ಅಂತರಿಕ್ಷದ ಬಗ್ಗೆ ಅರಳು ಹುರಿದಂತೆ ಮಾತನಾಡುತ್ತಾರೆ ನಿಖಿತಾ.

ರಾಕೆಟ್‌ ಸೈನ್ಸ್ ಎಂದರೆ…… ಸಾಮಾನ್ಯವಾಗಿ ನಮಗೆ ಯಾವುದಾದರೂ ವಿಷಯ ಗೊತ್ತಿಲ್ಲದಿದ್ದರೆ `ನನಗೆ ಅದು ಸ್ವಲ್ಪ ಗೊತ್ತಿಲ್ಲ. ನನಗೆ ರಾಕೆಟ್‌ ಸೈನ್ಸ್ ಇದ್ದ ಹಾಗೆ’ ಎನ್ನುವುದು ರೂಢಿ. ರಾಕೆಟ್‌ ಎಂದರೆ ಏನು ಎಂದು ಹದಿಹರೆಯದ ಹುಡುಗರನ್ನು ಕೇಳಿದರೆ, ಅವರಿಗೆ ಹುಡುಗಿಯರ ಮೇಲೆ ಕಾಗದದ ರಾಕೆಟ್‌ ಬಿಡುವುದಷ್ಟೇ ಗೊತ್ತು. ಅದಕ್ಕಿಂತ ಸ್ವಲ್ಪ ಹೆಚ್ಚು ಮುಂದುವರಿದಾಗ ವಾರ್ತೆಗಳಲ್ಲಿ ಬರುವ ರಾಕೆಟ್‌ ಗಳ ಬಗ್ಗೆ ಸ್ವಲ್ಪ ತಿಳಿದಿದೆ. ಜೊತೆಗೆ ಆಗಾಗ ಟಿವಿ ಮೂಲಕ ಹೊಸ ಸ್ಯಾಟ್‌ ಲೈಟ್‌ ನ್ನು ಅಂತರಿಕ್ಷಕ್ಕೆ ಬಿಡುತ್ತಾರಂತೆ, ಅದರಿಂದ ಬಹಳ ಉಪಯೋಗಗಳಿವೆಯಂತೆ. ಮಾಹಿತಿ ದೊರಕುತ್ತದೆಯಂತೆ, ಕೃಷಿಯಿಂದ ಹಿಡಿದು ಎಲ್ಲಕ್ಕೂ ಅನುಕೂಲಂತೆ ಎನ್ನುವುದು ಸ್ವಲ್ಪ ಸ್ವಲ್ಪ ಗೊತ್ತಷ್ಟೇ ಹೊರತು ಪೂರ್ಣ ಚಿತ್ರಣ ಯಾರಿಗೂ ಇಲ್ಲ. ಇತ್ತೀಚೆಗೆ ಮಂಗಳ ಗ್ರಹದ ಬಗ್ಗೆ ಮೋದಿಜಿಯವರ ಭಾಷಣ, ಅಲ್ಲಿಗೆ ನಮ್ಮ ಉಪಗ್ರಹವನ್ನು ಕಳುಹಿಸಿರುವ ಬಗ್ಗೆ ಸ್ವಲ್ಪ ಗೊತ್ತು. ನಿಜಕ್ಕೂ ಬಹಳಷ್ಟು ಜನಕ್ಕೆ ಇದಕ್ಕಿಂತಾ ಹೆಚ್ಚು ಗೊತ್ತಿರಲಿಕ್ಕಿಲ್ಲ. ಏಕೆಂದರೆ ನಾವು ಶಾಲೆಯಲ್ಲಿ ಗ್ರಹ, ಖಗೋಳವೆಂದರೆ ನಕ್ಷತ್ರ, ಚಂದ್ರ, ಗ್ರಹಣವನ್ನು ಬಿಟ್ಟು ಹೆಚ್ಚಾಗಿ ಏನೂ ಕಲಿತಿಲ್ಲ. ಆದ್ದರಿಂದ ಆಕಾಶ ನಮಗೆ ದೂರವಾಗಿಯೇ ಉಳಿದಿರಲು ಅದೂ ಒಂದು ಕಾರಣವೆನ್ನಬಹುದು.

ಕಂಪ್ಯೂಟರ್ಕ್ರಾಂತಿ

ಯಾವ ವಿಷಯವಾದರೂ ಅಷ್ಟೇ, ಉದಾಹರಣೆಗೆ ಸ್ವಲ್ಪ ವರ್ಷಗಳ ಹಿಂದೆ ಕಂಪ್ಯೂಟರ್‌ ಎಂದರೆ ತಾನೇ ಏನು ಗೊತ್ತಿತ್ತು? ಹೊಸದಾಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಪ್ರಾರಂಭಿಸಿದಾಗ ಎಲ್ಲರೂ ಸಿವಿಲ್ ‌ತೆಗೆದುಕೊಳ್ಳುತ್ತಿದ್ದರೇ ಹೊರತು ಇದನ್ನು ತೆಗೆದುಕೊಂಡಿದ್ದಿಲ್ಲ. ಆದರೆ ಈಗ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್‌ ವಿಷಯಕ್ಕೆ ಎಲ್ಲಿಲ್ಲದ ಡಿಮ್ಯಾಂಡು. ಈಗ ಆ ನಿಟ್ಟಿನಲ್ಲಿ ದೊಡ್ಡ ಕ್ರಾಂತಿಯೇ ಆಗಿದೆ ಎನ್ನಬಹುದು. ವಿಶ್ವದಾದ್ಯಂತ ಭಾರತದ ಟೆಕ್ಕಿಗಳೇ ಆರಿಸಿಕೊಂಡು ಬಿಟ್ಟಿದ್ದಾರೆ!

ಅಂತರಿಕ್ಷದ ಬಗ್ಗೆ…..

ಅಂತೆಯೇ ಅಂತರಿಕ್ಷದ ಬಗ್ಗೆ ಅಥವಾ ಬಾಹ್ಯಾಕಾಶದ ಬಗ್ಗೆ ಮಾತನಾಡುವಾಗ ನಮಗೆ ಹೆಚ್ಚು ಗೊತ್ತಿಲ್ಲ. ಶಾಲೆಯಲ್ಲಿ ವಿಜ್ಞಾನ ಎಂದಾಗ ನಮಗೆ ಬಾಹ್ಯಾಕಾಶದ ಬಹಳ ಸ್ವಲ್ಪ ವಿಷಯ ಅಲ್ಲಿರುತ್ತದೆ. ಹೀಗಾಗಿ ಅಂತರಿಕ್ಷ ಅಥವಾ ಬಾಹ್ಯಾಕಾಶದ ಬಗ್ಗೆ ನಮಗೆ ಸ್ಪಷ್ಟ ಚಿತ್ರಣ ಇಲ್ಲ. ಏಕೆಂದರೆ ನಮಗೆ ಅದರ ಬಗ್ಗೆ ಹೆಚ್ಚಿನ ಅರಿವಿಲ್ಲ. ಆದರೆ 23ರ ಹರೆಯದ ತರುಣಿ ನಿಖಿತಾ ಈ ಬಗ್ಗೆ ಬಹಳ ಗಂಭೀರವಾದ ಚಿಂತನೆಯನ್ನೇ ಮಾಡಿದ್ದಾರೆ. ಪುಟ್ಟ ಮಕ್ಕಳು ಅದರಲ್ಲೂ ಎಲ್ಲ ವರ್ಗದ ಮಕ್ಕಳೂ ತಿಳಿದುಕೊಳ್ಳಲಿ ಎನ್ನುವ ದೃಷ್ಟಿಯಿಂದ ದೊಡ್ಡ ಕ್ರಾಂತಿಯನ್ನೇ ಪ್ರಾರಂಭ ಮಾಡಿದ್ದಾರೆ ಎನ್ನಬಹುದು. ಅನೇಕ ವಿದ್ಯಾರ್ಥಿಗಳು ನಾವು ದೊಡ್ಡವರಾದ ಮೇಲೆ ಅಸ್ಟ್ರಾನಮಿ, ಆ್ಯಸ್ಟ್ರೋಫಿಸಿಕ್ಸ್ ಓದುತ್ತೇವೆ ಎನ್ನುತ್ತಾರೆ. ಆದರೆ ಆ ಬಗ್ಗೆ ಸರಿಯಾದ ಮಾರ್ಗದರ್ಶನ ಸಿಗುವುದು ಸುಲಭವಲ್ಲ.

ಇಸ್ರೋ ಸಂಸ್ಥೆ 50 ವರ್ಷಗಳಷ್ಟು ಹಳೆಯದಾದರೂ ಬಾಹ್ಯಾಕಾಶ ಎನ್ನುವುದು ಅಲ್ಲಿ ಕೆಲಸ ಮಾಡುವ ಕೆಲವಷ್ಟು ಜನರು ಮತ್ತು ಅವರ ಕುಟುಂಬಗಳಿಗಷ್ಟೇ ಗೊತ್ತಿರುವ ವಿಷಯ. ಆದರೆ ಅಂತರಿಕ್ಷ ಜೀವಿಗಳ ಬಗ್ಗೆ ತಿಳಿಯಲು ಯಾರಿಗೂ ಆಸಕ್ತಿ ಇಲ್ಲ. ಈ ರೀತಿ ಆಕಾಶದಲ್ಲಿನ ಚಂದ್ರನನ್ನು ನೋಡಿಯೇ ಊಟ ಮಾಡಿದ ಬಾಲ್ಯ ನಮ್ಮೆಲ್ಲರದು. ರಾತ್ರಿಯಾದರೆ ಚಂದ್ರ ಹೇಗೆ ಬರ್ತಾನೆ, ಸೂರ್ಯ ಯಾಕೆ ಮುಳುಗ್ತಾನೆ, ನಕ್ಷತ್ರಾನಾ ಕೈಯಲ್ಲಿ ಹಿಡಿಯೋಕೆ ಅಗಲ್ಲಾ ಎನ್ನುವ ನೂರಾರು ಪ್ರಶ್ನೆಗಳು ನಮ್ಮ ಬಾಲ್ಯದಲ್ಲಿ ಮೂಡಿದ್ದುಂಟು. ಆದರೆ ಇದಕ್ಕೆ ಸರಿಯಾದ ಉತ್ತರ ಗೊತ್ತಿರಲಿಲ್ಲ. ಅಮ್ಮ ಪುರಾಣದ ಕಥೆ ಹೇಳಿ ಬಾಯಿ ಮುಚ್ಚಿಸುತ್ತಿದ್ದರು.

ಬೆಳೆಯುತ್ತಿದ್ದಂತೆ ಶಾಲೆಗೆ ಹೋಗಲಾರಂಭಿಸಿದಾಗ ಅಲ್ಲೂ ಮನತಣಿಸುವಷ್ಟು ವಿವರಗಳು ದೊರಕುತ್ತಿರಲಿಲ್ಲ. ಗ್ರಹಣದಲ್ಲಿ ಮಸಿಗಟ್ಟಿದ ಗಾಜಿನಿಂದ ಆಕಾಶವನ್ನು ನೋಡುತ್ತಿದ್ದುದಷ್ಟೇ ಗೊತ್ತು. ಅನೇಕ ಬಾರಿ ಅಮ್ಮ ಗ್ರಹಣ ನೋಡಲೂ ಬಿಡುತ್ತಿರಲಿಲ್ಲ. ಅಂತೂ ಅನೇಕ ಪ್ರಶ್ನೆಗಳು. ಆದರೆ ಯಾವುದಕ್ಕೂ ನಿಖರವಾದ ಉತ್ತರ ಸಿಗುತ್ತಿರಲಿಲ್ಲ.

ಈಗಿನ ಮಕ್ಕಳಲ್ಲಿ ಮೂಡುವ ಈ ಪ್ರಶ್ನೆಗಳಿಗೆ ಉತ್ತರ ನೀಡಲು, ಬಾಹ್ಯಾಕಾಶದ ಅದ್ಭುತಗಳ ರಹಸ್ಯ ಭೇದಿಸಿ ಅದರ ವಿವರಗಳನ್ನು ಎಲ್ಲರಿಗೂ ತಲುಪುವಂತೆ ಮಾಡುವಲ್ಲಿ ನಿಖಿತಾ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಶಾಲೆಯ ಪಠ್ಯ ಪುಸ್ತಕಗಳು ನೀಡಲಾಗದ ಉತ್ತರಗಳನ್ನು ಎಲ್ಲರಿಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅದ್ಭುತ ಸಾಧಕಿ ನಿಖಿತಾ

ನೋಡಲು ಸಣ್ಣ ಹುಟ್ಟು, ಪುಟ್ಟ ಹುಡುಗಿಯಂತೆಯೇ ಕಾಣುವ ನಿಖಿತಾ. ಅಸಾಧ್ಯ ಬುದ್ಧಿವಂತೆ ಮತ್ತು ಕನಸುಗಾರ್ತಿ! ಅವರ ಕಂಗಳಲ್ಲಿ ಅಂದುಕೊಂಡದ್ದನ್ನು ಸಾಧಿಸುವ ಛಲವಿದೆ. ಸೌಮ್ಯ ಮುಖದ ನಿಖಿತಾ ನಿಜಕ್ಕೂ ಸಾಧಕಿ ಎನ್ನಿಸಿಕೊಳ್ಳಲು ಖಂಡಿತ ಅರ್ಹರು.

ಬೆಂಗಳೂರಿನ ಅಲಿಯನ್ಸ್ ವಿಶ್ವ ವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ ಮಾಡಿದರು. ಕಾಲೇಜು ದಿನಗಳಲ್ಲೇ ಅವರಿಗೆ ಎಲ್ಲ ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಬಾಹ್ಯಾಕಾಶದ ಬಗ್ಗೆ ತಿಳಿದುಕೊಳ್ಳಲಿ ಎನ್ನುವ ಆಸೆ. ಅಂತೆಯೇ ಅದೇ ಉದ್ದೇಶದಿಂದ ಒಂದು ಸಂಘವನ್ನೂ ಪ್ರಾರಂಭಿಸಿದರು. ಅವರ ವಿದ್ಯಾಭ್ಯಾಸ ಮುಗಿದ ನಂತರ ಎನ್ನುವ ಸರ್ಕಾರೇತರ ಸಂಸ್ಥೆಯನ್ನು ಶುರು ಮಾಡಿ ಶಾಲಾ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ನಿರಂತರವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದಾರೆ. ಅಂತರಿಕ್ಷದ ಕ್ಲಿಷ್ಟ ವಿಷಯಗಳನ್ನು  ಸರಳವಾಗಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸುತ್ತಾರೆ. ಶಾಲೆಗಳೊಂದಿಗೆ ಒಡಗೂಡಿ ವಿದ್ಯಾರ್ಥಿಗಳಿಗಾಗಿ ವಿಶೇಷ ಕೋರ್ಸ್‌ ಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ಮತ್ತು ಮಾರಿಶಸ್‌ ನಿಂದ ಇವರ ಸಂಸ್ಥೆಗೆ ಆಹ್ವಾನ ಬಂದಿದೆ. ಫಿಲಿಪೈನ್ಸ್ ನಲ್ಲಿ ಈಗಾಗಲೇ ಇವರ ಸಂಸ್ಥೆಯ ಶಾಖೆ ಇದೆ.

nikhitaa-3

“ಈ ವಿಷಯಗಳನ್ನು ತಿಳಿದುಕೊಳ್ಳಲು ಯಾರೂ ಚಿಕ್ಕವರಲ್ಲ. ಐದು ವರ್ಷಗಳ ಮಕ್ಕಳಿಂದ ಹಿಡಿದು ಹನ್ನೆರಡನೆಯ ತರಗತಿಯವರೆಗೆ, ಜೊತೆಗೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೂ ಬಾಹ್ಯಾಕಾಶದ ಬಗ್ಗೆ ಅರಿವು ನೀಡುವ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಎಲ್ಲರಿಗೂ ಅಂತರಿಕ್ಷದ ಬಗ್ಗೆ ಅರಿತುಕೊಳ್ಳುವ ಕಾತುರವಿದೆ ಮತ್ತು ಅವರಿಗೆ ತಿಳಿಸುವ ಅಗತ್ಯವಿದೆ. ಪ್ರತಿಯೊಂದು ಮಗು ಬಾಹ್ಯಾಕಾಶದ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಅದು ನಮ್ಮ ದೈನಂದಿನ ಜೀವನಕ್ಕೆ ಎಷ್ಟು ಉಪಯುಕ್ತ ಎನ್ನುವುದನ್ನೂ ಸಹ ತಿಳಿದುಕೊಳ್ಳುವುದು ಅಗತ್ಯ,” ಎನ್ನುತ್ತಾರೆ ನಿಖಿತಾ.

ಚಿಕ್ಕ ಮಕ್ಕಳಿಂದ ಹಿಡಿದು ಐದನೇ ತರಗತಿಯವರೆಗೂ ಕ್ಲಾಸ್‌ ನಡೆಸುತ್ತಾರೆ. ನಂತರ ಅವರಿಗೆ ಆಸಕ್ತಿ ಇದ್ದಲ್ಲಿ ಮುಂದುವರಿಯಬಹುದು. ಶಾಲೆಗಳು ಅಂತರಿಕ್ಷದ ಬಗ್ಗೆ ಒಂದು ಪಾಠವನ್ನು ಸೇರಿಸುವಲ್ಲಿ ಆಸಕ್ತಿ ತೋರಿಸಿವೆ. ಆ ಪಾಠ ಇಸ್ರೋ ಬಗ್ಗೆ ತಿಳಿಸುತ್ತದೆ. ಆ ಪಾಠವನ್ನು ರೂಪಿಸುವ ಅವಕಾಶ ದೊರಕಿದೆ ಎನ್ನುವುದು ಹೆಮ್ಮೆಯ ವಿಷಯವೇ ಸರಿ!

ಮೊದಲಿಗೆ ಬಾಹ್ಯಾಕಾಶವನ್ನು ವೀಕ್ಷಿಸುವುದು, ಎರಡನೆಯ ಹಂತದಲ್ಲಿ ವಿನ್ಯಾಸ, ರೂಪ, ಮಾದರಿ ರಚನೆ ಮತ್ತು ಯೋಜನೆಗಳನ್ನು ಕಾರ್ಯಗತ ಮಾಡಲಾಗುತ್ತದೆ. ಅಂತಿಮ ಹಂತದಲ್ಲಿ ವಿದ್ಯಾರ್ಥಿಗಳು ತಾವು ರಚಿಸಿದ ಮಾದರಿಗಳ ಪರೀಕ್ಷೆಯನ್ನು ನಡೆಸುವುದು. ಅದು ವಿಫಲವಾದಲ್ಲಿ ಮತ್ತೆ ಅದರ ಬಗ್ಗೆ ಕೆಲಸ ಮಾಡುವುದು, ಈ ರೀತಿ ನಿರಂತರವಾಗಿ ಕಲಿ ಮಾಡು, ಕಾರ್ಯಗತಗೊಳಿಸು ಎಂಬುದು ನಡೆದೇ ಇರುತ್ತದೆ. ಬಹಳ ಸರಳವಾದ ರೀತಿಯಲ್ಲಿ ನಾವು ದಿನನಿತ್ಯ ಬಳಸುವ, ಬಳಸಿ ಬಿಸಾಡಿದ ನೀರಿನ ಬಾಟಲ್ ನಂತಹ ವಸ್ತುಗಳಿಂದ ರಾಕೆಟ್‌ ಮಾಡುವುದು ಮತ್ತು ಅದನ್ನು ಬಳಸುವ ರೀತಿಯನ್ನು ತಿಳಿಸಿಕೊಡುತ್ತಾರೆ.

ಇತ್ತೀಚೆಗೆ ಅಕ್ಷಯಪಾತ್ರ ಸಂಸ್ಥೆಯೊಂದಿಗೂ ಒಪ್ಪಂದ ಮಾಡಿಕೊಂಡಿದೆ. ಅದರ ಮೂಲಕ 9 ಸರ್ಕಾರಿ ಶಾಲೆಗಳ 350 ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ನಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹೈದರಾಬಾದ್‌ ನ್ನೂ ಸಹಾ ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ವಾರಕ್ಕೊಮ್ಮೆ ಇದು ಒಂದು ವರ್ಷದವರೆಗೂ ನಡೆಯುತ್ತದೆ. ಇಡೀ ಭಾರತದಾದ್ಯಂತ 8000 ವಿದ್ಯಾರ್ಥಿಗಳಿಗೆ ಅಂತರಿಕ್ಷದ ಬಗ್ಗೆ ಶಿಕ್ಷಣ ನೀಡಿದ್ದಾರೆ ನಮ್ಮ ದೇಶದ ಎಲ್ಲ ಮಕ್ಕಳಿಗೂ ಅಂತರಿಕ್ಷವೆಂದರೇನು ಎಂದು ಸರಳವಾಗಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸುವುದು ನಿಖಿತಾರ ಉದ್ದೇಶ.

ಇವೆಲ್ಲ ನಿಖಿತಾಗೆ ಅಂತಹ ಸುಲಭವೇನಾಗಿರಲಿಲ್ಲ. ಡಿಗ್ರಿ ಮುಗಿಸಿದ ನಂತರ ಮನೆಯವರಿಂದ ಒಂದು ಸರಿಯಾದ ಉದ್ಯೋಗಕ್ಕೆ ಸೇರಿಕೊಳ್ಳಲಿ, ಅವಳ ಜೀವನ ಸೆಟಲ್ ಆಗಲಿ ಎನ್ನುವ ಆಸೆ ಇತ್ತು. ನಿಖಿತಾ ಮನಸ್ಸು ಮಾಡಿದ್ದರೆ ಯಾವುದಾದರೂ ಕೆಲಸಕ್ಕೆ ಸೇರಿ ಹಾಯಾಗಿರಬಹುದಿತ್ತು. ತನ್ನ ಆಸೆಗಾಗಿ ತಂದೆ ತಾಯಿಯೊಡನೆಯೂ ನಿಷ್ಠೂರ ಆಗಬೇಕಾಯಿತು. ಆದರೆ ಅವರ ಯಶಸ್ಸಿನೊಂದಿಗೆ ಈಗ ತಂದೆ ತಾಯಿಯರೂ ಹತ್ತಿರಾಗಿದ್ದಾರೆ.

“ಈ ಸಂಸ್ಥೆ ಶಾಲೆಗಳಲ್ಲಿಯೇ ಕಡಿಮೆ ವೆಚ್ಚದಲ್ಲಿ ಅಂತರಿಕ್ಷ ಪ್ರಯೋಗಾಲಯಗಳನ್ನು ಸಿದ್ಧಪಡಿಸಿಕೊಡಲು ತಯಾರಿದೆ. ಆಗ  ಎಲ್ಲವನ್ನೂ ಮಕ್ಕಳು ಶಾಲೆಗಳಲ್ಲಿಯೇ ತಿಳಿದುಕೊಳ್ಳಬಹುದು,” ಎನ್ನುತ್ತಾರೆ ನಿಖಿತಾ.

ನಿಖಿತಾಗೆ ಬಹಳ ಚಿಕ್ಕ ವಯಸ್ಸಿನಲ್ಲೇ ಬಹಳಷ್ಟು ಪ್ರಶಸ್ತಿಗಳು ಬಂದಿವೆ. ಇವರ ಆಸಕ್ತಿ ಮತ್ತು ಕಾರ್ಯಗಳಿಗೆ ಪ್ರೋತ್ಸಾಹ ಖಂಡಿತ ಅಗತ್ಯ. ಗೃಹಶೋಭಾ ಪರವಾಗಿ ನಿಖಿತಾರಿಗೆ ಆಲ್ ದಿ ವೆರಿ ಬೆಸ್ಟ್!

ಮಂಜುಳಾ ರಾಜ್

ಅರಸಿ ಬಂದ ಪ್ರಶಸ್ತಿಗಳು

ಇಸ್ರೋನಿಂದ 2018ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ.

ಕರ್ನಾಟಕ ವಿಜ್ಞಾನ ಮತ್ತು ತಾಂತ್ರಿಕ ಅಕಾಡೆಮಿಯಿಂದ ಉತ್ತಮ ವಿಜ್ಞಾನ ಸಂವಹನಕ್ಕಾಗಿ ಪ್ರಶಸ್ತಿ.

2018ರ ಉತ್ತಮ ಎನ್‌.ಜಿ.ಒ ಎಂದು `ಯೂತ್‌ ಫಾರ್‌ ಸೇವಾ’ ಅವರಿಂದ ಪ್ರಶಸ್ತಿ.

2019ರಲ್ಲಿ ಕರ್ನಾಟಕ ಸರ್ಕಾರದಿಂದ ಮೆಚ್ಚುಗೆ ದೊರಕಿದೆ.

ಕಲ್ಪನಾ ಚಾವ್ಲಾ ಸ್ಕಾಲರ್‌ ಶಿಪ್‌ ನ್ನು ಪಡೆದುಕೊಂಡಿದ್ದಾರೆ. ಯೂತ್‌ ಐಕಾನ್‌ ಪ್ರಶಸ್ತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ