ಸಾಮಾನ್ಯವಾಗಿ ಮದುವೆಗಳಲ್ಲಿ ಮಾಡಲ್ಪಡುವ ಖರ್ಚು ತಮ್ಮ ಸ್ವಂತ ಮನಸ್ಸಿನಿಂದ ಮಾಡಿದ್ದಾಗಿರುವುದಿಲ್ಲ. ಅದು ಸಾಮಾಜಿಕ ಒತ್ತಡದಿಂದ ಮಾಡಿದ್ದಾಗಿರುತ್ತದೆ. ಅದಕ್ಕೆ ಏನು ಕಾರಣ? ಅದನ್ನು ತಿಳಿದು ನೀವು ಚಕಿತರಾಗುತ್ತೀರಿ.

ಜೋಡಿಯೊಂದು ಮದುವೆಯ ಬಂಧದಲ್ಲಿ  ಬಂಧಿಯಾಗಲು ಮದುವೆ ಮಾರ್ಕೆಟ್‌ನಲ್ಲಿ ಎಷ್ಟು ಖರ್ಚು ಬರುತ್ತದೆ ಎಂದು ನೀವೆಂದಾದರೂ ಯೋಚಿಸಿದ್ದೀರಾ? ಒಬ್ಬೊಬ್ಬರದು ಒಂದೊಂದು ಲೆಕ್ಕ. ಶ್ರೀಮಂತರದು ಒಂದು ರೀತಿ, ಮಧ್ಯಮ ವರ್ಗದವರದ್ದು ಇನ್ನೊಂದು ರೀತಿ.

ಎರಡು ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು, ಅವರ ಚಿಕ್ಕಪ್ಪನ ಮಗಳ ಮದುವೆಗೆಂದು ನನಗೆ ಆಹ್ವಾನ ಕೊಟ್ಟಿದ್ದರು. ಆ ಮದುವೆ ದಾವಣಗೆರೆಯಲ್ಲಿ ನಡೆಯಲಿತ್ತು. ನಾನು 1 ದಿನ ಮುಂಚೆಯೇ ಅಲ್ಲಿಗೆ ತಲುಪಿದೆ. ಅವರ ಮನೆಯನ್ನು ನೋಡಿ ಅವರ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ ಎನ್ನುವುದು ನನಗೆ ಅರಿವಿಗೆ ಬಂತು.

ಅವರಿಗೆ ಕೇವಲ 1 ಎಕರೆ ಮಾತ್ರ ಜಮೀನು ಇತ್ತು. ಬೆಳೆ ಬೆಳೆಯುವಾಗ ಮಾತ್ರ ಅವರು ಹೊಲದಲ್ಲಿ ಪೂರ್ಣಾವಧಿ ಕೆಲಸ ಮಾಡುತ್ತಿದ್ದರು. ಹೊಲದಲ್ಲೇನೂ ಕೆಲಸ ಇಲ್ಲದಿದ್ದಾಗ ಅವರು ದಾವಣಗೆರೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು.

ನನಗೆ ಗೆಳೆಯನಿಂದ ತಿಳಿದುಬಂದ ವಿಚಾರವೆಂದರೆ, ಹುಡುಗನ ಕಡೆಯಿಂದ ಯಾವುದೇ ವರದಕ್ಷಿಣೆ ಬೇಡಿಕೆ ಇಡಲಾಗಿರಲಿಲ್ಲ. ಆದರೆ ಮದುವಗೆ ಬಂದವರಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದರು.

ವಧುವರರು ಸಪ್ತಪದಿ ತುಳಿಯಲು ಸನ್ನದ್ಧರಾದಾಗ, ನನಗೆ ಹೊರಗೆ ಟೆಂಪೊವೊಂದು ಕಂಡುಬಂತು. ಅದರಲ್ಲಿ ಫ್ರಿಜ್‌, ಮಂಚ, ಬೀರು, ಮಿಕ್ಸಿ, ಕುಕ್ಕರ್‌ ನಂತಹ ವಸ್ತುಗಳನ್ನು ಇಡಲಾಗಿತ್ತು. ನನಗೆ ಗೆಳೆಯನ ಮಾತು ನೆನಪಿಗೆ ಬಂತು. ಆದರೆ ಆ ಸಮಯದಲ್ಲಿ ಗೆಳೆಯನ ಜೊತೆ ಈ ವಿಷಯದ ಬಗ್ಗೆ ಕೇಳುವುದು ಅಷ್ಟು ಸಮಂಜಸ ಎನಿಸಲಿಲ್ಲ.

ಮದುವೆ ಮುಗಿಸಿ ಪುನಃ ಬೆಂಗಳೂರಿಗೆ ಹೊರಡಲು ಸಿದ್ಧರಾದಾಗ, ನಾನು ಅವನನ್ನು ಕೇಳಿಯೇ ಬಿಟ್ಟೆ, ವರನ ಕಡೆಯವರು ಏನು ವರದಕ್ಷಿಣೆ ಬೇಡ ಅಂದಿದ್ದಾರೆ ಅಂತಾ ನೀನೇ ಹೇಳಿದ್ದೆ. ಆದರೆ ಮನೆ ಮುಂದೆ ನಿಂತಿದ್ದ ಟೆಂಪೊದಲ್ಲಿ ಸಾಮಾನುಗಳನ್ನು ಲೋಡ್ ಮಾಡಿದ್ದುದು ಏಕೆ?

ಅವನು ಕೊಟ್ಟ ಉತ್ತರ ಕೇಳಿ ನಾನು ದಂಗಾಗಿ ಹೋದೆ. ತನ್ನ ಚಿಕ್ಕಪ್ಪ ಆ ಎಲ್ಲ ಸಾಮಾನುಗಳನ್ನು ಉಡುಗೊರೆಯ ರೂಪದಲ್ಲಿ ಕೊಟ್ಟಿದ್ದಾರೆ. ನಾಳೆ ಏನಾದರೊಂದು ಘಟನೆ ಘಟಿಸಿದಲ್ಲಿ, ಯಾರೊಬ್ಬರೂ ತನ್ನ ಪುತ್ರಿಯ ಬಗ್ಗೆ ಕೊಂಕು ಮಾತನಾಡಬಾರದು. ಕೇವಲ ಹುಡುಗನ ಮನೆಯವರಷ್ಟೇ ಅಲ್ಲ, ಬೇರೆ ಯಾರೂ ಕೂಡ ಆ ಬಗ್ಗೆ ಮಾತನಾಡಬಾರದು ಎನ್ನುವುದು ಚಿಕ್ಕಪ್ಪನ ಧೋರಣೆ ಎಂದು ಸ್ನೇಹಿತ ತಿಳಿಸಿದ.

ಕುಟುಂಬದ ಇತರೆ ಮದುವೆಗಳಲ್ಲಿ ಕೂಡ ಇದೇ ರೀತಿ ಗೃಹಬಳಕೆ ಸಾಮಾನುಗಳನ್ನು ಕೊಡಲಾಗಿತ್ತು. ಈಗ ತನ್ನ ಮಗಳ ಮದುವೆಯಲ್ಲಿ ಅಂತಹ ಸಾಮಗ್ರಿಗಳನ್ನು ಕೊಡದೇ ಹೋದರೆ ತನ್ನ ಬಗ್ಗೆ ಟೀಕೆಗಳನ್ನು ಮಾಡಲಾಗುತ್ತದೆ ಎಂದು ಹೆದರಿ ಚಿಕ್ಕಪ್ಪ ಈ ನಿರ್ಧಾರಕ್ಕೆ ಬಂದಿದ್ದಾರೆಂದೂ ಸ್ನೇಹಿತ ತಿಳಿಸಿದ.

ನಾವು ಬಹಳಷ್ಟು ಸಿನಿಮಾಗಳಲ್ಲಿ ಇಂತಹ ದೃಶ್ಯಗಳನ್ನು ಕಂಡಿದ್ದೇವೆ. ತಂದೆ ತನ್ನ ಇಡೀ ಜೀವಮಾನದಲ್ಲಿ ದುಡಿದ ಹಣವನ್ನೆಲ್ಲ ತನ್ನ ಮಗಳಿಗಾಗಿ ಖರ್ಚು ಮಾಡುತ್ತಾನೆ. ಬಹಳಷ್ಟು ಜನರಿಗೆ ಇದೇ ರೀತಿ ಮದುವೆ ಮಾಡುವ ಕನಸಿರುತ್ತದೆ. ಆದರೆ ಮದುವೆ ಮಾಡಿದವರಿಗೆ ಮಾತ್ರ ತನ್ನ ಮಗಳ ಮದುವೆಗೆ ಎಷ್ಟು ಕಷ್ಟಪಟ್ಟೆ, ಎಷ್ಟು ಸಾಲ ಸೋಲ ಮಾಡಿದೆ ಎನ್ನುವುದು ಗೊತ್ತಿರುತ್ತದೆ.

ಸಾಮಾಜಿಕ ಒತ್ತಡದ ಪರಿಣಾಮ

ನೀವು ನಿಮ್ಮ ಜೀವನದಲ್ಲಿ ಇಂತಹ ಹಲವು ಮದುವೆಗಳನ್ನು ನೋಡಿರುತ್ತೀರಿ. ಅವೆಲ್ಲ ಸಾಮಾನ್ಯವಾಗಿ ಒಂದು ರೀತಿಯ ಸಾಮಾಜಿಕ ಒತ್ತಡದ ಪರಿಣಾಮಗಳಾಗಿರುತ್ತವೆ. ಆ ಒತ್ತಡ ತಂದೆಯನ್ನು ಬಹಳಷ್ಟು ಸಂಕಷ್ಟಗಳಿಗೆ ಗುರಿ ಮಾಡುತ್ತದೆ.

ಅಂತಹದೇ ಒಂದು ಮದುವೆ ಸುಧಾಕರ್‌ ಮಗನ ಮದುವೆಯಲ್ಲಿ ನೋಡಲು ಸಿಕ್ಕಿತು. ಕೊರೋನಾ ಕಾರಣದಿಂದ ಎಲ್ಲರ ಜೇಬುಗಳು ಖಾಲಿಯಾಗಿದ್ದವು. ಇಂತಹ ಸ್ಥಿತಿಯಲ್ಲಿ ಮದುವೆ ಮಾಡುವುದು ದುಬಾರಿಯಾಗಿಯೇ ಪರಿಣಮಿಸುತ್ತದೆ. ಸುಧಾಕರ್‌ಗೆ ಬೆಂಗಳೂರಿನಲ್ಲಿ ಪುಟ್ಟದಾದ ಸ್ವಂತ ಮನೆಯಿದೆ. ಹೀಗಾಗಿ ಕೊರೋನಾದ ಕಷ್ಟದ ಸಮಯದಲ್ಲಿ ಅವರಿಗೆ ಬಾಡಿಗೆ ಕೊಡುವ ಸಂದರ್ಭ ಬರಲಿಲ್ಲ. ಆದರೆ ಬಹಳಷ್ಟು ಜನರಂತೆ ಅವರ ಕೆಲಸ ಹೊರಟುಹೋಯಿತು.

ಪ್ರತಿಷ್ಠೆಗೆ ಧಕ್ಕೆ ಆಗುತ್ತದೆಂದು…..

ಕೊರೋನಾದ ದಿನಗಳಲ್ಲಿ ರವಿಗೆ ತನ್ನ ಪಕ್ಕದ ಮನೆಯಲ್ಲಿ ವಾಸಿಸುವ ಯುವತಿಯ ಜೊತೆಗೆ ಪ್ರೀತಿಯಾಗಿತ್ತು. ರವಿ ತನ್ನ ತಂದೆಗೆ ಆ ಯುವತಿಯ ಜೊತೆಗೆ ಮದುವೆ ಮಾಡಿಸಬೇಕೆಂದು ಹಠಹಿಡಿದ. ಸುಧಾಕರ್‌ ತನ್ನ ಮಗನಿಗೆ ಬಹಳಷ್ಟು ಬುದ್ಧಿವಾದ ಹೇಳಿ ನೋಡಿದರು. ಮನೆಯ ಪರಿಸ್ಥಿತಿ ಸದ್ಯಕ್ಕೆ ಸರಿಯಿಲ್ಲ, ಎಲ್ಲ ನಾರ್ಮಲ್ ಆದಮೇಲೆ ಮದುವೆ ಮಾಡೋಣ ಎಂದು ಹೇಳಿದರು. ಆದರೆ ರವಿ ಅದಕ್ಕೆ ಒಪ್ಪಲಿಲ್ಲ. ಕೊನೆಗೊಮ್ಮೆ ಸುಧಾಕರ್‌ಮಗನ ಮಾತಿಗೆ ಒಪ್ಪಲೇಬೇಕಾದ ಪರಿಸ್ಥಿತಿ ಬಂತು. ಕೊರೋನಾದ ದಿನಗಳಲ್ಲಿ ಹೆಚ್ಚು ಜನರನ್ನು ಕರೆಸಬೇಕಾದ ಅಗತ್ಯವಿರುವುದಿಲ್ಲ ಹಾಗೂ ಹುಡುಗಿ ಮನೆಯವರ ಮುಂದೆ ಯಾವುದೇ ಬೇಡಿಕೆ ಇರುವುದಿಲ್ಲ ಎಂದೆಲ್ಲ ಅವರು ಯೋಚಿಸಿದರು.

ಆದರೆ ಯುವಜನತೆ ತಮ್ಮದೇ ಆದ ರೀತಿಯಲ್ಲಿ ಯೋಚಿಸುತ್ತಾರೆ. ರವಿಯ ಸ್ನೇಹಿತರು, ಚಿರಪರಿಚಿತರು ಹೀಗೆ ಎಲ್ಲರೂ ಸೇರಿ 50 ಜನರು ಆಗಿಯೇಬಿಟ್ಟರು. ಮದುವೆಯ ಬಳಿಕ ನನಗೆ ಗೊತ್ತಾದ ವಿಷಯವೆಂದರೆ, ರವಿಗೆ ಹೆಂಡತಿಯ ಮನೆಯವರಿಂದ ಬೈಕ್‌ಮತ್ತು ಮನೆಯ ಅಷ್ಟಿಷ್ಟು ಸಾಮಗ್ರಿಗಳು ದೊರಕಿದ್ದವು.

ಮದುವೆಯಾದ 3 ದಿನಗಳ ಬಳಿಕ ರವಿ ತನ್ನ ತಂದೆಗೆ ಆಗ್ರಹಿಸಿದ, “ನನ್ನ ಸ್ನೇಹಿತರಿಗೆ ಮತ್ತು ಹುಡುಗಿಯ ಮನೆಯವರಿಗೆ ಒಂದು ಚಿಕ್ಕ ರಿಸೆಪ್ಷನ್‌ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಹುಡುಗಿಯ ಮನೆಯವರೆದುರು ನಮ್ಮ ಮರ್ಯಾದೆ ಏನಾಗಬೇಕು?” ಕೊನೆಗೆ ಸುಧಾಕರ್‌ ಒಂದು ಪಾರ್ಟಿ ಏರ್ಪಡಿಸಬೇಕಾಯಿತು.

ಸುಧಾಕರ್‌ ಹಾಗೂ ರವಿಯ ಉದಾಹರಣೆಯಿಂದ ಸ್ಪಷ್ಟವಾಗುವ ಸಂಗತಿಯೆಂದರೆ, ಸಾಮಾಜಿಕ ಒತ್ತಡವಷ್ಟೇ ಅಲ್ಲ, ಮಗನ ಒತ್ತಡ ಇರುತ್ತದೆ. ಬೇರೆ ಕೆಲವು ಕಡೆ ಮಗಳ ಆಗ್ರಹ ಕೂಡ ಇರುತ್ತದೆ. ಈ ಪುಟ್ಟ ಮದುವೆಯಲ್ಲಿ ಆಗುವ ಖರ್ಚುಗಳ ಬಗ್ಗೆ ನೀವೇ ಸ್ವತಃ ಯೋಚಿಸಬಹುದು. ಒಂದು ಕಡೆ ಜೇಬಿನಲ್ಲಿ ಹಣವಿಲ್ಲ. ಅದರ ಹೊರತಾಗಿಯೂ ಇಂತಹ ಸಮಾರಂಭಗಳಲ್ಲಿ ಕೇವಲ ಸಾಮಾಜಿಕ ಒತ್ತಡದ ಕಾರಣದಿಂದ ಖರ್ಚು ಮಾಡಬೇಕಾಗಿ ಬರುತ್ತದೆ. ಏಕೆಂದರೆ ಅವರ ಆತ್ಮಗೌರವಕ್ಕೆ ಚ್ಯುತಿ ಬರಬಾರದು ಎನ್ನುವುದಾಗಿರುತ್ತದೆ.

ಜನ ಏನನ್ನುತ್ತಾರೆ ಎಂಬ ಚಿಂತೆ

ಮದುವೆ ಮಾಡುವುದನ್ನು ಬಿಟ್ಟುಬಿಡಬೇಕಾ ಅಥವಾ ಸಂಬಂಧಿಕರನ್ನು ಕರೆಸುವುದನ್ನು ನಿಲ್ಲಿಸಬೇಕಾ? ನಾವಿಲ್ಲಿ ಜನರ ಸೇರುವಿಕೆ ನಿರ್ಬಂಧಿಸುವ ಬಗೆಗಾಗಲಿ ಅಥವಾ ಮದುವೆ ಮಾಡಲೇಬಾರದೆಂದು ಸಲಹೆ ನೀಡುತ್ತಿಲ್ಲ. ಈ ವಿಷಯದ ತಾತ್ಪರ್ಯ ಇಷ್ಟೇ, ಮದುವೆಯ ಖರ್ಚು ಮಾಡುವಾಗ ಸಮಾಜದ ಇತರೆ ಜನರ ಬಗ್ಗೆ ಯೋಚಿಸಬೇಕಾ ಬೇಡವಾ ಎಂಬುದರ ಬಗ್ಗೆ ಹೇಳುತ್ತಿರುವುದು.

ಜನರ ಮನಸ್ಸಿನಲ್ಲಿರುವ ಯೋಚನೆಯೆಂದರೆ, ಅವರ ಆರ್ಥಿಕ ಸ್ಥಿತಿಗಿಂತ ಮಕ್ಕಳ ಖುಷಿ ಮುಖ್ಯ. ಹಾಗೊಂದು ವೇಳೆ ನಾವು ಹಾಗೆ ಮಾಡದಿದ್ದರೆ ಜನರು ಏನನ್ನಬಹುದು ಎನ್ನುವುದು ಅವರ ಚಿಂತೆಯಾಗಿರುತ್ತದೆ.

ಇತ್ತೀಚೆಗೆ ಮದುವೆಯಲ್ಲಿ ಆಗುವ ಖರ್ಚು ಸಮಾಜದಲ್ಲಿ ಚಾಲ್ತಿಯಲ್ಲಿರುವ ಆರ್ಥಿಕತೆಗೆ ಅತ್ಯಂತ ಅವಶ್ಯಕ. ಇದರೊಂದಿಗೆ ಹಲವು ಬಗೆಯ ವ್ಯಾಪಾರಗಳು ಸಂಬಂಧಪಟ್ಟಿವೆ. ಉದಾಹರಣೆಗೆ ಕ್ಯಾಟರರ್‌(ಅಡುಗೆಯವರು)ಗಳಿಂದ ಅಡುಗೆ ಮಾಡಿಸುವುದು, ಕಲ್ಯಾಣ ಮಂಟಪ ಬುಕ್‌ಮಾಡಿಸುವುದು, ಮದುವೆ ನಡೆಸಿಕೊಡಲು ಪುರೋಹಿತರು, ಮೌಲ್ವಿಗಳು, ಪಾದ್ರಿಗಳು ಬೇಕೇಬೇಕು. ಹೀಗಾಗಿ ಮದುವೆ ಕಾರ್ಯಕ್ರಮಗಳು ನಡೆಯುವುದು ಇವರಿಗೆ ಅತ್ಯವಶ್ಯಕ.

ಪ್ರವೀಣ್‌ನ ತಂದೆ, ಯಾವುದೇ ದೊಡ್ಡ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಅಥವಾ ಹೋಟೆಲ್‌ನ ಹಾಲ್ ಬುಕ್‌ಮಾಡಿ ಮದುವೆ ಮಾಡಲಿಲ್ಲ. ಅವರು ತಮ್ಮದೇ ತಾಲ್ಲೂಕಿನ ರಿಜಿಸ್ಟ್ರೇಷನ್‌ಆಫೀಸಿಗೆ ಹೋಗಿ ಮದುವೆಯನ್ನು ರಿಜಿಸ್ಟರ್ಡ್‌ರೀತಿಯಲ್ಲಿ ಮಾಡಿಕೊಂಡರು. ಮದುವೆಯಾದ 3-4 ದಿನಗಳ ಬಳಿಕ ಸರ್ಕಾರಿ ಸಮುದಾಯ ಭವನ ಬುಕ್‌ಮಾಡಿ ರಿಸೆಪ್ಷನ್‌ಸಮಾರಂಭ ನಡೆಸಿದರು. ಅವರು ಒಟ್ಟಾರೆ 150 ಜನರಿಗೆ ಮಾತ್ರ ಆಹ್ವಾನ ಕೊಟ್ಟಿದ್ದರು. ಒಂದು ವೇಳೆ ಪಾರಂಪರಿಕ ರೀತಿಯಲ್ಲಿ ಮದುವೆಯಾಗಿದ್ದರೆ ಈಗ ಆದ ಖರ್ಚಿಗಿಂತ 3 ಪಟ್ಟು ಹೆಚ್ಚು ಖರ್ಚಾಗುತ್ತಿತ್ತು. ಅವರು ಬಾಕಿ ಉಳಿದ ಹಣವನ್ನು ಪ್ರವೀಣನ ಹೆಸರಿನಲ್ಲಿ ಎಫ್‌.ಡಿ. ಮಾಡಿದರು. ಏಕೆಂದರೆ ಕಷ್ಟಕಾಲದಲ್ಲಿ ಅವರಿಗೆ ಸಹಾಯವಾಗಲಿ ಎಂಬುದು ಅವರ ಬಯಕೆಯಾಗಿತ್ತು.

ಪ್ರವೀಣನ ತಂದೆಯ ತಿಳಿವಳಿಕೆಯ ಬಗ್ಗೆ ನೀವೇ ಊಹಿಸಿ. ಬೆಲೆಯೇರಿಕೆಯನ್ನು ಗಮನದಲ್ಲಿಟ್ಟುಕೊಂಡು ಸರಳ ಮದುವೆ ಮಾಡಿಕೊಳ್ಳುವುದರಲ್ಲಿಯೇ ಜಾಣತನವಿದೆ. ಸಮಾಜದ ಹೊರೆಯಾಗಿರುವ ಈ ಮಾನಸಿಕತೆಯನ್ನು ತೊಡೆದು ಹಾಕಲು ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವುದು ಇಲ್ಲವೇ ರಿಜಿಸ್ಟರ್ಡ್‌ಮದುವೆ ಮಾಡಿಕೊಳ್ಳುವುದು ಅತ್ಯವಶ್ಯಕ. ಪಾರಂಪರಿಕ ರೀತಿಯಲ್ಲಿ ಮದುವೆಯಾಗುವುದರಿಂದ ಕೇವವ ತೋರಿಕೆ ಹಾಗೂ ಅವೈಜ್ಞಾನಿಕ ಯೋಚನೆಗೆ ಪ್ರೋತ್ಸಾಹ ದೊರಕುತ್ತದೆ.

ಎಂ. ದೇವಿಕಾ

ಇಲ್ಲಿವೆ ಒಂದಿಷ್ಟು ಉಪಾಯಗಳು

ಸಾಮಾಜಿಕ ಒತ್ತಡದಿಂದ ಆದ ಮದುವೆಯಿಂದ ಸಮಾಜದ ಮೇಲೆಯೇ ದುಷ್ಪರಿಣಾಮ ಉಂಟಾಗುತ್ತದೆ. ಸಾಮಾಜಿಕ ಒತ್ತಡದ ಕಾರಣದಿಂದ ಆದ ಖರ್ಚು ಬೇರೆಯವರಿಗೂ ಅದೇ ರೀತಿಯಲ್ಲಿ ಖರ್ಚು ಮಾಡಲು ಪ್ರೇರೇಪಿಸುತ್ತದೆ. ಮದುವೆಗಳು ಎರಡು ಹೃದಯಗಳ ಪ್ರೀತಿಯ ಬಂಧನವಾಗಿ ಉಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ಅವು ಆಯಾ ಕುಟುಂಬಗಳ ಸ್ಟೇಟಸ್‌ಬಿಂಬಿಸುವ ಸಾಧನಗಳಾಗಿವೆ. ನಾನು ಮದುವೆಯಲ್ಲಿ ಅಷ್ಟು ಖರ್ಚು ಮಾಡಿದೆ. ನೀನು ಅಷ್ಟು ಮಾಡಲಿಲ್ಲ ಏಕೆ? ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ.

ಯಾವುದೇ ತಂದೆಯ ಕನಸು ತನ್ನ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕಾಗಿರುತ್ತದೆ ಅಥವಾ ಯಾವುದೇ ಒಬ್ಬ ವ್ಯಕ್ತಿಗೆ ತನ್ನ ಮದುವೆ ಬೇರೆಯವರಿಗಿಂತ ವೈಭವದ ರೀತಿಯಲ್ಲಿ ನಡೆಯಬೇಕೆನ್ನುವುದಾಗಿರುತ್ತದೆ. ಇಲ್ಲಿ ಯಾರಿಗೂ ತನ್ನ ಕನಸು ನನಸು ಮಾಡಿಕೊಳ್ಳುವುದನ್ನು ತಡೆಯುವುದಾಗಿರುವುದಿಲ್ಲ. ಆದರೆ ಎಂತಹ ಒಂದು ಮಾನಸಿಕತೆಯನ್ನು ಬೆಳೆಸುವುದಾಗಿದೆಯೆಂದರೆ, ತಮ್ಮ ಮಕ್ಕಳ ಮದುವೆಯ ಖರ್ಚನ್ನು ತಮ್ಮ ಇತಿಮಿತಿಯೊಳಗೆ ಮಾಡಬೇಕು ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು.

ಒಂದು ಮದುವೆ ನಡೆಸಲು ಎಷ್ಟು ಖರ್ಚಾಗುತ್ತದೆ. ಅಷ್ಟು ಮೊತ್ತದಲ್ಲಿ ಅರ್ಧ ಮೊತ್ತವನ್ನಾದರೂ ಉಳಿತಾಯ ಮಾಡಿದರೆ, ಆ ಮೊತ್ತ ಚಿಕ್ಕದೇನೂ ಆಗಿರುವುದಿಲ್ಲ. ಭವಿಷ್ಯದ ದೃಷ್ಟಿಯಿಂದ ಬಡವರು ಮಧ್ಯಮ ವರ್ಗದವರಿಗೆ ಆ ಮೊತ್ತ ಬಹಳ ಉಪಯುಕ್ತವಾಗಿ ಪರಿಣಮಿಸುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ