ಶುಭಾಳ 70 ವರ್ಷದ ಅತ್ತೆ ಇತ್ತೀಚೆಗೆ ಅನಾರೋಗ್ಯಪೀಡಿತರಾಗುತ್ತಿದ್ದರು. ಮಾವನ ಆರೋಗ್ಯ ಕೂಡ ಆಗಾಗ ಹದಗೆಡುತ್ತಿತ್ತು. ಅವರಿಬ್ಬರ ಯೋಗಕ್ಷೇಮ ನೋಡಿಕೊಳ್ಳಲು ಶುಭಾ ಯಾವಾಗಲೂ ಮನೆಯಲ್ಲಿಯೇ ಇರಬೇಕಾಗುತ್ತಿತ್ತು. ಈ ಕಾರಣದಿಂದ ಆಕೆಗೆ ತವರುಮನೆಗೆ ಹೋಗಲೂ ಆಗುತ್ತಿರಲಿಲ್ಲ. ಅಲ್ಲೂ ಕೂಡ ಆಕೆಗೆ ಜವಾಬ್ದಾರಿ ಕಡಿಮೆ ಏನಿರಲಿಲ್ಲ. ಆಕೆಯ ಅಣ್ಣ ವಿದೇಶದಲ್ಲಿದ್ದ. ಅಪ್ಪ ಅಮ್ಮನ ಬಗೆಗೂ ವಿಚಾರಿಸಬೇಕಾಗುತ್ತಿತ್ತು.
ಅದೊಂದು ಸಲ ಶುಭಾಳ ತಾಯಿ ಅನಾರೋಗ್ಯಕ್ಕೀಡಾದರು. ಆಗ ಶುಭಾ ತವರಿಗೆ ಹೋಗಲೇಬೇಕೆಂದು ಹಠಹಿಡಿದಳು. ಆ ಕುರಿತಂತೆ ಗಂಡ ಮತ್ತು ಅತ್ತೆ ಅವಳ ಬಗ್ಗೆ ಏನೆಲ್ಲ ಹೇಳಿದರು. ಅತ್ತೆ ಚೆನ್ನಾಗಿರುವವರೆಗೆ ಆಕೆಗೆ ಯಾವುದೇ ನೆರವು ಸಿಗಲಿಲ್ಲ. ಅವರು ಶುಭಾಳನ್ನು ಯಾವಾಗಲೂ ನಿಂದಿಸುತ್ತಾ ಆಕೆಯನ್ನು ಒತ್ತಡಕ್ಕೆ ಸಿಲುಕಿಸುತ್ತಿದ್ದರು. ಅವರು ಆಕೆಯ ಜೊತೆ ಕೇವಲ ದುರ್ವ್ಯವಹಾರವನ್ನಷ್ಟೇ ಮಾಡುತ್ತಿರಲಿಲ್ಲ. ನಾಗರಿಕತೆ, ಸಂಸ್ಕೃತಿ ಪರಂಪರೆ ಹಾಗೂ ಧರ್ಮದ ಹೆಸರಿನಲ್ಲಿ ಆಕೆಗೆ ಮೂಗುದಾರ ಹಾಕಲು ನೋಡುತ್ತಿದ್ದರು. ಅಷ್ಟೇ ಅಲ್ಲ, ಸಂಬಂಧಿಕರ ಮುಂದೆಯೂ ಆಕೆಯನ್ನು ನಿಂದಿಸಲು ಹಿಂದೇಟು ಹಾಕುತ್ತಿರಲಿಲ್ಲ.
ಈಗ ಕಾಲ ಬದಲಾಗಿತ್ತು. ವೃದ್ಧಾಪ್ಯದ ಕಾರಣದಿಂದ ಅವರಿಗೆ ಸೊಸೆಯ ಮೇಲಿನ ಅವಲಂಬನೆ ಹೆಚ್ಚಾದಾಗ ಮನೆಯವರೆಲ್ಲರ ಅಪೇಕ್ಷೆ ಶುಭಾ ತಮ್ಮೆಲ್ಲರ ಯೋಗಕ್ಷೇಮವನ್ನು ಸರಿಯಾಗಿ ನೋಡುತ್ತಿರಬೇಕು ಎಂಬುದಾಗಿತ್ತು.
ಇಷ್ಟೆಲ್ಲ ಆಗಿಯೂ ಶುಭಾ ಎಲ್ಲವನ್ನು ಮಾಡುತ್ತಿದ್ದಳು. ಆದರೆ ಅವಕಾಶ ನೋಡಿಕೊಂಡು ಹಳೆಯ ಸಂಗತಿಗಳನ್ನು ನೆನಪಿಸಿಕೊಂಡು ಕೋಪ ಮಾಡಿಕೊಳ್ಳುತ್ತಿದ್ದಳು. ಆಗಾಗ ತಕ್ಕ ಉತ್ತರ ಕೂಡ ಕೊಡುತ್ತಿದ್ದಳು. ಅತ್ತೆ ಈಗ ಏನೂ ಮಾತನಾಡುವಂತಿರಲಿಲ್ಲ. ಏಕೆಂದರೆ ಅವರೀಗ ಪರಿಪೂರ್ಣವಾಗಿ ಸೊಸೆಯನ್ನೇ ಅವಲಂಬಿಸಿದ್ದರು. ಅವರಿಗೆ ಪಶ್ಚಾತ್ತಾಪ ಆಗುತ್ತಿತ್ತು. ಮುಂದೆ ಸೊಸೆಯೂ ತನ್ನೊಂದಿಗೆ ನಿಲ್ಲಬೇಕಾಗುತ್ತದೆಂದು ಆಗ ಹೊಳೆಯಲಿಲ್ಲ.
ಚಂದ್ರಿಕಾಳ ಸ್ಥಿತಿ ಕೂಡ ಹಾಗೆಯೇ ಆಗಿತ್ತು. ಮಕ್ಕಳು ಚಿಕ್ಕವರಿದ್ದಾಗ ಆಕೆ ಉದ್ಯೋಗ ಮಾಡುತ್ತಿದ್ದಳು. ತನ್ನ ಮಕ್ಕಳನ್ನು ನೋಡಿಕೊಳ್ಳಲು ಅತ್ತೆಮಾವನನ್ನು ಕರೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಆಗೆಲ್ಲ ಅತ್ತೆ, ``ಯಾರೊ ಹಣ ಗಳಿಸುವುದು, ನಾವೇಕೆ ನಿನ್ನ ಚಾಕರಿ ಮಾಡಬೇಕು?'' ಎಂದು ಕೇಳುತ್ತಿದ್ದಳು.
ಅತ್ತೆ ಮಾವನಿಗೆ ಈಗ ವಯಸ್ಸಾಗಿದೆ. ಅವರು ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ತಮ್ಮ ಯೋಗಕ್ಷೇಮ ಸರಿಯಾಗಿ ಆಗಲು ಸೊಸೆಯ ಬಳಿ ಬರಲು ನೋಡುತ್ತಾರೆ. ಈಗ ಸೊಸೆ ಗಂಡನ ಮುಂದೆ ಹೇಳುತ್ತಾಳೆ, ``ನನ್ನ ಮಕ್ಕಳು ಚಿಕ್ಕವರಿದ್ದಾಗ ಅವರ ಬಳಿ ಸಮಯ ಇರಲಿಲ್ಲ. ಈಗ ಅವರನ್ನು ನೋಡಿಕೊಳ್ಳಲು ನನ್ನ ಬಳಿ ಸಮಯ ಇಲ್ಲ. ಒಂದು ವೇಳೆ ಅವರು ಆಗ ನನ್ನ ಮಕ್ಕಳನ್ನು ನೋಡಿಕೊಂಡಿದ್ದರೆ ನಾನು ಆಗ ಒತ್ತಡ ಅನುಭವಿಸಬೇಕಾಗಿ ಬರುತ್ತಿರಲಿಲ್ಲ. ಅವರೇ ಈಗ ಕೆಲಸದವರನ್ನು ಇಟ್ಟುಕೊಳ್ಳಲಿ, ನಾನೇಕೆ ಅವರ ಚಾಕರಿ ಮಾಡಬೇಕು?''
ಮಗ ಕೋಪಗೊಂಡು ಈ ವಿಷಯವನ್ನು ಅಮ್ಮನ ಮುಂದೆ ಹೇಳಿದ. ಹೆಂಡತಿಗೂ ಚೆನ್ನಾಗಿ ಬಯ್ದ. ಆದರೆ ಅತ್ತೆಯ ಬಳಿ ಮಾತನಾಡಲು ಈಗ ಯಾವುದೇ ಶಬ್ದಗಳು ಉಳಿದಿರಲಿಲ್ಲ.
ಭವಿಷ್ಯದ ಸಿಹಿಗಾಗಿ ಈಗಿನಿಂದಲೇ ಸಿಹಿ ಕ್ರೋಢೀಕರಿಸಲು ಆರಂಭಿಸಿ. ಇಲ್ಲದಿದ್ದರೆ ಮಾಡಿದ್ದುಣ್ಣೋ ಮಹರಾಯ ಎಂದಾಗುತ್ತದೆ.
ಬೇರೆ ಮನೆಯಿಂದ ಹುಡುಗಿಯೊಬ್ಬಳು ಮೊದಲ ಬಾರಿ ಅತ್ತೆಯ ಮನೆಗೆ ಬಂದಾಗ ಅವಳ ಮನಸ್ಸಿನಲ್ಲಿ ರೋಮಾಂಚನ ಇರುತ್ತದೆ. ಜೊತೆಗೆ ಅಪರಿಚಿತ ಭಯ ಕೂಡ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಗಂಡ ಹಾಗೂ ಅತ್ತೆ ಅವಳ ಜೊತೆಗೆ ಒಳ್ಳೆಯ ರೀತಿಯಲ್ಲ ವರ್ತಿಸಬೇಕು. ಮಗಳ ರೀತಿಯಲ್ಲಿ ಸೊಸೆ ಮನೆಯಲ್ಲಿ ಇದ್ದರೆ ಎಲ್ಲರಿಗೂ ಗೌರವ ಕೊಡುತ್ತಾಳೆ.