ರೂಪಾ ವಾರ್ಡ್ ರೋಬ್ ತೆರೆದು ಚಿಂತಿಸುತ್ತಾ ನಿಂತಿದ್ದಳು. ಅವಳು ಮರುದಿನ ನ್ಯೂ ಇಯರ್ ಪಾರ್ಟಿಗಾಗಿ ತನ್ನ ಗೆಳತಿಯ ಮನೆಗೆ ಹೋಗುವವಳಿದ್ದಳು. ಆದರೆ ಅವಳಿಗೆ ಯಾವ ಡ್ರೆಸ್ ಧರಿಸಲಿ ಎಂದು ತಿಳಿಯಲಿಲ್ಲ. ಚಳಿಗಾಲವಾದ್ದರಿಂದ ಸ್ಲೀವ್ ಲೆಸ್ ಧರಿಸಲಾಗದು. ಮತ್ಯಾವುದು ಎಂದು ಯೋಚಿಸುತ್ತಿದ್ದರೆ, ಆಗ ಅಲ್ಲಿಗೆ ಬಂದ ರಾಹುಲ್ ಅವಳನ್ನು ಅಣಕಿಸಿದ, “ಬೀರುವಿನ ತುಂಬ ಬಟ್ಟೆ ಇಟ್ಟುಕೊಂಡಿದ್ದೀಯಾ ಬಿಡು, ನಿನಗೆ ಸದಾ ಇದೇ ಸಮಸ್ಯೆ.”
ರೋಹಿಣಿಯದೂ ಕೊಂಚ ಇಂತಹದೇ ಪರಿಸ್ಥಿತಿ. ಅವಳ ಮನೆಯವರು ಅವಳನ್ನು ರೇಗಿಸುವುದೇನೆಂದರೆ, ಮನೆಯವರೆಲ್ಲ ಅವಳ ಬಟ್ಟೆಗಳ ಮೇಲೆ ಮಲಗುತ್ತಾರೆ ಎಂದು. ಆದರೆ ಮನೆಯಲ್ಲಿನ ಬಾಕ್ಸ್ ವುಳ್ಳ ಮಂಚಗಳಿಲ್ಲ ಅವಳ ಬಟ್ಟೆಗಳೇ ತುಂಬಿವೆ.
ಸೀಮಾ ತನ್ನ ಅಣ್ಣ ಏರ್ಪಡಿಸಿದ್ದ ನ್ಯೂ ಇಯರ್ ಪಾರ್ಟಿಗಾಗಿ ಒನ್ ಪೀಸ್ ಡ್ರೆಸ್ ಆಯ್ಕೆ ಮಾಡಿಕೊಂಡಳು. ತಾನು ಇತರರಿಗಿಂತ ವಿಶೇಷವಾಗಿ ಕಾಣುವೆನೆಂದು ಅವಳು ಭಾವಿಸಿದರೆ, ಪಾಪ ಎಲ್ಲರ ಹಾಸ್ಯಕ್ಕೆ ಗುರಿಯಾದಳು. ಅದೇ ರೇಷ್ಮಾ, ಹಳೆಯ ಬನಾರಸ್‌ಸೀರೆಯಿಂದ ಒಂದು ನವೀನ ಮಾದರಿಯ ಚೂಡಿದಾರ್ ಹೊಲಿಸಿಕೊಂಡಳು. ಇದರಿಂದ ಹಳೇ ಸೀರೆ ಮರುಬಳಕೆಗೆ ಬಂದಿತು ಮತ್ತು ಒಂದು ಹೊಸ ಡ್ರೆಸ್ ದೊರೆತಂತಾಯಿತು.
ಮಹಿಳೆಯರಿಗೆ ಬಟ್ಟೆ ಕೊಳ್ಳುವುದೆಂದರೆ ಬಲು ಆಸಕ್ತಿ. ಇದರಿಂದ ಅವರ ವಾರ್ಡ್ ರೋಬ್ ನಲ್ಲಿ ಅದೆಷ್ಟು ಬಟ್ಟೆಗಳು ತುಂಬಿಕೊಳ್ಳುವುದೆಂದರೆ ಅವುಗಳಲ್ಲಿ ಶೇ.60 ರಷ್ಟು ಉಡುಪುಗಳು ಮಾತ್ರ ಉಪಯೋಗಿಸಲ್ಪಟ್ಟಿರುತ್ತವೆ. ಆಗ ಅವರಿಗೆ ಬಟ್ಟೆ ಕೊಳ್ಳುವ ಮುನ್ನ ಯೋಚಿಸಬೇಕಾಗಿತ್ತು ಅನ್ನಿಸುತ್ತದೆ.
ಬುದ್ಧಿವಂತಿಕೆಯಿಂದ ಶಾಪಿಂಗ್ ಮಾಡಿ ಮಹಿಳೆಯರು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಶಾಪಿಂಗ್ ಮಾಡಿದರೆ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.
ನೀವು ಗೃಹಿಣಿಯಾಗಿರಲಿ ಅಥವಾ ಉದ್ಯೋಗಸ್ಥೆಯಾಗಿರಲಿ ವೆಸ್ಟರ್ನ್ ಡ್ರೆಸ್ ಧರಿಸಲು ಇಷ್ಟಪಡುವಿರಾದರೆ, ನಿಮ್ಮ ವಾರ್ಡ್ ರೋಬ್ ನಲ್ಲಿ ಒಂದು ಬ್ಲೂ ಜೀನ್ಸ್, ವೈಟ್ ಶರ್ಟ್ ಮತ್ತು ಬ್ಲ್ಯಾಕ್ ಟೀ ಶರ್ಟ್ ನ್ನು ಅವಶ್ಯವಾಗಿ ಇರಿಸಿಕೊಂಡಿರಿ. ಜೀನ್ಸ್ ಕೊಳ್ಳುವಾಗ ಫ್ಯಾಷನ್ ಬದಲು ನಿಮ್ಮ ವಯಸ್ಸು ಮತ್ತು ಮೈಕಟ್ಟನ್ನು ಗಮನದಲ್ಲಿರಿಸಿಕೊಳ್ಳಿ.
ನಿಮಗೆ ಶರ್ಟ್ ಮತ್ತು ಟೀ ಶರ್ಟ್ ಇಷ್ಟವಿಲ್ಲದಿದ್ದರೆ ಒಂದು ಬಿಳಿ ಮತ್ತು ಒಂದು ಕಪ್ಪು ಬಣ್ಣದ ಕುರ್ತಾಗಳನ್ನು ಇರಿಸಿಕೊಳ್ಳಿ. ಅವುಗಳನ್ನು ನೀವು ಯಾವುದೇ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಧರಿಸಬಹುದು. ಈ ಬಣ್ಣಗಳು ಶೇ.98 ಮಹಿಳೆಯರಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ.
ಜೀನ್ಸ್ ಗೆ ಕೊಂಚ ಎಥ್ನಿಕ್ ಲುಕ್ ನೀಡಲು ಬಯಸಿದರೆ, ಒಂದು ಸ್ಟೋಲ್ ನ್ನು ಇರಿಸಿಕೊಳ್ಳಿ. ಇದನ್ನೂ ಕುರ್ತಾ ಮತ್ತು ಸ್ಕರ್ಟ್ ಗಳ ಜೊತೆಗೆ ಬಳಸಬಹುದು.

ನಿಮ್ಮ ವಾರ್ಡ್ ರೋಬ್ ನಲ್ಲಿ ಹತ್ತಾರು ಅಗ್ಗವಾದ ಸ್ಟೋಲ್ ಗಳನ್ನು ಇರಿಸಿಕೊಳ್ಳುವ ಬದಲು ಕೆಲವು ಒಳ್ಳೆಯ ಬೆಲೆ ಬಾಳುವ ಸ್ಟೋಲ್ ಅಥವಾ ದುಪಟ್ಟಾಗಳನ್ನು ಇರಿಸಿಕೊಂಡರೆ ಯಾವುದೇ ಕಾರ್ಯಕ್ರಮಕ್ಕೂ ಬಳಸಬಹುದು.
ಒನ್ ಪೀಸ್ ಡ್ರೆಸ್ ಎಲ್ಲ ಮಹಿಳೆಯರಿಗೂ ಹೊಂದುವುದಿಲ್ಲ. ನಿಮ್ಮದು ಸಪೂರವಾದ ಮೈಕಟ್ಟಾದರೆ ಲಾಂಗ್ ಒನ್ ಪೀಸ್ ಕೊಳ್ಳಬಹುದು. ಅದರೊಂದಿಗೆ ಲಾಂಗ್ ಡ್ಯಾಂಗ್ಲರ್ಸ್ ಇದ್ದರೆ ನಿಮಗೆ ಕ್ಲಾಸಿಕಲ್ ಲುಕ್ ಜೊತೆಗೆ ಸೆಕ್ಸೀ ಲುಕ್ ಸಹ ಸಿಗುತ್ತದೆ. ಈ ಡ್ರೆಸ್ ಹಾಕಿಕೊಂಡಾಗ ನಿಮ್ಮ ಮೈಮಾಟದತ್ತ ಎಲ್ಲರ ಗಮನವಿರುತ್ತದೆ. ನಿಮಗೆ ಬೊಜ್ಜು ಇದ್ದರೆ ಅದು ಎದ್ದು ಕಾಣುತ್ತದೆ. ಆದ್ದರಿಂದ ಹಾಗಿರುವಾಗ ಇಂತಹ ಡ್ರೆಸ್‌ಕೊಳ್ಳಲೇಬೇಡಿ.
ಸೇಲ್ ಇದೆಯೆಂದು ಹೋಗಿ ಬೇಕಿಲ್ಲದ ಬಟ್ಟೆಯನ್ನೂ, ಇರಲಿ ಹಾಕಿಕೊಳ್ಳೋಣ ಎಂದು ಕೊಳ್ಳಬೇಡಿ. ಏಕೆಂದರೆ ಆ ಡ್ರೆಸ್ ಬಳಕೆಯಾಗದೆ ವಾರ್ಡ್ ರೋಬಿನಲ್ಲೇ ಉಳಿದುಬಿಡುತ್ತದೆ.
ಇಂದು ಶಾರ್ಟ್ಸ್ ಮತ್ತು ಸ್ಕರ್ಟ್ ಫ್ಯಾಷನ್ ನಲ್ಲಿದೆ. ಆದರೆ ನಿಮ್ಮ ತೊಡೆಗಳು ದಪ್ಪಗಿದ್ದರೆ ಅವನ್ನು ಧರಿಸಬೇಡಿ.
ಯಾವುದೇ ಕಾಟನ್ ಡ್ರೆಸ್ ಟ್ರೆಂಡ್ ನಲ್ಲಿದೆ ಎಂದು ಕೊಳ್ಳಬೇಡಿ. ಕೊಳ್ಳುವ ಮೊದಲು ನಿಮ್ಮ ವಯಸ್ಸು ಮತ್ತು ಫಿಗರ್ ಬಗ್ಗೆ ಗಮನವಿರಲಿ.
ಇಂಡಿಯನ್ ಡ್ರೆಸ್ ಕುರಿತ ಮುಖ್ಯ ವಿಷಯ ನೀವು ಯಾವುದೇ ವಯಸ್ಸಿನರಾಗಿರಿ, ಒಂದು ಶಿಫಾನ್ ಸೀರೆ ನಿಮ್ಮಲ್ಲಿರಲಿ. ಬಿಸಿಲಿರುವಾಗ ನೀವು ಅದನ್ನು ಆರಾಮವಾಗಿ ಉಡಬಹುದು.
ಆರ್ಟಿಫಿಶಿಯಲ್ ಸಿಲ್ಕ್ ಗಿಂತ ಫ್ಯೂರ್ ಸಿಲ್ಕ್ ಸೀರೆ ಉತ್ತಮ. ಅದು ತಾಜಾತನದ ಜೊತೆಗೆ ಕ್ಲಾಸಿಕ್ ಲುಕ್ ನ್ನೂ ನೀಡುತ್ತದೆ.
ಮೈಸೂರು ಸಿಲ್ಕ್, ಕಾಂಜೀವರಂ ಸಿಲ್ಕ್, ಪೋಚಂಪಲ್ಲಿ, ಬೆನಾರಸ್ ಸಿಲ್ಕ್, ಚಂದೇರಿ ಸಿಲ್ಕ್, ಪೈಠಣಿ ಸಿಲ್ಕ್, ಮಣಿಪುರಿ ಸಿಲ್ಕ್, ಕಲಂಕಾರೀ ಮುಂತಾದ ಸೀರೆಗಳು ನಿಮ್ಮಲ್ಲಿರಬೇಕು.
ನಿಮ್ಮ ಬ್ಲೌಸ್ ಸಂಗ್ರಹದಲ್ಲೂ ಒಂದು ಗೋಲ್ಡನ್, ಸಿಲ್ವರ್, ಕಪ್ಪು ಮತ್ತು ಕೆಂಪು ಬಣ್ಣದ ಬ್ರೊಕೇಡ್, ಕಲಂಕಾರಿ ಪ್ರಿಂಟ್, ಗುಜರಾತಿ ಮಿರರ್ ವರ್ಕ್ ಇವುಗಳು ಇರಲಿ. ಇವುಗಳನ್ನು ನೀವು ಯಾವುದೇ ಸೀರೆಯೊಂದಿಗೆ ಧರಿಸಬಹುದು.
ಇವನ್ನು ಸೂಟ್ ವಿಷಯಕ್ಕೆ ಬರೋಣ. ಈಚಿನ ದಿನಗಳಲ್ಲಿ ಸಲ್ವಾರ್ ಕಮೀಜ್ ನೊಂದಿಗೆ ಪೈಜಾಮ ಕುರ್ತಾ, ಅನಾರ್ಕಲೀ, ಪ್ಲಾಜೋ ಸೂಟ್ ಮುಂತಾದವು ಟ್ರೆಂಡ್ ನಲ್ಲಿವೆ.
ನಿಮಗೆ ಪ್ಲಾಜೋ ಸೂಟ್ ಮೆಚ್ಚುಗೆಯಾಗಿದ್ದರೆ ಒಂದು ಕಪ್ಪು ಮತ್ತು ಒಂದು ಕಂದು ಬಣ್ಣದ ಪ್ಲಾಜೋ ಕೊಳ್ಳಿರಿ. ಇದು ಬೇಸಿಗೆಯಲ್ಲಿ ಉತ್ತಮವಾಗಿರುತ್ತದೆ ಮತ್ತು ಫ್ಯೂಷನ್ ಲುಕ್ ನೀಡುತ್ತದೆ.
1 ಅಥವಾ 2 ಪ್ಲೇನ್ ಸಿಲ್ಕ್ನ ಪ್ಯಾಂಟ್ ಸೂಟ್ ಅಥವಾ ಪೈಜಾಮ ಕುರ್ತಾ ನಿಮ್ಮ ಕಲೆಕ್ಷನ್ ನಲ್ಲಿ ಇರಿಸಿಕೊಳ್ಳಿ.
ಅನಾರ್ಕಲೀ ಸೂಟ್ ಎಲ್ಲ ಬಗೆಯ ಮೈಕಟ್ಟಿಗೂ ಒಪ್ಪುತ್ತದೆ. ಕಪ್ಪು ಬಣ್ಣದ ಅನಾರ್ಕಲೀ ಸೂಟ್ ಸ್ಲಿಮ್ ಲುಕ್ ಒದಗಿಸುತ್ತದೆ.
ನಿಮ್ಮ ತೋಳುಗಳು ದಪ್ಪಗಿದ್ದರೆ ಸ್ಲೀವ್ ಲೆಸ್ ಡ್ರೆಸ್ ಧರಿಸಬೇಡಿ, ಚೆನ್ನಾಗಿ ಕಾಣುವುದಿಲ್ಲ.
ದುಪ್ಪಟ್ಟಾದೊಂದಿಗೆ ಕುರ್ತಾ ಧರಿಸಿ ಯಾವುದೇ ಚಿಕ್ಕಪುಟ್ಟ ಕಾರ್ಯಕ್ರಮದಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು.
ಉಡುಪುಗಳ ರಕ್ಷಣೆ
ನೀವು ಯಾವುದಾದರೂ ಬಟ್ಟೆಯನ್ನು ಒಂದು ವರ್ಷ ಕಾಲ ಬಳಸಿಲ್ಲದಿದ್ದರೆ ಅಗತ್ಯವಿರುವವರಿಗೆ ನೀಡಿ. ಹೊಸ ವರ್ಷದಲ್ಲಿ ಅನಗತ್ಯ ಬಟ್ಟೆಗಳು ದೂರವಾಗಲಿ.
ಬಟ್ಟೆಯು ಯಾವುದಾದರೂ ನೆನಪಿನೊಂದಿಗೆ ಸೇರಿದ್ದು, ನಿಮಗೆ ಅದನ್ನು ಬೇರೆಯವರಿಗೆ ಕೊಡಲು ಇಷ್ಟವಿಲ್ಲದಿದ್ದರೆ ಅದನ್ನು ಕುಶನ್ ಕವರ್ ಅಥವಾ ಬ್ಲಾಂಕೆಟ್ ಕವರ್ ಮಾಡಬಹುದು.
ಅಂತಹ ಸೀರೆಯಿಂದ ಕರ್ಟನ್ ಮಾಡಬಹುದು.
ಹಳೆಯ ಗಟ್ಟಿಯಾಗಿರುವ ಬಟ್ಟೆಯನ್ನು ಚೀಲವಾಗಿ ಮಾರ್ಪಡಿಸಬಹುದು.
ಹಳೆಯ ಸ್ವೆಟರ್, ಶಾಲುಗಳನ್ನು ಬಳಸದೆ ಇಡುವ ಬದಲು ಅಗತ್ಯವಿರುವವರಿಗೆ ನೀಡಿ ನಿಮ್ಮ ವಾರ್ಡ್ ರೋಬ್ ನಲ್ಲಿ ಗಾಳಿಯಾಡಲು ಸ್ಥಳಾವಕಾಶವಾಗುತ್ತದೆ.
ಹಳೆಯ ಆಕರ್ಷಕ ಬಣ್ಣದ ಗಟ್ಟಿ ಬಟ್ಟೆಗಳಿಂದ ಹೊದಿಕೆ ಮಾಡಿಕೊಳ್ಳಬಹುದು.
– ವಿ. ಋತ್ವಿಕಾ





