ದೀಪ್ತಿ ಮತ್ತು ಮಹೇಶರ ಮದುವೆ ಆಗಿ ಆಗಲೇ 2 ವರ್ಷ ಕಳೆದಿತ್ತು. ಇಬ್ಬರಿಗೂ ಹೊಸ ವೈವಾಹಿಕ ಜೀವನ ಹೆಚ್ಚಿನ ಸಂತೋಷ ತಂದಿತ್ತು. ಹೀಗೆ ದಿನಗಳು ಜಾಲಿಯಾಗಿ ಕಳೆಯುತ್ತಿದ್ದಾಗ, ಮಹೇಶನಿಗೆ ಆಫೀಸ್‌ ವತಿಯಿಂದ ಕ್ಯಾಲಿಫೋರ್ನಿಯಾಗೆ 5 ವರ್ಷಗಳ ಕಾಲ ಹೋಗಬೇಕಾಯಿತು. ಈ ಬದಲಾವಣೆಯನ್ನು ಇಬ್ಬರೂ ಖುಷಿಖುಷಿಯಾಗಿ ಸ್ವಾಗತಿಸಿದರು. ಅಲ್ಲಿಂದ ಮುಂದೆ ವಿದೇಶಕ್ಕೆ ಹಾರಿ ಬಂದು ಹೊಸ ವಾಸ್ತವ್ಯ ಹೂಡಿದರು.

ಆರಂಭದಲ್ಲಿ ದೀಪ್ತಿಗೆ ಎಲ್ಲ ಬಹಳ ಚೆನ್ನಾಗಿದೆ ಎನಿಸಿತು. ಮನೆಯ ಎಲ್ಲಾ ಕೆಲಸವನ್ನೂ ಅವಳೊಬ್ಬಳೇ ನಿಭಾಯಿಸಬೇಕಿತ್ತು. ಭಾರತದ ಮಹಾನಗರಗಳಂತೆ ಅಲ್ಲೆಂದೂ ಮನಗೆಲಸಕ್ಕೆ ಆಳುಕಾಳು ಸಿಗುತ್ತಿರಲಿಲ್ಲ. ಇವರಿಬ್ಬರನ್ನೂ ಬಿಟ್ಟರೆ ಅಲ್ಲಿ ಮೂರನೆಯವರ  ಉಪಸ್ಥಿತಿಯೇ ಇರಲಿಲ್ಲ. ಬೆಳಗ್ಗೆ ಎದ್ದು ಇಬ್ಬರೂ ಲಾಂಗ್‌ ವಾಕ್‌ ಹೋಗುತ್ತಿದ್ದರು. ನಂತರ ಬಿಸಿ ಬಿಸಿ ಕಾಫಿ. ಮಹೇಶ್‌ ಸ್ನಾನ ಮಾಡಿ ಸಿದ್ಧನಾಗುವಷ್ಟರಲ್ಲಿ ಇವಳು ತಿಂಡಿ, ಮಧ್ಯಾಹ್ನದ ಊಟಕ್ಕೆ ಏನಾದರೂ ಬೇಗ ಬೇಗ ತಯಾರಿಸುತ್ತಿದ್ದಳು.

ಅವನಿಗೆ ಬೆಳಗಿನ ತಿಂಡಿ ಕೊಟ್ಟು, ಬಾಕ್ಸ್ ಪ್ಯಾಕ್‌ ಮಾಡಿ ಕಳುಹಿಸಿದರೆ ಆಯಿತು, ಇಡೀ ದಿನ ಅವಳಿಗೆ ಬಿಡುವೋ ಬಿಡುವು. ಮಹೇಶ್‌ ಹೊರಟ ಮೇಲೆ ಅಡುಗೆ ಮನೆಯ ಉಳಿದ ಕೆಲಸ, ವಾಷಿಂಗ್‌ ಮೆಶೀನ್‌, ಇಡೀ ಮನೆ ಗುಡಿಸಿ ಒರೆಸುವಷ್ಟರಲ್ಲಿ 10.30. ಸ್ನಾನ, ಪೂಜೆ ಮುಗಿಸಿ ಅವಳು ಉಪಾಹಾರ ಸೇವಿಸುವಷ್ಟರಲ್ಲಿ 11.30. ಇಡೀ ದಿನ ಎಷ್ಟು ಹೊತ್ತು ದಿನಪತ್ರಿಕೆ, ಟಿವಿ ನೋಡುತ್ತಾ ಕೂರುವುದು? ಮನೆ ಮುಂದಿನ ಪುಟ್ಟ ಲಾನ್‌, ಕೈತೋಟದ ಕೆಲಸ ಮುಗಿದ ಮೇಲೆ ಒಬ್ಬಳೇ ಹತ್ತಿರದ ಮಾರುಕಟ್ಟೆಗೆ ಹೋಗುತ್ತಿದ್ದಳು.

ಅಲ್ಲಿನ ಇಂಡಿಯನ್‌ ಸ್ಟೋರ್‌ ನಲ್ಲಿ ಮನೆಗೆ ಬೇಕಾದ ಸಾಮಗ್ರಿ, ತರಕಾರಿ, ಹಣ್ಣು ಕೊಂಡರೆ ಅದೂ ಮುಗಿಯುತ್ತಿತ್ತು. ಇದನ್ನೇ ನಿಯಮಬದ್ಧವಾಗಿ ಮಾಡಿ ಮಾಡಿ ಬೋರ್‌ ಹೊಡೆಯಿತು. ಸಂಜೆ ಹೊತ್ತು ದೂರದ ಪಾರ್ಕಿಗೆ ಹೋಗಿ ಒಂದಿಷ್ಟು ಟೈಂ ಪಾಸ್ ಮಾಡುವಳು. ಹುಡುಕಿಕೊಂಡು ಹೋಗಿ ಲೈಬ್ರೆರಿ, ಬ್ಯೂಟಿ ಪಾರ್ಲರ್‌ ಎಂದು ಸುತ್ತಾಡಿ ಬಂದರೂ ಟೈಂಪಾಸ್‌ ಆಗುವುದೇ ಕಷ್ಟವಾಯಿತು.

ಹೀಗೆ ಅವಳು ಹೊತ್ತು ಹೋಗಲು ವಾಟ್ಸ್ ಆ್ಯಪ್‌, ಫೇಸ್‌ ಬುಕ್‌ ಗಳ ಮೊರೆ ಹೋಗಿದ್ದಾಯಿತು. ಪ್ಯಾಂಟ್‌, ಸ್ಕರ್ಟ್‌, ಸ್ಲೀವ್‌ ಲೆಸ್‌ ಡ್ರೆಸ್‌ ಧರಿಸಿ ಬೇಕಾದಂತೆ ಸೆಲ್ಛಿ ಫೋಟೋ ಕ್ಲಿಕ್ಕಿಸಿ ಫೇಸ್‌ ಬುಕ್‌ ಗೆ ಅಪ್‌ ಲೋಡ್‌ ಮಾಡತೊಡಗಿದಳು. ಬೆಂಗಳೂರಿನ ಅವಳ ಗೆಳತಿಯರು, ಕಸಿನ್ಸ್ ಎಲ್ಲರೂ ಈ ರೀತಿ ಹೆಚ್ಚು ಟಚ್‌ ನಲ್ಲಿ ಇರತೊಡಗಿದರು. ಬೇಕಾದಷ್ಟು ಲೈಕ್ಸ್, ಕಮೆಂಟ್ಸ್ ಬರತೊಡಗಿದವು. ಆದರೆ ಎಂದಿನ ಅವಳ ಬೇಸರ ಮಾತ್ರ ನೀಗಲೇ ಇಲ್ಲ.

ಕೊನೆಗೆ ಅವಳು ತನ್ನ ಅಕ್ಕಪಕ್ಕದವರ ಮನೆಯ ಪರಿಚಯ, ಸ್ನೇಹ ಮಾಡಿಕೊಂಡಳು. ಶಾಪಿಂಗ್‌ ಗೆ ಹೋಗಿ ಬರಲು ತುಸು ಜೊತೆಯಾಯಿತು. ಹಾಗೆಯೇ ಇನ್ನಷ್ಟು ಭಾರತೀಯ ಮಿತ್ರರೂ ಸಿಕ್ಕರು. ಏನಾದರೇನು? ಮಧ್ಯಾಹ್ನ 2-3ಕ್ಕೆ ಮನೆಗೆ ಮರಳಿದ ಮೇಲೆ ಮತ್ತೆ ಅದೇ ಒಂಟಿತನ, ಬೇಸರ. ಯೂಟ್ಯೂಬ್‌ ನೋಡುತ್ತಾ ಹೊಸ ಹೊಸ ವ್ಯಂಜನ ತಯಾರಿಸಲು ಕಲಿತಳು. ಅವಳೇನು ಮಾಡಿಕೊಟ್ಟರೂ ಮಹೇಶನಿಗೆ ಪ್ರಿಯವೇ! ಕೆಲವು ದಿನಗಳಲ್ಲಿ ಅದೂ ಬೇಸರವಾಯಿತು.

ಈಗೀಗ ಅವಳಿಗೆ ತನ್ನ ಭಾರತದ ಬೆಂಗಳೂರು, ಸಾಗರದ ಹಳ್ಳಿ ನೆನಪಾಗತೊಡಗಿತು. ಸಾಗರದ ಹಳ್ಳಿಯಲ್ಲಿ ಕಲಿತ ಅವಳು ಶಿವಮೊಗ್ಗ ಸೇರಿ ಬಿ.ಎ. ಮುಗಿಸಿದ್ದಳು. ತನ್ನ ಆಂಗ್ಲ ಭಾಷೆ ಅಷ್ಟು ಪರಿಪಕ್ವವಲ್ಲ ಎಂಬ ಹಿಂಜರಿತಕ್ಕೆ ಅವಳೆಂದೂ ಕೆಲಸಕ್ಕೆ ಪ್ರಯತ್ನಿಸಿರಲಿಲ್ಲ. ಈಗಂತೂ ಮದುವೆಯಾಗಿ ಇಷ್ಟು ದೂರ ಬಂದಿದ್ದಾಯಿತು.

ಹ್ಞಾಂ, ಇಲ್ಲೇಕೆ ಹೊಸದಾಗಿ ಕೆಲಸಕ್ಕೆ ಪ್ರೆಯತ್ನಿಸಬಾರದು ಎನಿಸಿತು. ಅವಳು ವಾಂಟೆಡ್‌ ಕಾಲಂ, ಮತ್ತಿತರ ಮೂಲಗಳಿಂದ ಹುಡುಕಿ ಒಂದಷ್ಟು ಕಡೆ ಕ್ಲರ್ಕ್‌ ಹುದ್ದೆಗೆ ಅರ್ಜಿ ಗುಜರಾಯಿಸಿದ್ದಳು. ಆದರೆ ಅನುಭವ ಇಲ್ಲ ಎನ್ನುವ ಕಾರಣಕ್ಕೆ ಅವಳಿಗೆ ಎಲ್ಲಿಯೂ ಬೇಗ ಕೆಲಸ ಸಿಗುವ ಹಾಗಿರಲಿಲ್ಲ. ಆನ್‌ ಲೈನ್‌ ಚೆಕ್‌ ಮಾಡಿ ಅಲ್ಲಿಂದಲೂ ಪ್ರಯತ್ನಿಸಿದ್ದಾಯಿತು. ಆದರೆ ಎಲ್ಲೂ ಏನೂ ಗಿಟ್ಟಲಿಲ್ಲ. ಅವಳಿಗೀಗ ತಾನು ನಿರುದ್ಯೋಗಿ ಎಂಬ ಹೊಸ ಚಿಂತೆ ಶುರುವಾಯಿತು.

ಯಾವುದೋ ಸಣ್ಣಪುಟ್ಟ ಕಂಪನಿಗಳಲ್ಲಿ ಅವಳು ಡೇಟಾ ಎಂಟ್ರಿ ಕೆಲಸಕ್ಕೂ ಸಿದ್ಧಳಾದಳು. ಆದರೆ ಎಲ್ಲಿಯೂ ಪ್ರತಿಫಲ ಸಿಗಲಿಲ್ಲ. ಕೊನೆಗೆ ಒಂದು ಕಡೆ ಯಾವುದೋ ದೊಡ್ಡ ಗ್ರಾಸರಿ ಶಾಪ್‌ ನ ಬೇಕರಿಯಲ್ಲಿ ಹೆಲ್ಪರ್‌ ಬೇಕಿದ್ದಾರೆ ಎಂದಿತ್ತು. ಯಾವುದಾದರೇನು?  ಮುಖ್ಯ ಕೆಲಸಕ್ಕೆ ಹೋಗಬೇಕಷ್ಟೆ ಎಂದು ಹೊಸ ಹುಮ್ಮಸ್ಸಿನಿಂದ ಅವಳು ಅಲ್ಲಿಗೆ ಅರ್ಜಿ ಹಾಕಿದಳು. 2-3 ದಿನಗಳಲ್ಲೇ ಅವಳಿಗೆ ಸಂದರ್ಶನಕ್ಕೆ ಕರೆ ಬಂತು.

ಅವಳ ಇಂಗ್ಲಿಷ್‌ ಉಚ್ಚಾರಣೆ ಮೇಲ್ಮಟ್ಟದ್ದಾಗಿರಲಿಲ್ಲ. ಹೇಗೋ ಮ್ಯಾನೇಜ್‌ ಮಾಡುತ್ತಿದ್ದಳು. ಅಂತೂ ಸಂದರ್ಶನದಲ್ಲಿ ಅದೇನೂ ದೊಡ್ಡ ತೊಡಕಾಗಲಿಲ್ಲ. ಅವಳಿಗೆ ಅಲ್ಲಿ ಹೇಳುವುದಕ್ಕಿಂತ ಕೇಳಿಸಿಕೊಳ್ಳುವುದೇ ಮುಖ್ಯವಾಗಿತ್ತು.

ಬೇಕರಿಯ ಮ್ಯಾನೇಜರ್‌ ಹೇಳಿದ, “ನೀವು ನಾಳೆಯಿಂದ ಇಲ್ಲಿ ಕೆಲಸಕ್ಕೆ ಬರಬಹುದು. ಆದರೆ ನಮ್ಮಲ್ಲಿ ಒಂದು ನಿಯಮ ಉಂಟು. ನೀವು ಭಾರತೀಯರು ಬಹಳ ಸಂಪ್ರದಾಯಸ್ಥರು. ಈ ಕಿವಿಯ, ಮೂಗಿನ ಆಭರಣ, ಮತ್ತೆ ನೀವೇನಂತಿರಿ….. ಮಂಗಳಸೂತ್ರ, ಇದೆಲ್ಲ ತೆಗೆದಿರಿಸಿ ಬಂದು ಕೆಲಸ ಮಾಡಬೇಕು. ನಿಮಗೆ ಒಪ್ಪಿಗೆ ಇದ್ದರೆ ನಾಳೆಯಿಂದ ಬನ್ನಿ.”

ದೀಪ್ತಿಗೆ ಇದು ಬಹಳ ವಿಚಿತ್ರ ಎನಿಸಿತು. ಬೇಕರಿಯ ಶುದ್ಧತೆಗೂ ತಾನು ಒಡವೆ, ಮಂಗಳಸೂತ್ರ ಧರಿಸುವುದಕ್ಕೂ ಏನು ಸಂಬಂಧ? ಬೇರೆ ಧರ್ಮದ ಜನರ ಸಂಸ್ಕೃತಿ ಅರ್ಥ ಮಾಡಿಕೊಳ್ಳುವವರಾಗಿದ್ದರೆ. ಈ ಜನ ಹೀಗೆಲ್ಲ ಮಾತನಾಡುತ್ತಿರಲಿಲ್ಲ ಎನಿಸಿತ್ತು. ಪರಧರ್ಮ ಸಹಿಷ್ಣುತೆಯನ್ನು ಭಾರತದಿಂದ ಇವರು ಕಲಿಯಬೇಕು ಅನಿಸಿತು. ಈ ಕೆಲಸಕ್ಕೆ ಹೋಗಲೋ ಬೇಡವೋ…… ಅವಳು ಚಿಂತೆಗೆ ಬಿದ್ದಳು.

ಮಹೇಶನನ್ನು ಆ ಬಗ್ಗೆ ವಿಚಾರಿಸಿದಾಗ, “ಇದರಲ್ಲಿ ನಿನಗೆ ಹೇಗೆ ಸರಿ ಅನಿಸುತ್ತೋ ಹಾಗೆ ಮಾಡು. ನನಗಂತೂ ಯಾವ ಅಭ್ಯಂತರವಿಲ್ಲ. ಇಲ್ಲಿ ನಿನ್ನ ಆಕ್ಷೇಪಿಸುವವರು ಬೇರೆ ಯಾರೂ ಇಲ್ಲ. ಬೇಕು ಅನಿಸಿದರೆ ಮಾತ್ರ ಹೋಗು. ಆದರೆ ನಾನು ರಾತ್ರಿ 9 ಗಂಟೆಗೆ ಮನೆಗೆ ಮರಳುವಷ್ಟರಲ್ಲಿ ನೀನು ಮನೆಯಲ್ಲಿರಬೇಕು ಎಂಬುದನ್ನು ಮರೆಯಬೇಡ,” ಎಂದು ಹೇಳಿದ.

ದೀಪ್ತಿ ಒಲ್ಲದ ಮನದಿಂದಲೇ ಅಲ್ಲಿ ಕೆಲಸಕ್ಕೆ ಸೇರಿದಳು. ಮೂಗು, ಕಿವಿಯ ಆಭರಣ ತೆಗೆದು, ಕಿವಿಗೆ ಪ್ಲಾಸ್ಟಿಕ್‌ ರಿಂಗ್‌ ಹಾಕಿದಳು. ಆದರೆ ಮಾಂಗಲ್ಯ ಸರ ತೆಗೆಯಲು ಮನಸ್ಸು ಬರಲಿಲ್ಲ. ಹೀಗಾಗಿ ಮೇಲಿನ ಟಾಪ್‌ ಬಟನ್‌ ಕುತ್ತಿಗೆಯನ್ನು ಪೂರ್ತಿ ಕವರ್‌ ಮಾಡುಂತೆ ಡ್ರೆಸ್‌ ಮಾಡಿಕೊಂಡು ಹೊರಟಳು. ಬೇಕರಿಗೆ ಬಂದ ನಂತರ ನಿಯಮದಂತೆ ಏಪ್ರನ್‌ ಧರಿಸಿ ಹಿಂಬದಿ ಗಂಟು ಹಾಕಿಕೊಂಡಳು.

ಮ್ಯಾನೇಜರ್‌ ಕೇಳಿದ, “ಹಿಂದೆ ಬೇರೆಲ್ಲಾದರೂ ಬೇಕರಿ ಕೆಲಸ ಮಾಡಿದ್ದೀರಾ?”

“ಇಲ್ಲ, ಆದರೆ ಯಾವ ಕೆಲಸವೇ ಇರಲಿ ಬೇಗ ಕಲಿಯಬಲ್ಲೇ ಎಂಬ ಆತ್ಮವಿಶ್ವಾಸ ನನಗಿದೆ. ನೀವು 1 ತಿಂಗಳು ನೋಡಿ. ಸರಿಹೋಗದಿದ್ದರೆ ನಾನು ಮುಂದುವರಿಯಲ್ಲ.”

ಮ್ಯಾನೇಜರ್‌ ನಗುತ್ತಾ, “ಆಯ್ತು, ಪ್ರತಿಯೊಂದು ಕೆಲಸವನ್ನೂ ಗಮನಿಸಿಕೊಳ್ಳಿ. ಯಾರಿಗೆ ಯಾವ ಸಹಾಯ ಬೇಕಾದರೂ ನೀವು ಅವರಿಗೆ ಅಸಿಸ್ಟ್ ಮಾಡಬೇಕು. ಮುಖ್ಯವಾಗಿ ಎಲ್ಲಾ ಸೆಕ್ಷನ್‌ ಗಳಿಂದ ಪಾತ್ರೆ, ಪ್ಲೇಟ್‌, ಟ್ರೇ ತಂದು ಬೆಳಗುತ್ತಿರಬೇಕು.”

ದೀಪ್ತಿ ಹಿಟ್ಟು ನಾದುವ ಸೆಕ್ಷನ್‌ ನೋಡಿದಳು. ಅಲ್ಲಿ ತೊಳೆಯಲೆಂದು ಹಲವು ಟ್ರೇಗಳನ್ನು ಮೂಲೆಗೆ ಒತ್ತರಿಸಿ ಇಟ್ಟಿದ್ದರು. ಇದೆಂಥ ಕರ್ಮ ಎಂದು ಅವನ್ನೆಲ್ಲ ವಾಷ್‌ ರೂಮಿಗೆ ಸಾಗಿಸಿ ಒಂದೊಂದಾಗಿ ತೊಳೆಯ ತೊಡಗಿದಳು. ಎಲ್ಲಾ ಸೆಕ್ಷನ್‌ ಗಳ ಟ್ರೇ, ಪಾತ್ರೆ ತೊಳೆಯುವಷ್ಟರಲ್ಲಿ ಮಧ್ಯಾಹ್ನ ಆಯಿತು.

ಮಧ್ಯಾಹ್ನದ ಲಂಚ್‌ ನಂತರ ಅವಳು ಬಿಡುವಾಗಿ ಕುಳಿತಿರುವುದನ್ನು ಗಮನಿಸಿ ಮ್ಯಾನೇಜರ್‌ ಬಂದು, “ಹೊರಗಿನ ಶಾಪ್ ಸೆಕ್ಷನ್ನಿಗೆ ಬನ್ನಿ. ಅಲ್ಲಿ ಎಲ್ಲಾ ವೆರೈಟಿ ಬಿಸ್ಕೆಟ್‌, ಕೇಕ್‌, ಚಾಕಲೇಟ್‌ ತೆಗೆದು ಡಿಸ್‌ ಪ್ಲೇಗೆ ಜೋಡಿಸಬೇಕು. ಅಲ್ಲಿನ ಎಲ್ಲಾ ಗ್ಲಾಸ್‌ ರಾಕ್‌ ನೀಟಾಗಿ ಒರೆಸಿಕೊಂಡು ಆಮೇಲೆ ಇನ್ನು ಜೋಡಿಸಬೇಕು.” ಕ್ಲೀನಿಂಗ್‌ ಗೆ ಅಗತ್ಯ ಸಾಮಗ್ರಿಯನ್ನು ಅವಳು ಸ್ಟೋರ್‌ ರೂಮಿಗೆ ಹೋಗಿ ತರಬೇಕಾಯಿತು.

4 ಗಂಟೆ ಹೊತ್ತಿಗೆ ಎಲ್ಲವನ್ನೂ ನೀಟಾಗಿ ಶುಚಿಗೊಳಿಸಿ ಬೇಕರಿ ಸಾಮಗ್ರಿ ಪೂರ್ತಿ ಜೋಡಿಸಿದ್ದಾಯಿತು. ಯಾಕೋ ಈ ಕೆಲಸ ತನ್ನಂಥವಳಿಗೆ ಅಲ್ಲ ಎನಿಸಿತು. ಆದರೆ ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ಬಂದಿದ್ದವಳಿಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಇದನ್ನೇ ಅಲ್ಲವೇ ತಾನು ಅಪೇಕ್ಷಿಸಿದ್ದು ಎಂದು ಸಮಾಧಾನ ಪಟ್ಟುಕೊಂಡಳು.

ಹೇಗೋ ಏನೋ ಒಂದು ವಾರದಲ್ಲಿ ಅವಳು ಈ ಕೆಲಸಕ್ಕೆ ಕ್ರಮೇಣ ಹೊಂದಿಕೊಂಡಳು. ಬೇಕರಿಯ ಕೆಲಸವಾದ್ದರಿಂದ ಅಲ್ಲಿಗೆ ಬಂದು ಹೋಗುವವರು ಹೆಚ್ಚು. ಹೀಗಾಗಿ ಆ ವಿಶಾಲ ನಗರದ ಎಲ್ಲಾ ಅಂಗಡಿಯ ವಿವರಗಳು, ಹೊರಗಿನ ಮಾಹಿತಿ ಇವಳಿಗೆ ಸ್ಪಷ್ಟ ತಿಳಿಯುತ್ತಿತ್ತು. ಬೇಕರಿಯ ಒಳಗಿನ ಒಳಗುಟ್ಟುಗಳೂ ಈಗ ಸ್ಪಷ್ಟವಾಗತೊಡಗಿತು. ಆದರೆ ಬೇಕರಿಯಲ್ಲಿ ಹೀಗೆ ಒಬ್ಬ ಯಃಕಶ್ಚಿತ್ ಹೆಲ್ಪರ್‌ ಆಗಿ ಕೆಲಸ ಮಾಡಬೇಕಾದ ಕರ್ಮ ತನಗೇನಿದೆ ಎಂದು ಅವಳಿಗೆ ಅನಿಸತೊಡಗಿತು. ಇಂಥ ಕೆಳದರ್ಜೆ ಕೆಲಸ ತಾನು ಮಾಡಲೇಬೇಕೇ ಎಂದು ಯೋಚಿಸಲಾರಂಭಿಸಿದಳು.

ತವರಿನಲ್ಲಿದ್ದಾಗಲೂ ಅವಳೆಂದೂ ಮನೆಗೆಲಸ ಮಾಡಿದವಳೇ ಅಲ್ಲ. ಅಮ್ಮ, ಅಜ್ಜಿ, ಅಕ್ಕಂದಿರು ಎಲ್ಲಾ ಸಂಭಾಳಿಸುತ್ತಿದ್ದರು. ಶಾಲೆ ನಂತರ ಕಾಲೇಜಿಗೆ ಸೇರಿದಾಗಲೂ ತಾನು ತನ್ನ ಪಾಠಪ್ರವಚನ, ಗೆಳತಿಯರು, ಆಟೋಟ ಎಂದು ಇದ್ದುಬಿಟ್ಟಿದ್ದಳು. ಮದುವೆಯಾಗಿ ಬೆಂಗಳೂರಿಗೆ ಬಂದಾಗಲೂ ಅಡುಗೆ ಕೆಲಸದ ಕಡೆ ಗಮನಕೊಟ್ಟಿದ್ದಳೇ ಹೊರತು ಪಾತ್ರೆ ತೊಳಿ, ಮನೆ ಕ್ಲೀನ್ ಮಾಡು ಎಂದೂ ಮಾಡಿದವಳಲ್ಲ. ಅದಕ್ಕೆಲ್ಲ ಕೆಲಸದವರಿದ್ದರು.

ಇಲ್ಲಿ ಅಂಗಡಿಯ ಪ್ಲೇಟ್‌, ಟ್ರೇ, ಪಾತ್ರೆಗಳನ್ನು ತೊಳೆಯಬೇಕಾದ ಕರ್ಮ ಬಂತಲ್ಲ ಎನಿಸಿತು. ಈ ಲಕ್ಷಣಕ್ಕೆ ತಾನು ಡಿಗ್ರಿ ಕಲಿಯಬೇಕಿತ್ತೇ ಎನಿಸದಿರಲಿಲ್ಲ. ತಾನು ಕೆಲಸಕ್ಕೆ ಸೇರಿರುವುದಾಗಿ ತವರು, ಅತ್ತೆಮನೆಯಲ್ಲಿ ಹೇಳಿಕೊಂಡಿದ್ದಳೇ ಹೊರತು ಇಂಥ ತೊಳೆಯುವ ಕೆಲಸ ಎಂದು ಹೇಳಿರಲಿಲ್ಲ. ದೊಡ್ಡ ಬೇಕರಿಯಲ್ಲಿ ಸೇಲ್ಸ್ ಗರ್ಲ್ ಎಂದಷ್ಟೇ ಅವರಿಗೆಲ್ಲ ತಿಳಿಸಿದ್ದಳು. ಇದೆಂಥ ಘನಂದಾರಿ ಕೆಲಸ, ಮರ್ಯಾದೆ ತಂದುಕೊಡುವಂಥದ್ದಲ್ಲ ಎಂದು ಹೆಲ್ಪರ್‌ ಕೆಲಸದ ಬಗ್ಗೆ ವಿವರಿಸಲಿಲ್ಲ. ಅಸಲಿಗೆ ಮಹೇಶನಿಗೂ ತಾನು ಸೇಲ್ಸ್ ಅಷ್ಟೇ ಗಮನಿಸುತ್ತೇನೆ ಎಂದು ಹೇಳಿಕೊಂಡಿದ್ದಳು. ಗೊತ್ತಾದರೆ ಅವನು ಕೆಲಸ ಬಿಡಿಸಿದರೆ ಎಂಬ ಅಂಜಿಕೆ.

ಈ ನೌಕರಿಯ ಅನುಭವದಿಂದ ತಾನು ದೊಡ್ಡದಾಗಿ ಕಲಿಯುವಂಥದ್ದೇನೂ ಇಲ್ಲ ಎಂಬುದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ದೊಡ್ಡ ಮೊತ್ತದ ಸಂಬಳದ ಕೆಲಸವೇನಲ್ಲ. ತನಗೆ ಮನೆಗೆ ಹತ್ತಿರವಿದೆ, ಮುಖ್ಯವಾಗಿ ಹೊತ್ತು ಹೋಗಬೇಕು ಎಂದು ಬರುತ್ತಿದ್ದಳಷ್ಟೆ. ಅಮೆರಿಕಾದಲ್ಲಿ ಭಾರತೀಯರು ನೌಕರಿಯಲ್ಲಿದ್ದಾರೆ ಎಂದರೆ ಅದು ಉನ್ನತ ಮಟ್ಟದ್ದೇ ಆಗಿರುತ್ತಿತ್ತು. ತಾನು ಆಫ್ಟ್ರಾಲ್ ಒಬ್ಬ ಹೆಲ್ಪರ್ ಆಗಿ ಅದನ್ನು ಏನೆಂದು ಪರಿಚಿತರ ಬಳಿ ಹೇಳಿಕೊಳ್ಳುವುದು? ಯಾರಿಗೂ ಹೇಳದಿರುವುದರಲ್ಲಿಯೇ ತನ್ನ ಮರ್ಯಾದೆ ಅಡಗಿದೆ ಎಂದು ಭಾವಿಸಿದಳು.

ಏನು ಮಾಡಲಿಕ್ಕಾಗುತ್ತೆ? ಎಲ್ಲರಿಗೂ ಪಲ್ಲಕ್ಕಿಯಲ್ಲಿ ಕೂರುವ ಆಸೆ. ಆದರೆ ಅದನ್ನು ಹೊರಲಿಕ್ಕೂ ಜನ ಬೇಕಲ್ಲ? ಹಾಗಾಗಿತ್ತು ಅವಳ ಪರಿಸ್ಥಿತಿ. ಇದರಲ್ಲಿ ಒಂದು ಸಮಾಧಾನಕರ ಅಂಶವೆಂದರೆ ಅವಳು ಗ್ರಾಹಕರಿಗೆ ಬೇಕರಿ ಪ್ರಾಡಕ್ಟ್ಸ್ ನ್ನು ಸ್ಯಾಂಪಲ್ ಟೇಸ್ಟಿಂಗ್‌ ಗೆ ಕೊಟ್ಟು ಅವರ ಅಭಿಪ್ರಾಯ ಪಡೆಯಬೇಕಿತ್ತು. ಹೊಗಳಿದರೆ ಓಕೆ., ಆದರೆ ಅವರದೇನಾದರೂ ಆಕ್ಷೇಪಣೆ ಇದ್ದರೆ ಮರೆಯದೆ ಅದನ್ನು ರೆಜಿಸ್ಟರ್‌ ನಲ್ಲಿ ನಮೂದಿಸಿ, ಸಂಬಂಧಿಸಿದ ಸೆಕ್ಷನ್‌ ಗೆ ತಿಳಿಸಿ ಆ ಸುಧಾರಣೆ ಮಾಡಿಸಬೇಕಿತ್ತು. ಜೊತೆಗೆ ಬ್ರೆಡ್‌, ಬಿಸ್ಕತ್‌, ಕುಕೀಸ್ ಇತ್ಯಾದಿಗಳನ್ನು ಎಣಿಸಿ ಡಬ್ಬಗಳಲ್ಲಿ ತುಂಬಿಸಿ ಇರಿಸಬೇಕಿತ್ತು.

ಬಿಸ್ಕತ್ತು ಎಣಿಸಿ ಇಡುವಾಗ ಕೆಲವೊಂದು ಮುರಿದು ಇದ್ದುದರಿಂದ ಅವನ್ನು ಸಿಬ್ಬಂದಿಗೆ ಉಚಿತವಾಗಿ ಹಂಚಿಬಿಡುತ್ತಿದ್ದರು. ನಿಧಾನವಾಗಿ ಅವಳಿಗೆ ತಿಳಿದ ವಿಷಯವೆಂದರೆ ಸಿಬ್ಬಂದಿ ನಡುವೆ ನಡೆಯುವ ರಾಜಕೀಯ ಪೈಪೋಟಿ. ಇಂಥ ಕ್ಷುಲ್ಲಕ ರಾಜಕೀಯ, ಪರಸ್ಪರ ಆಡಿಕೊಳ್ಳುವುದು ಎಲ್ಲಾ ಕಡೆ ಇದ್ದದ್ದೇ ಎಂದುಕೊಂಡಳು.

ಸಾಮಾನ್ಯವಾಗಿ ಅಲ್ಲಿನ ಬೇಕರಿಗಳಲ್ಲಿ ಕೆಲಸ ಮಾಡುತ್ತಿದ್ದವರು ಮೆಕ್ಸಿಕನ್‌ ಆಗಿದ್ದರು. ಅವರು ಕೇವಲ ಸ್ಪ್ಯಾನಿಶ್‌ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಅವರ ಇಂಗ್ಲಿಷ್‌ ಬಲು ಕೆಟ್ಟದಾಗಿತ್ತು. ಹೀಗಾಗಿ ಆ ಜನರೊಡನೆ ಹೆಚ್ಚು ಮಾತನಾಡಬೇಕಾದ ಪ್ರಮೇಯವೇ ಅವಳಿಗಿರಲಿಲ್ಲ.

ಮಧ್ಯಾಹ್ನದ ವೇಳೆ ಅವಳು ಡಬ್ಬಗಳಿಗೆ ಕೇಕ್‌, ಬಿಸ್ಕತ್ತು ತುಂಬಿಸುವ ಪ್ಯಾಕಿಂಗ್‌ ಕೆಲಸ ಮಾಡುತ್ತಿದ್ದಳು. ಇದು ಅವಳ ಇಷ್ಟದ ಕೆಲಸ. ಆದರೆ ಪಾತ್ರೆ, ಪ್ಲೇಟ್‌, ಟ್ರೇ ತೊಳೆಯುವುದೆಂದರೆ ಅವಳಿಗೆ ಬಲು ಬೇಸರ. ಮನೆಯಲ್ಲೇ ಇಂಥ ಕೆಲಸ ಮಾಡದವಳು ಇಲ್ಲಿ ಬಂದು ಇದನ್ನು ಮಾಡಬೇಕೇ ಎಂದು ನೊಂದುಕೊಳ್ಳುತ್ತಿದ್ದಳು.

ಒಂದು ಸಲ ಅಲ್ಲಿನ ಒಬ್ಬ ವಯಸ್ಸಾದ ಮಹಿಳೆ ಇವಳಿಗೆ ಬೇಕರಿ ಪೂರ್ತಿ ಗುಡಿಸಬೇಕು, ಆ ವ್ಯಕ್ತಿ ಬಂದಿಲ್ಲ ಎಂದು ಹೇಳಿದಳು. ವಿಷಯ ಅರ್ಥವಾಗಿದ್ದರೂ ಅವಳ ಮಾತು ತನಗೆ ತಿಳಿಯಲೇ ಇಲ್ಲ ಎಂಬಂತೆ ತನ್ನ ಕೆಲಸ ಮಾಡಿಕೊಂಡು ಇದ್ದುಬಿಟ್ಟಳು. ಆದರೆ ಆ ಮಹಿಳೆ ಅವಳನ್ನು ಬಿಟ್ಟು ಹೋದರೆ ತಾನೇ? ಪಿಶಾಚಿಯಂತೆ ಬೆನ್ನಿಗೇ ಬಿದ್ದಿದ್ದಳು. ಆಕೆ ಮತ್ತೆ ಮತ್ತೆ ಪೀಡಿಸಿದಾಗ, ಆದದ್ದಾಗಲಿ ಎಂದು, “ದಿಸ್‌ ಈಸ್‌ ನಾಟ್‌ ಮೈ ಜಾಬ್‌!” ಎಂದು ರಬಡಿಸಿದಳು.

ಇದನ್ನು ಕೇಳಿಸಿಕೊಂಡ ಆಕೆ ತಕ್ಷಣ ಮ್ಯಾನೇಜರ್‌ ಬಳಿ ಹೋಗಿ ದೂರು ಕೊಟ್ಟಳು. ಏನಾದರಾಗಲಿ, ಕೆಲಸ ಬಿಟ್ಟು ಹೋಗು ಅಂತಾರೆ, ಅಷ್ಟೇ ತಾನೇ ಎಂದು ಸುಮ್ಮನಾದಳು. ಆದರೆ ಮ್ಯಾನೇಜರ್‌ ತಕ್ಷಣ ಏನೂ ಹೇಳಲಿಲ್ಲ. ನಂತರ ಇದನ್ನು ಯಾರು ಮಾಡಿದರೋ ತಿಳಿಯಲಿಲ್ಲ.

ಸಂಜೆ ಅವಳು ಉಳಿದ ಟ್ರೇಗಳನ್ನು ತೊಳೆಯುತ್ತಿದ್ದಾಗ, ಒಬ್ಬ ಭಾರತೀಯ ಮೂಲದ ಮಹಿಳೆ ಏನೋ ಬೇಕೆಂದು ಬೇಕರಿಗೆ ಬಂದಳು, ಇಲ್ಲಿ ಭಾರತೀಯಳಿರುವಳು ಎಂದು ಹುಡುಕುತ್ತಾ ಒಳಗೇ ಬಂದುಬಿಟ್ಟಿದ್ದಳು. ಆಕೆ ದೆಹಲಿ ಮೂಲದವಳು. ಹೀಗಾಗಿ ಹರಕಲು ಆಂಗ್ಲ ಭಾಷೆ ಮಧ್ಯೆ ಹಿಂದಿ ಬೆರೆಸುತ್ತಾ ಇವಳನ್ನು ಮಾತಿಗೆಳೆದಳು.

ಯಾರಾದರೂ ಭಾರತೀಯರು ಎದುರಾದರೆ ಅವಳಿಗೆ ಬಹಳ ಧರ್ಮಸಂಕಟ ಎನಿಸುತ್ತಿತ್ತು. ತಾನು ಈ ಹೆಲ್ಪರ್‌ ಸ್ಥಿತಿಯಲ್ಲಿರುವುದನ್ನು ನೋಡಿ ಅವರು ಯಾರು ಯಾರೊಂದಿಗೆ ಏನೇನು ಹೇಳಿಕೊಂಡು ನಗುತ್ತಾರೋ ಎಂಬುದೇ ದೊಡ್ಡ ಸಮಸ್ಯೆ ಆಗಿತ್ತು. ಹೀಗಾಗಿ ಈಕೆ ಬಂದು ಮಾತಿಗೆಳೆದಾಗ ದೀಪ್ತಿ ನೇರ ಮಾತನಾಡಲು ಹಿಂಜರಿದಳು. ಆಕೆ ಗಿಳಿಪಾಠ ಒಪ್ಪಿಸುವಂತೆ ಹಠಕ್ಕೆ ಬಿದ್ದು `ಎಕ್ಸ್ ಕ್ಯೂಸ್‌ ಮಿ’ ಎಂದು ಕರೆಯುತ್ತಲೇ ಇದ್ದಳು. ಆಗ ಅದನ್ನು ಗಮನಿಸಿದ ಮ್ಯಾನೇಜರ್‌, “ಅಲ್ಲಿ ಹೋಗಿ ನೋಡಿ, ಕಸ್ಟಮರ್‌ ಏನೋ ಕೇಳುತ್ತಿದ್ದಾರೆ. ಅವರು ನಿಮ್ಮ ಭಾರತೀಯರೆಂದೇ ಕಾಣುತ್ತಿದ್ದಾರೆ,” ಎಂದು ಹೇಳಿದ.

ಬೇರೆ ದಾರಿ ಇಲ್ಲದೆ ದೀಪ್ತಿ ಕೌಂಟರ್‌ ಬಳಿ ಬಂದು ಆ ಪ್ರೌಢ ಮಹಿಳೆಯನ್ನು ಮಾತನಾಡಿಸಲೇಬೇಕಾಯಿತು. ಆಕೆ ಕೇಕು, ಬಿಸ್ಕತ್ತಿನ ಬೆಲೆ ವಿಚಾರಿಸುತ್ತಾ, ನೀವು ಎಲ್ಲಿಯವರು? ಯಾವಾಗ ಇಲ್ಲಿಗೆ ಬಂದಿರಿ? ಏನು ಮಾಡಿಕೊಂಡಿದ್ದೀರಿ? ನಿಮ್ಮವರು ಎಲ್ಲಿ ಕೆಲಸದಲ್ಲಿದ್ದಾರೆ…. ಎಂದು ಪ್ರಶ್ನೆಗಳ ಮಳೆಗರೆದಳು. ವಿಧಿಯಿಲ್ಲದೆ ದೀಪ್ತಿ ಆಕೆಯ ಒಂದೊಂದೇ ಪ್ರಶ್ನೆಗಳನ್ನು ಉತ್ತರಿಸಬೇಕಾಯಿತು, ಇದೂ ಅವಳ ಕೆಲಸದ ಒಂದು ಭಾಗ ಎಂಬಂತೆ! ದೀಪ್ತಿಯ ಒತ್ತಾಯದ ಮೇರೆಗೆ ಆ ಮಹಾತಾಯಿ ಒಂದಿಷ್ಟು ಸ್ಯಾಂಪಲ್ ಟೇಸ್ಟ್ ನೋಡಿ, ಏನನ್ನೂ ಖರೀದಿಸದೆ ಇನ್ನೊಮ್ಮೆ ಬರುವುದಾಗಿ ಹೊರಟೇಹೋದರು. ಭಾರತೀಯರು ಹೀಗೆ ತನ್ನನ್ನು ಭೇಟಿ ಆದಾಗೆಲ್ಲ, ಅವರ ಮುಂದೆ ಪರಾಜಿತಳಾದಂತೆ ದೀಪ್ತಿ ಅವಮಾನ ಅನುಭವಿಸುತ್ತಿದ್ದಳು. ಹೀಗಾಗಿಯೇ ಅವಳು ಅವರ ಮುಂದೆ ಬರಲು ಹಿಂಜರಿಯುತ್ತಿದ್ದಳು.

ಆ ಜಂಜಾಟದಿಂದ ಹೊರಬಂದು 2 ನಿಮಿಷ ಆಗಿರಲಿಲ್ಲ, ಆಗ ಬೇಕರಿಯ ಮುಖ್ಯ ವಿಭಾಗಕ್ಕೆ ಯಾರದೋ ಗ್ರಾಹಕರ ಕರೆ ಬಂತು. ಸೇಲ್ಸ್ ಪ್ರಶ್ನೆಗಳಿಗೆ ಅವಳೇ ಉತ್ತರಿಸುತ್ತಿದ್ದಳು. ಹೀಗಾಗಿ ಈ ಕರೆಯನ್ನೂ ಸ್ವೀಕರಿಸಿ, “ಗುಡ್‌ ಈವ್ನಿಂಗ್‌….. ಹೌ ಕ್ಯಾನ್‌ ಐ ಹೆಲ್ಪ್ ಯೂ?” ಎಂದಳು. ಯಾರೋ ವೃದ್ಧ ಮಹಿಳೆ ಕೇಕಿನ ಆರ್ಡರ್‌ ನೀಡಲೆಂದು ಫೋನ್‌ ಮಾಡಿದ್ದರು. ಅವರಿಗೆ ಸಮಾಧಾನ ಆಗುವಂತೆ ದೀಪ್ತಿ ಉತ್ತರಿಸುವಷ್ಟರಲ್ಲಿ ಇವಳ ಮಾತು ಗ್ರಹಿಸಲಾರದ ಆಕೆ, “ಕ್ಯಾನ್‌ ಯೂ ಗಿವ್ ‌ದಿ ಫೋನ್‌ ಟು ಸಮ್ ಬಡಿ ಹೂ ಕ್ಯಾನ್‌ ಸ್ಪೀಕ್‌ ಇನ್‌ ಇಂಗ್ಲಿಷ್‌?” ಎಂದುಬಿಡುವುದೇ? ದೀಪ್ತಿ ಅಂತೂ ಅವಮಾನದಿಂದ ಧರೆಗಿಳಿದಳು. ಇದರ ಅರ್ಥವೇನು? ತನಗೆ ಇಂಗ್ಲಿಷ್‌ ಗೊತ್ತಿಲ್ಲ ಅಂತ ತಾನೇ? ಇದುವರೆಗೂ ತಾನು ಆಕೆಯ ಜೊತೆ ಇಂಗ್ಲಿಷ್‌ ನಲ್ಲಿ ತಾನೇ ಮಾತನಾಡಿದ್ದು? ಆಂಗ್ಲ ಭಾಷೆಯ ಕಾರಣ ಅವಳಿಗಂತೂ ಇಷ್ಟು ಅವಮಾನ ಎಂದೂ ಆಗಿರಲಿಲ್ಲ. ತಾನು ಇಷ್ಟು ವಿನಮ್ರಳಾಗಿ ಆಕೆಗೆ ವಿಷಯ ತಿಳಿಸಿದ್ದರೂ, `ಮೇಡಂ ಮೇಡಂ’ ಎಂದು ತನ್ನೊಂದಿಗೆ ಮಾತು ಆರಂಭಿಸಿದ ಆಕೆ ಮೂಲತಃ ಇಂಗ್ಲಿಷ್‌ ನವರಲ್ಲ ಎಂಬುದು 2 ಕ್ಷಣಗಳಲ್ಲಿ ದೀಪ್ತಿಗೆ ತಿಳಿದುಹೋಗಿತ್ತು. ಅವಳಿಗೆ ಅಸಾಧ್ಯ ಸಿಟ್ಟು ಬಂದಿತ್ತು. ಅಲ್ಲೇ ಇದ್ದ ಬೇಕರಿ ಮ್ಯಾನೇಜರ್‌ ರಾಬರ್ಟ್‌ ಕೈಗೆ ರಿಸೀವರ್‌ ಕೊಡುತ್ತಾ, “ಐ ಆ್ಯಮ್ ನಾಟ್‌ ವರ್ಕಿಂಗ್‌ ಹಿಯರ್‌ ಎನಿ ಮೋರ್‌!” ಎಂದು ದಾಪುಗಾಲು ಹಾಕುತ್ತಾ ಧಡಧಡ ಅಲ್ಲಿಂದ ನಡೆದುಹೋದಳು.

ತನ್ನ ಜಾಗಕ್ಕೆ ಹೋಗಿ ಏಪ್ರನ್‌ ಕಳಚಿ ಎದುರಿನ ಗೂಟಕ್ಕೆ ನೇತುಹಾಕಿ, ತನ್ನ ಹ್ಯಾಂಡ್‌ ಬ್ಯಾಗ್‌ ಹಿಡಿದು 6 ಗಂಟೆಗೆ ಮೊದಲೇ ಅಲ್ಲಿಂದ ಹೊರಟೇಬಿಟ್ಟಳು. ಅವಳು ಅಲ್ಲಿಂದ ಬೇಗ ಹೊರಡದಿದ್ದರೆ ಅವಳ ಕಣ್ಣೀರು ಹೊರಗೆ ತುಳುಕಲಿತ್ತು.

ಮನೆಗೆ ಬಂದವಳೇ ದೀಪ್ತಿ ಬಿಕ್ಕಿ ಬಿಕ್ಕಿ ಅತ್ತೇಬಿಟ್ಟಳು. ತಿಂಗಳು ಪೂರ್ತಿ ಆಗುವುದಕ್ಕೆ ಮೊದಲೇ ತನ್ನ ಕೆಲಸದ ಗತಿ ಹೀಗಾಗಬೇಕೇ ಎನಿಸಿ ದುಃಖ ಉಕ್ಕಿತು. ಮಹೇಶ್‌ ಬಂದ ಮೇಲೆ ಅವನನ್ನು ಕಂಡು ಅವಳ ದುಃಖ ಇನ್ನೂ ಹೆಚ್ಚಿತು. ಅವನ ಎದೆಗಪ್ಪಿ ಬಿಕ್ಕಿ ಬಿಕ್ಕಿ ಅತ್ತಳು. ಊರಲ್ಲಿ ಯಾರಿಗೆ ಏನಾಯ್ತೋ…… ಯಾವ ಫೋನ್‌ ಕಾಲ್ ‌ಬಂತೋ ಎಂದು ಅವನು ಹೆದರಿದ.

ಅವಳು ಅದೇನೂ ಅಲ್ಲ ಎಂದು ನಡೆದ ಕಥೆ, ತನ್ನ ಹೀನಾಯ ನೌಕರಿ ಬಗ್ಗೆ ಹೇಳಿಕೊಂಡು ಸಂಕಟ ಹಂಚಿಕೊಂಡಳು. ತನ್ನ ಹೃದಯ ಈಗ ಹಗುರವಾದಂತೆ ಗಂಡನ ಹೆಗಲ ಮೇಲೆ ತಲೆ ಇರಿಸಿ ಇನ್ನಷ್ಟು ಬಿಕ್ಕಿದಳು.“ಓ…. ಇಷ್ಟಕ್ಕೆ ನೀನು ಹೆದರಿ ಹೀಗೆ ಅತ್ತುಕೊಳ್ಳುವುದೇ? ಮೊದಲು ನಿನಗೆ ಪೂರ್ತಿ ಒಪ್ಪಿಗೆ ಅಂದ ಮೇಲೆಯೇ ಕೆಲಸಕ್ಕೆ ಹೋಗು ಎಂದಿದ್ದೆ. ನಮ್ಮ ದೇಶದಲ್ಲಿ ನಮ್ಮ ಭಾಷೆಯನ್ನು ನಾವೇ ಅನಾದರಿಸುತ್ತೇವೆ. ಆದರೆ ಇಲ್ಲಿ ಹಾಗಲ್ಲ, ತಮ್ಮ ಇಂಗ್ಲಿಷ್‌ ನ್ನು ಸರಿಯಾಗಿ ಉಚ್ಚರಿಸಲಿ, ತಮಗೆ ಪೂರ್ತಿ ಕನ್ವೆನ್ಸಿಂಗ್‌ ಆಗಿರಲಿ ಎಂದು ಬಯಸುತ್ತಾರೆ.

“ಬಹುಶಃ ಆಕೆಗೆ ನೀನು ಹೇಳಿದ್ದು ಸರಿಯಾಗಿ ಕೇಳಿಸಲಿಲ್ಲವೋ ಅಥವಾ ನಿನ್ನ ಉಚ್ಚಾರಣೆ ಸರಿಯಾಗಿ ಗ್ರಹಿಸಲಿಲ್ಲವೋ ಏನೋ…. ಅದಕ್ಕೆ ಹಾಗೆ ಹೇಳಿದ್ದಾರೆ. ಎಲ್ಲರಿಗೂ ಒಂದೇ ತರಹ ಸಹನೆ ಇರೋಲ್ಲ. ಹೇಗೂ ತಾನು ದುಡ್ಡು ಕೊಡುವ ಗ್ರಾಹಕಳಾದ್ದರಿಂದ ತನ್ನ ಮಾತೇ ನಡೆಯಲಿ ಎಂದು ಆಕೆ ದಬಾಯಿಸಿರಬೇಕು.

“ಇದನ್ನು ಪಾಸಿಟಿವ್ ‌ಆಗಿ ತೆಗೆದುಕೊಳ್ಳಬೇಕೇ ಹೊರತು ಇಷ್ಟೊಂದು ಅಪ್‌ ಸೆಟ್‌ ಆಗಬೇಡ ದೀಪ್ತಿ. ಪ್ರಯತ್ನಪಟ್ಟು ನೀನು ನಿನ್ನ ಕರ್ತವ್ಯ ಮಾಡಿದ್ದೀಯ. ಅದೇ ಪ್ರಯತ್ನವನ್ನು ಮುಂದುರಿಸುವ. ಹೀಗೆ ಕ್ರಮೇಣ ಈ ವಿದೇಶದಲ್ಲಿ ಹತ್ತಾರು ಜನರ ಜೊತೆ ಬೆರೆತು ಮಾತನಾಡುತ್ತಿದ್ದರೆ ನಿನ್ನ ಆಂಗ್ಲ ಭಾಷೆ ತಂತಾನೇ ಸುಧಾರಿಸುತ್ತದೆ. ಮುಂದೆ ಒಂದು ದಿನ ನೀನೇ ಅವರನ್ನು ದಬಾಯಿಸಿ ಸರಿ ದಾರಿಗೆ ತರಬಹುದು.

“ನಿನ್ನ ನಿಷ್ಠೆಯೇ ನಿನ್ನನ್ನು ಕಾಪಾಡುತ್ತದೆ. ನಮ್ಮ ದೇಶದಲ್ಲಿ ನಾವು ಎಲ್ಲವನ್ನೂ ಡಿಗ್ನಿಟಿ ಆಫ್‌ ಲೇಬರ್‌! ಎಂದೇ ನೋಡುತ್ತೇವೆ. ಈ ಕೆಲಸ ಹೆಚ್ಚುಗಾರಿಕೆಯದು, ಇದು ಕೀಳ್ಮಟ್ಟದ ಹೀನಾಯದ ಕೆಲಸ ಅಂತ….. ಖಂಡಿತಾ ಇಲ್ಲಿ ಯಾರೂ ನಿನ್ನ ಕೆಲಸವನ್ನು ಕೀಳು ಎಂದು ಪರಿಗಣಿಸುವುದಿಲ್ಲ. ಇಲ್ಲಿ ಕಾಲೇಜಿನಲ್ಲಿ ಓದುವ ಎಷ್ಟು ಜನ ಹುಡುಗ ಹುಡುಗಿಯರು ಸಂಜೆ ಬಾರ್‌ ನಲ್ಲಿ ರಾತ್ರಿ 12 ಗಂಟೆವರೆಗೂ ಅಟೆಂಡರ್‌ ಕೆಲಸ ಮಾಡುತ್ತಾರೆ ಗೊತ್ತೇ? ಯಾರೂ ಅದನ್ನು ಕೀಳು ಎಂದು ಭಾವಿಸುವುದಿಲ್ಲ. ನಿನ್ನ ಹಠವೇ ನಿನಗೆ ಯಶಸ್ಸು ತಂದುಕೊಡಲಿದೆ,” ಎಂದಾಗ ಅವಳಿಗೆ ಎಷ್ಟೋ ಸಮಾಧಾನವಾಯಿತು.

ಗಂಡನ ಮಾತು ಅವಳ ಆತ್ಮವಿಶ್ವಾಸ ಹೆಚ್ಚಿಸಿತು. ಮಾರನೇ ದಿನ ಎಂದಿನಂತೆ ಬೇಕರಿಗೆ ಹೋಗಿ ಏಪ್ರನ್‌ ಧರಿಸಿ ಅವಳು ತನ್ನ ಕೆಲಸದಲ್ಲಿ ಎಂದಿನಂತೆ ತಲ್ಲೀನಳಾದಳು. ಯಾರೂ ಅವಳನ್ನು ಏನೊಂದೂ ಅಂದು ಆಡಿಕೊಳ್ಳಲಿಲ್ಲ. ಏನೂ ನಡೆದೇ ಇಲ್ಲ ಎಂಬಂತೆ ಕೆಲಸ ಮುಂದುವರಿಯಿತು. ಅವಳಿಗೆ ಈಗ ಸಂಪೂರ್ಣ ನಿಶ್ಚಿಂತೆ ಎನಿಸಿತು. ನಾವು ಮಾಡುವ ಕೆಲಸವನ್ನು ನಾವು ಪ್ರೀತಿಸಬೇಕು, ನಾವೇ ಅದನ್ನು ಕೀಳಾಗಿ ಭಾವಿಸಿದರೆ ಬೇರೆಯವರು ಆಡಿಕೊಳ್ಳಲು ಅವಕಾಶವಾಗುತ್ತದೆ ಎಂದು ಅರಿತು, ತನ್ನ ಕೆಲಸದಲ್ಲಿ ಹೆಚ್ಚಿನ ಶ್ರದ್ಧೆ ತೋರಿಸುತ್ತಾ ಎಲ್ಲಾ ಕಾಲ್ಸ್ ಸಲೀಸಾಗಿ ಅಟೆಂಡ್‌ ಮಾಡಿದಳು. ಅವಳ ಮುಖದಲ್ಲಿ ಮತ್ತೆ ಮಂದಹಾಸ ಮೂಡಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ