“ನೀನು ಏನನ್ನು ಯೋಚಿಸಿ ನಿಮ್ಮಮ್ಮನ ಮದುವೆ ನನ್ನೊಂದಿಗೆ ಮಾಡಿಸಿದೆ ಆ ಮೇಡಂ ನೋಡಿದರೆ….. ಯಾವಾಗಲೂ ಬಾಬಾ, ಮಾತೆಯರ ಕೃಪೆ ಗಿಟ್ಟಿಸಲು ಸದಾ ಅವರ ಆಶ್ರಮಗಳಿಗೆ ಎಡತಾಕುತ್ತಾ ಅಲ್ಲೇ ಬಿದ್ದಿರುತ್ತಾಳೆ. ನಾನು ದಿನವಿಡೀ ಹೊರಗೆ ದುಡಿದು ದಣಿದು ಮನೆಗೆ ಬರುತ್ತೇನೆ, ಇನ್ನಾದರೂ ಹೆಂಡತಿ ಕೈ ಕಾಫಿ ಕುಡಿಯೋಣ ಆರಾಮವಾಗಿ ರಿಲ್ಯಾಕ್ಸ್ ಆಗಿರೋಣ ಎಂದರೆ ಇಲ್ಲವಲ್ಲ…. ಈ ಮಹಾತಾಯಿ ಫ್ರೀಯಾಗಿ ನನಗೆ ಸಿಕ್ಕಿದರೆ ತಾನೇ?

“ಯಾವಾಗ ಕೇಳು….. ಈ ಆಶ್ರಮ…. ಆ ಆಶ್ರಮ…. ಅಂತ ಸುತ್ತಾಡುವುದೇ ಆಯ್ತು. ಇಲ್ಲದಿದ್ದರೆ ಗೆಳತಿಯರನ್ನೆಲ್ಲ ಸೇರಿಸಿಕೊಂಡು ಮನೆಯಲ್ಲಿ ಭಜನೆ ನಡೆಸುತ್ತಾಳೆ. ನಾನೇ ಈ ಮನೆಗೆ ಅಪರಿಚಿತ ಆಗಿಹೋಗಿದ್ದೇನೆ. ಯಾವುದೂ ಇಲ್ಲ ಅಂದುಕೊಂಡ್ರೆ ನಿನ್ನೊಂದಿಗೆ ಕುಳಿತು ಹರಟೆ ಹೊಡೆಯುತ್ತಿರುತ್ತಾಳೆ. ನನ್ನ ಬಳಿ ಬಂದು ವಿಚಾರಿಸಿಕೊಳ್ಳೋಣ ಅನ್ನುವುದಕ್ಕೆ ಅವಳ ಬಳಿ ಪುರಸತ್ತೇ ಇಲ್ಲ! ಹಾಗಿರುವಾಗ ಅವಳೇಕೆ ಮದುವೆಯಾಗಿ ನನ್ನನ್ನು ಹೀಗೆ ನರಕಕ್ಕೆ ದೂಡಬೇಕಿತ್ತು?” ನಿಶಾಳ ಮಲತಂದೆ ರಮಣಮೂರ್ತಿ ಅವಳತ್ತ ಕೋಪದಿಂದ ಸಿಡಿದು ಹೇಳುತ್ತಿದ್ದ.

ನಿಶಾಳಿಗಂತೂ ಏನು ಉತ್ತರ ಕೊಡಬೇಕೋ ತಿಳಿಯಲೇ ಇಲ್ಲ. ಏನು ತಾನೇ ಹೇಳಿಯಾಳು? ರಮಣ ಹೇಳಿದ ಮಾತುಗಳು ಸರಿಯಾಗೇ ಇತ್ತು. ತನ್ನ ತಂದೆಯ ಅಕಾಲ ಮರಣದ ನಂತರ ತಾಯಿ ಬಹಳ ದಿನಗಳ ಕಾಲ ಒಬ್ಬಂಟಿಯಾಗಿ ಬೇಸರದಿಂದ ಅಗಾಧ ನಿರಾಸೆಯಲ್ಲಿ ಸಮಯ ಕಳೆಯುತ್ತಿರುವುದನ್ನು ಗಮನಿಸಿದ್ದಳು. ಕಾಲೇಜಿನಿಂದ ತಾನು ವಾಪಸ್ಸು ಬಂದ ಮೇಲೆಯೇ ತಾಯಿಯ ಮುಖದಲ್ಲಿ ತುಸು ನಗು, ಗೆಲುವು ಕಾಣುತ್ತಿದ್ದುದು. ಹೀಗಾಗಿ ಕಾಲೇಜು ಇಲ್ಲದ ಸಮಯದಲ್ಲಿ ಸದಾ ಅಮ್ಮನಿಗೇ ಅಂಟಿಕೊಂಡು ಇದ್ದುಬಿಡುತ್ತಿದ್ದಳು, ಹಾಗಾದರೂ ಅವಳು ನೆಮ್ಮದಿಯಾಗಿ ಇರಲೆಂದು. ತನ್ನ ಸಮವಯಸ್ಕ ಹುಡುಗಿಯರಂತೆ ಫ್ರೆಂಡ್ಸ್, ಹೊರಗಿನ ಓಡಾಟ, ಸಿನಿಮಾ, ಮಾಲ್ ‌ಎಂದೆಲ್ಲ ಸುತ್ತಾಡಲು ಹೋದವಳೇ ಅಲ್ಲ. ಅಮ್ಮನ ಖುಷಿ ಅವಳಿಗೆ ಮುಖ್ಯವಾಗಿತ್ತು.

ನಿಶಾಳ ಪ್ರಯತ್ನ ಫಲ ನೀಡತೊಡಗಿತು. ಮಗಳು ಬಳಿ ಇದ್ದಾಗ ಪತಿ ವಿಹೀನತೆಯ ದುಃಖವನ್ನು ತಾಯಿ ರೇವತಿ ಮರೆಯುತ್ತಿದ್ದಳು. ಆಗ ತಾಯಿಗೆ ತನ್ನ ಮಗಳಿಗಿಂತ ಮಿಗಿಲಾದ ಬೇರೆ ಆಪ್ತರಿಲ್ಲ ಎಂದೇ ಅನಿಸುತ್ತಿತ್ತು. ಇಷ್ಟಾದರೂ ಸದಾ ಕಷ್ಟಸಹಿಷ್ಣೆಯಾಗಿದ್ದ ಆ ತಾಯಿಗೆ ಜೀವನದಲ್ಲಿ ಸಿಕ್ಕಿದ್ದಾದರೂ ಏನು? ಸದಾ ಗೋಳು ಗುಟ್ಟಿಸುವ ಅತ್ತೆ, ಸದಾ ಸಿಗರೇಟ್‌ ಸೇದುತ್ತಾ ಕೆಮ್ಮಿಕೊಂಡೇ ರೋಗಿಯಾಗಿ ಕಿರುಚಾಡುತ್ತಿದ್ದ ಮಾವ, ಸದಾ ಸಿಡುಕುತ್ತಿದ್ದ ಪತಿ, ಆ್ಯಕ್ಸಿಡೆಂಟ್‌ನಲ್ಲಿ ವಯಸ್ಕ ಮಗ ಹಾಗೂ ಪತಿಯ ಅಕಾಲಿಕ ಸಾವು….. ಜೀವನದಲ್ಲಿ ಜರ್ಝರಿತಳಾಗಲು ಇಷ್ಟು ಸಾಲದೇ?

ವಿಧಿಯ ಬಾಳು ಬಾಳುತ್ತಾ, ಎಲ್ಲರ ಕರುಣೆಗೆ ಪಾತ್ರಳಾಗಿ ಜೀವನವೇ ಒಂದು ಹೊರೆಯಾಗಿ ಕಷ್ಟಪಡುತ್ತಿದ್ದವಳಿಗೆ ಕಾಲೇಜಿನ ಕಿಶೋರಿ ಮಗಳು ಹೇಗಾದರೂ ಒಂದು ಹೊಸ ಬಾಳು ರೂಪಿಸಿಕೊಡಲು ದೃಢಸಂಕಲ್ಪ ತೊಟ್ಟಳು. ಅಜ್ಜಿ ತಾತಂದಿರ ಮರಣದ ನಂತರ ಅದು ಮತ್ತಷ್ಟು ದೃಢವಾಯಿತು. ತಾಯಿ ಸದಾ ಸಂತೋಷದಿಂದ ನಸುನಗುತ್ತಿರಬೇಕು ಎಂಬುದೇ ಮಗಳ ಜೀವನದ ಗುರಿಯಾಯಿತು. ಈ ಮಗಳನ್ನು ಬಿಟ್ಟರೆ ಆ ತಾಯಿಗೆ ತನ್ನವರೆಂದು ಹೇಳಿಕೊಳ್ಳುವ ಬೇರೆ ಜೀವ ತಾನೇ ಯಾವುದಿತ್ತು? ತವರಿನವರು ಎಂದು ಹೇಳಿಕೊಳ್ಳಲು ಹೆಸರಿಗೆ ಒಬ್ಬ ಅಣ್ಣ ಅಂತ ಇದ್ದ, ಆತ ಬೆಂಗಳೂರಿನಲ್ಲಿ ತನ್ನ ಸಂಸಾರದಲ್ಲಿ ಸಂಪೂರ್ಣ ಮುಳುಗಿಹೋಗಿದ್ದ…. ವರ್ಷದಲ್ಲಿ 1-2 ಸಲ ನೆನಪಾದಾಗ ತಂಗಿಗೆ ಫೋನ್‌ ಮಾಡಿದರೆ  ಹೆಚ್ಚು. ಮೈಸೂರಿನ ಈ ತಂಗಿ ಒಲ್ಲದ ಅತ್ತಿಗೆಯ ಅಣ್ಣನ ಮನೆ ಹುಡುಕಿಕೊಂಡು ಎಂದೂ ಬೆಂಗಳೂರಿಗೆ ಹೋಗುತ್ತಿರಲಿಲ್ಲ.

ಇದನ್ನೆಲ್ಲ ಗಮನಿಸಿಕೊಂಡೇ ನಿಶಾ ಡಿಗ್ರಿಯ ಕೊನೇ ವರ್ಷದಲ್ಲಿ ಕಲಿಯುತ್ತಿದ್ದಾಗ ಅಮ್ಮನ ಬಳಿ ಮರುಮದುವೆಯ ಪ್ರಸ್ತಾಪ ಮಾಡಿದಳು. ತಾಯಿಗೆ ತನ್ನಿಂದ ಈ ಉಪಕಾರ ಆಗಲಿ ಎಂಬುದು ಅವಳ ಮನದಾಳದ ಆಸೆ.

“ಅಮ್ಮ, ನನ್ನ ಮಾತು ಕೇಳು. ನೀನೀಗ ಎರಡನೇ ಮದುವೆ ಮಾಡಿಕೊಂಡು ಇನ್ನಾದರೂ ಜೀವನದಲ್ಲಿ ತುಸು ನೆಮ್ಮದಿ ಕಂಡುಕೋ. ಇನ್ನು 1-2 ವರ್ಷದಲ್ಲಿ ನನ್ನ ಮದುವೆ ಮಾಡಿಸಿ ಕಳಿಸಿಬಿಡ್ತೀಯಾ. ಆಗ ಒಬ್ಬಂಟಿಯಾದ ನಿನ್ನ ನೋಡಿಕೊಳ್ಳುವವರು ಯಾರು? ನಿನಗೊಂದು ನೆಮ್ಮದಿಯ ಬದುಕು ಬೇಡವೇ?”

“ಇದೆಂಥ ಮಾತು ಆಡ್ತಿದ್ದೀಯೆ…..” ಅಮ್ಮನಿಗಂತೂ ಕೋಪ ಬಂದಿತ್ತು. “ವಯಸ್ಸಿಗೆ ಬಂದ ಮಗಳನ್ನು ಲಕ್ಷಣವಾಗಿ ಮದುವೆ ಮಾಡಿ ಕಳಿಸುವುದು ಬಿಟ್ಟು ಈ ವಯಸ್ಸಿನಲ್ಲಿ ನನಗೆ ಇನ್ನೊಂದು ಮದುವೆಯೇ? ನಿನ್ನ ಅಪ್ಪಾಜಿಯನ್ನು ಬಿಟ್ಟು ನಾನು ಜೀವನದಲ್ಲಿ ಬೇರೆಯವರ ಮುಖ ಕಂಡಿದ್ದಾದರೂ ಉಂಟೆ? ಖಂಡಿತಾ ಬೇಡ…. ನನ್ನ ಪ್ರಾರಬ್ಧ! ಇಷ್ಟು ವರ್ಷ ಬಂದದ್ದನ್ನು ಅನುಭವಿಸಿದೆ, ಇನ್ನು ಮುಂದಿನ ವರ್ಷಗಳು…. ಹೇಗೋ ಕಳೆಯುತ್ತೆ ಬಿಡು….. ನಾನಾ ಶಾಶ್ವತ? ನಿನ್ನ ಕಲ್ಪನೆಗೆ ಒಂದು ಮಿತಿ ಇರಲಿ.”

ಅಮ್ಮ ಈ ರೀತಿ ನೇರವಾಗಿ, ಖಡಾಖಂಡಿತವಾಗಿ ಮರು ಮದುವೆ ಬೇಡ ಎಂದಾಗ ನಿಶಾಳಿಗೆ ಅಪಾರ ನಿರಾಶೆಯಾಗಿತ್ತು. ನಿಶಾ ರೇವತಿಗೆ ಮತ್ತೆ ಮತ್ತೆ ಅದೇ ವಿಷಯ ವಿವರಿಸಲು ಯತ್ನಿಸಿದಳು,

“ಅಮ್ಮ, ನಾನು ಹೇಳುವ ಮಾತುಗಳನ್ನು ಸ್ವಲ್ಪ ಗಮನವಿಟ್ಟು ಕೇಳು. ಇದೀಗ ನಿನಗಿನ್ನೂ 51ರ ವಯಸ್ಸು. ಇಡೀ ಮನೆಯಲ್ಲಿ ಒಬ್ಬಂಟಿಯಾಗಿ ಉಳಿದುಬಿಡ್ತೀಯಾ. ನಾಳೆ ನಾನು ಕಾಲೇಜು, ಯಾವುದೋ ನೆಪಕ್ಕೆ 1-2 ದಿನ ಬೇರೆ ಊರಿಗೆ ಹೋಗಬೇಕಾಯಿತು ಅಂತಿಟ್ಕೋ, ಆಗ ಆಕಸ್ಮಾತ್‌ ನಿನಗೇನಾದರೂ ಅಚಾತುರ್ಯ ಆದರೆ ಅಲ್ಲಿಂದ ನಾನು ಓಡಿ ಬರುವಷ್ಟರಲ್ಲಿ ನಿನ್ನ ಜೀವಕ್ಕೆ ಅಪಾಯ ತಪ್ಪಿದ್ದಲ್ಲ!

“ನನ್ನ ಮದುವೆ ಮಾಡಿಸದೆ ಅಂತೂ ನೀನು ಇರಲಾರೆ. ಹಾಗಿರುವಾಗ ನನ್ನ ಗಂಡನಾದ ಪ್ರಾಣಿ ನಿನ್ನನ್ನು ಜೊತೆಗಿರಿಸಿಕೊಳ್ಳಲು ಒಪ್ಪುತ್ತಾನೆ ಅಂತ ನನಗ್ಯಾವ ಗ್ಯಾರಂಟಿಯೂ ಇಲ್ಲ! ಇನ್ನು ಅತ್ತೆ ಮಾವ ಇರುವ ಮನೆಗೆ ನಾನು ಹೋಗಿಬಿಟ್ಟರಂತೂ ಬೇರೆ ಮಾತೇ ಬೇಡ. ನೀನು ಶಾಶ್ವತವಾಗಿ ಒಂಟಿ ಆಗಿಬಿಡ್ತೀಯಾ. ಮನೆ ಅಳಿಯನಾಗಿ ಯಾರಾದರೂ ಇರಲಿ ಅಂದ್ರೆ ಅದೆಲ್ಲ ಅಷ್ಟು ಸುಲಭವಾಗಿ ಆಗುವಂಥದ್ದಲ್ಲ. ನಮಗಿರುವ ಈ ಒಂದು ಮನೆ ಬಿಟ್ಟರೆ ಬೇರಾವ ಆಸ್ತಿಯೂ ಇಲ್ಲ.

“ಅಪ್ಪನಿಗೆ ಬರುತ್ತಿದ್ದ ಅಲ್ಪ ಆದಾಯದಲ್ಲಿ ಹೇಗೋ ಈ ಮನೆ ಮಾಡಿ, ಖಾಸಗಿ ನೌಕರಿಯಲ್ಲಿ ದುಡಿಯುತ್ತಿದ್ದರು. ಅಜ್ಜಿ ತಾತಾ ಹೋದ ಮೇಲೆ ನೀನು ಆ ಖಾಸಗಿ ಶಾಲೆ ಸೇರಿದ್ದರಿಂದ ನನ್ನನ್ನು ಇಷ್ಟು ಮಾತ್ರ ಕಾಲೇಜಿನಲ್ಲಿ ಓದಿಸುವಂತಾಗಿದೆ. ಹೀಗಿರುವಾಗ ಯಾವ ಮಹಾ ಮನೆ ಅಳಿಯ ಸಿಗ್ತಾನೆ? ನನಗೆ ಮುಂದೆ ಬೆಂಗಳೂರು ಅಥವಾ ಬೇರೆಲ್ಲಾದರೂ ಕೆಲಸ ಸಿಕ್ಕರೆ ಮತ್ತೆ ನಿನ್ನನ್ನು ಒಂಟಿಯಾಗಿ ಬಿಟ್ಟು ಹೊರಡಲೇಬೇಕು. ಅದಕ್ಕೆ ನಾನು ಹೇಳುತ್ತಿರುವುದು…. ನೀನು ಮರುಮದುವೆ ಆಗುವುದರಲ್ಲಿ ತಪ್ಪೇನಿದೆ, ಅಂತ? ನನಗಂತೂ ಮುಂದೆ ನಿನಗೆ ಏನು ಕಷ್ಟ ಬರಲಿದೋ ಅಂತ ಯೋಚಿಸಿಯೇ ಬಹಳ ಆತಂಕ ಆಗುತ್ತೆ. ಆದ್ದರಿಂದ ಹೇಳಿದ ತಕ್ಷಣ ಬೇಡ ಅನ್ನಬೇಡ. ಈ ಕುರಿತಾಗಿ ಅಪ್ಪನ ಆತ್ಮ ಎಂದೂ ವಿರೋಧಿಸುವುದಿಲ್ಲ ಅನ್ನುವ ನಂಬಿಕೆ ನನಗಿದೆ…..”

“ಆದರೆ ನಿಶಾ, ಈ ವಯಸ್ಸಿನಲ್ಲಿ ನಾನು ಬೇರೊಬ್ಬ ಗಂಡಸಿನ ಜೊತೆ ಒಂದೇ ಮನೆಯಲ್ಲಿ……?”

“ಅದರಲ್ಲಿ ತಪ್ಪೇನಿದೆಯಮ್ಮ….. ಧರ್ಮಬದ್ಧವಾಗಿ ನೀನು ಮದುವೆ ಆಗಿ ತಾನೇ ಆತನ ಜೊತೆ ಇರ್ತೀಯಾ?  ನಿನ್ನ ಬಗ್ಗೆ ಸ್ವಲ್ಪ ಸರಿಯಾಗಿ ಯೋಚಿಸಿ ನೋಡಮ್ಮ. ನಿನ್ನ ಬಳಿ ನಾಳಿನ ಭವಿಷ್ಯಕ್ಕಾಗಿ ಯಾವ ದೊಡ್ಡ ಬ್ಯಾಂಕ್‌ ಬ್ಯಾಲೆನ್ಸ್ ಸಹ ಇಲ್ಲ. ಈ ಶಾಲೆಯ ಕೆಲಸ ಮುಗಿದರೆ ಮತ್ತೆ ಅದೇ ಕಷ್ಟದ ದಿನಗಳು….. ಒಬ್ಬಳೇ ಹೇಗಮ್ಮ ಈ ಮನೆಯಲ್ಲಿ ಇರಲು ಸಾಧ್ಯ? ಯಾರೂ ಸಹಾಯಕ್ಕೆ ಬಂದುಹೋಗುವ ಆಳು ಸಹ ಇಲ್ಲ.

“ಮುಂದೆ ನಿನಗೆ ಚಟುವಟಿಕೆ, ಚುರುಕು, ಚೈತನ್ಯ ಇರುವುದಿಲ್ಲ. ನಾನೂ ದೂರಾಗಿದ್ದೀನಿ ಅಂತ ಮಾನಸಿಕವಾಗಿ ಬಹಳ ಕುಗ್ಗಿ ಹೋಗ್ತೀಯಾ…… ವಯಸ್ಸು ಹೆಚ್ಚಿದಂತೆ ಅನಾರೋಗ್ಯ ಹೆಚ್ಚುತ್ತದೆ. ಈಗಲೇ ಕೊರೋನಾ….. ಲಂಡನ್ನಿನಿಂದ ಬಂದಿರುವ ಅದರ ಕಸಿನ್‌ ಮರೋನಾ ಅಂತ, ಸಾಕೆ ಕಷ್ಟಗಳು? ಮುಂದೆ ನಾನೇ 100% ನಿನ್ನ ಜವಾಬ್ದಾರಿ ವಹಿಸಿಕೊಳ್ಳಬಲ್ಲೇ ಅಂತ ಹೇಗೆ ಗ್ಯಾರಂಟಿ ಕೊಡಲಿ? ಹೀಗಾಗಿ ನಿನ್ನ ಮರುಮದುವೆ ಒಂದೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ. ನೀನು ಹ್ಞೂಂ ಅನ್ನಮ್ಮ, ನಿನ್ನ ಜೀವನ ಎಷ್ಟೋ ಸುರಕ್ಷಿತವಾಗುತ್ತೆ. ನನಗೂ ನಿನ್ನ ಬಗ್ಗೆ ಚಿಂತೆ ಇಲ್ಲದೆ ನೆಮ್ಮದಿಯಾಗಿ ಇರಬಹುದು.

“ಸರಿಯಮ್ಮ, ನಿನಗೆ ಹೇಗೆ ಸರಿ ತೋಚುತ್ತೋ ಹಾಗೇ ಮಾಡು,” ಶಾಶ್ವತವಾಗಿ ಮಗಳ ಚಿಂತೆ ನಿವಾರಿಸಲು ಹೇಳಿದಳು ರೇವತಿ.

ಅಬ್ಬಾ, ಅಮ್ಮ ಅಂತೂ ಒಪ್ಪಿದರಲ್ಲ ಎಂದು ನಿಶಾ ಸಂಭ್ರಮಿಸಿದಳು. ತಕ್ಷಣ ಲೈಫ್‌ ಪಾರ್ಟ್‌ನರ್‌ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಅಮ್ಮನ ಪ್ರೊಫೈಲ್ ಸಿದ್ಧಪಡಿಸತೊಡಗಿದಳು, `50 ವರ್ಷದ ಸುಂದರ, ಸ್ವಸ್ಥ, ಸುಸಂಸ್ಕೃತ, ಮಕ್ಕಳಿಲ್ಲದ ವಿಧವೆಗೆ ಎರಡನೇ ಮದುವೆಗೆ ವರ ಬೇಕಾಗಿದೆ……’

ಅಮ್ಮ ಅದನ್ನು ಓದಿ ನಕ್ಕುಬಿಟ್ಟರು. ನಂತರ ಇಬ್ಬರೂ ಕುಳಿತು ಆ ಪ್ರೊಫೈಲ್‌ನ್ನು ನಾನಾ ರೀತಿಯಲ್ಲಿ ತಿದ್ದಿದರು. 1 ತಿಂಗಳ ಅವಧಿಯಲ್ಲಿ ಇದಕ್ಕೆ ಮೊದಲ ರೆಸ್ಪಾನ್ಸ್ ಬಂದದ್ದು ನಿಶಾಳ ಈಗಿನ ಮಲತಂದೆ ರಮಣ ಮೂರ್ತಿಯಿಂದ. 55 ವರ್ಷದ ಬಿಸ್‌ನೆಸ್ ಮ್ಯಾನ್‌, ಮಗ ಅಮೆರಿಕಾ, ಮಗಳು ಲಂಡನ್‌ನಲ್ಲಿ ಸೆಟಲ್ ಆಗಿದ್ದರು.

ಹೀಗಾಗಿ ಏಕಾಂಗಿಯಾಗಿ ಸಂಗಾತಿಗಾಗಿ ಹುಡುಕುತ್ತಿದ್ದರು. ಅವರು ಮೈಸೂರಿನ ಜಯಲಕ್ಷ್ಮಿಪುರದಲ್ಲೇ ಕಾರು, ಬಂಗಲೆ, ಇತರ ಅನುಕೂಲಗಳೊಂದಿಗೆ ವಾಸವಿದ್ದದ್ದು ನಿಶಾಳ ಆಯ್ಕೆಗೆ ಮೂಲಾಧಾರ ಆಯ್ತು. ಇವರು ಬೋಗಾದಿಯಲ್ಲಿ ಇದ್ದುದರಿಂದ ಮುಂದೆ ಬಂದು ಹೋಗಲು ನಿಶಾಳಿಗೂ ತೊಂದರೆ ಇರಲಿಲ್ಲ. ರೇವತಿ ಹೆಚ್ಚಿಗೇನೂ ತಂಚಾಂಚಾ ಮಾಡಲಿಲ್ಲ. ಎಲ್ಲ ಜವಾಬ್ದಾರಿಯನ್ನೂ ಕಲಿತ ಮಗಳ ಮೇಲೆ  ಹಾಕಿದ್ದಳು.

ಈ ಮಧ್ಯೆ ಕಾಲೇಜು ಮುಗಿಸಿದ್ದ ನಿಶಾಳಿಗೆ ಮೈಸೂರಿನ ಇನ್‌ಫೋಸಿಸ್‌ನಲ್ಲೇ ಕೆಲಸ ಸಿಕ್ಕಿದ್ದು, ಅವಳ ಖುಷಿ ಹೆಚ್ಚಿಸಿತು. ಅತ್ತ ರಮಣಮೂರ್ತಿ 3-4 ಸಲ ಇವರ ಮನೆಗೆ ಬಂದು ಹೋಗಿ, ಮೂವರೂ ಒಟ್ಟಿಗೆ ಊಟ, ಡಿನ್ನರ್‌ ಎಂದೆಲ್ಲ ಹೊರಗೆ ಸುತ್ತಾಡಿ, 1-2 ತಿಂಗಳಲ್ಲಿ ರಮಣಮೂರ್ತಿ ಆ ಮನೆಗೆ ಬಹಳ ಆತ್ಮೀಯರಾದರು. ಎಲ್ಲ ಅನುಕೂಲಕರವಾಗಿದೆ ಎಂದು ಖಾತ್ರಿಪಡಿಸಿಕೊಂಡೇ ನಿಶಾ ಮುಹೂರ್ತ ಇಡಿಸಿದಳು.

ಅತಿ ಸರಳವಾಗಿ ದೇವಾಲಯದಲ್ಲಿ ಮದುವೆ ಮುಗಿಸಿಕೊಂಡು, ಒಂದು ಮಿನಿ ಹಾಲ್‌ನಲ್ಲಿ ತೀರಾ 50 ಜನರನ್ನು ಒಟ್ಟುಗೂಡಿಸಿ ಆರತಕ್ಷತೆ ಮುಗಿಸಿದ್ದಾಯ್ತು. ತಾಯಿಯನ್ನು ಆ ಮನೆಗೆ ಬಿಟ್ಟು ಬಂದ ನಿಶಾ, ತಾನು ಏನೋ ಸಾಧಿಸಿದೆ ಎಂದೇ ಸಂಭ್ರಮಿಸಿದಳು. ಇನ್ನು ಅಮ್ಮನ ಚಿಂತೆ ಇಲ್ಲ ಎಂದು ತನ್ನ ಕೆಲಸ ಕಾರ್ಯ, ಗೆಳತಿಯರು, ಸಹೋದ್ಯೋಗಿಗಳ ಜೊತೆ ಹೊರಗಿನ ಸುತ್ತಾಟದಲ್ಲಿ 6 ತಿಂಗಳು ಹೋದದ್ದೇ ಅವಳಿಗೆ ತಿಳಿಯಲಿಲ್ಲ.

ಈ ಮಧ್ಯೆ ಮತ್ತೊಂದು ಪ್ರಮುಖ ತಿರುವು ದೊರಕಿ ಅವಳು ಸಹೋದ್ಯೋಗಿ ಸಂತೋಷ್‌ನನ್ನು ಮದುವೆ ಆಗುವ ಹಾಗಾಯಿತು. ತನ್ನ ಮನಿಯನ್ನು ಬಾಡಿಗೆಗೆ ಕೊಟ್ಟು ಅವಳು ಪತಿ ಮನೆಗೆ ಸರಸ್ವತಿಪುರಂಗೆ ಶಿಫ್ಟ್ ಆದಳು. ಆ ಮದುವೆಯಲ್ಲಿ ರಮಣಮೂರ್ತಿ ತಂದೆಯಾಗಿ ಜವಾಬ್ದಾರಿಯುತ ಪಾತ್ರ ನಿರ್ವಹಿಸಿದರು. ತಾನಾಗಿ ಸಂತೋಷ್‌ಗೆ ಹೇಳಿದ್ದರಿಂದ, ಅವನ ತಾಯಿ ತಂದೆಗೆ ಮಾತ್ರ ತಾಯಿಯ ಮರುಮದುವೆ ವಿಷಯ ತಿಳಿದಿತ್ತು. ಅಂತೂ ತಾಯಿ ಮಗಳಿಬ್ಬರೂ ಹೊಸ ವೈವಾಹಿಕ ಜೀವನದಲ್ಲಿ ತೇಲಿಹೋದರು. ಎಲ್ಲ ಸರಿ ಹೋಯಿತು ಎಂದು ನಿಶಾ ತನ್ನ ಸಂಸಾರದಲ್ಲಿ ನೆಮ್ಮದಿ ಕಾಣಲಾರಂಭಿಸಿದಾಗ, ಅತ್ತ ತಾಯಿಯ ಮನೆಯಲ್ಲಿ ಹೊಸ ಸಮಸ್ಯೆ ಶುರುವಾಗಿರುವುದು ತಿಳಿಯಿತು.

ಒಮ್ಮೆ ನಿಶಾ ಒಬ್ಬಳೇ ಮನೆಗೆ ಬಂದು ಹೋಗಬೇಕೆಂದು ರಮಣಮೂರ್ತಿ ಫೋನ್‌ ಮಾಡಿದಾಗ, ಏನಪ್ಪ ಹೊಸ ವಿಷಯ ಎಂದು ಅವಳಿಗೆ ಕುತೂಹಲ ಮೂಡಿದ್ದು ಸಹಜ. ಅಂದು ಶನಿವಾರ ಅವಳಿಗೆ ಬಿಡುವಿದ್ದುದರಿಂದ, ಪತಿ ತಂಗಿಯ ಮನೆಗೆ ಹೋದ ಮೇಲೆ ಇವಳು ಈ ಕಡೆ ಬಂದಿದ್ದಳು. ತಾಯಿಯನ್ನು ಮಾತನಾಡಿಸೋಣ ಎಂದು ಸಡಗರದಿಂದ ಬಂದವಳೇ ಅಡುಗೆಮನೆಗೆ ನುಗ್ಗಿದರೆ, ರೇವತಿ ಅಲ್ಲಿದ್ದರೆ ತಾನೇ? ತಾನೇ ಕಾಫಿ ಮಾಡಿ ತಂದು ಅವರ ಕೈಗೆ ಕೊಡುತ್ತಾ ಎಂದಿನ ಲೋಕಾಭಿರಾಮದ ಮಾತುಕಥೆ ಆಡಿದಳು. ತಾಯಿ ಮಾತಾಜಿ ಆಶ್ರಮಕ್ಕೆ ಹೋಗಿರುವುದು ತಿಳಿಯಿತು.

“ನೀನೇನೋ ಬಲು ಆಸೆಯಿಂದ ನಿಮ್ಮಮ್ಮನ ಮದುವೆ ನನ್ನೊಟ್ಟಿಗೆ ಮಾಡಿಸಿದೆ. ಆದರೆ ಅವಳಿಗೆ ಈ ಸಂಸಾರಕ್ಕಿಂತ ಬಾಬಾ, ಮಾತಾಜಿಗಳ ಸತ್ಸಂಗ, ಭಕ್ತಿ, ಭಜನೆ, ವೈರಾಗ್ಯಗಳೇ ಜಾಸ್ತಿ  ಆಗಿಹೋಗಿದೆ…..” ಎಂದು ಆ ಕುರಿತು ಎಲ್ಲಾ ವಿರಿಸಿದರು.

“ಕಳೆದ ತಿಂಗಳಂತೂ ನಿಮ್ಮಮ್ಮ ಬಲು ವಿಚಿತ್ರವಾಗಿ ಆಡಲಾರಂಭಿಸಿದಳು. ನಾನು ಅವಳ ಹತ್ತಿರ ಸುಳಿಯಬಾರದು, ಒಂದೇ ಮಂಚದಲ್ಲಿ ಒಟ್ಟಿಗೆ ಮಲಗಬಾರದೆಂದು ದೊಡ್ಡ ರಗಳೆ ಎಬ್ಬಿಸಿದಳು. ಸದ್ಯಕ್ಕೆ ತಾನು ವ್ರತ ಕೈಗೊಂಡಿರುವುದರಿಂದ 1 ತಿಂಗಳು ಜೊತೆಯಲ್ಲಿ ಮಲಗುವಂತಿಲ್ಲ, ಸ್ವಲ್ಪ ಕಾಲ ಆಗಲಿ, ಆಮೇಲೆ ನೋಡೋಣ ಎಂದಳು. ಸರಿ, ಭಕ್ತಿ ಶ್ರದ್ಧೆಗಾಗಿ ಹೇಳುತ್ತಿದ್ದಾಳೆ 1 ತಿಂಗಳು ತಾನೇ ಎಂದು ಸುಮ್ಮನಾದೆ.

“ನಿನ್ನೆ ಮತ್ತೆ ಅವಳ ಕೋಣೆಯಲ್ಲಿ ಮಲಗಲು ಹೋದರೆ ನನ್ನ ಮಾಜಿ ಪತಿ ನನಗೆ ಗಾಢ ನೆನಪಾಗುತ್ತಿದ್ದಾರೆ. ಅವರ ನೆನಪಲ್ಲಿ ನಾನು ನಿಮ್ಮ ಪಕ್ಕ ಮಲಗಲು ಸಾಧ್ಯವೇ ಇಲ್ಲ. ನನ್ನ ಮನಸ್ಸು ಸರಿಹೋದ ಮೇಲೆ ಹೇಳ್ತೀನಿ, ಎಂದು ಮುಖಕ್ಕೆ ಹೊಡೆದಂತೆ ಬಾಗಿಲು ಹಾಕಿಕೊಳ್ಳುವುದೇ? ನನ್ನದೇ ಬೆಡ್‌ರೂಮಿನಲ್ಲಿ ನನಗೆ ಜಾಗ ಇಲ್ಲದಂತೆ ಆಗಿ, ಹೋಗಿ ಗೆಸ್ಟ್ ರೂಮಲ್ಲಿ ಮಲಗಿದೆ. ಇದೆಂಥ ಕರ್ಮ ಕಣಮ್ಮ ನನಗೆ…..? ಇಂಥದೇ ಭಾವನೆ ಮನಸ್ಸಿನಲ್ಲಿ ತುಂಬಿಕೊಂಡಿದ್ದರೆ ನನ್ನನ್ನು ಮದುವೆ ಆಗಲು ಏಕೆ ಒಪ್ಪಿಕೊಳ್ಳಬೇಕಿತ್ತು? ಅವಳ ಮನದಲ್ಲಿ ಏನು ಅಡಗಿದೆ ಅಂತ?”

ನಿಶಾ ತನ್ನ ಬುದ್ಧಿ ಎಲ್ಲಾ ಖರ್ಚು ಮಾಡಿ, “ಡ್ಯಾಡಿ ನೀವು ಬೇಸರ ಪಟ್ಟುಕೊಳ್ಳಬೇಡಿ. ಅಪಾರ ಚಿಂತೆ, ಡಿಪ್ರೆಶನ್‌ಗಳೊಂದಿಗೆ ಅಮ್ಮನಿಗೆ ಮನಸ್ಸು ಸ್ವಲ್ಪ ಹಾಳಾಗಿರಬೇಕು. ಈ ಭಜನೆ, ಆಶ್ರಮಗಳ ಪ್ರಭಾವದಿಂದ ಬೇರೇನೋ ಯೋಚನೆ ಬಂದಿರಬೇಕು. ಸ್ವಭಾತಃ ಇನ್ನೊಬ್ಬರನ್ನು ನೋಯಿಸುವ ಗುಣವಿಲ್ಲ ಆಕೆಗೆ. ನಾನು ಮಾತನಾಡ್ತೀನಿ…… ಈ ಹೊಸ ಜೀವನಕ್ಕೆ ಇನ್ನೂ ಪೂರ್ತಿ ಒಗ್ಗಿಲ್ಲ ಅನ್ಸುತ್ತೆ. ನಾನು ತಿಳಿ ಹೇಳ್ತೀನಿ.”

“ಸರಿ, ಸಂಜೆ ನೀನು ಬಂದು ಮಾತಾಡಮ್ಮ. ನಾನು ಆಗ ಕ್ಲಬ್‌ಗೆ ಹೋಗಿರ್ತೀನಿ. ಮನೆಗೆ ಬರುವಷ್ಟರಲ್ಲಿ ರಾತ್ರಿ 8 ಗಂಟೆ ಆಗುತ್ತೆ,” ಎಂದು ನಿಶಾಳನ್ನು ಬೀಳ್ಕೊಂಡರು. ಅಲ್ಲಿಂದ ನೇರ ನಾದಿನಿ ಮನೆಗೆ ಹೊರಟ ನಿಶಾ, ಸಂಜೆ ಬಂದು ಅಮ್ಮನನ್ನು ಭೇಟಿಯಾಗಲು ನಿಶ್ಚಯಿಸಿದಳು. ಸಂಜೆ ತಾನು 6 ಗಂಟೆಗೆ ಬರುವುದಾಗಿ, ಆಗ ಅಮ್ಮ ಬೇರೇನೂ ಕಾರ್ಯಕ್ರಮದಲ್ಲಿ ಬಿಝಿ ಆಗದೆ ಫ್ರೀ ಆಗಿರಬೇಕೆಂದು ಫೋನ್‌ನಲ್ಲಿ ತಾಕೀತು ಮಾಡಿದಳು.

ಪತಿ, ಅತ್ತೆ ಮಾವ ನಾದಿನಿ ಮನೆಯಿಂದ ತಮ್ಮ ಮನೆ ಕಡೆ ಹೊರಟಾಗ ನಿಶಾ ಅಮ್ಮನ ಮನೆಗೆ ಬಂದಳು.

ಆ ವಿಷಯ ಅಮ್ಮನ ಬಳಿ ಪ್ರಸ್ತಾಪ ಮಾಡುವುದೇ ಅವಳಿಗೆ ನುಂಗಲಾರದ ತುತ್ತಾಗಿತ್ತು. ಆದರೆ ಬೇರೆ ದಾರಿ ಇಲ್ಲದೆ ನಿಧಾನವಾಗಿ ಕೆದಕಿ ವಿಷಯ ತಿಳಿದುಕೊಂಡಳು. ರೇವತಿ ಯಾವುದನ್ನೂ ಅಲ್ಲಗಳೆಯದೆ ಹೌದೆಂದು ಒಪ್ಪಿಕೊಂಡಳು. ಮತ್ತೆ ನಿಶಾ ತನಗೆ ತೋಚಿದ್ದೆಲ್ಲ ಹೇಳಿ, ರಮಣ ಮೂರ್ತಿಯಂಥ ಮೃದು ಮನಸ್ಸಿನ ವ್ಯಕ್ತಿಗೆ ಘಾಸಿಯಾಗದಂತೆ, ಅವರು ತನ್ನೊಂದಿಗೆ ಮತ್ತೆ ಅಂಥ ವಿಷಯ ಪ್ರಸ್ತಾಪಿಸದಂತೆ ನಡೆದುಕೋ ಎಂದು ಅಮ್ಮನಿಗೆ 100 ವಿಧದಲ್ಲಿ ಹೇಳಿ, ಅಲ್ಲಿಂದ ಮನೆಗೆ ಹೊರಟಳು.

ಆದರೆ ಅವಳ ಪ್ರಯತ್ನ ಫಲ ನೀಡಲಿಲ್ಲ. ಹೀಗೆ 2-3 ತಿಂಗಳು ಕಳೆಯಿತು. ರೇವತಿ ಎಂದೂ ರಮಣ ತನ್ನ ಬಳಿ ಮಲಗಲು ಒಪ್ಪಿಕೊಳ್ಳುತ್ತಲೇ ಇರಲಿಲ್ಲ. ಇಷ್ಟು ಸಾಲದೆಂಬಂತೆ ಈಗ ಆಕೆ ಒಬ್ಬ ಬಾಬಾರ ಖಾಯಂ ಶಿಷ್ಯೆ ಆಗಿಹೋಗಿದ್ದಳು. ಸದಾ ಸರ್ವದಾ ಭಜನೆ ಮಂಡಳಿ, ಕೀರ್ತನೆಗಳು ಎಂದು ಎಲ್ಲಾ ಆಶ್ರಮಗಳಿಗೂ ಹೋಗಿಬಿಡುತ್ತಿದ್ದಳು. ಅಲ್ಲಿನ ಹೊಸ ಗೆಳತಿಯರ ಜೊತೆ ಸೇರಿ, ತನ್ನ ಕೌಟುಂಬಿಕ ಜವಾಬ್ದಾರಿ ನಿರ್ಲಕ್ಷಿಸಿದಳು. ರಮಣ ಮೂರ್ತಿ ಕೇವಲ ಕಾಯುವುದರಲ್ಲಿ ತೃಪ್ತಿ ಪಡಬೇಕಾಗುತ್ತಿತ್ತು. ರೇವತಿ ಆತನಿಗೆ ಬಲು ಕಡಿಮೆ ಸಮಯ ಕೊಡುತ್ತಿದ್ದಳು. ಮನೆಯ ಕೆಲಸ ಕಾರ್ಯ, ಊಟತಿಂಡಿ ತನ್ನ ಕರ್ತವ್ಯ ಎಂಬಂತೆ ಮಾಡಿಟ್ಟು ಹೊರಗೆ ಹೊರಟುಬಿಡುವಳು. ಒಬ್ಬ ಆದರ್ಶ ಪತ್ನಿಯಾಗಿ ಆಕೆ ಏಕೆ ನಡೆದುಕೊಳ್ಳುತ್ತಿಲ್ಲ ಎಂದು ರಮಣ ಮೂರ್ತಿಗೆ ತಿಳಿಯದಾಯಿತು.

ನಿಶಾಳಿಗೆ ಒಬ್ಬ ಗೆಳತಿ ಇದ್ದಳು ಕುಸುಮಾ. ಅವಳಿಗೆ ಇಬ್ಬರು ವಯಸ್ಕ ಮಕ್ಕಳಿದ್ದರು. ಆಕೆ ಪತಿಯಿಂದ ವಿಚ್ಛೇದನ ಪಡೆದಿದ್ದಳು. ನಿಶಾ ಮತ್ತು ಕುಸುಮಾ ಪರಸ್ಪರರ ಮನೆಗೆ ಬಂದು ಹೋಗುವಷ್ಟು ನಿಕಟರಾಗಿದ್ದರು. ಹೀಗಾಗಿ ಅವಳು ತನ್ನ ತಾಯಿಯ ಸಮಸ್ಯೆಯನ್ನು ಕುಸುಮಾ ಬಳಿ ಹೇಳಿಕೊಂಡಿದ್ದಳು. ಕುಸುಮಾ ತನಗೆ ತೋಚಿದಂತೆ ಸಲಹೆ ನೀಡಿದ್ದಳು. ಆದರೆ ಅದು ಯಾವುದೂ ವರ್ಕ್‌ಔಟ್‌ ಆಗಲಿಲ್ಲ.

ಹೀಗೆ ಒಮ್ಮೆ ಶನಿವಾರ ಸಂಜೆ ನಿಶಾ ಕುಸುಮಾ ಮನೆಗೆ ಹೋಗಿದ್ದಳು. ಅದೂ ಇದೂ ಮಾತನಾಡುತ್ತಾ, ತಾನು ತಾಯಿ ಮನೆ ಕಡೆ ಹೋಗುವುದಾಗಿ ಹೇಳಿದಳು. ಅದೇ ಏರಿಯಾದಲ್ಲಿ ತಾನು ಟೈಲರ್‌ಗೆ ಬಟ್ಟೆ ಕೊಟ್ಟಿರುವುದಾಗಿ, ತನ್ನನ್ನು ಅಲ್ಲಿ ಡ್ರಾಪ್ ಮಾಡುವಂತೆ ಕುಸುಮಾ ಕೇಳಿದಳು. ಸರಿ ಎಂದು ಕರೆದೊಯ್ದ ನಿಶಾ, ಔಪಚಾರಿಕತೆಗಾಗಿ ಅಮ್ಮನನ್ನು ಭೇಟಿಯಾಗಿ ಹೋಗುವಂತೆ ಕುಸುಮಾಳನ್ನು ಕರೆದಳು.

ಕುಸುಮಾಗೂ ಧಾರಾಳ ಸಮಯವಿದ್ದುದರಿಂದ ರೇವತಿಯನ್ನು ಭೇಟಿ ಮಾಡಲು ಬಂದಳು. ಹೀಗೆ ಮೂವರೂ ಕಾಫಿ ಕುಡಿಯುತ್ತಿದ್ದಾಗ, ದಿಢೀರ್‌ ಎಂದು ರಮಣಮೂರ್ತಿಯ ಆಗಮನವಾಯಿತು. ಔಪಚಾರಿಕವಾಗಿ ಎಂಬಂತೆ ನಿಶಾ ತನ್ನ ಗೆಳತಿ ಕುಸುಮಾಳನ್ನು ಅವರಿಗೆ ಪರಿಚಯಿಸಿದಳು. ಅದೂ ಇದೂ ಮಾತನಾಡುತ್ತಾ ಕುಳಿತರು. ರೇವತಿ ಅವರಿಗೂ ಕಾಫಿ ತಿಂಡಿ ತಂದುಕೊಟ್ಟಳು.

ತುಸು ಚೇಷ್ಟೆ ಸ್ವಭಾವದ ಕುಸುಮಾ ಮೆಲ್ಲಗೆ ನಿಶಾಳ ಕಿವಿಯಲ್ಲಿ, “ನಿನ್ನ ಡ್ಯಾಡಿ ತುಂಬಾ ಸ್ಮಾರ್ಟ್‌ ಆಗಿದ್ದಾರೆ ಬಿಡು,” ಎಂದಳು.

ನಿಶಾ ನಡುನಡುವೆ ಗಮನಿಸಿದಾಗ ರಮಣ್‌ ಕುಸುಮಾಳತ್ತ ಆಗಾಗ ನುಂಗುವ ಕಣ್ಣೋಟ ಹರಿಸುತ್ತಿದ್ದರು. ನಿಶಾ ಕುಸುಮಾ ಕಣ್ಣಲ್ಲೇ ಮಾತನಾಡಿಕೊಂಡು ನಕ್ಕರು. ಕುಸುಮಾಳ ಸೌಂದರ್ಯವನ್ನು ಕಣ್ಣಲ್ಲೇ ಹೀರಿಕೊಳ್ಳುತ್ತಾ ರಮಣ್‌ ಆ ಜಾಗ ಬಿಟ್ಟು ಕದಲಲೇ ಇಲ್ಲ.

ಹೀಗೆ ನಿಶಾ ಕುಸುಮಾ ಆ ಮನೆಗೆ ಆಗಾಗ ಬರುವಂತಾಯಿತು. ಸಹಜವಾಗಿ ರೇವತಿ ಸಹ ಕುಸುಮಾಳಿಗ ಆಪ್ತರಾದರು. ಎಂದಿನಂತೆ ರೇವತಿ ತನ್ನ ಆಶ್ರಮದ  ಕಾರ್ಯ ಕಲಾಪಗಳಲ್ಲಿ ಮುಳುಗಿಹೋದಳು. ಆದರೆ ಯಾರೂ ಗೆಳೆಯರಿಲ್ಲದ ಕುಸುಮಾ ಆ ಮನೆಗೆ ಮತ್ತೆ ಮತ್ತೆ ಬರತೊಡಗಿದಳು. ರೇವತಿಯ ಸ್ವಭಾವ ಬೇಗ ತಿಳಿದುಹೋಯಿತು. ಸಹಜವಾಗಿಯೇ ತನ್ನ ಕಾಮನೆಗಳಿಗಾಗಿ ರಮಣ ಮೂರ್ತಿಯತ್ತ ನೋಟ ಹರಿಸಿದಳು. ಆತನಿಗೆ ಬೇಕಾದ್ದೂ ಅದೇ! ಹಿಟ್ಟು ಹಳಸಿತ್ತು…. ನಾಯಿ ಹಸಿದಿತ್ತು ಎಂಬಂತಾಯಿತು. ರೇವತಿಯ ಅನುಪಸ್ಥಿತಿಯಲ್ಲಿ ಅವರಿಬ್ಬರೂ ಆಗಾಗ ಸೇರತೊಡಗಿದರು.

ಹೊರಗಿನ ಸುತ್ತಾಟ ಅವರಿಗೆ ಮಜಾ ಎನಿಸಿತು. ಇದೀಗ ಕುಸುಮಾ ಕ್ರಮೇಣ ನಿಶಾಳಿಗೆ ಅಪರೂಪವಾಗುತ್ತಾ, ಹೆಚ್ಚು ಹೆಚ್ಚು ರಮಣ ಮೂರ್ತಿಯತ್ತ ಅಂಟಿಕೊಂಡಳು. ಇವರ ವ್ಯವಹಾರವನ್ನು ನಿಶಾ ಊಹಿಸಲಿಕ್ಕೂ ಸಾಧ್ಯವಿರಲಿಲ್ಲ. ಕುಸುಮಾಳ ಮನೆಯಲ್ಲಿ ರಮಣ ಮೂರ್ತಿ ಜೊತೆ ಭೇಟಿ ಸಾಧ್ಯವಾಗುತ್ತಿರಲಿಲ್ಲ. ವಯಸ್ಕ ಮಕ್ಕಳೆದುರು ಅವಳು ತನ್ನ ಪ್ರತಿಷ್ಠೆ ಕಾಯ್ದುಕೊಳ್ಳಬೇಕಿತ್ತು.

ರೇವತಿ ಹೇಗಿದ್ದರೂ ನೆನೆದಾಗೆಲ್ಲ ಆಶ್ರಮ, ಭಜನೆ ಎಂದು ಬಾಬಾಗಳನ್ನು ಅರಸಿ ಹೊರಡುತ್ತಿದ್ದುದರಿಂದ ಇವರಿಗೆ ಇನ್ನಷ್ಟು ಆರಾಮವಾಯಿತು. ನಿರ್ಭೀತಿಯಿಂದ ಇಬ್ಬರೂ ಬೆರೆತುಹೋದರು. ಕಾಮಾತುವರಾಣಾಂ….ನ ಭಯಂ ನ ಲಜ್ಜಾ! ಕಾಮಕ್ಕೆ ಕಣ್ಣಿಲ್ಲ, ಭಯವಿಲ್ಲ, ನಾಚಿಕೆಯೂ ಇಲ್ಲ ಎಂಬುದನ್ನು ಇಬ್ಬರೂ ತೆರೆದ ಮನದಿಂದ ಒಪ್ಪಿಕೊಂಡಿದ್ದರು. ಪತ್ನಿ ತನಗೆ ನೀಡದ ಸುಖವನ್ನು ಪ್ರೇಯಸಿ ಬಳಿ ಹಾಯಾಗಿ, ಸುರಕ್ಷಿತವಾಗಿ ಪಡೆಯುತ್ತಿದ್ದ ರಮಣ ಮೂರ್ತಿ, ಪತ್ನಿಗೆ ತಾನು ದ್ರೋಹ ಬಗೆಯುತ್ತಿಲ್ಲ, ಅವಳಾಗಿ ನೀಡದ್ದನ್ನು ಪರಸ್ತ್ರೀ ಬಳಿ ಅನಾಯಾಸವಾಗಿ ಪಡೆಯುತ್ತಿದ್ದೇನೆ ಎಂದು ತರ್ಕಿಸಿದ್ದರೆ, ತನ್ನಂಥ ಒಂಟಿ ಹೆಂಗಸು ಬಯಸುವ ಈ ಸುಖ, ಇಷ್ಟು ಸಲೀಸಾಗಿ ಸುರಕ್ಷಿತವಾಗಿ ಸಿಗುವಾಗ ಏಕೆ ಬಿಡಬಾರದು ಎಂಬುದು ಕುಸುಮಾಳ ತರ್ಕವಾಗಿತ್ತು. ಆತ ಹೆಂಡತಿಯಿಂದ ಪಡೆಯಲಾರದ್ದನ್ನು ತನ್ನ ಬಳಿ ಹಂಚಿಕೊಂಡರೆ ಏನು ತಪ್ಪು ಎಂದು ಭಾವಿಸುವಳು. ಒಟ್ಟಾರೆ ಇಬ್ಬರಲ್ಲೂ ಅಪರಾಧಿಪ್ರಜ್ಞೆ ಇರಲಿಲ್ಲ.

ಅದೇನಾಯಿತೋ ಏನೋ ಅಂದು, ಬಹಳ ಸುಸ್ತಾಗಿದೆ ಜ್ವರ ಬಂದಂತಿದೆ ಎಂದು ರೇವತಿ ಶನಿವಾರ ಸಂಜೆ 7 ಗಂಟೆಗೇ ಮನೆಗೆ ಮರಳಿದಳು. ಅವಳು ಬರುವಷ್ಟರಲ್ಲಿ ರಾತ್ರಿ 8 ದಾಟುತ್ತಿತ್ತು. ಪತಿ ಬರುವುದು ದಿನಾ 9 ಗಂಟೆ ಆದ್ದರಿಂದ, ಅವಳಿಗೆ ಚಿಂತೆಯೇ ಇರಲಿಲ್ಲ.

ಇದೇನಿದು? ಮುಂಬಾಗಿಲು ಒಳಗಿನಿಂದ ತೆರೆದಿದೆ….. ಓಹೋ ರಮಣ್‌ ಬೇಗ ಬಂದಿರಬೇಕೆಂದು ಭಾವಿಸಿದಳು. ಲೈಟ್‌ ಹಾಕಿರಲಿಲ್ಲ. ಓಹೋ ಕರೆಂಟ್‌ ಹೋಗಿರಬೇಕು, ಆದರೆ ಯುಪಿಎಸ್‌ ಇತ್ತಲ್ಲ ಎಂದು ಅರಿಯದೆ ಹಾಲ್ ಲೈಟ್‌ ಸ್ವಿಚ್‌ ಒತ್ತಿದಳು. ಹಾಗೇ ತಮ್ಮ ರೂಮಿನ ಕಡೆ ನಡೆದಾಗ, ಅಲ್ಲಿ ಬಾಗಿಲು ಹಾಕಿತ್ತು.

wajah-story2

ಒಳಗೂ ಲೈಟ್‌ ಹಾಕೋಣ ಎಂದು ಬಾಗಿಲು ತಳ್ಳಿ ಒಳಬಂದ ರೇವತಿ, ಅಲ್ಲಿನ ದೃಶ್ಯ ಕಂಡು ಹೌಹಾರಿದಳು. ಕುಸುಮಾ ರಮಣ್‌ತಮ್ಮದೇ ಲೋಕದಲ್ಲಿ ಮೈಮರೆತಿದ್ದರು. ರೇವತಿ ಇಷ್ಟು ಬೇಗ ಬರುವುದಿಲ್ಲವೆಂದು ಗೊತ್ತಿದ್ದ ಅವರಿಗೆ ಬಾಗಿಲಿನ ಪರಿವೆ ಸಹ ಇಲ್ಲದೆ ಮೈಮರೆತಿದ್ದರು. ಅವರನ್ನು ಆ ಸ್ಥಿತಿಯಲ್ಲಿ ಕಂಡು ಹೌಹಾರಿ, ಕಿಟಾರನೆ ಕಿರುಚಿ ರೇವತಿ ಅಲ್ಲಿಂದ ಹೊರಗೆ ಬಂದುಬಿಟ್ಟಳು. ತನ್ನ ಪತಿ ಹೀಗೆ ತನಗೆ ಮೋಸ ಮಾಡಬಹುದೆಂದು, ಪರಸ್ತ್ರಿ ಸಂಗ ಅದೂ ಮನೆಗೇ ಕರೆತಂದು….. ಇಂಥ ದ್ರೋಹವನ್ನು ನೆನೆಸಿರಲಿಲ್ಲ.

ದಿಕ್ಕು ತೋಚದವಳಂತೆ ಒಂದು ಆಟೋ ಮಾಡಿಕೊಂಡು ನೇರ ಮಗಳ ಮನೆಗೆ ಬಂದಳು. ತಾಯಿ ಬರುತ್ತಿದ್ದುದೇ ಅಪರೂಪ. ಇದೇನು ಈ ಹೊತ್ತಿನಲ್ಲಿ ಎಂದು ಆಶ್ಚರ್ಯಗೊಂಡಳು ನಿಶಾ. ಎಲ್ಲರೊಂದಿಗೆ ಹಾರ್ದಿಕವಾಗಿ ಮಾತನಾಡಿ, ಸ್ವಲ್ಪ ಅರ್ಜೆಂಟಾಗಿ ಡಾಕ್ಟರ್‌ ಬಳಿ ಹೋಗೋಣ ಎಂದಳು.

ತಾಯಿಗೇಕೋ ಕಷ್ಟ ಬಂದಿದೆ ಎಂದು ಭಾವಿಸಿದ ಮಗಳು ತಾನೇ ಕಾರು ನಡೆಸಿಕೊಂಡು ಹತ್ತಿರದ ಲೇಡಿ ಡಾಕ್ಟರ್‌ ಕ್ಲಿನಿಕ್‌ ಕಡೆ ಹೊರಟಳು. ಅರ್ಧ ದಾರಿಯಲ್ಲಿ ಒಂದು ಪಾರ್ಕ್‌ ಎದುರಾದಾಗ, ರೇವತಿ ಮಗಳಿಗೆ ಅಲ್ಲೇ ನಿಲ್ಲಿಸುವಂತೆ ಬಲವಂತಪಡಿಸಿದಳು. ಇಂದೇಕೋ ಅಮ್ಮ  ವಿಚಿತ್ರವಾಗಿ ಆಡುತ್ತಿದ್ದಾಳೆ ಎಂದು ಭಾವಿಸಿದ ನಿಶಾ, ಅಮ್ಮನ ಕೈ ಹಿಡಿದು ಹತ್ತಿರದ ಕಲ್ಲುಬೆಂಚಿನ ಮೇಲೆ ಕುಳಿತಳು.

ಅಲ್ಲಿ ಮಗಳ ಕೈ ಹಿಡಿದ ರೇವತಿ, ತನಗೇನೂ ಅನಾರೋಗ್ಯವಿಲ್ಲ. ನಿಮ್ಮ ಮನೆಯಲ್ಲಿ ಹೇಳಲಾಗದ ವಿಷಯ ಎಂದು ಇಲ್ಲಿಗೆ ಕರೆತಂದೆ ಎಂದು ಗೊಳೋ ಎಂದು ಅಳುತ್ತಾ ಕುಳಿತಳು.

ನಿಶಾಳಿಗೆ ಏನೂ ಅರ್ಥವಾಗಲಿಲ್ಲ. ಮಗಳ ಕೈ ಹಿಡಿದುಕೊಳ್ಳುತ್ತಾ ರೇವತಿ ನಡೆದುದನ್ನೆಲ್ಲ ತಿಳಿಸಿದಳು. ತನಗೆ ದ್ರೋಹ ಬಗೆದ ಪತಿ, ಮಗಳ ಗೆಳತಿ ಇಬ್ಬರಿಗೂ ಹಿಡಿಶಾಪ ಹಾಕಿದಳು.

“ನೀನು ಒತ್ತಾಯ ಪಡಿಸಿದ್ದಕ್ಕೆ ನಾನು ಈ ಮದುವೆ ಮಾಡಿಕೊಂಡೆ, ನಿನಗೆ ಹೊರೆ ಆಗಬಾರದೂಂತ…. ಈಗ ಎಲ್ಲಾ ಕಳೆದುಕೊಂಡಿದ್ದೇನೆ….. ನಮ್ಮ ಹಳೆ ಮನೆ ಇತ್ತಲ್ಲ, ಆ ಬಾಡಿಗೆಯರನ್ನು ಬಿಡಿಸಿಬಿಡಮ್ಮ. ನಾನು ಒಬ್ಬಳೇ ಹೋಗಿ ಅಲ್ಲಿ ಇರ್ತೀನಿ,” ಎಂದು ದೃಢವಾಗಿ ಹೇಳಿದಳು.

ಪರಿಸ್ಥಿತಿ ಅರಿತ ನಿಶಾ ತಾಯಿಗೆ ಆಶ್ವಾಸನೆ ನೀಡಿದಳು, “ನಾಳೆ ನಾನು ಬಂದು ಅವರ ಜೊತೆ ಮಾತಾಡ್ತೀನಮ್ಮ…. ನೀನು ಅವಸರದಲ್ಲಿ ಯಾವ ನಿರ್ಧಾರಕ್ಕೂ ಬರಬೇಡಮ್ಮ…..”

“ಅವಸರದ ನಿರ್ಧಾರ ಅಲ್ಲ…. ನನಗೆ ಆತನ ಮುಖ ನೋಡುವುದೇ ಬೇಕಿಲ್ಲ. ಆದಷ್ಟು ಬೇಗ ಬಾಡಿಗೆಯವರನ್ನು ಕಳುಹಿಸಿ, ನನಗೆ ನಮ್ಮ ಮನೆ ಬಿಡಿಸಿ ಕೊಡಮ್ಮ,” ಎಂದು ಮತ್ತೆ ಬಿಕ್ಕಿದಳು. ನಾನಾ ರೀತಿಯಲ್ಲಿ ತಾಯಿಗೆ ಸಮಾಧಾನ ಹೇಳಿದ ನಿಶಾ, ಅವರನ್ನು ಹೇಗೋ ಮಾಡಿ ಮನೆಗೆ ಕರೆದುಕೊಂಡು ಹೋದಳು.

ಅಲ್ಲಿ ಏನೂ ನಡೆದೇ ಇಲ್ಲ ಎಂಬಂತೆ ರಮಣ ಮೂರ್ತಿ ಹಾಯಾಗಿ ಟಿವಿ ನೋಡುತ್ತಿದ್ದರು. ಆತನ ಮುಖ ನೋಡಲು ಇಷ್ಟವಿಲ್ಲದೆ ರೇವತಿ ಕೋಣೆಗೆ ಹೋಗಿ ಕದ ಹಾಕಿಕೊಂಡಳು.

ಹೇಗೆ ಮಾತು ಆರಂಭಿಸುವುದೋ ತಿಳಿಯದೆ, “ಇದೇನಾಯ್ತು ಡ್ಯಾಡಿ….. ಅಮ್ಮ ಹೇಳಿದ್ದು…. ಇದೆಷ್ಟು ಸರಿ ಅಂತ ನೀವೇ ಹೇಳಬೇಕು.”

“ಮನೆಯಲ್ಲಿ ಊಟ ಸಿಗದಿದ್ದಾಗ ಜನ ಹೋಟೆಲ್‌ಗೆ ಹೋಗಿ ಬೇಕಾದ್ದು ತಿನ್ನುವುದಿಲ್ಲವೇ…..? ಇದು ಹಾಗೇ ಅನ್ಕೊ. ಮೊದಲಿನಿಂದಲೇ ಹೇಳಿದ್ದೆ, ನಿಮ್ಮಮ್ಮ ನನ್ನ ಕಡೆ ಗಮನ ಕೊಡೋಲ್ಲ. ತಾನಾಯಿತು ತನ್ನ ಪಾಡಾಯಿತು, ದುಡಿದು ದಣಿದು ಬಂದರೆ ಬಾಗಿಲಿಗೆ ಬೀಗ…… ಜೀವನದಲ್ಲಿ ರೋಸಿ ಸಿಗರೇಟ್‌, ಹೆಂಡ ಎಲ್ಲಾ ಕಲಿತೆ.

“ಹಾಳಾಗಿ ಹೋಗಲಿ, ನೆಮ್ಮದಿ ಕಂಡುಕೊಳ್ಳೋಣ ಅಂತ ಅವಳ ಬಳಿ ಹೋದರೆ ಸದಾ ನಿಮ್ಮಪ್ಪನ ಗುಣಗಾನ ಮಾಡ್ತಾಳೆ, ಆ ಮನುಷ್ಯನಿಗೆ ದ್ರೋಹ ಮಾಡಲಾರೆ, ನಿಮ್ಮೊಡನೆ ಮಲಗಲಾರೆ…… ಅಂತ. ನನಗೆ ಬೇರೆ ದಾರಿಯೇ ಇರಲಿಲ್ಲ. ಹಾಗೇಂತ ನಾನು ಮಾಡಿದ್ದು ಸರಿ ಅಂತ ಹೇಳ್ತಿಲ್ಲ. ಆದರೆ ಅವಳು ತಾನಾಗಿ ಇದಕ್ಕೆ ದಾರಿ ಮಾಡಿಕೊಡಬಾರದಾಗಿತ್ತು. ಆಯ್ತು ನನ್ನ ತಪ್ಪು ಒಪ್ಪಿಕೊಳ್ತೀನಿ. ಇನ್ನೆಂದೂ ಹಾಗೆ ದಾರಿ ತಪ್ಪುವುದಿಲ್ಲ ಅಂತ ಪ್ರಾಮಿಸ್‌ ಮಾಡ್ತೀನಿ, ಆದರೆ ಅವಳು ನನಗೆ ಪಕ್ಕಾ ಹೆಂಡತಿಯಾಗಿ ನಡೆದುಕೊಳ್ಳುವ ಮಾತು ಕೊಡಬೇಕು. ಸದಾ ನಿನ್ನ ತಂದೆ ಗುಣಗಾನ ಮಾಡುತ್ತಾ ಅವರನ್ನು ಮೈ ಮೇಲೆ ಆವಾಹನೆ ಮಾಡಿಕೊಳ್ಳಬಾರದು…. ಇದು ಅವಳಿಗೆ ಒಪ್ಪಿಗೆ ಇಲ್ಲದಿದ್ದರೆ ತನ್ನ ದಾರಿ ತಾನು ನೋಡಿಕೊಳ್ಳಲಿ, ತಿಂಗಳಿಗೆ ಎಷ್ಟು ಬೇಕೋ ಮಾಸಾಶನ ಕೊಡಲು ನಾನು ರೆಡಿ!”

ಆತನ ಮಾತನ್ನು ಹೇಗೆ ತಾನೇ ಧಿಕ್ಕರಿಸುವುದು? ತಾಯಿಯ ಕೋಣೆ ಕದ ತಟ್ಟಿ ಒಳಗೆ ಬಂದ ನಿಶಾ ಹೇಳಿದಳು, “ಹೌದಮ್ಮ…. ಇದರಲ್ಲಿ  ಎಲ್ಲರದೂ ತಪ್ಪಿದೆ. ನೀನು ಸರಿಯಾಗಿ ಸಹಕರಿಸುತ್ತಿಲ್ಲ ಅಂತ ಅವರು ಕುಸುಮಾ ಬಳಿ ಹೋದರು. ತನ್ನ ಸ್ವಾರ್ಥಕ್ಕಾಗಿ ಕುಸುಮಾ ಅವರನ್ನು ಬಳಸಿಕೊಂಡಳು…… ನೀನಾಗಿ ಅವರನ್ನು ದೂರ ಮಾಡಿ ಈ ಸ್ಥಿತಿ ತಂದುಕೊಂಡೆ……

“ಎಂದೋ ತೀರಿಹೋದ ಅಪ್ಪನ್ನ ನೆನೆಸಿಕೊಂಡು ಅವರನ್ನು ದೂರ ಮಾಡಿದರೆ, ಮನೆಯಲ್ಲಿ ಊಟ ಸಿಗದೆ ಹೋಟೆಲ್‌ಗೆ ಹೋಗುವ ಜನರಂತೆ ಅವರು ಮಾಡುವುದಿಲ್ಲವೇ? ಎಲ್ಲಾ ಒಪ್ಪಿಕೊಂಡಿದ್ದಾರೆ, ನೀನೂ ನಿನ್ನ ಹಠ ಬಿಟ್ಟುಬಿಡು. ಮರುಮದುವೆ ಆಗಲು ಒಪ್ಪಿದ ಮೇಲೆ ಇದೆಲ್ಲ ಗೊತ್ತಿರುವಂಥದ್ದೇ ಅಲ್ಲವೇ…. ಇನ್ನೆಂದೂ ಅವರನ್ನು ಬಿಟ್ಟುಕೊಡೊಲ್ಲ ಅಂತ ನನ್ನ ಮುಂದೆ ಪ್ರಮಾಣ ಮಾಡು,” ಎಂದು ತಾಯಿಯನ್ನು ಹಾಲ್‌ಗೆ ಕರೆದೊಯ್ದಳು.

ಕಣ್ಣೀರು ತುಂಬಿಕೊಂಡು ಅವರ ಎದೆಗೊರಗಿದ ರೇವತಿ, “ನನ್ನನ್ನು ಕ್ಷಮಿಸಿ ಬಿಡಿ…..” ಎಂದು ಬಿಕ್ಕಳಿಸಿದಳು.

“ನಿನ್ನ ಬಿಟ್ಟು ಎಂದೂ ಬೇರೆ ಹೆಣ್ಣಿಗೆ ಆಸೆಪಡಲಾರೆ. ನನ್ನದು ತಪ್ಪಾಯಿತು,” ಎಂದು ಅವರೂ ಕ್ಷಮೆ ಕೇಳಿದರು. ಅವರಿಬ್ಬರನ್ನೂ ಒಂದಾಗಿಸಿ, ಕೈ ಬೀಸುತ್ತಾ ನಿಶಾ ಹೊರಟಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ