ಕಬ್ಬನ್ ಪಾರ್ಕಿನ ಸುಂದರ ವಿಹಾರ, ವಿಧಾನಸೌಧ, ಹೈಕೋರ್ಟಿನ ಅಂದಕ್ಕೆ ಬೆರಗಾದರು, ಲಾಲ್‌ಬಾಗ್‌ನ ಸೌಂದರ್ಯ ನೋಡಲು ಹಾತೊರೆಯುವುದುಂಟು. ಅಂಥವರಿಗೆ ಕೇವಲ 10 ನಿಮಿಷಗಳಲ್ಲಿಯೇ `ನಮ್ಮ ಮೆಟ್ರೋ’ ಲಾಲ್ ಬಾಗ್ ಸ್ಟೇಷನ್‌ಗೆ ತಲುಪಿಸುತ್ತದೆ. ಅದೊಂದು ರೀತಿಯಲ್ಲಿ ಸಂಪರ್ಕ ಸೇತುವೆಯೇ ಆಗಿಬಿಟ್ಟಿದೆ.
ಬೃಹತ್ ವೇಗದಲ್ಲಿ ಬೆಳೆಯುತ್ತಿರುವ ಬೃಹತ್ ಬೆಂಗಳೂರಿನಲ್ಲಿ ಅಗಾಧ ಟ್ರಾಫಿಕ್‌ನಿಂದಾಗಿ ಪ್ರಯಾಣ ವೇಗ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೊರಟಿದೆ. ಅಂತಹ ಸ್ಥಿತಿಯಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಳವಾಗಿ, ಹಾಯಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸಿದೆ.
ಮೆಟ್ರೋ ನಿರ್ಮಾಣದ ಸಾಹಸ
ಬೆಂಗಳೂರಿನಲ್ಲಿ ಎತ್ತರಿಸಿದ ಮಾರ್ಗದಲ್ಲಿರುವ ಸ್ಟೇಷನ್‌ಗಳಿಗಿಂತ ನೆಲದೊಳಗಿರುವ ಮಾರ್ಗದ ಸ್ಟೇಷನ್‌ಗಳ ನಿರ್ಮಾಣವೇ ಬಿಎಂಆರ್‌ಸಿಎಲ್‌ಗೆ ದೊಡ್ಡ ಚಾಲೆಂಜ್ ಆಗಿತ್ತೆನ್ನಬಹುದು.
ಉತ್ತರ ದಕ್ಷಿಣ, ಪೂರ್ವ ಪಶ್ಚಿಮ ಕಾರಿಡಾರ್‌ಗಳ ಕೇಂದ್ರಬಿಂದು ಆಗಿರುವ ನಾಡಪ್ರಭು ಕೆಂಪೇಗೌಡ ನಿಲ್ದಾಣ ಏಳು ಫುಟ್ಬಾಲ್ ಮೈದಾನಗಳಷ್ಟು ವಿಶಾಲವಾಗಿದೆ ಹಾಗೂ ಅಷ್ಟೇ ಆಳದಲ್ಲಿದೆ. ಅಧಿಕ ಚಿಹ್ನೆಯಂತೆ ಕಾಣುವ ಇದರ ಮಾರ್ಗಗಳು ನೋಡುಗರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.
ನೂರಾರು ಎಂಜಿನಿಯರ್‌ಗಳು, ಸಾವಿರಾರು ಕಾರ್ಮಿಕರು ಹಗಲಿರುಳೆನ್ನೆದೇ ಬೆಂಗಳೂರು ಮೆಟ್ರೋಗಾಗಿ ಶ್ರಮಿಸಿದ್ದರಿಂದಾಗಿ ನಾವಿಂದು ಮೆಟ್ರೋ ರೈಲಿನಲ್ಲಿ ಸುಗಮವಾಗಿ, ಮಾಲಿನ್ಯರಹಿತ ವಾತಾವರಣದಲ್ಲಿ ಪ್ರಯಾಣಿಸಲು ಸಾಧ್ಯವಾಗಿದೆ.
ಫೋಟೋ ಗ್ಯಾಲರಿ
ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ, ವಿಶ್ವೇಶ್ವರಯ್ಯ ನಿಲ್ದಾಣ, ಅಂಬೇಡ್ಕರ್ ವಿಧಾನಸೌಧ, ಕಬ್ಬನ್ ಪಾರ್ಕ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಚಿಕ್ಕಪೇಟೆ ಹಾಗೂ ಕೃಷ್ಣ ರಾಜೇಂದ್ರ ಮಾರುಕಟ್ಟೆ ನಿಲ್ದಾಣಗಳ ಮೂಲಕ ರೈಲು ಹಾಯ್ದು ಹೋಗುವಾಗ ನಿಜಕ್ಕೂ ವಿಶೇಷ ಅನುಭವವಾಗುತ್ತದೆ.
ಈ ನಿಲ್ದಾಣಗಳ ನಿರ್ಮಾಣ ಹೇಗೆ ನಡೆಯಿತು ಎನ್ನುವುದನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತೋರಿಸಲು ಬಿಎಂಆರ್‌ಸಿಎಲ್ ನಿಗಮ ವಿಧಾನಸೌಧ ನಿಲ್ದಾಣದ ವಿಶಾಲವಾದ ಪ್ರಾಂಗಣದಲ್ಲಿ ಬೃಹತ್ ಫೋಟೋ ಗ್ಯಾಲರಿ ಸ್ಥಾಪನೆ ಮಾಡಿದೆ. ಬೇರೆ ಬೇರೆ ನಿಲ್ದಾಣಗಳಲ್ಲಿ ನಿರ್ಮಾಣ ಹಂತದಲ್ಲಿ ಎದುರಾದ ಸವಾಲುಗಳು ತಂತ್ರಜ್ಞರ ನೈಪುಣ್ಯತೆ ಈ ಫೋಟೋಗಳ ಮೂಲಕ ಅನಾವರಣವಾಗುತ್ತದೆ.
ಎಲ್ಲಿಂದ ಆರಂಭಿಸಬೇಕು?
ಈ ಮೆಟ್ರೋ ಫೋಟೋ ಗ್ಯಾಲರಿಯನ್ನು ಎರಡು ಹಂತದಲ್ಲಿ ವೀಕ್ಷಣೆ ಮಾಡಬೇಕಾಗುತ್ತದೆ. ಕಬ್ಬನ್ ಪಾರ್ಕ್, ವಿಧಾನಸೌಧ ನೋಡಿಕೊಂಡು ವಿಕಾಸಸೌಧ ಎದುರಿಗಿನ ಗೇಟ್ ಮೂಲಕ ಮೆಟ್ರೋ ನಿಲ್ದಾಣದೊಳಗೆ ಪ್ರವೇಶಿಸಬೇಕು. ಅಲ್ಲಿಂದ ಹಾಗೆಯೇ ನಿಧಾನವಾಗಿ ಹೆಜ್ಜೆ ಹಾಕುತ್ತಾ ಉದ್ದನೆಯ ಪ್ರಾಂಗಣದಲ್ಲಿ ಮೊದಲು ಎಡಭಾಗದ ಗೋಡೆಗುಂಟ ಹಾಕಿರುವ ಬೃಹತ್ ಗಾತ್ರದ ಫೋಟೋಗಳನ್ನು ವೀಕ್ಷಿಸಿ, ಬಳಿಕ ಬಲಭಾಗದ ಗೋಡೆಯ ಮೇಲೆ ಅಳವಡಿಸಲಾಗಿರುವ ಫೋಟೋಗಳನ್ನು ಅವಲೋಕಿಸಬೇಕು. ಮೆಜೆಸ್ಟಿಕ್ ಹಾಗೂ ಆಸುಪಾಸಿನ ರೈಲು ನಿಲ್ದಾಣಗಳ ಕಾಮಗಾರಿ ಪ್ರತಿಯೊಂದು ಆರಂಭಿಕ ಹಂತದ ಚಟುವಟಿಕೆಗಳು ಬೃಹತ್‌ಛಾಯಾ ಚಿತ್ರಗಳಲ್ಲಿ ಗಮನ ಸೆಳೆಯುವಂತೆ ಮಾಡುತ್ತವೆ.
ಮಧ್ಯಭಾಗದ ಟಿಕೆಟ್ ಕೌಂಟರ್ ತನಕ ಹೆಜ್ಜೆ ಹಾಕುತ್ತಾ ಫೋಟೋಗಳನ್ನು ಕಣ್ತುಂಬಿಸಿಕೊಳ್ಳುತ್ತಾ ಮೆಟ್ರೋ ನಿರ್ಮಾಣದ ಇತಿಹಾಸವನ್ನು ಮೆಲುಕು ಹಾಕುತ್ತಾ ಸಾಗಬೇಕು. ಟಿಕೆಟ್ ಕೌಂಟರ್ ಹತ್ತಿರ ನಿಮ್ಮ ಕಾರ್ಡ್‌ನ್ನು ಯಂತ್ರಕ್ಕೆ ತೋರಿಸಿ ಗ್ಯಾಲರಿಯ ಎರಡನೇ ಹಂತಕ್ಕೆ ಸಾಗಬೇಕು. ಮೈಸೂರು ಬ್ಯಾಂಕ್ ಹತ್ತಿರ ಸಿವಿಲ್ ಕೋರ್ಟ್ ಬಳಿ, ಎಚ್‌ಎಎಲ್ ಕಛೇರಿ ಸಮೀಪ ನಡೆದ ಕಾಮಗಾರಿಗಳ ವಿವಿಧ ಹಂತಗಳನ್ನು ಇಲ್ಲಿನ ಎರಡೂ ಬದಿಯ ಗೋಡೆಯ ಮೇಲಿನ ಚಿತ್ರಗಳು ಕಣ್ಣಿಗೆ ಬಿಂಬಿಸುತ್ತವೆ. ಇವು ಛಾಯಾಗ್ರಹಣ ಕಲೆಯ ಅದ್ಭುತ ಉದಾಹರಣೆ ಎನ್ನಬಹುದು.
ನೀವು ಪ್ರವಾಸಕ್ಕೆಂದು ಬೆಂಗಳೂರಿಗೆ ಬಂದಾಗ, ವಿಧಾನಸೌಧ ಜೊತೆಗೆ ಮೆಟ್ರೋ ಫೋಟೋ ಗ್ಯಾಲರಿಯನ್ನು ಕಣ್ತುಂಬಿಸಿಕೊಳ್ಳಲು ಮರೆಯಬೇಡಿ.
– ಅಶೋಕ ಚಿಕ್ಕಪರಪ್ಪಾ