ನಾಳೆಯ ದಿನ ಏನೋ ನಡೆಯಲಿದೆ ಎಂದು ನನಗೆ ಅರ್ಥವಾಗಿದೆ. ನಾನು ಮುಂಗಾಲಿನ ಮೇಲೆ ನಿಂತು ಮೂಗು ತೂರಿಸಿ ವಿಷಯ ತಿಳಿಯಲು ಪ್ರಯತ್ನಿಸುತ್ತಿದ್ದೆ. ಮನೆಯ ಜವಾಬ್ದಾರಿ ನನ್ನದೇ ತಾನೇ.....? ಇಲ್ಲಿರುವ ಎಲ್ಲರ ಧ್ವನಿಗಳನ್ನೂ ನಾನು ಗುರುತಿಸಬಲ್ಲೆ. ಪಿಂಕಿಯ ಸ್ನೇಹಿತರೆಲ್ಲ ನನಗೆ ಗೊತ್ತು. ಶೇಖರ್ ಮತ್ತು ಮಾಯಾರಿಗೆ ನಾನು ಪ್ರೀತಿಪಾತ್ರ. ನಾನು ಅವರ ಮೂರನೆಯೇ ಮಗನೆಂದು ಪಿಂಕಿ ಹಲವು ಸಲ ಹೇಳಿದ್ದುಂಟು ಅವರ ಮುಖಭಾವವನ್ನು ನೋಡಿಯೇ ನಾನು ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳಬಲ್ಲ.
``ಪಿಂಕಿ, ಎಲ್ಲ ಸ್ನೇಹಿತರನ್ನೂ ಸೇರಿಸಿ ಮನೆಯಲ್ಲಿ ಗುಂಪು ಮಾಡಬೇಡ. ನಿನ್ನ ಜೊತೆಗೆ ಬೇಕಾದರೆ ಅಂಜಲಿ ಮತ್ತು ರಶ್ಮಿಯನ್ನು ಕರೆ. ಬೇರೆಯವರು ಬೇಡ.''
``ಮಮ್ಮೀ.... ನಾನೇನು ಚಿಕ್ಕ ಮಗುವೇ, ಆಫೀಸ್ ಗೆ ಹೋಗುತ್ತೇನೆ. ಇಷ್ಟೊಂದು ಉಪದೇಶ ಕೊಡಬೇಕಾ?''
ಶೇಖರ್ ಕೂಡಲೇ ಎಂದಿನಂತೆ ಪಿಂಕಿಯ ಪರವಹಿಸಿ ಹೇಳಿದರು, ``ಮಾಯಾ, ಪಿಂಕಿ ದೊಡ್ಡವಳಾಗಿದ್ದಾಳೆ. ಹೇಗಿರಬೇಕು ಅನ್ನುವುದು ಅವಳಿಗೆ ಗೊತ್ತು. ನ್ಯೂ ಇಯರ್ ಗೆ ನಾವು ಹೊರಗೆ ಹೋಗುತ್ತಿದ್ದೇವೆ. ಮನೆಯಲ್ಲಿ ಅವಳೊಬ್ಬಳೇ ಯಾಕಿರಬೇಕು? ಸ್ನೇಹಿತರ ಜೊತೆ ಎಂಜಾಯ್ ಮಾಡಲಿ.... ಅದರಲ್ಲಿ ತಪ್ಪೇನಿದೆ?''
``ನಾನು ಮನೆಯಲ್ಲಿರುವಾಗ ಫ್ರೆಂಡ್ಸ್ ಎಲ್ಲ ಬರಲಿ. ನಾನೇನೂ ಹೇಳುವುದಿಲ್ಲ. ಆದರೆ ನಾನಿಲ್ಲದಿರುವಾಗ ಅಂದರೆ ನನಗೆ ಯೋಚನೆ ಆಗುತ್ತದೆ. ರಾಹುಲ್ ಕೂಡ ಫ್ರೆಂಡ್ಸ್ ಜೊತೆ ಗೋವಾಗೆ ಹೋಗಿದ್ದಾನೆ. ಅವನಿದ್ದರೆ ಏನೂ ಚಿಂತೆ ಇರುತ್ತಿರಲಿಲ್ಲ.''
ಪಿಂಕಿ ಎದ್ದು ಬಂದು ಮಾಯಾರ ಕುತ್ತಿಗೆಯನ್ನು ಬಿಗಿದಪ್ಪಿ ಹೇಳಿದಳು, ``ಓ.ಕೆ. ಮಮ್ಮಿ, ನೀವು ಆರಾಮಾಗಿ ಹೋಗಿ ಬನ್ನಿ. ಇಲ್ಲಿ ಗುಂಪು ಸೇರಿಸುವುದಿಲ್ಲ. ಸರೀನಾ.....?''
ಮಾಯಾ ಸಮಾಧಾನಗೊಂಡು ಪಿಂಕಿಯ ಕೆನ್ನೆಗೆ ಮುತ್ತಿಟ್ಟರು. ನಾನು ಅಲ್ಲೇ ನಿಂತು ಈ ಸ್ವಾರಸ್ಯಕರ ದೃಶ್ಯವನ್ನು ನೋಡಿದೆ. ಶೇಖರ್ ಪ್ರೀತಿಯಿಂದ ನನ್ನ ತಲೆ ನೇವರಿಸಿದರು. ನಾನು ಅವರಿಗೆ ಒತ್ತಿಕೊಂಡು ನಿಂತೆ.
ಶೇಖರ್ ಮತ್ತು ಮಾಯಾ ಪ್ರತಿ ವರ್ಷ ನ್ಯೂ ಇಯರ್ ನಂದು ಮನೆಯಲ್ಲೇ ಇರುತ್ತಿದ್ದರು. ಆದರೆ ಈ ವರ್ಷ ತಮ್ಮ ಸ್ನೇಹಿತರೊಂದಿಗೆ ಮುಂಬೈಗೆ ಹೊರಟಿದ್ದಾರೆ. ರಾಹುಲ್ ಈಗಾಗಲೇ ಆಫೀಸಿನಿಂದ ರಜೆ ಪಡೆದು ಗೋವಾಗೆ ಹೋಗಿದ್ದಾನೆ. ಅವನಿಗೆ ಹೆಚ್ಚು ಅಡೆತಡೆಗಳಿಲ್ಲ. ಆದರೆ ಪಿಂಕಿ.... ಜಾಣೆ ಹುಡುಗಿ..... ಪ್ರತಿ ವರ್ಷ ಅಂಜಲಿಯ ಮನೆಯಲ್ಲಿ ನ್ಯೂ ಇಯರ್ ಪಾರ್ಟಿ ನಡೆಯುತ್ತಿತ್ತು. ಅವಳಿಗೆ ಹೊರಗಡೆಗಿಂತ ತನ್ನ ಮನೆಯಲ್ಲೇ ಸ್ನೇಹಿತರನ್ನು ಸೇರಿಸಿಕೊಳ್ಳಲು ಇಷ್ಟಪಡುತ್ತಾಳೆ. ನನಗೆ ಇದು ಸರಿ ಎನ್ನಿಸುತ್ತದೆ. ಆದರೆ ಮಾಯಾ ಇದನ್ನು ಒಪ್ಪುವುದಿಲ್ಲ. ಪಿಂಕಿ ಏನಾದರೂ ನ್ಯೂ ಇಯರ್ ಪಾರ್ಟಿಗೆಂದು ಅಂಜಲಿಯ ಮನೆಗೆ ಹೋಗಿಬಿಟ್ಟರೆ ನಾನಿಲ್ಲಿ ಒಂಟಿಯಾಗಿಬಿಡುತ್ತೇನೆ. ಇದುವರೆಗೆ ನಾನು ಎಂದೂ ಒಂಟಿಯಾಗಿಲ್ಲ.
ಶೇಖರ್ ಮತ್ತು ಮಾಯಾ ಹೊರಟರು. ಪಿಂಕಿ ನನ್ನನ್ನು ಎತ್ತಿ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಮುದ್ದು ಮಾಡಿದಳು, ``ಡೋಂಟ್ ವರಿ ಬಂಟಿ ನೀನು ಒಂಟಿಯಾಗಿರುವುದಿಲ್ಲ. ನಾನು ಎಲ್ಲಿಗೂ ಹೋಗುವುದಿಲ್ಲ. ಮನೆಯಲ್ಲೇ ಪಾರ್ಟಿ ಮಾಡೋಣ,'' ಅವಳು ನನ್ನ ಮನಸ್ಸಿನ ಮಾತನ್ನು ಅದು ಹೇಗೋ ಅರ್ಥ ಮಾಡಿಕೊಂಡಿದ್ದಳು.