ಗರ್ಲ್ ಯೂ ಆರ್‌ ಮೈ ಛಮ್ಮಕ್‌ ಛಲ್ಲೋ ….’ ಹಾಡಿನಲ್ಲಿ ಕರೀನಾ ಕಪೂರ್‌ ಅಚ್ಚಗೆಂಪು ಸೀರೆಯಲ್ಲಿ ತನ್ನ ಸೆಕ್ಸೀ ದೇಹದ ಉಬ್ಬು ತಗ್ಗುಗಳನ್ನು ಕುಣಿಸುವಾಗ, ಯಾವ ಹರೆಯದ ಹುಡುಗಿಗೆ ತಾನೇ ಅವಳಂಥ ಪರ್ಫೆಕ್ಟ್ ಫಿಗರ್‌ ಹೊಂದಲು ಇಷ್ಟವಾಗದು? ಇದೇ ತರಹ `ಮುನ್ನಿ ಬದ್‌ ನಾಮ್ ಹುಯಿ….’ ಐಟಂ ಸಾಂಗ್‌ ನಲ್ಲಿ ಮಲೈಕಾ ಅರೋರಾ ಖಾನ್‌ ತನ್ನ ಸಿಂಹಕಟಿಯನ್ನು ಬಳುಕಿಸುತ್ತಾ ಕುಣಿಯತ್ತಿದ್ದರೆ, ಅವಳಂಥ 36-24-36 ಫಿಗರ್‌ ಪಡೆಯಲು ಯಾವ ತರುಣಿ ಬಯಸಲಾರಳು? ಆದರೆ ಇಂಥ ಅದ್ಭುತ ಮೈಕಟ್ಟನ್ನು ಹೊಂದಲು, ಅದನ್ನು ಮೇಂಟೇನ್‌ ಮಾಡಲು ಈ ಸಿನಿ ತಾರೆಯರು ಎಷ್ಟು ಕಷ್ಟಪಡುತ್ತಾರೆ ಎಂಬುದು ಪ್ರೇಕ್ಷಕರಿಗೆ ಸುಲಭವಾಗಿ ಗೊತ್ತಾಗದು.

ಒಂದು ಸಿನಿಮಾದ ನಾಯಕಿ ಎಂದಾಕ್ಷಣ, ಅವಳ ಆಯ್ಕೆಗೆ ಮೂಲಕಾರಣವೇ ಅವಳ ಪರ್ಫೆಕ್ಟ್ ಫಿಗರ್‌ ಆಗಿರುತ್ತದೆ. ಈ ಗ್ಲಾಮರಸ್ ಪ್ರಪಂಚದಲ್ಲಿ ನಟ ಅಥವಾ ನಟಿ ಯಾರೇ ಇರಲಿ, ಅವರ ಪ್ರಾಥಮಿಕ ಅವಶ್ಯಕತೆ ಎಂದರೆ ತಮ್ಮನ್ನು ತಾವು ಪರ್ಫೆಕ್ಟ್ ಆಗಿ ಮೇಂಟೇನ್‌ ಮಾಡಿಕೊಂಡಿರಬೇಕು ಎಂಬುದು. ಇಲ್ಲಿ ಯಾವುದು ಬೆಸ್ಟ್ ಆಗಿ ಪ್ರದರ್ಶಿತಗೊಳ್ಳುತ್ತದೋ ಅದು ಮಾತ್ರ ಚೆನ್ನಾಗಿ ಸೇಲ್ ಆಗುತ್ತದೆ. ಹೀಗಾಗಿ ತಮ್ಮ ಬಿಡುವಿಲ್ಲದ ಇಡೀ ದಿನದ ಕಾರ್ಯಕಲಾಪಗಳ ಮಧ್ಯೆ ತಮ್ಮನ್ನು ಸದಾ ಫಿಟ್‌ ಆಗಿರಿಸಿಕೊಳ್ಳಲು, ಈ ನಾಯಕಿಯರು ಪಡುವ ಕಷ್ಟಗಳು ಅಷ್ಟಿಷ್ಟಲ್ಲ.

ಇಷ್ಟು ಮಾತ್ರವಲ್ಲ, ಈ ನಾಯಕಿಯರಿಗೆ ತಮ್ಮ ಪಾತ್ರದ ಅನುಸಾರ, ಒಮ್ಮೊಮ್ಮೆ ತಮ್ಮ ದೇಹವನ್ನು ಬಹಳ ಕುಗ್ಗಿಸಬೇಕಾಗುತ್ತದೆ ಅಥವಾ ಅಪರೂಪಕ್ಕೆ ಹಿಗ್ಗಿಸಬೇಕಾಗುತ್ತದೆ. ಇವೆರಡೂ ಸುಲಭ ಕೆಲಸಗಳಲ್ಲ ಎಂಬುದು ತಿಳಿದ ವಿಚಾರ.

ಈ ನಟಿಯರು ಸಾಮಾನ್ಯವಾಗಿ ಸಂದರ್ಶನಗಳಲ್ಲಿ ತಮ್ಮ ಈ ಬಾಡಿ ಫಿಟ್ನೆಸ್‌ ನ ರಹಸ್ಯವನ್ನು ಪ್ರಶಂಸಕರೊಂದಿಗೆ ಹಂಚಿಕೊಳ್ಳ ಬಯಸುತ್ತಾರೆ. ಅವನ್ನು ಅನುಸರಿಸುವುದು ಅಂಥ ಕಷ್ಟಕರವೇನಲ್ಲ. ನಟಿ ಮಲೈಕಾ ಅರೋರಾ ತನ್ನ ಫಿಟ್ನೆಸ್‌ ಹಾಗೂ ಡಯೆಟ್ ಪ್ಲ್ಯಾನ್‌ ಕುರಿತು ಹೀಗೆ ಹೇಳುತ್ತಾಳೆ, “ನನ್ನ ಫಿಗರ್‌ ಮೇಂಟೆನೆನ್ಸ್ ಗಾಗಿ ನಾನೆಂದೂ ಉಪವಾಸ ಮಾಡಲಾರೆ. ಪೌಷ್ಟಿಕವಾದ ಎಲ್ಲಾ ಆಹಾರ ಸೇವಿಸಲು ಇಷ್ಟಪಡುತ್ತೇನೆ.

“ಆದರೆ ಒಂದು ಲಿಮಿಟ್‌ ನಲ್ಲಿ ತಿನ್ನುತ್ತೇನೆ ಎಂಬುದು ಮುಖ್ಯ. ನಾನು ಹೆಚ್ಚಾಗಿ ಹುರಿದ ಕರಿದ ಪದಾರ್ಥಗಳನ್ನು ತಿನ್ನುವುದೇ ಇಲ್ಲ. ವಾರದಲ್ಲಿ 6 ದಿನ ನಾನು ಸಮತೋಲಿತ ಆಹಾರವನ್ನೇ ಸೇವಿಸುತ್ತೇನೆ, ಆದರೆ ಭಾನುವಾರ ಮಾತ್ರ ಮನ ಬಯಸಿದ್ದನ್ನು ಹೊಟ್ಟೆ ತುಂಬಾ ತಿನ್ನುತ್ತೇನೆ.

“ಅದೇ ತರಹ ನಾನು ಆಗಾಗ ಧಾರಾಳವಾಗಿ ನೀರು ಕುಡಿಯುತ್ತಿರುತ್ತೇನೆ. ನೀವು ಎಷ್ಟೇ ಪೌಷ್ಟಿಕ ಆಹಾರ ಸೇವಿಸಿದರೂ, ಎಲ್ಲಿಯವರೆಗೂ ನೀವು ಧಾರಾಳವಾಗಿ ನೀರು ಕುಡಿಯುವುದಿಲ್ಲವೋ, ನಿಮ್ಮ ಪೌಷ್ಟಿಕ ಆಹಾರ ಅಪೂರ್ಣವೆಂದೇ ಅರ್ಥ.”

ಸಿಂಹಕಟಿಯ ರಹಸ್ಯ

“ಪ್ರತಿದಿನ ಬೆಳಗ್ಗೆ ನಾನು 1 ಗ್ಲಾಸ್‌ ಬಿಸಿ ನೀರಿಗೆ ನಿಂಬೆರಸ, ಜೇನು ಬೆರೆಸಿ ಕುಡಿಯುತ್ತೇನೆ. ಬ್ರೇಕ್‌ ಫಾಸ್ಟ್ ಗಾಗಿ 1 ಸಣ್ಣ ಬಟ್ಟಲು ಹಣ್ಣಿನ ಹೋಳು (ಆಯಾ ಕಾಲದಲ್ಲಿ ಲಭ್ಯವಿರುವ) ಹಾಗೂ ಜೊತೆಯಲ್ಲಿ ಇಡ್ಲಿ, ಅವಲಕ್ಕಿ, ಉಪ್ಪಿಟ್ಟು ಅಥವಾ ಬೇಯಿಸಿದ ಕಾಳಿನ ನುಚ್ಚು ಇತ್ಯಾದಿ ತೆಗೆದುಕೊಳ್ತೇನೆ.

“ಮಧ್ಯಾಹ್ನ 12 ಗಂಟೆಗೆ 1 ನೆಲ್ಲಿಕಾಯಿ ಜೊತೆ ವೆಜಿಟೆಬ್‌ ಜೂಸ್‌, ಬ್ರೌನ್‌ ಟೋಸ್ಟ್ ಜೊತೆ 1 ಮೊಟ್ಟೆಯ ಬಿಳಿ ಭಾಗದ ಆಮ್ಲೆಟ್ ಸೇವಿಸುವೆ. 2 ಗಂಟೆಯ ಊಟಕ್ಕೆ 1 ಸಣ್ಣ ಬಟ್ಟಲು ಬ್ರೌನ್‌ ಅಥವಾ ಗೋವಾ ರೈಸ್‌, 2-3 ಬಗೆ ತರಕಾರಿ ಪಲ್ಯ, ಚಿಕನ್‌ ಅಥವಾ ಫಿಶ್‌ ಜೊತೆಗೆ ಸಲಾಡ್‌ ಸೇವಿಸುತ್ತೇನೆ.

“ರಾತ್ರಿ ಊಟಕ್ಕೆ ಮೊದಲು ಸೂಪ್‌ ಕುಡಿಯುತ್ತೇನೆ ಅಥವಾ ಸಲಾಡ್‌ ಬಳಸುತ್ತೇನೆ. ಇದಾದ ನಂತರ ಲಘು ಭೋಜನ. ಮುಖ್ಯವಾಗಿ ರಾತ್ರಿ ಹೊತ್ತು ಬೇಳೆ ತಿನ್ನುವುದಿಲ್ಲ. ಅಕಸ್ಮಾತ್‌ ಮಧ್ಯರಾತ್ರಿ ಏನಾದರೂ ಹಸಿವಾದರೆ 1 ಮೂಸಂಬಿ, ಕಿತ್ತಳೆಹಣ್ಣು, ಕೆಲವು ಬಾದಾಮಿ ಅಥವಾ ಅಂಜೂರ ಇತ್ಯಾದಿ ತೆಗೆದುಕೊಳ್ತೇನೆ.

“ಸದಾ ಫಿಟ್‌ ಆಗಿರಲು ನಾನು ವಾರದಲ್ಲಿ ಕನಿಷ್ಠ 3-4 ದಿನ ಜಿಮ್ ನಲ್ಲಿ 2 ತಾಸು ವರ್ಕ್‌ ಔಟ್‌ ಮಾಡ್ತೀನಿ. ಇದರಲ್ಲಿ ವಿಭಿನ್ನ ತರಹದ ವ್ಯಾಯಾಮಗಳಿದ್ದು ದೇಹದ ಪ್ರತಿ ಅಂಗಕ್ಕೂ ಎಕ್ಸರ್‌ ಸೈಜ್‌ ಆಗುವಂತೆ ನೋಡಿಕೊಳ್ತೇನೆ.”

ಬಾಲಿವುಡ್‌ ನ ದಿ ಬೆ,ಟ್ ಫಿಟ್‌ ನಟಿ ಎಂದು ಕರೀನಾ ಕಪೂರ್‌ ಳನ್ನು ಗುರುತಿಸಲಾಗುತ್ತದೆ. ಆಕೆ ಬಳುಕುವ ಸೊಂಟ ಮಾತ್ರವಲ್ಲದೆ, ಸುಪುಷ್ಟ ಅಂಗಾಂಗಳ ಒಡತಿ ಎನಿಸಿದ್ದಾಳೆ. ಕರೀನಾಳ ಈ ಪರ್ಫೆಕ್ಟ್ ಝೀರೋ ಫಿಗರ್‌, ಆಕೆಯ ದೈನಂದಿನ ವ್ಯಾಯಾಮ ಹಾಗೂ ವೆಯ್ಟ್ ಟ್ರೇನಿಂಗ್‌ ನ ಪರಿಣಾಮವಾಗಿದೆ. ಈ ಕುರಿತಾಗಿ ಕರೀನಾ, “ನಾನು ಜಂಕ್‌ ಫುಡ್ಸ್ ಹಾಗೂ ಕೋಲ್ಡ್ ಡ್ರಿಂಕ್ಸ್ ನಿಂದ ಸದಾ ದೂರ ಇರುತ್ತೇನೆ,” ಎನ್ನುತ್ತಾಳೆ.

ತನ್ನ ಪರ್ಫೆಕ್ಟ್ ಫಿಗರ್‌ ನ ಎಲ್ಲಾ ಶ್ರೇಯಸ್ಸನ್ನೂ ಕರೀನಾ ಅವಳ ಟ್ರೇನರ್‌ ರುಚಿತಾ ದಿವಾಕರ್‌ ಗೆ ನೀಡುತ್ತಾಳೆ. ಆಕೆ `ವಿಮೆನ್‌ಅಂಡ್‌ ದಿ ವೆಯ್ಟ್ ಲಾಸ್‌ ತಮಾಷ’ ಕೃತಿಯ ಲೇಖಕಿ ಹಾಗೂ ಫಿಟ್ನೆಸ್‌ ಗುರು ಸಹ. ಆಕೆ ಕರೀನಾಳಿಗೆ ಮಾತ್ರವಲ್ಲದೆ ಬಾಲಿವುಡ್‌ ನ ಇತರ ಹಲವಾರು ಪ್ರಸಿದ್ಧ ತಾರೆಯರ ಫಿಟ್ನೆಸ್‌ ಟ್ರೇನರ್‌ ಕೂಡ ಹೌದು. ಕರೀನಾ ಪ್ರಕಾರ ರುಚಿತಾ ಈಕೆಯ ಬಾಡಿ ಮಾತ್ರವಲ್ಲದೆ ಮೈಂಡ್‌ ನ್ನೂ ಬದಲಾಯಿಸಿದ್ದಾಳಂತೆ!

ಫಿಟ್ನೆಸ್‌ ಕುರಿತು ನಿರ್ಲಕ್ಷ್ಯ ಸಲ್ಲದು `ಫ್ಯಾಷನ್‌’ ಚಿತ್ರದಿಂದ ಬಾಲಿವುಡ್‌ ನಲ್ಲಿ ಖ್ಯಾತಳಾದ ಕಂಗನಾ ರಾಣಾವತ್‌ ತನ್ನ ಫಿಟ್ನೆಸ್‌ಕುರಿತಾಗಿ, “ಅಸಲಿಗೆ ಆಂತರಿಕವಾಗಿ ಫಿಟ್‌ ಆಗುವವರೆಗೂ, ನೀವು ಎಷ್ಟೇ ಪ್ರಯಾಸಪಟ್ಟರೂ ಬಾಹ್ಯರೂಪದಿಂದ ನಿಮ್ಮನ್ನು ನೀವು ಪರಿಪೂರ್ಣ ರೀತಿಯಲ್ಲಿ ಫಿಟ್‌ ಆಗಿ ತೋರಿಸಿಕೊಳ್ಳಲಾಗದು.

“ನಾನು ಶೂಟಿಂಗ್‌ ನಲ್ಲಿ ಎಷ್ಟೇ ಬಿಝಿ ಇದ್ದರೂ, ನನ್ನ ಫಿಟ್ನೆಸ್‌ ಕುರಿತಾಗಿ ನಾನೆಂದೂ ನಿರ್ಲಕ್ಷ್ಯ ವಹಿಸುವುದಿಲ್ಲ. ನಾನು ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ತಪ್ಪಿಸುವುದಿಲ್ಲ. ನನ್ನ ಬಹಳಷ್ಟು ಸಮಯನ್ನು ನಾನು ಜಿಮ್ ನಲ್ಲೇ ಕಳೆಯುತ್ತೇನೆ. ಜೊತೆಗೆ ನನ್ನ ಡಯೆಟ್‌ ಬಗ್ಗೆ ಸಹ ಅಷ್ಟೇ ಶ್ರದ್ಧೆ ವಹಿಸುತ್ತೇನೆ,” ಎನ್ನುತ್ತಾಳೆ.

ಮಿಸ್‌ ಯೂನಿವರ್ಸ್‌ ಲಾರಾದತ್ತ ಹೇಳುವುದೆಂದರೆ, “ಸದಾ ಫಿಟ್‌ ಆಗಿರಲು ಕೇವಲ ನಿಯಮಿತ ವರ್ಕ್‌ ಔಟ್ಸ್, ಬ್ಯಾಲೆನ್ಸ್ಡ್ ಡಯೆಟ್‌ ಸಾಕಾಗುವುದಿಲ್ಲ. ನಾನು ನನ್ನ ದೇಹವನ್ನು ಸೂಕ್ತ ಆಕಾರದಲ್ಲಿ ಇರಿಸಿಕೊಳ್ಳಲು, ವಾರದಲ್ಲಿ 5 ದಿನ ವರ್ಕ್‌ ಔಟ್ ಮಾಡುತ್ತೇನೆ. ನಾನು ನಾನ್‌ ವೆಜ್‌ ಪ್ರಿಯೆ.

“ಆದರೆ ಅದನ್ನು ಅಪರೂಪಕ್ಕೆ ನೆನಪಿಸಿಕೊಂಡು, ಹೆಚ್ಚುಹೆಚ್ಚಾಗಿ ಹಣ್ಣು, ಹಸಿ ತರಕಾರಿಯ ಸೇವನೆಯ ಕುರಿತು ಮನಸ್ಸನ್ನು ಕೇಂದ್ರೀಕರಿಸುತ್ತೇನೆ. ಜೊತೆಗೆ ಧಾರಾಳವಾಗಿ ನೀರು ಕುಡಿಯುತ್ತೇನೆ.”

ಹಾಟ್‌ ಡಸ್ಕಿ ಬ್ಯೂಟಿ ಬಿಪಾಶಾ ಬಸು ಹೇಳುತ್ತಾಳೆ, “ನಾನು ಯಾವುದೇ ಕೆಲಸಕ್ಕಾಗಿ ಓಡಾಡುವಾಗ ಎಂದೂ ಲಿಫ್ಟ್ ಬಳಸಲು ಹೋಗುವುದಿಲ್ಲ, ನಡೆದೇ 8ನೇ ಮಹಡಿ ತಲುಪುತ್ತೇನೆ. ಫಿಟ್ನೆಸ್‌ ಎಂಬುದು ಅವರವರ ಆಹಾರ ಪದ್ಧತಿಯನ್ನು ಶೇ.50 ಹಾಗೂ ನಿಯಮಿತ ವ್ಯಾಯಾಮ, ಓಡಾಟಗಳ ಶೇ.50ನ್ನು ಆಧರಿಸಿರುತ್ತದೆ ಎಂದು ನಂಬುತ್ತೇನೆ. ನಾನು `ಲವ್ ಯುವರ್‌ ಸೆಲ್ಫ್’ ಎಂಬ ಹೆಸರಿನ ನನ್ನ ಒಂದು ಫಿಟ್ನೆಸ್‌ ಡಿವಿಡಿ ಸಹ ಲಾಂಚ್‌ ಮಾಡಿದ್ದೇನೆ.”

ತನ್ನ ಫಿಟ್ನ್ಸ್‌ ಸೀಕ್ರೆಟ್ಸ್ ನ್ನು ನಮ್ಮ ಓದುಗರೊಂದಿಗ ಹಂಚಿಕೊಳ್ಳಲು ಬಿಪಾಶಾ ಹೇಳುತ್ತಾಳೆ, “ನಾನು ಯಾವುದೇ ವಿಧದ ಆಹಾರವನ್ನೂ ಬೇಡ ಎನ್ನುವುದಿಲ್ಲ. ಯಾವುದು ನನಗೆ ಚೆನ್ನಾಗಿದೆ ಎನಿಸುತ್ತದೋ ಅದನ್ನು ಖಂಡಿತಾ ತಿನ್ನುತ್ತೇನೆ, ಆದರೆ ಅದರ ಕ್ಯಾಲೋರಿ ಕರಗುವಂತೆ ಆ ದಿನವೇ ವರ್ಕ್‌ ಔಟ್‌ ಸಹ ಮಾಡುತ್ತೇನೆ!”

`ಆಟೋ ಶಂಕರ್‌’ ಖ್ಯಾತಿಯ ಶಿಲ್ಪಾ ಶೆಟ್ಟಿ, ತನ್ನ ಪರ್ಫೆಕ್ಟ್ ಬಾಡಿಯ ರಹಸ್ಯವೆಂದರೆ ಹೆಚ್ಚು ಹೊತ್ತು ಜಿಮ್ ನಲ್ಲಿ ಕಳೆಯುವುದು ಎನ್ನುತ್ತಾಳೆ. ದೇಹದಲ್ಲಿನ ಅನಗತ್ಯ ವಿಷಾಣುಗಳನ್ನು ಡಿಟಾಕ್ಸಿಫೈಗೊಳಿಸಲು ಆಕೆ ಹೆಚ್ಚು ಬಿಸಿ ನೀರು ಕುಡಿಯುತ್ತಾಳಂತೆ ಹಾಗೂ ರಾತ್ರಿ ಮಲಗುವ 3 ತಾಸುಗಳಿಗೆ ಮೊದಲು ಏನೂ ತಿನ್ನುವುದಿಲ್ಲವಂತೆ. ಹೆಚ್ಚು ಹೆಚ್ಚು ಕ್ಯಾಲೋರಿ ಜಮೆಗೊಳ್ಳದಿರಲಿ ಎಂದು ಆಕೆ ಚಿಪ್ಸ್, ಬಜ್ಜಿ ಬೋಂಡ, ಸಮೋಸಾ ಇತ್ಯಾದಿ ಸ್ನ್ಯಾಕ್ಸ್ ಗಳ ಸಹವಾಸಕ್ಕೇ ಹೋಗುವುದಿಲ್ಲ. 1 ಕಪ್‌ ಟೀ ಕುಡಿಯುವುದು, ಗ್ಯಾಸ್‌ ಭರಿತ ಸಿಹಿ ಪಾನೀಯ ಸೇವಿಸುವುದಕ್ಕಿಂತಲೂ ಎಷ್ಟೋ ಉತ್ತಮ ಎಂದು ಭಾವಿಸುತ್ತಾಳೆ.

“ನಾನು ಯಾವುದೇ ಬಗೆಯ ಆಹಾರವನ್ನೂ ವಿರೋಧಿಸುವುದಿಲ್ಲ. ನನ್ನ ದೇಹಕ್ಕೆ ಪ್ರತಿದಿನ 2 ಸಾವಿರ ಕ್ಯಾಲೋರಿಗಳ ಅಗತ್ಯವಿದೆ. ನನಗೆ ಇದಕ್ಕಿಂತಲೂ ಹೆಚ್ಚಿನ ಕಾರ್ಬೋಹೈಡ್ರೇಟ್‌ ಗಳ ಅಗತ್ಯವಿಲ್ಲ, ಏಕೆಂದರೆ ನಾನು ಹೆಚ್ಚು ದೈಹಿಕ ಶ್ರಮದ ಕೆಲಸ ಮಾಡುವವಳಲ್ಲ.

“ನಾನು ವಾರದಲ್ಲಿ 4 ದಿನವಾದರೂ ನಾನ್‌ ವೆಜ್‌ ಸೇವಿಸುತ್ತೇನೆ. ನನ್ನ ಬೆಳಗಿನ ಉಪಾಹಾರಕ್ಕೆ ಒಂದು ಸಣ್ಣ ಬಟ್ಟಲು ಬ್ರೋಕನ್‌ ವೀಟ್‌ ಖಿಚಡಿ, 1 ಕಪ್‌ ಟೀ ಇರುತ್ತದೆ. ನಾನು ವಾರದಲ್ಲಿ 4-5 ದಿನ ಜಿಮ್ ಗೆ ಹೋಗಿ ವರ್ಕ್‌ ಔಟ್‌ ಮಾಡ್ತೀನಿ. ಪ್ರತಿ ವರ್ಕ್‌ ಔಟ್‌ ನ ನಂತರ ಪ್ರೋಟೀನ್‌ ಮಿಲ್ಕ್ ಶೇಕ್‌, 2 ಹಸಿ ಖರ್ಜೂರ, 7-8 ಒಣದ್ರಾಕ್ಷಿ ತಿನ್ನುತ್ತೇನೆ.

“ನನ್ನ ಮಧ್ಯಾಹ್ನದ ಊಟದ ಸಮಯ 2-3. ಊಟಕ್ಕೆ ಮುಖ್ಯವಾಗಿ 5 ಬಗೆಯ ಧಾನ್ಯಗಳ ಮಿಶ್ರಹಿಟ್ಟಿನಿಂದ ತಯಾರಿಸಿದ 1 ರೊಟ್ಟಿ, ಅದಕ್ಕೆ ತುಸು ತುಪ್ಪ, 2 ಬಗೆಯ ತರಕಾರಿ ಪಲ್ಯ (ಸದಾ ರೀಫೈಂಡ್‌ ಎಣ್ಣೆ ಮಾತ್ರ) ಇರುತ್ತದೆ. ನಾನ್‌ ವೆಜ್‌ ಬಯಸಿದಾಗ ಚಿಕನ್‌, ಜೊತೆಗೆ ಬೇಳೆಯವ ತೊವ್ವೆ ಇರುತ್ತದೆ. ಸಿಹಿ ತಿನ್ನಲು ಮನಸ್ಸಾದಾಗ ಕುಲ್ಛಿ ಅಥವಾ ಚಾಕಲೇಟ್‌ ತಿನ್ನುತ್ತೇನೆ.

“4 ಗಂಟೆ ಹೊತ್ತಿಗೆ ಗ್ರೀನ್‌ ಟೀ ಕುಡಿಯುತ್ತೇನೆ ಹಾಗೂ ದಿನವಿಡೀ ಧಾರಾಳವಾಗಿ ಬಿಸಿ ನೀರು ಕುಡಿಯುತ್ತಿರುತ್ತೇನೆ. ಸಂಜೆ 6 ಗಂಟೆಗೆ ಸೋಯಾ ಮಿಲ್ಕ್ ಬೇಕು. ರಾತ್ರಿ ಕೇವಲ 1 ಸಣ್ಣ ಬಟ್ಟಲು ಸಲಾಡ್‌ ಹಾಗೂ ಸೇಬು. ರಾತ್ರಿ ಹೊತ್ತು ಚಪಾತಿ ಅಥವಾ ಅನ್ನ ತಿನ್ನುವುದಿಲ್ಲ.”

ಸೋನಮ್ ಫಿಟ್ನೆಸ್ಮಂತ್ರ

ಗಾರ್ಜಿಯಸ್‌ ಬ್ಯೂಟಿ ಎನಿಸಿದ ಸೋನಂ ಕಪೂರ್‌ ಳ ತೂಕ ಹಿಂದೆ 90 ಕಿಲೋ ಇತ್ತೆಂದರೆ ನೀವು ನಂಬುವಿರಾ? ಆದರೆ ಯಾವಾಗ ಆಕೆ ಸಿನಿಮಾಗಳಲ್ಲಿ ನಟಿಸಬೇಕೆಂದು ಮನಸ್ಸು ಮಾಡಿದಳೋ ತಕ್ಷಣ ತೂಕ ಕರಗಿಸಲಾರಂಭಿಸಿದಳು. ಇಂದು ಕೋಮಲಾಂಗಿ ಸೋನಂ ಕಪೂರ್‌ ಳ ಅಭಿಮಾನಿಗಳಿಗೇನೂ ಕೊರತೆಯಿಲ್ಲ. ಆಕೆಯ ಫಿಟ್ನೆಸ್‌ ಮಂತ್ರ ಎಂದರೆ ಸರಿಯಾದ ಆಹಾರ ಸೇವಿಸಿ, ಧಾರಾಳ ನೀರು ಕುಡಿಯಿರಿ ಹಾಗೂ ಕಟ್ಟುನಿಟ್ಟಾಗಿ ವ್ಯಾಯಾಮ ಮಾಡಿ.

ಈ ಕುರಿತಾಗಿ ಸೋನಂ, “ನನಗೆ ಬೇಕೆನಿಸಿದ್ದನ್ನು ತಿನ್ನದೇ ಇರಲು ನನ್ನಿಂದಾಗದು. ನನಗೆ ಇಂಥದ್ದು ಬೇಕೇಬೇಕು ಎನಿಸಿದಾಗ ಖಂಡಿತಾ ಅದನ್ನು ನಾನು ತಿನ್ನುತ್ತೇನೆ. ಆದರೆ ಕಡಿಮೆ ಪ್ರಮಾಣದಲ್ಲಿ! ಅಕಸ್ಮಾತ್‌ ನನಗೆ ಚಾಕಲೇಟ್‌ ತಿನ್ನಬೇಕೆನಿಸಿದರೆ, ಒಂದು ಸಣ್ಣ ತುಂಡು ಮಾತ್ರ ತಿನ್ನುವೆ. ಪ್ರಯಾಣ ಹೊರಟಾಗೆಲ್ಲ ನಾನು ಕೇವಲ 1-2 ಸೇಬು ಅಥವಾ ಸ್ಯಾಂಡ್‌ ವಿಚ್‌ ನಲ್ಲೇ ಕಾಲ ಕಳೆದುಬಿಡುತ್ತೇನೆ. ಆಗ ಮಾತ್ರ ನಾನು ಕ್ಯಾಲೋರಿ ಹೆಚ್ಚಿಸದೆ ನನ್ನ ಹಸಿವನ್ನು ತಣಿಸಲು ಸಾಧ್ಯ.

“ನನ್ನ ಅಜ್ಜಿಯ ಸಲಹೆ ಪ್ರಕಾರ, ದಿನಾ ಬೆಳಗ್ಗೆ 2 ಲೋಟ ಬಿಸಿ ನೀರು ಕುಡಿಯುತ್ತೇನೆ. ಇದರಿಂದ ದೇಹದೊಳಗಿನ ಟಾಕ್ಸಿನ್ಸ್ ಸುಲಭವಾಗಿ ಹೊರಹೋಗಲು ದಾರಿಯಾಗುತ್ತದೆ. ಬಿಸಿ ನೀರಿಗೆ ನಾನು ನಿಂಬೆರಸ, ಜೇನುತುಪ್ಪ ಬೆರೆಸಿಕೊಳ್ಳುವುದುಂಟು.

“ನಾನು ಸ್ಲಿಮ್ ಟ್ರಿಮ್ ಆಗಿರುವುದನ್ನು ಕಂಡು ಜನ ನಾನು ಏನೂ ತಿನ್ನುವುದೇ ಇಲ್ಲವೇನೋ ಎಂದು ಭಾವಿಸುತ್ತಾರೆ. ಹಾಗೇನಿಲ್ಲ, ಪ್ರತಿ 2 ತಾಸಿಗೊಮ್ಮೆ ಏನಾದರೂ ತುಸು ಆಹಾರ ಸೇವಿಸುತ್ತಿರುತ್ತೇನೆ. ನನ್ನ ಇಡೀ ದಿನ ದೈಹಿಕ  ಕ್ರಿಯಾಕಲಾಪಗಳಿಂದ ಕೂಡಿರುತ್ತದೆ.

“ಅಂದರೆ ಶೂಟಿಂಗ್‌ ಓಡಾಟ, ಸ್ವಿಮ್ಮಿಂಗ್‌, ಡ್ಯಾನ್ಸಿಂಗ್‌ ಇತ್ಯಾದಿ. ನಾನು ಬಹಳ ಹೊತ್ತು ಹಸಿದುಕೊಂಡಿರಲಾರೆ. ಪ್ರತಿ ತಾಸಿಗೊಮ್ಮೆ ಎಳನೀರು ಕುಡಿಯುತ್ತೀನಿ. ಸೌತೆರಸ, ನೀರು ಮಜ್ಜಿಗೆ ಇತ್ಯಾದಿಗಳನ್ನೂ ಮಧ್ಯೆ ಮಧ್ಯೆ ತೆಗೆದುಕೊಳ್ಳುವೆ. ಇದರಿಂದ ದೇಹದಲ್ಲಿ ಎಂದೂ ದ್ರವದ ಕೊರತೆ ಆಗುವುದಿಲ್ಲ.

ಸಿಹಿ ಕರಿದ ತಿಂಡಿ ಅಲರ್ಜಿ

“ಆದರೆ ನನಗೆ ಸಿಹಿ ತಿಂಡಿಗಳು, ವಡೆ ಪೂರಿಗಳಂಥ ಕರಿದ ಪದಾರ್ಥಗಳೆಂದರೆ ಅಲರ್ಜಿ. ನನ್ನನ್ನು ಚೆನ್ನಾಗಿ ಫಿಟ್ ಆಗಿರಿಸಿಕೊಳ್ಳಲು ಬ್ಯಾಸ್ಕೆಟ್‌ ಬಾಲ್ ಹಾಗೂ ಇನ್ನಿತರ ಆಟಗಳನ್ನು ಆಡುತ್ತಿರುತ್ತೇನೆ. ಜೊತೆಗೆ ವಿಭಿನ್ನ ತರಹದ ವ್ಯಾಯಾಮಗಳನ್ನೂ ಮಾಡುತ್ತೇನೆ.

“ಸದಾ ಫಿಟ್‌ ಆಗಿರಲು ನೀವು ದಿನ ಪೌಷ್ಟಿಕ ಆಹಾರವನ್ನೇ ಸೇವಿಸಬೇಕು ಹಾಗೂ ಬ್ರಿಸ್ಕ್ ವಾಕಿಂಗ್‌, ಜಾಗಿಂಗ್‌, ಸ್ಕಿಪ್ಪಿಂಗ್‌, ಯೋಗಾಸನಗಳಿಗೂ ಮಹತ್ವ ನೀಡಬೇಕು.

“ನಾನು ಬೆಳಗಿನ ಟಿಫನ್‌ ಗೆ ಎಗ್‌ ವೈಟ್‌ ನ ಆಮ್ಲೆಟ್‌, 1 ಟೋಸ್ಟ್, ಯಾವುದಾದರೂ 1 ಹಣ್ಣು, 1 ಗ್ಲಾಸ್‌ ಬಿಸಿ ನೀರು ಕುಡಿಯುತ್ತೇನೆ. ಮಧ್ಯಾಹ್ನದ ಊಟಕ್ಕೆ ತುಸು ಚಿಕನ್‌, ಮಲ್ಟಿಗ್ರೇನ್‌ ಆಟಾದ ಚಪಾತಿ ಅಥವಾ ಫುಲ್ಕಾ, ಸ್ವಲ್ಪ ಮೊಸರು, ಹಣ್ಣು ಮತ್ತು 1 ಕಪ್‌ ಮಿಶ್ರ ತರಕಾರಿ ಪಲ್ಯ ಸೇವಿಸುತ್ತೇನೆ. ಇಡೀ ದಿನಕ್ಕೆ 1-2 ಸಲ ಮಾತ್ರ ಶುಗರ್‌ ಲೆಸ್‌ ಟೀ ಕುಡಿಯುತ್ತೇನೆ.

“ರಾತ್ರಿ ಡಿನ್ನರ್‌ ಗೆ ನಾನು ಏನು ತಿಂತೀನಿ ಅನ್ನುವುದಕ್ಕಿಂತ ಯಾವಾಗ ತಿಂತೀನಿ ಅನ್ನುವುದೇ ಮುಖ್ಯ. ನಾನು 8 ಗಂಟೆಗೆ ಮೊದಲೇ ಡಿನ್ನರ್‌ ಮುಗಿಸ್ತೀನಿ. ಸಾಮಾನ್ಯವಾಗಿ ನಾನು ಡಿನ್ನರ್‌ ಗೆ ವೆಜ್‌ ಅಥವಾ ಚಿಕನ್‌ ಸ್ಯಾಂಡ್‌ ವಿಚ್‌, ಸಲಾಡ್‌ ಜೊತೆಗೆ ಫಿಶ್‌ ಕರೀ ಇಷ್ಟಪಡ್ತೀನಿ.”

ವ್ಯಾಯಾಮ ಪೌಷ್ಟಿಕ ಆಹಾರ ಎರಡೂ ಮುಖ್ಯ.  ದೀಪಿಕಾ ಪಡುಕೋಣೆ ಹೇಳುತ್ತಾಳೆ, “ನನ್ನ ಅಭಿಪ್ರಾಯದಲ್ಲಿ ಸ್ವಸ್ಥ ಶರೀರಕ್ಕಾಗಿ, ಪ್ರತಿಯೊಬ್ಬರೂ ಏನಾದರೊಂದು ಕ್ರಮ ಕೈಗೊಳ್ಳಲೇಬೇಕು. ಅದು ನಮ್ಮ ಪ್ರಥಮ ಆದ್ಯತೆಯಾಗಬೇಕು. ನನ್ನ ಪ್ರಕಾರ ಉತ್ತಮ ಫಿಟ್ನೆಸ್‌ ಎಂದರೆ ಕೇವಲ ಸ್ಲಿಂ ಆಗಿರುವುದು ಮಾತ್ರ ಅಲ್ಲ, ಬದಲಿಗೆ ಆಂತರಿಕವಾಗಿ ಸಶಕ್ತರಾಗಿರಬೇಕು. “ಒಳ್ಳೆಯ ವ್ಯಾಯಾಮದ ಜೊತೆ ಉತ್ತಮ ಪೌಷ್ಟಿಕಾಂಶ ತುಂಬಿದ ಆಹಾರ ಸೇವನೆಯೂ ಮುಖ್ಯ. ನಾನು ಈ ದಿನ ಎಷ್ಟು ವರ್ಕ್ ಔಟ್‌ ಮಾಡಬಲ್ಲೇ ಎಂಬುದನ್ನು ಗಮನದಲ್ಲಿರಿಸಿಕೊಂಡೇ ಇಂದು ನಾನು ಏನು ಸೇವಿಸಬೇಕು ಎಂದು ನಿರ್ಧರಿಸುತ್ತೇನೆ.

“ಶೂಟಿಂಗ್‌ ಸಲುವಾಗಿ ಟೂರಿಂಗ್‌ ನಲ್ಲಿದ್ದಾಗ, ಪ್ರತಿದಿನ ವರ್ಕ್‌ ಔಟ್‌ ಮಾಡುವುದು ಕಷ್ಟವಾಗುತ್ತದೆ. ಶೂಟಿಂಗ್‌ ಫ್ಲೋರ್‌ ನ ಜಿಮ್ ಕಂಡಾಕ್ಷಣ, ನಾನು ಕಾರ್ಡಿಯೋ ಮತ್ತು ಲೈಟ್‌ ವೆಯ್ಟ್ ಎಕ್ಸರ್‌ ಸೈಜ್‌ ಮಾಡುತ್ತೇನೆ.

“ಶೂಟಿಂಗ್‌ ನಲ್ಲಿದ್ದಾಗೆಲ್ಲ ನಾನು ಅಮ್ಮ ಮಾಡಿದ ಮನೆಯ ಊಟಕ್ಕೆ ಆದ್ಯತೆ ಕೊಡುತ್ತೇನೆ.

ದಾಲ್ ‌(ಬೇಳೆ ತೊವ್ವೆ), ರೊಟ್ಟಿ, ತರಕಾರಿ ಪಲ್ಯ, ರಾಯ್ತಾ, ಸಲಾಡ್‌ ಹಾಗೂ ಅಪರೂಪಕ್ಕೆ ನಾನ್‌ ವೆಜ್‌ ಸಹ ತಿನ್ನುತ್ತೇನೆ. “ಆದರೆ ಒಮ್ಮೊಮ್ಮೆ ಸ್ಟುಡಿಯೋದಲ್ಲೇ ಊಟ ಮಾಡಬೇಕಾಗಿ ಬಂದಾಗ, ನಾನು ಇಡ್ಲಿ ಅಥವಾ ಉಪ್ಪಿಟ್ಟಿನಂಥ ಲಘು ಆಹಾರವನ್ನೇ ಪ್ರಿಫರ್‌ ಮಾಡ್ತೀನಿ. ಪ್ರತಿದಿನಾ ನಾನು ಬೆಳಗಿನ ಉಪಾಹಾರವಿಲ್ಲದೆ ಶೂಟಿಂಗ್‌ ಗೆ ಹೊರಡುವುದೇ ಇಲ್ಲ. ಒಮ್ಮೊಮ್ಮೆ ನಾನ್‌ ವೆಜ್‌ ಸ್ಯಾಂಡ್‌ ವಿಚ್‌ ಇಲ್ಲವೇ ಉಪ್ಪಿಟ್ಟು, ಇಡ್ಲಿ, ದೋಸೆ, ಪರೋಟ ಇದ್ದೇ ಇರುತ್ತದೆ.

“ಮಧ್ಯಾಹ್ನದ ಊಟಕ್ಕೆ ನಾನು 2 ತೆಳು ರುಮಾಲಿ ರೊಟ್ಟಿ ಅಥವಾ ಕುಲ್ಚಾ, 1 ಕಪ್‌ ತರಕಾರಿ ಪಲ್ಯ, ಅನ್ನ, ದಾಲ್‌, ಸಲಾಡ್ ಸೇವಿಸುತ್ತೇನೆ. ಇದರಿಂದ ನನ್ನ ಊಟ ಬ್ಯಾಲೆನ್ಸ್ಡ್ ಆಗಿರುತ್ತದೆ. ಆದರೆ ರಾತ್ರಿಯ ಡಿನ್ನರ್‌ ಗೆ ನಾನೆಂದೂ ನಾನ್‌ ವೆಜ್‌ ಅಥವಾ ಅನ್ನ ತಿನ್ನುವುದಿಲ್ಲ. ನನಗೆ ಥಾಯ್‌ ರೆಸಿಪೀಸ್‌ ಮತ್ತು ಬಗೆ ಬಗೆಯ ಚಾಕಲೇಟ್‌ ಗಳೆಂದರೆ ಪಂಚಪ್ರಾಣ!”

ನೇಹಾ ಧೂಪಿಯಾ ಫಿಟ್ನೆಸ್‌ ಕುರಿತು ವಿಭಿನ್ನ ವಿಚಾರ ಮಂಡಿಸುತ್ತಾಳೆ. ಆಕೆಯ ಪ್ರಕಾರ, “ನಾನು ಕೇವಲ ಜಿಮ್ ಗೆ ಮಾತ್ರ ಹೋಗ್ತೀನಿ, ಅಂತ ಒಂದೇ ವಿಷಯಕ್ಕೆ ಜೋತುಬೀಳುವವಳಲ್ಲ. ಫಿಟ್‌ ಆಗಿರಲು ನಾನು ಹಲವಾರು ಅನ್ಯ ದಾರಿಗಳನ್ನೂ ಕಂಡುಕೊಂಡಿದ್ದೇನೆ. ಹೆಚ್ಚು ಹೆಚ್ಚು ಆಟೋಟಗಳಲ್ಲಿ ಭಾಗಹಿಸುವುದು, ನಿಯಮಿತ ಈಜು ಇತ್ಯಾದಿ. ಆದರೆ ಹೆಲ್ದಿ ಡಯೆಟ್‌ ಮಾತ್ರ ಎಂದೂ ತಪ್ಪಿಸುವುದಿಲ್ಲ.”

`ಏಕ್‌….ದೋ….ತೀನ್‌….’ ಎಂದು ಯುವ ವರ್ಗಕ್ಕೆ ಹುಚ್ಚು ಹಿಡಿಸಿದ ಮಾಧುರಿಯಂತೂ ಬಾಲಿವುಡ್‌ ನಲ್ಲಿ ತನ್ನ ನಟನಾ ಕೌಶಲ್ಯ ಹಾಗೂ ಡ್ಯಾನ್ಸ್ ಗಳಿಂದ ತನ್ನದೇ ವಿಶಿಷ್ಟ ಛಾಪು ಮೂಡಿಸಿದ್ದಾಳೆ. ತನ್ನ ಪರ್ಫೆಕ್ಟ್ ಫಿಗರ್‌ ಗೆ ತಾನು ಸೇವಿಸುವ ಪೌಷ್ಟಿಕ ಆಹಾರ ಮತ್ತು ಹೆಚ್ಚು ಹೆಚ್ಚಾದ ನೃತ್ಯಾಭ್ಯಾಸವೇ ಕಾರಣ ಎಂಬುದು ಅವಳ ಅನಿಸಿಕೆ.

ಡ್ಯಾನ್ಸ್ ಹೆಂಗಸರನ್ನು ಹೆಚ್ಚು ಕ್ರಿಯಾಶೀಲವಾಗಿ, ಆರೋಗ್ಯವಾಗಿಡುತ್ತದೆ ಎನ್ನುತ್ತಾಳೆ. ಉತ್ತಮ ಡಯೆಟ್‌, ನಿಯಮಿತ ವ್ಯಾಯಾಮ, ಆಟೋಟಗಳ ಜೊತೆ ಫಿಟ್ನೆಸ್‌ ನ ಮೂಲಮಂತ್ರ ಎಂದರೆ ಸದಾ ಖುಷಿಯಾಗಿರಿ, ಇತರರಿಗೂ ಸಂತಸ ಹಂಚಿರಿ ಎಂಬುದು ಬಹುತೇಕ ಸಿನಿತಾರೆಯರ ಅಭಿಮತ.

ನಾನು ಹೆಚ್ಚಾಗಿ ಹಸಿ ತರಕಾರಿ ಸಲಾಡ್‌ ಹಾಗೂ ಹಣ್ಣುಗಳನ್ನೇ ಅವಲಂಬಿಸುತ್ತೇನೆ, ಜೊತೆಗೆ ಧಾರಾಳವಾಗಿ ಆಗಾಗ ನೀರು ಕುಡಿಯುತ್ತಿರುತ್ತೇನೆ.

ಲಾರಾ ದತ್ತಾ

ನನ್ನ ಬೆಳಗಿನ ಉಪಾಹಾರದಲ್ಲಿ 1 ಸಣ್ಣ ಬಟ್ಟಲು ಬ್ರೋಕನ್‌ ವೀಟ್‌ ಹಾಗೂ 1 ಕಪ್‌ ನಾರ್ಮಲ್ ಟೀ ಇರಲೇಬೇಕು.

ಶಿಲ್ಪಾ ಶೆಟ್ಟಿ.

ಒಂದು ಗ್ಲಾಸ್‌ ಬಿಸಿ ನೀರಿಗೆ ನಿಂಬೆರಸ, ಜೇನು ಬೆರೆಸಿ ದಿನ ಬೆಳಗ್ಗೆ ಕುಡಿಯುತ್ತೇನೆ.

ಮಲೈಕಾ ಅರೋರಾ.

ಫ್ರೆಶ್‌ ಸಲಾಡ್‌ ನಮ್ಮ ಬ್ಯಾಲೆನ್ಸ್ಡ್ ಫುಡ್‌ ನ ಒಂದು ಅವಿಭಾಜ್ಯ ಅಂಗವಾಗಿದೆ.

ದೀಪಿಕಾ ಪಡುಕೋಣೆ.

ನನಗೆ ಯಾವುದು ಚೆನ್ನಾಗಿದೆ ಅನ್ಸುತ್ತೋ ಅದನ್ನೇ ತಿನ್ನುತ್ತೇನೆ. ಅದಕ್ಕೆ ಸೂಕ್ತವಾಗಿ ವರ್ಕ್‌ ಔಟ್‌ ಮಾಡ್ತೀನಿ.

ಬಿಪಾಶಾ ಬಸು.

ಮೊಳಕೆ ಕಟ್ಟಿದ ಕಾಳು (ಸ್ಪ್ರೌಟ್ಸ್) ಹಾಗೂ ಹಣ್ಣುಗಳು ಬೆಳಗಿನ ಬ್ರೇಕ್‌ ಫಾಸ್ಟ್ ಗೆ ಬಲು ಸೊಗಸು!

ನೇಹಾ ಧೂಪಿಯಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ