ಶುಭಾಳ 70 ವರ್ಷದ ಅತ್ತೆ ಇತ್ತೀಚೆಗೆ ಅನಾರೋಗ್ಯಪೀಡಿತರಾಗುತ್ತಿದ್ದರು. ಮಾವನ ಆರೋಗ್ಯ ಕೂಡ ಆಗಾಗ ಹದಗೆಡುತ್ತಿತ್ತು. ಅವರಿಬ್ಬರ ಯೋಗಕ್ಷೇಮ ನೋಡಿಕೊಳ್ಳಲು ಶುಭಾ ಯಾವಾಗಲೂ ಮನೆಯಲ್ಲಿಯೇ ಇರಬೇಕಾಗುತ್ತಿತ್ತು. ಈ ಕಾರಣದಿಂದ ಆಕೆಗೆ ತವರುಮನೆಗೆ ಹೋಗಲೂ ಆಗುತ್ತಿರಲಿಲ್ಲ. ಅಲ್ಲೂ ಕೂಡ ಆಕೆಗೆ ಜವಾಬ್ದಾರಿ ಕಡಿಮೆ ಏನಿರಲಿಲ್ಲ. ಆಕೆಯ ಅಣ್ಣ ವಿದೇಶದಲ್ಲಿದ್ದ. ಅಪ್ಪ ಅಮ್ಮನ ಬಗೆಗೂ ವಿಚಾರಿಸಬೇಕಾಗುತ್ತಿತ್ತು.

ಅದೊಂದು ಸಲ ಶುಭಾಳ ತಾಯಿ ಅನಾರೋಗ್ಯಕ್ಕೀಡಾದರು. ಆಗ ಶುಭಾ ತವರಿಗೆ ಹೋಗಲೇಬೇಕೆಂದು ಹಠಹಿಡಿದಳು. ಆ ಕುರಿತಂತೆ ಗಂಡ ಮತ್ತು ಅತ್ತೆ ಅವಳ ಬಗ್ಗೆ ಏನೆಲ್ಲ ಹೇಳಿದರು. ಅತ್ತೆ ಚೆನ್ನಾಗಿರುವವರೆಗೆ ಆಕೆಗೆ ಯಾವುದೇ ನೆರವು ಸಿಗಲಿಲ್ಲ. ಅವರು ಶುಭಾಳನ್ನು ಯಾವಾಗಲೂ ನಿಂದಿಸುತ್ತಾ ಆಕೆಯನ್ನು ಒತ್ತಡಕ್ಕೆ ಸಿಲುಕಿಸುತ್ತಿದ್ದರು. ಅವರು ಆಕೆಯ ಜೊತೆ ಕೇವಲ ದುರ್ವ್ಯವಹಾರವನ್ನಷ್ಟೇ ಮಾಡುತ್ತಿರಲಿಲ್ಲ. ನಾಗರಿಕತೆ, ಸಂಸ್ಕೃತಿ ಪರಂಪರೆ ಹಾಗೂ ಧರ್ಮದ ಹೆಸರಿನಲ್ಲಿ ಆಕೆಗೆ ಮೂಗುದಾರ ಹಾಕಲು ನೋಡುತ್ತಿದ್ದರು. ಅಷ್ಟೇ ಅಲ್ಲ, ಸಂಬಂಧಿಕರ ಮುಂದೆಯೂ ಆಕೆಯನ್ನು ನಿಂದಿಸಲು ಹಿಂದೇಟು ಹಾಕುತ್ತಿರಲಿಲ್ಲ.

ಈಗ ಕಾಲ ಬದಲಾಗಿತ್ತು. ವೃದ್ಧಾಪ್ಯದ ಕಾರಣದಿಂದ ಅವರಿಗೆ ಸೊಸೆಯ ಮೇಲಿನ ಅವಲಂಬನೆ ಹೆಚ್ಚಾದಾಗ ಮನೆಯವರೆಲ್ಲರ ಅಪೇಕ್ಷೆ ಶುಭಾ ತಮ್ಮೆಲ್ಲರ ಯೋಗಕ್ಷೇಮವನ್ನು ಸರಿಯಾಗಿ ನೋಡುತ್ತಿರಬೇಕು ಎಂಬುದಾಗಿತ್ತು.

ಇಷ್ಟೆಲ್ಲ ಆಗಿಯೂ ಶುಭಾ ಎಲ್ಲವನ್ನು ಮಾಡುತ್ತಿದ್ದಳು. ಆದರೆ ಅವಕಾಶ ನೋಡಿಕೊಂಡು ಹಳೆಯ ಸಂಗತಿಗಳನ್ನು ನೆನಪಿಸಿಕೊಂಡು ಕೋಪ ಮಾಡಿಕೊಳ್ಳುತ್ತಿದ್ದಳು. ಆಗಾಗ ತಕ್ಕ ಉತ್ತರ ಕೂಡ ಕೊಡುತ್ತಿದ್ದಳು. ಅತ್ತೆ ಈಗ ಏನೂ ಮಾತನಾಡುವಂತಿರಲಿಲ್ಲ. ಏಕೆಂದರೆ ಅವರೀಗ ಪರಿಪೂರ್ಣವಾಗಿ ಸೊಸೆಯನ್ನೇ ಅವಲಂಬಿಸಿದ್ದರು. ಅವರಿಗೆ ಪಶ್ಚಾತ್ತಾಪ ಆಗುತ್ತಿತ್ತು. ಮುಂದೆ ಸೊಸೆಯೂ ತನ್ನೊಂದಿಗೆ ನಿಲ್ಲಬೇಕಾಗುತ್ತದೆಂದು ಆಗ ಹೊಳೆಯಲಿಲ್ಲ.

ಚಂದ್ರಿಕಾಳ ಸ್ಥಿತಿ ಕೂಡ ಹಾಗೆಯೇ ಆಗಿತ್ತು. ಮಕ್ಕಳು ಚಿಕ್ಕವರಿದ್ದಾಗ ಆಕೆ ಉದ್ಯೋಗ ಮಾಡುತ್ತಿದ್ದಳು. ತನ್ನ ಮಕ್ಕಳನ್ನು ನೋಡಿಕೊಳ್ಳಲು ಅತ್ತೆಮಾವನನ್ನು ಕರೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಆಗೆಲ್ಲ ಅತ್ತೆ, “ಯಾರೊ ಹಣ ಗಳಿಸುವುದು, ನಾವೇಕೆ ನಿನ್ನ ಚಾಕರಿ ಮಾಡಬೇಕು?” ಎಂದು ಕೇಳುತ್ತಿದ್ದಳು.

ಅತ್ತೆ ಮಾವನಿಗೆ ಈಗ ವಯಸ್ಸಾಗಿದೆ. ಅವರು ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ತಮ್ಮ ಯೋಗಕ್ಷೇಮ ಸರಿಯಾಗಿ ಆಗಲು ಸೊಸೆಯ ಬಳಿ ಬರಲು ನೋಡುತ್ತಾರೆ. ಈಗ ಸೊಸೆ ಗಂಡನ ಮುಂದೆ ಹೇಳುತ್ತಾಳೆ, “ನನ್ನ ಮಕ್ಕಳು ಚಿಕ್ಕವರಿದ್ದಾಗ ಅವರ ಬಳಿ ಸಮಯ ಇರಲಿಲ್ಲ. ಈಗ ಅವರನ್ನು ನೋಡಿಕೊಳ್ಳಲು ನನ್ನ ಬಳಿ ಸಮಯ ಇಲ್ಲ. ಒಂದು ವೇಳೆ ಅವರು ಆಗ ನನ್ನ ಮಕ್ಕಳನ್ನು ನೋಡಿಕೊಂಡಿದ್ದರೆ ನಾನು ಆಗ ಒತ್ತಡ ಅನುಭವಿಸಬೇಕಾಗಿ ಬರುತ್ತಿರಲಿಲ್ಲ. ಅವರೇ ಈಗ ಕೆಲಸದವರನ್ನು ಇಟ್ಟುಕೊಳ್ಳಲಿ, ನಾನೇಕೆ ಅವರ ಚಾಕರಿ ಮಾಡಬೇಕು?”

ಮಗ ಕೋಪಗೊಂಡು ಈ ವಿಷಯವನ್ನು ಅಮ್ಮನ ಮುಂದೆ ಹೇಳಿದ. ಹೆಂಡತಿಗೂ ಚೆನ್ನಾಗಿ ಬಯ್ದ. ಆದರೆ ಅತ್ತೆಯ ಬಳಿ ಮಾತನಾಡಲು ಈಗ ಯಾವುದೇ ಶಬ್ದಗಳು ಉಳಿದಿರಲಿಲ್ಲ.

ಭವಿಷ್ಯದ ಸಿಹಿಗಾಗಿ ಈಗಿನಿಂದಲೇ ಸಿಹಿ ಕ್ರೋಢೀಕರಿಸಲು ಆರಂಭಿಸಿ. ಇಲ್ಲದಿದ್ದರೆ ಮಾಡಿದ್ದುಣ್ಣೋ ಮಹರಾಯ ಎಂದಾಗುತ್ತದೆ.

ಬೇರೆ ಮನೆಯಿಂದ ಹುಡುಗಿಯೊಬ್ಬಳು ಮೊದಲ ಬಾರಿ ಅತ್ತೆಯ ಮನೆಗೆ ಬಂದಾಗ ಅವಳ ಮನಸ್ಸಿನಲ್ಲಿ ರೋಮಾಂಚನ ಇರುತ್ತದೆ. ಜೊತೆಗೆ ಅಪರಿಚಿತ ಭಯ ಕೂಡ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಗಂಡ ಹಾಗೂ ಅತ್ತೆ ಅವಳ ಜೊತೆಗೆ ಒಳ್ಳೆಯ ರೀತಿಯಲ್ಲ ವರ್ತಿಸಬೇಕು. ಮಗಳ ರೀತಿಯಲ್ಲಿ ಸೊಸೆ ಮನೆಯಲ್ಲಿ ಇದ್ದರೆ ಎಲ್ಲರಿಗೂ ಗೌರವ ಕೊಡುತ್ತಾಳೆ.

ಎಲ್ಲಿ ಏನು ಕೊರತೆ ಉಳಿದುಬಿಡುತ್ತದೆ? ಸೊಸೆಯನ್ನು ನಿಂದಿಸದೇ ಇರುವಂತಹ ಸ್ಥಿತಿ ಉತ್ಪನ್ನವಾಗಲು ಏನು ಮಾಡಬೇಕು?

ಅವಿಭಕ್ತ ಕುಟುಂಬದಲ್ಲಿ ಜನರೇಶನ್ಗ್ಯಾಪ್‌ : ಹಿರಿಯರು ಇರುವ ಕುಟುಂಬದಲ್ಲಿ ತಾವು ಹೇಳಿಕೊಟ್ಟಂತೆಯೇ ನಡೆಯಬೇಕು ಎನ್ನುವುದು ಅವರ ಆಲೋಚನೆಯಾಗಿರುತ್ತದೆ. ಕಿರಿಯರು ಹಳೆಯ ತಲೆಮಾರಿನ ಯಾವುದಾದರೂ ವಿಚಾರ, ವ್ಯವಸ್ಥೆಯನ್ನು ಖಂಡಿಸಿದರೆ ಅವರು ತಮ್ಮನ್ನೇ ವಿರೋಧಿಸುತ್ತಿದ್ದಾರೆ ಎಂದು ಭಾವಿಸುತ್ತಾರೆ. ಸೊಸೆಯಂದಿರು ದೊಡ್ಡವರ ಬಗ್ಗೆ ಆದರ ಭಾವನೆ ತೋರಿಸಲು ಅವರ ನಿರರ್ಥಕ ಮಾತುಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅದರಿಂದಾಗಿ ಹೊಸ ತಲೆಮಾರಿನರ ತರ್ಕ ಶಕ್ತಿ ಪಲಾಯನ ಗೈಯ್ಯುತ್ತದೆ. ಯಾವುದೇ ಯೋಚನೆ ಸ್ಥಿರವಲ್ಲ, ಅದು ಸಮಯಕ್ಕೆ ತಕ್ಕಂತೆ, ಪರಿಸ್ಥಿತಿಗನುಗುಣವಾಗಿ ಬದಲಾಗುತ್ತದೆ ಎಂದು ಸೊಸೆಯಂದಿರು ತಿಳಿಸಿ ಹೇಳಲು ಹೋದರೆ ಅವರನ್ನು ಕೆಟ್ಟವರೆಂಬಂತೆ ಭಾವಿಸಲಾಗುತ್ತದೆ.

ಸೊಸೆ ಎಂದೆಂದೂ ಪರಕೀಯಳು : ಈ ತೆರನಾದ ಮಾನಸಿಕತೆಯಿಂದಾಗಿ ಸಂಬಂಧಗಳು ಎಂದೂ ಮಧುರಗೊಳ್ಳುವುದಿಲ್ಲ. ಬೇರೆ ಮನೆಯಿಂದ ಬಂದ ಸೊಸೆ ಎಂದಿಗೂ ನಮ್ಮವಳಾಗುವುದಿಲ್ಲ. ಅಲ್ಲಿ ಸೊಸೆಯನ್ನು ದೂರ ಸರಿಸುವ, ಅವಳಿಂದ ಬಹಳಷ್ಟು ಸಂಗತಿಗಳನ್ನು ಬಚ್ಚಿಡುವ ಪ್ರಯತ್ನಗಳು ನಡೆಯುತ್ತವೆ. ಅವಳು ಅತ್ತೆಮನೆಯ ಹಿತದೃಷ್ಟಿಯಿಂದ ತಾನಾಗಿ ಏನಾದರೂ ಸಲಹೆ ಕೊಡಲು ಹೋದರೆ, ನೀನು ನಮ್ಮ ಮನೆ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಬರಬೇಡ. ನಿನ್ನ ಕೆಲಸ ಏನಿದೆಯೋ ಅದನ್ನು ನೋಡಿಕೊ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಇಂತಹದರಲ್ಲಿ ಸೊಸೆ ಅಗತ್ಯ ಸಂದರ್ಭದಲ್ಲಿ ಅತ್ತೆ ಮನೆಯವರ ಪರ ವಹಿಸದೆ ಕೋಪದಿಂದ 4 ಮಾತು ಆಡಿದರೆ ಅವಳನ್ನು ಕೆಟ್ಟವಳೆಂಬಂತೆ ಬಿಂಬಿಸಲಾಗುತ್ತದೆ.

ಪರಂಪರೆ ನಿಭಾಯಿಸಲು ಸೊಸೆಯೇ ಏಕೆ ಬೇಕು? : ಅತ್ತೆಮನೆಯಲ್ಲಿ ಪರಂಪರೆಯ ಹೆಸರಿನಲ್ಲಿ ತನ್ನ ಮೇಲಾಗುತ್ತಿರುವ ಅನ್ಯಾಯವನ್ನು ಮಗಳು ತನ್ನ ತಾಯಿಯ ಮುಂದೆ ಹೇಳಿದಾಗ, ಆಕೆ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಅದೇ ಮನೆಗೆ ಬಂದ ಸೊಸೆಗೆ ಈ ಸ್ಥಿತಿ ಬಂದರೆ ಅಮ್ಮ ಮೌನ ವಹಿಸುತ್ತಾಳೆ. ಮಗಳು ಹಾಗೂ ಸೊಸೆಯ ಬಗ್ಗೆ ಸಮಾನ ದೃಷ್ಟಿಕೋನ ಇದ್ದರೆ, ಸೊಸೆ ತನ್ನ ಅತ್ತೆಯನ್ನು ಒಪ್ಪಿಕೊಳ್ಳದೆ ಇರುತ್ತಾಳೆಯೇ?

ಗೌರವ ಸಂಪಾದಿಸುವ ಸ್ಪರ್ಧೆ : ಸೊಸೆಯನ್ನು ತಮ್ಮ ಮನೆಗೆ ಕರೆತಂದು ಆಕೆಯ ಮನೆಯವರಿಗೆ ದೊಡ್ಡ ಉಪಕಾರ ಮಾಡಿದೆ ಎಂದು ಬಹಳಷ್ಟು ಅತ್ತೆಮನೆಯವರು ಜಂಭ ಕೊಚ್ಚಿಕೊಳ್ಳುತ್ತಾರೆ. ಆದರೆ ಈಗ ಕಾಲ ಬದಲಾಗಿದೆ. ಸೊಸೆಯಂದಿರು ಪ್ರಜ್ಞಾವಂತರಾಗಿದ್ದಾರೆ. ಅವರು ಸಂದರ್ಭ ಬಂದಾಗ ನೆರವು ನೀಡಲು ಹಿಂದೇಟು ಹಾಕುವುದಿಲ್ಲ. ಇಂದಿನ ಮಹಿಳೆಯರಿಗೆ ಗೊತ್ತಿರುವ ವಿಚಾರವೆಂದರೆ, ಅತ್ತೆಯ ಮನೆಯವರು ಮದುವೆ ಮಾಡಿಕೊಂಡು ಹೆಣ್ಣಿನ ಮನೆಯವರ ಉದ್ಧಾರವನ್ನೇನೂ ಮಾಡಿರುವುದಿಲ್ಲ. ಮದುವೆ ಒಂದು ಪರಸ್ಪರ ಹೊಂದಾಣಿಕೆ. ಅದು ಸಾಮಾಜಿಕ ಅಗತ್ಯತೆ ಕೂಡ.

ಮಗಳು ಸೊಸೆ ಭೇದಭಾವ ಏಕೆ?: ಎಷ್ಟೋ ಮನೆಗಳಲ್ಲಿ ಮಗಮಗಳ ಬಗ್ಗೆ ಸಮಾನ ಧೋರಣೆ ಅನುಸರಿಸಲಾಗುತ್ತದೆ. ಆದರೆ ಸೊಸೆಯ ಬಗ್ಗೆ ಮಾತ್ರ ಸಾಕಷ್ಟು ನಿರ್ಬಂಧ ಹೇರಲಾಗುತ್ತದೆ. ಬಟ್ಟೆ ತೊಡುವುದರಿಂದ ಹಿಡಿದು, ಪರಿಚಿತರ ಜೊತೆ ಸಂಪರ್ಕದ ತನಕ ಸಾಕಷ್ಟು ನಿರ್ಬಂಧಗಳು ಹೇರಲ್ಪಡುತ್ತವೆ. ಹೀಗಿದ್ದಾಗ ಆಕೆ ಅತ್ತೆಮನೆಯವರನ್ನು ತನ್ನ ಮನೆಯವರೆಂದು ಹೇಗೆ ಒಪ್ಪಿಕೊಳ್ಳುತ್ತಾಳೆ?

ಕುಟುಂಬದಲ್ಲಿ ಸಾಮರಸ್ಯ ಕಾಯ್ದುಕೊಂಡು ಹೋಗುವ ಹೊಣೆ ಕೇವಲ ಸೊಸೆಯೊಬ್ಬಳದೇ ಅಲ್ಲ. ಏಕೆಂದರೆ ಆಕೆ ಕೂಡ ಒಬ್ಬ ಮನುಷ್ಯಳೇ. ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಸೊಸೆಯ ಪಾಲ್ಗೊಳ್ಳುವಿಕೆಯನ್ನು ದ್ವಿಗುಣಗೊಳಿಸಬಹುದು.

ಹಳೆ ತಲೆಮಾರಿನವರು ಎಷ್ಟೇ ಅನುಭವಿಗಳಾಗಿದ್ದರೂ, ಕಾಲ ಬದಲಾದಂತೆ ಹಳೆಯ ನಂಬಿಕೆಗಳು ಕೂಡ ಕಾಲ ಬಾಹ್ಯ ಆಗುತ್ತವೆ. ಹೀಗಾಗಿ ಅವನ್ನು ಬದಿಗೊತ್ತಿ ಹೊಸ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಹಳಬರು ಹೊಸ ವಿಚಾರಗಳನ್ನು ಅನುಸರಿಸಲು ಆರಂಭಿಸಿದರೆ ಹೊಸ ಪೀಳಿಗೆಯವರಿಗೆ ದೊಡ್ಡವರ ಬಗ್ಗೆ ಗೌರವ ತಂತಾನೇ ಹೆಚ್ಚುತ್ತದೆ.

ಸೊಸೆ ನಮ್ಮವಳು ಎಂಬುದನ್ನು ಮೊದಲು ಒಪ್ಪಿಕೊಳ್ಳಬೇಕು. ಕೆಲವು ಮನೆಗಳಲ್ಲಿ ಈ ರೀತಿ ಬದಲಾಗಲು ವರ್ಷಗಳೇ ಹಿಡಿಯುತ್ತವೆ. ಅವಳಿಂದ ಸೇವೆ ಮಾಡಿಸಿಕೊಳ್ಳುವುದೊಂದನ್ನೆ ಬಯಸಿದರೆ ಅದು ಅವಳ ವಿರುದ್ಧ ಅನ್ಯಾಯ ಮಾಡಿದಂತೆ.

ಅವಳನ್ನು ಯಾಂತ್ರಿಕವಾಗಿ ದುಡಿಯುವಳು, ಹೇಳಿದಂತೆ ನಡೆಯುವಳು ಎಂದು ಭಾವಿಸಬೇಡಿ. ಅವಳ ಬಗ್ಗೆ ನಿಜವಾದ ಪ್ರೀತಿ ಆದರ ತೋರಿಸಿ.

ಸೊಸೆಯಿಂದಷ್ಟೇ ಪ್ರೀತಿ ಗೌರವ ನಿರೀಕ್ಷಿಸಬೇಡಿ….

ನೀವು ಕೂಡ ಅವಳಿಗೆ ಸಾಕಷ್ಟು ಪ್ರೀತಿ ಕೊಡಿ. ಅದಕ್ಕೆ ನಿಮಗೆ ಒಳ್ಳೆಯ ಪ್ರತಿಫಲವೇ ದೊರೆಯುತ್ತದೆ.

ಯಾವುದೇ ವ್ಯಕ್ತಿ ಪರಿಪೂರ್ಣ ನಿಸ್ವಾರ್ಥಿ ಆಗಿರಲು ಸಾಧ್ಯವಿಲ್ಲ. ಇಂತಹದರಲ್ಲಿ ನಿಮ್ಮ ಸೊಸೆ ದೇವಿಯಂತಿರಬೇಕೆಂದು ನೀವೇಕೆ ಅಪೇಕ್ಷಿಸುವಿರಿ? ಅವಳು ಮನುಷ್ಯಳಾಗಿರುವ ಪ್ರಯುಕ್ತ ತನ್ನ ಬಗ್ಗೆಯೂ ಕಾಳಜಿ ವಹಿಸಲು ಆಕೆಗೆ ಸಂಪೂರ್ಣ ಹಕ್ಕಿದೆ. ಅತ್ತೆ ಮಾವನಿಗೆ ವೃದ್ಧಾವಸ್ಥೆಯಲ್ಲಿ ಸೊಸೆ ನಂಬಿಕಸ್ತ ಆಧಾರವಾಗಬಲ್ಲಳು. ಈಗ ಅವಳಿಗೆ ಪ್ರೀತಿಗೌರವದ ಆಧಾರ ಕೊಡಿ. ಮುಂದೆ ಅವಳು ನಿಮ್ಮ ಸಂಧ್ಯಾಕಾಲದಲ್ಲಿ ನೆಮ್ಮದಿಯ ನೆರಳು ನೀಡಲು ಹಿಂದೇಟು ಹಾಕುವುದಿಲ್ಲ.

ದೀಪಾ ಭಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ