ಮತ್ತೆ ಹಳ್ಳಿ ಹುಡುಗಿ
ನೋಡುವುದಕ್ಕೆ ಮಾಡರ್ನಾಗಿ ಕಂಡರೂ ನಟಿ ಶುಭಾ ಪೂಂಜಾಳಿಗೆ ಹಳ್ಳಿ ಹುಡುಗಿ ಪಾತ್ರಗಳು ಹೆಚ್ಚಾಗಿ ಸಿಗುತ್ತಲೇ ಇರುತ್ತವೆ. `ಮೊಗ್ಗಿನ ಮನಸ್ಸು' ಚಿತ್ರದಲ್ಲೂ ಸಹ ಹಳ್ಳಿ ಹುಡುಗಿ ಪಾತ್ರ ಮಾಡಿದ್ದಳು. ದುನಿಯಾ ವಿಜಯ್ ಜೊತೆ `ತಾಕತ್' ಚಿತ್ರದಲ್ಲೂ ಹಳ್ಳಿ ಹುಡುಗಿಯಾಗಿದ್ದಳು. ಇದೀಗ ಮತ್ತೊಮ್ಮೆ ಶುಭಾಳಿಗೆ ಹಳ್ಳಿ ಹುಡುಗಿಯಾಗೋ ಅದೃಷ್ಟ ಬಂದಿದೆ. ಅಂದಹಾಗೆ ಚಿತ್ರದ ಹೆಸರು ಕೂಡ `ಅದೃಷ್ಟ.' ಬದ್ರಿನಾಥ್ ನಿರ್ದೇಶನದ ಈ ಚಿತ್ರದಲ್ಲಿ ಲಂಗ ದಾವಣಿಯಲ್ಲಿ ಮಿಂಚಲು ಬರುತ್ತಿದ್ದಾಳೆ. ಒಂದೇ ರೀತಿ ಪಾತ್ರಕ್ಕೆ ಬ್ರ್ಯಾಂಡ್ ಆಗಲು ನನಗಿಷ್ಟವಿಲ್ಲ. ಈಗಾಗಲೇ ನಾನು ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ಯಾವುದೇ ಇರಲಿ ಅದರ ಮೂಲಕ ನನ್ನ ಪ್ರತಿಭೆ ತೋರಿಸುವ ಪ್ರಯತ್ನ ಮಾಡುತ್ತೇನೆ ಎನ್ನುತ್ತಾಳೆ ಶುಭಾ ಪೂಂಜಾ.
ಮತ್ತೆ ಗೆದ್ದ ದರ್ಶನ್
ಛಾಲೆಂಜಿಂಗ್ ಸ್ಟಾರ್, ಕಲೆಕ್ಷನ್ ಕಿಂಗ್ ಎಂದೆಲ್ಲ ಹೆಸರು ಪಡೆದಿರುವ ದರ್ಶನ್ ಅವರಿಗೀಗ ಶುಕ್ರದೆಸೆ. ಒಂದಾದ ಮೇಲೊಂದರಂತೆ ಅವರ ಚಿತ್ರಗಳು ಜಯಭೇರಿ ಬಾರಿಸುತ್ತಲೇ ಇವೆ. ಇತ್ತೀಚೆಗೆ ಬಿಡುಗಡೆಯಾಗಿ ಭಾರಿ ಕಲೆಕ್ಷನ್ ಮಾಡಿದಂಥ `ಬುಲ್ ಬುಲ್' ಅವರ ಇಡೀ ತಂಡಕ್ಕೆ ಲಾಭ ತಂದುಕೊಟ್ಟಿದೆ. ದರ್ಶನ್ ಅವರ ಜೊತೆ ಮೊದಲಿನಿಂದಲೂ ಕೆಲಸ ಮಾಡಿಕೊಂಡು ಬಂದಿರುವಂಥ ಅವರ ತಂಡವೇ ಈ ಚಿತ್ರದ ನಿರ್ಮಾಪಕರಾಗಿದ್ದರಿಂದ ಎಲ್ಲರಿಗೂ ಗೆಲುವು ತಂದುಕೊಟ್ಟಿದೆ. ಸಿನಿಮಾರಂಗದಲ್ಲಿ ಮೊದಲ ಬಾರಿಗೆ ಇಂಥವೊಂದು ಪ್ರಯತ್ನ ಮಾಡಿರೋದ್ರಿಂದ ದರ್ಶನ್ ತಂಡವನ್ನು ಗೆಲ್ಲಿಸಿ ತಾವೂ ಗೆದ್ದಿದ್ದಾರೆ. ದರ್ಶನ್ ಇಂಥದ್ದೇ ಪಾತ್ರವೊಂದು ಬ್ರ್ಯಾಂಡಾಗದೇ ಎಲ್ಲ ತರಹದ ಪಾತ್ರ ಮಾಡಿಕೊಂಡು ಬಂದಿರೋದ್ರಿಂದ ಅವರ ಹೊಸ ಚಿತ್ರಗಳಲ್ಲಿ ಏನಾದರೊಂದು ಹೊಸತನವಿರುತ್ತದೆ. ಕಾಮಿಡಿ, ಫ್ಯಾಮಿಲಿ, ಆ್ಯಕ್ಷನ್, ಸೆಂಟಿಮೆಂಟ್ ಎಂಥದ್ದೇ ಪಾತ್ರವಿರಲಿ ಎಲ್ಲದಕ್ಕೂ ಫಿಟ್ ಆಗುವ ದರ್ಶನ್ ಕನ್ನಡದ ಅತ್ಯಂತ ಜನಪ್ರಿಯ ನಾಯಕ ಎನಿಸಿಕೊಂಡಿದ್ದಾರೆ.
ಜೈ ಭಜರಂಗಬಲಿ
`ಈ ಬಾರಿ ಗೆಲುವು ಖಚಿತ' ಎಂದು ಪಣ ತೊಟ್ಟಿರುವ ನಿರ್ದೇಶಕ ರವಿವರ್ಮ ತಮ್ಮ ಹೊಸ ಚಿತ್ರವನ್ನು ಶುರು ಮಾಡಿ ಆಗಲೇ ಡಬ್ಬಿಂಗ್ ಹಂತಕ್ಕೆ ತಂದಿದ್ದಾರೆ. ಹರಿಕೃಷ್ಣ ನಿರ್ಮಿಸುತ್ತಿರುವ ಈ ಚಿತ್ರಕ್ಕೆ `ಜೈ ಭಜರಂಗಬಲಿ' ಎಂದು ಹೆಸರಿಡಲಾಗಿದೆ. ಅಜೇಯ ರಾವ್ ಸಿಂಧು ಲೋಕನಾಥ್ ಜೋಡಿಯ ಈ ಚಿತ್ರಕ್ಕಾಗಿ ರವಿವರ್ಮ ವಿಶೇಷವಾದ ಚಿತ್ರಕಥೆ ಮಾಡಿದ್ದಾರಂತೆ. ಪ್ರೇಕ್ಷಕರು ಸಲೀಸಾಗಿ ಏನನ್ನು ಊಹಿಸುವಂತಿಲ್ಲ, ಅಷ್ಟೊಂದು ಸಸ್ಪೆನ್ಸ್ ಇಟ್ಟಿದ್ದಾರಂತೆ. ಮೊದಲ ಬಾರಿಗೆ ಆ್ಯಕ್ಷನ್ ಹೀರೋ ಆಗಿ ಲವರ್ ಬಾಯ್ ಅಜೇಯ್ ರಾವ್ ನಟಿಸುತ್ತಿರುವುದು ವಿಶೇಷ. ಅಜೇಯ್ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಚಾಂಪಿಯನ್. ಹಾಗಾಗಿ ಅವರ ಈ ವಿದ್ಯೆಯನ್ನು ರವಿ ಚೆನ್ನಾಗಿಯೇ ಬಳಸಿಕೊಂಡಿದ್ದಾರಂತೆ. ಸಿಕ್ಕಾಪಟ್ಟೆ ಕ್ಯಾರೆಕ್ಟರ್ ಆರ್ಟಿಸ್ಟ್ ಗಳು ಈ `ಜೈ ಭಜರಂಗಬಲಿ' ಚಿತ್ರದಲ್ಲಿರೋದು ಮತ್ತೊಂದು ವಿಶೇಷ. ಅನಂತ್ ನಾಗ್ ಅವರಿಗೆ ಆಯುರ್ವೇದ ಪಂಡಿತನ ಪಾತ್ರ. ತುಂಬಾ ಇಷ್ಟಪಟ್ಟು ನಟಿಸಿದ್ದಾರಂತೆ. ಈ ಚಿತ್ರದ ಐದು ಹಾಡುಗಳನ್ನು ವಿದೇಶದಲ್ಲೇ ಚಿತ್ರೀಕರಣ ಮಾಡುವ ಐಡಿಯಾ ರವಿವರ್ಮ ಮತ್ತು ಹರಿಕೃಷ್ಣರದು.