ಕೂದಲಿಗೆ ಸಂಬಂಧಿಸಿದ ಅತಿ ದೊಡ್ಡ ಸಮಸ್ಯೆ ಎಂದರೆ ಹೇರ್ ಫಾಲ್ ಅಂದ್ರೆ ಕೂದಲು ಉದುರುವಿಕೆಯದು. ಇದಕ್ಕೆ ಹಲವು ಕಾರಣಗಳಿವೆ. ಹೀಗಾಗಿ ಪ್ರತಿ ಕೇಸಿನಲ್ಲೂ ಚಿಕಿತ್ಸೆ ಬೇರೆ ಬೇರೆಯೇ ಆಗಿರಬೇಕು. ಆದರೆ ಜನ ಈ ಕಡೆ ಗಮನ ಕೊಡುವುದೇ ಇಲ್ಲ, ಹೀಗಾಗಿ ಈ ಸಮಸ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ತಜ್ಞರ ಸಲಹೆಯ ಪ್ರಕಾರ ಇಲ್ಲಿನ ವಿಭಿನ್ನ ವಿಷಯ ಗಮನಿಸಿ, ಯಾವ ಸಮಸ್ಯೆಗೆ ನೀವು ಎಂಥ ಪರಿಹಾರ ಕಂಡುಕೊಳ್ಳಬೇಕು ಎಂಬುದರತ್ತ ಗಮನ ಕೊಡಿ :
ನಿರ್ಲಕ್ಷ್ಯವೇ ಪ್ರಧಾನ
ಇಂದಿನ ಯುವಜನತೆ ಹೆಚ್ಚಾಗಿ ಈ ಸಮಸ್ಯೆಗೆ ಬಲಿಯಾಗಲು ಮುಖ್ಯ ಕಾರಣ, ಪ್ರತಿಯೊಬ್ಬರೂ ತಮ್ಮ ಕೂದಲು, ಹೇರ್ ಸ್ಟೈಲ್ ವಿಭಿನ್ನವಾಗಿ ಕಾಣಲಿ ಎಂದು ಏನೇನೋ ಹುಚ್ಚು ಪ್ರಯೋಗ ಮಾಡುತ್ತಾರೆ. ದಿನೇದಿನೇ ಮಾರುಕಟ್ಟೆಯಲ್ಲಿ ಹೇರ್ ಸ್ಟೈಲಿಂಗ್ ಉಪಕರಣಗಳು ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ.
ಇಂದಿನ ಸ್ಥಿತಿ ಹೇಗಿದೆ ಎಂದರೆ ನಾವೇನೋ ನಮ್ಮ ಕೂದಲನ್ನು ಸುಂದರವಾಗಿ ತೋರ್ಪಡಿಸಲು ಬಯಸುತ್ತೇವೆ, ಆದರೆ ಅದರ ಕಡೆ ಗಮನ ಹರಿಸುವುದೇ ಇಲ್ಲ. ಆಧುನಿಕ ಫ್ಯಾಷನ್ನಿಗೆ ಮರುಳಾಗಿ ಇಂದಿನ ಯುವಜನತೆ ಕೂದಲಿಗೆ ಕಂಡ ಕಂಡ ಬಣ್ಣ ಮೆತ್ತಿಕೊಳ್ಳುತ್ತಾರೆ. ಕಲರ್ ಹಚ್ಚಿದ ವಾರದಲ್ಲೇ ಮತ್ತೊಂದು ಬಣ್ಣ ಬೇಕೆಂದು ಬದಲಿಸುತ್ತಿರುತ್ತಾರೆ. ಜೊತೆಗೆ ಕೂದಲಿನ ಆರೈಕೆಯತ್ತ ಗಮನ ಕೊಡುವುದೇ ಇಲ್ಲ.
ಕೂದಲಿನ ಆಂತರಿಕ ಆರೋಗ್ಯಕ್ಕಾಗಿ ನಿಮ್ಮ ಡಯೆಟ್ ಸದಾ ಅಚ್ಚುಕಟ್ಟಾಗಿರಲಿ. ಕೂದಲನ್ನು ಸದಾ ಸ್ವಚ್ಛ, ಶುಭ್ರವಾಗಿಡಿ. ಧೂಳು ಮಣ್ಣು ಅಧಿಕ ಇರುವ ಕಡೆ ಓಡಾಡುವಾಗ ಅಗತ್ಯವಾಗಿ ತಲೆಗೊಂದು ಸ್ಕಾರ್ಫ್ ಕಟ್ಟಿಕೊಳ್ಳಿ. ನಿಯಮಿತವಾಗಿ ಹೆಡ್ ಮಸಾಜ್ ಮಾಡಿಸಿ. ಕೂದಲು ಸಿಕ್ಕಾಗಿದ್ದರೆ ರಭಸವಾಗಿ ನೀವೇ ಕೂದಲು ಉದುರಿಸುವಂತೆ ರಫ್ & ಟಫ್ ಆಗಿ ತಲೆ ಬಾಚಬೇಡಿ. ಯಾವುದೇ ಹೇರ್ ಸ್ಟೈಲ್ ನಲ್ಲಿದ್ದರೂ ರಾತ್ರಿ ಹೊತ್ತು ತಲೆಗೂದಲನ್ನು ಹರಡಿ ಮಲಗಿರಿ. ಕೂದಲಿನ ಆಂತರಿಕ ಹಾಗೂ ಬಾಹ್ಯ ಆರೋಗ್ಯ ಎರಡೂ ಗಮನಿಸತಕ್ಕದ್ದು.
ಪಾರ್ಲರ್ ಗೆ ಹೋದಾಗ ಸಾಮಾನ್ಯವಾಗಿ ನೀವು ಪಾರ್ಲರ್ ಗೆ ಹೋದಾಗ, ನಿಮ್ಮ ಕೂದಲು ಕತ್ತರಿಸುವವರು ಅನಗತ್ಯವಾಗಿ ನಿಮಗೇನಾದರೂ ಸಲಹೆ ಕೊಡುತ್ತಲೇ ಇರುತ್ತಾರೆ. ಮಾತುಮಾತಿನ ಮಧ್ಯೆ ಅವರ ಬಳಿ ಇರುವ ಶ್ಯಾಂಪೂ ಹಾಗೂ ಇತರ ಬ್ಯೂಟಿ ಪ್ರಾಡಕ್ಟ್ಸ್, ಹೇರ್ ಕೇರ್ ಉತ್ಪನ್ನ ಕೊಳ್ಳಬೇಕೆಂದು ಒತ್ತಾಯಿಸುತ್ತಿರುತ್ತಾರೆ. ಇಂಥವರ ಮಾತಿಗೆ ಎಂದೂ ಮರುಳಾಗಬೇಡಿ. ಅಂಥ ಉತ್ಪನ್ನಗಳ ಕುರಿತಾಗಿ ಅವರ ಬಳಿಯೇ ಇದು ಯಾವ ರೀತಿ ಪ್ರಯೋಜನಕಾರಿ, ಇದರಲ್ಲಿ ಏನೇನು ಬೆರೆತಿದೆ ಎಂದು ಕೇಳಿ ತಿಳಿಯಿರಿ. ನಿಮಗೆ ಬ್ಯೂಟಿ ಪ್ರಾಡಕ್ಟ್ ಬಗ್ಗೆ ಹೆಚ್ಚಿನ ಅರಿವಿದೆ ಎಂದು ಗೊತ್ತಾದರೆ ಅವರೆಂದೂ ನಿಮ್ಮನ್ನು ಆ ಬಗ್ಗೆ ಕೊಳ್ಳಲು ಒತ್ತಾಯಿಸುವುದಿಲ್ಲ.
ಯಾವುದೋ ಜಾಹೀರಾತು ನಂಬಿಕೊಂಡು ಯಾವುದೇ ಬ್ಯೂಟಿ ಪ್ರಾಡಕ್ಟ್ ಕೊಳ್ಳಬೇಡಿ. ಮೊದಲು ಅದನ್ನು ಬಳಸಿದ ಜನರಿಂದ ಫೀಡ್ ಬ್ಯಾಕ್ ಪಡೆಯಿರಿ. ಇಂಟರ್ ನೆಟ್ ನಲ್ಲಿ ಆ ಪ್ರಾಡಕ್ಟ್ ಕುರಿತ ರಿವ್ಯೂ ಓದಿರಿ. ಆ ಕುರಿತು ಯಾರಾದರೂ ಡಾಕ್ಟರಿಂದ ಸಲಹೆ ಪಡೆದರೆ ಇನ್ನೂ ಒಳ್ಳೆಯದು.
ನೀವು ಯಾವುದೇ ಪ್ರಾಡಕ್ಟ್ ಖರೀದಿಸಿದರೂ, ಬಳಸಿದರೂ ಅದರಲ್ಲಿ ಗುರುತಿಸಿರುವ ಸೂಚನೆಗಳನ್ನು ಅಗತ್ಯ ಗಮನಿಸಿ. ಇದರಿಂದ ನಿಮಗೆ ಆ ಪ್ರಾಡಕ್ಟ್ ಕುರಿತು ಸಂಪೂರ್ಣ ಮಾಹಿತಿ ಸಿಗುತ್ತದೆ. ಅದನ್ನು ಹೇಗೆ ಬಳಸಬೇಕು ಎಂಬುದು ಕೂಡ ಅಷ್ಟೇ ಮುಖ್ಯ. ಏಕೆಂದರೆ ಎಷ್ಟೋ ಸಲ ಜನ ಆ ಪ್ರಾಡಕ್ಟ್ ನ್ನು ಹೇಗೆ ಬಳಸಬೇಕು, ಅದರ ಸ್ಟೆಪ್ಸ್ ಏನು ಎಂದು ಫಾಲೋ ಮಾಡುವುದೇ ಇಲ್ಲ. ಹೀಗಾಗಿ ತಪ್ಪಾಗಿ ಬಳಸುತ್ತಾರೆ. ಇದರಿಂದಾಗಿ ಕೂದಲಿಗೆ ಬಹಳ ಹಾನಿಯಾಗುತ್ತದೆ.
ಹೇರ್ ಕಲರ್ ಯಾವಾಗ ಮಾಡಬಾರದು?
ನಿಮ್ಮ ಸ್ಕಾಲ್ಪ್ ನಲ್ಲಿ ಯಾವುದೇ ತರಹದ ಸಣ್ಣ ಅಥವಾ ದೊಡ್ಡ ಸಮಸ್ಯೆ ಇದ್ದರೆ, ಆ ಸಮಯದಲ್ಲಿ ಹೇರ್ ಕಲರಿಂಗ್ ಖಂಡಿತಾ ಬೇಡ! ಇದರಿಂದ ನಿಮ್ಮ ಸ್ಕಾಲ್ಪ್ ಗೆ ತೀವ್ರ ನವೆ, ತುರಿಕೆ ಕಾಟ ಅಥವಾ ಸೋಂಕು ತಗುಲುವ ಸಾಧ್ಯತೆಗಳಿವೆ. ಅದರ ಬದಲಿಗೆ ವೈದ್ಯರಿಗೆ ತೋರಿಸಿ ನಿಮ್ಮ ಆ ಸಮಸ್ಯೆಗೆ ಪರಿಹಾರ ಪಡೆಯಿರಿ. ಅವರ ಸಲಹೆಯ ನಂತರವೇ ಹೇರ್ ಕಲರ್ ಮಾಡಬೇಕು.
ಅನುಕರಣೆ ಬೇಡ
ಇಂದಿನ ಹುಡುಗಿಯರು ಫ್ಯಾಷನ್ ಗಾಗಿ ಎಷ್ಟೆಷ್ಟೋ ಜನರನ್ನು ಅನುಸರಿಸಲು ಹೋಗುತ್ತಾರೆ. ಒಮ್ಮೆ ಕರೀನಾ, ಇನ್ನೊಮ್ಮೆ ಕತ್ರೀನಾ ತರಹದ ಹೇರ್ ಸ್ಟೈಲ್ ಗೆ ಮೊರೆಹೋಗುತ್ತಾರೆ, `ನನ್ನ ಗೆಳತಿ ಹಂಸಿಕಾ ಡಿಫರೆಂಟ್ ಸ್ಟೈಲ್ ನಲ್ಲಿ ಕಾಣುತ್ತಿದ್ದಾಳೆ. ನಾನೂ ಯಾಕೆ ಅದೇ ರೀತಿ ಟ್ರೈ ಮಾಡಬಾರದು?’ ಎಂದು ಕಣ್ಣುಮುಚ್ಚಿಕೊಂಡು ಹಿಂದೆ ಮುಂದೆ ನೋಡದೆ ಪ್ರಯೋಗ ಮಾಡುತ್ತಾರೆ. ಹೀಗೆಂದೂ ಮಾಡಲು ಹೋಗಬೇಡಿ. ನೀವು ಹೇಗಿದ್ದೀರೋ ಹಾಗಿರುವುದೇ ಚೆಂದ. ಯಾರನ್ನೋ ಕಾಪಿ ಮಾಡಲು ಹೋಗಿ ನಿಮ್ಮ ಕೂದಲಿನ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ವಾರದಲ್ಲಿ 1 ದಿನ ನಿಮ್ಮ ಕೂದಲಿನ ಆರೈಕೆಗಾಗಿ ಮನೆಯಲ್ಲೋ ಅಥವಾ ಪಾರ್ಲರ್ ಗೆ ಹೋಗಿಯೋ ವಿಶೇಷ ಆರೈಕೆ ಮಾಡಿಸಿ.
ಯಾವಾಗ ಪಾರ್ಲರ್ ಗೆ ಹೋದರೂ ಅಲ್ಲಿನ ಜನ ಪ್ರೊಫೆಶನಲ್ಸ್ ಹೌದೋ ಅಲ್ಲವೋ ನೋಡಿ ತಿಳಿಯಿರಿ. ಅನುಭವಿ ಜನರಿಂದ ಮಾತ್ರ ಬ್ಯೂಟಿ ಟ್ರೀಟ್ ಮೆಂಟ್ ಪಡೆಯಿರಿ. ಮುಖ್ಯವಾಗಿ ಕಲರಿಂಗ್ ಮಾಡಿಸುವಾಗ, ಅವರು ನಿಮ್ಮ ಕೂದಲಿನ ಬದಲಾಗಿ ಸ್ಕಾಲ್ಪ್ ಗೆ ಕಲರ್ ಹಚ್ಚುತ್ತಿಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ, ಹಾಗೇನಾದರೂ ಆದರೆ ಅದು ಭಾರಿ ಅನಾಹುತಕ್ಕೆ ದಾರಿ ಆದೀತು.
ವೈದ್ಯರ ಸಲಹೆ ಅತ್ಯಗತ್ಯ
ಕೂದಲುದುರುವಿಕೆಗೆ ಇನ್ನೂ ಹಲವಾರು ಆರೋಗ್ಯ ಸಮಸ್ಯೆಗಳೂ ಕಾರಣವಿರಬಹುದು. ಋತು ಬದಲಾದಂತೆಯೂ ಸಹ ಕೂದಲು ಉದುರುತ್ತದೆ. ಪ್ರೆಗ್ನೆನ್ಸಿ ಕಾರಣ ಹಾಗೂ ಥೈರಾಯಿಡ್ ಸಮಸ್ಯೆಯಿಂದಲೂ ಹೀಗಾಗುತ್ತದೆ. ರೋಗಗಳು ಬಂದಾಗ ಬಗೆಬಗೆಯ ಔಷಧಿ ಸೇವನೆ ಮಾಡುವುದರಿಂದಲೂ ಕೂದಲು ಉದುರುತ್ತದೆ. ಹೀಗಾಗಿ ನೀವು ಯಾವುದೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೂ, ತಕ್ಷಣ ವೈದ್ಯರ ಬಳಿ ಹೋಗಿ ಅದಕ್ಕೆ ಚಿಕಿತ್ಸೆ ಪಡೆಯಿರಿ.
ಅದೇ ರೀತಿ ಮನಸ್ಸು ಬಂದಂತೆ ಶ್ಯಾಂಪೂ ಬದಲಾಯಿಸುವುದು, ಹೇರ್ ಆಯಿಲ್ ಬದಲಾಯಿಸುವುದು ಮಾಡಬೇಡಿ. ಯಾವಾಗಲೂ ಅತ್ಯುತ್ತಮ ಕಂಪನಿಯ ಉತ್ಪನ್ನಗಳನ್ನೇ ಬಳಸುತ್ತಾ, ಅದೇ ಬ್ರಾಂಡ್ ಫಾಲೋ ಮಾಡಿ. ತಲೆಹೊಟ್ಟು ಅಧಿಕವಾದರೂ ಅದು ಕೂದಲುದುರುವಿಕೆಗೆ ದಾರಿ ಆದೀತು. ಆದ್ದರಿಂದ ಸೂಕ್ತ ಆ್ಯಂಟಿ ಡ್ಯಾಂಡ್ರಫ್ ಶ್ಯಾಂಪೂ ಬಳಸಿ, ತಲೆಹೊಟ್ಟಿನ ನಿವಾರಣೆಗೆ ಪ್ರಯತ್ನಿಸಿ.
ಹಾಗೆಯೇ ಹೇನು, ಸೀರು ತುಂಬಿಕೊಂಡಿದ್ದರೆ ಅದರಿಂದ ತಲೆಗೂದಲಿನ ಅಂದ, ಆರೋಗ್ಯ ಹಾಳಾದೀತು. ವೈದ್ಯರ ಸಲಹೆಯಂತೆ ಆದಷ್ಟು ಬೇಗ ಅವುಗಳಿಂದ ಮುಕ್ತಿ ಪಡೆಯಿರಿ. ಯಾವುದೋ ಅಗ್ಗದ ಮಾಲು, ಜಾಹೀರಾತಿನ ಆಸೆಗೆ ಮರುಳಾಗಿ ಹೇರ್ ಡೈ ಮಾಡಿಸಬೇಡಿ. ಎಲ್ಲಾ ರೀತಿಯಿಂದಲೂ ಅದು ಯೋಗ್ಯವೇ ಎಂದು ವೈದ್ಯರ ಸಲಹೆ ಪಡೆದೇ ಹೇರ್ ಡೈಗೆ ಮುಂದಾಗಬೇಕು. ಇದಕ್ಕೆ ಬದಲಾಗಿ ಗೋರಂಟಿ ಬಳಸಿ ಕೂದಲಿಗೆ `ಹೆನ್ನಾ’ ಮಾಡಿಸುವುದು ಎಷ್ಟೋ ಉತ್ತಮ ಎನ್ನಬಹುದು.
– ರೇಣುಕಾ ಕುಲಕರ್ಣಿ