ಸಾಮಾನ್ಯವಾಗಿ ಮದುವೆಗಳಲ್ಲಿ ಮಾಡಲ್ಪಡುವ ಖರ್ಚು ತಮ್ಮ ಸ್ವಂತ ಮನಸ್ಸಿನಿಂದ ಮಾಡಿದ್ದಾಗಿರುವುದಿಲ್ಲ. ಅದು ಸಾಮಾಜಿಕ ಒತ್ತಡದಿಂದ ಮಾಡಿದ್ದಾಗಿರುತ್ತದೆ. ಅದಕ್ಕೆ ಏನು ಕಾರಣ? ಅದನ್ನು ತಿಳಿದು ನೀವು ಚಕಿತರಾಗುತ್ತೀರಿ.
ಜೋಡಿಯೊಂದು ಮದುವೆಯ ಬಂಧದಲ್ಲಿ ಬಂಧಿಯಾಗಲು ಮದುವೆ ಮಾರ್ಕೆಟ್‌ನಲ್ಲಿ ಎಷ್ಟು ಖರ್ಚು ಬರುತ್ತದೆ ಎಂದು ನೀವೆಂದಾದರೂ ಯೋಚಿಸಿದ್ದೀರಾ? ಒಬ್ಬೊಬ್ಬರದು ಒಂದೊಂದು ಲೆಕ್ಕ. ಶ್ರೀಮಂತರದು ಒಂದು ರೀತಿ, ಮಧ್ಯಮ ವರ್ಗದವರದ್ದು ಇನ್ನೊಂದು ರೀತಿ.
ಎರಡು ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು, ಅವರ ಚಿಕ್ಕಪ್ಪನ ಮಗಳ ಮದುವೆಗೆಂದು ನನಗೆ ಆಹ್ವಾನ ಕೊಟ್ಟಿದ್ದರು. ಆ ಮದುವೆ ದಾವಣಗೆರೆಯಲ್ಲಿ ನಡೆಯಲಿತ್ತು. ನಾನು 1 ದಿನ ಮುಂಚೆಯೇ ಅಲ್ಲಿಗೆ ತಲುಪಿದೆ. ಅವರ ಮನೆಯನ್ನು ನೋಡಿ ಅವರ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ ಎನ್ನುವುದು ನನಗೆ ಅರಿವಿಗೆ ಬಂತು.
ಅವರಿಗೆ ಕೇವಲ 1 ಎಕರೆ ಮಾತ್ರ ಜಮೀನು ಇತ್ತು. ಬೆಳೆ ಬೆಳೆಯುವಾಗ ಮಾತ್ರ ಅವರು ಹೊಲದಲ್ಲಿ ಪೂರ್ಣಾವಧಿ ಕೆಲಸ ಮಾಡುತ್ತಿದ್ದರು. ಹೊಲದಲ್ಲೇನೂ ಕೆಲಸ ಇಲ್ಲದಿದ್ದಾಗ ಅವರು ದಾವಣಗೆರೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು.
ನನಗೆ ಗೆಳೆಯನಿಂದ ತಿಳಿದುಬಂದ ವಿಚಾರವೆಂದರೆ, ಹುಡುಗನ ಕಡೆಯಿಂದ ಯಾವುದೇ ವರದಕ್ಷಿಣೆ ಬೇಡಿಕೆ ಇಡಲಾಗಿರಲಿಲ್ಲ. ಆದರೆ ಮದುವಗೆ ಬಂದವರಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದರು.
ವಧುವರರು ಸಪ್ತಪದಿ ತುಳಿಯಲು ಸನ್ನದ್ಧರಾದಾಗ, ನನಗೆ ಹೊರಗೆ ಟೆಂಪೊವೊಂದು ಕಂಡುಬಂತು. ಅದರಲ್ಲಿ ಫ್ರಿಜ್, ಮಂಚ, ಬೀರು, ಮಿಕ್ಸಿ, ಕುಕ್ಕರ್ ನಂತಹ ವಸ್ತುಗಳನ್ನು ಇಡಲಾಗಿತ್ತು. ನನಗೆ ಗೆಳೆಯನ ಮಾತು ನೆನಪಿಗೆ ಬಂತು. ಆದರೆ ಆ ಸಮಯದಲ್ಲಿ ಗೆಳೆಯನ ಜೊತೆ ಈ ವಿಷಯದ ಬಗ್ಗೆ ಕೇಳುವುದು ಅಷ್ಟು ಸಮಂಜಸ ಎನಿಸಲಿಲ್ಲ.
ಮದುವೆ ಮುಗಿಸಿ ಪುನಃ ಬೆಂಗಳೂರಿಗೆ ಹೊರಡಲು ಸಿದ್ಧರಾದಾಗ, ನಾನು ಅವನನ್ನು ಕೇಳಿಯೇ ಬಿಟ್ಟೆ, ವರನ ಕಡೆಯವರು ಏನು ವರದಕ್ಷಿಣೆ ಬೇಡ ಅಂದಿದ್ದಾರೆ ಅಂತಾ ನೀನೇ ಹೇಳಿದ್ದೆ. ಆದರೆ ಮನೆ ಮುಂದೆ ನಿಂತಿದ್ದ ಟೆಂಪೊದಲ್ಲಿ ಸಾಮಾನುಗಳನ್ನು ಲೋಡ್ ಮಾಡಿದ್ದುದು ಏಕೆ?
ಅವನು ಕೊಟ್ಟ ಉತ್ತರ ಕೇಳಿ ನಾನು ದಂಗಾಗಿ ಹೋದೆ. ತನ್ನ ಚಿಕ್ಕಪ್ಪ ಆ ಎಲ್ಲ ಸಾಮಾನುಗಳನ್ನು ಉಡುಗೊರೆಯ ರೂಪದಲ್ಲಿ ಕೊಟ್ಟಿದ್ದಾರೆ. ನಾಳೆ ಏನಾದರೊಂದು ಘಟನೆ ಘಟಿಸಿದಲ್ಲಿ, ಯಾರೊಬ್ಬರೂ ತನ್ನ ಪುತ್ರಿಯ ಬಗ್ಗೆ ಕೊಂಕು ಮಾತನಾಡಬಾರದು. ಕೇವಲ ಹುಡುಗನ ಮನೆಯವರಷ್ಟೇ ಅಲ್ಲ, ಬೇರೆ ಯಾರೂ ಕೂಡ ಆ ಬಗ್ಗೆ ಮಾತನಾಡಬಾರದು ಎನ್ನುವುದು ಚಿಕ್ಕಪ್ಪನ ಧೋರಣೆ ಎಂದು ಸ್ನೇಹಿತ ತಿಳಿಸಿದ.
ಕುಟುಂಬದ ಇತರೆ ಮದುವೆಗಳಲ್ಲಿ ಕೂಡ ಇದೇ ರೀತಿ ಗೃಹಬಳಕೆ ಸಾಮಾನುಗಳನ್ನು ಕೊಡಲಾಗಿತ್ತು. ಈಗ ತನ್ನ ಮಗಳ ಮದುವೆಯಲ್ಲಿ ಅಂತಹ ಸಾಮಗ್ರಿಗಳನ್ನು ಕೊಡದೇ ಹೋದರೆ ತನ್ನ ಬಗ್ಗೆ ಟೀಕೆಗಳನ್ನು ಮಾಡಲಾಗುತ್ತದೆ ಎಂದು ಹೆದರಿ ಚಿಕ್ಕಪ್ಪ ಈ ನಿರ್ಧಾರಕ್ಕೆ ಬಂದಿದ್ದಾರೆಂದೂ ಸ್ನೇಹಿತ ತಿಳಿಸಿದ.
ನಾವು ಬಹಳಷ್ಟು ಸಿನಿಮಾಗಳಲ್ಲಿ ಇಂತಹ ದೃಶ್ಯಗಳನ್ನು ಕಂಡಿದ್ದೇವೆ. ತಂದೆ ತನ್ನ ಇಡೀ ಜೀವಮಾನದಲ್ಲಿ ದುಡಿದ ಹಣವನ್ನೆಲ್ಲ ತನ್ನ ಮಗಳಿಗಾಗಿ ಖರ್ಚು ಮಾಡುತ್ತಾನೆ. ಬಹಳಷ್ಟು ಜನರಿಗೆ ಇದೇ ರೀತಿ ಮದುವೆ ಮಾಡುವ ಕನಸಿರುತ್ತದೆ. ಆದರೆ ಮದುವೆ ಮಾಡಿದವರಿಗೆ ಮಾತ್ರ ತನ್ನ ಮಗಳ ಮದುವೆಗೆ ಎಷ್ಟು ಕಷ್ಟಪಟ್ಟೆ, ಎಷ್ಟು ಸಾಲ ಸೋಲ ಮಾಡಿದೆ ಎನ್ನುವುದು ಗೊತ್ತಿರುತ್ತದೆ.