– ರಾಘವೇಂದ್ರ ಅಡಿಗ ಎಚ್ಚೆನ್
ಚಿತ್ರ: ಜಂಗಲ್ ಮಂಗಲ್
ನಿರ್ಮಾಣ: ಹ್ಯಾದ್ರಿ ಸ್ಟುಡಿಯೋಸ್ ಬ್ಯಾನರ್, ಪ್ರಜೀತ್ ಹೆಗ್ಡೆ, ಲಕ್ಷ್ಮಿ ರೈ, ಪೃಥ್ವಿ ಶೆಟ್ಟಿ
ನಿರ್ದೇಶನ: ರಕ್ಷಿತ್ ಕುಮಾರ್
ತಾರಾಂಗಣ: ಉಗ್ರಂ ಮಂಜು, ಯಶ್ ಶೆಟ್ಟಿ, ಹರ್ಷಿತಾ ರಾಮಚಂದ್ರ, ಬಲ ರಾಜವಾಡಿ, ದೀಪಕ್ ರೈ ಪಣಾಜೆ ಇನ್ನೂ ಮೊದಲಾದವರು.
ರೇಟಿಂಗ್:3.5/5
ನಟ ಉಗ್ರಂ ಮಂಜು, ಯಶ್ ಶೆಟ್ಟಿ, ಹರ್ಷಿತಾ ರಾಮಚಂದ್ರ ನಟಿಸಿರುವ ‘ಜಂಗಲ್ ಮಂಗಲ್’ ಸಿನಿಮಾ ಈ ವಾರ (ಜುಲೈ 4) ತೆರೆಗೆ ಬಂದಿದೆ. ಕಳೆದ ಹಲವು ವರ್ಷಗಳಿಂದ ಸಿನಿಮಾ, ಧಾರಾವಾಹಿ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ನಿರ್ದೇಶಕ ರಕ್ಷಿತ್ ಕುಮಾರ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಟ್ರೈಲರ್ ಮೂಲಕ ಭರವಸೆ ಹುಟ್ಟಿಸಿತ್ತು. ಚಿತ್ರವು ಲೈಟ್ ಹಾರ್ಟೆಡ್ ಥ್ರಿಲ್ಲರ್ ಶೈಲಿಯಲ್ಲಿದೆ. ಚಿತ್ರವನ್ನು ಸಿಂಪಲ್ ಸುನಿ ಪ್ರೆಸೆಂಟ್ ಮಾಡಿದ್ದಾರೆ. ಸಹ್ಯಾದ್ರಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಪ್ರಜೀತ್ ಹೆಗ್ಡೆ, ಲಕ್ಷ್ಮಿ ರೈ, ಪೃಥ್ವಿ ಶೆಟ್ಟಿ ಮೊದಲಾದವರು ಬಂಡವಾಳ ಹಾಕಿದ್ದಾರೆ.
ಕೊರೋನಾ ಲಾಕ್ ಡೌನ್ ಸಮಯದಲ್ಲಿ ನಡೆದ ಕಥೆ ಇದಾಗಿದ್ದು ಮಲೆನಾಡು ಸೆರಗಿನ ಒಂದೂರಿನ ಮುಗ್ದ ಪ್ರೇಮಿಗಳು ಲಾಕ್ ಡೌನ್ ಆಗಿರುವ ಕಾರಣ ಭೇಟಿಯಾಗುವುದಕ್ಕಾಗದೆ ಪರಿತಪಿಸುತ್ತಿರುತ್ತಾರೆ. ಆಗ ಯುವಕ ತನ್ನ ಪ್ರೇಯಸಿಗೆ ಕರೆ ಮಾಡಿ ಗುಟ್ಟಾಗಿ ಭೇಟಿಯಾಗುವ ಬಗ್ಗೆ ತಿಳಿಸುತ್ತಾನೆ. ಹೀಗೆ ಇಬ್ಬರೂ ಊರಂಚಿನಲ್ಲಿರುವ ಕಾಡಿನೊಳಗೆ ಭೇಟಿಯಾಗುತ್ತಾರೆ. ಆದರೆ ಹೀಗೆ ಕಾಡಿಗೆ ಹೋದ ಆ ಜೋಡಿಗೆ ಅಲ್ಲಿ ನಾನಾ ಸಮಸ್ಯೆಗಳು ಎದುರಾಗುತ್ತದೆ, ಆ ಎಲ್ಲಾ ಸಮಸ್ಯೆಗಳಿಂದ ಅವರು ಪಾರಾಗುತ್ತಾರಾ? ಕ್ಷೇಮವಾಗಿ ಊರಿಗೆ ಮರ್ಳುತ್ತಾರಾ ಎನ್ನುವುದೇ ಸಿನಿಮಾದ ಪ್ರಮುಖ ಕಥೆ. ಇದು ಒಂದೇ ದಿನದಲ್ಲಿ ನಡೆಯುವ ಕಥೆಯಾಗಿದ್ದು ನೈಜ ಘಟನೆಯೊಂಡರ ಹಿನ್ನೆಲೆಯನ್ನಿರಿಸಿಕೊಂಡು ಕಾಲ್ಪನಿಕ ಚಿತ್ರ ನಿರ್ಮಿಸಲಾಗಿದೆ. ಚಿತ್ರದ ಬಹುಪಾಲು ಕಾಡಿನಲ್ಲೇ ನಡೆಯುವ ಕಥೆ ಆಗಿರುವ ಕಾರಣ ಸಿನಿಮಾಗೆ ಜಂಗಲ್ ಮಂಗಲ್ ಎಂಬ ಹೆಆರು ಇಡಲಾಗಿದೆ.
ಯಶ್ ಶೆಟ್ಟಿ ಸೇರಿದಂತೆ ಅನೇಕ ನಟರು ಕರಾವಳಿ ಭಾಗದವರಾಗಿದ್ದಾರೆ. ಯಶ್ ಶೆಟ್ಟಿ ಹಾಗೂ ಉಗ್ರಂ ಮಂಜು ಅವರ ಪಾತ್ರ ಸಿನಿಮಾದುದ್ದಕ್ಕೂ ಇದ್ದು ಇಬ್ಬರೂ ಪಾತ್ರಗಳಿಗೆ ಜೀವ ತುಂಬಿದ್ದಾರೆ. ದಿವ್ಯಾ ಎಂಬ ಮಧ್ಯಮ ವರ್ಗದ ಜವಾಬ್ದಾರಿಯುತ ಕರಾವಳಿ ಹೆಣ್ಣುಮಗಳ ಪಾತ್ರದಲ್ಲಿ ನಾಯಕಿ ಹರ್ಷಿತಾ ತಮಗೆ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿದ್ದಾರೆ. ಬಲ ರಾಜವಾಡಿ ಸೇರಿದಂತೆ ಉಳಿದವರ ಪಾತ್ರ ಕಥೆಗೆ ಪೂರಕವಾಗಿದೆ. ಇನ್ನು ಚಿಕ್ಕ ಮಕ್ಕಳಿಬ್ಬರ ಪಾತ್ರ , ಸಣ್ಣ ಮಗು ಸೋನು ಎನ್ನುವ ಮಗ್ದ ಮಗುವಿನಿಂದ ಈ ಚಿತ್ರದ ಕಥೆಗೆ ತಿರುವು ತರುವ ರೀತಿಯು ಸಹ ಚಿತ್ರದ ಮಹತ್ವದ ಅಂಶವೆನ್ನಬೇಕು.
ಚಿತ್ರದ ಸ್ಕ್ರೀನ್ ಪ್ಲೇ ಈ ಸಿನಿಮಾದ ಹೈಲೈಟ್. ಎಲ್ಲೂ ದಾರಿ ತಪ್ಪದ ಆಗೇ ತೆಗೆದುಕೊಂಡು ಹೋಗಿರುವುದು ನಿರ್ದೇಶಕರ ಜಾಣ್ಮೆ. ಸುಮಾರು ಒಂದೂವರೆ ಗಂಟೆ ಕಾಲದಲ್ಲಿ ಎಷ್ಟು ಬೇಕೋ ಅಷ್ಟೇ ಕಥೆ ಹೇಳಿರುವುದು, ಎಲ್ಲೂ ಅತಿ ಎನಿಸದಂತೆ ಒಂದೊಳ್ಳೆ ಫೀಲ್ ಕೊಡುವ ಸಿನಿಮಾ ಇದು. ಚಿತ್ರದಲ್ಲಿ ಹಾಡುಗಳಿಲ್ಲ. ಹಿನ್ನೆಲೆ ಸಂಗೀತವೂ ಅಬ್ಬರವಿಲ್ಲದೆ ಸಾಗುತ್ತದೆ. ಇನ್ನು ಛಾಯಾಗ್ರಹಣ ಕಾಡಿನ ಹಸಿರನ್ನು ತೋರಿಸುವ ರೀತಿ ಉತ್ತಮವಾಗಿದೆ. ಬೇರೆಲ್ಲಾ ಪಾತ್ರಧಾರಿಗಳು ತಕ್ಕಷ್ಟು ಮಟ್ಟದಲ್ಲಿ ಕರಾವಳಿ ಭಾಗದ ಭಷೆ ಬಳಸಿ ಸಂಭಷಣೆ ನಡೆಸಿದರೆ ಯಶ್ ಶೆಟ್ಟಿ ಮಾತ್ರ ತಮ್ಮ ಪಾತ್ರದಲ್ಲಿ ಸ್ಥಳೀಯ ಕನ್ನಡ ಬಳಸದಿರುವುದು ಒಂದು ಚಿಕ್ಕ ಕೊರತೆಯಾಗಿ ಕಾಣಬಹುದು. ಇದರ ಹೊರತಾಗಿ ಚಿತ್ರಪ್ರೇಮಿಗಳಿಗೆ ಬಿಗ್ ಬಜೆಟ್, ಬ್ರ್ಯಾಂಡ್ ಪ್ಯಾನ್ ಇಂಡಿಯಾ ಮೂವಿ ಹೊರತಾಗಿ ಶುದ್ದ ಮನರಂಜನೆ ನೀಡುವ ಚಿತ್ರ ಜಂಗಲ್ ಮಂಗಲ್ ಎನ್ನುವುದರಲ್ಲಿ ಯಾವ ಅನುಮಾನ ಇಲ್ಲ.