ಹಲವು ಬಗೆಯ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಬಲ್ಲ ಅಣಬೆ ಸ್ವಾದಿಷ್ಟ ಮತ್ತು ಪೌಷ್ಟಿಕ ಗುಣಗಳ ಭಂಡಾರವಾಗಿದೆ. ಇದರ ವಿವಿಧ ವ್ಯಂಜನಗಳ ಬಗ್ಗೆ ಅಲ್ಲಿ ಇಲ್ಲಿ ಕೇಳಿರುತ್ತೇವೆ. ಆದರೆ, ಇತರ ಸಾಮಾನ್ಯ ತರಕಾರಿಗಳಂತೆ ಇಲ್ಲದೆ ಇದರ ಬಳಕೆ ಬಲು ಅಪರೂಪ ಎಂದರೆ ಉತ್ಪ್ರೇಕ್ಷೆಯಲ್ಲ. ಬನ್ನಿ, ಇದರ ವಿವಿಧ ಸ್ವಾದಿಷ್ಟ ತಿನಿಸುಗಳ ಬಗ್ಗೆ ತಿಳಿಯೋಣ :

ಮಶ್ರೂಮ್ ಕೋಫ್ತಾ : 2 ಕಪ್‌ ನಷ್ಟು ಹೆಚ್ಚಿದ ತಾಜಾ ಬಟನ್‌ ಅಣಬೆಗಳನ್ನು ತುಸು ಉಪ್ಪು ಹಾಕಿ, ಬೇಯಿಸಿ, ಸೋಸಿಕೊಳ್ಳಿ. (ಈ ಸ್ಟಾಕ್‌ ನ್ನು ಗ್ರೇವಿಗೆ ಬಳಸಬಹುದು). ಬೆಂದ ಅಣಬೆಗಳನ್ನು ಮಸೆದಿಡಿ. ನಂತರ ಇದಕ್ಕೆ ಅಗತ್ಯವಿದ್ದಷ್ಟು ಓಮ, ಅಕ್ಕಿಹಿಟ್ಟು, ಕಡಲೆಹಿಟ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಿಲಿ ಸಾಸ್‌ ಬೆರೆಸುತ್ತಾ ಬಾಣಲೆಯಲ್ಲಿ ಬಾಡಿಸಿ, ಬೇರೆಯಾಗಿಡಿ. ಆರಿದ ನಂತರ ಇದರಿಂದ ಸಣ್ಣ ಉಂಡೆ ಮಾಡಿಡಿ. ಅದೇ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಏಲಕ್ಕಿ, ಚಕ್ಕೆ, ಲವಂಗ ಹಾಕಿ ಚಟಪಟಾಯಿಸಿ. ನಂತರ, ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಗೋಡಂಬಿ ಪೇಸ್ಟ್, 1 ಗ್ಲಾಸ್‌ ಹಾಲು, ಅಣಬೆ ಸ್ಟಾಕ್‌, ತುಸು ಉಪ್ಪು, ಮೆಣಸು ಹಾಕಿ ಕುದಿಸಬೇಕು. ಇದರಲ್ಲಿ ಅಣಬೆ ಉಂಡೆಗಳನ್ನು ತೇಲಿಬಿಟ್ಟು, 2 ನಿಮಿಷ ಕುದಿಸಿ ಕೆಳಗಿಳಿಸಿ.

ಮಶ್ರೂಮ್ ಚಿಲಿ : ಎಲ್ಲಕ್ಕೂ ಮೊದಲು ಅಣಬೆಗಳನ್ನು ಹೆಚ್ಚಿ, ಚಿಟಕಿ ಉಪ್ಪು ಹಾಕಿ ಬೇಯಿಸಿ, ಬಸಿದಿಡಿ. ನಂತರ ಇದಕ್ಕೆ ಚಿಟಕಿ ಅರಿಶಿನ, ಸೋಯಾ ಸಾಸ್‌, ಆರಾರೂಟ್‌, ಚಿಲಿ ಸಾಸ್‌ ಬೆರೆಸಿ, ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಚೆನ್ನಾಗಿ ಬಾಡಿಸಿ. ಇದನ್ನು ಬೇರೆಯಾಗಿ ಎತ್ತಿಡಿ. ಅದೇ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಈರುಳ್ಳಿ, ಆಮೇಲೆ ಕ್ಯಾಪ್ಸಿಕಂ ಹಾಕಿ ಬಾಡಿಸಿ. ಅಣಬೆ ಮಿಶ್ರಣ ಹಾಗೂ ಕ್ಯಾಪ್ಸಿಕಂ ಮಿಶ್ರಣಗಳನ್ನು ಟಿಶ್ಯು ಪೇಪರ್‌ ಮೇಲೆ ಹರಡಿ, ಎಣ್ಣೆ ಹಿಂಗುವಂತೆ ಮಾಡಿ. ಮತ್ತೆ ಅದೇ ಬಾಣಲೆಯಲ್ಲಿ 1-2 ಚಮಚ ಎಣ್ಣೆ ಬಿಸಿ ಮಾಡಿ, ಸಾಸುವೆ, ಜೀರಿಗೆ, ಕರಿಬೇವಿನ ಒಗ್ಗರಣೆ ಕೊಡಿ. ಆಮೇಲೆ ಹಸಿಮೆಣಸು, ಈರುಳ್ಳಿಯ ಪೇಸ್ಟ್ ಹಾಕಿ ಬಾಡಿಸಿ. ಇದಕ್ಕೆ ಅಣಬೆ ಸ್ಟಾಕ್‌ ಬೆರೆಸಿ ಕುದಿಸಿರಿ. ನಂತರ ಅಣಬೆ ಕ್ಯಾಪ್ಸಿಕಂ ಮಿಶ್ರಣ ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಆಮೇಲೆ ಟೊಮೇಟೊ ಸಾಸ್‌, ವಿನಿಗರ್‌ ಹಾಕಿ ಬೆರೆಸಿಡಿ. ಇದೀಗ ಮಶ್ರೂಮ್ ಚಿಲಿ ರೆಡಿ!

ಮಶ್ರೂಮ್ ಸೂಪ್‌ : ಅಣಬೆಗಳನ್ನು ಹೆಚ್ಚಿ, ತುಸು ಉಪ್ಪು, ಮೆಣಸು ಹಾಕಿ ಬೇಯಿಸಿ, ಆರಿದ ನಂತರ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಟೊಮೇಟೊಗಳನ್ನು ಬೇರೆಯಾಗಿ ಬೇಯಿಸಿ, ತಿರುವಿಕೊಳ್ಳಿ. ಬಾಣಲೆಯಲ್ಲಿ 2 ಚಮಚ ತುಪ್ಪ ಬಿಸಿ ಮಾಡಿ. ಇದಕ್ಕೆ ಅಣಬೆ ಮಿಶ್ರಣ, ಟೊಮೇಟೊ ಪೇಸ್ಟ್ ಹಾಕಿ ಚೆನ್ನಾಗಿ ಕೈಯಾಡಿಸಿ. ಜೊತೆಗೆ ಸ್ಟಾಕ್‌ ಬೆರೆಸಿ ಕುದಿಸಿ, ಕೆಳಗಿಳಿಸಿ. ಇದಕ್ಕೆ ಬ್ಲ್ಯಾಕ್‌ ಸಾಲ್ಟ್, ಪುಡಿಮೆಣಸು, ಹೆಚ್ಚಿದ ಕೊ.ಸೊಪ್ಪು ಸೇರಿಸಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಮಶ್ರೂಮ್ ಖೀರು : ಮೊದಲು ಹೆಚ್ಚಿದ ಅಣಬೆಗಳನ್ನು ಬೇಯಿಸಿ, ಆರಿದ ನಂತರ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಒಂದು ದಪ್ಪ ತಳದ ಪಾತ್ರೆಯಲ್ಲಿ 1 ಲೀ. ಹಾಲು ಕಾಯಿಸಿ, ಚೆನ್ನಾಗಿ ಕುದಿಸಿ, ಅರ್ಧದಷ್ಟಾಗುವಂತೆ ಹಿಂಗಿಸಿ. ಆಮೇಲೆ ಇದಕ್ಕೆ ಅಣಬೆ ಪೇಸ್ಟ್ ಹಾಕಿ ಕೈಯಾಡಿಸುತ್ತಾ ಕುದಿಸಬೇಕು. ನಂತರ ಸಕ್ಕರೆ, ಏಲಕ್ಕಿ ಸೇರಿಸಿ ಮತ್ತಷ್ಟು ಕುದಿಸಿರಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಬೆರೆಸಿದರೆ ಖೀರು ರೆಡಿ!

ಜ್ಯೋತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ