ಉನ್ನತ ಸೌಂದರ್ಯಕ್ಕಾಗಿ ತುಟಿಗೆ ಲಿಪ್ ಸ್ಟಿಕ್ ಹಚ್ಚುವುದರಲ್ಲಿ ತನ್ನದೇ ಆದ ಮಹತ್ವವಿದೆ. ಇದರ ಕುರಿತಾಗಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕಂಡುಬಂದಿರುವ ಸುಧಾರಣೆಗಳೇನು.....?
ತುಟಿಗಳ ರಂಗು ಹೆಚ್ಚಿಸುವಲ್ಲಿ, ಅದಕ್ಕೊಂದು ಹೊಸ ಕಳೆ ಕೊಡುವಲ್ಲಿ ಲಿಪ್ ಸ್ಟಿಕ್ ಗೆ ಮಹತ್ವದ ಸ್ಥಾನವಿದೆ. ಆಧುನಿಕ ಹೆಂಗಸರ ಹ್ಯಾಂಡ್ ಬ್ಯಾಗಿನಲ್ಲಿ ಬೇರಾ ಕಾಸ್ಮೆಟಿಕ್ಸ್ ಇದೆಯೋ ಇಲ್ಲವೋ, ಲಿಪ್ ಸ್ಟಿಕ್ ಅತ್ಯಗತ್ಯವಾಗಿ ಇದ್ದೇ ಇರುತ್ತದೆ. ಲಿಪ್ ಸ್ಟಿಕ್ ಬಣ್ಣದಿಂದ ಹಿಡಿದು ಅದರ ವೆರೈಟಿಗಳವರೆಗೆ ಆಧುನಿಕ ತರುಣಿಯರು ಯಾವುದೇ ಕಾಂಪ್ರಮೈಸ್ ಗೂ ಸಿದ್ಧರಿರುವುದಿಲ್ಲ.
ಇಂದು ಮಾರುಕಟ್ಟೆಯಲ್ಲಿ ಎಣಿಸಲಾರದಷ್ಟು ಬಗೆಯ, ಬಣ್ಣಗಳ ಲಿಪ್ ಸ್ಟಿಕ್ ಬ್ರಾಂಡ್ಸ್ ಬಂದಿವೆ. ಹೀಗಾಗಿ ಇವುಗಳಲ್ಲಿ ಆರಿಸಿಕೊಳ್ಳುವುದು ತುಸು ಕಷ್ಟವೇ ಸರಿ. ಹೀಗಾಗಿ ಲಿಪ್ ಸ್ಟಿಕ್ ಕುರಿತ ಎಲ್ಲಾ ಮಾಹಿತಿ ತಿಳಿದಿರುವುದು ಅಗತ್ಯ.
ಮ್ಯಾಟ್ ಲಿಪ್ ಸ್ಟಿಕ್ : ತುಟಿಗಳಿಗೆ ಡ್ರೈ ಲುಕ್ಸ್ ಜೊತೆ ಲಾಂಗ್ ಸ್ಟೇಗಾಗಿ ಮ್ಯಾಟ್ ಲಿಪ್ ಸ್ಟಿಕ್ ಉತ್ತಮ ಎನಿಸುತ್ತದೆ. ಆದರೆ ತುಟಿಗಳು ಒಡೆದಿರುವಾಗ ಇದನ್ನು ಬಳಸಬೇಡಿ. ಇದನ್ನು ಬಳಸುವುದರ ದೊಡ್ಡ ಲಾಭ ಎಂದರೆ, ಇದರ ಸುದೀರ್ಘ ಬಾಳಿಕೆ. ಹೀಗಾಗಿ ದಿನವಿಡೀ ಹೊರಗಿನ ಓಡಾಟ ಇರುವಾಗ ಇದನ್ನು ಬಳಸಿರಿ.
ಕ್ರೀಂ ಲಿಪ್ ಸ್ಟಿಕ್ : ಇದರ ಲುಕ್ ಸಹ ಮ್ಯಾಟ್ ನಂತೆಯೇ ಇರುತ್ತದೆ. ಇದನ್ನು ಹಚ್ಚಿಕೊಂಡ ನಂತರ ತುಟಿ ಡ್ರೈ ಎನಿಸುವುದಿಲ್ಲ. ಮ್ಯಾಟ್ ಗಿಂತ ಇದರಲ್ಲಿ ಹೆಚ್ಚಿನ ಅಂಶ ಮಾಯಿಶ್ಚರೈಸರ್ ಇರುವುದೇ ಇದರ ರಹಸ್ಯ. ಇದು ಹರಡಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ಯಾವ ಸಮಾರಂಭದಲ್ಲಿ ಊಟ ತಿಂಡಿ ರಗಳೆ ಅತಿ ಕನಿಷ್ಠವೋ ಅಂಥ ಕಡೆ ಇದನ್ನು ಬಳಸಿರಿ. ಬಳಸುವ ಮೊದಲು ಇದಕ್ಕಾಗಿ ಅಗತ್ಯವಾಗಿ ಔಟ್ ಲೈನ್ ಮಾಡಿಕೊಳ್ಳಿ.
ಲಿಪ್ ಗ್ಲಾಸ್ : ತುಟಿಗಳಿಗೆ ಹೆಚ್ಚು ಶೈನ್ ಹಾಗೂ ಹೊಳಪು ನೀಡಲು, ಲಿಪ್ ಗ್ಲಾಸ್ ಬಳಸಲಾಗುತ್ತದೆ. ಲಿಪ್ ಸ್ಟಿಕ್ ತೀಡಿದ ನಂತರ ಇದನ್ನು ಬಳಸುವುದರಿಂದ, ಅದರ ಕಲರ್ ಹೆಚ್ಚಿನ ಹೊಳಪು ಪಡೆಯುತ್ತದೆ.
ಲಿಪ್ ಟಿಂಟ್ : ಲಿಪ್ ಸ್ಟಿಕ್ ತೀಡುವ ಮೂಡಿಲ್ಲ ಆದರೆ ಲಿಪ್ ಸ್ಟಿಕ್ ಹಚ್ಚಿದಂತೆಯೇ ಲುಕ್ ಇರಬೇಕು ಎನಿಸಿದರೆ, ಲಿಪ್ ಟಿಂಟ್ ಉತ್ತಮ ಆಯ್ಕೆ. ಇದು ಇತ್ತೀಚೆಗೆ ಬಹಳ ಟ್ರೆಂಡಿ ಎನಿಸಿದೆ, ನಿಮ್ಮ ತುಟಿಗಳಿಗೆ ನ್ಯಾಚುರಲ್ ಲುಕ್ ನೀಡುತ್ತದೆ.
ಲಿಕ್ವಿಡ್ ಲಿಪ್ ಸ್ಟಿಕ್ : ಇದೂ ಸಹ ದೀರ್ಘ ಬಾಳಿಕೆ ಬರುತ್ತದೆ. ಇದರಿಂದಲೂ ತುಟಿಗೆ ಮ್ಯಾಟ್ ಫಿನಿಶ್ ನೀಡಬಹುದು. ದಿನವಿಡೀ ಇದು ಲಾಂಗ್ ಸ್ಟೇಗೆ ಪೂರಕ.
ಶೀರ್ ಲಿಪ್ ಸ್ಟಿಕ್ : ನ್ಯಾಚುರಲ್ ಲುಕ್ ಪಡೆಯಲು ಬಯಸಿದರೆ ಇದು ಬೆಟರ್ ಆಯ್ಕೆ. ಇಂಥ ಲಿಪ್ ಸ್ಟಿಕ್ ತೀಡುವ ಮೊದಲು, ತುಟಿಗಳಿಗೆ ಕನ್ಸೀಲರ್ ಬೇಸ್ ಹಚ್ಚುವುದು ಲೇಸು. ಆಗ ಮಾತ್ರ ಈ ಶೀರ್ ಲಿಪ್ ಸ್ಟಿಕ್ ಸೂಕ್ತವಾಗಿ ಸೂಟ್ ಆಗುತ್ತದೆ.