``ರಿಯಾಲಿಟಿ ಸಿನಿಮಾ ಅಂದ್ರೆ ಸಮಾಜದಲ್ಲಿ ನಡೆಯೋದನ್ನೇ ತೋರಿಸಬೇಕಾಗುತ್ತೆ!''
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ `ಗಂಟುಮೂಟೆ' ಚಿತ್ರದ ನಿರ್ದೇಶಕಿ ರೂಪಾ ರಾವ್ ಗಮನಸೆಳೆದ ಯುವ ಪ್ರತಿಭೆ. ಮಾಮೂಲಿ ಪ್ರೇಮಕಥೆಗಳಿಗಿಂತ ವಿಭಿನ್ನವಾಗಿ, ನೈಜವಾಗಿ, ಬೋಲ್ಡಾಗಿ ಚಿತ್ರ ತೋರಿಸಿದ ರೂಪಾ ರಾವ್ ದೊಡ್ಡ ದೊಡ್ಡ ಚಿತ್ರಗಳೆದುರು ಗೆಲುವು ಸಾಧಿಸಿದ ಛಲಗಾತಿ. ಬಿಡುಗಡೆಗೆ ಮುನ್ನವೇ ಈ ಚಿತ್ರ ಉತ್ತಮ ರೆಸ್ಪಾನ್ಸ್ ಪಡೆದುಕೊಂಡು, ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆಯೂ ಉಂಟು.
ರೂಪಾ ರಾವ್ ರವರಿಗೆ ಮೊದಲಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ. ಸಿನಿಮಾ ನಿರ್ದೇಶಕಿಯಾಗಿ ಒಳ್ಳೆಯ ಸಿನಿಮಾ ಕೊಡುವಾಸೆ. ಅದರ ಸಲುವಾಗಿ ಇನ್ಛೋಸಿಸ್‌ನಲ್ಲಿ ಒಳ್ಳೆಯ ಹುದ್ದೆ ಬಿಟ್ಟು ಬಂದರು. ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿದ್ದ ರೂಪಾ ಇಂಡಿಯಾಗೆ ಬಂದಾಗ ಸಿನಿಮಾರಂಗದಲ್ಲಿ ಯಾರ ಪರಿಚಯವು ಇರಲಿಲ್ಲ. ಆಗಷ್ಟೇ ದ್ವಾರಕೀಶ್ ಬ್ಯಾನರ್ ನಲ್ಲಿ ಸಹಾಯಕ ನಿರ್ದೇಶಕರಿಗಾಗಿ ಕಾಲ್ಛರ್ ಮಾಡಲಾಗಿತ್ತು.
ಅದು ರೂಪಾ ಗಮನಕ್ಕೆ ಬಿದ್ದಾಗ ಭೇಟಿಯಾಗಿ ಎಲ್ಲವನ್ನೂ ಹೇಳಿಕೊಂಡಾಗ ಈಕೆಯ ಅನುಭವ ಕಂಡು ಅಸೋಸಿಯೇಟ್‌ಡೈರೆಕ್ಟರ್ ಆಗಿ ನೇಮಿಸಿದರು, ಸುದೀಪ್ ನಟನೆಯ `ವಿಷ್ಣುವರ್ಧನ' ಸಿನಿಮಾ ಅದಾಗಿತ್ತು.
ಮೊದಲು ಚಿತ್ರದಲ್ಲೇ ಅನುಭವೀ ನಟರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು ಎಂದು ರೂಪಾ ನೆನಪು ಮಾಡಿಕೊಳ್ಳುತ್ತಾರೆ. `ಗಂಟುಮೂಟೆ' ಚಿತ್ರ ಬಿಡುಗಡೆಯಾದಾಗ ಸುದೀಪ್ ಟ್ವೀಟ್ ಮಾಡಿ ಶುಭ ಕೋರಿದ್ದರು.
ನೀವು ಈ ಸಿನಿಮಾರಂಗಕ್ಕೆ ಬಂದದ್ದು ಹೇಗೆ?
``ನನಗೆ ಈ ಸಿನಿಮಾ ಹುಚ್ಚು ಮೊದಲಿನಿಂದಲೂ ಇತ್ತು. ನನ್ನ ತಂದೆಗೆ ಡಾ. ರಾಜ್ ಕುಮಾರ್ ಅಂದ್ರೆ ತುಂಬಾ ಇಷ್ಟ. ನಾನಂತೂ ವಾರಕ್ಕೆ ಮೂರು ಸಿನಿಮಾ ನೋಡ್ತಿದ್ದೆ. ಸಿನಿಮಾ ಪೋಸ್ಟರ್, ಜಾಹೀರಾತು ನೋಡೋ ಕ್ರೇಜ್ ಜಾಸ್ತಿ. ಅವನ್ನೆಲ್ಲ ಗಮನಹರಿಸಿ ಓದುತ್ತಿದೆ. ನನ್ನ ತಂದೆ ಸಿನಿಮಾ ಬಗ್ಗೆ ಉಕ್ತಲೇಖನ ಕೊಡೋರು.
``ಬಾಲ್ಯದಿಂದಲೂ ಕಥೆ ಬರೆದು ಅದನ್ನು ಸಿನಿಮಾ ಮಾಡಬೇಕೆಂದು ಕನಸು ಕಾಣ್ತಾ ಇದ್ದೆ ವಿದೇಶದಲ್ಲಿ ಒಳ್ಳೆಯ ಹುದ್ದೆಯಿದ್ದರೂ ಎಲ್ಲವನ್ನು ಬಿಟ್ಟು ನನ್ನ ಕನಸನ್ನು ನನಸಾಗಿಸುವ ಸಲುವಾಗಿ ಭಾರತಕ್ಕೆ ಬಂದೆ. ಅಸೋಸಿಯೇಟಾಗಿ ಕೆಲಸ ಮಾಡಿದ ನಂತರ ನಾನೇ ಬರೆದ ಕಥೆಯನ್ನು ಸಿನಿಮಾ ಮಾಡಲು ಹೊರಟೆ. ಅದೇ `ಗಂಟುಮೂಟೆ' ಚಿತ್ರ.
ನಿಮ್ಮ ಲೈಫ್ ಸ್ಟೋರಿ ಅಂತೆ..... ಹೌದಾ?
ಒಂದೆರಡು ಘಟನೆಗಳು ಕಥೆಗೆ ಸ್ಛೂರ್ತಿ ಕೊಟ್ಟಿರಬಹುದು. ನನ್ನೊಬ್ಬಳದೇ ಅಲ್ಲ. ಸಾಮಾನ್ಯವಾಗಿ ಹೈಸ್ಕೂಲಲ್ಲಿ ಓದು ಕೆಲವರಿಗಾದರೂ ಪ್ರೀತಿ ಪ್ರೇಮ ಉಂಟಾಗಿರುತ್ತೆ. ಆದರೆ ನಾನು ಈ ಚಿತ್ರದ ಮುಖೇನ ಹೇಳಲು ಹೊರಟಿದ್ದು, ನೈಜ ಘಟನೆಗಳನ್ನು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕಾಣುವಂತಹ ಲವ್ ಸ್ಟೋರಿ ಇದಾಗಿರಲಿಲ್ಲ. ಒಬ್ಬ ಹೆಣ್ಣು ಹುಡುಗಿಯ ದೃಷ್ಟಿಯಿಂದ ಅವಳ ಬಯಕೆ, ಆಸೆ, ಪ್ರೀತಿ ಹುಟ್ಟು ಬಗೆ, ಅವಳ ಭಾವನೆಗಳು....... ಇವೆಲ್ಲವನ್ನು ತೋರಿಸಬೇಕೆಂದು ಈ ಚಿತ್ರ ಮಾಡಿದೆ.
ಸಿನಿಮಾ ನಿರ್ದೇಶನದ ಜೊತೆ ನಿರ್ಮಾಣ ರಿಸ್ಕ್ ಅನಿಸಲಿಲ್ವಾ?
ಸಿನಿಮಾ ಮಾಡಿ ಮುಗಿಸಿದ ಮೇಲೆ ಕಷ್ಟ ಅನಿಸಿತು. ಏಕೆಂದರೆ ಬಿಡುಗಡೆಗೆ ಮೊದಲು ಸ್ಪಲ್ಪ ಕಷ್ಟ ಪಡಲೇಬೇಕು. ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿದ್ದರಿಂದ ಸೋಶಿಯಲ್ ಮೀಡಿಯಾ ಮೂಲಕ ಪ್ರಚಾರದ ಜೊತೆ ಮೀಡಿಯಾ ಪ್ರೋತ್ಸಾಹ ಸಿಕ್ಕಿತು. ಇತ್ತೀಚೆಗೆ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ನನಗೆ ವರ್ಷದ ಯುವ ನಿರ್ದೇಶಕಿ ಎಂದು ಪ್ರಶಸ್ತಿ ಕೊಟ್ಟಾಗ ಆಶೀರ್ವಾದ ಪಡೆದಂತಾಯಿತು, ಉತ್ಸಾಹ ಹೆಚ್ಚಿಸಿದೆ. ಹೊಸ ಸಿನಿಮಾ ತಯಾರಿಕೆ ನಡೆದಿದೆ.