ಪ್ರ : ನಾನು 26 ವರ್ಷದ ಅವಿವಾಹಿತೆ. ನನ್ನ ಎತ್ತರ 5 ಅಡಿ 3 ಅಂಗುಲ. ತೂಕ 70 ಕಿಲೋ. 5 ತಿಂಗಳ ಹಿಂದೆ ನನಗೆ ಮುಟ್ಟು ಆಗಲಿಲ್ಲ. ಆ ಬಳಿಕದ ತಿಂಗಳಲ್ಲಿ ಮುಟ್ಟು ಆಯಿತು. ಆ ಬಳಿಕ 10 ದಿನದ ನಂತರ ನಾನು ಸುರಕ್ಷಿತ ಲೈಂಗಿಕ ಸಂಬಂಧ ನಡೆಸಿದೆ. ಆ ತಿಂಗಳು ನನಗೆ ಸರಿಯಾದ ಸಮಯಕ್ಕೆ ಮುಟ್ಟು ನಿಂತಿತು. ಆದರೆ ಈಗ ತಡವಾಗಿ ಮುಟ್ಟು ಬರುತ್ತದೆ. ಇದಕ್ಕೆ ಕಾರಣಗಳು ಏನಿರಬಹುದು? ಕೆಲವು ಜನರು ನಾನು ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಹೇಳುತ್ತಾರೆ. ನಾನೇನು ಮಾಡಬೇಕು, ದಯವಿಟ್ಟು ತಿಳಿಸಿ.

ಉ : ಅನಿಯಮಿತ ಅಥವಾ ತಡವಾಗಿ ಮುಟ್ಟು ಬರಲು ಹಲವು ಕಾರಣಗಳಿರಬಹುದು. ನೀವು ಲೈಂಗಿಕವಾಗಿ ಸಕ್ರಿಯವಾಗಿದ್ದರೆ, ಗರ್ಭಾವಸ್ಥೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಅದರ ಹೊರತಾಗಿ ಪೆಲ್ವಿಕ್‌ ಅಲ್ಟ್ರಾಸೌಂಡ್‌ ಮಾಡಿಸಿಕೊಳ್ಳಬೇಕು. ಏಕೆಂದರೆ ಅಂಡಕೋಶದಲ್ಲಿ ಸಿಸ್ಟ್ ಅಥವಾ ಪಾಲಿಸಿಸ್ಟಿಕ್‌ ಓವರೀಸ್‌ನ ಪರೀಕ್ಷೆಯಾಗಬೇಕು. ಇವು ಮುಟ್ಟು ವಿಳಂಬವಾಗಲು ಕಾರಣವಾಗಿರಬಹುದು. ಹೆಚ್ಚು ತೂಕ ಕೂಡ ಮುಟ್ಟಿನ ಮೇಲೆ ಪ್ರಭಾವ ಬೀರಬಹುದು. ನಿಮ್ಮ ಎತ್ತರಕ್ಕೆ ತಕ್ಕಂತೆ ನಿಮ್ಮ ತೂಕ 60 ಕಿಲೋ ಇರಬೇಕು. ನೀವು ನಿಮ್ಮ ಆಹಾರ ನಿಯಂತ್ರಣ ಮತ್ತು ಜೀವನಶೈಲಿಯಲ್ಲಿ ಪರಿವರ್ತನೆ ಮಾಡಿಕೊಳ್ಳುವುದರ ಮೂಲಕ ತೂಕ ಕಡಿಮೆ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ಮುಟ್ಟು ನಿಯಮಿತವಾಗಲು ನೆರವಾಗುತ್ತದೆ.

ಪ್ರ : ನನ್ನ ವಯಸ್ಸು 38. ಮದುವೆಯಾಗಿ 10 ವರ್ಷಗಳೇ ಆಗಿ ಹೋಗಿವೆ. ಆದರೆ ಈವರೆಗೆ ತಾಯಿಯಾಗುವುದರಿಂದ ವಂಚಿತಳಾಗಿದ್ದೇನೆ. ನನ್ನ ಅಂಡಾಣು ದುರ್ಬಲವಾಗಿವೆ ಎಂದು ವೈದ್ಯರು ಹೇಳುತ್ತಾರೆ. ಆ ಕಾರಣದಿಂದಲೇ ಒಂದು ಸಲ 3 ತಿಂಗಳಲ್ಲಿಯೇ ನನಗೆ ಗರ್ಭಪಾತವಾಯಿತು. ನಾನೇನು ಮಾಡಬೇಕು ತಿಳಿಸಿ.

ಉ : ಈ ವಯಸ್ಸಿನಲ್ಲಿ ಗರ್ಭಧಾರಣೆ ಸ್ವಲ್ಪ ಕಷ್ಟಕರವೇ ಹೌದು. ನಿಮಗೆ 3 ತಿಂಗಳಲ್ಲೇ ಗರ್ಭಪಾತ ಆಗಿರುವುದು ಕೂಡ ನಿಮ್ಮ ಅಂಡಾಣುಗಳು ದುರ್ಬಲ ಎಂಬುದನ್ನು ದೃಢಪಡಿಸುತ್ತದೆ. ಆದರೆ ನೀವು ನಿರಾಶರಾಗಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಪತಿಯಲ್ಲಿ ಯಾವುದೇ ತೊಂದರೆ ಇರದೇ ಇದ್ದರೆ, ನೀವು ಬೇರೆ ಮಹಿಳೆ ಅದರಲ್ಲೂ ನಿಮ್ಮ ತಂಗಿ ಅಥವಾ ಅತ್ತಿಗೆಯ ಅಂಡಾಣು ದಾನ ಪಡೆದು ನಿಮ್ಮ ಗರ್ಭಕೋಶಕ್ಕೆ ವರ್ಗಾಯಿಸಿಕೊಳ್ಳಬಹುದು. ನೀವು ಅಂಡಾಣು ದಾನವಾಗಿ ಪಡೆಯುವ ಮಹಿಳೆ ವಿವಾಹಿತೆಯಾಗಿರಬೇಕು ಹಾಗೂ ಮಗುವಿಗೆ ಜನ್ಮ ನೀಡಿದವಳಾಗಿರಬೇಕು.

ಪ್ರ : ನನ್ನ ವಯಸ್ಸು 30. ಗರ್ಭ ನಿಂತ ಕೆಲವು ತಿಂಗಳೊಳಗೆ 3 ಸಲ ಗರ್ಭಪಾತವಾಗಿದೆ. ನಾನೆಂದೂ ತಾಯಿಯಾಗಲು ಸಾಧ್ಯವಿಲ್ಲವೇ? ನಾನೇನು ಮಾಡಬೇಕು ತಿಳಿಸಿ.

ಉ : ನೀವು ಗಾಬರಿಯಾಗುವ ಅಗತ್ಯವಿಲ್ಲ. ನೀವು ಅವಶ್ಯವಾಗಿ ತಾಯಿಯಾಗುವಿರಿ. ನಿಮಗೆ ಹಾರ್ಮೋನು ಪ್ರೊಫೈಲ್ ‌ನ ವ್ಯಾಪಕ ಪರೀಕ್ಷೆಯ ಜೊತೆಗೆ ಗರ್ಭಕೋಶದ ಗೋಡೆಯ ಪರೀಕ್ಷೆ ಕೂಡ ಅಗತ್ಯ. ನೀವು ಯಾರಾದರೂ ತಜ್ಞರನ್ನು ಭೇಟಿಯಾಗಿ. ಅಲ್ಲಿಗೆ ಹೋಗುವಾಗ ನಿಮ್ಮ ಹಳೆಯ ಪರೀಕ್ಷೆಗಳ ರಿಪೋರ್ಟ್‌ ಕೂಡ ತೆಗೆದುಕೊಂಡು ಹೋಗಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ