ಲಲಿತಕಲೆಗಳ ಆಗರ, ಸಾಹಿತ್ಯದ ಭಂಡಾರ, ಚುಟುಕುಗಳ ಚಮತ್ಕಾರ, ಮಂತ್ರಮುಗ್ಧಗೊಳಿಸುವ ಶಬ್ದ ಮಾಂತ್ರಿಕೆ, ದೇಶ ಸುತ್ತು ಕೋಶ ಓದು ಎನ್ನುವುದನ್ನು ನಿರೂಪಿಸುತ್ತಾ, ಸಾಗುತ್ತಿರುವ ಮಹಾನ್ ಪ್ರತಿಭಾನ್ವಿತ ಮಹಿಳಾ ಸಾಹಿತಿ, ನೃತ್ಯ ಕಲಾವಿದೆ, ಕ್ವಿಜ್ಕ್ವೀನ್, ಸಕಲಕಲಾವಲ್ಲಭೆ ಆಶಾ ಮೋಹನ್ ರ ಪರಿಚಯ ಪಡೆಯೋಣವೇ.....?
ಲಲಿತಾ ರಾವ್ ಹಾಗೂ ಕೆ.ವಿ. ರಾವ್ ರವರ ಪುತ್ರಿಯಾಗಿ ಜನಿಸಿದವರು ಆಶಾ ಮೋಹನ್. ತಮ್ಮ ಮನೆ ದೇವರಾದ ಕಲ್ಲಹಳ್ಳಿ ವೆಂಕಟರಮಣಸ್ವಾಮಿ ರಥೋತ್ಸವದ ದಿನ ಹುಟ್ಟಿದ ಕಾರಣ ಮಗುವಿಗೆ ಪದ್ಮಿನಿ (ವ್ಯಾವಹಾರಿಕ ನಾಮ ಆಶಾ ಮೋಹನ್) ಎಂದೇ ನಾಮಕರಣ ಮಾಡಿದರು. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಎರಡು ವರ್ಷದ ಮಗು, ಅರಳು ಹುರಿದಂತೆ ಮಾತನಾಡುತ್ತ ಎಲ್ಲರ ಗಮನ ಸೆಳೆಯುತ್ತಿತ್ತು. ಬೇಬಿ ಪದ್ಮಿನಿ ಎಂಬ ಹೆಸರಿನಿಂದ ಹಲವಾರು ನಾಟಕಗಳಲ್ಲಿ ಅಭಿನಯಿಸುತ್ತಾ ಬೆಳೆದರು. 8 ವರ್ಷದ ಮಗು ಸುಲಲಿತವಾಗಿ ಸಣ್ಣ ಪುಟ್ಟ ಕಥೆ ಕವನಗಳನ್ನು ಬರೆಯಲು ಶುರು ಮಾಡಿತು. ಇದನ್ನು ಗಮನಿಸಿದ ಹೆತ್ತವರು ಮಗುವನ್ನು ಇನ್ನೂ ಎತ್ತರಕೆ ಬೆಳೆಯಲು ಪ್ರೋತ್ಸಾಹಿಸಿ ಹುರಿದುಂಬಿಸುತ್ತಿದ್ದರು. ತಮ್ಮ ಹತ್ತನೇ ವಯಸ್ಸಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಸಂತ ಸಾಹಿತ್ಯೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ನಿರರ್ಗಳವಾಗಿ ಕನ್ನಡದಲ್ಲಿ ಭಾಷಣ ಮಾಡುವ ಮುಖೇನ ಜನ ಮೆಚ್ಚುಗೆ ಗಳಿಸಿದರು. ಅಲ್ಲದೆ ಇದನ್ನು ಗಮನಿಸಿದ ಅಂದಿನ ಮಂತ್ರಿಗಳಾದ ಬಿ. ರಾಚಯ್ಯ, ಶಿವಮೂರ್ತಿ ಶಾಸ್ತ್ರಿಗಳು ಆಶ್ಚರ್ಯಚಕಿತರಾಗಿ, ಹೂವಿನ ಹಾರವನ್ನು ಮಗುವಿನ ಕೊರಳಿಗೆ ಹಾಕಿ ಕಾಣಿಕೆ ನೀಡಿ ಸನ್ಮಾನಿಸಿದರು. ಕರ್ನಾಟಕ ಸರ್ಕಾರದಿಂದ ಏರ್ಪಡಿಸಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ಕೊರವಂಜಿಯಾಗಿ ಅಭಿನಯಿಸಿ ಜನಕ್ಕೆ ಕಣಿ ಹೇಳಿ ಜನಮನ ಸೆಳೆದರು. ಪ್ರತಿಯಾಗಿ ಬಾಲಕಿಗೆ ಮುಖ್ಯಮಂತ್ರಿಗಳಿಂದ ವಿಶೇಷ ಬಹುಮಾನ ದೊರಕಿದ್ದು ಮರೆಯಲಾಗದ ಸುದಿನವಾಯಿತು.
ಬೆಳೆಯುವ ಚಿಗುರು ಮೊಳಕೆಯಲ್ಲಿ
ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಮಕ್ಕಳ ಹಾಗೂ ಮಹಿಳೆಯರ ಕಾರ್ಯಕ್ರಮಕ್ಕೆ ಕನ್ವೀನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಆಕಾಶವಾಣಿಯಲ್ಲಿ ಗಣಿತ ಶಾಸ್ತ್ರ ಪ್ರವೀಣೆ `ಲೀಲಾವತಿ' ನಾಟಕದಲ್ಲಿ ಲೀಲಾವತಿಯ ಪಾತ್ರ ನಿರ್ವಹಿಸಿ ಲೀಲಾಜಾಲವಾಗಿ ಗಣಿತವನ್ನು ಬಿಡಿಸುವ ರೀತಿ ಅಚ್ಚರಿ ಮೂಡಿಸುವಂತಿತ್ತು.
ನಾಟಕಗಳಲ್ಲಿ ಮಿಂಚಿದ ಪ್ರತಿಭೆ
ಸನ್ಮಿತ್ರ ಕಲಾ ತಂಡದವರೊಂದಿಗೆ ಕಾಲೇಜು ಹುಡುಗಿಯಾಗಿ ನಾಯಕಿ ಪಾತ್ರದಲ್ಲಿ `ಪಿಕ್ ಪಾಕೆಟ್' ನಾಟಕ ಹಲವಾರು ಪ್ರದರ್ಶನಗಳನ್ನು ಪೂರೈಸಿ ಯಶಸ್ವಿಗೊಂಡಿತ್ತು. ಇಂಡಿಯನ್ ಬ್ಯಾಂಕ್ ವಾರ್ಷಿಕೋತ್ಸವದಲ್ಲಿ `ನಂಜಿನ ನಾಲಿಗೆ' ನಾಟಕದಲ್ಲಿ ಮತ್ತೆ ನಾಯಕಿಯ ಪಾತ್ರದಲ್ಲಿ ಮಿಂಚಿದರು. ಕನ್ನಡವಲ್ಲದೆ, ಶೇಕ್ಸ್ ಪಿಯರ್ ನ ಮ್ಯಾಕ್ ಬೆತ್ ನಲ್ಲಿಯೂ ಅಭಿನಯಿಸಿದ್ದಾರೆ. ಹಿಂದಿಯಲ್ಲಿ ಗೌತಮ ಬುದ್ಧ ಜೀವನ ಚರಿತ್ರೆ ಆಧಾರಿತ ಕಥಾ ಭಾಗ ಸಿದ್ಧಾರ್ಥದಲ್ಲಿಯೂ ನಟಿಸಿ ಅಭಿನಯಕ್ಕೆ ಭಾಷೆ ಮುಖ್ಯವಲ್ಲ ಎಂಬುದನ್ನು ಸಾಬೀತುಗೊಳಿಸಿದರು. ಇತ್ತೀಚೆಗೆ ಕಿತ್ತೂರು ರಾಣಿ ಚೆನ್ನಮ್ಮ ನಾಟಕದಲ್ಲಿ ಹಿರಿಯ ರಾಣಿ ರುದ್ರಮ್ಮನ ಪಾತ್ರ ಜನಮನ ಸೆಳೆಯಿತು. ಸುಚಿತ್ರ ಫಿಲ್ಮಂ ಸೊಸೈಟಿ ಹಾಗೂ ನಯನ ಸಭಾಂಗಣದಲ್ಲಿ ಎರಡು ಯಶಸ್ವಿ ಪ್ರದರ್ಶನ ಕಂಡು ಮೂರನೆಯ ಪ್ರದರ್ಶನಕ್ಕೆ ಸಿದ್ಧವಾಗಿದೆ.