ಸಂಜೆ ಯಶವಂತಪುರದ ರೈಲ್ವೆ ಸ್ಟೇಷನ್ನಿನಲ್ಲಿ ತುಮಕೂರಿಗೆ ಹೊರಡುವುದಕ್ಕಾಗಿ ಪ್ಲಾಟ್‌ ಫಾರಂ ಬೆಂಚಿನ ಮೇಲೆ ಕಾದು ಕುಳಿತಿದ್ದ ಕಾವ್ಯಾ ರೈಲು ತಡವಾಯಿತಲ್ಲ ಎಂಬ ಚಿಂತೆಯಲ್ಲಿ ಮುಳುಗಿದ್ದಳು. ಆಗ ಹೆಗಲಿಗೆ ಲ್ಯಾಪ್‌ ಟಾಪ್‌ ಬ್ಯಾಗ್‌ ನೇತುಹಾಕಿಕೊಂಡು ಬಂದ ಸಮವಯಸ್ಕ ತರುಣನೊಬ್ಬ ಆ ಬೆಂಚಿನ ಮೇಲೆ ಕುಳಿತ ತಕ್ಷಣ ಹೇಳಿದ, “ಎಕ್ಸ್ ಕ್ಯೂಸ್‌ ಮಿ….. ಬಹುಶಃ ಇವತ್ತೂ ರೈಲು ತಡ ಅನ್ಸುತ್ತೆ ಅಲ್ವಾ?” ಅವಳಿಗೆ ಉತ್ತರ ಕೊಡಲು ಮನಸ್ಸಿಲ್ಲದಿದ್ದರೂ ಶಿಷ್ಟಾಚಾರಕ್ಕಾಗಿ ಕಾವ್ಯಾ ಹೌದು ಎಂಬಂತೆ ತಲೆ ಆಡಿಸಿದಳು. 2 ನಿಮಿಷ ಬಿಟ್ಟು ಬೇಡವೆನಿಸುತ್ತಿದ್ದರೂ ತಲೆಯೆತ್ತಿ ಅವನತ್ತ ನೋಡಿದಳು. ಆ ತರುಣ ಸುಂದರನಾಗಿದ್ದ. ಅವನ ನೋಟ ತನ್ನತ್ತಲೇ ಇರುವುದನ್ನು ಗಮನಿಸಿ ತಕ್ಷಣ ಅವಳು ಎದುರಿಗೆ ಕಾಣಿಸುತ್ತಿದ್ದ ಬೇರೊಂದು ರೈಲಿನತ್ತ ತನ್ನ ನೋಟ ಹರಿಸಿದಳು.

ಇಬ್ಬರ ನಡುವೆ ಮತ್ತೆ ನೀರವ ಮೌನ ಆವರಿಸಿತು. ಈ ಮಧ್ಯೆ ಬೇರೆ ಬೇರೆ ರೈಲುಗಳು ಬಂದು ಹೋದವು. ಇವರಿಗೆ ಬೇಕಿದ್ದ ರೈಲಿನ ಘೋಷಣೆ ಆಗುತ್ತಿದ್ದಂತೆಯೇ ಕಾವ್ಯಾ ಎದ್ದು ನಿಂತಳು. ಅವಳು ಅವಸರದಲ್ಲಿ ರೈಲಿನ ಮೆಟ್ಟಿಲೇರಿ ಒಳ ಪ್ರವೇಶಿಸಲು ನೋಡಿದಳು. ಈ ಮಧ್ಯೆ ಗಡಿಬಿಡಿಯಲ್ಲಿ ಅವಳ ಚಪ್ಪಲಿ ಕಿತ್ತುಹೋಗಿ ಅವಳ ಕಾಲು ಪ್ಲಾಟ್‌ ಫಾರ್ಮ್ ಅಡಿ ಹೋಯಿತು. ಗಾಬರಿಯಲ್ಲಿ ಅವಳಿಗೆ ಕಣ್ಣು ಕಣ್ಣು ಬಿಡುವಂತಾಯಿತು.

ಕ್ಷಣ ಮಾತ್ರದಲ್ಲಿ ಅವಳ ಹಿಂದೆ ನಿಂತಿದ್ದ ಆ ತರುಣ, ಬಾಗಿ ಅವಳ ಕಾಲನ್ನು ಜೋಪಾನವಾಗಿ ಮೇಲೆತ್ತಿದ. ಅವಳಿಗೆ ಆ ಶಾಕ್‌ ನಲ್ಲಿ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಆಗ ಅವನು, “ನಿಮಗೆ ಅಭ್ಯಂತರ ಇಲ್ಲದಿದ್ದರೆ ದಯವಿಟ್ಟು ನನ್ನ ಹೆಗಲ ಮೇಲೆ ಕೈ ಇರಿಸಿ ನಿಧಾನ ನಡೆಯಿರಿ….. ಇಲ್ಲದಿದ್ದರೆ ರೈಲು ಮಿಸ್‌ ಆದೀತು!”

ಕಾವ್ಯಾ ಆಗಲಿ ಎಂಬಂತೆ ಅವನ ಹೆಗಲಿನ ಆಸರೆ ಪಡೆದು ನಿಧಾನ ಮೆಟ್ಟಿಲೇರಿ ರೈಲಿನ ಒಳಗೆ ಪ್ರವೇಶಿಸಿದಳು. ಅಂತೂ ಒಂದು ಕಡೆ ಇಬ್ಬರಿಗೂ ಸೀಟು ದೊರಕಿತು. ಅವನು ಅವಳ ಎದುರಿಗೆ ಕುಳಿತು ತನ್ನ ವಾಟರ್‌ ಬಾಟಲ್ ನೀಡಿದ. ಆಯಾಸಗೊಂಡಿದ್ದ ಅವಳು ಬೇಡ ಎನ್ನದೆ ನೀರು ಕುಡಿದಳು.

“ಥ್ಯಾಂಕ್ಸ್….”

“ಇರಲಿ, ನನ್ನ ಹೆಸರು ಪ್ರವೀಣ್‌. ನಿಮ್ಮ ಹೆಸರು?”

“ಕಾವ್ಯಾ.”

“ನೀವು ಎಲ್ಲಿಗೆ ಹೊರಟಿದ್ದೀರಿ?”

“ತುಮಕೂರು.”

“ಇಲ್ಲಿ ಬೆಂಗಳೂರಿನಲ್ಲಿ…..”

“ನಾನು ಮ್ಯಾನೇಜ್‌ ಮೆಂಟ್‌ನಲ್ಲಿ ಡಿಪ್ಲೊಮಾ ಮಾಡುತ್ತಿದ್ದೀನಿ. ಬೆಂಗಳೂರಿಗೆ ದಿನಾ ಬಂದು ಹೋಗುತ್ತೀನಿ. ಮತ್ತೆ ನೀವು…..”

“ನಾನೂ ತುಮಕೂರಿಗೇ ಹೊರಟಿದ್ದೇನೆ.”

“ಅಲ್ಲೇನು ಮಾಡ್ತಿದ್ದೀರಿ?”

“ಅಣ್ಣನನ್ನು ಮೀಟ್‌ ಮಾಡಲು ಹೋಗುತ್ತಿರುವೆ.”

ಅಷ್ಟರಲ್ಲಿ ಯಾರೋ ಐವರು ಅದೇ ಅಪಾರ್ಟ್‌ ಮೆಂಟ್‌ ಗೆ ಏರಿ ಬಂದು ಬೇಕೆಂದೇ ಕಾವ್ಯಾಳ ಪಕ್ಕದಲ್ಲಿ ಮೂವರು ಕುಳಿತರು. ಅವರ ಬಾಯಿಂದ ಮದ್ಯದ ದುರ್ನಾತ ಬಡಿಯುತ್ತಿತ್ತು. ಕಾವ್ಯಾಳಿಗಂತೂ ಆ ಕೆಟ್ಟ ಪರಿಸರದಲ್ಲಿ ಉಸಿರಾಡಲಿಕ್ಕೂ ಕಷ್ಟವಾಯ್ತು. ಅವಳ ಎದುರಿಗೆ ಪ್ರವೀಣನ ಪಕ್ಕ ಕುಳಿತಿದ್ದ ಉಳಿದಿಬ್ಬರು ಬೇಕೆಂದೇ ಅಶ್ಲೀಲವಾಗಿ ಮಾತನಾಡಿ, ಎದುರಿಗಿದ್ದರ ಜೊತೆ ಬಿದ್ದೂ ಬಿದ್ದೂ ನಗತೊಡಗಿದರು.

ಕೈ ಮೀರಿದ ಈ ಪರಿಸ್ಥಿತಿ ಗಮನಿಸಿ ಪ್ರವೀಣ್‌ ಹೇಳಿದ, “ಡಾರ್ಲಿಂಗ್‌, ನಿನ್ನ ಕಾಲಿಗೆ ಪೆಟ್ಟಾಗಿದೆ. ನೀನು ಈ ಕಡೆ ಕಿಟಕಿ ಬದಿಗೆ ಬಾ….. ಮೇಲಿನ ಬರ್ತ್‌ ಹೇಗೂ ಖಾಲಿ ಇದೆ, ಇಲ್ಲಿಂದ ಹತ್ತಿ ಮೇಲೆ ಹೋಗಿ ಮಲಗು.”

ಪರಿಸ್ಥಿತಿ ಅರಿತ ಕಾವ್ಯಾ ಅವನ ಆಜ್ಞಾಕಾರಿ ಶಿಷ್ಯಳಂತೆ ಹಾಗೇ ಮಾಡಿದಳು. ಪ್ರವೀಣನ ಸಹಾಯದಿಂದ ಅವಳು ಮೇಲಿನ ಬರ್ತ್ ಏರಿದಳು. ಇತ್ತ ಕಾಲಿನ ನೋವನ್ನೂ ಸಹಿಸಬೇಕಿತ್ತು.

ಅವಳ ಸಂಕಟ ಗುರುತಿಸಿದ ಪ್ರವೀಣ್‌ ತನ್ನ ಬ್ಯಾಗ್‌ ತಡಕಾಡಿ ಎಮರ್ಜೆನ್ಸಿಗೆ ಇರಿಸಿದ್ದ ಮೂವ್ ಆಯಿಂಟ್‌ ಮೆಂಟ್‌ ಟ್ಯೂಬ್‌ ನ್ನು ಕಾಲಿಗೆ ಹಚ್ಚಿಕೊಳ್ಳುವಂತೆ ನೀಡಿದ. ಅವಳಿಗೆ ಅರಿವಿಲ್ಲದೆ ಮಾತು ಹೊರಬಂತು, “ಥ್ಯಾಂಕ್ಸ್ ಎ ಲಾಟ್‌….. ಯೂ ಆರ್‌ ಟೂ ಗುಡ್‌!”

ಇವರಿಬ್ಬರೂ ಪತಿಪತ್ನಿ ಇರಬೇಕೆಂದು ಗ್ರಹಿಸಿದ ಆ ಕಿಡಿಗೇಡಿಗಳು, ಮತ್ತೇನೂ ಕಮೆಂಟ್‌ ಮಾಡದೆ ಮುಂದಿನ ಸ್ಟೇಷನ್ನಿನಲ್ಲಿ ಇಳಿದು ಹೋದರು. ಕಾವ್ಯಾಳಿಗಂತೂ ಹೋದ ಜೀವ ಬಂದಂತಾಯಿತು. ಪ್ರವೀಣ್‌ ಇಲ್ಲದೆ ಇಂದಿನ ಪ್ರಯಾಣ ಅಪೂರ್ಣ ಎನಿಸಿತು.

ಆಗ ಕಾವ್ಯಾ, “ಪ್ರವೀಣ್‌, ಇವತ್ತು ನೀವು ಇಲ್ಲದಿದ್ದರೆ ನನ್ನ ಗತಿ…..? ನಾನು ಯಾವ ಮಾತುಗಳಲ್ಲಿ ನಿಮಗೆ ಧನ್ಯವಾದ ತಿಳಿಸಲಿ….. ಇವತ್ತು ನೀವು ನನಗೇನು ಮಾಡಿದ್ದೀರೋ ಕೇವಲ ಥ್ಯಾಂಕ್ಸ್, ಧನ್ಯವಾದಗಳು ಅಂತ ಹೇಳಿ ಮುಗಿಸಿದರೆ ಅತಿ ಕ್ಷುಲ್ಲಕವಾಗುತ್ತದೆ.”

“ಓಹ್‌ ಕಮಾನ್‌ ಕಾವ್ಯಾ….. ನನ್ನ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಇಷ್ಟು ಮಾತ್ರದ ಹೆಲ್ಪ್ ಖಂಡಿತಾ ಮಾಡುತ್ತಿದ್ದರು. ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನೂ ಇಲ್ಲ,” ಎಂದ ಪ್ರವೀಣ್‌.

ಹೀಗೆ ಇವರು ಮಾತನಾಡುತ್ತಿದ್ದಾಗ ಅಂತೂ ತುಮಕೂರು ತಲುಪಿದ್ದಾಯಿತು. ಕಾವ್ಯಾ ತನ್ನ ಬ್ಯಾಗಲ್ಲಿ ಇರಿಸಿದ್ದ ಮತ್ತೊಂದು ಜೊತೆ ಚಪ್ಪಲಿ ಬಳಸಲು ಯತ್ನಿಸಿದಳು. ಆದರೆ ಪಾದದ ಊತದ ಕಾರಣ ಅದರಲ್ಲಿ ಕಾಲು ತೂರಿಸಲಾರದೆ ಒದ್ದಾಡಿದಳು. ಪ್ರವೀಣ್‌ ತಕ್ಷಣ ತಾನು ತೊಟ್ಟಿದ್ದ ಚಪ್ಪಲಿ ಅವಳಿಗೆ ನೀಡಿದ. ಕಾವ್ಯಾ ಅದನ್ನು ಹಾಯಾಗಿ ಮೆಟ್ಟಿದಳು.

ಪ್ರವೀಣ್‌ ತಾನೇ ಅವಳ ಬ್ಯಾಗನ್ನೂ ಎತ್ತಿ ಹೆಗಲಿಗೆ ಸೇರಿಸಿದ. ಸಹಾಯ ನೀಡುತ್ತಾ ಅವಳು ರೈಲಿನಿಂದ ಇಳಿಯುವಂತೆ ಮಾಡಿದ. “ನಾನು ಬಂದು ನಿಮ್ಮನ್ನು ಪಿ.ಜಿ.ವರೆಗೂ ತಲುಪಿಸಲೇ?”

“ಪರವಾಗಿಲ್ಲ…… ನಾನು ಹೋಗುತ್ತೀನಿ,” ಎಂದಳು.

“ಹೇಗೆ ಹೋಗಲು ಸಾಧ್ಯ? ನಿಮ್ಮ ಕಾಲಿನ ಸ್ಥಿತಿ ಬಗ್ಗೆ ಗೊತ್ತಿದೆ ತಾನೇ? ಮೊದಲು ಯಾವುದಾದರೂ ಕ್ಲಿನಿಕ್‌ ನಲ್ಲಿ ತೋರಿಸಿ ಔಷಧಿ ಹಾಕಿಸೋಣ. ನಂತರ ನಾನು ನಿಮ್ಮನ್ನು ಪಿ.ಜಿ.ವರೆಗೂ ತಲುಪಿಸಿ ಆಮೇಲೆ ನಾನು ಅಣ್ಣನನ್ನು ಮೀಟ್‌ ಮಾಡಲು ಹೋಗ್ತೀನಿ. ಇರಿ, ಈಗಲೇ ಒಂದು ಆಟೋ ಕರೀತೀನಿ.”

ಆಮೇಲೆ ಪ್ರವೀಣ್‌ ಒಂದು ಆಟೋ ಕರೆದು ಹತ್ತಿರದ ಉತ್ತಮ ಕ್ಲಿನಿಕ್‌ ಗೆ ಕರೆದೊಯ್ಯುವಂತೆ ಹೇಳಿದ. ನಂತರ ಅವರ ಆಟೋ ಒಂದು ದೊಡ್ಡ ಕ್ಲಿನಿಕ್‌ ಮುಂದೆ ನಿಂತಿತು.

ಡಾಕ್ಟರ್‌ ಅವಳನ್ನು ಪರೀಕ್ಷಿಸಿ ಹೇಳಿದರು, “ಫ್ರಾಕ್ಚರ್‌ ಏನೂ ಆಗಿಲ್ಲ. ಆಕಸ್ಮಿಕ ಉಳುಕಿನಿಂದ ಹೀಗೆ ಬಾತುಕೊಂಡಿದೆ. ಇದಕ್ಕೆ ಕೋಲ್ಡ್ ಬ್ಯಾಂಡೇಜ್‌ ಹಾಕಿ, ಇಂಜೆಕ್ಷನ್‌ ಕೊಡುತ್ತೇನೆ. ಇವತ್ತು, ನಾಳೆ ಮಾತ್ರೆ ತೆಗೆದುಕೊಂಡು ವಿಶ್ರಾಂತಿ ಪಡೆದರೆ ಎಲ್ಲ ಸರಿಹೋಗುತ್ತದೆ.”

ಪ್ರವೀಣ್‌ ವೈದ್ಯರಿಗೆ ತಾನೇ ಹಣ ಕೊಡುತ್ತೇನೆಂದಾಗ ಕಾವ್ಯಾ ಬಹಳ ವಿರೋಧಿಸಿ ತಾನೇ ನೀಡಿದಳು. ಅಲ್ಲಿಂದ ಮಾತ್ರೆ ಪಡೆದು ಮತ್ತೊಂದು ಆಟೋದಲ್ಲಿ ಅವಳ ಪಿ.ಜಿ.ಗೆ ಹೊರಟರು. ಕೋಲ್ಡ್ ಬ್ಯಾಂಡೇಜ್‌, ಇಂಜೆಕ್ಷನ್‌ ಪ್ರಭಾವದಿಂದ ಅವಳು ತುಸು ಚೇತರಿಸಿಕೊಂಡಿದ್ದಳು.

ಪ್ರವೀಣ್‌ ಅವಳನ್ನು ಅವಳ ಕೋಣೆವರೆಗೂ ನಡೆಸಿಕೊಂಡು ಹೋದ. ಅವನು ಹೊರಡುವೆನೆಂದಾಗ ಕಾವ್ಯಾ “ಪ್ಲೀಸ್‌ ಇರಿ….. ಕಾಫಿ ಕುಡಿದು ಹೋಗಿ,” ಎಂದಳು.

“ಪರವಾಗಿಲ್ಲ….. ಬೇಡ. ಈಗಾಗಲೇ ತಡ ಆಗಿದೆ. ಅಣ್ಣ ನನಗಾಗಿ ಕಾಯುತ್ತಿರುತ್ತಾನೆ. ನಾವು ಮತ್ತೊಮ್ಮೆ ಭೇಟಿ ಆದಾಗ ಕಾಫಿ ಕೊಡಿಸುವಿರಂತೆ. ಈಗ ವಿಶ್ರಾಂತಿ ಪಡೆಯಿರಿ,” ಎಂದು ಹೊರಡುವಾಗ ಪ್ರವೀಣ್‌ ಹಾರ್ದಿಕವಾಗಿ ಅವಳ ಕೈ ಕುಲುಕಿದ.

ಕಾವ್ಯಾಳಿಗೆ ಹತ್ತಿರದ ನೆಂಟನನ್ನು ಕಳುಹಿಸಿ ಕೊಡುವಷ್ಟೆ ನೋವಾಯಿತು. ನಿಧಾನವಾಗಿ ಬಾಗಿಲವರೆಗೂ ಬಂದು ಕೈ ಆಡಿಸುತ್ತಾ ಅವನನ್ನು ಬೀಳ್ಕೊಂಡಳು.

ಸ್ವಲ್ಪ ಹೊತ್ತಿನ ನಂತರ ಮಂಚದ ಮೇಲೆ ಒರಗಿದ ಕಾವ್ಯಾಳಿಗೆ ಕಣ್ಣು ಮುಚ್ಚಿದಾಗ ಕೇವಲ ಪ್ರವೀಣನ ಚಿತ್ರಗಳೇ ಕಂಡುಬಂದವು. ಅವಳ ದೇಹವಿಡೀ ಮಧುರವಾಗಿ ಕಂಪಿಸಿತು. ಪ್ರವೀಣ್‌ ಅಲ್ಲೇ ಕುಳಿತು ತನ್ನ ಬಳಿ ಮಾತನಾಡುತ್ತಾ ಇರಬಾರದೇ ಎನಿಸಿತು. ಅಷ್ಟರಲ್ಲಿ ಯಾರೋ ಕರೆಗಂಟೆ ಒತ್ತಿದಂತಾಯಿತು.

ಅರೆ…. ಈ ಸಮಯದಲ್ಲಿ ತನ್ನ ಕೋಣೆಗೆ ಯಾರು ಬಂದಿರಬಹುದು? ನಿಧಾನವಾಗಿ ನಡೆದು ಬಂದು ಬಾಗಿಲು ತೆರೆದಾಗ ಎದುರಿಗೆ ಪ್ರವೀಣ್‌ ನಿಂತಿದ್ದ!

“ಓಹ್‌…. ಏನೋ ಮರೆತಿರಿ ಅನ್ಸುತ್ತೆ,” ಕಾವ್ಯಾ ಕೇಳಿದಾಗ, “ಹೌದು…. ಗಡಿಬಿಡಿಯಲ್ಲಿ ಇಲ್ಲೇ ಮೊಬೈಲ್ ‌ಮರೆತು ಹೊರಟುಬಿಟ್ಟಿದ್ದೆ,” ಎಂದ ಪ್ರವೀಣ್‌.

“ಅರೆ…. ನಿಮ್ಮ ಚಪ್ಪಲಿ ನಾನೇ ಹಾಕಿಕೊಂಡು ಬಂದದ್ದು…. ಪಾಪ, ಆಗಿನಿಂದ ನೀವು ಬರಿಗಾಲ್ಲೀ ಇದ್ದೀರಿ. ದಯವಿಟ್ಟು ಅದನ್ನು ಹಾಕಿಕೊಂಡು ಹೋಗಿ,” ಎಂದು ಬಲವಂತಾಗಿ ಅವನನ್ನು ಕೂರಿಸಿ ಒಳಗೆ ಹೋಗಿ ಹಾಲು ಬಿಸಿ ಮಾಡಿ, 2 ಕಪ್‌ ನೆಸ್‌ ಕೆಫೆ ರೆಡಿ ಮಾಡಿ ತಂದಳು. ಅವನ ಕೈಗೆ ಕಾಫಿ ಕಪ್‌ ಕೊಟ್ಟು ಎದುರಿಗೆ ಮಂಚದ ಮೇಲೆ ಕುಳಿತ ಕಾವ್ಯಾ, ಓರೆ ನೋಟದಿಂದ ಅವನನ್ನೇ ಗಮನಿಸತೊಡಗಿದಳು.

sah-yatri-story2

ಪ್ರವೀಣ್‌ ತಾನು ಬರುವುದು ಇನ್ನೂ ಸ್ವಲ್ಪ ತಡವಾಗಬಹುದು ಎಂದು ಅಣ್ಣನಿಗೆ ಫೋನಿನಲ್ಲಿ ಹೇಳುತ್ತಿದ್ದ. ಕಾಫಿ ಕೊಡುವಾಗ ಆಕಸ್ಮಿಕವಾಗಿ ಇಬ್ಬರ ಕೈ ಬೆರಳುಗಳು ಸ್ಪರ್ಶಿಸಿದ್ದವು. ಅವಳಿಗೆ ಮೈಯೆಲ್ಲಾ ರೋಮಾಂಚನ ಎನಿಸಿತು. ಇಬ್ಬರೂ ಮೌನವಾಗಿ ಕಾಫಿ ಹೀರತೊಡಗಿದರು.

ಕಾಫಿ ಮುಗಿಸಿ ಹೊರಡಲು ಎದ್ದ ಪ್ರವೀಣ್‌ ಅವಳನ್ನು ಕೇಳಿದ, “ಕಾವ್ಯಾ, ನನಗೆ ನಿಮ್ಮ ಫೋನ್‌ ನಂಬರ್‌ಕೊಡ್ತೀರಾ….. ಇದೇ ವಾಟ್ಸ್ ಆ್ಯಪ್‌ ನಂಬರ್‌ ಅಲ್ಲವೇ?” ಎಂದ.

ಅವನು ಅಪರಿಚಿತನಲ್ಲ, ಎಷ್ಟೋ ದಿನಗಳ ಪರಿಚಿತ ಎಂಬಂತೆ ಅವಳಿಗೆ ವಿಶ್ವಾಸ ಮೂಡಿತು. ನಿರಾಯಾಸವಾಗಿ ತನ್ನ ನಂಬರ್ ನೀಡಿದಳು. ತಕ್ಷಣ ಮಿಸ್‌ ಕಾಲ್ ‌ನೀಡಿ ತನ್ನ ನಂಬರ್‌ ಸೇವ್ ‌ಮಾಡಿಕೊಳ್ಳುವಂತೆ ತಿಳಿಸಿದ.

ಬೈ ಬೈ ಹೇಳಿ ಪ್ರವೀಣ್‌ ಹೊರಟೇಬಿಟ್ಟ. ಮರಳಿ ಬಂದು ಮಲಗಿದ ಕಾವ್ಯಾಳಿಗೆ ಮನಸ್ಸೇಕೋ ಶೂನ್ಯವೆನಿಸಿತು.

ಆ ದಿನ ಊಟ ಮಾಡಲಿಕ್ಕೂ ಮನಸ್ಸು ಬರಲಿಲ್ಲ. ಇವರುಗಳಿಗೆ ಪಿ.ಜಿ. ಕೋಣೆ ನೀಡಿದ್ದ ಆಂಟಿ ಕ್ಯಾಂಟೀನ್‌ ನಡೆಸುತ್ತಿದ್ದರು. ಇವತ್ತು ಕೋಣೆಗೆ ಊಟ ಬೇಡ ಎಂದು ಅವಳು ಅವರಿಗೆ ತಿಳಿಸಿ, ಹಾಲು ಕುಡಿದು, ಮಾತ್ರೆ ನುಂಗಿ ಮಲಗಿಬಿಟ್ಟಳು.

ಆ ದಿನದ ಘಟನೆಗಳನ್ನು ಅದೆಷ್ಟು ಸಲ ನೆನಪಿಸಿಕೊಂಡಳೋ…… ಅವಳಿಗೆ ಅದ್ಯಾವಾಗ ನಿದ್ದೆ ಬಂದಿತೊ ಗೊತ್ತೇ ಆಗಲಿಲ್ಲ. ಬೆಳಗ್ಗೆ ತಡವಾಗಿ ಎದ್ದು ನೋಡುತ್ತಾಳೆ, ಅದಾಗಲೇ 8 ಗಂಟೆ ಆಗಿಹೋಗಿದೆ! ಇನ್ನು ಮೊದಲ ಪೀರಿಯಡ್‌ ಹೋದಂತೆಯೇ ಎಂದು, ಬೇಗ ಬೇಗ ತಯಾರಾಗಿ ರೈಲ್ವೆ ಸ್ಟೇಷನ್‌ ಕಡೆ ನಡೆದಳು.

ಹೀಗೆ ಒಂದು ವಾರ ಕಳೆದುಹೋಯಿತು. ಅಂದು ಕಾಲೇಜಿಗೆ ರಜೆ ಇತ್ತು. ಅಂದು ಕಾವ್ಯಾಳಿಗೆ ಪ್ರವೀಣನ ನೆನಪು ಬಹುವಾಗಿ ಕಾಡಿತು. ತಾನೇ ಫೋನ್‌ ಮಾಡುವುದಾಗಿ ಹೇಳಿದ್ದ, ಆದರೆ ಇದುವರೆಗೂ ಒಂದು ಮೆಸೇಜ್‌ ಸಹ ಕಳುಹಿಸಿರಲಿಲ್ಲ. ತಾನೇ ಪೋನ್‌ ಮಾಡಲೇ ಎನಿಸಿತು. ಬೇಡ ಏನಂದುಕೊಳ್ಳುತ್ತಾನೋ ಏನೋ…. ಕಾಲೆಳೆಯುತ್ತಾ ಮನೆಗೆ ಹೊರಡಲು ಸ್ಟೇಷನ್‌ ಕಡೆ ನಡೆದಳು. ಮತ್ತೆ ಮತ್ತೆ ಪ್ರವೀಣ್‌ ನೆನಪಾದ.

ಇದ್ದಕ್ಕಿದ್ದಂತೆ ಫೋನ್‌ ಮೊಳಗಿತು. ನೋಡುತ್ತಾಳೆ…. ಪ್ರವೀಣ್‌ ಫೋನ್‌ ಮಾಡಿದ್ದ. ಕಂಪಿಸುವ ದನಿಯಲ್ಲಿ “ಹ…ಲೋ….” ಎಂದಳು.

“ಹೇಗಿದ್ದೀರಿ ಕಾವ್ಯಾ?”

“ನಾನು ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಿ? ಇದುವರೆಗೂ ಫೋನ್‌, ಮೆಸೇಜ್‌…. ಏನೂ ಇರಲಿಲ್ಲ.”

“ನಾನು ಅಣ್ಣನ ಜೊತೆ ಬಿಸ್‌ ನೆಸ್‌ ವಿಷಯಾಗಿ ತುಸು ಬಿಝಿಯಾಗಿದ್ದೆ. ನಮ್ಮದು ಜ್ಯೂವೆಲರಿ ಅಂಗಡಿ ಇದೆ. ಅದರ ಸಲುವಾಗಿ ಪರ್ಚೇಸಿಂಗ್‌ ಗಾಗಿ ಅಹಮದಾಬಾದ್‌ ಗೆ ಹೋಗಿದ್ದೆ. ನೀವು ಇನ್ನೂ ತುಮಕೂರಿಗೆ ವಾಪಸ್ಸು ಹೊರಟಿಲ್ಲ ತಾನೇ? ನಾನೀಗಲೇ ರೈಲ್ವೇ ಸ್ಟೇಷನ್‌ ಗೆ ಬರುತ್ತೇನೆ. ರೆಡಿ ಆಗಿರಿ.”

ಕಾವ್ಯಾಳಿಗಂತೂ ಸಂತಸದಿಂದ ಹಾರಾಡುವಂತಾಯಿತು. ತಕ್ಷಣ ವಾಶ್‌ ರೂಮಿಗೆ ಹೋಗಿ ತನ್ನ ಮೇಕಪ್‌ ಸರಿಪಡಿಸಿಕೊಂಡು ತಲೆ ಬಾಚಿಕೊಂಡು ರೆಡಿ ಆದಳು. ಅವಳ ಬಳಿ ಬಹು ದಿನಗಳಿಂದ ಬಳಸದ ಇಯರ್‌ ರಿಂಗ್ಸ್ ಇತ್ತು. ಅದನ್ನು ತೆಗೆದು ಧರಿಸಿದಳು. ಇಂದು ಅವಳು ಈ ಗೆಟಪ್‌ ನಲ್ಲಿ ಆಕರ್ಷಕವಾಗಿ ಕಾಣಿಸುತ್ತಿದ್ದಳು. ಅವಳು ಸ್ಟೇಷನ್‌ ಹೊರಗೆ ಬಂದು ನೋಡಿದಾಗ ಬೈಕ್‌ ಮೇಲೆ ಬಂದಿಳಿದ ಪ್ರವೀಣ್‌ ಅವಳತ್ತ ಕೈ ಬೀಸಿದ. ಅಚ್ಚ ಬಿಳಿ ಪ್ಯಾಂಟ್‌, ನೀಲಿ ಶರ್ಟ್‌ ನಲ್ಲಿ ಅವನು ಆಕರ್ಷಕನಾಗಿದ್ದ.

ಸಮ್ಮೋಹಿತಳಾಗಿ ಅವಳು ಬೈಕ್‌ ಏರಿ ಕುಳಿತಳು.

“ಇವತ್ತು ನೀವು ಬಹಳ ಕ್ಯೂಟ್‌ ಆಗಿ ಕಾಣುತ್ತೀದ್ದೀರಿ.” ಇದನ್ನು ಕೇಳಿ ಪುಳಕಿತಳಾದ ಕಾವ್ಯಾ, “ನಾವೀಗ ಎಲ್ಲಿಗೆ ಹೊರಟಿದ್ದೇವೆ?” ಎಂದಳು.

“ಎಲ್ಲಾದರೂ ದೂರದ ಉತ್ತಮ ರೆಸ್ಟೋರೆಂಟ್‌ ಗೆ….. ಅಲ್ಲೇ ಕುಳಿತು ನಿಧಾನವಾಗಿ ಮಾತನಾಡೋಣ.” ಕಾವ್ಯಾಳ ದುಪಟ್ಟಾ ಗಾಳಿಯ ರಭಸದ ಕಾರಣ ಹಾರಿ ಹಾರಿ ಅವನ ಮುಖಕ್ಕೆ ಬಡಿಯುತ್ತಿತ್ತು. ಅದರ ಸುಗಂಧಕ್ಕೆ ಅವನು ಮಾರುಹೋದ. ಕಾವ್ಯಾ ತನ್ನ ದುಪಟ್ಟಾ ಸರಿಪಡಿಸಿಕೊಂಡಳು.

“ಪ್ರವೀಣ್‌, ಒಂದು ಮಾತು ಹೇಳಬೇಕು. ಯಾರೋ ಆಗಿನಿಂದ ನಮ್ಮನ್ನು ಫಾಲೋ ಮಾಡುತ್ತಿದ್ದಾರೆ….. ಬಹಳ ಹೊತ್ತಿನಿಂದ ಆ ಗಾಡಿ ನಮ್ಮ ಬೈಕ್‌ ನ್ನೇ ಹಿಂಬಾಲಿಸಿಕೊಂಡು ಬರ್ತಿದೆ.”

“ನಿಮಗೆಲ್ಲೋ ಭ್ರಾಂತಿ ಅಷ್ಟೆ….. ಅವರೂ ಇದೇ ರೂಟ್‌ ನಲ್ಲಿ ಹೋಗುತ್ತಿರಬೇಕಷ್ಟೆ.”

“ಈ ರೂಟ್‌ ನಲ್ಲಿ ಹೋಗಬೇಕು ಅಂದ್ರೆ ನಮ್ಮ ಗಾಡಿಯನ್ನೇ ಯಾಕೆ ಹಿಂಬಾಲಿಸಬೇಕು? ನಮ್ಮ ಮುಂದೆ ಹಾದು ಹೋಗಬಹುದಿತ್ತಲ್ಲ….?”

“ಇಷ್ಟಕ್ಕೆಲ್ಲ ಅಷ್ಟೊಂದು ಡೌಟ್‌ ಬೇಡ….. ನಡೆಯಿರಿ, ನಮಗೆ ಬೇಕಾದ ರೆಸ್ಟೋರೆಂಟ್‌ ಬಂದೇಬಿಟ್ಟಿತು. ನೀವು ಟೇಬಲ್ ನಂ.4ರ ಬಳಿ ಕುಳಿತಿರಿ. ನಾನೀಗಲೇ ಈ ಬೈಕ್‌ ಪಾರ್ಕ್‌ ಮಾಡಿ ಬರ್ತೀನಿ.”

ಕಾವ್ಯಾ ಆಗಲಿ ಎಂದು ಒಳಗೆ ಹೋದಳು. ಪ್ರವೀಣ್‌ ಬೇಗ ಬಂದು ಅವಳನ್ನು ಸೇರಿಕೊಂಡ. “ಕಾವ್ಯಾ ಏನು ತಗೋತೀರಿ….. ಖಂಡಿತಾ ಸಂಕೋಚ ಬೇಡ. ಇನ್ನು ಮುಂದೆ ನಾವು ಹೀಗೆ ಮೀಟ್‌ ಮಾಡ್ತಿರೋಣ…..”

“ಅದೇನೂ ಪರವಾಗಿಲ್ಲ. ಇವತ್ತು ಏನೂ ಬೇಡ. ನೀವೇ ಏನಾದರೂ ಆರ್ಡರ್‌ ಮಾಡಿ.”

ಮಾಣಿಯನ್ನು ಕರೆದು 2 ಸಮೋಸಾ, 2 ಕಾಫಿ ಬೇಗ ತರುವಂತೆ ಹೇಳಿದ. ಸ್ವಲ್ಪ ಹೊತ್ತಿಗೇ ಆರ್ಡರ್‌ ಬಂತು.

ತಿಂಡಿಕಾಫಿ ಮುಗಿಸಿದ ಮೇಲೆ ವಾಚಿನತ್ತ ನೋಡಿದ ಕಾವ್ಯಾ, “ನಾನೀಗ ಹೊರಡಬೇಕು. 4 ಗಂಟೆ ರೈಲು ಮಿಸ್‌ ಆಗಿಬಿಡುತ್ತೆ,” ಎಂದಳು.

“ಸರಿ, ನಿಮ್ಮನ್ನು ಈಗಲೇ ಸ್ಟೇಷನ್ನಿಗೆ ಡ್ರಾಪ್‌ ಮಾಡಿ ನಾನು ಸ್ಟೋರ್‌ ಕಡೆ ಹೊರಡುತ್ತೇನೆ. ಒಂದು ಅರ್ಜೆಂಟ್‌ ಮೀಟಿಂಗಿದೆ.” ಪ್ರವೀಣ್‌ ಕಾವ್ಯಾಳನ್ನು ಯಶವಂತಪುರದ ಸ್ಟೇಷನ್‌ ತಲುಪಿಸಿ, ತನ್ನ ಜ್ಯೂವೆಲರಿ ಸ್ಟೋರ್‌ ಕಡೆ ಹೊರಟ.

ಅಣ್ಣನ ಕ್ಯಾಬಿನ್‌ ಗೆ ಹೊರಟಾಗ ಪ್ರಕಾಶ್‌ ಹುಬ್ಬುಗಂಟಿಕ್ಕಿ ರೇಗುತ್ತಿದ್ದ. “ಎಲ್ಲಿಗೆ ಹೋಗಿದ್ದೆ ಪ್ರವೀಣ್‌? ಆಗಿನಿಂದ ಕ್ಲೈಂಟ್‌ ನಿನ್ನ ಅಡ್ವೈಸ್‌ ಗಾಗಿ ಕಾದು ಹೊರಟರು. ನೀನು ಯಾರ ಜೊತೆ ಎಲ್ಲೆಲ್ಲಿ ಅಲೆಯುತ್ತಿದ್ದೆ… ನನಗೆ ಎಲ್ಲವೂ ಸ್ಪಷ್ಟ ಗೊತ್ತಾಗಬೇಕು.”

“ನಾನು ನನ್ನ ಫ್ರೆಂಡ್‌ ಕಾವ್ಯಾಳನ್ನು ಮೀಟ್‌ ಮಾಡಲು ಹೋಗಿದ್ದೆ. ನಿನಗೆ ಹೇಳಿಯೇ ಹೋಗಿದ್ದೆನಲ್ಲ?”

“ಅದೆಲ್ಲ ನನಗೆ ಗೊತ್ತಿಲ್ಲ. ಅಂಥ ಮಿಡ್ಲ್ ಕ್ಲಾಸ್‌ ಜನರ ಜೊತೆ ನಿನ್ನದೇನು ಮಾತುಕಥೆ? ಬಿಸ್‌ ನೆಸ್‌ ಮಾಡುವವರ ಲಕ್ಷಣವೇ ಇದು? ಇರಲಿ, ಈಗ ನನಗೆ ಹೆಚ್ಚಿಗೆ ಕೋಪ ತರಿಸಬೇಡ. ಮನೆಗೆ ಹೊರಡು, ಕ್ಲೈಂಟ್‌ ಜೊತೆ ಮಾತನಾಡಿ ಹೊಸ ಮೀಟಿಂಗ್‌ ಫಿಕ್ಸ್ ಮಾಡಿಸು.”

“ಸರಿ ಅಣ್ಣ……” ಪ್ರವೀಣನ ಮಾತಲ್ಲಿ ಬೇಸರ ಇಣುಕಿತು.

ಹೀಗೆ ಕಾವ್ಯಾ ಪ್ರವೀಣರ ಗೆಳೆತನ ಬೆಳೆದು 6 ತಿಂಗಳಾಯಿತು. ಅವಳಿಗೆ ಕಾಲೇಜಿಗೆ ಬಿಡುವಿದ್ದಾಗೆಲ್ಲ ತಪ್ಪದೆ ಇಬ್ಬರೂ ದೂರದ ರೆಸ್ಟೋರೆಂಟ್‌ ಗಳಿಗೆ ಲಾಂಗ್‌ ಡ್ರೈವ್ ‌ಹೊರಡುತ್ತಿದ್ದರು. ಈಗಂತೂ ಇಬ್ಬರೂ ಬಹಳ ಕ್ಲೋಸ್‌ ಆಗಿದ್ದರು. ಹೀಗೆ ಒಂದು ಸಲ ಬನ್ನೇರುಘಟ್ಟದಾಚೆಯ ಒಂದು ರೆಸಾರ್ಟ್‌ ಗೆಂದು ಹೊರಟಿದ್ದರು. ಆಗ ಇದ್ದಕ್ಕಿದ್ದಂತೆ ಯಮದೂತರಂತೆ ಒಂದು ಬೈಕ್‌ ಅವರ ಪಕ್ಕಕ್ಕೆ ಬಂದು, ಅದರಲ್ಲಿದ್ದ ಮೂವಲ್ಲೊಬ್ಬ ಇವರತ್ತ ಗುಂಡು ಹಾರಿಸಿದ. ಅದು ಕಾವ್ಯಾಳನ್ನು ಹಾದು ಪ್ರವೀಣನ ತೋಳಿಗೆ ಬಡಿಯಿತು! ಕ್ಷಣ ಮಾತ್ರದಲ್ಲಿ ಆ ಗೂಂಡಾಗಳು ಕಣ್ಮರೆ ಆಗಿದ್ದರು. ಈ ಆಕಸ್ಮಿಕ ಶಾಕ್‌ ನಿಂದ ಕಾವ್ಯಾ ಮೂರ್ಛೆ ಹೋಗದಿದ್ದದ್ದೇ ಹೆಚ್ಚು.

ಕಾವ್ಯಾ ಕಿರುಚಿದಳು, “ಪ್ರವೀಣ್‌…… ಸ್ಟಾಪ್‌ ದಿ ಬೈಕ್‌!”

ಪ್ರವೀಣ್‌ ತಕ್ಷಣ ಬೈಕ್‌ ನ್ನು ಬದಿಯಲ್ಲಿ ನಿಲ್ಲಿಸಿದ. ಅವನ ತೋಳಿನಿಂದ ರಕ್ತ ಧಾರೆಯಾಗಿ ಹರಿದಿತ್ತು. ಕಾವ್ಯಾಳಿಗೆ ಗಾಬರಿಯಲ್ಲಿ ಏನೂ ತೋಚಲಿಲ್ಲ. ತಕ್ಷಣ ಅವನನ್ನು ರಸ್ತೆ ಬದಿ ಕಲ್ಲಿನ ಮೇಲೆ ಕೂರಿಸಿ, ತನ್ನ ದುಪಟ್ಟಾದ ಅಂಚು ಹರಿದು ರಕ್ತ ಸೋರದಂತೆ ಗಾಯಕ್ಕೆ ಬಿಗಿಯಾಗಿ ಪಟ್ಟಿ ಕಟ್ಟಿದಳು. ಅವಳು ರಸ್ತೆ ಬದಿ ನಿಂತು ಸಹಾಯಕ್ಕಾಗಿ ಕಾರುಗಳನ್ನು ನಿಲ್ಲಿಸುವಂತೆ ಕೈ ಚಾಚುತ್ತಿದ್ದಳು. ಆದರೆ ಕಲ್ಲು ಮನಸ್ಸಿನ ಆ ಕಾರಿನ ಜನ ಒಬ್ಬರೂ ನಿಲ್ಲಿಸಲಿಲ್ಲ. ತಕ್ಷಣ ಏನನ್ನೋ ನೆನಪಿಸಿಕೊಂಡು ಸಹಾಯಕ್ಕಾಗಿ 100 ನಂಬರ್‌ ಗೆ ಫೋನ್‌ ಮಾಡಿದಳು. ತಕ್ಷಣ ಪೊಲೀಸರ ಗಾಡಿ ಅಲ್ಲಿಗೆ ಧಾವಿಸಿತು. ಅವರುಗಳ ನೆರವಿನಿಂದ ಕಾವ್ಯಾ ಪ್ರವೀಣನನ್ನು ಹತ್ತಿರದ ಆಸ್ಪತ್ರೆಗೆ ಅಡ್ಮಿಟ್‌ ಮಾಡಿದಳು. ಪ್ರವೀಣನಿಂದ ನಂಬರ್‌ ಪಡೆದು ಅವರಣ್ಣ ಪ್ರಕಾಶನಿಗೆ ಫೋನ್‌ ಮಾಡಿ ವಿಷಯ ತಿಳಿಸಿದಳು.

ಅವನನ್ನು ಪರೀಕ್ಷಿಸಿದ ವೈದ್ಯರು ಬಹಳ ರಕ್ತ ಹರಿದುಹೋಗಿದೆ. ತಕ್ಷಣ ರಕ್ತ ಕೊಡಬೇಕು ಎಂದರು. ತಕ್ಷಣ ಕಾವ್ಯಾ ತಾನು ರಕ್ತದಾನ ಮಾಡುವುದಾಗಿ ಹೇಳಿದಳು. ಹಿಂದೆ ಕಾಲೇಜಿನಲ್ಲಿ ಹೀಗೆ ತುರ್ತಾಗಿ ಯಾರಿಗೋ ರಕ್ತ ನೀಡಿದ್ದಳು. ವೈದ್ಯರು ಬ್ಲಡ್‌ ಗ್ರೂಪ್‌ ಪರೀಕ್ಷಿಸಿ ಇಬ್ಬರದೂ ಹೊಂದುತ್ತದೆ ಎಂದಾಗ ಸಮಾಧಾನದ ನಿಟ್ಟುಸಿರಿಟ್ಟಳು. ವೈದ್ಯರು ರಕ್ತ ಡ್ರಾ ಮಾಡಿಕೊಂಡರು.

ಅಷ್ಟು ಹೊತ್ತಿಗೆ ಪ್ರವೀಣನ ಅಣ್ಣ ಪ್ರಕಾಶ್‌ ಅಲ್ಲಿಗೆ ಧಾವಿಸಿ ಬಂದಿದ್ದ. “ಡಾಕ್ಟರ್‌, ಹೇಗಾದರೂ ನನ್ನ ತಮ್ಮನ ಪ್ರಾಣ ಉಳಿಸಿ…. ಎಷ್ಟಾದರೂ ಖರ್ಚಾಗಲಿ, ಚಿಂತೆಯಿಲ್ಲ,” ಎಂದು ಪ್ರಾರ್ಥಿಸಿದ.

“ಹಣ ಈಗ ಮುಖ್ಯವಲ್ಲ…. ಆಪತ್ಕಾಲಕ್ಕೆ ತನ್ನ ರಕ್ತ ನೀಡಿ ಈ ಹುಡುಗಿ ನಿಮ್ಮ ತಮ್ಮನ ಪ್ರಾಣ ಉಳಿಸಿದ್ದಾಳೆ. ಮೊದಲು ಅವಳಿಗೆ ಥ್ಯಾಂಕ್ಸ್ ಹೇಳಿ,” ಎಂದರು ಡಾಕ್ಟರ್‌. ಅವನು ಮೌನವಾಗಿ ಕಾವ್ಯಾಳ ಕಡೆ ತಿರುಗಿ ಕೈ ಮುಗಿದುಬಿಟ್ಟ. ಕಾವ್ಯಾ ತಾನೇ ಅವನಿಗೆ ಧೈರ್ಯ ತುಂಬಿದಳು.

ಪ್ರಕಾಶನ ಕಂಗಳಿಂದ ಕಂಬನಿ ಮಿಡಿಯಿತು. ಪ್ರವೀಣನಿಗೆ ಪ್ರಜ್ಞೆ ಮರಳಿದಂತೆ ಅವನ ಕೈಗಳನ್ನು ಹಿಡಿದು ಕಂಬನಿ ಮಿಡಿದ, “ಪ್ರವೀಣ್‌ ನನ್ನನ್ನು ಕ್ಷಮಿಸಿಬಿಡು. ಯಾರೋ ಸಾಧಾರಣ ಮಧ್ಯಮ ವರ್ಗದ ಹುಡುಗಿಯ ಪ್ರೇಮದ ಬಲೆಗೆ ಬಿದ್ದು ನೀನು ಹಾಳಾದೆ ಎಂದು ನಾನು ಅಂಜಿದ್ದೆ. ಹಣದ ಮದ ನನ್ನನ್ನು ಕುರುಡಾಗಿಸಿತ್ತು. ಈ ಬಡಹುಡುಗಿ ನಿನ್ನ ಜೀವನದಿಂದ ದೂರಾಗಿ ಹೋಗಲಿ ಎಂದು ನಾನೇನೋ ದುಷ್ಟ ಕುತಂತ್ರ ಹೂಡಿದ್ದೆ. ಅದು ನನ್ನ ತಮ್ಮನ ಜೀವಕ್ಕೆ ಮುಳುವಾಗುತ್ತದೆ ಎಂದು ಯೋಚಿಸಲಿಲ್ಲ. ಆದರೆ ನಾವು ಅಂದುಕೊಳ್ಳುವುದಕ್ಕಿಂತ ಬೇರೆಯೇ ರೀತಿ ನಡೆದುಹೋಗುತ್ತದೆ.

“ಪ್ರವೀಣ, ನೀನು ಯಾವುದೋ ಸಾಧಾರಣ ಬಡ ಹುಡುಗಿಯನ್ನು ಪ್ರೇಮಿಸಿದಿ ಎಂದು ಅವಳನ್ನು ನಿವಾರಿಸಲು ಯೋಜಿಸಿದರೆ, ಅದು ನಿನ್ನ ಪ್ರಾಣಕ್ಕೇ ಮುಳುವಾಯಿತು.

“ಕಾವ್ಯಾ….. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಮ್ಮ. ನಿನ್ನ ಪ್ರಾಣಕ್ಕಿಂತ ಹೆಚ್ಚಾಗಿ ನನ್ನ ತಮ್ಮನನ್ನು ಪ್ರೀತಿಸುವೆ ಎಂದು ರಕ್ತ ಕೊಟ್ಟು ಅವನ ಜೀವ ಉಳಿಸಿದ್ದಿ. ನಿನಗೆಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ! ಪ್ರವೀಣ್‌ ಚೇತರಿಸಿಕೊಂಡು ಮನೆಗೆ ಬರಲಿ. ಮಾರನೇ ದಿನವೇ ನಿನ್ನನ್ನು ಹೆಣ್ಣು ಕೇಳಲು ನಿಮ್ಮ ಊರಿಗೆ ಬಂದು ನಿಮ್ಮ ತಾಯಿತಂದೆಯರನ್ನು ಭೇಟಿ ಆಗುತ್ತೇವೆ. ಆದಷ್ಟು ಬೇಗ ನಿಮ್ಮಿಬ್ಬರ ಮದುವೆ ಮಾಡಿಸೋಣ,” ಎಂದು ಮತ್ತೆ ಮತ್ತೆ  ಕಾವ್ಯಾಳ ಕ್ಷಮೆ ಕೋರಿದ.

ಅವನು ವೈದ್ಯರ ಬಳಿ ಹೆಚ್ಚಿನ ವಿವರ ಕೇಳಲು ಹೋದಾಗ, ಪಕ್ಕದಲ್ಲೇ ಮಲಗಿದ್ದ ಕಾವ್ಯಾಳನ್ನು ಕಂಡು ಪ್ರವೀಣ್‌ ತುಂಟ ನಗೆ ನಕ್ಕ. ಇಬ್ಬರಿಗೂ ಮುಖದಲ್ಲಿ ಮಂದಹಾಸ ಮಿಂಚಿತು.

“ಕಾವ್ಯಾ….. ಈ ಸಹಪ್ರಯಾಣಿಕನನ್ನು ನಿನ್ನ ಬಾಳ ಸಂಗಾತಿ ಆಗಿಸಿಕೊಳ್ಳಲು ಸಿದ್ಧ ತಾನೇ?” ಪ್ರವೀಣನ ಪ್ರಶ್ನೆಗೆ ಕಾವ್ಯಾ ನಿಧಾನವಾಗಿ ಎದ್ದು ಬಂದು, ಪ್ರೀತಿಯಿಂದ ಅವನ ಹಣೆ ಚುಂಬಿಸಿದಳು. ಎರಡು ಯುವ ಹೃದಯಗಳು ಒಂದಾಗಿದ್ದವು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ