ಹಸಿಮೆಣಸು ನೆಲ್ಲಿಯ ಉಪ್ಪಿನಕಾಯಿ
ಸಾಮಗ್ರಿ : 100 ಗ್ರಾಂ ಉದ್ದನೆ ಹಸಿ ಮೆಣಸಿನಕಾಯಿ, ಅರ್ಧ ಕಪ್ ತುರಿದ ಬೆಟ್ಟದ ನೆಲ್ಲಿಕಾಯಿ, 1-1 ಚಮಚ ಪುಡಿ ಮಾಡಿದ ಸಾಸುವೆ, ಜೀರಿಗೆ, ಅರ್ಧ ಸಣ್ಣ ಚಮಚ ಅರಿಶಿನ, ಅರ್ಧ ಕಪ್ ಎಳ್ಳೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ವಿನಿಗರ್, ಇಂಗು, ಜೊತೆಗೆ ಒಂದಿಷ್ಟು ಹಸಿಶುಂಠಿ, ಮಾವಿನಶುಂಠಿ, ಮಾಕಳಿಬೇರಿನ ತುಂಡುಗಳು.
ವಿಧಾನ : ಹಸಿಮೆಣಸು ಬೆಟ್ಟದ ನೆಲ್ಲಿಗಳನ್ನು ಶುಚಿಗೊಳಿಸಿ ಒರೆಸಿಕೊಳ್ಳಿ. ಹಸಿ ಮೆಣಸನ್ನು ಸಣ್ಣ ತುಂಡುಗಳಾಗಿಸಿ, ನೆಲ್ಲಿಕಾಯಿ ತುರಿದಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸುವೆ, ಜೀರಿಗೆ ಪುಡಿಗಳನ್ನು ಹಾಕಿ ಕೆದಕಬೇಕು. ಆಮೇಲೆ ಇದಕ್ಕೆ ನೆಲ್ಲಿ ತುರಿ ಹಾಗೂ ಹೆಚ್ಚಿದ ಉಳಿದೆಲ್ಲ ಪದಾರ್ಥ ಹಾಕಿ 5-6 ನಿಮಿಷ ಚೆನ್ನಾಗಿ ಬಾಡಿಸಿ ಕೆಳಗಿಳಿಸಿ. ಉಪ್ಪಿನಕಾಯಿ ಭರಣಿಗೆ ಉಪ್ಪು, ವಿನಿಗರ್, ಅರಿಶಿನ ಹಾಕಿಟ್ಟು, ಅದರ ಮೇಲೆ ಈ ಮಿಶ್ರಣ ಸುರಿದು ಚೆನ್ನಾಗಿ ಬೆರೆತುಕೊಳ್ಳುವಂತೆ ಮರದ ಸೌಟಿನಿಂದ ಕಲಸಬೇಕು. ಇದರ ಬಾಯಿ ಕಟ್ಟಿ 1 ವಾರ ಬಿಸಿಲಿಗಿಟ್ಟರೆ, ಉಪ್ಪಿನಕಾಯಿ ರೆಡಿ.
ಸೇಬಿನ ಮುರಬ್ಬಾ
ಸಾಮಗ್ರಿ : 2-3 ಸೇಬು, ಅರ್ಧ ಕಪ್ ಸಕ್ಕರೆ, ಒಂದಿಷ್ಟು ತುರಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಒಣ ಶುಂಠಿಯ ಪುಡಿ ನಿಂಬೆರಸ, ಗರಂಮಸಾಲ, ಹುರಿದು ಪುಡಿ ಮಾಡಿದ ಜೀರಿಗೆ, ತುಸು ರೀಫೈಂಡ್ ಎಣ್ಣೆ, 2-3 ಚಿಟಕಿ ಅರಿಶಿನ.
ವಿಧಾನ : ಮೊದಲು ಸೇಬನ್ನು ಶುಚಿಗೊಳಿಸಿ, ಒರೆಸಿಕೊಂಡು ನೀಟಾಗಿ ತುರಿದಿಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ತುರಿದ ಸೇಬು ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ತುರಿದ ಶುಂಠಿ ಹಾಗೂ ಉಳಿದೆಲ್ಲ ಪದಾರ್ಥ ಸೇರಿಸಿ ನೀಟಾಗಿ ಕೈಯಾಡಿಸಿ. ಕೊನೆಯಲ್ಲಿ ಸಕ್ಕರೆ ಹಾಕಿ ಕೆದಕಬೇಕು. ಎಲ್ಲವೂ ಚೆನ್ನಾಗಿ ಬ್ಲೆಂಡ್ ಆದಾಗ, ಮತ್ತೆ 5 ನಿಮಿಷ ಕೈಯಾಡಿಸಿ ಕೆಳಗಿಳಿಸಿ, ಕೊನೆಯಲ್ಲಿ ತುಸು ಆರಿದ ನಂತರ, ನಿಂಬೆಹಣ್ಣು ಹಿಂಡಿಕೊಳ್ಳಿ. ಚೆನ್ನಾಗಿ ತಣ್ಣಗಾದ ಮೇಲೆ ಜಾರ್ ಗೆ ತುಂಬಿಸಿ, ಬೇಕಾದಾಗ ಬಳಸಬಹುದು.
ಕ್ಯಾರೆಟ್ ಪಿಕಲ್
ಸಾಮಗ್ರಿ : 250 ಗ್ರಾಂ ಕ್ಯಾರೆಟ್, 2-2 ಚಮಚ ಹುರಿದು ಪುಡಿ ಮಾಡಿದ ಸಾಸುವೆ, ಜೀರಿಗೆ, ಧನಿಯಾಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ನಿಂಬೆರಸ, ಅರ್ಧ ಚಮಚ ಅರಿಶಿನ, 1 ಸೌಟು ಎಣ್ಣೆ.
ವಿಧಾನ : ಮೊದಲು ಕ್ಯಾರೆಟ್ ಶುಚಿಗೊಳಿಸಿ, ಒರೆಸಿಕೊಂಡು ಅರ್ಧ ಅಂಗುಲದ ತೆಳು ಹೋಳುಗಳಾಗಿ ಹೆಚ್ಚಿಡಿ. ಇದನ್ನು ಪ್ಲಾಸ್ಟಕ್ ಶೀಟ್ ಮೇಲೆ ಅರ್ಧ ದಿನ ಬಿಸಿಲಲ್ಲಿ ಒಣಗಿಸಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸುವೆ, ಜೀರಿಗೆಯ ಒಗ್ಗರಣೆ ಕೊಡಿ. ಆಮೇಲೆ ಕ್ಯಾರೆಟ್ ಹಾಕಿ ಹದನಾಗಿ ಬಾಡಿಸಬೇಕು. ನಂತರ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. 5 ನಿಮಿಷ ಮತ್ತಷ್ಟು ಕೆದಕಿ ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ನಿಂಬೆಹಣ್ಣು ಹಿಂಡಿಕೊಂಡು, ಬೆರೆತುಕೊಳ್ಳುವಂತೆ ಮಾಡಿ, ಜಾಡಿಗೆ ತುಂಬಿಸಿ, ಬಾಯಿ ಕಟ್ಟಿ 4-5 ದಿನ ಬಿಸಿಲಿಗಿಡಿ. ನಂತರ ಉಪ್ಪಿನಕಾಯಿ ಬಳಸಲು ರೆಡಿ.