ಕಿರುತೆರೆಯ ಜನಪ್ರಿಯ ನಟಿಯಾಗಿ, ವೀಕ್ಷಕರ ಮನೆಮನಗಳಲ್ಲಿ ವಿಶೇಷ ಸ್ಥಾನ ಗಿಟ್ಟಿಸಿರುವ ದೀಪಿಕಾ, ಇದೀಗ ಬೆಳ್ಳಿ ತೆರೆಯತ್ತ ದಾಪುಗಾಲಿಟ್ಟಿದ್ದಾಳೆ! ಈಕೆಯ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯೋಣವೇ….?
ದೆಹಲಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ದೀಪಿಕಾ ಸಿಂಗ್, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತನ್ನ ಓದು ಮುಂದುವರಿಸಲಾಗದೆ, ಕೆಲಸಕ್ಕೆ ಸೇರಿ ಕರೆಸ್ಪಾಂಡೆನ್ಸ್ ನಲ್ಲಿ ಡಿಗ್ರಿ ಪಡೆಯುವಂತಾಯಿತು. ಒಂದು ಕಡೆ ವ್ಯಾಸಂಗ, ಮತ್ತೊಂದು ಕಡೆ ಇವೆಂಟ್ ಮ್ಯಾನೇಜ್ ಮೆಂಟ್ ನೌಕರಿ ಹಾಗೂ ಥಿಯೇಟರ್ ನಿರ್ವಹಣೆ. ಅಂತೂ ಇಂತೂ 2011ರಲ್ಲಿ ಇವಳಿಗೆ `ದಿಯಾ ಔರ್ ಬಾತಿ ಹಂ’ ಧಾರಾವಾಹಿಯಲ್ಲಿ ಕಿರುತೆರೆಗೆ ಎಂಟ್ರಿ ದೊರಕಿತು. ಸತತ 5 ವರ್ಷ ನಡೆದ ಈ ಧಾರಾವಾಹಿ ಅಪಾರ ಜನಪ್ರಿಯತೆ ಗಳಿಸಿತು. ಇದರ ಶೂಟಿಂಗ್ ನಿರ್ವಹಿಸುತ್ತಲೇ, ಈ ಧಾರಾವಾಹಿಯ ನಿರ್ದೇಶಕ ರೋಹಿತ್ ರಾಜ್ ರನ್ನು 2014ರಲ್ಲಿ ಮದುವೆಯಾದಳು.
ಮದುವೆ ನಂತರ ದೀಪಿಕಾ ತವರಿಗೆ ಆರ್ಥಿಕ ನೆರವು ನೀಡುವುದನ್ನು ನಿಲ್ಲಿಸಲಿಲ್ಲ. ನಂತರ 2017ರಲ್ಲಿ ಒಂದು ಗಂಡು ಮಗುವಿನ ತಾಯಿಯಾದಳು. 2018ರಲ್ಲಿ ಈಕೆ `ದಿ ರಿಯಲ್ ಸೋಲ್ ಮೇಟ್’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ವಹಿಸಿದಳು. ನಂತರ ಪತಿಯ ನಿರ್ದೇಶನದಲ್ಲಿ `ಟೀಟೂ ಅಂಬಾನಿ’ ಚಿತ್ರದಲ್ಲಿ ನಾಯಕಿ ಮೌಸಮಿಯ ಪಾತ್ರ ವಹಿಸಿದಳು. ಮದುವೆ ನಂತರ ಹುಡುಗಿ ತವರಿಗೆ ಆರ್ಥಿಕ ನೆರವು ನೀಡಿದರೆ ಯಾವ ತಪ್ಪೂ ಇಲ್ಲ ಎಂಬುದೇ ಈ ಚಿತ್ರದ ಸಾರ. ಅವಳೊಂದಿಗೆ ನಡೆಸಿದ ಮಾತುಕಥೆಯ ಮುಖ್ಯಾಂಶಗಳು :
ನೀನು ನಟನೆಯನ್ನೇ ಮುಖ್ಯ ಕೆರಿಯರ್ ಆಗಿಸಿಕೊಳ್ಳ ಬಯಸಿರುವಾಗ, ವ್ಯಾಸಂಗದ ಅಗತ್ಯವೇನಿತ್ತು?
ವಾಸ್ತವದಲ್ಲಿ ನಾನು ಒಂದು ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯ ಮ್ಯಾನೇಜರ್ ಆಗಿದ್ದೆ. ಇದರ ಸಲುವಾಗಿ ನಾವು ಮುಂಬೈನಲ್ಲಿ ಒಂದು ಫ್ಯಾಷನ್ ಶೋ ನಡೆಸಿದೆ. ಅಲ್ಲಿ ಒಬ್ಬಳು ಪೇಜೆಂಟ್ ಆ್ಯಬ್ಸೆಂಟ್, ಹೀಗಾಗಿ ನಾನೇ ಅವಳ ಜಾಗ ತುಂಬಿದೆ! ಅಲ್ಲಿ ವಿಜೇತಳಾದದ್ದು ಬೇರೆ ವಿಚಾರ. ಅದಾದ ಮೇಲೆ ನಟನೆಯಲ್ಲಿ ಪಳಗಲು 1-2 ಪಾತ್ರ ನಿಭಾಯಿಸಿದೆ. ವಾಪಸ್ಸು ದೆಹಲಿಗೆ ಬಂದು ಹಿಂದಿ ನಾಟಕರಂಗದಲ್ಲಿ ತೊಡಗಿಕೊಂಡೆ. ಆಗ `ದಿಯಾ ಔರ್ ಬಾತಿ’ ಧಾರಾವಾಹಿಯಲ್ಲಿ ಬ್ರೇಕಿಂಗ್ ಪಾತ್ರ ದೊರಕಿತು.
ಅಂದರೆ ಯಾವುದೇ ಸಂಘರ್ಷವಿಲ್ಲದೆ ನಿನಗೆ ಈ ಧಾರಾವಾಹಿಯ ನಾಯಕಿ ಪಾತ್ರ ಸಿಕ್ಕರಬೇಕಲ್ಲವೇ?
ಈ ಪ್ರಪಂಚದಲ್ಲಿ ಒಂದಿಷ್ಟೂ ಕಷ್ಟಪಡದೆ ಏನೂ ಸಿಕ್ಕುವುದಿಲ್ಲ ಅಂತ ನೆನಪಿಡಿ. ಆಡಿಶನ್ ನಂತರ 1 ತಿಂಗಳು ಟೆನ್ಶನ್ ನಲ್ಲಿ ಕಳೆದೆ. ಕೊನೆಗೆ ಈ ಧಾರಾವಾಹಿಯ ನಾಯಕಿ `ಸಂಧ್ಯಾ’ಳ ಪಾತ್ರ ನನ್ನದಾಯ್ತು. ದೆಹಲಿಯಲ್ಲಿ ಇದರ ಆಡಿಶನ್ ಮುಗಿಸಿದ್ದರೂ, ಶೂಟಿಂಗ್ ಗಾಗಿ ಆಗಾಗ ಮುಂಬೈ ದೆಹಲಿಗೆ ಓಡಾಡುತ್ತಿರಬೇಕಾಯಿತು.
ಅಂದಿನ ಕಾಲದ ಆಡಿಶನ್ ಗೂ ಇತ್ತೀಚಿನ ಆಧುನಿಕ ದಿನಗಳ (ಮುಖ್ಯ ಕೊರೋನಾ ನಂತರದ) ಆಡಿಶನ್ ಗೂ ಏನಾದರೂ ವ್ಯತ್ಯಾಸವಿದೆಯೇ?
ಅಂಥ ದೊಡ್ಡ ವ್ಯತ್ಯಾಸವಿದೆ ಅಂತ ನನಗೇನೂ ಅನಿಸುತ್ತಿಲ್ಲ. ನಂತರ ನಾನು `ಕಚ್’ ಧಾರಾವಾಹಿಗೂ ಮತ್ತೆ ಆಡಿಶನ್ ನೀಡಿದ್ದೆ. ಹಿಂದೆಲ್ಲ ಹೊಸದಾಗಿ ಈ ಫೀಲ್ಡ್ ಗೆ ಬರುವವರಿಗೆ ಏನೂ ಗೊತ್ತಾಗುತ್ತಿರಲಿಲ್ಲ, ಈಗ ಜನ ಎಷ್ಟೋ ಸ್ಮಾರ್ಟಾಗಿ ಎಲ್ಲಾ ತಿಳಿದುಕೊಂಡೇ ಬಂದಿರುತ್ತಾರೆ. ಮುಖ್ಯವಾಗಿ ನಿರ್ದೇಶಕರು ಅಂದುಕೊಂಡಂತೆ ಆಯಾ ಪಾತ್ರಕ್ಕೆ ನಿಮ್ಮ ಮುಖಚರ್ಯೆ, ಹಾವಭಾವ, ಮ್ಯಾನರಿಸಂ ಇರಬೇಕು.
ತಮ್ಮ ಧಾರಾವಾಹಿಗೆ ನಾನು ಸೂಟ್ ಆಗ್ತೀನಾ ಎನ್ನುವುದನ್ನು ಮೊದಲೇ ನಿರ್ಧರಿಸಿಯೇ, ಈಗಿನ ನಿರ್ಮಾಪಕ ನಿರ್ದೇಶಕರು ನನ್ನನ್ನು ಹೊಸ ಆಡಿಶನ್ ಗೆ ಕರೆಯುತ್ತಾರೆ. ಹಿಂದೆಲ್ಲಾ ಉದ್ದುದ್ದ ಸಾಲಿನಲ್ಲಿ ನಿಂತು ಅವಕಾಶ ಬಂದಾಗ ನಾವು ಅಭಿನಯಿಸಿ ತೋರಿಸಬೇಕಿತ್ತು. ಆದರೆ ಈಗ ಪಳಗಿದ ಕಲಾವಿದರಿಗೆ ಇಂಥ ಕ್ಯೂ ನಿಲ್ಲುವ ಗೋಜಿಲ್ಲ. ನನ್ನ ನಟನೆಯನ್ನು ಗಮನಿಸಿಯೇ ಮುಂದಿನ ಆಫರ್ಸ್ ಕೊಡುತ್ತಿದ್ದರು. ಹಿಂದೆ ಆತ್ಮವಿಶ್ವಾಸದ ಕೊರತೆ ಇತ್ತು, ಈಗ ದೃಢ ಆತ್ಮವಿಶ್ವಾಸ ತುಂಬಿದೆ, ಆದರೂ ಟೆಕ್ನಿಕಲಿ ಆಡಿಶನ್ ಎದುರಿಸಲೇಬೇಕು.

ಒಂದೊಮ್ಮೆ ಆಡಿಶನ್ ನಲ್ಲಿ ರಿಜೆಕ್ಟ್ ಆದರೆ ಆಗ……?
ಏನು ಮಾಡಲಾದೀತು? ಸ್ಪೋರ್ಟಿವ್ ಆಗಿ ತೆಗೆದುಕೊಳ್ಳಬೇಕಷ್ಟೆ. ಜೀವನದಲ್ಲಿ ಓಕೆ ಅನ್ನುವುದಕ್ಕಿಂತ ನೋ ಎಂಬುದನ್ನೇ ಜಾಸ್ತಿ ಕೇಳಿಸಿಕೊಳ್ಳ ಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ನಿರಾಸೆ ಏನಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ!
`ದಿಯಾ ಔರ್ ಬಾತಿ‘ ಧಾರಾವಾಹಿ ಹಾಗೂ ಸಂಧ್ಯಾಳ ಪಾತ್ರ ಬಲು ಯಶಸ್ವಿ ಎನಿಸಿತು. ಇದರಿಂದ ನಿನಗೆ ಸ್ಟಾರ್ ಡಂ ಸಿಕ್ಕಿತು. ಆದರೆ 5 ವರ್ಷಗಳ ನಂತರ ಏಕೋ ನೀನು ಅದನ್ನು ಬಿಡಬೇಕಾಯಿತಲ್ಲ…..?
ಈ ರೀತಿಯ ಗಡಿಬಿಡಿ, ಅವಾಂತರ ಎಲ್ಲಿ ತಾನೇ ಆಗೋಲ್ಲ ಹೇಳಿ…. ಇದಕ್ಕಾಗಿ ನಾನು ಬಹಳ ಕಷ್ಟಪಟ್ಟಿದ್ದೆ, ಆಗ ಸ್ಟಾರ್‌ಎನಿಸಿಕೊಂಡೆ. ಒಂದು ಸಣ್ಣ ಅವಕಾಶ ನಿಮಗೊಂದು ಮಹತ್ತರ ತಿರುವು ನೀಡುತ್ತದೆ, ಆ ಘಟ್ಟದಲ್ಲಿ ನಿಂತು ಸದಾ ಅದನ್ನು ನಿಭಾಯಿಸುವುದಿದೆಯಲ್ಲ…. ಅದು ಸುಲಭವಲ್ಲ! ಈ ಸ್ಥಿತಿಗೇರಿದ ನಂತರ ನಿಮ್ಮ ಕಠಿಣ ಪರಿಶ್ರಮ, ನಿಮ್ಮ ಇಂಟೆಂಶನ್ಸ್ ನಿಮ್ಮ ವಿಲ್ ಪವರ್ ಮಾತ್ರವೇ ನಿಮ್ಮನ್ನು ಕಾಪಾಡಬಲ್ಲದು. ಆದರೆ ನನಗೆ ಸಿಕ್ಕ ಈ ಸ್ಟಾರ್ ಗಿರಿಯನ್ನು ಕೇವಲ ನನ್ನ ಅದೃಷ್ಟ ಎಂದು ಭಾವಿಸದೆ, ನನ್ನ ಶ್ರಮಕ್ಕೆ ಸಂದ ಪ್ರತಿಫಲ ಎಂದೇ ಭಾವಿಸುವೆ!
2016ರ ನಂತರ ನಿನ್ನದು ಹೇಳಿಕೊಳ್ಳುವಂಥ ದೊಡ್ಡ ಧಾರಾವಾಹಿಗಳೇನೂ ಬರಲಿಲ್ಲವಲ್ಲ…..?
ಹೌದು, ನಾನು ನನ್ನ ಪರ್ಸನಲ್ ಲೈಫ್ ನಲ್ಲಿ ಬಿಝಿ ಆಗಿದ್ದೆ. ಆಗ ತಾನೇ ನನ್ನ ಮದುವೆ ಆಗಿತ್ತು. ಕೌಟುಂಬಿಕ ಜೀವನ ನನ್ನ ಮೊದಲ ಆದ್ಯತೆ. ನನ್ನ ಅತ್ತೆ ಮನೆಯ ಎಲ್ಲಾ ಸದಸ್ಯರೂ ನನಗೆ ತುಂಬು ಸಹಕಾರ ನೀಡುತ್ತಾರೆ. ಅವರ ಕಡೆಯಿಂದ ನನ್ನ ಪ್ರೊಫೆಶನಲ್ ಕುರಿತಾಗಿ ಎಂದೂ ಅಡ್ಡಿ ಆಕ್ಷೇಪ ಬರಲಿಲ್ಲ, ಬದಲಿಗೆ ಹೆಚ್ಚಿನ ಪ್ರೋತ್ಸಾಹ ದೊರಕಿತು. ವೀಕ್ಷಕರಿಗೆ ನಾನು ಸದಾ ಚಿರಋಣಿ.
`ದಿಯಾ…..’ ನಂತರ ನನಗೆ ಅತಿ ಮುಖ್ಯ ಎನಿಸುವಂಥ ಪಾತ್ರ ದೊರಕಲಿಲ್ಲ, ಹಾಗಾಗಿ ಉತ್ತಮ ಪಾತ್ರಗಳ ಹುಡುಕಾಟದಲ್ಲಿದ್ದೆ.
`ಟೀಟೂ ಅಂಬಾನಿ‘ ಚಿತ್ರದಲ್ಲಿ ನಿನ್ನ ಪಾತ್ರ ನಿಜಕ್ಕೂ ವಿಶೇಷಕರ ಅನಿಸಿತೇ?
ಹೌದು, ಇದಕ್ಕೆ ಹಲವು ಕಾರಣಗಳಿವೆ. ಇದರಲ್ಲಿ ದೊಡ್ಡ ಘಟಾನುಘಟಿ ಕಲಾವಿದರ ದಂಡೇ ಇದೆ. ಇದರ ಕಥೆ, ಚಿತ್ರಕಥೆ, ಜಬರ್ದಸ್ತಾಗಿದೆ. ಇದರ ಸಂಭಾಷಣೆ ಎಲ್ಲರಿಗೂ ಪ್ರಿಯವಾಗುವಂತಿದೆ, ಹಾಡುಗಳೂ ಚೆನ್ನಾಗಿವೆ. ನಾನು ಇದರ ಚಿತ್ರಕಥೆ ಓದಿದಾಗ ಈ ಚಿತ್ರದ ಸಂದೇಶದ ಬಗ್ಗೆ ಹೆಮ್ಮೆ ಎನಿಸಿತು. ಅದೇ ನನ್ನನ್ನು ಈ ಚಿತ್ರ ಒಪ್ಪಿಕೊಳ್ಳಲು ಪ್ರೇರೇಪಿಸಿದ್ದು. ನಗುನಗುತ್ತಲೇ ಈ ಚಿತ್ರ ತನ್ನ ಸಂದೇಶ ಸಾರುತ್ತದೆ. ನಾನೊಬ್ಬಳೇ ಇಲ್ಲಿ ಕಿರುತೆರೆ ನಟಿ, ಉಳಿದವರೆಲ್ಲ ಸಿನಿಮಾದವರೇ!
ಈ ಚಿತ್ರದ ನಾಯಕಿ ಮೌಸಮಿಯ ಪಾತ್ರದಲ್ಲಿ ನಾನು ಒಳಹೊಕ್ಕಿದ್ದೆ. ಚಿತ್ರದ ನಿರ್ದೇಶಕರಾದ ರೋಹಿತ್ ಈ ಪಾತ್ರದ ಬಗ್ಗೆ ಬಹಳ ಮಹತ್ವಾಕಾಂಕ್ಷೆ ಹೊಂದಿದ್ದರು. ಇತರ ಸಹಕಲಾವಿದರೂ ನನಗೆ ಬಹಳ ಸಪೋರ್ಟ್ ಮಾಡಿದರು. ಮಧ್ಯದಲ್ಲಿ ಕೋವಿಡ್‌ಕಾಟದಿಂದಾಗಿ ಶೂಟಿಂಗ್ ಮುಂದುವರಿಯಲು ಕಷ್ಟವಾಯ್ತು. ಇದು ಕೇವಲ ಸ್ತ್ರೀಪ್ರಧಾನ ಚಿತ್ರ ಮಾತ್ರವಲ್ಲ, ಇದರಲ್ಲಿ ನಾಯಕ ಟೀಟೂವಿನ ಕಷ್ಟನಷ್ಟಗಳ ಚಿತ್ರಣ ಇದೆ.
ಈ ಚಿತ್ರದ ನಾಯಕಿಯ ಪಾತ್ರದ ಕುರಿತಾಗಿ…..?
ಇಲ್ಲಿ ಮೌಸಮಿ ಬಹಳ ಜವಾಬ್ದಾರಿಯುತ ಹುಡುಗಿ. ಅವಳು ತನ್ನೆಲ್ಲ ಜವಾಬ್ದಾರಿಗಳನ್ನೂ ಬಲು ಗಂಭೀರವಾಗಿ ನಿಭಾಯಿಸುತ್ತಾಳೆ. ತಾಯಿ ತಂದೆಯರ ಒಬ್ಬಳೇ ಮಗಳಾದ, ಮೂವರು ತಮ್ಮಂದಿರ ಅಕ್ಕನಾದ ಅವಳು ತಾಯಿ ತಂದೆಯರ ಸಂಪೂರ್ಣ ಹೊರೆ ಹೊರುತ್ತಾಳೆ. ಮದುವೆಯಾದ ಮೇಲೂ ಗಂಡಸಿಗೆ ತಾಯಿ ತಂದೆಯರ ಹೊಣೆ ಹೊರಬೇಕು ಎನ್ನುವ ನಮ್ಮ ಸಮಾಜ, ಹೆಣ್ಣಿಗೆ ಆ ಹಕ್ಕನ್ನು ಏಕೆ ಕೊಡುವುದಿಲ್ಲ? ಅದಕ್ಕೆ ಆಕ್ಷೇಪಗಳೇಕೆ? ಇದಕ್ಕೆ ಅವಳೇ ಗಂಡನ ಸಹಕಾರ ಎಷ್ಟರ ಮಟ್ಟಿಗಿದೆ ಎನ್ನುವುದನ್ನು ಚಿತ್ರವೇ ವಿವರಿಸುತ್ತದೆ.
ನಮ್ಮ ಸಮಾಜ ಇದೀಗ ಬಹಳ ಬದಲಾಗಿದೆ. ಹೆಣ್ಣಿನ ಸ್ವಾತಂತ್ರ್ಯ ಹಾಗೂ ಪ್ರಗತಿಯ ಕುರಿತಾಗಿ ಕಳೆದ ಕೆಲವು ದಶಕಗಳಿಂದ ಬಹಳ ಸುಧಾರಣೆ ಕಾಣಬಹುದು. ಈ ಅಂಶಗಳನ್ನು ನಿನ್ನ ಚಿತ್ರದಲ್ಲಿ ಚರ್ಚಿಸಲಾಗಿದೆಯೇ?
ನಿಜ, ನಮ್ಮ ಆಧುನಿಕ ಭಾರತೀಯ ಸಮಾಜದಲ್ಲಿ ಎಷ್ಟೋ ಬದಲಾವಣೆಗಳಾಗಿವೆ. ಮಾನವೀಯ ಸಂಬಂಧಗಳಿಗೆ ಸಮಾನತೆ ನೀಡಬೇಕು ಎನ್ನುವುದು ನನ್ನ ಅಭಿಪ್ರಾಯ. ಈಗ ಪ್ರತಿ ಮನೆಯಲ್ಲೂ ಹೆಣ್ಣು ನೌಕರಿಯಲ್ಲಿರುತ್ತಾಳೆ. ಹಿಂದೆ ಹೀಗಿರಲಿಲ್ಲ. ಹಿಂದೆಲ್ಲ ಹೆಣ್ಣು ಕೇವಲ 4 ಗೋಡೆಗಳ ಒಳಗೆ ಮಾತ್ರ ತನ್ನ ಕರ್ತವ್ಯಗಳಿಗೆ ಸೀಮಿತಳಾಗಿದ್ದಳು. ಮಕ್ಕಳು 8-10 ವರ್ಷದವರಾದಾಗ, ಅವಳಿಗೆ ತನ್ನ ಅಭಿಲಾಷೆ, ಕೆರಿಯರ್, ಹವ್ಯಾಸ ನೆನಪಾಗುತ್ತದೆ. ಆದರೆ ಪ್ರೌಢ ವಯಸ್ಸಿನ ಈ ಹಂತದಲ್ಲಿ ಅವಳು ಎರಡೂ ಕಡೆ ಯಶಸ್ವಿ ಎನಿಸುವುದು ತುಸು ಕಷ್ಟಕರವೇ! ಇಂಥದೇ ವಿಷಯಗಳನ್ನು ಈ ಚಿತ್ರದಲ್ಲಿ ಚರ್ಚಿಸಿದ್ದೇವೆ.
ನೀನು ಧಾರಾವಾಹಿ ಆರಂಭಿಸಿದ ಕಾಲದಲ್ಲಿ, ಕಿರುತೆರೆ ಕಲಾವಿದರಿಗೆ ಸಿನಿಮಾದಲ್ಲಿ ಅವಕಾಶ ಸಿಗುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಈ ಹಂತದಲ್ಲಿ ನೀನು ಏನು ಹೇಳಬಯಸುವೆ?
ನನಗೆ ರಾತ್ರಿ 9 ಗಂಟೆಯ ಪ್ರೈಮ್ ಟೈಂ ಧಾರಾವಾಹಿಗಳಲ್ಲಿ ಕೆಲಸ ದೊರಕಿತ್ತು. ಅದರಲ್ಲೂ ನಾಯಕಿಯಾಗಿ ನೆಲೆ ನಿಂತು ಅದನ್ನು ಉಳಿಸಿಕೊಳ್ಳಬೇಕಿತ್ತು. ನನಗೆ ಅಕ್ಕತಂಗಿ, ಅತ್ತಿಗೆನಾದಿನಿ…. ಇಂಥ ಪೋಷಕ ಪಾತ್ರಗಳಷ್ಟೇ ಸಿಗಬಹುದು ಎಂದುಕೊಂಡಿದ್ದೆ. 3-4 ವರ್ಷಗಳ ನಂತರ ನಾನು ತಲೆಗೂದಲಿಗೆ ಬಿಳಿ ಬಣ್ಣ ಹಚ್ಚಿ, ಪ್ರೌಢ ತಾಯಿಯೂ ಆದೆ. ಇದಂತೂ ನನ್ನ ಮಟ್ಟಿಗೆ ಸವಾಲಿನ ಪಾತ್ರವಾಗಿತ್ತು. ಒಂದೇ ಧಾರಾವಾಹಿಯಲ್ಲಿ ಜೀವನದ ಬಹು ಮುಖಗಳನ್ನು ತೋರಿಸಬಹುದೆಂದು ಈ ಧಾರಾವಾಹಿ ಮುಂದುವರಿಸಿದೆ. ಶೂಟಿಂಗ್ ಮುಗಿದು ಧಾರಾವಾಹಿ ಪ್ರಸಾರಗೊಳ್ಳಲು ತಡವಾದಾಗ, ನಾನು ನಿಜಕ್ಕೂ ಕಿರುತೆರೆಯ ನಾಯಕಿ ಆಗ್ತೀನೋ ಇಲ್ಲವೋ ಎಂದೆನಿಸಿಬಿಟ್ಟಿತ್ತು.
ಆಗಿನ ಕಿರುತೆರೆ, ಹಿರಿತೆರೆಗೂ ಇಂದಿನ ಇವುಗಳಿಗೂ ಬಹಳ ವ್ಯತ್ಯಾಸವಿದೆ. ಈ ಬದಲಾವಣೆಯಲ್ಲಿ OTT ಪಾತ್ರ ಬಲು ಮುಖ್ಯ. ಟಿವಿ ಕಲಾವಿದರಾದ್ದರಿಂದ ಇವರು ಸಿನಿಮಾ ಅಥವಾ ವೆಬ್ ಸೀರೀಸ್ ಗೆ ಲಾಯಕ್ಕಲ್ಲ ಎಂಬ ಕಾಲ ಹೋಯ್ತು. ಈಗಂತೂ ಘಟಾನುಘಟಿ ದಿಗ್ಗಜ ಸ್ಟಾರ್ ಗಳೂ ಟಿವಿ, OTTಗಳಲ್ಲಿ ಮಿಂಚ ತೊಡಗಿದ್ದಾರೆ. ಈಗ ಎಲ್ಲವೂ ಒಂದೇ! ನಾನೂ ಸಿನಿಮಾದಲ್ಲಿ ಎಂಟ್ರಿ ಪಡೆದಿರುವೆ, ಹೀಗಾಗಿ ಈಗ ಕಲಾವಿದರನ್ನು ಟೈಪ್ ಕಾಸ್ಟ್ ಮಾಡಲಾಗದು! ವೀಕ್ಷಕರಿಗೆ ಕಥೆ, ಪಾತ್ರ ಅಷ್ಟೇ ಮುಖ್ಯ.
ದೀಪಿಕಾ ಒಬ್ಬ ನಟಿ ಮಾತ್ರವಲ್ಲ, ಅವಳು ಹೆಣ್ಣು, ಪತ್ನಿ, ಸೊಸೆ, ತಾಯಿ ಎಲ್ಲವೂ ಆಗಿದ್ದಾಳೆ.
ಯಾವುದಕ್ಕೆ ಎಷ್ಟು ಸಮಯ ಕೊಡ್ತೀಯಾ?
ಯಾವ ಸಂದರ್ಭದಲ್ಲಿ ಯಾರಿಗೆ ಎಷ್ಟು ಅವಶ್ಯಕವೋ, ಅದು ಎಷ್ಟು ಮುಖ್ಯವೇ ಆ ಪಾತ್ರವನ್ನೇ ಸರಿಯಾಗಿ ನಿರ್ವಹಿಸುವೆ! ಮನೆ, ಕುಟುಂಬ, ಕೆರಿಯರ್….. ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಲು 100% ಪ್ರಯತ್ನಿಸುವೆ. ಈ ಮಧ್ಯೆ ನನಗಾಗಿಯೂ ನಾನು ಒಂದಿಷ್ಟು ಟೈಂ ಇರಿಸಿಕೊಳ್ಳುವೆ. ನನ್ನ ಪತಿ, ಅತ್ತೆ ಮನೆಯವರೆಲ್ಲ ನನಗೆ ಬಹಳ ಸಪೋರ್ಟ್ ಮಾಡುವುದರಿಂದ, ಯಾವುದೇ ತೊಂದರೆ ಕಾಣುತ್ತಿಲ್ಲ!
– ಪ್ರತಿನಿಧಿ





