ಹೆಣ್ಣಿನ ಅಂದಚೆಂದ ಅವಳ ಮುಖದಿಂದ ಶುರುವಾಗುತ್ತದೆ. ಎಲ್ಲರ ಕಣ್ಣು ಮೊದಲು ಮುಖವನ್ನೇ ದಿಟ್ಟಿಸುತ್ತದೆ. ನಿಮ್ಮ ಮುಖದ ರಂಗು ನೀವು ಬಯಸಿದಂತೆ ಆಕರ್ಷಕವಾಗಿಲ್ಲದಿದ್ದರೆ ಹೇಗೋ ಮ್ಯಾನೇಜ್ ಮಾಡಬಹುದು, ಆದರೆ ಕಂಗಳ ಕಾಂತಿ ಇದಕ್ಕಿಂತಲೂ ಬಲು ಮುಖ್ಯ ಎಂದು ಗಮನಿಸಿ. ಇದಕ್ಕೆ ವಿರುದ್ಧವಾಗಿ, ನೀವು ಬಹಳ ಬ್ಯೂಟಿಫುಲ್ ಆಗಿದ್ದು, ನಿಮ್ಮ ಚರ್ಮ ಆಕರ್ಷಕವಾಗಿದೆ….. ಆದರೆ ಕಂಗಳ ಕೆಳಗೆ ಕಪ್ಪು ಗೆರೆಗಳು ಅಂದ್ರೆ ಡಾರ್ಕ್ ಸರ್ಕಲ್ಸ್ ಕಂಡುಬಂದರೆ, ನಿಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇಟ್ಟಂತೆ ಆದೀತು. ಅತಿ ಸುಸ್ತು, ಅನಿದ್ರೆ, ಒತ್ತಡ, ಏಜಿಂಗ್ ಕಾರಣ ಈ ಡಾರ್ಕ್ ಸರ್ಕಲ್ಸ್ ಕಾಡುತ್ತವೆ.
ಇದನ್ನು ಅಡಗಿಸಲು ಹೆಂಗಸರು ಸದಾ ಮೇಕಪ್ ಗೆ ಮೋರೆ ಹೋಗುತ್ತಾರೆ. ಆದರೆ ಮೇಕಪ್ ಹೊರತಾಗಿ, ನೈಸರ್ಗಿಕ ವಿಧಾನಗಳಿಂದಲೂ ಡಾರ್ಕ್ ಸರ್ಕಲ್ಸ್ ತೊಲಗಿಸಬಹುದು. ನಿಮಗಾಗಿ ಇಲ್ಲಿ ಸುಲಭವಾದ ಕೆಲವು ಮನೆಮದ್ದು ಸೂಚಿಸಲಾಗಿದೆ, ಅವನ್ನು ನಿಯಮಿತವಾಗಿ ಫಾಲೋ ಮಾಡಿ :
ಹಾಲನ್ನು ಬಳಸಿಕೊಳ್ಳಿ : ಇದನ್ನು ತೊಲಗಿಸಲು ತಣ್ಣನೆಯ (ಫ್ರಿಜ್ ನಲ್ಲಿಟ್ಟ) ಹಾಲನ್ನು ಬಳಸಿರಿ. ಒಂದು ಸಣ್ಣ ಬಟ್ಟಲಲ್ಲಿ ಈ ಹಾಲನ್ನು ತೆಗೆದುಕೊಂಡು, ಅದರಲ್ಲಿ ಹತ್ತಿ ಅದ್ದಿಕೊಂಡು, ಕಂಗಳ ಕೆಳಗೆ ಡಾರ್ಕ್ ಸರ್ಕಲ್ಸ್ ಇರುವ ಭಾಗದ ಕಡೆ 15-20 ನಿಮಿಷ ಒತ್ತಿ ಇರಿಸಿಕೊಳ್ಳಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ಬೆಳಗ್ಗೆ ಸಂಜೆ ನಿಯಮಿತವಾಗಿ ಫಾಲೋ ಮಾಡಿ, ಬೇಗ ಗುಣ ಕಾಣುವಿರಿ.
ಗುಲಾಬಿ ಜಲ ಹಾಲು : ಗುಲಾಬಿ ಜಲ ಕೋಲ್ಡ್ ಮಿಲ್ಕ್ ನ್ನು ಸಮ ಪ್ರಮಾಣದಲ್ಲಿ ಒಂದು ಬಟ್ಟಲಿಗೆ ಬೆರೆಸಿಕೊಳ್ಳಿ. ಮೇಲಿನ ಪ್ರಯೋಗದಲ್ಲಿ ಮಾಡಿದಂತೆ ಇಲ್ಲಿಯೂ ಎಲ್ಲ ರಿಪೀಟ್ ಮಾಡಿ. ವಾರಕ್ಕೆ 3-4 ಸಲ ಇದನ್ನು ರಿಪೀಟ್ ಮಾಡಿ.
ಬಾದಾಮಿ ಎಣ್ಣೆ ಹಾಲು : ಸಮ ಪ್ರಮಾಣದಲ್ಲಿ ಒಂದು ಬಟ್ಟಲಿಗೆ ಕೋಲ್ಡ್ ಹಾಲು ಬಾದಾಮಿ ಎಣ್ಣೆ ಬೆರೆಸಿಕೊಳ್ಳಿ. ಮೇಲಿನ ಪ್ರಯೋಗದಂತೆಯೇ ಅದರಲ್ಲಿ ಹತ್ತಿ ಅದ್ದಿ, ಮುಖದಲ್ಲಿ ಬೇಕಾದ ಕಡೆ ಇದನ್ನು 15-20 ನಿಮಿಷ ಒತ್ತರಿಸಿಕೊಳ್ಳಿ. ನಂತರ ತಣ್ಣೀರಿನಿಂದ ತೊಳೆಯಿರಿ.
ಟೊಮೇಟೊ : ಇದರಿಂದ ಪಾರಾಗಲು ಟೊಮೇಟೊ ಪೇಸ್ಟ್ ಬಳಸಬಹುದು. ಟೊಮೇಟೊ ಪೇಸ್ಟ್ ಗೆ ಕೆಲವು ಹನಿ ನಿಂಬೆ ರಸ ಬೆರೆಸಿ ಫ್ರಿಜ್ ನಲ್ಲಿರಿಸಿ ಚಿಲ್ ಮಾಡಿ. ನಂತರ ಅದನ್ನು ಮುಖಕ್ಕೆ ಬೇಕಾದ ಕಡೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ. 1 ತಿಂಗಳು ಪ್ರತಿ ದಿನ ಹೀಗೆ ಮಾಡಿ.
ಆಲೂ ರಸ : ಆಲೂ ರಸ ಸಹ ಈ ಚಮತ್ಕಾರ ಮಾಡುತ್ತದೆ. ಹಸಿ ಆಲೂ ತುರಿದು, ಹಿಂಡಿ, ರಸ ಬೇರ್ಪಡಿಸಿ. ನಂತರ ಮೇಲಿನ ಪ್ರಯೋಗದಂತೆಯೇ ಮಾಡಿ. ತಿಂಗಳಿಗೆ 15 ದಿನ ಹೀಗೆ ಮಾಡಿ ನೋಡಿ.
ಟೀ ಬ್ಯಾಗ್ಸ್ : ಟೀ ಬ್ಯಾಗ್ಸ್ ಕೇವಲ ಚಹಾ ತಯಾರಿಸಲಿಕ್ಕಲ್ಲದೆ, ನಿಮ್ಮ ಡಾರ್ಕ್ ಸರ್ಕಲ್ಸ್ ನಿವಾರಣೆಗೂ ಹೆಲ್ಪ್ ಆಗುತ್ತದೆ. ಚಹಾ ಮಾಡಲು ಬಳಸಿದ ಟೀ ಬ್ಯಾಗ್ಸ್ ನ್ನು 1 ಗಂಟೆ ಕಾಲ ಫ್ರಿಜ್ ನಲ್ಲಿರಿಸಿ, ನಂತರ ಅದನ್ನು ಮುಖದ ಮೇಲೆ ಬೇಕಾದ ಕಡೆ ಇರಿಸಿಕೊಳ್ಳಿ. ಪ್ರತಿ ದಿನ 2-2 ಸಲ ಹೀಗೆ, 4 ವಾರ ಮಾಡಬೇಕು.
ಕಿತ್ತಳೆ ರಸ : ಮೊದಲು ಕಿತ್ತಳೆ ಹಣ್ಣಿನಿಂದ ರಸ ಬೇರ್ಪಡಿಸಿ. ಅದಕ್ಕೆ ಕೆಲವು ಹನಿ ಗ್ಲಿಸರಿನ್ ಬೆರೆಸಿಕೊಳ್ಳಿ. ನಂತರ ಇದನ್ನು ಮುಖದಲ್ಲಿ ಬೇಕಾದ ಕಡೆ ಹಚ್ಚಿರಿ. ಇದರಿಂದ ಡಾರ್ಕ್ ಸರ್ಕಲ್ಸ್ ದೂರವಾಗಿ, ಕಣ್ಣಿನ ಕಾಂತಿ ಹೆಚ್ಚುತ್ತದೆ.
ಸೌತೇಕಾಯಿ : ಇದು ಕಂಗಳ ಆರೋಗ್ಯಕ್ಕೆ ಪೂರಕ. ಕತ್ತರಿಸಿದ ಸೌತೆ ಬಿಲ್ಲೆಗಳನ್ನು 1 ಗಂಟೆ ಕಾಲ ಫ್ರಿಜ್ ನಲ್ಲಿಡಿ. ನಂತರ ಇವನ್ನು ಕಂಗಳ ಮೇಲಿರಿಸಿಕೊಂಡು, 10-15 ನಿಮಿಷ ಕಣ್ಣು ಮುಚ್ಚಿ ವಿಶ್ರಾಂತಿ ಪಡೆಯಿರಿ. ಹೀಗೆ 2-3 ವಾರ ಪ್ರತಿದಿನ ಮಾಡುವುದರಿಂದ, ಡಾರ್ಕ್ ಸರ್ಕಲ್ಸ್ ತಗ್ಗುತ್ತವೆ.
ಪುದೀನಾ ಎಲೆ : ಡಾರ್ಕ್ ಸರ್ಕಲ್ಸ್ ನಿವಾರಣೆಗೆ ಪುದೀನಾ ಪೂರಕ. ಪುದೀನಾ ಎಲೆ ತೊಳೆದು, ಪೇಸ್ಟ್ ಮಾಡಿ, ಮುಖದಲ್ಲಿ ಬೇಕಾದ ಕಡೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ. ರಾತ್ರಿ ಮಲಗುವ ಮುನ್ನ ಹೀಗೆ 3-4 ವಾರ ಮಾಡಿದರೆ, ನಿಮ್ಮ ಸಮಸ್ಯೆ ದೂರಾಗುತ್ತದೆ.
ಮೊಸರು ಅರಿಶಿನ : ಆ್ಯಂಟಿಬಯೋಟಿಕ್ ಎನಿಸಿರುವ ತುಸು ಅರಿಶಿನವನ್ನು ಅರ್ಧ ಬಟ್ಟಲು ಮೊಸರಿಗೆ ಬೆರೆಸಿ ಗೊಟಾಯಿಸಿ. ಇದನ್ನು ಮುಖಕ್ಕೆ ಬೇಕಾದ ಕಡೆ ಹಚ್ಚಿ ಅರ್ಧ ಗಂಟೆ ಹಾಗೇ ಬಿಡಿ. ನಂತರ ತುಸು ಬಿಸಿ ನೀರಿನಿಂದ ಮುಖ ತೊಳೆಯಿರಿ. 2-3 ವಾರಗಳ ಈ ಸತತ ಪ್ರಯೋಗದಿಂದ ಉತ್ತಮ ಲಾಭವಿದೆ.
ಜೇನು ನಿಂಬೆ : 2 ಚಮಚ ಹಾಲಿಗೆ ತುಸು ನಿಂಬೆರಸ ಬೆರೆಸಿ, ಅದು ಒಡೆದಂತಾಗಲು, ಇದಕ್ಕೆ ಜೇನು ಬೆರೆಸಿ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಉತ್ತಮ ಪರಿಣಾಮ ಸಿಗಲಿದೆ.
ಹೀಗೆ ವಿವಿಧ ಮನೆಮದ್ದು ಬಳಸಿ, ನಿಮ್ಮ ಮುಖದ ಡಾರ್ಕ್ ಸರ್ಕಲ್ಸ್ ದೂರವಾಗುವಂತೆ ಮಾಡಿ.
– ಮೋನಿಕಾ