ನಾವು ಯೌವನದಿಂದ ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತೆ, ಹಲವಾರು ಬಗೆಯ ಚಿಂತೆ, ತೊಂದರೆಗಳು ನಮ್ಮನ್ನು ಆಕ್ರಮಿಸುತ್ತವೆ. ದೈಹಿಕ ತೊಂದರೆಗಳ ವಿಷಯ ಗಮನಿಸಿದಾಗ, ಮುಖದಲ್ಲಿ ಎದ್ದು ಕಾಣುವ ಡಬಲ್ ಚಿನ್‌ (ದುಪ್ಪಟ್ಟು ಗಲ್ಲ) ಬಲು ದೊಡ್ಡ ತಲೆ ನೋವಾಗಿದೆ. ಇದು ನೋಡಲು ವಿಕಾರ ಎನಿಸುವುದಲ್ಲದೆ, ಹೆಣ್ಣಿನ ಸೌಂದರ್ಯಕ್ಕೆ ಕುಂದು ತಂದೊಡ್ಡುತ್ತದೆ. ಇನ್ನಿತರ ದೈಹಿಕ ಸಮಸ್ಯೆಗಳಿಗ ಹೋಲಿಸಿದಾಗ, ಇದು ಸಾಧಾರಣ ಚಿಕ್ಕ ಸಮಸ್ಯೆಯೇ ಇರಬಹುದು, ಆದರೆ ಹೆಲ್ತ್ ಕಾನ್ಶಿಯಸ್‌ ಆದ ಜನ ಇದನ್ನು ನಿರ್ಲಕ್ಷಿಸದೆ ವಿಶೇಷ ಗಮನ ನೀಡುತ್ತಾರೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಫ್ಯಾಟ್‌ ಹೆಚ್ಚುವುದರಿಂದ ಮುಖದಲ್ಲಿ ಡಬಲ್ ಚಿನ್‌ ಮೂಡುತ್ತದೆ, ಇದು ಯಾವ ವಯಸ್ಸಿನವರಿಗಾದರೂ ಆಗಬಹುದು. ಈ ಡಬಲ್ ಚಿನ್‌ ಮುಖ ಮತ್ತು ದೇಹದ ಸೌಂದರ್ಯವನ್ನು ಎಷ್ಟೋ ಪಟ್ಟು ಕಡಿಮೆ ಮಾಡಿಬಿಡುತ್ತದೆ.

ಈ ಕುರಿತಾಗಿ ಫಿಜಿಯೋಥೆರಪಿಸ್ಟ್ ರ ಅಭಿಪ್ರಾಯವೆಂದರೆ, ಡಬಲ್ ಚಿನ್‌ ಸಮಸ್ಯೆ ಒಂದು ಜೆನಿಟಿಕ್‌ ಫ್ಯಾಕ್ಟರ್‌ ಆಗಿದೆ. ಅಕಸ್ಮಾತ್‌ ತಾಯಿಗೆ ಈ ಸಮಸ್ಯೆ ಇದ್ದರೆ, ಅದು ಆಕೆಯ ಮಗಳಿಗೂ ಬರಬಹುದು, ಶೇ.90 ಕೇಸ್‌ ಗಳಲ್ಲಿ ಹೀಗಾಗುತ್ತದೆ. ಜೊತೆಗೆ ಅದು ವ್ಯಕ್ತಿಯ ದೇಹದಲ್ಲಿ ಕೊಬ್ಬು ಎಲ್ಲಿ ಶೇಖರಣೆಗೊಳ್ಳುತ್ತಿದೆ ಎಂಬುದನ್ನೂ ಆಧರಿಸಿದೆ. ಅಕಸ್ಮಾತ್‌ ಅದು ಗಲ್ಲದ ಬಳಿಯೇ ಹೆಚ್ಚಾಗಿದ್ದರೆ, ಡಬಲ್ ಚಿನ್‌ ಆಗುವುದು ಸಹಜ, ಸ್ವಾಭಾವಿಕ. ಆದ್ದರಿಂದ ಇದನ್ನು ಆದಷ್ಟೂ ನಿಯಂತ್ರಿಸಬೇಕು ಅಥವಾ ಡಬಲ್ ಚಿನ್‌ ಆಗುವುದಕ್ಕೆ ಅವಕಾಶವನ್ನೇ ಕೊಡಬಾರದು. ಅಷ್ಟು ಮಾತ್ರವಲ್ಲ, ಇನ್ನೂ ಹಲವು ಕಾರಣಗಳಿವೆ. ಡಬಲ್ ಚಿನ್‌ ಆಗಲಿಕ್ಕೆ ಮತ್ತೊಂದು ಮುಖ್ಯ ಕಾರಣ. ದೇಹದಲ್ಲಿ ವಿಟಮಿನ್ಸ್ ಕೊರತೆ. ರುಚಿಗೆ ಮಾರುಹೋಗುವ ಜನ, ಪೋಷಕಾಂಶಗಳ ಗೊಡವೆಗೇ ಹೋಗುವುದಿಲ್ಲ, ಆ ಕಾರಣ ಸ್ವಲ್ಪ ಕಾಲದ ನಂತರ ಇಂಥ ಸಮಸ್ಯೆಗಳು ಎದುರಾಗುತ್ತವೆ.

ಡಬಲ್ ಚಿನ್‌ ಆಗಲು ಮತ್ತೊಂದು ಮುಖ್ಯ ಕಾರಣ ದೇಹ ಸಕ್ರಿಯವಾಗಿ ಚಟುವಟಿಕೆಯಿಂದಿರದೆ, ಸೋಮಾರಿತನ ರೂಢಿಸಿಕೊಳ್ಳುವುದು. ಹೀಗಾಗಿ ಧಾರಾಳ ವಿಟಮಿನ್‌ ಸೇವನೆಯೊಂದಿಗೆ, ಬೆಳಗಿನ ವ್ಯಾಯಾಮ, ಆಟೋಟಗಳಿಗೂ ಅಷ್ಟೇ ಮಹತ್ವ ಕೊಡಬೇಕು. ಇದರಿಂದ ಪಾರಾಗಲು ವೈದ್ಯರು ಹಲವಾರು ಉಪಾಯಗಳನ್ನು ಸೂಚಿಸುತ್ತಾರೆ. ಅಂದರೆ ಕೆಲವು ವಿಶಿಷ್ಟ ಬಗೆಯ ವಿಟಮಿನ್‌ ಸೇವನೆ, ಡಬಲ್ ಚಿನ್‌ ಎಕ್ಸರ್‌ ಸೈಜ್‌ ಹಾಗೂ ನೈಸರ್ಗಿಕ ತೈಲಗಳಿಂದ ಮಸಾಜ್‌ ಚಿಕಿತ್ಸೆ ಇವೆಲ್ಲ ಕೂಡಿ ನಿಮ್ಮನ್ನು ಡಬಲ್ ಚಿನ್‌ ಸಮಸ್ಯೆಯಿಂದ ಪಾರು ಮಾಡಬಲ್ಲವು. ಹೀಗಾಗಿ ಈ ಮೂರು ಸಲಹೆಗಳನ್ನೂ ಅಗತ್ಯವಾಗಿ ನೀವು ಅನುಸರಿಸಿದರೆ, ಖಂಡಿತಾ ಡಬಲ್ ಚಿನ್‌ ನಿಮ್ಮನ್ನು ಕಾಡದು.

ಡಯೆಟ್ನಲ್ಲಿ ವಿಟಮಿನ್

ಡಬಲ್ ಚಿನ್‌ ನಿಂದ ಮುಕ್ತರಾಗಲು ವಿಟಮಿನ್‌ `ಈ’ ಸೇವನೆ ಹೆಚ್ಚಿಸಿ. ಇದು ನಮ್ಮ ದಿನನಿತ್ಯದ ಆಹಾರದಲ್ಲೇ ಹೆಚ್ಚು ಲಭ್ಯವಿವೆ. ಅಂದರೆ ಹಾಲಿನ ಉತ್ಪನ್ನಗಳು, ಬ್ರೌನ್‌ ರೈಸ್‌, ಬೀನ್ಸ್, ಸೋಯಾ, ಸೇಬು, ಹಸಿ ಕಡಲೆಕಾಯಿಬೀಜ, ಇತ್ಯಾದಿ….. ಇಷ್ಟು  ಮಾತ್ರವಲ್ಲದೆ, ನಮ್ಮ ನಿಯಮಿತ ಆಹಾರ ಪದಾರ್ಥಗಳ ಸೇವನೆಯಿಂದಲೂ ಇದರ ಇನ್‌ ಟೇಕ್‌ ಹೆಚ್ಚಿಸಬಹುದಾಗಿದೆ.

ಮಸಾಜ್ಕಪ್

ತೆಂಗಿನ ತುರಿಯನ್ನು ನುಣ್ಣಗೆ ಪೇಸ್ಟ್ ಮಾಡಿ. ಇದರ ಮೇಲ್ಭಾಗದಲ್ಲಿ ತೇಲಿಬರುವ ಗಟ್ಟಿ ತೆಂಗಿನ ಕೆನೆ (ಕೋಕೋನಟ್‌ ಬಟರ್‌) ಯನ್ನು ಸಂಗ್ರಹಿಸಿ, ಅದನ್ನು ಮೇಕ್ರೋವೇವ್ ‌ನಲ್ಲಿ ತುಸು ಬಿಸಿ ಮಾಡಿ, ಕುತ್ತಿಗೆ ಗಲ್ಲ ಹಾಗೂ ಡಬಲ್ ಚಿನ್‌ ಏರಿಯಾ ಬಳಿ ಚೆನ್ನಾಗಿ ಸವರಿ, ಮಸಾಜ್‌ ಮಾಡಿ. ಕುತ್ತಿಗೆಯಿಂದ ಶುರು ಮಾಡಿ ಲಘುವಾಗಿ ಮಸಾಜ್‌ ಮಾಡುತ್ತಾ ಮೇಲ್ಭಾಗಕ್ಕೆ ಬನ್ನಿ. ಮಲಗುವ ಮುನ್ನ ಇದನ್ನು 10 ನಿಮಿಷ ಮಾಡಿದರೆ ಉತ್ತಮ.

ವ್ಯಾಯಾಮ ಮಾಡುವಾಗ ಗಮನಿಸಿ

ವ್ಯಾಯಾಮ ಮಾಡುವಾಗ ನಿಮ್ಮ ಗಮನ ಅದರ ಮೇಲೆಯೇ ಇರಬೇಕು, ಆದರೆ ಈ ವ್ಯಾಯಾಮಗಳ ಕಾರಣ ಕುತ್ತಿಗೆಯ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ಎಚ್ಚರವಹಿಸಿ.

ಯಾರಿಗೆ ಬೆನ್ನಿನ ಅಡಿಭಾಗ ಹಾಗೂ ಮಂಡಿಯ ನೋವು ಹೆಚ್ಚಿರುತ್ತದೋ, ಅವರು ಈ ವ್ಯಾಯಾಮ ಮಾಡದಿರುವುದೇ ಲೇಸು. ಬದಲಿಗೆ ಇತರೆ ಸಣ್ಣಪುಟ್ಟ ವ್ಯಾಯಾಮ ಮಾಡಬಹುದು.

ಸಾಮಾನ್ಯವಾಗಿ ದೇಹ ತೂಕ ಕಡಿಮೆ ಮಾಡಲೆಂದೇ ಇವರು ಕಾರ್ಡಿಯೋ ಆ್ಯಕ್ಟಿವ್ ‌ಎಕ್ಸರ್‌ ಸೈಜ್‌ ಗಳಿಂದ ಡಬಲ್ ಚಿನ್ ಸಮಸ್ಯೆಯನ್ನು ದೂರಗೊಳಿಸಬಹುದಾಗಿದೆ.

ವ್ಯಾಯಾಮ 1

ಬೆನ್ನನ್ನು ನೆಟ್ಟಗೆ ನೇರವಾಗಿರಿಸಿಕೊಂಡು ನೆಲದ ಮೇಲೆ ಕೂರಬೇಕು. ಒಂದು ಕಾಲನ್ನು ಮಡಿಚುತ್ತಾ, ಪಕ್ಕದ ತೊಡೆಯ ಮೇಲೆ ಎಳೆದುಕೊಳ್ಳಿ. ಅದೇ ತರಹ ಇನ್ನೊಂದು ಕಾಲನ್ನು ಮಡಿಚಿ, ಪಕ್ಕದ ತೊಡೆಯ ಮೇಲಿರಿಸಿ. ಅಂದರೆ ಪದ್ಮಾಸನದ ಸ್ಥಿತಿಯಲ್ಲಿ ಕೂರಬೇಕು.

ಎರಡೂ ಕೈಗಳನ್ನು ಬೆನ್ನ ಹಿಂದಕ್ಕೆ ಕೊಂಡೊಯ್ದು, ಪರಸ್ಪರ ಮಣಿಕಟ್ಟನ್ನು ಬಿಗಿಯಾಗಿ ಹಿಡಿದುಕೊಳ್ಳಿ. ನಿಮಗೆ ಸಾಧ್ಯವಾದಷ್ಟೂ ಇದನ್ನು ಹಿಂದಕ್ಕೆ ಎಳೆದುಕೊಳ್ಳಲು ಪ್ರಯತ್ನಿಸಿ, ಎದೆ ಭಾಗ ಹಿಂದಕ್ಕೆ ಎಳೆದುಕೊಳ್ಳುವಂತೆಯೇ ಮಾಡಬೇಕು. ನಂತರ ನಿಮ್ಮ ಕುತ್ತಿಗೆಯನ್ನೂ ಸಾಧ್ಯವಾದಷ್ಟು ಹಿಂದಕ್ಕೆ ವಾಲಿಸಿ. ಇದೇ ಸ್ಥಿತಿಯಲ್ಲಿ 10-20 ಕ್ಷಣಗಳಿರಬೇಕು. ನಂತರ ನಿಧಾನವಾಗಿ ನಿಮ್ಮನ್ನು ನೀವು ರಿಲೀಸ್‌ ಮಾಡಿಕೊಳ್ಳಿ.

ವ್ಯಾಯಾಮ -2

ನೆಲದ ಮೇಲೆ ಬೋರಲು ಮಲಗಿ. ಕೈಕಾಲುಗಳನ್ನು ನೇರವಾಗಿ ಚಾಚಿರಿ. ಆಮೇಲೆ ನಿಮ್ಮ ಚಿನ್‌ ನೆಲಕ್ಕೆ ತಾಕುವಂತೆ ಮಲಗಿರಿ.

ಎರಡೂ ಕಾಲುಗಳನ್ನು ಬೆನ್ನಿನ ಮೇಲ್ಭಾಗಕ್ಕೆ ತಂದು ಬಿಲ್ಲಿನ ತರಹ ಬಾಗಿಸಿ. ಈಗ ಕೈಗಳನ್ನು ಪಾದಗಳ ಕಡೆಗೆ ಹಿಂದಕ್ಕೆ ತೆಗೆದುಕೊಳ್ಳುತ್ತಾ, ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಳ್ಳಿ. ಈಗ ಮುಖವನ್ನು ಸಹ ಮುಂಭಾಗದತ್ತ ತುಸು ಮೇಲೆತ್ತಿ.

ಕಾಲುಗಳನ್ನು ಸ್ಟ್ರೆಚ್‌ ಮಾಡುತ್ತಾ, ದೀರ್ಘ ಶ್ವಾಸ ತೆಗೆದುಕೊಳ್ಳಿ ಹಾಗೂ ಮೇಲಿನ ಭಾಗವನ್ನು ಇನ್ನಷ್ಟು ಮೇಲೆತ್ತಿ. ಪಾದಗಳನ್ನು ನಿಮ್ಮ ಕೆಳಭಾಗದ ಕಡೆಗೆ ಬರುವಂತೆ ಎಳೆಯಿರಿ. ನಂತರ ಕಾಲುಗಳನ್ನು ಇನ್ನಷ್ಟು ಸ್ಟ್ರೆಚ್‌ ಮಾಡಿ, ಮಸಲ್ ಸ್ಟ್ರೆಚ್‌ ಆಗುವಂತೆ ಮಾಡಿ ಹಾಗೂ ಸಾಧ್ಯವಾದಷ್ಟೂ ಕುತ್ತಿಗೆಯನ್ನು ಹಿಂಭಾಗಕ್ಕೆ ವಾಲಿಸಿ.

ಈ ಸ್ಥಿತಿಯಲ್ಲಿ 10-20 ಕ್ಷಣಗಳವರೆಗೆ ಹಾಗೇ ಇದ್ದು, ನಂತರ ನಿಧಾನವಾಗಿ ಉಸಿರುಬಿಡುತ್ತಾ, ಕಾಲುಗಳನ್ನು ಕ್ರಮೇಣ ಹಿಂದಿನ ಸ್ಥಿತಿಗೆ ತರಬೇಕು.

ವ್ಯಾಯಾಮ-3

ಅಂಗಾತ ಮಲಗಿಕೊಳ್ಳಿ. ಮಂಡಿಗಳನ್ನು ಮಡಿಚುತ್ತಾ, ಪಾದಗಳನ್ನು ಹಿಪ್ಸ್ ಬಳಿ ತನ್ನಿ. ಹಸ್ತಗಳನ್ನು ಭುಜದ ಕೆಳಗೆ ಒತ್ತಿಕೊಳ್ಳಿ, ಬೆರಳು ಒಳಭಾಗಕ್ಕೆ ಇರಬೇಕು.

ಈಗ ದೇಹದ ಮಧ್ಯ ಭಾಗವನ್ನು ನಿತಂಬಗಳ ಕಡೆಯಿಂದ ಮೇಲೆತ್ತುತ್ತಾ, ಬಿಲ್ಲಿನಂತೆ ಬಾಗಿಸಿ. ಎಲ್ಲಿಯವರೆಗೂ ಹಸ್ತಪಾದಗಳ ಮೇಲೆ ಇಡೀ ದೇಹದ ತೂಕ ಬೀಳುವುದಿಲ್ಲವೋ, ಅಲ್ಲಿಯವರೆಗೂ ದೇಹ ಮೇಲೆತ್ತಬೇಕು. ಕುತ್ತಿಗೆಯನ್ನು ಸಾಧ್ಯವಾದಷ್ಟೂ ಕೆಳಗೆ ಬಾಗಿಸಿ.

ನಿಮಗೆ ಸಾಧ್ಯವಿದ್ದಷ್ಟೂ ದೇಹವನ್ನು ಮೇಲ್ಭಾಗಕ್ಕೆ ಎತ್ತಿರಬೇಕು. ಹಸ್ತ ಪಾದ ಮಾತ್ರ ನೆಲದ ಮೇಲೇ ಇರಬೇಕು. ಈ ಸಮಯದಲ್ಲಿ ಎಂದಿನಂತೆ ಸಾಧಾರಣವಾಗಿ ಉಸಿರು ಬಿಟ್ಟು ತೆಗೆದುಕೊಳ್ಳುತ್ತಿರಬೇಕು. ಹೀಗೆ 20-30 ಕ್ಷಣಗಳಿರಬೇಕು.

ರಿಲ್ಯಾಕ್ಸ್ ಆಗಲು ನಿಧಾನವಾಗಿ ನಿತಂಬಗಳನ್ನು ಕೆಳಕ್ಕೆ ತನ್ನಿ. ಕಾಲುಗಳನ್ನು ಮೆಲ್ಲಗೆ ಸೀದಾ ಚಾಚಿರಿ ಹಾಗೂ ಕೈಗಳನ್ನು ಸಹ ನಿಧಾನಕ್ಕೆ ಯಥಾಸ್ಥಿತಿಗೆ ತರಬೇಕು.

ವ್ಯಾಯಾಮ-4

ಮೊದಲು ಬೋರಲು ಮಲಗಬೇಕು. ಸೊಂಟದವರೆಗೂ ದೇಹದ ಮುಂಭಾಗವನ್ನು ನಿಧಾನವಾಗಿ ಮೇಲೆತ್ತುತ್ತಾ, ಕೆಳಗೆ ಊರಿರುವ ಹಸ್ತದ ಮೇಲೆ ಭಾರ ಬೀಳುವಂತೆ ಮಾಡಿ.

ನಂತರ ಎರಡು ಕಾಲುಗಳನ್ನು ಜೋಡಿಸಿಕೊಂಡು ಒಟ್ಟಾಗಿ ಮೇಲೆತ್ತಬೇಕು, ಆದರೆ ಮಂಡಿ ನೆಲಕ್ಕೆ ಊರಿರಬೇಕು.

ಹಸ್ತ ಕೆಳಗೆ ಊರಿರುವ ಈ ಪೊಸಿಷನ್‌ ನಲ್ಲಿ, ಹಿಮ್ಮಡಿ ದೇಹದ ಯಾವ ಭಾಗವನ್ನೂ ಸ್ಪರ್ಶಿಸಬಾರದು ಎಂದು ನೆನಪಿಡಿ.

ಈಗ ನಿಧಾನವಾಗಿ ಉಸಿರು ತೆಗೆದುಕೊಳ್ಳುತ್ತಾ, ದೇಹದ ನಡುಭಾಗವನ್ನು, ಸಾಧ್ಯವಾದಷ್ಟೂ ಬಿಲ್ಲಿನಂತೆ ಬಾಗಿಸಲು ಯತ್ನಿಸಿ (ದೇಹದ ಭಾರ ಮಂಡಿ ಹಾಗೂ ಹಸ್ತಗಳ ಮೇಲಿರುತ್ತದೆ).

ಇದು ಮೊದಲ ಸಲ ಮಾಡುವಾಗ ಕಷ್ಟ, ಆದರೂ ಪ್ರಯತ್ನ ಬಿಡಬೇಡಿ. ಗಲ್ಲವನ್ನೂ ಕೆಳಗೆ ಎಳೆದುಕೊಳ್ಳುತ್ತಾ, ದೃಷ್ಟಿ ಮೇಲೆ ಇರಿಸಿಕೊಳ್ಳಿ.

ಇದೇ ಸ್ಥಿತಿಯಲ್ಲಿ 20-30 ಕ್ಷಣಗಳಿರಬೇಕು. ಹೀಗೆ ಇದನ್ನು ನಿಧಾನವಾಗಿ ಪುನರಾವರ್ತಿಸಿ.

ಪ್ರೇಮಲತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ