ಹಸಿಮೆಣಸು ನೆಲ್ಲಿಯ ಉಪ್ಪಿನಕಾಯಿ
ಸಾಮಗ್ರಿ : 100 ಗ್ರಾಂ ಉದ್ದನೆ ಹಸಿ ಮೆಣಸಿನಕಾಯಿ, ಅರ್ಧ ಕಪ್ ತುರಿದ ಬೆಟ್ಟದ ನೆಲ್ಲಿಕಾಯಿ, 1-1 ಚಮಚ ಪುಡಿ ಮಾಡಿದ ಸಾಸುವೆ, ಜೀರಿಗೆ, ಅರ್ಧ ಸಣ್ಣ ಚಮಚ ಅರಿಶಿನ, ಅರ್ಧ ಕಪ್ ಎಳ್ಳೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ವಿನಿಗರ್, ಇಂಗು, ಜೊತೆಗೆ ಒಂದಿಷ್ಟು ಹಸಿಶುಂಠಿ, ಮಾವಿನಶುಂಠಿ, ಮಾಕಳಿಬೇರಿನ ತುಂಡುಗಳು.
ವಿಧಾನ : ಹಸಿಮೆಣಸು ಬೆಟ್ಟದ ನೆಲ್ಲಿಗಳನ್ನು ಶುಚಿಗೊಳಿಸಿ ಒರೆಸಿಕೊಳ್ಳಿ. ಹಸಿ ಮೆಣಸನ್ನು ಸಣ್ಣ ತುಂಡುಗಳಾಗಿಸಿ, ನೆಲ್ಲಿಕಾಯಿ ತುರಿದಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸುವೆ, ಜೀರಿಗೆ ಪುಡಿಗಳನ್ನು ಹಾಕಿ ಕೆದಕಬೇಕು. ಆಮೇಲೆ ಇದಕ್ಕೆ ನೆಲ್ಲಿ ತುರಿ ಹಾಗೂ ಹೆಚ್ಚಿದ ಉಳಿದೆಲ್ಲ ಪದಾರ್ಥ ಹಾಕಿ 5-6 ನಿಮಿಷ ಚೆನ್ನಾಗಿ ಬಾಡಿಸಿ ಕೆಳಗಿಳಿಸಿ. ಉಪ್ಪಿನಕಾಯಿ ಭರಣಿಗೆ ಉಪ್ಪು, ವಿನಿಗರ್, ಅರಿಶಿನ ಹಾಕಿಟ್ಟು, ಅದರ ಮೇಲೆ ಈ ಮಿಶ್ರಣ ಸುರಿದು ಚೆನ್ನಾಗಿ ಬೆರೆತುಕೊಳ್ಳುವಂತೆ ಮರದ ಸೌಟಿನಿಂದ ಕಲಸಬೇಕು. ಇದರ ಬಾಯಿ ಕಟ್ಟಿ 1 ವಾರ ಬಿಸಿಲಿಗಿಟ್ಟರೆ, ಉಪ್ಪಿನಕಾಯಿ ರೆಡಿ.
ಸೇಬಿನ ಮುರಬ್ಬಾ
ಸಾಮಗ್ರಿ : 2-3 ಸೇಬು, ಅರ್ಧ ಕಪ್ ಸಕ್ಕರೆ, ಒಂದಿಷ್ಟು ತುರಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಒಣ ಶುಂಠಿಯ ಪುಡಿ ನಿಂಬೆರಸ, ಗರಂಮಸಾಲ, ಹುರಿದು ಪುಡಿ ಮಾಡಿದ ಜೀರಿಗೆ, ತುಸು ರೀಫೈಂಡ್ ಎಣ್ಣೆ, 2-3 ಚಿಟಕಿ ಅರಿಶಿನ.
ವಿಧಾನ : ಮೊದಲು ಸೇಬನ್ನು ಶುಚಿಗೊಳಿಸಿ, ಒರೆಸಿಕೊಂಡು ನೀಟಾಗಿ ತುರಿದಿಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ತುರಿದ ಸೇಬು ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ತುರಿದ ಶುಂಠಿ ಹಾಗೂ ಉಳಿದೆಲ್ಲ ಪದಾರ್ಥ ಸೇರಿಸಿ ನೀಟಾಗಿ ಕೈಯಾಡಿಸಿ. ಕೊನೆಯಲ್ಲಿ ಸಕ್ಕರೆ ಹಾಕಿ ಕೆದಕಬೇಕು. ಎಲ್ಲವೂ ಚೆನ್ನಾಗಿ ಬ್ಲೆಂಡ್ ಆದಾಗ, ಮತ್ತೆ 5 ನಿಮಿಷ ಕೈಯಾಡಿಸಿ ಕೆಳಗಿಳಿಸಿ, ಕೊನೆಯಲ್ಲಿ ತುಸು ಆರಿದ ನಂತರ, ನಿಂಬೆಹಣ್ಣು ಹಿಂಡಿಕೊಳ್ಳಿ. ಚೆನ್ನಾಗಿ ತಣ್ಣಗಾದ ಮೇಲೆ ಜಾರ್ ಗೆ ತುಂಬಿಸಿ, ಬೇಕಾದಾಗ ಬಳಸಬಹುದು.
ಕ್ಯಾರೆಟ್ ಪಿಕಲ್
ಸಾಮಗ್ರಿ : 250 ಗ್ರಾಂ ಕ್ಯಾರೆಟ್, 2-2 ಚಮಚ ಹುರಿದು ಪುಡಿ ಮಾಡಿದ ಸಾಸುವೆ, ಜೀರಿಗೆ, ಧನಿಯಾಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ನಿಂಬೆರಸ, ಅರ್ಧ ಚಮಚ ಅರಿಶಿನ, 1 ಸೌಟು ಎಣ್ಣೆ.
ವಿಧಾನ : ಮೊದಲು ಕ್ಯಾರೆಟ್ ಶುಚಿಗೊಳಿಸಿ, ಒರೆಸಿಕೊಂಡು ಅರ್ಧ ಅಂಗುಲದ ತೆಳು ಹೋಳುಗಳಾಗಿ ಹೆಚ್ಚಿಡಿ. ಇದನ್ನು ಪ್ಲಾಸ್ಟಕ್ ಶೀಟ್ ಮೇಲೆ ಅರ್ಧ ದಿನ ಬಿಸಿಲಲ್ಲಿ ಒಣಗಿಸಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸುವೆ, ಜೀರಿಗೆಯ ಒಗ್ಗರಣೆ ಕೊಡಿ. ಆಮೇಲೆ ಕ್ಯಾರೆಟ್ ಹಾಕಿ ಹದನಾಗಿ ಬಾಡಿಸಬೇಕು. ನಂತರ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. 5 ನಿಮಿಷ ಮತ್ತಷ್ಟು ಕೆದಕಿ ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ನಿಂಬೆಹಣ್ಣು ಹಿಂಡಿಕೊಂಡು, ಬೆರೆತುಕೊಳ್ಳುವಂತೆ ಮಾಡಿ, ಜಾಡಿಗೆ ತುಂಬಿಸಿ, ಬಾಯಿ ಕಟ್ಟಿ 4-5 ದಿನ ಬಿಸಿಲಿಗಿಡಿ. ನಂತರ ಉಪ್ಪಿನಕಾಯಿ ಬಳಸಲು ರೆಡಿ.
ಬೀಟ್ ರೂಟ್ ಪಿಕಲ್
ಸಾಮಗ್ರಿ : 2-3 ಮಧ್ಯಮ ಗಾತ್ರದ ಬೀಟ್ ರೂಟ್, 4 ಚಮಚ ವಿನಿಗರ್, 5-6 ಹಸಿ ಮೆಣಸು, ಅರ್ಧರ್ಧ ಸಣ್ಣ ಚಮಚ ಅರಿಶಿನ, ಮೆಂತ್ಯ, ಸಾಸುವೆ, ಜೀರಿಗೆ, ಧನಿಯಾಪುಡಿ ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಒಂದಿಷ್ಟು ಹಸಿಮೆಣಸು, ಅರ್ಧ ಸೌಟು ಎಣ್ಣೆ.
ವಿಧಾನ : ಮೊದಲು ಬೀಟ್ ರೂಟ್ ನ ಸಿಪ್ಪೆ ಹೆರೆದು ಸಣ್ಣ ಹೋಳುಗಳಾಗಿ ಹೆಚ್ಚಿಡಿ, ಹಸಿಮೆಣಸಿನಕಾಯಿಗಳನ್ನೂ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸುವೆ, ಜೀರಿಗೆ, ಇಂಗಿನ ಒಗ್ಗರಣೆ ಕೊಡಿ. ಮೆಂತ್ಯ ಹಾಕಿ ಚಟಪಟಾಯಿಸಿದ ನಂತರ, ಬೀಟ್ ರೂಟ್, ಹಸಿ ಮೆಣಸು ಹಾಕಿ ಹದನಾಗಿ ಬಾಡಿಸಿ. ಆಮೇಲೆ ಉಳಿದೆಲ್ಲ ಸಾಮಗ್ರಿ ಬೆರೆಸಿ, ಚೆನ್ನಾಗಿ ಮಿಶ್ರಗೊಳ್ಳುವಂತೆ ಬಾಡಿಸಿ. ಕೆಳಗಿಳಿಸಿ ಆರಿದ ನಂತರ ವಿನಿಗರ್ ಬೆರೆಸಿ ಕೈಯಾಡಿಸಿ. ಇದನ್ನು ಜಾರ್ ಗೆ ತುಂಬಿಸಿ, ಬಾಯಿ ಕಟ್ಟಿ, 4-5 ದಿನ ಬಿಸಿಲಿಗಿಟ್ಟು ನಂತರ ಬಳಸಲಾರಂಭಿಸಿ.
ತೆಂಗಿನ ಉಪ್ಪಿನಕಾಯಿ
ಸಾಮಗ್ರಿ : 1 ತೆಂಗಿನಕಾಯಿ, 8-10 ಎಸಳು ಬೆಳ್ಳುಳ್ಳಿ, 5-6 ಹಸಿ ಮೆಣಸು, ಅರ್ಧರ್ಧ ಚಮಚ ಹುರಿದು ಪುಡಿ ಮಾಡಿದ ಸಾಸುವೆ, ಜೀರಿಗೆ, ಮೆಂತ್ಯ, ಅರಿಶಿನ, ಧನಿಯಾಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ ಕಿವುಚಿದ ಹುಣಿಸೆ ರಸ, ವಿನಿಗರ್, ಒಗ್ಗರಣೆಗಾಗಿ ಅರ್ಧ ಸೌಟು ಎಳ್ಳೆಣ್ಣೆ, ಸೋಂಪು, ಕರಿಬೇವು.
ವಿಧಾನ : ಮೊದಲು ತೆಂಗಿನಕಾಯಿ ಒಡೆದು ಸಣ್ಣ ಹೋಳುಗಳಾಗಿಸಿ. ಆಮೇಲೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಇದಕ್ಕೆ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ನಂತರ ತೆಂಗಿನ ಹೋಳು, ಹೆಚ್ಚಿದ ಹಸಿಮೆಣಸು, ಬೆಳ್ಳುಳ್ಳಿ ಹಾಕಿ ಹದನಾಗಿ ಬಾಡಿಸಿ. ಆಮೇಲೆ ಉಳಿದೆಲ್ಲ ಮಸಾಲೆ ಸಾಮಗ್ರಿ ಹಾಕಿ ಕೆದಕಬೇಕು. ನಂತರ ಗಟ್ಟಿಯಾಗಿ ಕಿವುಚಿಕೊಂಡ ಹುಣಿಸೆ ರಸ ಬೆರೆಸಿ, ಮಂದ ಉರಿಯಲ್ಲಿ ಅದು ಕುದಿಯುವವರೆಗೂ ಕೆದಕಿ ಕೆಳಗಿಳಿಸಿ. ಚೆನ್ನಾಗಿ ಆರಿದ ಮೇಲೆ ವಿನಿಗರ್ ಬೆರೆಸಿ, ಜಾರ್ ಗೆ ತುಂಬಿಸಿ, 1-2 ದಿನ ಬಿಟ್ಟು ಬಳಸಲಾರಂಭಿಸಿ. ಇದನ್ನು ಆದಷ್ಟು ಬೇಗ ಖಾಲಿ ಮಾಡಬೇಕು. ಫ್ರಿಜ್ ನಲ್ಲಿರಿಸಿ 1 ವಾರ ಬಳಸಬಹುದು.
ಪರಂಗಿಕಾಯಿಯ ಉಪ್ಪಿನಕಾಯಿ
ಸಾಮಗ್ರಿ : 1 ಸಣ್ಣ ಪರಂಗಿಕಾಯಿ, 3-4 ಹಸಿ ಮೆಣಸಿನಕಾಯಿ, 1-2 ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, 1 ದೊಡ್ಡ ತುಂಡು ಶುಂಠಿ, ಅರ್ಧರ್ಧ ಚಮಚ ಹುರಿದು ಪುಡಿ ಮಾಡಿದ ಸಾಸುವೆ, ಜೀರಿಗೆ, ಸೋಂಪು, ಧನಿಯಾ, ಮೆಂತ್ಯ, ಅರಿಶಿನ, ರುಚಿಗೆ ತಕ್ಕಷ್ಟು ನಿಂಬೆರಸ, ಉಪ್ಪು, ಖಾರ, ಸಕ್ಕರೆ, ಅರ್ಧ ಸೌಟು ಎಳ್ಳೆಣ್ಣೆ.
ವಿಧಾನ : ಮೊದಲು ಮಿಕ್ಸಿಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು ಇತ್ಯಾದಿಗಳನ್ನು ನಿಂಬೆರಸದಲ್ಲಿ ಗಟ್ಟಿಯಾಗಿ ತಿರುವಿಕೊಳ್ಳಿ. ಪರಂಗಿಕಾಯಿಯ ಸಿಪ್ಪೆ ಹೆರೆದು, ನೀಟಾಗಿ ತುರಿದಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸುವೆ, ಜೀರಿಗೆಗಳ ಒಗ್ಗರಣೆ ಕೊಡಿ, ಇತರೆ ಮಸಾಲೆ ಹಾಕಿ ಕೆದಕಬೇಕು. ಆಮೇಲೆ ಪರಂಗಿಯ ತುರಿ ಹಾಕಿ ಹದನಾಗಿ ಬಾಡಿಸಿ. ನಂತರ ಉಪ್ಪು, ಖಾರ, ಸಕ್ಕರೆ, ರುಬ್ಬಿದ ಮಿಶ್ರಣ ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ಜಾರ್ ಗೆ ತುಂಬಿಸಿ. ಅಂದಿನಿಂದಲೇ ಬಳಸಬಹುದು, ಆದಷ್ಟೂ ಬೇಗ ಖಾಲಿ ಮಾಡಿ. ಫ್ರಿಜ್ ನಲ್ಲಿಟ್ಟರೆ 2-3 ವಾರ ಬಳಸಬಹುದು.
ತೊಂಡೆಕಾಯಿಯ ಉಪ್ಪಿನಕಾಯಿ
ಸಾಮಗ್ರಿ : 250 ಗ್ರಾಂ ತೊಂಡೆಕಾಯಿ (ಮಾಗಿರಬಾರದು), ಹುರಿದು ಪುಡಿ ಮಾಡಿದ ಸಾಸುವೆ, ಜೀರಿಗೆ, ಸೋಂಪು, ಮೆಂತ್ಯ, ಧನಿಯಾ, ಅರಿಶಿನ (ತಲಾ ಅರ್ಧ ಚಮಚ), ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ ಅಮ್ಚೂರ್ ಪುಡಿ, ಗರಂಮಸಾಲ, ನಿಂಬೆರಸ, ವಿನಿಗರ್.
ವಿಧಾನ : ಮೊದಲು ತೊಂಡೆಕಾಯಿ ಶುಚಿಗೊಳಿಸಿ, ಒರೆಸಿಕೊಂಡು, 4 ಭಾಗಗಳಾಗಿ ಉದ್ದಕ್ಕೆ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸುವೆ, ಜೀರಿಗೆ ಇತ್ಯಾದಿಗಳ ಒಗ್ಗರಣೆ ಕೊಡಿ. ತೊಂಡೆಕಾಯಿ ಹಾಕಿ ಚೆನ್ನಾಗಿ ಬಾಡಿಸಿ. ಆಮೇಲೆ ಇದಕ್ಕೆ ಉಪ್ಪು, ಖಾರ, ಉಳಿದೆಲ್ಲ ಮಸಾಲೆ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಬೇಕು. ಇದನ್ನು ಕೆಳಗಿಳಿಸಿ ಆರಿದ ಮೇಲೆ, ನಿಂಬೆರಸ, ವಿನಿಗರ್ ಬೆರೆಸಿ ಜಾರ್ ಗೆ ತುಂಬಿಸಿ. ಮಾರನೇ ದಿನದಿಂದಲೇ ಬಳಸಲಾರಂಭಿಸಿ. ಫ್ರಿಜ್ ನಲ್ಲಿರಿಸಿ 8-10 ದಿನ ಬಳಸಬಹುದು.
ಬೇಬಿಕಾರ್ನ್ ಪಿಕಲ್
ಸಾಮಗ್ರಿ : ಬಿಲ್ಲೆಗಳಾಗಿ ಹೆಚ್ಚಿದ 2 ಕಪ್ ತಾಜಾ ಬೇಬಿ ಕಾರ್ನ್, 7-8 ಹಸಿ ಮೆಣಸು, 8-10 ಬೆಳ್ಳುಳ್ಳಿ, ಅರ್ಧರ್ಧ ಚಮಚ ಹುರಿದು ಪುಡಿ ಮಾಡಿದ ಸಾಸುವ, ಜೀರಿಗೆ, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ನಿಂಬೆರಸ, ಅರ್ಧ ಸೌಟು ಎಣ್ಣೆ.
ವಿಧಾನ : ಬೇಬಿ ಕಾರ್ನ್ ಶುಚಿಗೊಳಿಸಿ, ತೆಳು ಬಿಲ್ಲೆಗಳಾಗಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಒಗ್ಗರಣೆ ಕೊಟ್ಟ ನಂತರ, ಬೇಬಿ ಕಾರ್ನ್, ಹೆಚ್ಚಿದ ಹಸಿ ಮೆಣಸು ಹಾಕಿ ಹದನಾಗಿ ಬಾಡಿಸಿ. ನಂತರ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಚೆನ್ನಾಗಿ ಕೈಯಾಡಿಸಿ ಕೆಳಗಿಳಿಸಿ. ಚೆನ್ನಾಗಿ ಆರಿದ ಮೇಲೆ ನಿಂಬೆಹಣ್ಣು ಹಿಂಡಿಕೊಂಡು, ಮಿಶ್ರಗೊಳಿಸಿ ಜಾರ್ ಗೆ ತುಂಬಿಸಿ. ಫ್ರಿಜ್ ನಲ್ಲಿರಿಸಿದರೆ 8-10 ದಿನ ಬಳಸಬಹುದು.
ಟೊಮೇಟೊ ಉಪ್ಪಿಕಾಯಿ
ಸಾಮಗ್ರಿ : 50 ಗ್ರಾಂ ಹುಳಿ ಟೊಮೇಟೊ, 1-2 ಒಣಮೆಣಸಿನಕಾಯಿ, 1 ತುಂಡು ಶುಂಠಿ, 8-10 ಎಸಳು ಬೆಳ್ಳುಳ್ಳಿ, ಒಗ್ಗರಣೆಗೆ ಅರ್ಧ ಸೌಟು ಎಣ್ಣೆ, ಸಾಸುವೆ, ಜೀರಿಗೆ, ಸೋಂಪು, ಮೆಂತ್ಯ, ತುಸು ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ವಿನಿಗರ್.
ವಿಧಾನ : ಮೊದಲು ಟೊಮೇಟೊ ಶುಚಿಗೊಳಿಸಿ, ಒರೆಸಿಕೊಂಡು, ಹೋಳಾಗಿಸಿ. ಇದಕ್ಕೆ ತುಂಡರಿಸಿದ ಶುಂಠಿ, ಒಣಮೆಣಸಿನಕಾಯಿ, ಬೆಳ್ಳುಳ್ಳಿ, ಅರಿಶಿನ ಸೇರಿಸಿ (ಸ್ವಲ್ಪ ನೀರು ಬೆರೆಸದೆ) ಗಟ್ಟಿಯಾಗಿ ತಿರುವಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ. ನಂತರ ಇದಕ್ಕೆ ರುಬ್ಬಿದ ಟೊಮೇಟೊ ಪೇಸ್ಟ್ ಹಾಕಿ ಹದನಾಗಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಅರಿಶಿನ ಸೇರಿಸಿ ಮತ್ತಷ್ಟು ಕೆದಕಿ ಕೆಳಗಿಳಿಸಿ. ಇದು ಚೆನ್ನಾಗಿ ಆರಿದ ಮೇಲೆ ವಿನಿಗರ್ ಬೆರೆಸಿ, ನಂತರ ಜಾರ್ ಗೆ ತುಂಬಿಸಿ. ಫ್ರಿಜ್ ನಲ್ಲಿರಿಸಿ 2 ವಾರ ಬಳಸಬಹುದು.