಆಗಿದ್ದ ಎನ್.ಆರ್. ರಮೇಶ್. ಅವರು ಅಪ್ಪಟ ಕನ್ನಡಾಭಿಮಾನಿ. ಕನ್ನಡ ನಾಡಿನ ಮಹಾನ್ ಸಂಸ್ಕೃತಿಯನ್ನು ಪಾರ್ಕ್ ಮೂಲಕ ಜನರ ಮನಸ್ಸಿನಲ್ಲಿ ಬೇರೂರುವಂತೆ ಮಾಡಬೇಕೆಂದು ಅವರು ಈ ಪಾರ್ಕಿನ ಕಲ್ಪನೆಯನ್ನು ಅನುಷ್ಠಾನಕ್ಕೆ ತಂದರು.
ಹೇಗೆ ತಲುಪುದು?
ಮೆಜೆಸ್ಟಿಕ್ ಕಡೆಯಿಂದ 2, 12, 215 ಮಾರ್ಗದ ಬಸ್‌ಗಳಲ್ಲಿ ಹಾಗೂ ಸಿಟಿ ಮಾರುಕಟ್ಟೆಯಿಂದ ಬರುವವರು 211 ರಿಂದ 213ರ ಮಾರ್ಗದ ಬಸ್‌ಗಳಲ್ಲಿ ಹತ್ತಿ ಸೌತ್ ಎಂಡ್ ನಿಲುಗಡೆಯಲ್ಲಿ ಇಳಿದು ಈ ಪಾರ್ಕ್ ತಲುಪಬಹುದು.