2 ವಾರಗಳಿಂದ ಗೀತಾ ಹಲ್ಲು ನೋವಿನಿಂದ ಹೈರಾಣಾಗಿದ್ದಳು ಅಂತೂ ಜೀವನದಲ್ಲಿ ಮೊದಲ ಸಲ ಡೆಂಟಿಸ್ಟ್ ಬಳಿ ಹೋಗುವ ಕರ್ಮ ಬಂದಿತು. ವಿಧಿಯಿಲ್ಲದೆ ತನ್ನನ್ನು ಹಳಿದುಕೊಳ್ಳುತ್ತಾ, ಕ್ಲಿನಿಕ್ ಪ್ರವೇಶಿಸಿದ ಗೀತಾ, ಟೋಕನ್ ಪಡೆದು ತನ್ನ ಸರದಿಗಾಗಿ ಕಾಯತೊಡಗಿದಳು. ಅಲ್ಲಿ ಡಾಕ್ಟರ್ ಹೆಸರನ್ನು ನೋಡಿ ದಂಗಾದಳು! ಚಂದ್ರ ಮೋಹನ್ ಎಂದು ಫೋಟೋ ಸಹ ಇತ್ತು. ಈ ಫಾರಿನ್ ರಿಟರ್ನ್ಡ್ ಡಾಕ್ಟರ್ ತಾನು ಹೈಸ್ಕೂಲಲ್ಲಿ ಓದುತ್ತಿದ್ದಾಗಿನ ಸಹಪಾಠಿ ಚಂದ್ರು ಎಂದು ಗೊತ್ತಾಯಿತು.
ಎಲ್ಲರಿಗಿಂತ ಸ್ಮಾರ್ಟ್ ಆಗಿದ್ದ ಆ ಚಂದ್ರುವನ್ನು ಗೀತಾ ಮನದಲ್ಲೇ ಮೆಚ್ಚಿಕೊಂಡಿದ್ದು, ಹೇಳಲಾರದೇ ಹೋಗಿದ್ದಳು. ಆ ಪ್ರೇಮ ಪುಳಕದಲ್ಲಿ ಮೈ ಮರೆತಿದ್ದವಳಿಗೆ, ಡಾಕ್ಟರ್ ಕರೆದು ಪರೀಕ್ಷಿಸಿ, ಚಿಕಿತ್ಸೆ ಮುಗಿಸುವವರೆಗೂ, ಪ್ರೇಮಲೋಕದಲ್ಲೇ ತೇಲುತ್ತಿದ್ದುದರಿಂದ ನೋವೇ ಗೊತ್ತಾಗಲಿಲ್ಲ.
ಫೀಸ್ ನೀಡಿ ಹೊರಡುವಾಗ, ಡಾಕ್ಟರ್ ಚಂದ್ರ ಮೋಹನ್ ಅದೇ ಕಳೆ ಉಳಿಸಿಕೊಂಡಿದ್ದರೂ ಈಗ ಬಾಲ್ಡಿ ಆಗಿ ದಪ್ಪಗಾಗಿ, ಸೋಡಾಬುಡ್ಡಿ ಏರಿಸಿದ್ದ.
“ನೀವು ಗೋವರ್ಧನ್ ದಾಸ್ ಸ್ಕೂಲಲ್ಲಿ ಹೈಸ್ಕೂಲ್ ಪಾಸ್ ಮಾಡಿದ್ದಲ್ಲವೇ?” ಗೀತಾ ಕೇಳಿದಳು.
“ಹೌದು. ನಿಮಗೆ ಹೇಗೆ ಗೊತ್ತಾಯ್ತು?” ಡಾಕ್ಟರ್ ಕೇಳಿದರು.
“ಹೌದೇ…. 1976 ಅಥವಾ 1977, 10ನೇ ತರಗತಿ ಪಾಸ್ ಅಲ್ಲವೇ?”
“ಹೌದು, 1976! ಹೇಗೆ ಹೇಳಿದಿರಿ?”
“ನೀನು ನನ್ನ ಕ್ಲಾಸಿನಲ್ಲೇ ಇದ್ದದ್ದು!”
“ಹೌದಾ ಮೇಡಂ? ಯಾವಾಗ ರಿಟೈರ್ ಆದಿರಿ? ನನಗೆ ಯಾವ ಸಬ್ಜೆಕ್ಟ್ ಟೀಚ್ ಮಾಡ್ತಿದ್ರಿ?”
ರತ್ನಾ ದೂರದ ಏರಿಯಾದಲ್ಲಿದ್ದ ಮೆಕ್ಯಾನಿಕ್ ಮಂಜನಿಗೆ ಫೋನ್ ಮಾಡಿದಳು, “ನೋಡಪ್ಪ, ಇಲ್ಲಿ ಹಂಸಾ ಕಾಲೋನಿಯ ದುರ್ಗಾ ಅಪಾರ್ಟ್ ಮೆಂಟ್ಸ್ ಗೆ 11 ಗಂಟೆ ನಂತರ ಬಾ. ನಮ್ಮ ಫ್ಯಾನ್ ಮತ್ತು ಟಿವಿ ಕೆಟ್ಟಿದೆ. ಅದನ್ನು ಪೂರ್ತಿ ರಿಪೇರಿ ಮಾಡಬೇಕು. ನಮ್ಮದು 8ನೇ ಮಹಡಿ. ಬಾಗಿಲ ಬಳಿ ಶೂ ಸ್ಟಾಂಡ್ ಇದೆ. ಅದರ ಕೆಳಗೆ ಕಿತ್ತುಹೋದ ಶೂನಲ್ಲಿ ಮನೆ ಕೀ ಇಟ್ಟಿರುತ್ತೇವೆ. ಬೇರೆ ಕೋಣೆ ಲಾಕ್‌ಆಗಿರುತ್ತೆ. ಹಾಲ್ ಮಾತ್ರ ತೆರೆದು ನಿನ್ನ ರಿಪೇರಿ ಕೆಲಸ ಮುಗಿಸಿ ತೆಪ್ಪಗೆ ಹೊರಟುಬಿಡು. ಈಗ 500/ ರೂ. ಅಡ್ವಾನ್ಸ್ ಟ್ರಾನ್ಸ್ ಫರ್ ಮಾಡ್ತೀನಿ. ಸಂಜೆ ಬಂದು ನೋಡಿದ ತಕ್ಷಣ ಉಳಿದ ಹಣ ಕಳುಹಿಸ್ತೀನಿ. ಸರಿ ತಾನೇ?
“ಹ್ಞಾಂ, ಹಾಲ್ ನಲ್ಲಿ ಒಂದು ದೈತ್ಯ ನಾಯಿ ಇರುತ್ತೆ. ಅದು ನಿನ್ನನ್ನು ಏನೂ ಮಾಡೋಲ್ಲ, ನಿನ್ನ ಪಾಲಿಗೆ ನಿನ್ನ ಕೆಲಸ ಮಾಡಿಕೊ. ಮೂಲೆಯಲ್ಲಿ ಗಿಣಿ ಒಂದು ಪಂಜರದಲ್ಲಿ ಇರುತ್ತೆ. ಅದಕ್ಕೆ ಬಾಯಿ ಜಾಸ್ತಿ. ಅದು ನಿನ್ನನ್ನು ಏನೇ ಅಂದು ಆಡಿಕೊಂಡರೂ ತೆಪ್ಪಗಿರು. ಅದರ ಸಹವಾಸಕ್ಕೆ ಹೋದೆಯೋ ನಡೆಯುವ ಕಥೆಯೇ ಬೇರೆ…. ಎಲ್ಲಾ ಅರ್ಥವಾಯ್ತಾ?”
“ಎಲ್ಲ ತಿಳಿಯಿತು ಬಿಡಿ,” ಎಂದ ಮಂಜ. ರತ್ನಾ ಹೇಳಿದಂತೆಯೇ 10 ಗಂಟೆಗೆ ಆಫೀಸಿಗೆ ಹೊರಟಳು.
ಮಂಜ 11 ಗಂಟೆಗೆ ಬಂದು ಬಾಗಿಲು ತೆರೆದು ತನ್ನ ಕೆಲಸ ಶುರು ಮಾಡಲು ನೋಡಿದ. ದೈತ್ಯಾಕಾರದ ನಾಯಿ ಇವನ ಕಡೆ ಒಮ್ಮೆ ನೋಡಿ ತನ್ನ ಗೊರಕೆ ಮುಂದುವರಿಸಿತು. ಮಂಜ ಗಿಣಿ ಕಡೆ ನೋಡಿದ. ಅದು ತೆಪ್ಪಗಿರಬೇಕಲ್ಲ?
“ಯಾವನೋ ನೀನು ಕಳ್ಳ? ಯಾಕೋ ಬಂದೆ ನಮ್ಮ ಮನೆಗೆ? ಮೂತಿ ನೋಡು…. ಸೋಡಾಬುಡ್ಡಿ…. ಹೊಟ್ಟೆಗೆ ಅನ್ನ ತಾನೇ ತಿಂತೀಯಾ?” ಎಂದಿತು.
ಮೇಡಂ ಹೇಳಿದ ಮಾತು ನೆನಪಿಗೆ ಬಂದು ಮಂಜ ಏನೂ ಮಾತನಾಡದೆ ಮೊದಲು ಫ್ಯಾನ್ ರಿಪೇರಿ ಕೆಲಸ ಮಾಡತೊಡಗಿದ. ಐಲು ಗಿಣಿ ಬಾಯಿಗೆ ಬಂದಂತೆ ಇವನನ್ನು ರೇಗಿಸುತ್ತಿತ್ತು.
ಫ್ಯಾನ್ ಕೆಲಸದ ನಂತರ ಟಿವಿ ರಿಪೇರಿ ಕೆಲಸ ಮುಗಿಸುವಷ್ಟರಲ್ಲಿ 2 ಗಂಟೆ ಕಾಲ ಮುಗಿಯಿತು. ಅಷ್ಟರಲ್ಲಿ ಗಿಣಿಯ ತರಲೆ ಮಾತು ಅವನಿಗೆ ಹುಚ್ಚು ಕೆರಳಿಸಿತ್ತು.
“ಯಾಕೋ ಐಲಾನ್…… ಬೇಗ ಬೇಗ ಕೆಲಸ ಮಾಡೋ….. ಇದಕ್ಕೆ ದುಡ್ಡು ಬೇರೆ ಕೊಡಬೇಕಾ?” ಎಂದು ಗಿಣಿ ಕೇಳಿದಾಗ ಇವನ ಪಿತ್ತ ನೆತ್ತಿಗೇರಿತು.
ಕೆಲಸ ಪೂರ್ತಿ ಮುಗಿಸಿದ್ದ ಮಂಜ, ಮೇಡಂ ಸುಮ್ಮನೆ ತನ್ನನ್ನು ಹೆದರಿಸಲು ಹೇಳಿರಬೇಕೆಂದು ಪಂಜರದ ಗಿಣಿ ತನ್ನನ್ನು ಏನು ಮಾಡಬಲ್ಲದೆಂದು ರೋಷದಿಂದ ಅದರತ್ತ ಸಾರಿ, “ಎಲಾ ಬಡ್ಡೆತ್ತದ್ದೇ…. ಮಾಡ್ತೀನಿ ತಾಳು ನಿನಗೆ…..” ಎಂದು ತನ್ನ ಸ್ಕ್ರೂ ಡ್ರೈವರ್ ಅದರತ್ತ ಝಳಪಿಸಿದ.
ಗಿಣಿ ಸುಮ್ಮನೆ ಬಿಟ್ಟೀತಾ? ಇಡೀ ಅಪಾರ್ಟ್ ಮೆಂಟ್‌ಗೇ ಕೇಳಿಸುವಂತೆ, “ಟಾಮಿ ಛೂ… ಛೂ…. ಟಾಮಿ ಛೂ…. ಛೂ….” ಎಂದಾಗ ಮಲಗಿದ್ದ ನಾಯಿ ಮೇಲೆದ್ದಿತು. ಅಲ್ಲಿಗೆ ಮಂಜನ ಕಥೆ…..
ರಾಧಾ : ಎಲ್ಲ ಹೆಂಡತಿಯರೂ ತಂತಮ್ಮ ಗಂಡಂದಿರ ಬಗ್ಗೆ ಏನು ಭಾವಿಸುತ್ತಾರೆ ಗೊತ್ತಾ?
ಸುಧಾ : ಏನಂತಾರೆ….. ನೀನೇ ಹೇಳು ತಾಯಿ!
ರಾಧಾ : ಗಂಡ ಅಂದ್ರೆ ಪ್ರಪಂಚದ ಅತಿ ವೇಸ್ಟ್ ಬಾಡಿ ಹಾಗೂ ಮಹಾ ಜಿಪುಣಾಗ್ರೇಸರ.
ಸುಧಾ : ಮತ್ತೆ ಅವಳ ದೃಷ್ಟಿಯಲ್ಲಿ ಅಕ್ಕತಂಗೀರ ಗಂಡ ಅಂದ್ರೆ…..?
ರಾಧಾ : ಅವನೇ ಎಲ್ಲದಕ್ಕಿಂತ ಬೆಸ್ಟ್!
ಗುಂಡ ಕಾಲು ಚಾಚಿ ಟೀಪಾಯಿ ಮೇಲಿರಿಸಿಕೊಂಡು ಹಾಯಾಗಿ ಟಿವಿ ನೋಡುತ್ತಾ ಭಾನುವಾರದ ಮಜಾ ಪಡೆಯುತ್ತಿದ್ದ. ಇದನ್ನು ನೋಡಿ ನೋಡಿ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದ ಹೆಂಡತಿಗೆ ರೇಗಿಹೋಯಿತು. ಏನಾದರೂ ಕೆಲಸ ಅಂಟಿಸಲೇ ಬೇಕೆಂಬ ಕೆಟ್ಟ ಕೋಪ ಉಂಟಾಯಿತು.
ಗುಂಡಿ : ನೋಡ್ರಿ, ಸ್ವಲ್ಪ ಆ ಮೂಲೆ ಅಂಗಡಿವರೆಗೂ ಹೋಗಿ ಬರ್ತೀರಾ….?
ಗುಂಡ : ಏನೇ ಅದು ನಿನ್ನ ಗೋಳು, ನೆಮ್ಮದಿಯಾಗಿ ಕ್ರಿಕೆಟ್ ಮ್ಯಾಚ್ ನೋಡಲು ಬಿಡುವುದಿಲ್ಲ.
ಗುಂಡಿ : ರೀ, ಟಿವಿ ನೋಡಿದ್ದು ಸಾಕು. ಮೊದಲು ಅಂಗಡಿಗೆ ಹೋಗಿ ಅರ್ಧ ಲೀ.ನ 1 ಪ್ಯಾಕೆಟ್ ಹಾಲು ತನ್ನಿ. ಹ್ಞಾಂ…. ಹಾಗೇ ಬಂದುಬಿಡಬೇಡಿ, ಹಾಗೇ ಪೇಟೆ ಬೀದಿವರೆಗೂ ಹೋಗಿ ಅಲ್ಲೆನಾದರೂ ಮೊಟ್ಟೆ ಕಾಣಿಸಿದರೆ 6 ತಗೊಂಡು ಬನ್ನಿ. ಅಂತೂ ಗುಂಡ ಅರ್ಧ ಗಂಟೆ ಅಡ್ಡಾಡಿ 6 ಪ್ಯಾಕೆಟ್ ಹಾಲು ಹಿಡಿದುಕೊಂಡು ಬಂದ.
ಗುಂಡಿ : ಇದೇನ್ರಿ ಕರ್ಮ…. 6 ಪ್ಯಾಕೆಟ್ ಹಾಲು!
ಗುಂಡ : ಹ್ಞೂಂ ಮತ್ತೆ…. ನೀನೇ ತಾನೇ ಹೇಳಿದ್ದು, ಮೊಟ್ಟೆ ಕಾಣಿಸಿದರೆ 6 ತಗೊಂಡು ಬನ್ನಿ ಅಂತ. ಮೊಟ್ಟೆ ಕಾಣಿಸಿತು, 6 ಪ್ಯಾಕೆಟ್ ಹಾಲು ತಂದೆ!
ಮಹೇಶ : ಹೌದು, ಟಿವಿಯಲ್ಲಿ ಈ ಹಾಳು ಹಾವುಗಳ ಕಾಟ ಸೀರಿಯಲ್ ರೂಪದಲ್ಲಿ ಹೆಚ್ಚಾಗುತ್ತಿದೆ. ಆ ಮೂಲಕ `ನಾಗಿಣಿ’ ಡ್ಯಾನ್ಸ್ ಗಳೂ ಎಲ್ಲೆಲ್ಲೂ ನಡೆಯುವಂತಾಗಿದೆ. ಹಾಗೆ ಹುಚ್ಚುಚ್ಚಾಗಿ ಡ್ಯಾನ್ಸ್ ಮಾಡುವಾಗ ಅವರು ವಾಂತಿ ಮಾಡಿಕೊಂಡರೆ ಎಂಥ ಆಭಾಸ ಅಲ್ಲವೇ…..?
ಸುರೇಶ : ಆಭಾಸ ಏನಾಗಲ್ಲ…. ಆ ಪಾತ್ರಧಾರಿ ವಾಂತಿ ಮಾಡಿಕೊಂಡರೆ, ನಾಗಿಣಿ ವಿಷ ಕಾರುತ್ತಿದ್ದಾಳೆ ಅಂದುಕೊಳ್ತಾರೆ ಜನ…. ಅಷ್ಟೆ!
ಪತಿ : ಡಾರ್ಲಿಂಗ್, ನಾನಂತೂ ನಿನ್ನನ್ನು 100 ವರ್ಷಗಳ ಕಾಲ ಸತತ ಲವ್ ಮಾಡ್ತೀನಿ. ನಿನಗಾಗಿ ನನ್ನ ಪ್ರಾಣ ಕೊಡಲಿಕ್ಕೂ ತಯಾರು. ನೀನು ಏನು ಕೇಳಿದರೂ ಸರಿ, ಏನು ಬೇಕು ಹೇಳು.
ಪತ್ನಿ : ಅದೆಲ್ಲ ಇರಲಿ, ಅದೇನು ಕೇವಲ 100 ವರ್ಷ ಮಾತ್ರ ಅಂತ ಫಿಕ್ಸೆಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್‌ಗೆ ಹೇಳೋ ತರಹ ಟೈಂ ಫಿಕ್ಸ್ ಮಾಡಿ ಹೇಳ್ತೀರಲ್ಲ… ಆಮೇಲೆ ನನಗೊಬ್ಬ ಸವತಿ ಬರ್ತಾಳೇನು?
ಪತಿರಾಯ ಅಂದಿನಿಂದ ಬಿಲ್ ಕುಲ್ ಗಪ್ ಚಿಪ್!
ಟೀಚರ್ : ಯಾಕೋ ಗುಂಡ, ಹೈಸ್ಕೂಲಿಗೆ ಬಂದರೂ ನಿನಗಿನ್ನೂ ಬುದ್ಧಿ ಬಂದಿಲ್ಲ, ಮುಠ್ಠಾಳ! ಅದೇನು ಓದುತ್ತಿಯೋ ಬರೆಯುತ್ತಿಯೋ…. ಪರೀಕ್ಷೆಯಲ್ಲಿ 4 ಲೈನು ಗೀಚೋಕ್ಕೊ ಬರೋಲ್ಲ. ದಿನವಿಡೀ ಕ್ಲಾಸಿನಲ್ಲಿ ಹುಡುಗಿಯರ ಹತ್ತಿರ ಅದ್ಯಾಕೋ ವಟವಟ ಅಂತ ಅಷ್ಟೊಂದು ಮಾತಾಡ್ತಾನೇ ಇರ್ತೀಯಾ?
ಗುಂಡ : ಮೇಡಂ ಅದು… ಅದೂ…. ನಾನು ತುಂಬಾ ಬಡವ…. ನನ್ನ ಹಳೆ ಮೊಬೈಲ್ ನಲ್ಲಿ ನೆಟ್ ಪ್ಯಾಕ್ ಅಂತೂ ಇರೋದೇ ಇಲ್ಲ…..
ಪತಿ : ಬೇಗ ಆ ಸ್ಪೋರ್ಟ್ಸ್ ಚಾನೆಲ್ ಆನ್ ಮಾಡು, ಕ್ರಿಕೆಟ್ ಮ್ಯಾಚ್…. ಈಗಾಗಲೇ ಶುರುವಾಗಿರುತ್ತೆ!
ಪತ್ನಿ : ಖಂಡಿತಾ ಹಾಕಲ್ಲ, ಈಗ ಸಮಯ ಎಷ್ಟು ಅಂತ ಗೊತ್ತು ತಾನೇ?
ಪತಿ : ಇರಲಿ…. ನೋಡ್ಕೋಂತೀನಿ ಬಿಡು!
ಪತ್ನಿ : ಏನು ನೋಡ್ಕೊಂತೀರಿ ಅಂದೆ?
ಪತಿ : ಅದೇ… ನೀನು ಯಾವ ಚಾನೆಲ್ ಹಾಕ್ತಿಯೋ ಅದನ್ನೇ…