ರಕುಲ್ ಗೆ ಕೋಪ ಬರುವುದೇಕೆ?
ರಕುಲ್ ಪ್ರೀತ್ ಗೆ ಇತ್ತೀಚೆಗೆ ಬಹಳ ಕೋಪ ಬಂದಿದೆ. ಅದಕ್ಕೆ ಕಾರಣ ದೇಶದೆಲ್ಲೆಡೆ ಕೇಳಿಬರುತ್ತಿರುವ ಅತ್ಯಾಚಾರ ಪ್ರಕರಣಗಳು. ಈಕೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಕೋಪವನ್ನು ಕಾರುತ್ತಾ, ಒಂದು ಕಡೆ ದೇಶ ಕೊರೋನಾ ಮಹಾಮಾರಿಯೊಂದಿಗೆ ಹೋರಾಡುತ್ತಿದ್ದರೆ, ಎಷ್ಟೋ ಜನ ವಾರಿಯರ್ಸ್ ಆಗಿ ರೋಗಿಗಳ ಸೇವೆಗೆ ಟೊಂಕ ಕಟ್ಟಿದ್ದಾರೆ. ಇನ್ನೊಂದು ಕಡೆ ರೇಪ್ ನಂಥ ಅಮಾನವೀಯ ಕುಕೃತ್ಯವೆಸಗುವ ನೀಚರಿದ್ದಾರೆ. ಕೊರೋನಾಗೆ ಬಲಿಯಾದ ಹೆಂಗಸರನ್ನೂ ಬಿಡದೆ ಅವರನ್ನು ಆಕ್ರಮಿಸಿದವರಿಗೆ ಗಲ್ಲು ಶಿಕ್ಷೆಯೂ ಕಡಿಮೆಯೇ! ಇವಳ ಕೋಪವೇನೋ ಸರಿ, ಆದರೆ ನಮ್ಮ ಕಾನೂನು ಕ್ರಮ ಇನ್ನಷ್ಟು ಬಿಗಿಗೊಳ್ಳದ ಹೊರತು ಸಂತ್ರಸ್ತ ಹೆಣ್ಣಿಗೆ ನ್ಯಾಯವೆಲ್ಲಿ?
ಪಲಕ್ ಳನ್ನು ಕಂಡವರು ಬೇರೇನು ಕಂಡಾರು?
ಇವಳಾರು ಅಂತೀರಾ? ಶ್ವೇತಾ ತಿವಾರಿಯ ಮಗಳು ಪಲಕ್ ತಿವಾರಿ. ಇನ್ನೂ ಬೆಳ್ಳಿ ತೆರೆ ಮೇಲೆ ಮಿಂಚಿಲ್ಲ, ಆದರೆ ಇವಳ ಫೋಟೋ ಶೂಟ್ ವೈರಲ್ ಆಗುತ್ತಿರುವ ಪರಿ ಕಂಡರೆ, ಇಷ್ಟರಲ್ಲಿ ಯಾವುದಾದರೂ ಸಿನಿಮಾ, OTT ಸೀರೀಸ್ ನಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ. ನಟನೆಗೆ ಇಳಿಯುವ ಮಂಚೆಯೇ ಇವಳ ಅಭಿಮಾನಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ತಾಯಿಯಂತೆ ಮಗಳು ಎಂಬುದಕ್ಕೆ ಅನ್ವರ್ಥವಾಗಿ ಪಲಕ್ ಪರ್ಫೆಕ್ಟ್ ಫಿಟ್, ಬ್ಯೂಟಿಫುಲ್ ಎನಿಸಿದ್ದಾಳೆ. ಶ್ವೇತಾಳ ಕೆರಿಯರ್‌ಪರ್ಸನಲ್ ಲೈಫ್ ಹೆಚ್ಚು ಏರಿಳಿತ ಕಂಡಿದೆ, ಆದರೆ ಸಿಂಗಲ್ ಮದರ್ ಆಗಿ ಆಕೆ ಪಲಕ್ ಳನ್ನು ಬೆಳೆಸಿರುವ ಪರಿ ಅದ್ಭುತ! ಆಲ್ ದಿ ಬೆಸ್ಟ್ ಪಲಕ್!
ಅಡಕತ್ತರಿಯಲ್ಲಿ ಕತ್ರೀನಾ!
ಕತ್ರೀನಾ ಇತ್ತೀಚೆಗಂತೂ ಹಿರಿಕಿರಿ ತೆರೆ ಇರಲಿ, ಸೋಶಿಯಲ್ ಮೀಡಿಯಾದಿಂದಲೂ ನಾಪತ್ತೆ ಆಗಿದ್ದಾಳೆ! ಮತ್ತೆ ಇವಳ ಪ್ರಸ್ತಾಪವೇಕೆ ಅಂತೀರಾ? ಇವಳನ್ನು ಮತ್ತೆ ಚರ್ಚೆಗೆ ತರಲಿದ್ದಾನೆ ಸ್ಟಾರ್ ಕಿಡ್, ಅನಿಲ್ ಕಪೂರ್ ಮಗ ಹರ್ಷವರ್ಧನ್ ಕಪೂರ್. ಅವನು ಕತ್ರೀನಾ ವಿಕ್ಕಿ ಕುರಿತು ಖಚಿತಪಡಿಸಿದ ಸಂಗತಿ, ಸುದ್ದಿಗಾರರು ಇವಳ ಬೆನ್ನು ಬೀಳುವಂತಾಗಿದೆ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅಲ್ಲವೇ? ಕತ್ರೀನಾ ವಿಕ್ಕಿ ವಿಷಯದಲ್ಲಿ ಹೇಳಿಕೊಳ್ಳುವಂಥ ಹೊಗೆಯೂ ಕಾಣುತ್ತಿಲ್ಲ. ಇವಳ ಅತಿ ನಿಕಟವರ್ತಿ (ಇನ್ನೇನು ತಾನೇ ಹೇಳಲಾದೀತು?) ಸಲ್ಮಾನ್ ಸಹ, ಇವರಿಬ್ಬರೂ ಕೈಕೈ ಹಿಡಿದು ಓಡಾಡಿದ್ದು ನೋಡಿ ಏನೂ ಹೇಳಲಿಲ್ಲವಂತೆ! ವಿಕ್ಕಿ ಜೊತೆ ಎಂಥ ಕೌಶಲ ತೋರಿಸಲಿದ್ದಾಳೋ ಈ ಕತ್ರೀನಾ!
ನಾನು ಕೇವಲ ಕಮೆಡಿಯನ್ ಅಲ್ಲ!
ಕಿರುತೆರೆ ಖ್ಯಾತಿಯ ಸುನೀಲ್ ಗ್ರೋವರ್ ಕಪಿಲ್ ಶರ್ಮ ಜೊತೆ ಮತ್ತೆ ಕೆಲಸ ಮಾಡಲು ಬಹುಶಃ ಅದೇಕೋ ಹಿಂಜರಿಯುತ್ತಿರುವಂತಿದೆ. ಇತ್ತೀಚೆಗೆ ಒಬ್ಬ ಆ್ಯಂಕರ್ ಇವನನ್ನು ಇದೇ ಪ್ರಶ್ನೆ ಕೇಳಿದಾಗ, ಆತ ಹೇಳಿದ ಉತ್ತರವೆಂದರೆ, ಭವಿಷ್ಯದಲ್ಲಿ ಯಾವುದಾದರೂ ಉತ್ತಮ ಪ್ರಾಜೆಕ್ಟ್ ದೊರಕಿದರೆ, ಕಪಿಲ್ ಜೊತೆ ನಟಿಸುವೆ. ಆದರೆ ಅದಕ್ಕೂ ಮೊದಲು, ನನ್ನೊಳಗೆ ಅಡಗಿರುವ ಕಲಾವಿದ ಹೊರಬರಲು ಅವಕಾಶ ಕೊಡಿ. ನಾನು ಕೇವಲ ಟಿಪಿಕಲ್ ಕಮೆಡಿಯನ್ ಮಾತ್ರವಲ್ಲ, ಕಲಾವಿದ ಕೂಡ ಹೌದು. ಹೊಸ ವೆಬ್ ಸೀರೀಸ್ `ಸನ್ ಫ್ಲವರ್’ ಮೂಲಕ ಈತ ಇದನ್ನು ನಿಜವೆಂದು ನಿರೂಪಿಸಿದ್ದಾನೆ. OTT ಪ್ರೇಕ್ಷಕರು ಈತನ ನಟನೆ ಕಂಡು ಬೆರಗಾಗಿದ್ದಾರೆ!
ಈ ಮುತ್ತು ದೋಷರಹಿತ ಹೌದೋ ಅಲ್ಲವೋ?
ಇತ್ತ ಕಿರುತೆರೆ ನಟ ಪರ್ಲ್ ವಿ. ಪುರಿ, ಅಪ್ರಾಪ್ತಳನ್ನು ರೇಪ್ ಮಾಡಿದ ಆರೋಪದಲ್ಲಿ ಕಂಬಿ ಎಣಿಸುತ್ತಿದ್ದರೆ, ಅತ್ತ ಅವನ ಸಹನಟರು 2 ಗುಂಪಾಗಿ ವಿಂಗಡಿಸಿದ್ದಾರೆ. ಒಂದು ಗುಂಪು ಈತ ನಿರ್ದೋಷಿ ಎಂದರೆ, ಮತ್ತೊಂದು ಗುಂಪು ಪರ್ಲ್ ತಪ್ಪು ಮಾಡಿದನೋ ಇಲ್ಲವೋ ಎಂಬ ಜಿಜ್ಞಾಸೆಯಲ್ಲಿದೆ. ಏಕ್ತಾ ಕಪೂರ್, ದಿವ್ಯಾ ಕೋಸ್ಲಾರಂಥ ಘಟಾನುಘಟಿಗಳು ಪರ್ಲ್ ನನ್ನು ಸಮರ್ಥಿಸಿದರೆ, ಬೇರೆಯವರು ಒಪ್ಪುತ್ತಿಲ್ಲ. ಆದರೆ ಪೊಲೀಸರೋ ಇವನನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡಾಯ್ತು. ಸತ್ಯ ಏನು ಅಂತ ಕಾನೂನಿನ ವಿಮರ್ಶೆಯ ನಂತರವೇ ಹೇಳಬಹುದು. ಆದರೆ ಇವನ ಕೆರಿಯರ್ ಮಾತ್ರ ಅಡ್ಡ ಗೋಡೆ ಮೇಲೆ ಇಟ್ಟ ದೀಪವಾಗಿದೆ.
ಈಗ ದಕ್ಷಿಣವೇ ಉತ್ತರಕ್ಕೆ ಆಸರೆ!
ದಕ್ಷಿಣದ ಖ್ಯಾತ `ಕ್ಯಾಟಿ’ ಚಿತ್ರದ ಹಿಂದಿ ಚಿತ್ರದ ರೀಮೇಕ್ ರೈಟ್ಸ್ ಕುರಿತಾಗಿ ಇನ್ನೂ ವಿವಾದ ನಡೆಯುತ್ತಿರುವಾಗಲೇ, ಸುದ್ದಿಗಾರರು ಹೊಸ ಸಂಗತಿ ತಂದಿದ್ದಾರೆ. ಬ್ಯಾಡ್ ಬಾಯ್ ಸಲ್ಮಾನನ `ರಾಧೆ’ ಮಖಾಡೆ ಮಲಗಿದ ಮೇಲೆ, ತೆಲುಗು ರವಿತೇಜನ `ಕಿಲಾಡಿ’ ಚಿತ್ರದ ಹಿಂದಿ ಹಕ್ಕಿಗಾಗಿ ಅಹರ್ನಿಶಿ ಹೋರಾಡುತ್ತಿದ್ದಾನೆ. ಕಳೆದ ವರ್ಷ ಸಹ ಈತನ ಯಾವ ಚಿತ್ರ ಹೇಳಕೊಳ್ಳುವಂಥ ಹೆಸರು ಮಾಡಿಲ್ಲ. ಉತ್ತಮ ಕಥೆ, ಚಿತ್ರಕಥೆಯ ಅಭಾವದ ಕಾರಣ ಈತನ ತಂದೆ ಹೊಸ ಹೊಸ ಮೂಲಕ್ಕಾಗಿ ಹುಡುಕಾಡುತ್ತಿದ್ದಾರೆ. ಈಗಂತೂ ಹಿಂದಿ ಚಿತ್ರಗಳು ಉಸಿರಾಡಲು ದಕ್ಷಿಣದ ಚಿತ್ರಗಳ ಆಸರೆಯೇ ಮೂಲಾಧಾರ ಎಂಬಂತಾಗಿದೆ.
ಬಂತಿದೋ ಮತ್ತೊಂದು ನಕ್ಷತ್ರ
`ಮರ್ದಾನಿ’ ಮುಂತಾದ ಚಿತ್ರಗಳ ಸಣ್ಣಪುಟ್ಟ ಪಾತ್ರಗಳ ಮೂಲಕ ದೊಡ್ಡ ಹೆಸರು ಮಾಡಲು ಹೋರಾಡುತ್ತಿರುವ ಹೊಸ ನಟ ಸನಿ ಹಿಂದೂಜಾ ಉದಯೋನ್ಮುಖ ತಾರೆ ಎನಿಸಿದ್ದಾನೆ. `ಲೌ ಕಾಲ್’ ವೆಬ್ ಸೀರೀಸ್ ಚಿತ್ರದ ಮೂಲಕ ಈತನಿಗೆ ಐಡೆಂಟಿಟಿ ಸಿಕ್ಕಿತು. `ಆ್ಯಕ್ಸಿರೆಂಟ್ಸ್’ ಚಿತ್ರ ಈತನನ್ನು ಅಪ್ಪಟ ಕಲಾವಿದ ಆಗಿಸಿತು. ಇದಾದ ನಂತರ ಬಂದ ಸೀರೀಸ್ `ದಿ ಫ್ಯಾಮಿಲಿ ಮ್ಯಾನ್’ ಈತನನ್ನು ಮನೆ ಮಾತಾಗಿಸಿತು. ವಿಮರ್ಶಕರು ಕೂಡ ಈತನ ನಟನೆ ಮೆಚ್ಚಿ ಕೊಂಡಾಡಿದರು. ಮನೋಜ್ ಬಾಜ್ ಪೈರಂಥ ನುರಿತ ನಟರೆದುರು ನಿಲ್ಲುವುದು ಈತನಿಗೀಗ ಸುಲಭ ಸಾಧ್ಯ. OTT ಲೋಕದಲ್ಲಿ ಈ ತಾರೆ ಮಿಂಚಿದ್ದೇ ಮಿಂಚಿದ್ದು! ಬೆಳ್ಳಿ ತೆರೆಯಲ್ಲಿ ಮುಂದೆ ಹೇಗೋ ಏನೋ…. ನೋಡಬೇಕು.
ರಣಬೀರ್ ಜೊತೆ ಕೆಲಸ ಮಾಡುವ ಕನಸು ನನಸು
ಪರಿಣಿತಿ ಚೋಪ್ರಾ ಇತ್ತೀಚೆಗೆ ತನ್ನ ಹೊಸ `ಸಂದೀಪ್ ಔರ್ ಪಿಂಕಿ ಫರಾರ್’ ಚಿತ್ರದಲ್ಲಿನ ನಟನೆಗಾಗಿ ಸದಾ ಚರ್ಚೆಯಲ್ಲಿದ್ದಾಳೆ. ಈಗ ಅವಳ ಮತ್ತೊಂದು ಚಿತ್ರ `ಅನಿಮಲ್’ ಶುರುವಾಗಲಿದ್ದು, ಇದರಲ್ಲಿ ರಣಬೀರ್ ಕಪೂರ್ ನಾಯಕ. ಪರಿಣಿತಿಗೆ ರಣಬೀರನ ಜೊತೆ ನಟಿಸುತ್ತಿರುವುದು ಬಹಳ ಹೆಮ್ಮೆ ಎನಿಸಿದೆ, ಏಕೆಂದರೆ ಬಹು ದಿನಗಳ ಅವಳ ಕನಸು ಇದೀಗ ನನಸಾಗಿದೆ. ಈ ಚಿತ್ರದ ಕುರಿತು ಅವಳಿಗೆ ಬಹಳ ಭರವಸೆ ಇದೆ, ಏಕೆಂದರೆ ಈ ಚಿತ್ರದ ನಿರ್ದೇಶಕರು ಈಗಾಗಲೇ `ಕಬೀರ್ ಸಿಂಗ್’ನಂಥ ಹಿಟ್ ಚಿತ್ರ ನೀಡಿದ್ದಾರೆ.
ಆ್ಯಕ್ಷನ್‌ಗೆ ಇಳಿದ ಚಿತ್ರ `ಛೋರಿ’ ನುಸರತ್
ಭರೂಚಾ ಇತ್ತೀಚೆಗೆ ನಿಧಾನವಾಗಿ ಟಾಪ್ ಬಾಲಿವುಡ್ ನಟಿಯರಲ್ಲಿ ಒಬ್ಬಳು ಎನಿಸಿದ್ದಾಳೆ. ಇಲ್ಲಿನ ಕರಾಮತ್ತು ಎಂದರೆ, ಈ ಯಶಸ್ಸಿನ ಹಿಂದೆ ಇವಳ ದುಡಿಮೆಯ ಛಲವಿದೆಯೇ ಹೊರತು ಯಾವುದೇ ಗಾಡ್ ಫಾದರ್ ಶ್ರೀರಕ್ಷೆ ಅಥವಾ ದೊಡ್ಡ ಬ್ಯಾನರಿನ ಆಸರೆ ಇಲ್ಲ. ಲಾಕ್ ಡೌನ್ ಮುಗಿಯುತ್ತಿದ್ದಂತೆ ನುಸ್ರತ್ ಆ್ಯಕ್ಷನ್ ಗೆ ಇಳಿದಳು. ತನ್ನ ಮುಂದಿನ ಚಿತ್ರ `ಛೋರಿ’ಗಾಗಿ ಸತತ ಹಗಲೂ ರಾತ್ರಿ ದುಡಿದಳು. ಈ ಅಪ್ಪಟ ಹಾರರ್ ಚಿತ್ರ ಮರಾಠಿ ಚಿತ್ರದ ರೀಮೇಕ್ ಅಂತೆ. ಮೂಲ ಮರಾಠಿ `ಸ್ತ್ರೀ’ ಚಿತ್ರಕ್ಕೆ ಸಿಕ್ಕಿದ ಯಶಸ್ಸು ಈ ಚಿತ್ರಕ್ಕೆ ಸಿಗುವುದೇ ಎಂಬುದೇ ಈಗಿನ ಯಕ್ಷ ಪ್ರಶ್ನೆ. ಇದೀಗ ದೆವ್ವ ಭೂತಗಳ ಚಿತ್ರಗಳಿಗೆ ಡಿಮ್ಯಾಂಡ್ ಹೆಚ್ಚುತ್ತಿದೆ.
ಸುಸ್ತಿಗೆ ಸಿಲುಕಿದ ಫ್ಯಾಮಿಲಿ ಮ್ಯಾನ್
`ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಹೊಸ ಸರಣಿ ಶುರುವಾಗಿದ್ದೇ ಬಂತು, ವಿಮರ್ಶಕರು ಇದನ್ನು ಹೊಗಳಿದ್ದೇ ಹೊಗಳಿದ್ದು. ಈ ಚಿತ್ರದಲ್ಲಿ ಮನೋಜ್ ಬಾಜಪೈ ಅದ್ಭುತ ಅಭಿನಯ ಬಿಟ್ಟರೆ ಜಾಳಾದ ಕಥೆ ಮಾತ್ರ ಉಳಿಯುತ್ತದೆ. ನಮ್ಮ ದೇಶದ ಗುಪ್ತಚರ ಸಂಸ್ಥೆಯ ಹೆಸರಲ್ಲಿ ತಯಾರಾದ ಈ ಚಿತ್ರದಲ್ಲಿ ನಾಯಕ, ಅಸಹಾಯಕನಾದ ಕಾರಣ ತಾನಾಗಿ ಏನೂ ಮಾಡಲಾರ. ಎಲ್ಲಾ ಕಡೆ ಫ್ಲಾಪ್ ಎನಿಸುತ್ತಾನೆ. ಶ್ರೀಕಾಂತನ ಪತ್ನಿ, ಮಗಳ ಅಪಹರಣದ ದೃಶ್ಯಗಳು ಬೇಕೆಂದೇ ಕಥೆಯನ್ನು ಎಳೆಯಲು ತುರುಕಿದಂತಿದೆ. ಸೌತ್ ಸಮಂತಾ ಇಲ್ಲಿ ಚೆನ್ನಾಗಿ ಮಿಂಚಿದ್ದಾಳೆ, ಆದರೆ ಅವಳ ಪಾತ್ರದಲ್ಲೂ ಅನಗತ್ಯವಾಗಿ ಸೈಕೋ ವಿಕೃತಿ ಕಾಣಿಸುತ್ತದೆ. ಒಟ್ಟಾರೆ ಕಥೆಗೆ ಇನ್ನಷ್ಟು ಕತ್ತರಿ ಬಿದ್ದಿದ್ದರೆ, ಪರಿಣಾಮ ಚೆನ್ನಾಗಿರತ್ತೇನೋ…..!
ನನ್ನ ಮಕ್ಕಳಿಗೂ ಕನಸು ಕಾಣುವ ಹಕ್ಕಿದೆ!
ಇತ್ತೀಚೆಗೆ ಸುನೀಲ್ ಶೆಟ್ಟಿ ಬಾಲಿವುಡ್ ನಲ್ಲಿ ತಮ್ಮವರನ್ನೇ ಸಪೋರ್ಟ್ ಮಾಡುವ ಧೋರಣೆಗೆ ಹೊಸ ತಿರುವು ಕೊಟ್ಟರು. ಯಾವ ರೀತಿ ಒಬ್ಬ ವಾಣಿಜ್ಯೋದ್ಯಮಿಯ ಮಕ್ಕಳು ಅದೇ ರೀತಿ ಆಗಲು ಬಯಸುತ್ತಾರೋ, ಅದೇ ತರಹ ಒಬ್ಬ ಯಶಸ್ವೀ ನಟನ ಮಕ್ಕಳು ಸಹ ಮುಂದೆ ಬೆಳ್ಳಿ ತೆರೆಯಲ್ಲಿ ಮಿಂಚಬೇಕು ಎಂದು ಬಯಸಿದರೆ ಅದು ತಪ್ಪೇ ಎಂದು ಕೇಳಿದರು. ಹಾಗೂ ಒಂದು ವೇಳೆ ಅಂಥ ಮಕ್ಕಳಿಗೆ ಯಾವುದೋ ಚಿತ್ರದಲ್ಲಿ ಕೆಲಸ ಸಿಕ್ಕಿದರೆ, ಅದು ಇಂಥದೇ ಬ್ಯಾನರ್ ಕೃಪೆ ಎಂದೇಕೆ ಹೇಳಬೇಕು? ಮುಂದೆ ಅವರವರ ಪ್ರತಿಭೆಗೆ ತಕ್ಕಂತೆ ಚಿತ್ರಗಳು ದೊರಕಬಹುದು. ಇದಕ್ಕೆ ಬಾಲಿವುಡ್ ಪಂಡಿತರ ಅಭಿಪ್ರಾಯವೇನು ಎಂದು ಕಾಲವೇ ನಿರ್ಣಯಿಸಬೇಕು.