ನನ್ನ ಮದುವೆ ಸೀಮಾಳೊಂದಿಗೆ ನಿಶ್ಚಿತವಾದ ದಿನದ ಮಾತಿದು. ನಾವು ಅಂದು ಪ್ರಥಮ ಬಾರಿಗೆ ನಮ್ಮ ಕುಟುಂಬದವರ ಸಮ್ಮುಖದಲ್ಲಿಯೇ ಭೇಟಿಯಾಗಿದ್ದೆವು.

ಆ ದಿನ ನಾನು ಆಗ ತಾನೇ ಮನೆ ತಲುಪಿದ್ದೆ. ಆಗ ನನ್ನ ಫೋನ್‌ಗೆ ಒಂದು ಅಪರಿಚಿತ ನಂಬರ್‌ನಿಂದ ಕರೆ ಬಂತು. ನಾನು ಫೋನ್‌ ಎತ್ತಿಕೊಂಡಾಗ ಅತ್ತ ಕಡೆಯಿಂದ ಯುವತಿಯೊಬ್ಬಳ ಧ್ವನಿ ಕೇಳಿಸಿತು.“ಹಲೋ….” ನಾನು ಹೇಳಿದೆ.

“ಹಲೋ…. ನಾನು ಸೀಮಾ ಮಾತಾಡ್ತಿರೋದು.” ಅವಳ ಫೋನ್‌ ಬಂದಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿತು. ಏಕೆಂದರೆ ಅದೇ ಆಗ ನಮ್ಮ ಮದುವೆ ನಿಶ್ಚಯವಾಗಿತ್ತು. ಬಹುಶಃ ಅವಳು ಆಧುನಿಕ ವಿಚಾರದವಳಿರಬೇಕು ಎನಿಸಿತು ನನಗೆ.

ಆದರೂ ನಾನು ಸಂಭಾಳಿಸುತ್ತಾ ಹೇಳಿದೆ,  “ಮಾತಾಡಿ ಏನ್‌ ವಿಷಯ?”

ಅವಳು ಹಿಂಜರಿಕೆಯಿಂದಲೇ ಹೇಳಿದಳು, “ನಾನು ಫೋನ್‌ ಮಾಡಿರೋದು ನಿಮಗೆ ಅಚ್ಚರಿಯೆನಿಸಬಹುದು. ಆದರೆ ನನಗೆ ಫೋನ್‌ ಮಾಡುವುದು ಅನಿವಾರ್ಯವಾಗಿತ್ತು. ನಿಮಗೆ ಒಂದು ವಿಷಯ ತಿಳಿಸಬೇಕಿತ್ತು. ಅಂದಹಾಗೆ ನನ್ನ ಎಡ ಕೆನ್ನೆಯ ಮೇಲೆ ಒಂದು ದೊಡ್ಡ ಕಲೆಯಿದೆ. ಅದು ನನ್ನ ಕೂದಲಿನಲ್ಲಿ ಮರೆಯಾಗಿರುವುದು. ಬಹುಶಃ ನೀವು ಅದನ್ನು ಗಮನಿಸಿರಲ್ಲಿಕ್ಕಿಲ್ಲ. ಇದನ್ನು ಹೇಳಲೆಂದೇ ನಿಮಗೆ ಕರೆ ಮಾಡಿದೆ. ಏಕೆಂದರೆ ಮುಂದೆ ನಿಮಗೆ ಯಾವುದೇ ಸಮಸ್ಯೆ ಆಗಬಾರದು ಅಲ್ವಾ?”

ನಾನು ಆ ಕಲೆಯನ್ನು ನಿಶ್ಚಿತಾರ್ಥದ ಸಮಯದಲ್ಲಿಯೇ ಗಮನಿಸಿದ್ದೆ. ನನಗೆ ಆ ಯುವತಿಯ ಪ್ರಾಮಾಣಿಕತೆಯ ಬಗ್ಗೆ ಬಹಳ ಖುಷಿ ಆಯಿತು. ನಾನು ಅವಳಿಗೆ, “ನಾನು ಅದನ್ನು ಗಮನಿಸಿದೆ. ನನಗೆ ಅದರಿಂದ ಯಾವುದೇ ಸಮಸ್ಯೆ ಇಲ್ಲ,” ಎಂದು ಹೇಳಿದೆ.

“ಧನ್ಯವಾದ,” ಎಂದು ಹೇಳಿ ಅವಳು ಫೋನ್‌ ಇಟ್ಟಳು.

ಅವಳ ಪ್ರಾಮಾಣಿಕತೆ ನನ್ನ ಹೃದಯ ತಟ್ಟಿತು. ಅದೇ ಪ್ರಾಮಾಣಿಕತೆ ಈಗಲೂ ನಮ್ಮ ಗಾಢ ಸಂಬಂಧದ ಅಡಿಪಾಯವಾಗಿದೆ. ಶಶಿಧರ್‌, ಮಡಿಕೇರಿ. ಶನಿವಾರಗಳಂದು ಹೆಚ್ಚಿನ ಜನರು ದಾನ ಮಾಡುತ್ತಾರೆ. ಜನರ ಈ ದೌರ್ಬಲ್ಯದ ಲಾಭ ಪಡೆದುಕೊಳ್ಳಲು ಶನಿವಾರಗಳಂದು ಬೇಕೆಂದರೆ ಕೆಲವರು ಹಣೆಗೆ ತಿಲಕ ಇಟ್ಟುಕೊಂಡು ಹಣ ಕೇಳಲು ಸುತ್ತು ಹೊಡೆಯುತ್ತಿರುತ್ತಾರೆ.

ಬೆಳಗ್ಗೆ ಇನ್ನೂ ಸರಿಯಾಗಿ ಕಣ್ಣು ಕೂಡ ತೆರೆದಿರುವುದಿಲ್ಲ. ಅಷ್ಟರಲ್ಲಿ ಮನೆಯ ಕಾಲ್ ‌ಬೆಲ್ ಸದ್ದು ಮಾಡುತ್ತೆ ಹಾಗೂ ಶನಿದೇವತೆಯ ಧ್ವನಿ ಕಿವಿಯಲ್ಲಿ ಮೊಳಗುತ್ತಿರುತ್ತೆ. ಮನೆಗೆ ಬಂದ ಇಂಥ ಯಾರನ್ನೂ ಖಾಲಿ ಕೈಯಲ್ಲಿ ವಾಪಸ್‌ ಕಳುಹಿಸಲು ಮನಸ್ಸಾಗುವುದಿಲ್ಲ. ನಾನೂ ಕೂಡ ಶನಿವಾರದಂದು ಏನನ್ನಾದರೂ ಅವಶ್ಯವಾಗಿ ದಾನ ಮಾಡುತ್ತೇನೆ.

ಅದೊಂದು ದಿನ ನನ್ನ ಮೊಮ್ಮಗಳು ಚಿನ್ಮಯಿ ತನಗೆ ಬಹಳ ತಿಳಿವಳಿಕೆಯುಳ್ಳವಳಂತೆ ಒಂದು ಮಾತು ಹೇಳಿದಳು, “ಅಜ್ಜಿ, ನೀವು ಇಂತಹ ಜನರಿಗೆ ಹಣವನ್ನೇಕೆ ಕೊಡುತ್ತೀರಿ? ಅವರಿಗೆ ಏನೂ ಕೆಲಸ ಮಾಡದೆ ಹಣ ಕೇಳಲು ಒಂದಿಷ್ಟು ನಾಚಿಕೆ ಎನಿಸುವುದಿಲ್ಲ. ನೀವು ಎಂಥವರಿಗೆ ಹಣ ಕೊಡಬೇಕೆಂದರೆ, ನಮ್ಮ ಬಳಿ ಕೆಲಸ ಮಾಡಿ ತಮ್ಮ ಮಕ್ಕಳನ್ನು ಪಾಲನೆ ಪೋಷಣೆ ಮಾಡುವಂಥವರಿಗೆ.”

ಮೊಮ್ಮಗಳ ಈ ಮಾತು ನನಗೆ ಬಹಳ ಇಷ್ಟವಾಯಿತು. ಇತ್ತೀಚೆಗೆ ನಾನು ದಾನವಾಗಿ ಕೊಡಬೇಕೆಂಬ ಹಣವನ್ನು ಒಗ್ಗೂಡಿಸಿ ನಮ್ಮಲ್ಲಿ ಕೆಲಸ ಮಾಡುವವರಿಗೆ ಕೊಡುತ್ತೇನೆ.

ರೇಣುಕಾ ಶ್ರೀನಿವಾಸ್‌, ಹಾಸನ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ