ಸಿಹಿಯಾದ ಲಾಡುವಿನಿಂದ ಹಿಡಿದು ಮೈಸೂರು ಪಾಕು, ಪಕೋಡ, ಬೋಂಡ, ಜುಣಕ ಹೀಗೆ ನಾನಾ ವಿಧವಾದ ವ್ಯಂಜನಗಳನ್ನು ತಯಾರಿಸುವಲ್ಲಿ ಕಡಲೆಹಿಟ್ಟಿಗೆ ಅಗ್ರಸ್ಥಾನ. ಅದೇ ರೀತಿ ಅದು ಸೌಂದರ್ಯಕ್ಕೂ ಪೂರಕ. ಚರ್ಮಕ್ಕೆ ಇದರ ಫೇಸ್ ಪ್ಯಾಕ್‌ಮಾಸ್ಕ್ ಬಳಸಿ, ಮುಖದ ಕಾಂತಿ ಹೆಚ್ಚಲು, ಅದು ಬೆಳ್ಳಗೆ ಹೊಳೆ ಹೊಳೆಯುವಂತೆ ಮಾಡಲು ಪ್ರಯತ್ನಿಸಿ.
ಬನ್ನಿ, ಕಡಲೆಹಿಟ್ಟಿನ ಫೇಸ್ ಪ್ಯಾಕ್ ನಿಂದ ನಿಮ್ಮ ಚರ್ಮಕ್ಕೆ ಅನುಗುಣವಾಗಿ ಬಳಸಿ ಹೇಗೆ ಲಾಭ ಪಡೆಯಬೇಕೆಂದು ತಿಳಿಯೋಣ
ಡ್ರೈ ಸ್ಕಿನ್ ನಳನಳಿಸಬೇಕೇ?
ಡ್ರೈ ಸ್ಕಿನ್ ಗಾಗಿ : ಅರ್ಧ ಕಪ್ ಕಡಲೆಹಿಟ್ಟು, ಹಾಲು, ಜೇನುತುಪ್ಪ, ಅರಿಶಿನ, ಚಂದನ ಬೆರೆಸಿ ಪೇಸ್ಟ್ ಮಾಡಿ. ಇದನ್ನು ನೀಟಾಗಿ ಮುಖಕ್ಕೆ ಸವರಿ 15 ನಿಮಿಷ ಹಾಗೇ ಬಿಡಿ. ಚೆನ್ನಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಚರ್ಮ ಕೋಮಲವಾಗಿ ಹೊಳೆಯ ತೊಡಗುತ್ತದೆ.
ಆಯ್ಲಿ ಸ್ಕಿನ್ ಗಾಗಿ : ಇದಕ್ಕಾಗಿ 2 ಚಮಚ ಕಡಲೆಹಿಟ್ಟು, 1 ಚಮಚ ತಾಜಾ ಆ್ಯಲೋವೇರಾ ಜೆಲ್ ನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ರೆಡಿ ಮಾಡಿ, ನೀಟಾಗಿ ಮುಖಕ್ಕೆ ಸವರಬೇಕು. 10 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ.
ಈ ಫೇಸ್ ಪ್ಯಾಕ್ ನ್ನು ವಾರಕ್ಕೆ 2-3 ಸಲ ಹಚ್ಚಬೇಕು. ಆ್ಯಲೋವೇರಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ಸ್, ಮಿನರಲ್ಸ್, ಆ್ಯಂಟಿ ಆಕ್ಸಿಡೆಂಸ್ ಗಳಿದ್ದು ನಮ್ಮ ಚರ್ಮಕ್ಕೆ ಹೆಚ್ಚಿನ ಪೋಷಣೆ ಒದಗಿಸುತ್ತವೆ. ಈ ಫೇಸ್ ಪ್ಯಾಕ್ ಸನ್ ಟ್ಯಾನ್, ಸನ್ ಬರ್ನ್, ಕಪ್ಪು ಕಲೆಗಳು, ಪಿಗ್ಮೆಂಟೇಶನ್ ಇತ್ಯಾದಿ ಎಲ್ಲವನ್ನೂ ನಿವಾರಿಸಬಲ್ಲದು.
ಮೊಡವೆಗಳಿಗೂ ಪರಿಣಾಮಕಾರಿ
ಮೊಡವೆಗಳನ್ನು ನಿವಾರಿಸಲು ಒಂದು ಬಟ್ಟಲಿಗೆ ಕಡಲೆಹಿಟ್ಟು, ಅದಕ್ಕೆ ಸಿಪ್ಪೆ ಹೆರೆದ ಸೌತೆಯ ಪೇಸ್ಟ್ ಹಾಕಿ ಬೆರೆಸಿಕೊಳ್ಳಿ. ನಂತರ ಇದನ್ನು ಫೇಸ್ ಮಾಸ್ಕ್ ತರಹ ಹಚ್ಚಬೇಕು. 20 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ನಂತರ ಮುಖವನ್ನು ಕಾಟನ್ ಟವೆಲ್ ನಿಂದ ಲಘುವಾಗಿ ಒರೆಸಬೇಕು. ಇದನ್ನು ವಾರಕ್ಕೆ 2-3 ಸಲ ಮಾಡುವುದರಿಂದ ಮೊಡವೆಗಳು ಸಹಜವಾಗಿ ದೂರಾಗುತ್ತವೆ.
ಸ್ಕಿನ್ ಟ್ಯಾನ್ ಗೂ ಸಹಾಯಕ
ಬಿಸಿಲಿನ ಓಡಾಟದಿಂದ ಸ್ಕಿನ್ ಟ್ಯಾನ್ ಆಗುವುದು ಸಹಜ. ಹೀಗಾದಾಗ ಅದರ ಮೇಲೆ ಟೊಮೇಟೊ ಪೇಸ್ಟ್ ಕಡಲೆಹಿಟ್ಟಿನ ಮಿಶ್ರಣ ಹಚ್ಚಿ ಒಣಗಲು ಬಿಡಬೇಕು. ಆಗ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದಕ್ಕಾಗಿ ಬೇಕಾದ ಸಾಮಗ್ರಿ ಎಂದರೆ ದೊಡ್ಡ ಗಾತ್ರದ ಮಾಗಿದ 1 ಟೊಮೇಟೊ, 1 ದೊಡ್ಡ ಚಮಚ ನಿಂಬೆರಸ, 2 ಚಮಚ ಕಡಲೆಹಿಟ್ಟು ಇವೆಲ್ಲದರ ಮಿಶ್ರಣ. ಟೊಮೇಟೊ ಪೇಸ್ಟ್ ಮಾಡಿಕೊಳ್ಳುವಾಗ ಬೀಜ ತೆಗೆದುಬಿಡಿ.
ಮುಖದ ಕಾಂತಿ ಹೆಚ್ಚುತ್ತದೆ
1 ಕಪ್ ಮೊಸರು, 2 ಚಮಚ ಕಡಲೆಹಿಟ್ಟು ಬೆರೆಸಿಕೊಂಡು ಚೆನ್ನಾಗಿ ಕದಡಿಕೊಳ್ಳಿ. ನಂತರ ಇದನ್ನು ನಿಧಾನವಾಗಿ ಮುಖಕ್ಕೆ ಹಚ್ಚಬೇಕು. 15-20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್ ನ್ನು ದಿನಕ್ಕೆ 2-3 ಸಲ ಹಚ್ಚಿ ತೊಳೆಯುವುದರಿಂದ ಸ್ಕಿನ್ ಗೆ ಗ್ಲೋ ತರಲು ಸಾಧ್ಯ. ಬಿಸಿಲಿನಲ್ಲಿ ಅತಿಯಾದ ಸುತ್ತಾಟ, ಧೂಳು ಮಣ್ಣು, ಪರಿಸರ ಮಾಲಿನ್ಯದ ದುಷ್ಪ್ರಭಾವಗಳನ್ನು ತಗ್ಗಿಸಿ ಮುಖದ ಕಾಂತಿ ಹೆಚ್ಚಿಸಲು ಇದು ಪೂರಕ. ನೋವು ನಿವಾರಕವೂ ಹೌದು ಕಡಲೆಹಿಟ್ಟಿನಲ್ಲಿ ಮೇಲೆ ತಿಳಿಸಲಾದ ಉಪಯುಕ್ತ ಅಂಶಗಳು ಮಾತ್ರವಲ್ಲದೆ, ದೇಹಕ್ಕೆ ತೀವ್ರ ನೋವಾದಾಗ ಅದರಿಂದಲೂ ನಿವಾರಣೆ ಪಡೆಯಬಹುದು. ದೇಹದ ಯಾವುದೇ ಭಾಗಕ್ಕೆ ಪೆಟ್ಟಾದಾಗ, ನೋವು ಹೆಚ್ಚುವುದು ಸಹಜ. ಆಗ ಆ ಭಾಗಕ್ಕೆ ಕಡಲೆಹಿಟ್ಟಿನ ಗಟ್ಟಿ ಪೇಸ್ಟ್ ನ ಕಟ್ಟು ಹಾಕುವುದರಿಂದ ನೋವು ನಿವಾರಣೆಯಾಗುತ್ತದೆ.
ಹೀಗೆ ಕಡಲೆಹಿಟ್ಟು ಹಸಿವಿಗೆ ಉಪಶಮನ ನೀಡಿ, ಆರೋಗ್ಯ, ಸೌಂದರ್ಯಕ್ಕೂ ನೆರವಾಗುತ್ತದೆ.
– ಕೆ. ಶಾರದಾ