ಎಂತಹ ವೈಭವದ ಸುಂದರ ದೇಶ ಸುತ್ತಿದರೂ ನಮ್ಮ ದೇಶಕ್ಕೆ ವಾಪಸ್‌ ಬಂದರೆ ಏನೋ ಒಂದು ರೀತಿಯ ಸಮಾಧಾನ. ಅಂತೆಯೇ ಎಲ್ಲೆಲ್ಲಿಗೆ ಹೋದರೂ ಮನೆಗೆ ಬಂದರೆ ಏನೋ ಬೆಚ್ಚನೆಯ ಭಾವ. ಮನೆ ಎಂದರೆ ಬರಿಯ ಇಟ್ಟಿಗೆ ಸಿಮೆಂಟಿನ ಕಟ್ಟಡವಲ್ಲ. ನಮ್ಮೆಲ್ಲರ ಆಶೋತ್ತರಗಳ ಅಡಗುದಾಣವದು. ಅದಕ್ಕೆ ಏನೋ ಎಲ್ಲಿಗೆ ಹೋದರೂ, ಮತ್ತೆ ಬಂದು ಮನೆ ಸೇರುವ ತವಕ ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಒಂದು ಮನೆಯನ್ನು ಬಯಸುವುದು ಸಹಜ.

`ದೂರದ ಬೆಟ್ಟದಲಿ ಪುಟ್ಟ ಮನೆ ಇರಬೇಕು, ಮನೆಯ ಸುತ್ತ ಹೂ ರಾಶಿ ಹಾಸಿರಬೇಕು, ತಂಗಾಳಿ ಜೋಗುಳು ಹಾಡಲೇಬೇಕು,’ ಎನ್ನುವುದು ಎಲ್ಲರ ಮನಸಿನ ಭಾವ. ಹುಟ್ಟಿದ ಮೇಲೆ ಸ್ವಂತ ಮನೆಯೊಂದನ್ನು ಮಾಡಿಕೊಳ್ಳಬೇಕು. ಇಲ್ಲವಾದರೆ ಜೀವನ ಸಾರ್ಥಕ ಎನಿಸದು.

ಬೆಚ್ಚನೆಯ ಭಾವನೆಗಳನ್ನು ಬೆಳಗಿಸಿ, ಮನುಜನ ಮನದಲ್ಲಿ ಒಂದು ರೀತಿಯ ರಕ್ಷಣೆಯ ಭಾವವನ್ನು ಮತ್ತು ಧನ್ಯತೆಯನ್ನು ಮೂಡಿಸಲು ಮನೆಯಲ್ಲದೆ ಮತ್ಯಾವದರಿಂದ ಸಾಧ್ಯ? ಮೊದಲಿಗೆ ಪುಟ್ಟದೋ ದೊಡ್ಡದೋ ಒಂದು ಸ್ವಂತ ಮನೆಯಿದ್ದರೆ ಸಾಕು ಎನ್ನಿಸುವುದು. ನಂತರ ಆ ಮನೆಯನ್ನು ಸಾಧ್ಯವಾದಷ್ಟು ಅಲಂಕರಿಸುವ ಮನಸ್ಸು, ನೋಡಿದವರು ನಿಮ್ಮ ಮನೆ ಚಂದವಾಗಿದೆ ಎಂದಾಗ ಆಗುವ ಸಂತಸಕ್ಕೆ ಯಾವುದೂ ಸಾಟಿಯಾಗಲಾರದು. ಇರಲಿ ಮನೆಯೊಂದನ್ನು ಕಟ್ಟಿದ ನಂತರ ಅದನ್ನು ಅಲಂಕರಿಸುವ ವಿಧಗಳು ನೂರಾರು, ಅದು ಒಬ್ಬರಿಂದ ಮತ್ತೊಬ್ಬರಿಗೆ ಬೇರೆಯದೇ ಆಗಿರುತ್ತದೆ.

corner-plant

ಒಬ್ಬರಿಗೆ ಪುರಾತನ ಶೈಲಿ ಇಷ್ಟವಾದರೆ ಮತ್ತೊಬ್ಬರಿಗೆ ಆಧುನಿಕತೆಯ ರೂಪಿಸುವಿಕೆ ಆನಂದವನ್ನು ನೀಡುತ್ತದೆ. ಒಬ್ಬರಿಗೆ ಹಳ್ಳಿಯ ತೊಟ್ಟಿ ಮನೆ ಇಷ್ಟವಾದರೆ ಮತ್ತೊಬ್ಬರಿಗೆ ಹೊಳೆಯುವ ಗ್ರಾನೈಟ್‌ ಅಥವಾ ಇಟಾಲಿಯನ್‌ ಮಾರ್ಬಲ್ ಬೇಕು. ಒಟ್ಟಾರೆ ಮನೆಯ ಒಡೆಯ/ಒಡತಿಯರ ಮನ ತಣಿಸುವ ಮನೆ, ಅವರ ಮನದ ಭಾವವನ್ನು ಪ್ರತಿಬಿಂಬಿಸುತ್ತದೆ ಎನ್ನಬಹುದು.

ಮನೆಯ ಮುಂಭಾಗ

colours

ಮೊದಲು ನೋಟಕ್ಕೆ ಮನ ಸೆಳೆಯುವುದು ಮನೆಯ ಮುಂಭಾಗ, ಮನೆಯೊಳಗೆ ಎಲ್ಲರೂ ಬರುವುದಿಲ್ಲ. ಆದರೆ ಆ ರಸ್ತೆಯಲ್ಲಿ ಹಾದುಹೋಗುವ, ಎಲ್ಲರ ಕಣ್ಣಿಗೂ ಬೀಳುವ ಮನೆಯ ಮುಂಭಾಗ ಬಹಳ ಮುಖ್ಯ. ಮನೆಯನ್ನು ನೋಡಿದಾಕ್ಷಣ ಹೊರ ನೋಟವೇ ಇಷ್ಟು ಚಂದವಿದೆ. ಇನ್ನು ಒಳಗಡೆ ಎಷ್ಟು ಚೆನ್ನಾಗಿರುತ್ತದೋ ಎನ್ನಿಸಿ, ಅವರಿಗೆ ಮನೆ ಒಳಗೆ ಒಮ್ಮೆ ಇಣುಕೋಣ ಎನ್ನುವ ಭಾವ ಬರಬೇಕು ಅಲ್ಲವೇ?

ಆದರೆ ಇಲ್ಲಿಯೂ ಅಷ್ಟೇ ಸರಳವಾಗಿಯೇ ಸುಂದರವಾಗಿರಬಹುದು ಅಥವಾ ಅದಕ್ಕಾಗಿ ಬಹಳ ಖರ್ಚು ಮಾಡಿಯೂ ಸುಂದರತೆಯನ್ನು ಮೂಡಿಸಬಹುದು. ಅಂತೆಯೇ ಮುಂಬಾಗಿಲನ್ನೂ ಸಹ ಬಹಳ ವೈಭಯುತವಾಗಿ ಮಾಡಲು ಕೆಲವರು ಬಾಗಿಲಿಗೆ ಬೇಲೂರಿನ ಶಿಲಾ ಬಾಲಿಕೆಯನ್ನು ಮೂಡಿಸಿಬಿಡುತ್ತಾರೆ. ಆದರೆ ಅನೇಕ ಬಾರಿ ಸರಳವಾದ ಹೊಳೆಯುವ ತೇಗದ ಬಾಗಿಲು ಸಹ ಆಕರ್ಷಕವೆನಿಸಬಹುದು.

ಪಡಸಾಲೆ/ಲಿವಿಂಗ್‌ ರೂಮ್

IMG_20190716_114342

 

ಪಡಸಾಲೆಗೆ ಬಹಳ ಮುಖ್ಯವಾದುದು ಅಲ್ಲಿಯ ವಾತಾವರಣ, ಕಾಲು ಚಾಚಿ ಕೂರಲು ಅನುಕೂಲವಾಗುವ ರೆಕ್ಲೈನರ್‌ ಅಥವಾ ಪುರಾತನ ಶೈಲಿಯ ವುಡನ್‌ ಫರ್ನೀಚರ್‌ ಅಥವಾ ಬೆತ್ತದ ಅಥವಾ ಆ ಎಲ್ಲವನ್ನೂ ಬಿಟ್ಟು ನೆಲದ ಮೇಲಿನ ಗದ್ದುಗೆಯೂ ಸಹ ಚಂದವೇ. ಈ ಆಧುನಿಕ ಜೀವನ ಶೈಲಿಯಲ್ಲಿ ಕೆಳಗೆ ಕುಳಿತು ಏಳುವಾಗ ಒಂದು ರೀತಿಯಲ್ಲಿ ವ್ಯಾಯಾಮವಾಗುತ್ತದೆ. ಆದರೆ ಹಿರಿಯ ನಾಗರಿಕರಿಗೆ ಸ್ವಲ್ಪ ಕಷ್ಟವಾಗಬಹುದು. ಇವುಗಳ ಜೊತೆ ಅಲ್ಲಲ್ಲಿ ಮತ್ತಷ್ಟು ವಿಶೇಷತೆಯನ್ನು ಮೂಡಿಸುವ ಕೆಲವು ವಿಷಯಗಳು ಎಂದರೆ ಗೋಡೆಗೆ ಮೂಡಿಸಿದ ಒಂದು ಚಿತ್ರ ಅಥವಾ ಮೂಲೆಯಲ್ಲಿ ಇರಿಸಿದ ಒಂದು ಕಲಾತ್ಮಕ ವಸ್ತು ಅಥವಾ ಅಲ್ಲಿ ಬಳಸಿದ ಬಣ್ಣ ಮತ್ತು ಬೆಳಕಿನ ವಿನ್ಯಾಸ ಪಡಸಾಲೆಯನ್ನು ಮತ್ತಷ್ಟು ಸುಂದರವಾಗಿರಿಸಬಹುದು.

ಸುಂದರತೆಯ ಭಾಷ್ಯ

DSC_0096

ಲಿವಿಂಗ್‌ ರೂಮಿನ ಒಂದು ಮೂಲೆಯಲ್ಲಿ ಮನೆಯೊಡೆಯನ ಜೊತೆ ಮನೆಯೊಡತಿಯ ಒಂದು ಸುಂದರ ಚಿತ್ರ, ಅವರ ಇರುವಿಕೆಗೆ ನಾಂದಿ ಹಾಡುತ್ತದೆ. ಲಿವಿಂಗ್‌ ರೂಮಿನ ಅರ್ಥಾತ್‌ ಪಡಸಾಲೆಯ ಒಂದೊಂದು ಅಲಂಕಾರ ಮನೆಯ ಸುಂದರತೆಯ ಭಾಷ್ಯವನ್ನು ಬರೆಯುತ್ತದೆ. ದಿನವಿಡೀ ದುಡಿದು, ದಣಿದು ಮನೆಗೆ ಬಂದಾಗ ತಾವು ಕಟ್ಟಿಸಿದ ಮನೆ, ಮನೆಯ ಕೇಂದ್ರ ಭಾಗವಾದ ಲಿವಿಂಗ್‌ ರೂಮ್ ಮನೆಯೊಡತಿಯ ಜೀವಂತಿಕೆಗೆ ತ….ನ….ನಾ…. ಹಾಡುತ್ತದೆ. ತಮ್ಮ ಮನೆಯನ್ನು ನೋಡಿದಾಗ ಅವರ ಹೃದಯ ತುಂಬಿ ಬರುತ್ತದೆ.

ಆಧುನಿಕ ಚಿಂತೆಗನುಗುಣವಾಗಿ ನಗರಗಳಲ್ಲಿನ ನಿವೇಶನಗಳು ತುಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಗೋಡೆಗಳು ಕಡಿಮೆಯಾದಷ್ಟು ಸ್ಥಳ ವಿಶಾಲವಾಗಿ ಕಾಣುತ್ತದೆ. ಅಂತೆಯೇ ಅಡುಗೆ ಮನೆಯೂ ತೆರೆದ ಕೋಣೆಯಾಗಿ ಅರ್ಥಾತ್‌ ಐಲ್ಯಾಂಡ್‌ ಕಿಚನ್‌ ಎಂದು ನಾಮಾಂತರಗೊಂಡಿದೆ.

ಏನಿದು ಐಲ್ಯಾಂಡ್‌ ಕಿಚನ್‌?

IMG_20190627_115653 (1)

ಸಾಮಾನ್ಯವಾಗಿ ಮಹಿಳೆಯರು ಕೆಲಸ ಮಾಡುವಾಗ ಗೋಡೆಗೆ ಮುಖ ಮಾಡಿ ಕೆಲಸ ಮಾಡುತ್ತಾರೆ. ಆದರೆ ಐಲ್ಯಾಂಡ್‌ ಇದ್ದಾಗ ಅಡುಗೆಯ ಕೆಲಸ ಮತ್ತು ಅದನ್ನು ಮಾಡುವವರೂ ಮನೆಯ ಉಳಿದ ವಿದ್ಯಮಾನಗಳನ್ನು ನೋಡುತ್ತಲೇ ಕೆಲಸ ಮಾಡಬಹುದು. ಆಗ ಅವರಿಗೆ ಕೆಲಸ ಮಾಡುವಾಗ ಮನೆಯ ಮಿಕ್ಕ ಸದಸ್ಯರಿಂದ ಪ್ರತ್ಯೇಕವಾದ ಭಾವ ಬಾರದು. ಆದ್ದರಿಂದ ಆಧುನಿಕ ಮಹಿಳೆಯರು ಈ ರೀತಿಯ ಅಡುಗೆ ಮನೆಯನ್ನು ಬಯಸುತ್ತಾರೆ. ಅಡುಗೆ ಮಾಡುವುದನ್ನು ನೋಡಲು ಅವಕಾಶವಿದ್ದಾಗ ನೋಡುಗರಲ್ಲಿ ತಿನ್ನುವ ಆಸಕ್ತಿ ಮತ್ತೂ ಹೆಚ್ಚಾಗುತ್ತದೆ. ಮೇಲ್ಮಟ್ಟದ ಅನೇಕ ರೆಸ್ಟೋರೆಂಟ್‌ ಗಳಲ್ಲಿ ಅಡುಗೆ ತಯಾರಿಸುವುದನ್ನು ನೋಡಲು ಅವಕಾಶವಿರುತ್ತದೆ, ಎನ್ನುತ್ತಾರೆ. ಬೆಂಗಳೂರಿನ ಆರ್ಕಿಟೆಕ್ಟ್ ರುದ್ರೇಶ್‌.

lighting

ಒಟ್ಟಿನಲ್ಲಿ ನೋಡಲು ಚಂದವಾಗಿದ್ದು, ಸಾಮಾನು ಮತ್ತು ಉಪಕರಣಗಳನ್ನಿಡಲು ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಐಲ್ಯಾಂಡ್‌ ಕಿಚನ್‌ ನಿಜಕ್ಕೂ ಉಪಯುಕ್ತವಾದುದು. ಅಡುಗೆ ಮನೆಯನ್ನು ಶುಭ್ರವಾಗಿರಿಸುವ ಮತ್ತು ಅಲ್ಲಿಯೂ ಕಲಾತ್ಮಕತೆಯನ್ನು ಮೂಡಿಸುವಲ್ಲಿ ನಿಮಗೊಂದು ಸವಾಲೂ ಆಗಬಹುದು. ಬೆಚ್ಚನೆಯ ಬೆಡ್‌ ರೂಮ್ ಮಲಗುವ ಕೋಣೆ ಎಂದಾಗ ಅದು ವೈಯಕ್ತಿಕ ಅಭಿರುಚಿಯನ್ನು ಅವಲಂಬಿಸಿರುತ್ತದೆ. ದಿನವೆಲ್ಲಾ ಕೆಲಸ ಮಾಡಿ ರಾತ್ರಿ ಸುಖ ನಿದ್ದೆಯನ್ನು ಬಯಸುವ ಮನಸ್ಸಿಗೆ ಶಾಂತಿಯನ್ನು ನೀಡುವ ತಾಣವಾಗಬೇಕು. ಮನದಲ್ಲಿ ಸುಂದರ ಭಾವನೆಗಳನ್ನು ಹೊರ ಹೊಮ್ಮಿಸುವ ಬೆಡ್‌ ರೂಮ್ ಯಾರಿಗೆ ತಾನೇ ಪ್ರಿಯವೆನಿಸುವುದಿಲ್ಲ?

Jagruthi-6

ಮಲಗಲು ಅನುಕೂಲಕರವಾದ ಪಲ್ಲಂಗ, ಮೆತ್ತನೆಯ ಹಾಸಿಗೆ ದಿಂಬುಗಳು ಅದರ ಮೇಲೆ ಶುಭ ರಾತ್ರಿಯನ್ನು ಕೋರುವ ದಿಂಬಿನ ಮೇಲಿನ ಕಸೂತಿ, ಎಲ್ಲವೂ ಮುಖ್ಯ. ಅಂತೂ ಬೆಡ್‌ ರೂಮಿನ ಬಗ್ಗೆಯೇ ವಿವರವಾಗಿ ಒಂದು ಪುಸ್ತಕವನ್ನೇ ಬರೆದು ಬಿಡಬಹದು.

ಇವೆಲ್ಲದರ ಜೊತೆಗೆ ಬಣ್ಣ, ಬೆಳಕು, ಒಪ್ಪ ಓರಣ ಇತ್ಯಾದಿಗಳು ಮನೆಯ ಚಂದಕ್ಕೆ ಕಾರಣವಾಗಬಹುದು.

ಒಟ್ಟಾರೆ ಹೇಳಬೇಕೆಂದರೆ ಮನೆಗೆ ಕಳಸ ಪ್ರಾಯವೆನಿಸುವ ಒಳಾಂಗಣ ಅಲಂಕಾರ ಸಹ ತನ್ನ ಸ್ವರೂಪವನ್ನು ಬದಲಿಸುತ್ತವೆ ಇರುತ್ತದೆ. ಅದಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ವಸ್ತುಗಳು ತಯಾರಾಗುತ್ತವೆ. ಆದ್ದರಿಂದ ಇಲ್ಲಿ ಇಂತಹುದೇ ಎನ್ನುವ ನಿಯಮವಿಲ್ಲ. ಅವರವರ ಭಾವಕ್ಕೆ ತಕ್ಕಂತೆ, ಆಸಕ್ತಿ ಮತ್ತು ಜೇಬಿಗನುಗುಣವಾಗಿ ರೂಪಿಸುವಿಕೆ ಸಾಧ್ಯ.

kannadi

ಕೆಲಸಗಾರರ ವೇತನ ಎಷ್ಟೇ ತುಟ್ಟಿಯಾದರೂ ನಿರ್ಮಾಣಗಳು ಮಾತ್ರ ಸಾಗುತ್ತಲೇ ಇವೆ. ನಾಗರಿಕತೆ ಮುಂದುವರಿದಂತೆ ಮನುಷ್ಯನ ಬೇಕುಗಳು ಹೆಚ್ಚಾಗುತ್ತಲೇ ಇವೆ. ಅದಕ್ಕೆ ಅನುಗುಣವಾಗಿ ಎಲ್ಲವೂ ರೂಪುಗೊಳ್ಳುತ್ತವೆ. ಅಂತೂ ಮನೆ ಒಂದಾದರೂ ನೂರಾರು, ಸಾವಿರಾರು ಅಲಂಕಾರಗಳನ್ನು ಮೂಡಿಸಲು ಖಂಡಿತ ಸಾಧ್ಯವಿದೆ.

– ಮಂಜುಳಾ ರಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ