ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಪರಭಾಷೆ ತಾರೆಯರಿಗೆ ಮಣೆ ಹಾಕುತ್ತಲೇ ಬಂದಿದ್ದಾರೆ. ಕಲ್ಪನಾ, ಜಯಂತಿ, ಆರತಿ, ಭಾರತಿ, ಜಯಮಾಲಾ, ಮಂಜುಳಾ ಈ ತಾರೆಯರು ಇಲ್ಲದೇ ಹೋಗಿದ್ದಿದ್ದರೆ ಇನ್ನಷ್ಟು ಆಮದು ತಾರೆಯರು ಇಲ್ಲಿ ಮನೆ ಮಾಡಿಬಿಡುತ್ತಿದ್ದರೇನೋ. ಆದರೆ ಕಾಲ ಬದಲಾದಂತೆ ಕನ್ನಡದ ತಾರೆಯರು ಪರಭಾಷಾ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡುತ್ತಾ ಬಂದರು. ಅಲ್ಲಿ ಇಲ್ಲಿ ಎಲ್ಲ ಕಡೆ ಸಲ್ಲುವ ತಾರೆಯರಾದರು. ಇಂದಿಗೂ ಅದೇ ಪರಂಪರೆ ಜಾರಿಯಲ್ಲಿದೆ. ನಟಿ ಸೌಂದರ್ಯಾ ಮೊದಲು ಬಣ್ಣ ಹಚ್ಚಿದ್ದು ಕನ್ನಡ ಚಿತ್ರಕ್ಕಾದರೂ ಮಿಂಚಿದ್ದು ತೆಲುಗು ಚಿತ್ರರಂಗದಲ್ಲಿ.
ಕನ್ನಡದ ಪ್ರತಿಭೆಗಳು ಇಲ್ಲಿ ಅವಕಾಶವಿಲ್ಲದಿದ್ದಾಗ ಪರಭಾಷೆಗೆ ಹೋಗಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದರು. ನಿಧಿ ಸುಬ್ಬಯ್ಯ, ಡೈಸಿ ಬೋಪಣ್ಣ, ಭಾವನಾ, ಸುಮನ್ ರಂಗನಾಥ್ ಇವರೆಲ್ಲರೂ ಕನ್ನಡದವರಾದರೂ ಅವಕಾಶ ಗಿಟ್ಟಿಸಿದ್ದು ಬಾಲಿವುಡ್ ನಲ್ಲಿ. ಆದರೀಗ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿರುವುದು, ಇಲ್ಲಿಯೂ ಒಳ್ಳೆ ಚಿತ್ರಗಳಲ್ಲಿ ನಟಿಸುತ್ತಿರೋದು ಅವರಲ್ಲಿ ಹೆಚ್ಚು ಕಾನ್ಛಿಡೆನ್ಸ್ ತುಂಬಿದಂತಿದೆ.
ಮೇಘನಾ ರಾಜ್ ಈಗ ಸುದ್ದಿ ಮಾಡುತ್ತಿರುವ ಕನ್ನಡದ ಪ್ರತಿಭೆ. ಪರಭಾಷೆಯಲ್ಲಿ ಮಿಂಚಿ ಕನ್ನಡಕ್ಕೆ ಹಿಂದಿರುಗಿರುವ ಈ ನಟಿ `ಪುಂಡ' ಚಿತ್ರದಲ್ಲಿ ನಟಿಸಿದ ನಂತರ ಈಗ `ರಾಜ ಹುಲಿ' ಚಿತ್ರದಲ್ಲಿ ಯಶ್ ಗೆ ಜೋಡಿಯಾಗಿದ್ದಾಳೆ. ಕೆ. ಮಂಜು ನಿರ್ಮಾಣದ ಈ ಚಿತ್ರವನ್ನು ಗುರು ದೇಶ್ ಪಾಂಡೆ ನಿರ್ದೇಶಿಸಿದ್ದಾರೆ. ಇಷ್ಟು ದಿನ ಮಲೆಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಾ ಬಿಜಿಯಾಗಿದ್ದ ಮೇಘನಾ ರಾಜ್ ಕನ್ನಡದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆಂದು ಸುದ್ದಿ ಬಂದಾಗ.... ಕನ್ನಡಕ್ಕೆ ಮರಳಿ ಬಂದಳೇ? ಕನ್ನಡದಲ್ಲೇ ಏನಾದರೂ ಹೆಸರು ಮಾಡೋಣ ಎನ್ನುವ ಆಸೆಯೇ? ಇವೆಲ್ಲದಕ್ಕೂ ಮೇಘನಾಳಿಂದಲೇ ಉತ್ತರ ಸಿಗಬೇಕಲ್ವ..... ಹಾಗಾಗಿ ಅವಳನ್ನೇ ಮಾತನಾಡಿಸಿದಾಗ ಬಂದಂಥ ಮಾತುಗಳಿವು:
ಮಲೆಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಬಿಜಿಯಾಗಿರೊ ನೀನು ಇದ್ದಕ್ಕಿದ್ದಂತೆ ಕನ್ನಡದಲ್ಲಿ ನಟಿಸುತ್ತಿರುವುದಕ್ಕೆ ಕಾರಣ?
ನಾನು ಕನ್ನಡದ ಹುಡುಗಿ. ಸುಂದರ್ ರಾಜ್ ಪ್ರಮೀಳಾ ಅವರ ಮಗಳು. ಈ ಇಂಡಸ್ಟ್ರಿಯನ್ನು ನೋಡುತ್ತಾ ಬೆಳೆದವಳು. ಆದರೆ ನನಗೆ ಮೊದಲ ಅವಕಾಶ ಸಿಕ್ಕಿದ್ದು ತಮಿಳಿನಲ್ಲಿ. ಆನಂತರ ಮಲೆಯಾಳಂನಲ್ಲಿ. ಹಾಗಾಗಿ ಅಲ್ಲಿಯೇ ಬಿಜಿಯಾದೆ.
ಕನ್ನಡದಲ್ಲಿ ಅವಕಾಶಗಳು ಸಿಗಲಿಲ್ಲ ಅಂತ ಬೇಸರವೇ?
ಯಾರು ಹೇಳಿದ್ದು ಅವಕಾಶ ಸಿಗಲಿಲ್ಲ ಅಂತ? ಬೇಕಾದಷ್ಟು ಆಫರ್ಸ್ ಬಂದಿತ್ತು. ಆ ಪಾತ್ರಗಳನ್ನು ನಾನಲ್ಲದೇ ಬೇರೆ ಯಾರು ಬೇಕಾದರೂ ನಟಿಸಬಹುದಿತ್ತು. ನನಗಂಥ ಪಾತ್ರಗಳು ಇಷ್ಟವಿಲ್ಲ. ಒಳ್ಳೆ ಅವಕಾಶಗಳು ಬಂದರೆ ಮಾತ್ರ ಕನ್ನಡದಲ್ಲಿ ನಟಿಸಬೇಕೆಂಬ ಹಟ ಇತ್ತು. ಮಲೆಯಾಳಂನಲ್ಲಿ ದೊಡ್ಡ ದೊಡ್ಡ ನಿರ್ದೇಶಕರ ಜೊತೆ ನಾಯಕರ ಜೊತೆ ನಟಿಸಿದ್ದರೂ ನನಗೆ ಪ್ರಾಮುಖ್ಯತೆ ಕೊಡುವಂಥ ಪಾತ್ರವಿರುತ್ತಿತ್ತು.
ಈಗ `ರಾಜ ಹುಲಿ' ಚಿತ್ರದಲ್ಲಿ ಅಂತಹ ಪಾತ್ರವಿದೆಯಾ?
ಹೌದು, ಖಂಡಿತವಾಗಿಯೂ ಇದೆ. ಇಲ್ಲದೇ ಹೋಗಿದ್ದಿದ್ರೆ ನಾನು ಒಪ್ಪಿಕೊಳ್ತಿರಲಿಲ್ಲ. ನಿರ್ಮಾಪಕ ಮಂಜು ನನಗೆ `ಸುಂದರ್ ಪಾಂಡ್ಯನ್' ತಮಿಳು ಚಿತ್ರದ ಸಿ.ಡಿ. ತಂದುಕೊಟ್ಟು ನೋಡಿ ಅಭಿಪ್ರಾಯ ತಿಳಿಸು ಅಂದಿದ್ರು. ಆ ಚಿತ್ರ ನೋಡುತ್ತಿರುವಾಗ ನಾಯಕಿ ಪಾತ್ರ ನನಗೆ ತುಂಬಾ ಹಿಡಿಸಿತು. ನಾನು ಮಾಡುವುದಾದರೆ ಇಂಥ ಪಾತ್ರ ಮಾಡಬೇಕು ಅಂತ ಮನಸ್ಸಿನಲ್ಲೇ ಅಂದುಕೊಳ್ತಿದ್ದೆ. ಮಂಜು ಬಂದು ಸಿನಿಮಾ ಬಗ್ಗೆ ಅಭಿಪ್ರಾಯ ಕೇಳಿದಾಗ, `ಸರ್, ಒಳ್ಳೆ ಚಿತ್ರ. ಅದರಲ್ಲೂ ನಾಯಕಿ ಪ್ರಧಾನವಿದೆಯಲ್ಲ ತುಂಬಾನೆ ಇಷ್ಟಾಯ್ತು ಅಂದೆ.' ಆಗ ಮಂಜು ಸರ್ ಅದನ್ನು ನೀನೇ ಮಾಡಬೇಕು ಅಂದಾಗ ನಿಜಕ್ಕೂ ಸಂತೋಷಾಯ್ತು.