ಭಾರತೀಯ ಹೆಣ್ಣಿಗೆ ಸೀರೆಗಿಂತಲೂ ಅದ್ಭುತ ಉಡುಗೆ ಬೇರೆ ಯಾವುದಿರಲು ಸಾಧ್ಯ? ಫ್ಯಾಷನ್ ಗೆ ತಕ್ಕಂತೆ ಇದನ್ನು ಉಡುವ ಶೈಲಿ ಬದಲಾಗುತ್ತಿರುತ್ತದೆ. ಸೀರೆಗಿಂತಲೂ ಉತ್ತಮ ಲುಕ್ ನೀಡಬಲ್ಲ ಬೇರೆ ಯಾ ಉಡುಗೆಯೂ ಇಲ್ಲ ಎಂದೇ ಹೇಳಬೇಕು. ಇದು ಹಬ್ಬ ಹರಿದಿನ, ಪಾರ್ಟಿ, ಶುಭ ಸಮಾರಂಭ, ಆಫೀಸ್ ಫಂಕ್ಷನ್…. ಎಲ್ಲದಕ್ಕೂ ಪರ್ಫೆಕ್ಟ್ ಚಾಯ್ಸ್! ಇದನ್ನು ಉಡುವ (ಡ್ರೇಪಿಂಗ್) ವಿವಿಧ ವಿಧಾನ ಗಮನಿಸಿ :
ಬಟರ್ ಫ್ಲೈ ಡ್ರೇಪಿಂಗ್
ಇಂಥ ವಿಧಾನ ತೆಳು ಹಾಗೂ ಸದೃಢ ಮೈಕಟ್ಟಿನ ತರುಣಿಯರಿಗೆ ಚೆನ್ನಾಗಿ ಒಪ್ಪುತ್ತದೆ. ಬಟರ್ ಫ್ಲೈ ಸ್ಟೈಲ್ ಡ್ರೇಪಿಂಗ್ ನ್ನು ಯಾವುದೇ ಬಗೆಯ ಸೀರೆಗೆ ಟ್ರೈ ಮಾಡಬಹುದು. ಆದರೆ ನೀವು ಕೋಟಾ ಯಾ ಶಿಫಾನ್ ತರಹದ ಲೈಟ್ ಸೀರೆ ಆರಿಸಿದ್ದರೆ, ಚಿಟ್ಟೆಯ ರೆಕ್ಕೆಗಳು ನೆಟ್ಟಗೆ ನಿಲ್ಲುವ ಸಂಭವ ಇರುತ್ತದೆ ಎಚ್ಚರ. ಯಾವುದರಲ್ಲಿ ದಟ್ಟ ಕಸೂತಿ ಇರುತ್ತದೋ ಅಂಥದ್ದನ್ನೇ ಆರಿಸಿ. ಇದನ್ನು ಫ್ರಂಟ್ ಸೆರಗಿನ ಶೈಲಿಗೆ ಬಳಸುವುದು ಲೇಸು. ಬಾಲಿವುಡ್ ನಟಿ ಸೋನಂ ಕಪೂರ್ ಈ ಶೈಲಿಯಲ್ಲೇ ಹೆಚ್ಚಾಗಿ ಸೀರೆ ಉಡುತ್ತಾಳೆ. ಪರ್ಫೆಕ್ಟ್ ಲುಕ್ಸ್ ಗಾಗಿ ಹಗುರ ಸೀರೆಯ ಜೊತೆ ಭಾರಿ ಪೇಪ್ಲಂ ಬ್ಲೌಸ್ ಕ್ಯಾರಿ ಮಾಡಿ.
ಧೋತಿ ಸೀರೆ
ಇಂಥ ಸೀರೆ ಇಂದಿನ ಆಧುನಿಕ ತರುಣಿಯರಲ್ಲಿ ಜನಪ್ರಿಯವಾಗಿದೆ. ಏಕೆಂದರೆ ಈ ಶೈಲಿ ಉಡಲು ಅತಿ ಸುಲಭ ಹಾಗೂ ಆರಾಮ ಎನಿಸುತ್ತದೆ. ಈ ತರಹದ ಶೈಲಿಯಲ್ಲಿ ಹಲವು ಸಿನಿಮಾ ನಟಿಯರನ್ನು ಗಮನಿಸಬಹುದು. ಈ ಟ್ರೆಂಡ್ ನಿಮ್ಮ ಫ್ಯಾಷನ್ ಸ್ಟೇಟ್ ಮೆಂಟ್ ಲೆವೆಲ್ ನ್ನು ಹೆಚ್ಚಿಸುತ್ತದೆ. ಇದನ್ನು ಕಟ್ ಬ್ಲೌಸ್ ಯಾ ಕ್ರಾಪ್ ಟಾಪ್/ ಟೀ ಶರ್ಟ್ ಜೊತೆಯೂ ಉಡಬಹುದಾಗಿದೆ. ಈಗ ಚಳಿಗಾಲ ದಟ್ಟವಾಗುತ್ತಿದೆ. ಹೀಗಾಗಿ ಇದನ್ನು ನೀವು ಜ್ಯಾಕೆಟ್ ಬ್ಲೇಝರ್ ಜೊತೆಯೂ ಟ್ರೈ ಮಾಡಬಹುದು.
ಲೆಹಂಗಾ ಸೀರೆ
ಈ ಶೈಲಿ ಇದೀಗ ಎಲ್ಲೆಡೆ ಮಾಮೂಲಿ ಎನಿಸಿದೆ. ಮದುವೆ, ಮುಂಜಿಯಂಥ ಶುಭ ಸಮಾರಂಭ, ದೀಪಾವಳಿಯಂಥ ದೊಡ್ಡ ಹಬ್ಬಗಳಿಗೂ ಸೂಟ್ ಆಗುತ್ತದೆ.
ಇತ್ತೀಚೆಗೆ ನವ ವಧುವಿನ ಲೆಹಂಗಾ ಸಹ ಇದೇ ಪ್ಯಾಟರ್ನ್ ನಲ್ಲಿ ಚಾಲ್ತಿಯಲ್ಲಿದೆ. ಇದನ್ನು ಸುಪ್ರಸಿದ್ಧ ರೆಡ್ ಕಾರ್ಪೆಟ್ ಈವೆಂಟ್ ಗಳಲ್ಲೂ ಗಮನಿಸಬಹುದಾಗಿದೆ. ಅರ್ಧ ಸೀರೆಯ ಈ ಶೈಲಿ, ಸೀರೆ ಉಡುವ ಶೈಲಿಗಳಲ್ಲೇ ಹೆಚ್ಚು ಟ್ರೆಂಡಿ ಎನಿಸಿದೆ.
ಈ ಸ್ಟೈಲ್ ಗಾಗಿ ನೀವು ಕಾಂಟ್ರಾಸ್ಟ್ ಕಲರ್ ನಲ್ಲಿ ಲೆಹಂಗಾ ಚೋಲಿ ಮತ್ತು ಒಂದು ಸೀರೆ ಆರಿಸಿಕೊಳ್ಳಿ. ಅದರಿಂದಾಗಿ ಅರ್ಧ ಸೀರೆಯ ಲುಕ್ ಬರುತ್ತದೆ.
ಮುಮ್ತಾಝ್ ಸೀರೆ
ದಶಕಗಳಾಚೆಯ ನಟಿ ಮುಮ್ತಾಝ್ ಫಂಕಿ ಸ್ಟೈಲ್ ಸ್ಟೇಟ್ ಮೆಂಟ್ಸ್ ಗೆ ಪ್ರಸಿದ್ಧಳಾಗಿದ್ದಳು. `ಆಜ್ ಕಲ್ ತೇರೆ ಮೇರೆ ಪ್ಯಾರ್ ಕೀ ಚರ್ಚೆ…..’ ಹಾಡಿನಲ್ಲಿ ಅವಳುಟ್ಟಿದ್ದ ಸೀರೆಯ ಶೈಲಿ ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಹೊಳೆಯು ಚಮಕ್ ನ ಬಾರ್ಡರ್ ಹಾಗೂ ಕೂಲ್ ಡ್ರೇಪಿಂಗ್ ಸ್ಟೈಲ್, ರೆಟ್ರೋ ಲುಕ್ಸ್ ಗೆ ಹೆಚ್ಚಿನ ಬೇಡಿಕೆ ಇದೆ. ಇಂದಿನ ತರುಣಿಯರು ಈಗಲೂ ಇದನ್ನು ಫಾಲೋ ಮಾಡುತ್ತಾರೆ.
ದೀಪಿಕಾ, ಪ್ರಿಯಾಂಕರಂಥ ಎಷ್ಟೋ ತಾರೆಯರು ಈ ಅನೂಹ್ಯ ಸೀರೆ ಲುಕ್ ತಮ್ಮದಾಗಿಸಿಕೊಂಡಿದ್ದಾರೆ. ಶಿಫಾನ್ ಸೀರೆಯಲ್ಲಿ ಹೆವಿ ಬಾರ್ಡರ್ ಹಾಗೂ ಅಗಲದ ಬಾರ್ಡರ್ ನಲ್ಲಿ, ಶಿಮರ್ ಹೆವಿ ವರ್ಕ್ ನ ಈ ಸೀರೆಯನ್ನು ಎಲ್ಲಾ ಹಬ್ಬ, ಶುಭ ಸಮಾರಂಭಗಳಲ್ಲೂ ಉಡುತ್ತಾರೆ.
ಗುಜರಾತಿ ಸ್ಟೈಲ್
ಸೀರೆ ಈ ಶೈಲಿಯಲ್ಲಿ ಸೀರೆಯ ಸೆರಗು ಮುಂಭಾಗದಲ್ಲೇ ಇರುತ್ತದೆ. ದಕ್ಷಿಣದ ಮದುವೆಗಳಲ್ಲೂ ನವ ವಧು ಆರತಕ್ಷತೆಗೆ ಇಂಥ ಶೈಲಿಯನ್ನೇ ಹೆಚ್ಚು ಇಷ್ಟಪಡುತ್ತಾಳೆ. ನವರಾತ್ರಿಯ ಹಬ್ಬದಲ್ಲಿ ಗುಜರಾತ್ ನ `ಗರ್ಬಾ’ ಜಾನಪದ ನೃತ್ಯಕ್ಕೆ ಈ ಶೈಲಿ ಹೆಚ್ಚು ಜನಪ್ರಿಯ. ಏಕೆಂದರೆ ಈ ಶೈಲಿ ಹೆಚ್ಚು ಸಾಂಪ್ರದಾಯಿಕ ಎನಿಸುತ್ತದೆ. ಈ ಶೈಲಿಗಾಗಿ ಶಿಫಾನ್ ಜಾರ್ಜೆಟ್ ಫ್ಯಾಬ್ರಿಕ್ ಹೆಚ್ಚು ಸೂಕ್ತ.
ಸೀರೆಯ ಸೆರಗು ರಹಿತ ಭಾಗವನ್ನು ಬಲಭಾಗದಿಂದ ಟಕ್ ಮಾಡಿ, ಸೊಂಟದ ಮೂಲಕ ಹಾಯಿಸಿ, ಹಿಂಬದಿಗೆ ತನ್ನಿ. ಹೀಗೆ ಮಾಡಿದ ಮೇಲೆ ಪೂರ್ತಿ ಟಕ್ ಮಾಡಿ. ನಂತರ ಪೂರ್ತಿ ಸುತ್ತು ಬರಿಸಿ, ವಾಪಸ್ ಮುಂಭಾಗಕ್ಕೆ ತರಬೇಕು. ನಂತರ ಸೆರಗಿನಲ್ಲಿ ಪ್ಲೀಟ್ಸ್ ಮಾಡಿಸಿ. ಉದ್ದವನ್ನು ನಿಯಂತ್ರಿಸುತ್ತಾ ಹಿಂಬದಿಯಿಂದ ಸುತ್ತಿ ತಂದು ಬಲ ಭುಜದ ಬಳಿ ಪಿನ್ ಅಪ್ ಮಾಡಿ. ಅಗತ್ಯಕ್ಕೆ ತಕ್ಕಂತೆ ಸೀರೆಗೆ ಅಲ್ಲಲ್ಲಿ ಪಿನ್ಸ್ ಅಳವಡಿಸಿ, ಆಗ ಇದರ ಲುಕ್ಸ್ ಹೆಚ್ಚು ಆಕರ್ಷಕ ಎನಿಸುತ್ತದೆ.
ಪಲ್ಲೂ ಸೀರೆ
ಇದು ಬಲು ಅಪರೂಪದ ಶೈಲಿ, 90ರ ದಶಕದಲ್ಲಿ ಬಲು ಫೇಮಸ್. ಈ ಸ್ಟೈಲ್ ಇದೀಗ ಫ್ಯಾಷನ್ನಿಗೆ ಮರಳಿದೆ. ಬಹಳ ಬೋಹೋ ಪ್ರೇಮಿಗಳು ಇದನ್ನು ಸ್ಕಾರ್ಫ್ ತರಹ ಆಭರಣಗಳ ಜೊತೆ ಧರಿಸ ಬಯಸುತ್ತಾರೆ. ಇದು ರೆಟ್ರೋ ಫ್ಯಾಷನ್ನಿನ ಅದ್ಭುತ ಕೊಡುಗೆ. ಥೀಂ ಪಾರ್ಟಿಗಳಿಗೆ ಬಲು ಸೂಕ್ತ. ನೀವು ಮಾಡಬೇಕಾದುದಿಷ್ಟೆ, ನಿಮ್ಮ ಸೆರಗನ್ನು ಕುತ್ತಿಗೆಯ ಹಿಂಭಾಗದಿಂದ ಪೂರ್ತಿ ಮುಚ್ಚುವಂತೆ ಕವರ್ ಮಾಡಿ. ಇದಕ್ಕಾಗಿ ನಿಮ್ಮ ಸೀರೆಯ ಸೆರಗು ತುಸು ಹೆಚ್ಚೇ ಉದ್ದ ಇರಬೇಕು.
ಈ ರೀತಿ ಸ್ಕಾರ್ಫ್ ಸ್ಟೈಲ್ ಜೊತೆ ಬೇರೆ ಪ್ರಯೋಗಗಳನ್ನೂ ಮಾಡಬಹುದು.
– ಆಶಾ ಶರ್ಮ