ನಯನಾ ನೋಡಲು ಬಹಳ ಸುಂದರವಾಗಿದ್ದಳು. ಎತ್ತರದ ಕಾಯ, ಆಕರ್ಷಕ ಕಣ್ಣುಗಳು, ಉದ್ದನೆಯ ಕೂದಲು. ಯಾರೇ ಆಗಲಿ ಅವಳನ್ನು ಹೊಗಳದೇ ಇರುವುದಿಲ್ಲ. ಎಂಬಿಎ ಮುಗಿಸಿದ ಬಳಿಕ ಅವಳು ತನ್ನ ಮೊದಲ ಜಾಬ್‌ ಗಾಗಿ ಸಂದರ್ಶನ ಕೊಡಲೆಂದು ಹೊರಟು ನಿಂತಾಗ ಅವಳು ಯಶಸ್ವಿಯಾಗುತ್ತಾಳೆಂದೇ ಎಲ್ಲರ ಅನಿಸಿಕೆಯಾಗಿತ್ತು. ಇಂದು ನಾನು ಯಶಸ್ವಿಯಾಗಿಯೇ ಆಗುತ್ತೇನೆಂಬುದು ಅವಳ ಅಂತರಾಳದ ಅಪೇಕ್ಷೆಯಾಗಿತ್ತು. ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳಿಗೆ ಅವಳು ಸಮರ್ಪಕವಾಗಿಯೇ ಉತ್ತರ ಕೊಟ್ಟಿದ್ದಳು.

ನಯನಾಗೆ ಸಂದರ್ಶನ ಸಮಯದಲ್ಲಿ ದೀಪಾಳ ಭೇಟಿಯಾಯಿತು. ಅವಳು ಕೂಡ ನಯನಾಳ ಹಾಗೆಯೇ ಇದ್ದಳು. ಆದರೂ ನಯನಾಳಿಗೆ ದೀಪಾಳೇ ಸೆಕ್ರೆಟರಿ ಪೋಸ್ಟ್ ಗೆ ಆಯ್ಕೆಯಾಗಬಹುದು ಎಂದು ಅನಿಸಲಾರಂಭಿಸಿತು. ನಯನಾಳ ನಿರೀಕ್ಷೆ ಸುಳ್ಳಾಗಲಿಲ್ಲ. ದೀಪಾಳೇ ಸೆಕ್ರೆಟರಿ ಹುದ್ದೆಗೆ ಆಯ್ಕೆಯಾದಳು.

ನಯನಾಳ ನಿಕಟವರ್ತಿಗಳಿಗೆ ಈ ವಿಷಯ ಗೊತ್ತಾದಾಗ ಸಂದರ್ಶಕರು ದೀಪಾಳ ಪರ ವಹಿಸಿದ್ದಾರೆಂದು ಮಾತನಾಡಿಕೊಂಡರು. ಆ ಮಾತಿಗೆ ಸ್ವತಃ ನಯನಾಳೇ ಅವರಿಗೆ ಉತ್ತರ ಕೊಟ್ಟುಕೊಂಡಳು. ಹಾಗೇನೂ ಇಲ್ಲ. ದೀಪಾಳಲ್ಲಿ ಅಂತಹ ವಿಶ್ವಾಸ ಇತ್ತು. ಹಾಗಾಗಿ ಅವಳು ಆ ಪೋಸ್ಟ್ ಗೆ ಆಯ್ಕೆಯಾದಳು. ನಾನು ಅದರಲ್ಲಿ ಹಿಂದೆಬಿದ್ದೆ, ಎಂದು ಒಪ್ಪಿಕೊಂಡಳು.

ನಯನಾ ಆ ಬಳಿಕ ಕೆರಿಯರ್‌ ಕೌನ್ಸಿಲರ್‌ ಜೊತೆಗೆ ಚರ್ಚಿಸಿದಳು. ಆಗ ಅವರು ಹೇಳಿದ್ದಿಷ್ಟು, “ನಿಮ್ಮ ಪರ್ಸನಾಲಿಟಿ ಚೆನ್ನಾಗಿದೆ. ಆದರೆ ಅದಕ್ಕೆ ಗ್ರೂಮಿಂಗ್‌ ನ ಅವಶ್ಯಕತೆ ಇದೆ.”

ಪರ್ಸನಾಲಿಟಿ ಗ್ರೂಮಿಂಗ್‌ನ ಟಿಪ್ಸ್ ಹಾಗೂ ಮಹತ್ವವನ್ನು ನೀವು ತಿಳಿದುಕೊಳ್ಳಿ……

ಹೆಚ್ಚು ಆತ್ಮವಿಶ್ವಾಸ ಪರ್ಸನಾಲಿಟಿಯ ಮೋಹಕ ರೂಪ ಕೆಲಸದ ಪ್ರಕಾರ ನಿರ್ಧರಿಸಲ್ಪಡುತ್ತದೆ. ಕೆರಿಯರ್‌ ಕೌನ್ಸೆಲರ್‌ ಸೌಮ್ಯಾ ಚತುರ್ವೇದಿ ಹೀಗೆ ಹೇಳುತ್ತಾರೆ, “ನೀವು ಯಾವ ಪ್ರೊಫೆಷನ್‌ ನಲ್ಲಿದ್ದೀರೊ ಅದಕ್ಕೆ ತಕ್ಕಂತೆಯೇ ಪೋಷಾಕು ಧರಿಸಿ. ನಿಮ್ಮ ಮಾತಿನ ಧಾಟಿ ಹೇಗಿರಬೇಕೆಂದರೆ, ಒಂದು ಸಲ ಮಾತನಾಡಿಸಿದ ವ್ಯಕ್ತಿ ನಿಮ್ಮ ಜೊತೆ ಮತ್ತೆ ಮಾತನಾಡಲು ತವಕಿಸಬೇಕು. ಗ್ಲಾಮರ್‌ ನಿಂದ ತುಂಬಿಕೊಂಡಿರುವ ಜಾಬ್‌ ಗಳಲ್ಲಿ ಪರ್ಸನಾಲಿಟಿ ತುಂಬಾ ಮುಖ್ಯ.”

ವ್ಯಕ್ತಿತ್ವಕ್ಕೆ ತಕ್ಕ ಪೋಷಾಕು

ಫ್ಯಾಷನ್‌ ಡಿಸೈನರ್‌ ಸ್ನೇಹಾ ಹೇಳುವುದೇನೆಂದರೆ, “ಪರ್ಸನಾಲಿಟಿ ಗ್ರೂಮಿಂಗ್‌ ನಲ್ಲಿ ಎಲ್ಲಕ್ಕೂ ಮುಖ್ಯವಾದುದೆಂದರೆ, ಡ್ರೆಸ್ ಸೆನ್ಸ್, ನಿಮ್ಮ ಡ್ರೆಸ್‌ ಸೆನ್ಸ್ ಎಷ್ಟು ಚೆನ್ನಾಗಿರುತ್ತದೊ, ಎದುರುಗಿನ ವ್ಯಕ್ತಿಯ ಮೇಲೆ ಅದು ಅಷ್ಟೇ ಒಳ್ಳೆಯ ಪರಿಣಾಮ ಬೀರುತ್ತದೆ. ಒಳ್ಳೆಯ ಪರ್ಸನಾಲಿಟಿಗೆ ಅವಶ್ಯವಾದುದೆಂದರೆ, ಯಾವ ಸಂದರ್ಭಕ್ಕೆ ಎಂತಹ ಡ್ರೆಸ್‌ ಧರಿಸಬೇಕೆಂದು ನಿಮಗೆ ಚೆನ್ನಾಗಿ ಗೊತ್ತಿರಬೇಕು.”

ಮೇಕಪ್ಸರಳಾಗಿರಲಿ

ಬ್ಯೂಟಿ ಎಕ್ಸ್ ಪರ್ಟ್‌ ಅಶ್ವಿನಿ ಹೇಳುವುದೇನೆಂದರೆ, “ಪರ್ಸನಾಲಿಟಿ ಗ್ರೂಮಿಂಗ್‌ ನಲ್ಲಿ ಮೇಕಪ್‌ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಮೇಕಪ್‌ ಮಾಡುವ ಮುಂಚೆ ನಾನು ಯಾವ ಸ್ಥಳಕ್ಕೆ ಹೋಗಬೇಕಿದೆ ಎಂಬುದರ ಅರಿವು ನಿಮಗಿರಬೇಕು. ನೀವು ಒಂದು ಪಾರ್ಟಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ, ನಿಮ್ಮ ಮೇಕಪ್‌ ಕಲರ್‌ ಫುಲ್ ಆಗಿರಲಿ. ಆಫೀಸ್‌ ಗಾಗಿ ಮೇಕಪ್‌ ಬೇರೆ ರೀತಿಯದ್ದೇ ಆಗಿರಬೇಕು. ಅತ್ಯಂತ ಪ್ರಖರ ಮೇಕಪ್‌ ಆಫೀಸಿಗೆ ತಕ್ಕುದಲ್ಲ. ಸಾಧಾರಣ ಮೇಕಪ್‌ ನಿಮಗೆ ಹೆಚ್ಚು ಆಕರ್ಷಕವಾಗಿ ಕಂಡುಬರುತ್ತದೆ. ನೀವು ಯಾವ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವಿರೋ, ನಿಮ್ಮ ಮೇಕಪ್‌ ಕೂಡ ಅದಕ್ಕೆ ತಕ್ಕಂತೆಯೇ ಇರಲಿ.”

ದೇಹ ಭಾಷೆ

ಮೇಕಪ್‌ ನ ಜೊತೆ ಜೊತೆಗೆ ಬಾಡಿ ಲ್ಯಾಂಗ್ವೇಜ್‌ ಗೂ ತನ್ನದೇ ಆದ ಮಹತ್ವವಿದೆ. ಅದರಲ್ಲಿ ಸುಧಾರಣೆ ಮಾಡಿಕೊಳ್ಳುವುದು ಅತ್ಯವಶ್ಯ. ಸುನೀತಾಳಿಗೆ ಮಾತನಾಡುವಾಗ ಕೈ ಬೀಸುವ ಅಭ್ಯಾಸವಿತ್ತು. ಅವಳ ಈ ಅಭ್ಯಾಸದಿಂದ ಪಾರ್ಟಿಗಳಲ್ಲಿ ಎಷ್ಟೋ ಸಲ ಹಾಸ್ಯಾಸ್ಪದ ಸ್ಥಿತಿ ಎದುರಿಸಬೇಕಾಗಿ ಬಂದಿತ್ತು. ಅವಳ ಪತಿ ದೀಪಕ್‌ ಗೆ ಈ ಸಂಗತಿ ಗೊತ್ತಿತ್ತು. ಅವರು ಅವಳಿಗೆ ಈ ಅಭ್ಯಾಸ ಬಿಟ್ಟುಬಿಡಲು ನೆರವಾದರು.

ಸ್ನೇಹಾ ಬ್ಯಾಂಕೊಂದರಲ್ಲಿ ಆಫೀಸರ್‌. ಅವರಲ್ಲಿ ಯಾವುದೇ ಕೊರತೆ ಇರಲಿಲ್ಲ. ಆದರೆ ಒಮ್ಮೊಮ್ಮೆ ಒತ್ತಡದ ಸ್ಥಿತಿ ಉಂಟಾದಾಗ ಅವರು ಬಾಯಿಗೆ ಬೆರಳು ಹಾಕಿಕೊಂಡು ಉಗುರು ಕಚ್ಚುತ್ತಿದ್ದರು. ಅತ್ಯಂತ ಕಷ್ಟಪಟ್ಟು ಅವರು ಈ ಅಭ್ಯಾಸ ಬಿಟ್ಟುಬಿಟ್ಟರು.

ಏಳುವುದು, ಕೂರುವುದು, ಹೆಜ್ಜೆ ಹಾಕುವುದು, ಫೋನ್‌ ನಲ್ಲಿ ಮಾತನಾಡುವುದು ಕೂಡ ಒಂದು ಕಲೆ. ಅದರಲ್ಲಿ ಸುಧಾರಣೆ ತರದ ಹೊರತು ಪರ್ಸನಾಲಿಟಿ ಗ್ರೂಮಿಂಗ್‌ ಕಷ್ಟಕರವಾಗಿ ಪರಿಣಮಿಸುತ್ತದೆ. ಮಾತುಕತೆಯಲ್ಲಿ ಶಿಷ್ಟಾಚಾರ ಕೂಡ ಪರ್ಸನಾಲಿಟಿ ಗ್ರೂಮಿಂಗ್‌ ನ್ನು ಹೆಚ್ಚಿಸುತ್ತದೆ. ಹೀಗಾಗಿ ನಿಮ್ಮ ಬಾಡಿ ಲ್ಯಾಂಗ್ವೇಜ್‌ ಬಗ್ಗೆ ಗಮನಹರಿಸಿ.

ಪ್ರೇಮಲತಾ

ಪರ್ಸನಾಲಿಟಿ ಗ್ರೂಮಿಂಗ್ಗೆ ಕಿವಿಮಾತು

ವರ್ತನೆಯಲ್ಲಿ ಶಿಷ್ಟಾಚಾರ ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುವ ಕೆಲಸ ಮಾಡುತ್ತದೆ. ಕೋಪ ಹಾಗೂ ಒತ್ತಡ, ಮುಖದ ಸೌಂದರ್ಯದ ಮೇಲೆ ಪ್ರಭಾವ ಬೀರುತ್ತದೆ.

ತುಟಿಯಲ್ಲಿ ಯಾವಾಗಲೂ ನಗು ತುಂಬಿ ತುಳುಕುತ್ತಿರಲಿ.

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಅದಕ್ಕೆ ಮೆರುಗು ಕೊಡಲು ಪ್ರಯತ್ನಿಸಿ.

ಸದಾ ಸಕಾರಾತ್ಮಕ ಯೋಚನೆ ಇಟ್ಟುಕೊಳ್ಳಿ. ಇದರಿಂದ ಭವಿಷ್ಯದಲ್ಲಿ ಮುಂದೆ ಸಾಗಲು ನೆರವಾಗುತ್ತದೆ.

ನಿಮ್ಮಿಂದ ಯಾವುದಾದರೂ ತಪ್ಪು ಘಟಿಸಿದಲ್ಲಿ ಅದನ್ನು ಬಚ್ಚಿಡಬೇಡಿ. `ಸಾರಿ’ `ಥ್ಯಾಂಕ್ಯೂ’ದಂತಹ ಶಬ್ದಗಳನ್ನು ಸೂಕ್ತ ಸಮಯದಲ್ಲಿ ಬಳಸುವುದು ನಿಮ್ಮ ಸೌಜನ್ಯತೆಯನ್ನು ಹೆಚ್ಚಿಸುತ್ತದೆ.

ಯಾವುದೊ ಒಂದು ಕೆಲಸದ ಬಗ್ಗೆ ನಿಮಗೆ ಗೊತ್ತಿದೆ. ಆದರೆ ಬೇರೆಯವರಿಗೆ ಅದು ಗೊತ್ತಿಲ್ಲದಿರುವಾಗ ನೀವು ಅವರಿಗೆ ನೆರವಾಗಿ.

ಕೆಲಸ ಮಾಡುವಾಗ ಆತ್ಮವಿಶ್ವಾಸ ಇರಬೇಕು.

ನೀವು ಕೆಲಸ ಮಾಡುವ ಸ್ಥಳದಲ್ಲಿ ಕೆಲವೊಂದು ನಿಯಮಗಳಿರುತ್ತವೆ.

ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಕೆಲಸ ಹೇಗೆ ಮಾಡಬೇಕು ಎನ್ನುವುದು ನಿಮಗೆ ಗೊತ್ತಿರಬೇಕು.

ಕೆಲಸದ ಸ್ಥಳದಲ್ಲಿ ಕೌಟುಂಬಿಕ ವಿಷಯಗಳ ಬಗ್ಗೆ ಚರ್ಚೆ ಮಾಡಬೇಡಿ. ಒಂದು ವೇಳೆ ಯಾರಾದರೂ ಕೌಟುಂಬಿಕ ತೊಂದರೆಗಳಲ್ಲಿ ಸಿಲುಕಿದರೆ ಅವರಿಗೆ ಅವಶ್ಯ ನೆರವು ನೀಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ