2015ರಲ್ಲಿ 70ರಲ್ಲಿ 67 ಸ್ಥಾನಗಳ ಗೆಲುವಿನ ಬಳಿಕ ದೆಹಲಿಯ ಅರವಿಂದ್ ಕೇಜ್ರಿವಾಲ್ ರ ಆಮ್ ಆದ್ಮಿ ಪಾರ್ಟಿಗೆ 2017ರಲ್ಲಿ ದೆಹಲಿ ಮಹಾನಗರ ಚುನಾವಣೆಯಲ್ಲಿ ಸೋಲು. 2019ರ ಲೋಕಸಭೆ ಚುನಾವಣೆಯಲ್ಲೂ ಕೂಡ. ಆದರೆ ಈ ಸಲದ ದೆಹಲಿ ಚುನಾವಣೆಯಲ್ಲಿ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾಹ್ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿ ವಿದ್ಯುತ್, ನೀರು, ಶಾಲೆ, ಆಸ್ಪತ್ರೆ ಮುಂತಾದ ಸಾಮಾನ್ಯ ವಿಷಯಗಳನ್ನು ಮುಂದಿಟ್ಟುಕೊಂಡು 70ರಲ್ಲಿ 62 ಸ್ಥಾನಗಳಲ್ಲಿ ಗೆಲುವು ದಾಖಲಿಸಿದರು.
ಭಾಜಪಾ ದೇಶಕ್ಕೆ ಏನು ಕೊಡಲು ಬಯಸುತ್ತಿದೆ ಎಂಬುದನ್ನು ಭಾಜಪಾ ಸಮರ್ಥಕ ಟಿ.ವಿ ಚಾನೆಲ್ ವೊಂದರ ಸಂಪಾದಕ ಎಗ್ಸಿಟ್ ಪೋಲ್ ನ ಪರಿಣಾಮಗಳ ಬಳಿಕ ಸ್ಪಷ್ಟಪಡಿಸಿದರು. ಆ ಚಾನೆಲ್ ಹೇಳಿದ್ದೇನು ಗೊತ್ತೆ? ದೆಹಲಿಯ ಸ್ವಾರ್ಥಿ ಮತದಾರರಿಗೆ ಬಾಲಾಕೋಟ್ ವಿಷಯ, ಪಾಕಿಸ್ತಾನದ ಭಯೋತ್ಪಾದನೆಯ ವಿಷಯ ಬೇಕಿಲ್ಲ. 370ನೇ ವಿಧಿ ತಮಗೇನೂ ಸಂಬಂಧ ಇಲ್ಲದಂತೆ ಇದ್ದಾರೆ. ಪೌರತ್ವ ತಿದ್ದುಪಡಿಗೂ ಸಂಬಂಧ ಇಲ್ಲ ಎನ್ನುತ್ತಾರೆ. ಅವರಿಗೆ ರಸ್ತೆ, ವಿದ್ಯುತ್, ನೀರಷ್ಟೇ ಬೇಕಿದೆ. ದೇಶದ ಗಂಭೀರ ಸಮಸ್ಯೆಗಳು ಇಲ್ಲಿ ಮೂಲೆಗುಂಪಾದವು.
ವಾಸ್ತವದಲ್ಲಿ ಭಾಜಪಾ ಸರ್ಕಾರ ಅಧಿಕಾರ ಹಿಡಿದಾಗಿನಿಂದ ಮನೆ ಮನೆಯನ್ನು ಪ್ರಭಾವಿತಗೊಳಿಸು, ಪ್ರತಿಯೊಬ್ಬ ಮಹಿಳೆಯನ್ನು ತೊಂದರೆಗೀಡು ಮಾಡುವ, ಪ್ರತಿಯೊಬ್ಬ ನಾಗರಿಕರನ್ನು ಸುಖದಿಂದ ಇಡುವ ವಿಷಯಗಳು ಸರ್ಕಾರದ ಅಜೆಂಡಾದಿಂದ ಮಾಯವಾಗಿ ಹೋಗಿವೆ. 2014ರಲ್ಲಿ ಭಾಜಪಾ ಒಳ್ಳೆಯ ದಿನಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿತ್ತು. ಈ ಒಳ್ಳೆಯ ದಿನಗಳಲ್ಲಿ ವಿಧಿ 370ರ ರದ್ಧತಿಯೂ ಇರಲಿಲ್ಲ, ಭಯೋತ್ಪಾದನೆ ವಿರುದ್ಧ ಹೋರಾಟ ಹಾಗೂ ಪೌರತ್ವ ತಿದ್ದುಪಡಿ ವಿಷಯಗಳಾವು ಇರಲಿಲ್ಲ. ಜನ ಸಾಮಾನ್ಯರಿಗೆ ಬೆಲೆ ಏರಿಕೆ ನಿಯಂತ್ರಣ, ಒಳ್ಳೆಯ ಜೀವನಶೈಲಿ, ಆರ್ಥಿಕ ಪ್ರಗತಿಯ ಅಪೇಕ್ಷೆ ಇತ್ತು. ಅದರ ಬದಲಿಗೆ ದೊರೆತದ್ದು ನೋಟು ರದ್ಧತಿ ಹಾಗೂ ಜಿಎಸ್‌ಟಿ. ಇವೆರಡೂ ದೇಶದ ವ್ಯಾಪಾರವನ್ನೇ ನಾಶ ಮಾಡಿದವು.
ಚೀನಾಕ್ಕೆ ಸರಿಸಮನಾಗಿ ಹೊರಟಿದ್ದ ದೇಶ ಈಗ ಹಿಂದುಳಿದ ದೇಶಗಳ ಪಟ್ಟಿಯಲ್ಲಿ ಸೇರಿಕೊಂಡಿತು. ಏಕೆಂದರೆ ಸರ್ಕಾರಕ್ಕೆ ಹಿಂದೂ, ಮುಸಲ್ಮಾನ್, ಮಸೀದಿ ಜಾಗದಲ್ಲಿ ಮಂದಿರ, ಮುಸ್ಲಿಂ ನುಸುಳುಕೋರರನ್ನು ಹೊರಹಾಕುವ ಚಿಂತೆ ಸತಾಯಿಸುತ್ತಿತ್ತು. ಜನಹಿತದ ಮಾತುಗಳು ಎಂದಾದರೊಮ್ಮೆ ಘೋಷಣೆಯಲ್ಲಿ ಕಂಡು ಬಂದರೂ ಅವನ್ನು ಅನುಷ್ಠಾನಕ್ಕೆ ತರಲಿಲ್ಲ. ಈಗಲೂ ಸ್ವಚ್ಛ ಭಾರತ ಹೆಸರಿನಲ್ಲಿ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೆ ಪರಿಸ್ಥಿತಿ ಸುಧಾರಣೆ ಆಗಿಲ್ಲ. ದೆಹಲಿ ಮಹಾನಗರ ಪಾಲಿಕೆ ಭಾಜಪಾ ಕೈಯಲ್ಲಿದೆ. ಆದರೆ ಎಲ್ಲಿ ನೋಡಿದರಲ್ಲಿ ಕಸದ ರಾಶಿ ಕಂಡುಬರುತ್ತದೆ. ಕಳೆದ 6 ವರ್ಷಗಳಲ್ಲಿ ದೆಹಲಿ ಒಳ್ಳೆಯ ದಿನಗಳನ್ನು ಕಂಡಿಲ್ಲ. ಅಂದರೆ ದೇಶದ ಇನ್ನುಳಿದ ಭಾಗ ಹೇಗಿರಬಹುದು ನೋಡಿ.
ಈ ಸಲ ಕೇಜ್ರಿವಾಲ್ ಮನೆ ವಿಷಯಗಳನ್ನು ಚುನಾವಣೆ ವಿಷಯವಾಗಿ ಮಾಡಿಕೊಂಡು ಒಳ್ಳೆಯ ಕೆಲಸ ಮಾಡಿದರು. ಎಲ್ಲ ಮುಖಂಡರಿಗೂ ಮೊದಲ ಆದ್ಯತೆ ನಾಗರಿಕರಿಗೆ ಒಳ್ಳೆಯ ಜೀವನ ಕೊಡುವುದಾಗಿರಬೇಕು. ಎಲ್ಲಿಯವರೆಗೆ ಬಾಹ್ಯ ಆಕ್ರಮಣದ ಖಚಿತ ಭಯ ಇರುವುದಿಲ್ಲವೆ, ಅಲ್ಲಿಯವರೆಗೆ `ವೈರಿ ಬಂದ….. ವೈರಿ ಬಂದ’ ಎಂದು ವ್ಯರ್ಥ ಭಯ ಹುಟ್ಟಿಸಿ ಆಂತರಿಕ ಜವಾಬ್ದಾರಿ ಮರೆಯಬಾರದು.
ದೇಶದ ನಾಗರಿಕರು ಆರೋಗ್ಯದಿಂದಿದ್ದಾಗ ಮಾತ್ರ ದೇಶ ಆರೋಗ್ಯದಿಂದಿರುತ್ತದೆ. ಶಿಕ್ಷಣ, ಚಿಕಿತ್ಸೆ, ನಾಗರಿಕರಿಗೆ ಕೈಗೆಟುಕುವ ಬೆಲೆಯಲ್ಲಿ ದೊರಕಬೇಕು, ಸಾರಿಗೆ ವ್ಯವಸ್ಥೆ ಸಮರ್ಪಕವಾಗಬೇಕು. ಕಡಿಮೆ ಸಂಬಳವಾದರೂ ಪರವಾಗಿಲ್ಲ. ನೌಕರಿಗಳು ದೊರಕಬೇಕು. ಕೇಂದ್ರ ಈ ನಿಟ್ಟಿನಲ್ಲಿ ವಿಫಲವಾಗಿದೆ. ದೇಶದಲ್ಲಿ ಖಿನ್ನತೆಯ ವಾತಾವರಣ ಪಸರಿಸಿದೆ. ಅದರ ಲಾಭ ಕೇಜ್ರಿವಾಲ್ ಗೆ ಲಭಿಸಿತು. ಒಂದು ಬಲಿಷ್ಠ ದೇಶ ಸದೃಢ ಮನೆಗಳಿಂದ ರೂಪುಗೊಳ್ಳುತ್ತದೆ ಹೊರತು ಅಸ್ಥಿರ ಮನೆಗಳಿಂದಲ್ಲ. ಗಂಟೆ ಹೊಡೆಯುವುದರಿಂದ ದೇಶದಲ್ಲಿ ಚಿನ್ನದ ಮಳೆ ಸುರಿಯುವುದಿಲ್ಲ. ಅದಕ್ಕಾಗಿ ಕೆಲಸದ ವಾತಾವರಣ ಸೃಷ್ಟಿಯಾಗಬೇಕೇ ಹೊರತು ರಾಮನ ವಾತಾವರಣ ಅಲ್ಲ. 2019ರಲ್ಲಿ 65 ಕ್ಷೇತ್ರಗಳಲ್ಲಿ ಗೆದ್ದ ಭಾಜಪಾಗೆ ಈಗ ಕೇವಲ 8 ಸೀಟುಗಳು ಮಾತ್ರ ಲಭಿಸಿವೆ. ಅದಕ್ಕೆ ಇದೊಂದು ಪಾಠ, ರಾಮ ರಹೀಮ್, ಹಿಂದೂ ಮುಸ್ಲಿಂ, ಪೂಜೆ ಪುನಸ್ಕಾರ, ಕಾಶ್ಮೀರ ವಿವಾದ ಇವೆಲ್ಲಗಳಿಗಿಂತ ಗೃಹಿಣಿಯ ಸೌಖ್ಯವೇ ಮೇಲು.
ಅವಳ ಬಗ್ಗೆ ಯೋಚಿಸಿ. ಅವಳನ್ನು ಕಡೆಗಣಿಸಬೇಡಿ. ಧರ್ಮದ ಹೆಸರಿನಲ್ಲಿ ಅವಳನ್ನು ದೂರ ಮಾಡುತ್ತಿರುವಿರಿ, ಲೂಟಿ ಮಾಡುತ್ತಿರುವಿರಿ. ಅದನ್ನು ನಿಲ್ಲಿಸಿ.
ದಿನ ಸಜೆ ಕೂಡ ಅಮಾನವೀಯ
ಡಿಸೆಂಬರ್ 2012ರಲ್ಲಿ ಚಲಿಸುವ ಬಸ್ ನಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅವರ ಕ್ಷಮಾದಾನದ ಅರ್ಜಿಯಲ್ಲಿ ತಮ್ಮನ್ನು ಜೈಲಿನಲ್ಲಿ ದಿನ ಹಿಂಸಿಸಲಾಗುತ್ತಿತ್ತು. ಇತರೆ ಕೈದಿಗಳಿಂದ ತಮ್ಮ ಮೇಲೆ ಸಲಿಂಗ ಸಂಬಂಧ ಹೊಂದಲು ಒತ್ತಡ ಹೇರಲಾಗುತ್ತಿತ್ತು ಎಂಬ ಕಾರಣಗಳನ್ನು ಪ್ರಸ್ತಾಪಿಸಲಾಗಿದೆ. ಕಣ್ಣಿಗೆ ಕಣ್ಣು ಸರಿ ಎಂದು ಒಪ್ಪುವವರು ಈ ಸಲಿಂಗ ಬಲಾತ್ಕಾರವನ್ನು ಸರಿಯೆಂದು ಹೇಳಬಹುದು. ಆದರೆ ಜಗತ್ತಿನಾದ್ಯಂತ ಜೈಲುಗಳಲ್ಲಿ ಈ ಯಾತನೆ ಎಲ್ಲಕ್ಕೂ ಹೆಚ್ಚು ಯಾತನಾಮಯವಾಗಿರುತ್ತದೆ.
ಸಾಮಾನ್ಯವಾಗಿ ಜೈಲುಗಳಲ್ಲಿ ಕೈದಿಗಳು ಒಂದಿಷ್ಟು ಗಲಾಟೆ ಮಾಡಿದರೆ ಅವರ ವಿರುದ್ಧ ನಿರ್ದಯವಾಗಿ ವರ್ತಿಸಲಾಗುತ್ತದೆ. ಜೈಲಿನ ಸಿಬ್ಬಂದಿಗಳಂತೂ ಮನಬಂದಂತೆ ಥಳಿಸುತ್ತಾರೆ, ಜೊತೆಗೆ ಅವರೇ ಸಾಕಿದ ಕೆಲವು ಕೈದಿಗಳು ಜೈಲಿನಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತಾರೆ. ಜೈಲುಗಳು ಕೇವಲ ಅಪರಾಧಿಗಳನ್ನು ಸಮಾಜದಿಂದ ಬೇರ್ಪಡೆ ಮಾಡುವುದಷ್ಟೇ ಅಲ್ಲ, ಅವರಿಗೆ ಎಂತಹ ನರಕವೆಂದರ ದರ್ಶನ ಮಾಡಿಸುತ್ತವೆಯೆಂದರೆ ಅಲ್ಲಿ ಹೊಡೆತ, ಲೈಂಗಿಕ ಸಂಬಂಧ, ಕೈದಿಯ ಮನೆಯವರಿಂದ ಜೈಲಿನ ಹೊರಗಡೆ ಅಕ್ರಮ ಹಣ ವಸೂಲಿ, ಜೈಲಿನಲ್ಲಿ ಮಾಫಿಯಾ ಸಾಮ್ರಾಜ್ಯ, ಆಹಾರ ಕಸಿದುಕೊಳ್ಳುವಿಕೆ ಹಾಗೂ ರೋಗದ ಸ್ಥಿತಿಯಲ್ಲಿ ಚಿಕಿತ್ಸೆ ಕೊಡಿಸದೆ ಇರುವುದು ಇವೆಲ್ಲ ನಡೆಯುತ್ತವೆ.
ನಿರ್ಭಯಾ ಪ್ರಕರಣದಲ್ಲಿ ಸಜೆ ಅನುಭವಿಸಿದ ಅಪರಾಧಿಗಳು ಈ ಸಂಗತಿಗಳನ್ನು ತಮ್ಮ ಕ್ಷಮಾದಾನ ಅರ್ಜಿಯಲ್ಲಿ ನಮೂದಿಸಿದ್ದಾರೆ. ಇಲ್ಲದಿದ್ದರೆ ಈ ವಿಷಯದ ಬಗ್ಗೆ ಯಾರೊಬ್ಬರೂ ಉಲ್ಲೇಖ ಮಾಡುತ್ತಿರಲಿಲ್ಲ. ಈ ಜೈಲುಗಳು ಈಗ ಮಧ್ಯಯುಗದ ಜೈಲುಗಳನ್ನು ನೆನಪಿಸುತ್ತವೆ. ಆಗ ಜೈಲುಗಳಲ್ಲಿ ಅತ್ಯಾಚಾರ ಸಾಮಾನ್ಯವಾಗಿತ್ತು. ಅವರಿಗೆ ಯಾವುದೇ ಸೌಲಭ್ಯಗಳಂತೂ ಇರಲಿಲ್ಲ. ಹಗಲುರಾತ್ರಿ ಶಿಕ್ಷೆಯ ಸ್ವರೂಪ ಉಗ್ರವಾಗಿರುತ್ತಿತ್ತು. ಇದು ದೇಶದ ನೀತಿಯ ಭಾಗವಲ್ಲ. ಜೈಲುಗಳ ನಾಲ್ಕು ಗೋಡೆಗಳ ನಡುವೆ ಪಸರಿಸುವ ಕೊರೊನಾ ವೈರಸ್ ರೀತಿಯದ್ದಾಗಿದೆ. ಜೈಲಿನಲ್ಲಿ ಕೆಲವು ದಿನಗಳವರೆಗೆ ಇದ್ದು ಬಂದ ಜನರು ಕೂಡ ಆ ವಿಷಯವನ್ನು ಬಹಿರಂಗಪಡಿಸಲು ಹೆದರುತ್ತಾರೆ. ಏಕೆಂದರೆ ಜೈಲಿನೊಳಗೆ ಜೈಲರ್ ಮತ್ತು ಕೈದಿಗಳ ನಡುವಿನ ಅಕ್ರಮ ಹೊಂದಾಣಿಕೆ ಜೈಲಿನ ಹೊರಗೂ ಕೂಡ ವ್ಯಾಪಿಸಿಕೊಂಡಿರುತ್ತದೆ.
ಈ ತೆರನಾದ ಶಿಕ್ಷೆಗಳು ಅಪರಾಧಗಳನ್ನು ಕಡಿಮೆಗೊಳಿಸುವುದಿಲ್ಲ. ಜನರು ಅಪರಾಧವನ್ನು ಜೈಲಿನ ಹೆದರಿಕೆಯಿಂದ ತೊರೆಯುವುದಿಲ್ಲ. ಸಮಾಜ ಅವರನ್ನು ಸುಖದಿಂದ ಬಾಳಲು ಅವಕಾಶ ಕೊಡುತ್ತದೆಂಬ ಕಾರಣದಿಂದ ತೊರೆಯುತ್ತಾರೆ. ಆದರೆ ಜೈಲಿನಿಂದ ಹೊರಬಂದವರು ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಏಕೆಂದರೆ ಅವರು ಅಪರಾಧದ ಕೊರೊನಾ ವೈರಸ್ ನ್ನು ಹೊತ್ತು ತಿರುಗುತ್ತಿರುತ್ತಾರೆ. ಅವರಿಗೆ ತಮ್ಮದೇ ಮನೆಯಲ್ಲೂ ಕೂಡ ಇರಲು ಅವಕಾಶ ಸಿಗುವುದಿಲ್ಲ. ಆರ್ಥಿಕ ಹಾಗೂ ರಾಜಕೀಯ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದರು ಪುನಃ ಹೇಗೋ ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿಲ್ಲದೆ ಮಾಡಿದ ಅಪರಾಧಕ್ಕಾಗಿ ಜೈಲಿನಿಂದಲ್ಲ, ಜೈಲಿನ ವಾತಾವರಣದಲ್ಲಿನ ಭಯೋತ್ಪಾದನೆಯ ಕಾರಣದಿಂದ ಜೀವನವಿಡೀ ಹೊರೆಯಾಗಿ ಪರಿಣಮಿಸುತ್ತಾರೆ. ಹೆಂಡತಿ ಅವರನ್ನು ದೂರ ಮಾಡುತ್ತಾಳೆ. ಮಕ್ಕಳು ಸಮೀಪ ಹೋಗುವುದಿಲ್ಲ. ಅಣ್ಣ ತಮ್ಮ ಅಪರಿಚಿತರಂತೆ ಉಳಿದುಬಿಡುತ್ತಾರೆ. ಹೀಗಾಗಿ ಅವರ ಧೈರ್ಯ ಉಡುಗಿ ಹೋಗುತ್ತದೆ. ನಿರ್ಭಯಾ ಪ್ರಕರಣದ ಆರೋಪಿಗಳ ಬಗ್ಗೆ ಯಾರೂ ಕರುಣೆ ತೋರಿಸಲಾಗದು. ಆದರೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದರೆ ಜೈಲಿನಲ್ಲಿ ಪ್ರತಿದಿನ ಸಜೆ ನೀಡುವುದು ತಪ್ಪು, ಅವಮಾನವೀಯ.
ತಪ್ಪು ಯಾರದ್ದು?
ಶೀನಾ ಮುಖರ್ಜಿಯನ್ನು ಆಕೆಯ ತಾಯಿಯೇ ಕೊಲೆ ಮಾಡಿದ ಪ್ರಕರಣದಲ್ಲಿ ಮಲತಂದೆ ಪೀಟರ್ ಮುಖರ್ಜಿಗೆ 4 ವರ್ಷಗಳ ಬಳಿಕ ಈಗ ಜಾಮೀನು ದೊರೆತಿದೆ. ಏಕೆಂದರೆ ಉನ್ನತ ನ್ಯಾಯಾಲಯದ ಪ್ರಕಾರ, ಈ ಕೊಲೆ ಪ್ರಕರಣದಲ್ಲಿ ಅವರ ಕೈವಾಡ ಇರಲಿಲ್ಲ.
ಇಂದ್ರಾಣಿ ಮೇಲಿರುವ ಆರೋಪ ಏನೆಂದರೆ, ಆಕೆ ತನ್ನ ಮಾಜಿ ಪಾರ್ಟ್ ನರ್ ನಿಂದ ಹುಟ್ಟಿದ ಶೀನಾಳನ್ನು 2012ರಲ್ಲಿ ಹಣದ ವಿವಾದದಲ್ಲಿ ಡ್ರೈವರ್ ನ ಸಹಾಯದಿಂದ ಹತ್ಯೆಗೈದಿದ್ದಳು. ಪೀಟರ್ ಮುಖರ್ಜಿ ಅದರಲ್ಲಿ ಪಾಲ್ಗೊಂಡಿದ್ದನೋ ಅಥವಾ ಇಲ್ಲವೋ ಎಂಬುದಕ್ಕೆ ಯಾವುದೇ ಪುರಾವೆ ಇರಲಿಲ್ಲ ಹಾಗೂ ಯಾರೂ ಆ ಕುರಿತಂತೆ ಸಾಕ್ಷ್ಯ ನುಡಿದಿರಲಿಲ್ಲ.
ಇದೇ ಇಂದ್ರಾಣಿ ಮುಖರ್ಜಿಯ ಒಂದು ಹೇಳಿಕೆಯ ಆಧಾರದ ಮೇಲೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಬಂಧಿಸಿ 100 ದಿನ ಜೈಲಿನಲ್ಲಿ ಇಡಲಾಗಿತ್ತು.
ಇಲ್ಲಿನ ಪ್ರಶ್ನೆ ಕೊಲೆಯದ್ದಲ್ಲ, ಪ್ರಶ್ನೆ ಇರುವುದು ದೇಶಾದ್ಯಂತ ಆರೋಪ ಸಾಬೀತಾಗದೆ ಲಕ್ಷಾಂತರ ಕೈದಿಗಳನ್ನು ಜೈಲಿಗಟ್ಟಿರುವ ಕುರಿತಾದದ್ದು. ಯಾರ ಮೇಲಾದರೂ ಒಂದು ಪ್ರಕರಣ ದಾಖಲಾದರೆ ಸಾಕು, ಮ್ಯಾಜಿಸ್ಟ್ರೇಟ್ ಅವರ ಪುರಾವೆಗಳನ್ನು ಗಮನಿಸದೆಯೇ ಅವರನ್ನು ಜೈಲಿಗೆ ಕಳಿಸಿಬಿಡುತ್ತಾರೆ. ಯಾರ ಬಳಿ ಹಣವಿದೆಯೊ, ವಕೀಲರ ಸೌಲಭ್ಯ ಇದೆಯೋ ಅವರು ಬೇಗ ಹೊರಗೆ ಬರುತ್ತಾರೆ. ಆ ಸೌಲಭ್ಯ ಇಲ್ಲದವರು ಅಲ್ಲಿಯೇ ಕೊಳೆಯುತ್ತಾರೆ. ಪೊಲೀಸರು ಅಪರಾಧಿಗಳ ಬಗ್ಗೆ ತನಿಖೆ ನಡೆಸುವಾಗ ಏನೋ ಸಬೂಬು ಹೇಳಲು ಶುರು ಮಾಡುತ್ತಾರೆ. ಆರೋಪಿಯ ಬಳಿ ಪುರಾವೆ ಇದೆ, ಆದರೆ ಆತ ಹೇಳುತ್ತಿಲ್ಲ ಎಂದು ಮ್ಯಾಜಿಸ್ಚ್ರೇಟ್ ರ ಮುಂದೆ ಹೇಳುತ್ತಾರೆ.
ಉನ್ನತ ನ್ಯಾಯಾಲಯ ಪೀಟರ್ ಮುಖರ್ಜಿ ಪ್ರಕರಣದಲ್ಲಿ ಹೀಗೆ ಹೇಳುತ್ತಾ, ಮೃತಳ ಜೊತೆ ಅಥವಾ ಆಕೆಯ ತಾಯಿಯೊಂದಿಗೆ ಪೀಟರ್ ಫೋನ್ ನಲ್ಲಿ ಸಂಭಾಷಣೆ ನಡೆಸಿರುವುದು ಶೀನಾ ಬೋರಾಳ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಎನ್ನುವುದನ್ನು ಸಾಬೀತುಪಡಿಸುವುದಿಲ್ಲ. ಮಲಮಗಳ ಜೊತೆ ಪ್ರೀತಿ ಅಥವಾ ಆತ್ಮೀಯತೆ ಇರದಿದ್ದರೂ ಕೂಡ ಸಂಪರ್ಕ ಹಾಗೂ ಸಂಬಂಧವಂತೂ ಇದ್ದೇ ಇರುತ್ತದೆ. ತಾಯಿಯ ಅಭಿಲಾಷೆ ಮಗಳನ್ನು ಕೊಲೆ ಮಾಡುವುದೇ ಆಗಿದ್ದರೆ ಅದರಲ್ಲಿ ಮಲತಂದೆ ಬೆಂಬಲ ಕೊಟ್ಟಿದ್ದಾನೊ ಇಲ್ಲವೋ ಎನ್ನುವುದನ್ನು ಹೇಳಲಾಗದು. ಉನ್ನತ ನ್ಯಾಯಾಲಯಗಳಿಂದ ಬಹಳಷ್ಟು ಆರೋಪಿಗಳು ಬಿಡುಗಡೆಗೊಳ್ಳುತ್ತಾರೆ, ಆದರೆ ಅನೇಕ ತಿಂಗಳುಗಳ ಬಳಿಕ. ಪೀಟರ್ ಮುಖರ್ಜಿಗೆ ಜಾಮೀನು ಸಿಕ್ಕಿರುವುದು 4 ವರ್ಷಗಳ ಬಳಿಕ. ಅದು ಕಾನೂನು ಬಂಧನವಾಗಿತ್ತು. ಪೊಲೀಸರದ್ದಷ್ಟೇ ಅಲ್ಲ, ನ್ಯಾಯಾಂಗ ವ್ಯವಸ್ಥೆಯದ್ದು ಕೂಡ ತಪ್ಪಿದೆ. ಅದು 3 ಲಕ್ಷ ಕೈದಿಗಳನ್ನು ಅಪರಾಧಗಳಿಗೆ ಜನ್ಮ ನೀಡುವ ಜೈಲುಗಳಲ್ಲಿ ಕೂಡಿ ಹಾಕಿದೆ. ಜಾಮೀನು ದೊರೆತ ಬಳಿಕ ಆರೋಪಿಗೆ ಸಜೆ ಆಗಬಹುದು. ಜಾಮೀನು ಅಂದರೆ ನ್ಯಾಯ ತೀರ್ಮಾನದ ತನಕ ನೀಡುವ ರಿಯಾಯಿತಿ ಅಷ್ಟೆ. ಕಾನೂನಿನ ಕೈಗೆ ಸಿಕ್ಕಿ ನರಳುವ ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ಅವನ ಕುಟುಂಬವಿರುತ್ತದೆ. ಅವರು ರೋಧಿಸದೆ ಇರದ ದಿನವೇ ಇರುವುದಿಲ್ಲ. ಕಾನೂನು ಪ್ರತಿಯೊಬ್ಬರನ್ನು ಶಿಸ್ತಿನಿಂದಿಡಬೇಕು ನಿಜ. ಆದರೆ ಕಾನೂನೇ ಅಶಿಸ್ತಿನಿಂದ ಉಳಿಯಬಾರದು.
ಭಾರತವೆಂದೇ ಅಲ್ಲ, ಅಮೆರಿಕದ್ದು ಕೂಡ ಹೀನಾಯ ಸ್ಥಿತಿ. ಪ್ರಜಾಪ್ರಭುತ್ವದ ಡಂಗುರ ಬಾರಿಸುವ ದೇಶದಲ್ಲಿ ಅಷ್ಟೇ ದಬ್ಬಾಳಿಕೆ ಕೂಡ ಇರುತ್ತದೆ. ಆದರೆ ಅದರಲ್ಲೂ ನರಳುವವರ ಧ್ವನಿ ಡಂಗುರದ ಸದ್ದಿನ ನಡುವೆ ಕೇಳಿಸುವುದೇ ಇಲ್ಲ.