ಕೈ ತೋಟದ ಹವ್ಯಾಸ ಪ್ರತಿಯೊಬ್ಬರಿಗೂ ಇರುತ್ತದೆ. ಈ ಹವ್ಯಾಸವನ್ನು ತಾವೇ ಸಸಿಗಳನ್ನು ನೆಡುವುದರ ಮೂಲಕ ಈಡೇರಿಸಿಕೊಳ್ಳಬಹುದು. ಇಲ್ಲಿ ಮಾಲಿಯ ಸಹಾಯದಿಂದ ಪೂರೈಸಿಕೊಳ್ಳಬಹುದು. ಆದರೆ ಕೈದೋಟದ ಹವ್ಯಾಸವನ್ನು ಈಡೇರಿಸಿಕೊಳ್ಳಲು ಅದಕ್ಕಾಗಿ ಒಂದಷ್ಟು ಸಮಯ ಕೊಡಲೇಬೇಕಾಗುತ್ತದೆ. ಇಡೀ ತೋಟವನ್ನು ಹೂಗಿಡಗಳಿಂದ ಅಂದವಾಗಿ ಕಣ್ಣಿಗೆ ಹಬ್ಬವೆಂಬಂತೆ ಕಾಣಲು ಹೂಗಿಡಗಳ ಸಸಿಗಳ ಬಗ್ಗೆ ಗಮನ ಕೊಡಬೇಕು. ನಿಮ್ಮ ಇಡೀ ತೋಟದಲ್ಲಿ 5-6 ಸಸಿಗಳನ್ನು ನೆಟ್ಟರೆ ಅಥವಾ ಹೂ ಕುಂಡದಲ್ಲಿ ನೀರು ಹಾಕಿಬಿಟ್ಟರೆ ನಿಮ್ಮ ಜವಾಬ್ದಾರಿ ಮುಗಿಯಿತೆಂದು ಭಾವಿಸಬೇಡಿ.

ಹೂಗಿಡಗಳನ್ನು ಹಾಗೂ ಇತರೆ ಸಸಿಗಳನ್ನು ನೆಟ್ಟ ಬಳಿಕ ಅವುಗಳ ಸೂಕ್ತ ನಿರ್ವಹಣೆ ಅತ್ಯಗತ್ಯ. ಅಗತ್ಯ ಬಿದ್ದಾಗ ಅವುಗಳಿಗೆ ಗೊಬ್ಬರ ಹಾಗೂ ಕೀಟನಾಶಕ ಒದಗಿಸಿ. ಕುಂಡಗಳ ಬಳಕೆ, ಯಾವ ರೀತಿಯ ಬೀಜಗಳನ್ನು ನೆಡಬೇಕು, ಅವುಗಳಿಗೆ ಎಷ್ಟರಮಟ್ಟಿಗೆ ಬಿಸಿಲಿನ ದರ್ಶನ ಮಾಡಿಸಬೇಕು, ಸಸಿಗಳಿಗೆ ಎಷ್ಟು ತಾಪಮಾನ ಸಹಿಸಿಕೊಳ್ಳುವ ಸಾಮರ್ಥ್ಯ ಇರುತ್ತದೆ? ಎಷ್ಟು ನೀರು, ಎಷ್ಟು ಗೊಬ್ಬರ ಹಾಕಬೇಕು? ಈ ಎಲ್ಲ ಸಂಗತಿಗಳ ಬಗ್ಗೆ ಗಮನ ಕೊಡಬೇಕು.

ಹವಾಮಾನ : ಮಳೆಗಾಲದಲ್ಲಿ ಕೆಲವು ಬಗೆಯ ಹೂಗಿಡಗಳನ್ನು ನೆಡಬಹುದು. ಮತ್ತೆ ಕೆಲವು ಬಗೆಯ ಸಸಿಗಳನ್ನು ಚಳಿಗಾಲದಲ್ಲಿಯೇ ನೆಡಬೇಕಾಗುತ್ತದೆ. ಇದರ ಹೊರತಾಗಿ ಮತ್ತೆ ಕೆಲವು ಹೂಗಿಡಗಳನ್ನು ವರ್ಷದ ಯಾವುದೇ ಋತುವಿನಲ್ಲಾದರೂ ನೆಡಬಹುದು. ನಿಮ್ಮ ತೋಟದಲ್ಲಿ ನಿಮಗೆ ನಿರ್ವಹಣೆ ಮಾಡಲು ಸಾಧ್ಯವಿದ್ದಷ್ಟೇ ಸಸಿಗಳನ್ನು ನೆಡಿ.

ಬಣ್ಣಬಣ್ಣದ ಹೂಗಳು ಸೆಪ್ಟೆಂಬರ್‌ ತಿಂಗಳಿನಿಂದ ಹಿಡಿದು ಡಿಸೆಂಬರ್‌ ತಿಂಗಳ ಅವಧಿಯಲ್ಲಿ ಅರಳುತ್ತವೆ. ಅವುಗಳಲ್ಲಿ ಸೇವಂತಿ, ಚೆಂಡು ಹೂಗಳ ಬಹಳಷ್ಟು ಬಗೆಯ ಪ್ರಕಾರಗಳು ನರ್ಸರಿಯಲ್ಲಿ ಲಭಿಸುತ್ತವೆ.

ನೀವು ನಿಮ್ಮ ಕೈ ತೋಟದಲ್ಲಿ ಪಿಟುಸಿಯಾ, ಸಾಲ್ವಿಯಾ, ಸಿಲ್ವಿಟ್‌ ವಿಲಿಯಂ, ಸ್ವೀಟ್‌ ಎಲೈಸೇ, ಚೈನಾರೋಸ್‌, ಜೆನಿಯಾ, ಸೂರ್ಯಕಾಂತಿ, ಡೆಲ್ ಡೇರಾ ಮುಂತಾದ ಹೂಗಳ ಗಿಡಗಳನ್ನು ನೆಡಬಹುದು. ಅಲಂಕಾರಿಕ ಹೂಗಳ ಸಸಿಗಳನ್ನಷ್ಟೇ ನೆಡಬೇಕಿದ್ದರೆ, ಬೇರೆ ಕೆಲವು ಸಸಿಗಳನ್ನು ನೆಡಬಹುದು.

Aa-Gaya-Bagbani-ka-2

ಬೇರೆ ಕೆಲವು ಸಸಿಗಳು ಉದಾಹರಣೆಗೆ ಮನಿಪ್ಲಾಂಟ್‌, ಕ್ರೋಟನ್‌, ಕ್ಯಾಕ್ಟಸ್‌, ಡೈಸೀನಾ ಇವನ್ನು ನಾವು ನೆರಳಿನಲ್ಲಿ ಹಾಗೂ ಕೋಣೆಗಳ ಕುಂಡಗಳಲ್ಲಿ ಹಾಕಿ ಬೆಳೆಸಬಹುದು.

ಇವೆಲ್ಲವುಗಳಲ್ಲಿ ಮನಿಪ್ಲಾಂಟ್‌ ಅತ್ಯಂತ ಸುಲಭವಾಗಿ ಲಭ್ಯವಾಗುವ ಹಾಗೂ ಸದಾ ಹಸಿರಾಗಿರುವ ಒಂದು ಸಸ್ಯವಾಗಿದೆ. ಇದರ ಹಸಿರು ಎಲೆಯ ಮೇಲಿನ ಬಿಳಿ ಚುಕ್ಕೆಗಳು ಬಹಳ ಸುಂದರ ಎನಿಸುತ್ತವೆ.

ಮತ್ತೊಂದು ಒಳಾಂಗಣ ಸಸ್ಯವೆಂದರೆ ಅದು ಕ್ಯಾಕ್ಟಸ್‌. ಮುಳ್ಳಿನಿಂದ ಕೂಡಿದ ಈ ಸಸ್ಯವನ್ನು ಕೂಡ ಸರಿಯಾಗಿ ನಿಗಾ ಮಾಡಬೇಕಾಗುತ್ತದೆ. ಈ ಸಸ್ಯಕ್ಕೆ ಹಾಕಲ್ಪಡುವ ಗೊಬ್ಬರ ಹಾಗೂ ಮರಳನ್ನು ಸಮಪ್ರಮಾಣದಲ್ಲಿ ಬೆರೆಸಬೇಕು. ಇದಕ್ಕೆ ನೀರು ಕಡಿಮೆ ಸಾಕು. ಕುಂಡದಲ್ಲಿ ಬೆಳೆಸಲ್ಪಡುವ ಇದನ್ನು ಅತಿಯಾದ ಬಿಸಿಲು ಹಾಗೂ ಅತಿಯಾದ ಮಳೆಯ ಸಂದರ್ಭದಲ್ಲಿ ನೆರಳಿನಲ್ಲಿಯೇ ಇಡುವುದು ಸೂಕ್ತ. ಕ್ಯಾಕ್ಟಸ್‌ ಹೂ ಬಿಟ್ಟಾಗ ಅದನ್ನು ನೋಡುವುದೇ ಚೆಂದ.

ಚೆಂಡು ಹೂ : ಇದನ್ನು ವರ್ಷದ ಬೇರೆ ಬೇರೆ ಸಮಯದಲ್ಲೂ ಬೆಳೆಸಬಹುದು. ಕ್ರಿಮಿ ಕೀಟಗಳಿಂದ ಇದಕ್ಕೆ ಅಷ್ಟೊಂದು ಬಾಧೆ ಆಗುವುದಿಲ್ಲ. ಚೆಂಡು ಹೂವಿನಲ್ಲಿ ಅನೇಕ ಪ್ರಕಾರಗಳು, ಅದರಿಂದ ಹೊರಹೊಮ್ಮುವ ಬಣ್ಣಗಳು ಕೂಡ ಬೇರೆ ಬೇರೆ. ಕೆಲವು ಪ್ರಕಾರದ ಹೂಗಳು ಒಣಗುವ ತನಕ ಕಾಯ್ದರೆ ಮುಂದಿನ ಋತುಮಾನಕ್ಕೆ ಅವನ್ನೇ ಬೀಜಗಳಾಗಿ ಉಪಯೋಗಿಸಿಕೊಳ್ಳಬಹುದು.

ದಾಸವಾಳ : ಇದನ್ನು ಸೆಪ್ಟೆಂಬರ್‌ನಿಂದ ಡಿಸೆಂಬರ್‌ತನಕ ನೆಡಬಹುದು. ಕೆಂಪು, ಗಾಢ ಕೆಂಪು ಗುಲಾಬಿ, ಬದನೆ ಬಣ್ಣ, ನೀಲಿ ಹೀಗೆ ಹಲವು ವರ್ಣಗಳ ಹೂಗಳಿವೆ. ಇದರ ಯಾವುದೇ ಪ್ರಕಾರದ ಸಸಿ ನೆಟ್ಟರೆ ನಿಯಮಿತ ನೀರು ಪೂರೈಕೆ ಅಗತ್ಯ.

ಸೂರ್ಯಕಾಂತಿ : `ಸನ್‌ ಫ್ಲವರ್‌’ ಎಂದು ಕರೆಯಲ್ಪಡುವ ಈ ಹೂವಿನ ಆಕಾರ, ಬಹು ದೊಡ್ಡದು. ಇದರ ಬೀಜಗಳಿಂದ ಅಡುಗೆ ಎಣ್ಣೆ ಸಿದ್ಧಪಡಿಸಲಾಗುತ್ತದೆ. ಇದರಲ್ಲಿ 70 ಬಗೆಯ ಪ್ರಬೇಧಗಳಿವೆ. ಇದು ಅರಳಿ ನಿಂತಾಗ ತೋಟಕ್ಕೆ ಹಬ್ಬದ ಕಳೆ ಬರುತ್ತದೆ.

ಜೀನಿಯಾ : ಮತ್ತೊಂದು ಸುಂದರ ಪುಷ್ಪವೆಂದರೆ ಅದು ಜೀನಿಯಾ. ಇದರಲ್ಲಿ 3 ಪ್ರಕಾರದ ಸಸ್ಯಗಳಿವೆ. ದೊಡ್ಡ ಹೂ ಬಿಡುವಂಥದ್ದು. ಚಿಕ್ಕ ಹೂ ಬಿಡುವಂಥದ್ದು ಮತ್ತು ಕಡಿಮೆ ಹೂ ಬಿಡುವಂಥದ್ದು. ಚಿಕ್ಕ ಹೂವನ್ನು ಪರ್ಶಿಯನ್‌ ಕಾರ್ಪೆಟ್‌ ಎಂದು ಕರೆಯಲಾಗುತ್ತದೆ. ಇದನ್ನು ಆಗಸ್ಟ್, ಸೆಪ್ಟೆಂಬರ್‌ನಲ್ಲಿ ನೆಡಬೇಕು. ಏಕೆಂದರೆ ಮಳೆಗಾಲದ ಹುಳುಗಳ ಕಾಟ ತಪ್ಪಿಸಬೇಕು. ಇದರ  ಹೂ ಹೆಚ್ಚು ದಿನಗಳ ಕಾಲ ಬಾಡದೆ ಹಾಗೆಯೇ ಇರುತ್ತದೆ.

ತುಳಸಿ : ಇದು ಪ್ರತಿ ಮನೆಯಲ್ಲೂ ಕಂಡು ಬರುವ ಸಸ್ಯವಾಗಿದೆ. ತುಳಸಿಯಲ್ಲಿ ಎರಡು ಪ್ರಕಾರಗಳು ಕೃಷ್ಣ ತುಳಸಿ ಹಾಗೂ ಶ್ರೀ ತುಳಸಿ. ಯಾವುದೇ ಬಗೆಯ ತುಳಸಿಯ ಔಷಧಿ ಸಸ್ಯವೆಂಬಂತೆ ಪರಿಗಣಿಸಲ್ಪಡುತ್ತದೆ. ಜೊತೆಗೆ ಇದು ಅಡುಗೆಯ ರುಚಿ ಹೆಚ್ಚಿಸಲು ಕೂಡ ಬಳಕೆಯಾಗುತ್ತದೆ. ವಾತಾವರಣ ಶುದ್ಧಗೊಳಿಸಲು ಇದನ್ನು ಬಳಸಲಾಗುತ್ತದೆ. ಬಾಯಲ್ಲಿ ಹಾಕಿಕೊಂಡು ಅಗಿಯುವುದರಿಂದ ಹಲವು ರೋಗಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು.

ಡೇಲಿಯಾ : ಮುಂಗಾರು ಮಳೆ ಬಂದಾಗ ಹೂದೋಟದ ನೆಲದೊಳಗಿನ ಗೆಡ್ಡೆಗಳು, ಮೊಳಕೊಡೆದು ಗಿಡಗಳಾಗಿ ಗೊಂಚಲು, ಗೊಂಚಲು ರೂಪದಲ್ಲಿ ಹೂಗಳು ಕಂಗೊಳಿಸುತ್ತವೆ. ಇದನ್ನು ಕುಂಡದಲ್ಲೂ ಬೆಳೆಯಬಹುದಾಗಿದೆ. ದಿನಕ್ಕೆ 4 ರಿಂದ 6 ಗಂಟೆ ಬಿಸಿಲಿನ ದರ್ಶನವಾಗುವಂತಹ ಸ್ಥಳದಲ್ಲಿ ಇದನ್ನು ಬೆಳೆಯಬೇಕು.

ಸಸಿ ನೆಡುವ ವಿಧಾನ

Aa-Gaya-Bagbani-ka-1

ಸಸಿ ನೆಡುವ ಎಲ್ಲಕ್ಕೂ ಒಳ್ಳೆಯ ವಿಧಾನವೆದರೆ ಕಟಿಂಗ್‌ ಮುಖಾಂತರ ಸಸಿಯನ್ನು ಸಿದ್ಧಪಡಿಸುವುದು. ಹಳೆಯ ಸಸಿಗಳ ಟೊಂಗೆಗಳನ್ನು ಮೇಲ್ಭಾಗದಿಂದ 8 ಸೆಂ.ಮೀ.ನಷ್ಟು ಉದ್ದ ಕಟಿಂಗ್‌ ಮಾಡಿಕೊಳ್ಳಿ. ದೊಡ್ಡ ಗಾತ್ರ ಮರಳಿನಲ್ಲಿ 2 ಅಂಗುಲದ ಅಂತರದಲ್ಲಿ ಎರಡೂವರೆ ಅಂಗುಲ ಊರಿ. ನೆಟ್ಟ 3 ದಿನಗಳ ಕಾಲ ಕುಂಡಗಳನ್ನು ನೆರಳಿನಲ್ಲಿ ಇಡಿ. 15 ದಿನಗಳ ಬಳಿಕ ಬೇರುಗಳು ಉಂಟಾಗುತ್ತವೆ. ಆ ಬಳಿಕವೇ ಅವನ್ನು ಬೇರೆ ಕುಂಡಗಳಲ್ಲಿ ನೆಡಬೇಕು. ಆ ಸಸಿಗಳು ಅತಿಯಾದ ಬಿಸಿಲು ಅಥವಾ ಅತಿಯಾದ ನೀರಿನಿಂದಲೂ ಬಾಡುತ್ತವೆ ಎಂಬುದರ ಬಗ್ಗೆ ಗಮನ ಕೊಡಬೇಕು.

ನೀವು ಸಸಿಯನ್ನು ಕುಂಡದಲ್ಲಿಯೇ ನೆಡಬೇಕಿದ್ದರೆ, ಅದರಲ್ಲಿ 2 ಭಾಗ ಮಣ್ಣು ಹಾಗೂ 1 ಭಾಗ ಗೊಬ್ಬರ ಇರುವಂತೆ ನೋಡಿಕೊಳ್ಳಿ. ಮೇಲ್ಭಾಗದಲ್ಲಿ 1 ರಿಂದ ಒಂದೂವರೆ ಇಂಚಿನಷ್ಟು ಜಾಗ ಖಾಲಿಯಿರಲಿ. ಏಕೆಂದರೆ ನೀರಿಗಾಗಿ ಜಾಗ ಸಿಗುವಂತಿರಬೇಕು. ಒಂದು ಕುಂಡದಲ್ಲಿ ಕೇವಲ ಒಂದೇ ಸಸಿ ನೆಡಿ. ಸಸಿ ನೆಟ್ಟ ತಕ್ಷಣವೇ ನೀರು ಹಾಕಬೇಕು. ಒಂದು ವೇಳೆ ಸಸಿಗಳನ್ನು ನೆಲದಲ್ಲಿ ಪಾತಿ ಮಾಡಿ ಹಾಕುತ್ತಿದ್ದರೆ, ಸಸಿಗಳ ನಡುವಿನ ಅಂತರ 40-45 ಸೆಂ.ಮೀ. ಇರಲಿ. ಸಸಿಯನ್ನು 10-12 ಅಂಗುಲ ಆಳದಲ್ಲಿ ನೆಡಬೇಕು. ಆ ಬಳಿಕ 100 ಗ್ರಾಂ ಸೂಪರ್‌ ಫಾಸ್ಛೇಟ್‌, 100 ಗ್ರಾಂ ಸಲ್ಫೇಟ್‌ ಪೊಟ್ಯಾಶಿಯಂ, 25 ಗ್ರಾಂ ಮೆಗ್ನಿಷಿಯಂ ಸಲ್ಫೇಟ್‌ ಪ್ರತಿ ಮೀಟರ್‌ಗೆ ತಕ್ಕಂತೆ ಹಾಕಬೇಕು. ಹೂಗಳಿಗೆ ಹೊಳಪು ಬರಲು 10 ಲೀಟರ್‌ ನೀರಿನಲ್ಲಿ 4 ಚಮಚ ಮೆಗ್ನಿಷಿಯಂ ಸಲ್ಫೇಟ್‌ ಹಾಕಿಕೊಂಡು ಸಸಿಗಳ ಮೇಲೆ ಚಿಮುಕಿಸಬೇಕು.

Aa-Gaya-Bagbani-ka-3

ಸಸಿ ನೆಡುವ ಜಾಗದಲ್ಲಿನ ಮಣ್ಣು, ಕಲ್ಲುಗಳ ರಹಿತವಾಗಿ ಇರಬೇಕು. ಆ ಮಣ್ಣಿಗೆ ಸೂಕ್ತ ಪ್ರಮಾಣದಲ್ಲಿ (3 ಭಾಗ ಮಣ್ಣು + 1 ಭಾಗ) ಗೊಬ್ಬರ ಸೇರಿಸಬೇಕು. ಅದರಲ್ಲಿ 25 ಗ್ರಾಂ ಯೂರಿಯಾ + 50 ಗ್ರಾಂ ಡಿಎಪಿ + ಮರಳು ಕೂಡ ಸೇರಲಿ.

ನೀವು ಡೇಲಿಯಾವನ್ನು ಕುಂಡದಲ್ಲಿ ಬೆಳೆಸಲು ಅಪೇಕ್ಷಿಸಿದಲ್ಲಿ ಆ ಸಸಿಗಳು 12-14 ಇಂಚಿನಷ್ಟು ಎತ್ತರ ಇರಬೇಕು. ಕುಂಡದಲ್ಲಿ ಮಣ್ಣು ಹಾಗೂ ಗೊಬ್ಬರ ಸೂಕ್ತ ಪ್ರಮಾಣದಲ್ಲಿ ಇರಲಿ.

ಬೇಸಿಗೆಯ ದಿನಗಳಲ್ಲಿ ದಿನ ಬಿಟ್ಟು ದಿನ ಅಥವಾ ವಾರಕ್ಕೆರಡು ಬಾರಿ ಹಾಗೂ ಚಳಿಗಾಲದ ದಿನಗಳಲ್ಲಿ ವಾರಕ್ಕೊಮ್ಮೆಯಾದರೂ ನೀರು ಹಾಕಬೇಕು.

– ಕೃತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ