ಕಂದನ ಆಗಮನದ ಬಳಿಕ ಪೋಷಕರ ಜೀವನಶೈಲಿಯಲ್ಲಿ ಆಮೂಲಾಗ್ರ ಬದಲಾವಣೆ ಆಗುತ್ತದೆ. ಗಂಡಹೆಂಡತಿ ಆರಂಭದಲ್ಲಿ ಇದನ್ನು ನಗುಮುಖದಲ್ಲಿ ಸ್ವಾಗತಿಸುತ್ತಾರೆ. ಆದರೆ ಆ ಬಳಿಕದ ರೊಟೀನ್‌ನಲ್ಲಿ ಬದಲಾವಣೆ ಅವರ ಜೀವನದುದ್ದಕ್ಕೂ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ರೊಟೀನ್‌ನಲ್ಲಿ ಆದ ಬದಲಾವಣೆಯಿಂದ ಚೇತರಿಸಿಕೊಳ್ಳಲು ಯೋಜನೆ ರೂಪಿಸಿಕೊಳ್ಳಿ.

ಆಹಾರದ ಬಗ್ಗೆ ನಿರ್ಲಕ್ಷ್ಯ : ಇಡೀ ದಿನ ಮಗುವಿನ ಆರೈಕೆಯಲ್ಲಿ ತಾಯಿ ತಂದೆ ತಮ್ಮ ಆಹಾರದ ಬಗ್ಗೆ ಗಮನ ಕೊಡುವುದಿಲ್ಲ. ಸಮಯ ಸಿಗಲಿಲ್ಲವೆಂಬ ಕಾರಣಕ್ಕೆ ಏನೇನೋ ತಿಂದು ಊಟದ ಶಾಸ್ತ್ರ ಮುಗಿಸುತ್ತಾರೆ. ಫಾಸ್ಟ್ ಫುಡ್‌ ಅವರ ಊಟದಲ್ಲಿ ಸ್ಥಾನ ಪಡೆದುಕೊಂಡರೂ ಅಚ್ಚರಿಯಿಲ್ಲ. ಇದೇ ಅನಾರೋಗ್ಯಕರ ಆಹಾರ.

ಹೊರಬರುವುದು ಹೇಗೆ? : ಹೊಸದರಲ್ಲಿ ಬದಲಾವಣೆ ಬರುವುದು ಸ್ವಾಭಾವಿಕ, ಆದರೆ ಆ ಬದಲಾವಣೆಗೆ ತಕ್ಕಂತೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ನೀವು ಏಕಾಂಗಿಯಾಗಿ ವಾಸಿಸುತ್ತಿದ್ದರೆ ನಿಮ್ಮ ಆಹಾರಕ್ಕೆ ಸಂಬಂಧಪಟ್ಟಂತೆ ಒಂದು ವೇಳಾಪಟ್ಟಿ ತಯಾರಿಸಿಕೊಳ್ಳಿ. ಅದರಿಂದ ಅನ್‌ ಹೆಲ್ದೀ ಆಹಾರ ಸೇವನೆಯ ಪ್ರಶ್ನೆಯೇ ಉದ್ಭವಿಸಬಾರದು. ನೀವು ನಿಮ್ಮ ಉಪಾಹಾರದಲ್ಲಿ ಮೊಳಕೆಕಾಳು, ಮೊಟ್ಟೆ ಸೇವಿಸಬಹುದು. ಅದೇ ರೀತಿ ಮಧ್ಯಾಹ್ನದ ಆಹಾರದಲ್ಲಿ ರೊಟ್ಟಿ, ಬೇಳೆ, ಮೊಸರು, ಮಜ್ಜಿಗೆ, ಬೇಯಿಸಿದ ಕಾಳು ಹಾಗೂ ರಾತ್ರಿ ಊಟದಲ್ಲಿ ಸೊಪ್ಪು, ಓಟ್ಸ್ ಮುಂತಾದವನ್ನು ಸೇರಿಸಿಕೊಳ್ಳಿ. ಇವುಗಳಲ್ಲಿ ನಾರಿನಂಶ ಹೇರಳವಾಗಿರುತ್ತದೆ. ಈ ಮಧ್ಯೆ ನಿಮಗೆ ಹಸಿವಾದಾಗೆಲ್ಲಾ ತಾಜಾ ಹಣ್ಣು, ಒಣಹಣ್ಣುಗಳನ್ನು ಸೇವಿಸಬಹುದು. ಇದರಿಂದ ಹಸಿವು ಶಮನಗೊಂಡು ನೀವು ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ.

ನಿದ್ರೆಯ ಕೊರತೆ : ಮಗುವಿನ ಆಗಮನದ ಬಳಿಕ ತಾಯಿ ತಂದೆಯ ನಿದ್ರೆಗೆ ಖಂಡಿತಾ ಒಂದಿಷ್ಟು ಅಡಚಣೆ ಉಂಟಾಗುತ್ತದೆ. ಈಗ ನಿಮ್ಮ ನಿದ್ರೆಗೆ ತಕ್ಕಂತೆ ಮಲಗಲು ಆಗದೆ, ಮಗುವಿನ ನಿದ್ರೆಗೆ ತಕ್ಕಂತೆ ಮಲಗಬೇಕಾಗಿ ಬರುತ್ತದೆ. ಅದು ದಣಿವಿನ ಜೊತೆಗೆ, ಒತ್ತಡಕ್ಕೂ ಕಾರಣವಾಗಬಹುದು. ಅದು ಅವರ ವೈಯಕ್ತಿಕ ಜೀವನದ ಜೊತೆಗೆ ಉದ್ಯೋಗ ಜೀವನದ ಮೇಲೂ ಪರಿಣಾಮ ಬೀರುತ್ತದೆ.

ಹೇಗೆ ಹೊರಬರುವುದು? : ಇಂತಹ ಸ್ಥಿತಿಯಲ್ಲಿ ಗಂಡ ಹೆಂಡತಿ ಇಬ್ಬರೂ ಸೇರಿಯೇ ಜವಾಬ್ದಾರಿ ನಿಭಾಯಿಸಬೇಕು. ಗಂಡ ಮನೆಯಲ್ಲಿದ್ದಾಗ ಮನೆಯ ಎಲ್ಲ ಅವಶ್ಯಕ ಕೆಲಸಗಳನ್ನು ಪೂರೈಸಿ. ಮಗು ಮಲಗಿರುವಾಗ ನೀವು ಕೂಡ ನಿಮ್ಮ ನಿದ್ರೆಯನ್ನು ಪೂರೈಸಬಹುದು. ರಾತ್ರಿ ಕೂಡ ಇದೇ ರೀತಿ ರೊಟೀನ್‌ ಮಾಡಿಕೊಳ್ಳಬಹುದು.

ಎಮೋಶನಲ್ ಬ್ಯಾಲೆನ್ಸ್ : ಉದ್ಯೋಗದಲ್ಲಿದ್ದೂ ಕೂಡ ಮೊದಲು ಪರಸ್ಪರರಿಗೆ ಸಮಯ ಕೊಡಲು ಸಾಧ್ಯವಾಗುತ್ತಿತ್ತು. ಸಂಗಾತಿ ಹೇಳಿದ್ದನ್ನು ಕೇಳಿಸಿಕೊಳ್ಳಬಹುದಾಗಿತ್ತು. ಆದರೆ ಈಗ ಮಗುವಿಗೆ ಹೆಚ್ಚಿನ ಸಮಯ ಕೊಡಬೇಕಾಗಿರುವುದರಿಂದ ಸಂಗಾತಿಗೆ ಸಮಯ ಕೊಡಲು ಆಗವುದಿಲ್ಲ. ರೊಮಾನ್ಸಸ್ ಅಂತೂ ಅವರಿಂದ ದೂರ ಹೊರಟು ಹೋಗಿರುತ್ತದೆ. ಹೀಗಾಗಿ ಅವರ ನಡುವೆ ಎಮೋಶನಲ್ ಅಟ್ಯಾಚ್‌ಮೆಂಟ್‌ನಲ್ಲಿ ಕೊರತೆಯಾಗುತ್ತದೆ.

ಹೇಗೆ ನಿರ್ವಹಣೆ?: ಪೋಷಕರಾಗಿರುವ ಕಾರಣದಿಂದ ಗಂಡ ಹೆಂಡತಿ ರೊಮಾನ್ಸ್ನ್ನು ಬಿಟ್ಟುಬಿಡಬೇಕು ಎಂದೇನಿಲ್ಲ. ಪರಸ್ಪರರನ್ನು ಛೇಡಿಸಬಾರದು ಎಂದೇನಿಲ್ಲ. ಮೊದಲಿನ ಹಾಗೆಯೇ ನೀವು ರೊಮ್ಯಾಂಟಿಕ್‌ ಆಗಿರಬಹುದು ಸಂಗಾತಿಯ ಫೀಲಿಂಗ್ಸ್ ತಿಳಿದುಕೊಳ್ಳಿ. ಅವರಿಗೆ ಸಮಯ ಕೊಡಿ. ಸಾಧ್ಯವಾದಾಗೆಲ್ಲ ಹೊರಗಡೆ ಡಿನ್ನರ್‌ಗೆ ಅಥವಾ ಡೇಟ್ಸ್ ಗೆ ಹೋಗಿ ಬನ್ನಿ. ಅದರಿಂದ ಜೀವನದಲ್ಲಿ ಪುನಃ ರೊಮಾನ್ಸ್ ಕಾಯ್ದುಕೊಂಡು ಹೋಗಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಏಕತಾನತೆಯಿಂದ ಜೀವನ ತೀರಾ ನೀರಸವಾಗುತ್ತದೆ.

ಶಿಸ್ತು ಕಡಿಮೆ ಆಗದಿರಲಿ : ನಮಗೆ ಶಿಸ್ತುಬದ್ಧ ಜೀವನ ರೂಢಿ ಆಗಿದ್ದರೆ ಅದನ್ನು ಬಿಟ್ಟಿರಲಾಗದು. ಅಂದ್ರೆ ಬೇಗ ಏಳುವುದು, ಜಾಗಿಂಗ್‌, ವ್ಯಾಯಾಮ, ಸಕಾಲಕ್ಕೆ ಊಟ, ತಿಂಡಿ, ಹೊರಗಡೆ ಹೋಗಬೇಕಾದಾಗ ಸಮಯಪಾಲನೆ ಇತ್ಯಾದಿ. ಆದರೆ ಪೇರೆಂಟ್ಸ್ ಆದನಂತರ ಬಯಸಿದರೂ ಸಹ ಇಷ್ಟು ಶಿಸ್ತುಬದ್ಧ ಜೀವನ ನಡೆಸಲು ಆಗದು, ಎಲ್ಲಕ್ಕೂ ಮೊದಲ ಆದ್ಯತೆ ಮಗು ಆಗುವುದರಿಂದ ಇಂಥ ವ್ಯತ್ಯಾಸ ಸಹಜ.

ಹೇಗೆ ನಿರ್ವಹಣೆ? :  ಆರಂಭದ 3-4 ತಿಂಗಳು ಹೀಗಾಗಬಹುದು, ಆದರೆ ನಂತರ ನಿಮ್ಮ ಹಿಂದಿನ ಶೆಡ್ಯೂಲ್‌ಗೆ ಮರಳಿರಿ.

– ಪಾರ್ವತಿ ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ