ಕಿಟಕಿಯಿಂದ ತೂರಿ ಬರುತ್ತಿದ್ದ ಸೂರ್ಯನ ಕಿರಣಗಳು ತಿಳಿ ಹಳದಿ ಬಣ್ಣದ ಪರದೆಗೆ ಬಂಗಾರದ ಲೇಪನವನ್ನು ಒದಗಿಸಿದ್ದ. ನನ್ನ ದೃಷ್ಟಿ ಅಲ್ಲಿಂದ ಸರಿದು ಡ್ರಾಯಿಂಗ್‌ ರೂಮ್ ನಲ್ಲಿ ಸಜ್ಜುಗೊಳಿಸಲಾಗಿದ್ದ ತಿಳಿ ನೀಲಿ ಬಣ್ಣದ ಸೋಫಾ ಸೆಟ್‌ಗ್ಲಾಸ್‌ ಟಾಪ್‌ ನಿಂದ ಹೊಳೆಯುತ್ತಿದ್ದ ಟೀಪಾಯ್‌, ಶೆಲ್ಫ್ ನಲ್ಲಿ ಜೋಡಿಸಿಟ್ಟಿದ್ದ ಸುಂದರ ಶೋಪೀಸ್‌ ಗಳ ಮೇಲೆ ಹರಿದಾಡಿ, ಮತ್ತೆ ಎದುರಿಗೆ ಕುಳಿತಿದ್ದ ನನ್ನ ಮಗಳು ಅಕ್ಷತಾಳ ಮೇಲೆ ನೆಟ್ಟಿತು. ಟೇಬಲ್ ಮೇಲೆ ಇರಿಸಿದ್ದ ಫೋಟೊ ಫ್ರೇಮಿನಲ್ಲಿ ಅಕ್ಷತಾಳ ಜೊತೆಗಿದ್ದ ಯುವಕನ ಚಿತ್ರವನ್ನು ನೋಡಬಾರದೆಂದು ಬಹಳ ಪ್ರಯತ್ನಿಸುತ್ತಾ ಅತ್ತಿತ್ತ ದೃಷ್ಟಿ ಹೊರಳಿಸಿದೆ. ನನ್ನ ಪಕ್ಕದಲ್ಲಿ ಕುಳಿತಿದ್ದ ಪತಿ ಆನಂದರಾಮರ ಕೋಪ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದುನ್ನು ಕಂಡೂ ಕಾಣದಂತೆ ಕುಳಿತೆ. ಆದರೆ ನನ್ನ ಮನಸ್ಸಿನಲ್ಲಿ ಹರಿದಾಡುತ್ತಿದ್ದ ಭಾವನೆಗಳು ನನ್ನ ಮುಖದ ಮೇಲೆ ಗೋಚರಿಸುತ್ತಿದ್ದಿರಬಹುದು.

ಮಹಾನಗರದಲ್ಲಿ ಉದ್ಯೋಗದಲ್ಲಿದ್ದ ಮಗಳನ್ನು ನೋಡಲೆಂದು ಬಂದ ನಮಗೆ ಅವಳು ತನ್ನ ಬಗ್ಗೆ ತಿಳಿಸಿದ ವಿಷಯ ಆಘಾತಕಾರಿಯಾಗಿತ್ತು. ಮುಂದೆ ಅವಳೇನು ಹೇಳಿದಳೆಂದು ನನಗೆ ಅರ್ಥವಾಗಲೇ ಇಲ್ಲ. ನನ್ನ ಬುದ್ಧಿ ಸ್ಥಗಿತವಾಗಿಬಿಟ್ಟಿತು. ನನ್ನ ಕನ್ನಡಕದ ಗಾಜು ಮಂಜು ಮಂಜಾಯಿತು. ಆದರೆ ಅದನ್ನು ತೆಗೆದು ಒರೆಸಿಕೊಳ್ಳಲು ನನ್ನಿಂದಾಗಲಿಲ್ಲ. ನನ್ನ ಮುದ್ದು ಮಗಳು, ಕೆಲವೇ ವರ್ಷಗಳ ಹಿಂದೆ ನನ್ನ ಬೆರಳು ಹಿಡಿದು ನಡೆಯುತ್ತಿದ್ದಳು, ಅಪ್ಪ ಅಮ್ಮನ ಹಿಂದೆ ಮುಂದೆಯೇ ಸುತ್ತಿತ್ತಿದ್ದಳು, ಅಪ್ಪನ ಹತ್ತಿರ ಅದು ಬೇಕು, ಇದು ಬೇಕು ಎಂದು ಕೇಳಿ ತೆಗೆಸಿಕೊಳ್ಳುತ್ತಿದ್ದಳು, ಅವಳೇ ಈಗ ಇಲ್ಲಿ ನಮ್ಮ ಮುಂದೆ ಕುಳಿತು ತನ್ನ ಬಗ್ಗೆ ಅಂಜಿಕೆಯಿಲ್ಲದೆ ಹೀಗೆ ಹೇಳುತ್ತಿರುವಳೇ? ಮನೆಯಿಂದ ಹೊರಗೆ ಹೋಗಿ ಉದ್ಯೋಗ ಮಾಡಿದಾಕ್ಷಣ ತಾನೇ ತೀರ್ಮಾನ ತೆಗೆದುಕೊಳ್ಳುವಷ್ಟು ದೊಡ್ಡವಳಾಗಿಬಿಟ್ಟಳೇ…..? ಯಾವುದೋ ಹುಡುಗನೊಂದಿಗೆ….. ವಿವಾಹ ಮಾಡಿಕೊಳ್ಳದೆಯೇ ಜೊತೆಯಲ್ಲಿರುವುದು…..? ಸಂಬಂಧವಿಲ್ಲದ ಈ ಸಂಬಂಧಕ್ಕೊಂದು ಹೊಸ ನಾಮಧೇಯ…. ಲಿವ್ ‌ಇನ್‌ ರಿಲೇಶನ್‌ ಶಿಪ್‌.

ನನ್ನ ಕಣ್ಣೀರು ಕೆನ್ನೆಯನ್ನು ತೋಯಿಸಲು ಸಿದ್ಧವಾಗಿತ್ತು. ಗಂಟಲಲ್ಲಿ ಏನೋ ಸಿಕ್ಕಿಕೊಂಡಂತಿತ್ತು. ನನ್ನ ಪತಿಯ ಬಿಗಿದ ಮುಷ್ಟಿಯನ್ನು ಕಂಡಾಗ ಅವರ ಕೋಪ ಸಿಡಿಯಲಿದೆ ಎನ್ನಿಸಿತು.

ಯಾವುದೋ ಲೋಕದಲ್ಲಿ ಅವ್ಯಕ್ತ ಭಾವನೆಗಳೊಂದಿಗೆ ತೊಳಲಾಡುತ್ತಿದ್ದ ನಾನು `ಅಮ್ಮಾ……’ ಎಂದು ನನ್ನ ಹತ್ತಿರದಲ್ಲೇ ಕರೆದ ಧ್ವನಿ ಕೇಳಿ ಬೆಚ್ಚಿದೆ. ಅಕ್ಷತಾ ಟೀಪಾಯ್‌ ನ್ನು ಕೊಂಚ ಹಿಂದೆ ಸರಿಸಿ, ನನ್ನ ಮುಂದೆ ನೆಲದ ಮೇಲೆ ಕುಳಿತಿದ್ದಳು.

“ನನ್ನ ಈ ವಿಷಯ ನಿಮಗೆ ಬೇರೆಯವರಿಂದ ತಿಳಿಯುವ ಮೊದಲು ನಾನೇ ತಿಳಿಸಬೇಕೆಂದುಕೊಂಡೆ. ಅದಕ್ಕಾಗಿಯೇ ನೀವು ಬರಲೆಂದು ಕಾಯುತ್ತಿದ್ದೆ,” ಅಕ್ಷತಾ ನಮಗೆ ವಿಷಯವನ್ನು ಅರ್ಥ ಮಾಡಿಸುವ ಪ್ರಯತ್ನದಲ್ಲಿದ್ದಳು, “ನನಗೆ ನಿಮ್ಮ ಮೇಲೆ ಬಹಳ ಪ್ರೀತಿ. ಗೌರವ ಇದೆ. ಆದರೆ ನೀವು ನನ್ನನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಮತ್ತು ಅಭಯ್‌….. ಪರಸ್ಪರ ಮೆಚ್ಚುಗೆಯ ಕಾರಣದಿಂದಾಗಿ ಜೊತೆಯಲ್ಲಿ ವಾಸಿಸುತ್ತಿದ್ದೇವೆ. ಆದರೆ ನಮ್ಮ ನಮ್ಮ ಕೆಲಸಗಳನ್ನು ಅಂದರೆ ಪಾತ್ರೆ, ಬಟ್ಟೆ ತೊಳೆಯುವಂತಹ ಕೆಲಸಗಳನ್ನು ನಾವು ನಾವೇ ಮಾಡಿಕೊಳ್ಳುತ್ತೇವೆ. ಮನೆಯ ಖರ್ಚನ್ನು ಹಂಚಿಕೊಳ್ಳುತ್ತೇವೆ. ನಾನು ಅವನಿಗಾಗಿ ಊಟ ಮಾಡದೆ ಕಾದು ಕುಳಿತಿರುವುದಿಲ್ಲ. ಅವನು ನಿಮ್ಮ ವಿಚಾರವಾಗಿ ನನ್ನನ್ನು ಹಂಗಿಸುವಂತಿಲ್ಲ….

“ನಾನು ಅವನಿಗಾಗಿ ಅರೆ ಮನಸ್ಸಿನಿಂದ ಯಾವುದೇ ವ್ರತ ಮಾಡಬೇಕಾಗಿಲ್ಲ. ಅವನು ನನಗಾಗಿ ತನ್ನ ರೀತಿ ನೀತಿಯನ್ನು ಬದಲಿಸಬೇಕಿಲ್ಲ. ನಾವು ನಮ್ಮ ಕೆರಿಯರ್‌, ಫ್ಯಾಮಿಲಿ ಬಗ್ಗೆ ಸ್ವತಃ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಾವುದೇ ಒತ್ತಾಯ ಮಾಡುವುದಿಲ್ಲ. ನಮ್ಮ ಸೇವಿಂಗ್ಸ್, ಇನ್ವೆಸ್ಟ್ ಮೆಂಟ್‌ ಎಲ್ಲವೂ ಪ್ರತ್ಯೇಕವಾಗಿರುತ್ತದೆ. ಪತಿಪತ್ನಿಯಾಗುವುದಕ್ಕಿಂತ ನಾವು ಸ್ನೇಹಿತರಾಗಿರಲು ಇಷ್ಟಪಡುತ್ತೇವೆ ಅಪ್ಪಾ… ಇದು ತಪ್ಪೇ…..?”

ಆನಂದರಾಮರ ಕೆಂಪಾಗಿದ್ದ ಮುಖದಲ್ಲಿ ಅಚ್ಚರಿ ಮೂಡಿತು.

ಅಕ್ಷತಾ ಮಾತನ್ನು ಮುಂದುವರಿಸಿದಳು, “ವಿವಾಹ ಬಂಧನಕ್ಕೆ ಮೊದಲು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲವಲ್ಲ? ವಿವಾಹವಾದ ನಂತರ ಹೊಂದಾಣಿಕೆಯಾಗದೆ ವಿಚ್ಛೇದನಕ್ಕೆ ಅರ್ಜಿ ಹಾಕುವುದಕ್ಕಿಂತ ನಾವು ಪರಸ್ಪರ ಪ್ರೀತಿ, ಗೌರವದಿಂದ ಇರಲಾಗುತ್ತದೆಯಾ ಎಂದು ನೋಡಿಕೊಳ್ಳುವುದು ಒಳ್ಳೆಯದು. ನಾವು ಹಾಗೆ ಇರಬಹುದು ಎನ್ನಿಸಿದರೆ ಮದುವೆ ಮಾಡಿಕೊಳ್ಳಬಹುದು. ಇಲ್ಲವಾದರೆ ಮನಸ್ಸು ಕೆಡಿಸಿಕೊಳ್ಳದೆ ಬೇರೆಯಾಗಬಹುದು.”

“ಆದರೆ….” ನಾನು ಏನೋ ಹೇಳಲು ಹೊರಟೆ.

ಅಷ್ಟರಲ್ಲಿ ಅಕ್ಷತಾ ನನ್ನ ಮಡಿಲಲ್ಲಿ ತಲೆಯಿರಿಸಿ ಹೇಳಿದಳು, “ನೀವಿಬ್ಬರೂ ನನ್ನನ್ನು ಬುದ್ಧಿವಂತೆಯನ್ನಾಗಿ ಬೆಳೆಸಿದ್ದೀರಿ. ನನ್ನ ಜೀವನಕ್ಕೊಂದು ನಿಶ್ಚಿತ ನೆಲೆ ಕಂಡುಕೊಳ್ಳುವವರೆಗೆ ಬೇರೊಂದು ಜೀವವನ್ನು ಈ ಭೂಮಿಗೆ ತರುವುದಿಲ್ಲ. ನಿಮಗೆ ನನ್ನ ಮೇಲೆ ಅಷ್ಟು ನಂಬಿಕೆ ಇದೆ ಅಲ್ಲವೇ?”

ನನಗೆ ಅವಳ ತಲೆ ಸವರಿ ಮೈದಡವಬೇಕೆನಿಸಿತು. ಅಷ್ಟರಲ್ಲಿ ಪತಿರಾಯರು ಎದ್ದು ನಿಂತುದನ್ನು ಕಂಡು ಸುಮ್ಮನಾದೆ.

“ವನಜಾ ನಡಿ,” ಇವರೆಂದರು.

ಅಕ್ಷತಾಳ ಮುಖ ಸಪ್ಪೆಯಾಯಿತು. ಮಗಳ ಪರವಾಗಿ ಇವರಿಗೆ ಏನಾದರೂ ಹೇಳಬೇಕೆನ್ನುವಷ್ಟರಲ್ಲಿ ಅವರು ಹೇಳಿದ ಮಾತಿನಿಂದ ನಾವು ಬೆರಗಾದೆವು.

“ಎದ್ದು ಬಾ, ಸ್ವಲ್ಪ ರೆಸ್ಟ್ ಪಡೆಯೋಣ. ಆಮೇಲೆ ಈ ಅಭಯ್‌ ನನ್ನು ಭೇಟಿ ಮಾಡಿ ನಾವು ಊರಿಗೆ ಹೋಗೋಣ.”

ಕ್ಷಣ ಮಾತ್ರದಲ್ಲಿ ಅಕ್ಷತಾ ಮುಖವರಳಿಸಿ ನಮ್ಮನ್ನು ಬಿಗಿದಪ್ಪಿದಳು.

“ನಾನು ಈಗಲೇ ಅಭಯ್‌ ಗೆ ಫೋನ್‌ ಮಾಡುತ್ತೇನೆ. ಥ್ಯಾಂಕ್ಯೂ ಅಮ್ಮಾ….. ಅಪ್ಪಾ…..” ಎಂದಳು.

ಈಗ ನಾನು ಅಕ್ಷತಾಳ ತಲೆ ನೇವರಿಸಿ ಹಣೆಗೆ ಮುತ್ತಿಟ್ಟೆ. ಅವಳು ಅಭಯ್‌ ಗೆ ಫೋನ್‌ ಮಾಡುವ ಗಡಿಬಿಡಿಯಲ್ಲಿದ್ದಾಗ, ನನ್ನ ಮನಸ್ಸು ಯೋಚಿಸುತ್ತಿತ್ತು. ಜೀವನದಲ್ಲಿ ಎಲ್ಲರೂ ಒಮ್ಮೆ ಸ್ವತಃ ತೀರ್ಮಾನ ತೆಗೆದುಕೊಳ್ಳಲು ಪ್ರಾರಂಭಿಸಬೇಕು. ಅದನ್ನು ನಾನು ಮಾಡಲಿಲ್ಲ, ಆದರೆ ನನ್ನ ಮಗಳು ಮಾಡುತ್ತಿದ್ದಾಳೆ. ಅವಳ ತೀರ್ಮಾನ ಸರಿಯೋ ತಪ್ಪೋ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. ನನಗೆ ಮಾತ್ರ ಅವಳನ್ನು ಅಭಯ್‌ ಜೊತೆ ಮದುಮಗಳ ಉಡುಗೆ ತೊಡಿಗೆಯಲ್ಲಿ ನೋಡಬೇಕೆಂಬ ಆಸೆ. ಆದರೆ ಇವರ ಇಂದಿನ ಸಂಬಂಧದಲ್ಲಿ ಪ್ರೀತಿ, ವಿಶ್ವಾಸಗಳು ಗಟ್ಟಿಯಾದರೆ ಮಾತ್ರ ಇದು ಸಾಧ್ಯ. ಇಲ್ಲದಿದ್ದರೆ ನಾವಂತೂ ನಮ್ಮ ಮಗಳ ಜೊತೆಗಿರುತ್ತೇವೆ.

ನಮ್ಮ ಮನಸ್ಸನ್ನು ಅದಕ್ಕಿದ್ದ ಸಂಶಯದ ಮೋಡವನ್ನೂ ಹೊಸ ಬೆಳಕು ಸಂಪೂರ್ಣವಾಗಿ ಹೊರದೂಡಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ