“ರಿಯಾಲಿಟಿ ಸಿನಿಮಾ ಅಂದ್ರೆ ಸಮಾಜದಲ್ಲಿ ನಡೆಯೋದನ್ನೇ ತೋರಿಸಬೇಕಾಗುತ್ತೆ!”

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ `ಗಂಟುಮೂಟೆ’ ಚಿತ್ರದ ನಿರ್ದೇಶಕಿ ರೂಪಾ ರಾವ್ ‌ಗಮನಸೆಳೆದ ಯುವ ಪ್ರತಿಭೆ. ಮಾಮೂಲಿ ಪ್ರೇಮಕಥೆಗಳಿಗಿಂತ ವಿಭಿನ್ನವಾಗಿ, ನೈಜವಾಗಿ, ಬೋಲ್ಡಾಗಿ ಚಿತ್ರ ತೋರಿಸಿದ ರೂಪಾ ರಾವ್ ‌ದೊಡ್ಡ ದೊಡ್ಡ  ಚಿತ್ರಗಳೆದುರು ಗೆಲುವು ಸಾಧಿಸಿದ ಛಲಗಾತಿ. ಬಿಡುಗಡೆಗೆ ಮುನ್ನವೇ ಈ ಚಿತ್ರ ಉತ್ತಮ ರೆಸ್ಪಾನ್ಸ್ ಪಡೆದುಕೊಂಡು, ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆಯೂ ಉಂಟು.

ರೂಪಾ ರಾವ್ ‌ರವರಿಗೆ ಮೊದಲಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ. ಸಿನಿಮಾ ನಿರ್ದೇಶಕಿಯಾಗಿ ಒಳ್ಳೆಯ ಸಿನಿಮಾ ಕೊಡುವಾಸೆ. ಅದರ ಸಲುವಾಗಿ ಇನ್ಛೋಸಿಸ್‌ನಲ್ಲಿ  ಒಳ್ಳೆಯ ಹುದ್ದೆ ಬಿಟ್ಟು ಬಂದರು. ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿದ್ದ ರೂಪಾ ಇಂಡಿಯಾಗೆ ಬಂದಾಗ ಸಿನಿಮಾರಂಗದಲ್ಲಿ ಯಾರ ಪರಿಚಯವು ಇರಲಿಲ್ಲ. ಆಗಷ್ಟೇ ದ್ವಾರಕೀಶ್‌ ಬ್ಯಾನರ್‌ ನಲ್ಲಿ ಸಹಾಯಕ ನಿರ್ದೇಶಕರಿಗಾಗಿ ಕಾಲ್ಛರ್‌ ಮಾಡಲಾಗಿತ್ತು.

ಅದು ರೂಪಾ ಗಮನಕ್ಕೆ ಬಿದ್ದಾಗ ಭೇಟಿಯಾಗಿ ಎಲ್ಲವನ್ನೂ ಹೇಳಿಕೊಂಡಾಗ ಈಕೆಯ ಅನುಭವ ಕಂಡು ಅಸೋಸಿಯೇಟ್‌ಡೈರೆಕ್ಟರ್‌ ಆಗಿ ನೇಮಿಸಿದರು, ಸುದೀಪ್‌ ನಟನೆಯ `ವಿಷ್ಣುವರ್ಧನ’ ಸಿನಿಮಾ ಅದಾಗಿತ್ತು.

ಮೊದಲು ಚಿತ್ರದಲ್ಲೇ ಅನುಭವೀ ನಟರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು ಎಂದು ರೂಪಾ ನೆನಪು ಮಾಡಿಕೊಳ್ಳುತ್ತಾರೆ. `ಗಂಟುಮೂಟೆ’ ಚಿತ್ರ ಬಿಡುಗಡೆಯಾದಾಗ ಸುದೀಪ್‌ ಟ್ವೀಟ್‌ ಮಾಡಿ ಶುಭ ಕೋರಿದ್ದರು.

ನೀವು ಸಿನಿಮಾರಂಗಕ್ಕೆ ಬಂದದ್ದು ಹೇಗೆ?

“ನನಗೆ ಈ ಸಿನಿಮಾ ಹುಚ್ಚು ಮೊದಲಿನಿಂದಲೂ ಇತ್ತು. ನನ್ನ ತಂದೆಗೆ ಡಾ. ರಾಜ್‌ ಕುಮಾರ್‌ ಅಂದ್ರೆ ತುಂಬಾ ಇಷ್ಟ. ನಾನಂತೂ ವಾರಕ್ಕೆ ಮೂರು ಸಿನಿಮಾ ನೋಡ್ತಿದ್ದೆ. ಸಿನಿಮಾ ಪೋಸ್ಟರ್‌, ಜಾಹೀರಾತು ನೋಡೋ ಕ್ರೇಜ್‌ ಜಾಸ್ತಿ. ಅವನ್ನೆಲ್ಲ  ಗಮನಹರಿಸಿ ಓದುತ್ತಿದೆ. ನನ್ನ ತಂದೆ ಸಿನಿಮಾ ಬಗ್ಗೆ ಉಕ್ತಲೇಖನ ಕೊಡೋರು.

“ಬಾಲ್ಯದಿಂದಲೂ ಕಥೆ ಬರೆದು ಅದನ್ನು  ಸಿನಿಮಾ ಮಾಡಬೇಕೆಂದು ಕನಸು ಕಾಣ್ತಾ ಇದ್ದೆ ವಿದೇಶದಲ್ಲಿ ಒಳ್ಳೆಯ ಹುದ್ದೆಯಿದ್ದರೂ ಎಲ್ಲವನ್ನು ಬಿಟ್ಟು ನನ್ನ ಕನಸನ್ನು ನನಸಾಗಿಸುವ ಸಲುವಾಗಿ ಭಾರತಕ್ಕೆ ಬಂದೆ. ಅಸೋಸಿಯೇಟಾಗಿ ಕೆಲಸ ಮಾಡಿದ ನಂತರ ನಾನೇ ಬರೆದ ಕಥೆಯನ್ನು ಸಿನಿಮಾ ಮಾಡಲು ಹೊರಟೆ. ಅದೇ `ಗಂಟುಮೂಟೆ’ ಚಿತ್ರ.

ನಿಮ್ಮ ಲೈಫ್ಸ್ಟೋರಿ ಅಂತೆ….. ಹೌದಾ?

ಒಂದೆರಡು ಘಟನೆಗಳು ಕಥೆಗೆ ಸ್ಛೂರ್ತಿ ಕೊಟ್ಟಿರಬಹುದು. ನನ್ನೊಬ್ಬಳದೇ ಅಲ್ಲ. ಸಾಮಾನ್ಯವಾಗಿ ಹೈಸ್ಕೂಲಲ್ಲಿ ಓದು ಕೆಲವರಿಗಾದರೂ ಪ್ರೀತಿ ಪ್ರೇಮ ಉಂಟಾಗಿರುತ್ತೆ. ಆದರೆ ನಾನು ಈ ಚಿತ್ರದ ಮುಖೇನ ಹೇಳಲು ಹೊರಟಿದ್ದು, ನೈಜ ಘಟನೆಗಳನ್ನು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕಾಣುವಂತಹ ಲವ್ ಸ್ಟೋರಿ ಇದಾಗಿರಲಿಲ್ಲ. ಒಬ್ಬ ಹೆಣ್ಣು ಹುಡುಗಿಯ ದೃಷ್ಟಿಯಿಂದ ಅವಳ ಬಯಕೆ, ಆಸೆ, ಪ್ರೀತಿ ಹುಟ್ಟು ಬಗೆ, ಅವಳ ಭಾವನೆಗಳು……. ಇವೆಲ್ಲವನ್ನು ತೋರಿಸಬೇಕೆಂದು ಈ ಚಿತ್ರ ಮಾಡಿದೆ.

ಸಿನಿಮಾ ನಿರ್ದೇಶನದ ಜೊತೆ ನಿರ್ಮಾಣ ರಿಸ್ಕ್ ಅನಿಸಲಿಲ್ವಾ?

ಸಿನಿಮಾ ಮಾಡಿ ಮುಗಿಸಿದ ಮೇಲೆ ಕಷ್ಟ ಅನಿಸಿತು. ಏಕೆಂದರೆ ಬಿಡುಗಡೆಗೆ ಮೊದಲು ಸ್ಪಲ್ಪ ಕಷ್ಟ ಪಡಲೇಬೇಕು. ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿದ್ದರಿಂದ ಸೋಶಿಯಲ್ ಮೀಡಿಯಾ ಮೂಲಕ ಪ್ರಚಾರದ ಜೊತೆ ಮೀಡಿಯಾ ಪ್ರೋತ್ಸಾಹ ಸಿಕ್ಕಿತು. ಇತ್ತೀಚೆಗೆ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ನನಗೆ ವರ್ಷದ ಯುವ ನಿರ್ದೇಶಕಿ ಎಂದು ಪ್ರಶಸ್ತಿ ಕೊಟ್ಟಾಗ ಆಶೀರ್ವಾದ ಪಡೆದಂತಾಯಿತು, ಉತ್ಸಾಹ ಹೆಚ್ಚಿಸಿದೆ. ಹೊಸ ಸಿನಿಮಾ ತಯಾರಿಕೆ ನಡೆದಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಚಾರಣೆಗೆ ನಿಮ್ಮ ಸಂದೇಶವೇನು?

ಮಹಿಳೆಯರಿಗಾಗಿ ಮಹಿಳೆಯರು ತಮ್ಮ ಕಥೆ, ಮನುಷ್ಯತ್ವದ ಕಥೆ ಹೇಳುವ ಕಾಲ ಬಂದಿದೆ. ನಮಗೆ ಹೆಣ್ಣುಮಕ್ಕಳು ಎಂದು ಸ್ಪೆಷಲ್ ಕ್ರೆಡಿಟ್‌ ಕೊಡೋ ಮುಂಚೆ ಮನುಷ್ಯರಂತೆ ಕಂಡರೆ ವೈಯಕ್ತಿಕ ಮಟ್ಟದಲ್ಲಿ ಎಷ್ಟೋ ಬದಲಾವಣೆ ಆಗಿಹೋಗುತ್ತದೆ ಅನಿಸುತ್ತೆ. ಸಂದೇಶ ಕೊಡುವಷ್ಟು ಹಿರಿಯಳಲ್ಲದಿದ್ದರೂ ನನ್ನ ಅನಿಸಿಕೆಯನ್ನು ಶೇರ್‌ ಮಾಡಿದ್ದೇನೆ ಅಷ್ಟೆ.

ರೂಪಾ ರಾವ್ ‌ತಮ್ಮ ಸ್ನೇಹಿತರೊಂದಿಗೆ `ಅಮೆಯುಕ್ತಿ’ ಸಂಸ್ಥೆ ಪ್ರಾರಂಭಿಸಿ ಬಂಡವಾಳ ಹೂಡಿ ಸಿನಿಮಾ ಮಾಡುತ್ತಿದ್ದಾರೆ. ಚಿತ್ರ ತಯಾರಿಕೆ ಎಂದಿಗೂ ಒಬ್ಬ ವ್ಯಕ್ತಿಯ ಕೆಲಸವಲ್ಲ ಎಂದು ಹೇಳುತ್ತಾರೆ.

ರಿಯಾಲಿಟಿ ಸಿನಿಮಾ ಅಂದರೆ ಸಮಾಜದಲ್ಲಿ ನಡೋದನ್ನೇ ತೋರಿಸಬೇಕಾಗುತ್ತದೆ. ಆದರೆ ಸೆನ್ಸಾರ್‌ ನೀತಿ ನಿಯಮ ಒಬ್ಬ ನಿರ್ದೇಶಕನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ. ಯುವ ಪೀಳಿಗೆ ಇಂದು ಡಿಜಿಟಲ್ ಯುಗದಲ್ಲಿ ಸಾಗುತ್ತಿದೆ. ಅಲ್ಲಿಲ್ಲದ ನಿರ್ಬಂಧ ಸಿನಿಮಾಗೇಕೆ? ಗೈಡ್‌ ಲೈನ್ಸ್ ಅಪ್‌ ಡೇಟ್‌ ಆಗಬೇಕು ಎಂದು ರೂಪಾ ಪ್ರೇಕ್ಷಕರ ಒಬ್ಬ ನಿರ್ದೇಶಕರಾಗಿ ಹೇಳುತ್ತಾರೆ.

`ಗಂಟು ಮೂಟೆ’ ಸಿನಿಮಾ ಬಿಡುಗಡೆಗೆ ಮುನ್ನವೇ ನ್ಯೂಯಾರ್ಕ್‌ ಫಿಲಂ ಫೆಸ್ಟಿವ್ ‌ನಲ್ಲಿ ಬೆಸ್ಟ್ ಸ್ಕ್ರೀನ್‌ ಪ್ಲೇ ಪ್ರಶಸ್ತಿ ಪಡೆದಿದೆ. ಇನ್ನೂ ಎರಡು ಅಂತಾರಾಷ್ಟ್ರೀಯ  ಚಲನಚಿತ್ರೋತ್ಸವಕ್ಕೂ ಆಯ್ಕೆಯಾಗಿದೆ.

ಜಾಗೀರ್ದಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ