ನೀರೇ ಜೀವನಾಧಾರ. ಈ ಜೀವನಾಧಾರವನ್ನು ನಮಗೆ ಬಾಲ್ಯದಿಂದಲೇ ಕುಡಿಸಲಾಗುತ್ತಿದೆ. ಆದರೆ, ನೀರಿನ ಇನ್ನೊಂದು ಹೆಸರು ರೋಗಾಣು. ನೀರಿನ ಮೂಲಕ ರೋಗಾಣುಗಳು ನಮ್ಮ ಶರೀರವನ್ನು ಪ್ರವೇಶಿಸಿ ಅನೇಕ ರೀತಿಯ ರೋಗಗಳನ್ನು ಹರಡುತ್ತವೆ. ಕುಡಿಯಲು, ಅಡುಗೆ ಮಾಡಲು, ಸ್ನಾನ, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಮನೆ ಒರೆಸಲು, ಕೃಷಿ ಮತ್ತು ಕೈಗಾರಿಕೆಗಳಲ್ಲಿ ನೀರಿನ ಬಹಳ ಅಗತ್ಯವಿದೆ. ಆದರೆ ವಿಭಿನ್ನ ಕಾರಣಗಳಿಂದಾಗಿ ಕುಡಿಯುವ ನೀರಿನ ಬಹಳಷ್ಟು ಆಕರಗಳು ದೊಡ್ಡ ಪ್ರಮಾಣದಲ್ಲಿ ದೂಷಿತಾಗಿವೆ. ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ಕುಡಿಯಲು ಯೋಗ್ಯವಾದ ನೀರಿನ ಮೂಲವಿಲ್ಲ. ಈ ಸಮಸ್ಯೆ ಕೇವಲ ಭಾರತದಲ್ಲಷ್ಟೇ ಅಲ್ಲ, ಇತರ ಅಭಿವೃದ್ಧಿಶೀಲ ದೇಶಗಳಲ್ಲೂ ಇದೆ.

ಅಂಕಿ ಅಂಶಗಳ ಪ್ರಕಾರ ಇಡೀ ವಿಶ್ವದಲ್ಲಿ ಪ್ರತಿವರ್ಷ ಸುಮಾರು 50 ಕೋಟಿ ಜನ ನೀರಿನಿಂದ ಉಂಟಾಗುವ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಪ್ರತಿ ವರ್ಷ 50 ಲಕ್ಷ ಮಕ್ಕಳು 5 ವರ್ಷದೊಳಗೇ ಸಾಯುತ್ತಿದ್ದಾರೆ.

ಪ್ರಸಿದ್ಧ ಜನರಲ್ ಫಿಸಿಶಿಯನ್‌ ಡಾ. ಅಮಿತ್‌ ಕುಡಿಯಲು ಯೋಗ್ಯವಾದ ನೀರಿನ ಬಗ್ಗೆ ವರ್ಣಿಸುತ್ತಾ, ಕುಡಿಯುವ ನೀರು ರೋಗಾಣುಮುಕ್ತವಾಗಿರುವುದು ಬಹಳ ಅಗತ್ಯ. ಅದರಲ್ಲಿ ಹಾನಿಕಾರಕ ರಾಸಾಯನಿಕಗಳು ಇರಬಾರದು. ಬಣ್ಣವಿಲ್ಲದೆ, ರುಚಿಯಿಲ್ಲದೆ ಇದ್ದರೂ ಇದು ತೃಪ್ತಿದಾಯಕವಾಗಿರಬೇಕು. ಆಗಲೇ ಅದು ಕುಡಿಯಲು ಯೋಗ್ಯ ಎನ್ನುತ್ತಾರೆ.

ನೀರಿನಿಂದ ಉಂಟಾಗುವ ಕಾಯಿಲೆಗಳು

ವಿಭಿನ್ನ ರೀತಿಯ ಬ್ಯಾಕ್ಟೀರಿಯಾ, ವೈರಸ್‌ ಮತ್ತು ಪ್ರೋಟೋಜೋಲಾಗಳಿಂದ ವಿವಿಧ ಕಾಯಿಲೆಗಳುಂಟಾಗುತ್ತವೆ. ಉದಾ : ವೈರಸ್‌ ನಿಂದ ಉಂಟಾಗುವ ಕಾಯಿಲೆಗಳಲ್ಲಿ ಅತ್ಯಂತ ಅಪಾಯಕಾರಿಯಾದವು. ಅನೇಕ ರೀತಿಯ ಹೆಪಟೈಟಿಸ್‌ ಮತ್ತು ಪೋಲಿಯೋ ಮೈಲೈಟಿಸ್‌ ಬ್ಯಾಕ್ಟೀರಿಯಾದಿಂದ ಕಾಲರಾ, ಟೈಫಾಯಿಡ್‌, ಪ್ಯಾರಾ ಟೈಫಾಯಿಡ್‌, ಡೀಸೆಂಟ್ರಿ, ಡಯೇರಿಯಾ ಮತ್ತು ಪ್ರೋಟೋಜೋಲಾದಿಂದ ಎಮಿಬಿಯೋಸಿಸ್‌, ಜಿಯಾರ್ಡಿಯಾ, ಕೃಮಿ, ಮಲೇರಿಯಾ, ಫೈಲೇರಿಯಾನಂತಹ ಭಯಂಕರ ಕಾಯಿಲೆಗಳಿವೆ. ಇವುಗಳಲ್ಲಿ ಹೆಚ್ಚಿನ ಕಾಯಿಲೆಗಳು ಒಂದು ಹಂತ ತಲುಪಿದ ನಂತರ ಪ್ರಾಣಾಂತಿಕವಾಗುತ್ತವೆ.

ಇದಲ್ಲದೆ, ನೀರಿನ ವಿಭಿನ್ನ ರಾಸಾಯನಿಕ ಅಂಶಗಳ ಮಿಶ್ರಣದಿಂದಲೂ ಪ್ರಾಣಾಂತಿಕ ಕಾಯಿಲೆಗಳುಂಟಾಗುವ ಸಂಭವವಿರುತ್ತದೆ. ಉದಾಹರಣೆಗೆ ನೈಟ್ರೇಟ್‌ ನಿಂದ ಮಿಥಿಹಿಮೋಗ್ಲೋ ಬಿನಿಮಿಯಾ ಉಂಟಾಗುತ್ತದೆ. ಅದರಿಂದ ರಕ್ತದ ಹಿಮೋಗ್ಲೋಬಿನ್ ಪ್ರಭಾವಿತಾಗುತ್ತದೆ. ವಿಭಿನ್ನ ಬಗೆಯ ಚರ್ಮರೋಗ ಉಂಟು ಮಾಡುವ ಆರ್ಸೆನಿಕ್‌ ಮತ್ತು ಅನೀಮಿಯಾ ಉಂಟಾಗುವ ಸಂಭಾವ್ಯತೆ ಹೆಚ್ಚುತ್ತದೆ. ಕ್ರೋಮಿಯಂನಿಂದ ಕ್ಯಾನ್ಸರ್‌ ಮತ್ತು ಚರ್ಮರೋಗ ಉಂಟಾಗುತ್ತದೆ. ಫ್ಲೋರೈಡ್‌ ನಿಂದ ಹಲ್ಲುಗಳು ಮತ್ತು ಮೂಳೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಕಬ್ಬಿಣದ ಅಂಶ ಅತ್ಯಧಿಕ ಪ್ರಮಾಣದಲ್ಲಿ ಇದ್ದರೆ ಗ್ಯಾಸ್‌ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ.

ನೀರಿನ ಶುದ್ಧೀಕರಣದ ವಿಧಾನ

ನೀರಿನ ಶುದ್ಧೀಕರಣ ಅತ್ಯಂತ ಅಗತ್ಯ. ಆದರೆ ನೀರನ್ನು ಶುದ್ಧಿಗೊಳಿಸಲು ಯಾವ ವಿಧಾನ ಸರಿಯಾದುದು ಎಂಬುದನ್ನು ತಿಳಿಯೋಣ ಬನ್ನಿ.

ಕ್ಲೋರಿನೇಶನ್

ಮುನಿಸಿಪಾಲಿಟಿಯ ನೀರು ಕ್ಲೋರಿನೇಟೆಡ್‌ ಆಗಿರುತ್ತದೆ. ಈ ಪ್ರಕ್ರಿಯೆಯನ್ನು ಕ್ಲೋರಿನೇಶನ್‌ ಎನ್ನುತ್ತಾರೆ. ಪ್ರಯಾಣದಲ್ಲಿ ಒಮ್ಮೊಮ್ಮೆ ನಾವು ಯಾವುದಾದರೂ ಸ್ಟೇಷನ್‌ ನಲ್ಲಿ ನೀರು ಕುಡಿಯಬೇಕಾಗುತ್ತದೆ. ಸ್ಟೇಷನ್ನಿನ ಕುಡಿಯುವ ನೀರಿನಲ್ಲಿ ಕ್ಲೋರಿನ್ ವಾಸನೆ ಇರುತ್ತದೆ. ಕ್ಲೋರಿನ್‌ ಹಾನಿಕಾರಕವಾಗಿದೆ. ಇದರಿಂದ ಲಿವರ್‌ ಮತ್ತು ಕಿಡ್ನಿ ಹಾಳಾಗುತ್ತವೆ. ವಿಶ್ವ ಆರೋಗ್ಯ ಸಂಸ್ಥೆ 1 ಲೀಟರ್‌ ನೀರಿನಲ್ಲಿ ಕೇವಲ 2 ಮಿ.ಗ್ರಾಂ ಕ್ಲೋರಿನ್‌ ಪ್ರಮಾಣ ಇರಬೇಕೆಂದು ಹೇಳುತ್ತದೆ. ಕ್ಲೋರಿನ್‌ ಸೇರಿಸಿದ ಅರ್ಧ ಗಂಟೆ ಬಿಟ್ಟ ಮೇಲೆಯೇ ನೀರು ಕುಡಿಯಲು ಯೋಗ್ಯವಾಗಿರುತ್ತದೆ, ಎಂದು ಡಾ. ಅಮಿತ್‌ ಹೇಳುತ್ತಾರೆ.

ಕ್ಲೋರಿನ್‌ ನೀರಿನೊಂದಿಗೆ ಬೆರೆತು ಹೈಪೋಕ್ಲೋರಸ್‌ ಆ್ಯಸಿಡ್‌ ಮತ್ತು ಹೈಪೋಕ್ಲೋರೈಡ್‌ ತಯಾರಾಗುತ್ತದೆ. ಈ ಹೈಪ್ಲೋಕ್ಲೋರೈಡ್‌ ನೀರಿನಲ್ಲಿರುವ ರೋಗಾಣುಗಳನ್ನು ನಾಶಗೊಳಿಸುತ್ತದೆ. ಹೀಗಾಗಿ ಕ್ಲೋರಿನ್‌ ಗೆ ತನ್ನ ಕೆಲಸ ಮಾಡಲು ಅರ್ಧ ಗಂಟೆ ಬಿಡಬೇಕು.

ಮಾರುಕಟ್ಟೆಯಲ್ಲಿ ಜಿಯೋಲಿನ್‌ ಹೆಸರಿನ ವಾಟರ್‌ ಪ್ಯೂರಿಫೈಯರ್‌ ಸಿಗುತ್ತಿದ್ದು ಅದರಲ್ಲಿ ಕ್ಲೋರಿನ್‌ ಸೋಡಿಯಂ ಹೈಪೋಕ್ಲೋರೈಡ್ ಇರುತ್ತದೆ. 1 ಗ್ಲಾಸ್‌ ನೀರಿನಲ್ಲಿ 3-4 ತೊಟ್ಟು ಜಿಯೋಲಿನ್‌ ರೋಗಾಣುಗಳನ್ನು ಕೊಲ್ಲಲು ಸಾಕಾಗುತ್ತದೆ. ಆದರೆ ಡಾ. ಅಮಿತ್‌ ಹೇಳುವುದು ಕ್ಲೋರಿನ್‌ ಎಲ್ಲ ರೀತಿಯ ರೋಗಾಣುಗಳನ್ನು ಕೊಲ್ಲಲು ಸಮರ್ಥವಲ್ಲ. ಕ್ರಿಮಿಗಳ ಮೊಟ್ಟೆಗಳು, ಜಿಯಾರ್ಡಿಯರ್‌ ರೋಗಾಣುಗಳು ಬ್ಯಾಕ್ಟೀರಿಯಾ ಬೀಜಕಣದ ಸ್ಥಿತಿಯಲ್ಲಿದ್ದರೆ ಕ್ಲೋರಿನ್‌ ಸಮರ್ಥವಲ್ಲ.

ವಾಟರ್ಫಿಲ್ಟರ್

ಮಾರುಕಟ್ಟೆಯಲ್ಲಿಂದು ಅನೇಕ ರೀತಿಯ ವಾಟರ್‌ ಫಿಲ್ಟರ್‌ ಗಳು ಸಿಗುತ್ತವೆ. ಇವು ಫಿಲ್ಟರ್‌ ನೀರಿನಲ್ಲಿ ಮಿಶ್ರವಾಗಿರುವ ಹೆವಿ ಪಾರ್ಟಿಕಲ್ಸ್ ನ್ನು ಬೇರೆ ಬೇರೆ ಮಾಡುವಲ್ಲಿ ಸಮರ್ಥವಾಗಿವೆ. ಆದರೆ ರೋಗಾಣುಗಳೊಂದಿಗೆ ಹೋರಾಡಲು ಸಮರ್ಥವಲ್ಲ. ಒಂದುವೇಳೆ ಯಾವುದಾದರೂ ಉನ್ನತವಾದ ಯಂತ್ರದೊಂದಿಗೆ ಕಾರ್ಬನ್‌ ಫಿಲ್ಟರ್‌ ಹಾಕಿದ್ದರೆ ಇದು ಸಾಧ್ಯವಾಗುತ್ತದೆ. ಹೆವಿ ಪಾರ್ಟಿಕಲ್ಸ್ ಬೇರೆ ಮಾಡಿದ ನಂತರ ರೋಗಾಣುಗಳನ್ನು ನಾಶಪಡಿಸಲು ಇದರಲ್ಲಿ ಅಲ್ಚ್ರಾವೈಯ್ಲೆಟ್‌ ರೇಡಿಯೇಶನ್ ವ್ಯವಸ್ಥೆ ಮಾಡಿದರೆ ಒಳ್ಳೆಯದು.

ಮಿನರಲ್ ವಾಟರ್

ಮಿನರಲ್ ವಾಟರ್‌ ಹೆಸರಿನಲ್ಲಿ ಬಹಳ ಮೋಸಗಳಾಗುತ್ತಿವೆ. ಇದು ಯಾರಿಗೂ ಗೊತ್ತಿಲ್ಲದ ವಿಷಯವೇನಲ್ಲ. ನಿಜವಾದ ಅರ್ಥದಲ್ಲಿ ಪ್ರಾಕೃತಿಕ ವಾಟರ್‌ ಎಂದರೆ ಪ್ರಾಕೃತಿಕ ಝರಿ ಅಂದರೆ ಸ್ಪ್ರಿಂಗ್‌ ವಾಟರ್‌. ಇದರಲ್ಲಿ  ಮಾತ್ರ ಪ್ರಾಕೃತಿಕ ರೂಪದಲ್ಲಿ ವಿಭಿನ್ನ ರೀತಿಯ ಖನಿಜ, ಲವಣ ಬೆರೆತಿರುತ್ತವೆ. ವಿದೇಶಗಳಲ್ಲಿ ಮಿನರಲ್ ವಾಟರ್‌ ಬಾಟಲ್ ನಲ್ಲಿ ಝರಿಯ ನೀರೆಂದು ಸ್ಪಷ್ಟವಾಗಿ ತಿಳಿಸಿರುತ್ತಾರೆ. ಇಲ್ಲಿ ಅದರ ಬಗ್ಗೆ ವಿಶ್ವಾಸವಿಡುವುದೇ ವ್ಯರ್ಥ. ಏಕೆಂದರೆ ಸರ್ಕಾರವಾಗಲೀ, ಜನರಾಗಲೀ ಅಷ್ಟು ಜಾಗರೂಕರಾಗಿಲ್ಲ. ಪ್ರತಿ ಕಂಪನಿಗಳೂ ತಮ್ಮ ಲೇಬ್‌ ನಲ್ಲಿ ನೀರನ್ನು ಎಲ್ಲಿಂದ ತೆಗೆದುಕೊಳ್ಳಲಾಗಿದೆ, ಯಾವ ವಿಧಾನದಿಂದ     ಶುದ್ಧೀಕರಿಸಲಾಗಿದೆ ಎಂಬ ವಿಷಯದೊಂದಿಗೆ ಯಾವ ಖನಿಜ ಲವಣ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನೂ ತಿಳಿಸಬೇಕು.

ಸಾಫ್ಟ್ ಡ್ರಿಂಕ್ಸ್

ಸಾಮಾನ್ಯವಾಗಿ ನಮ್ಮಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ಬಹಳಷ್ಟು ಜನ ಸಾಫ್ಟ್ ಡ್ರಿಂಕ್ಸ್ ತೆಗೆದುಕೊಳ್ಳುತ್ತಾರೆ. ನಲ್ಲಿಯ ನೀರಿಗಿಂತ ಇದು ಅತ್ಯಂತ ಹೆಚ್ಚು ಸುರಕ್ಷಿತ ಎಂದು ಅವರು ತಿಳಿದಿದ್ದಾರೆ. ಆದರೆ ಅದು ತಪ್ಪು. ಅನೇಕ ಸಂಶೋಧನಾ ಸಂಸ್ಥೆಗಳು ಹೆಸರಾಂತ ಕಂಪನಿಗಳ ಸಾಫ್ಟ್ ಡ್ರಿಂಕ್ಸ್ ನ್ನು ಪರೀಕ್ಷಿಸಿ ಅದರ ಗುಣಮಟ್ಟದ ಬಗ್ಗೆ ಆಗಾಗ್ಗೆ ವರದಿ ಮಾಡುತ್ತಿವೆ.

ಸಾಫ್ಟ್ ಡ್ರಿಂಕ್ಸ್ ನಲ್ಲಿ ಶೇ.95ರಷ್ಟು ನೀರು ಮತ್ತು ಶೇ.5ರಷ್ಟು ಸಕ್ಕರೆಯೊಂದಿಗೆ ಕಾರ್ಬನ್‌ ಡೈ ಆಕ್ಸೈಡ್‌ ಇರುತ್ತದೆ. ಇದಲ್ಲದೆ ಹುಳಿಗಾಗಿ ಸಿಟ್ರಿಕ್‌ ಆ್ಯಸಿಡ್‌ ಸೇರಿಸಲಾಗುತ್ತದೆ. ರುಚಿಗಾಗಿ ಫಾಸ್ಛಾರಿಕ್‌ ಆ್ಯಸಿಡ್‌, ಹೈಡ್ರೋಕ್ಲೋರಿಕ್‌ ಆ್ಯಸಿಡ್‌, ಸೋಡಿಯಂ ಮತ್ತು ಪೊಟ್ಯಾಶಿಯಂ ಕ್ಲೋರೈಡ್‌ ಸೇರಿಸಲಾಗುತ್ತದೆ. ಜೊತೆಗೆ ಸುಗಂಧ ಮತ್ತು ಬಣ್ಣವನ್ನೂ ಹಾಕಲಾಗುತ್ತದೆ. ಕೆಲವು ಕಂಪನಿಗಳು ಕ್ಲೋರಿನ್‌ ಹಾಗೂ ಬ್ರೋಮೀನ್‌ ಯುಕ್ತ ವಿವಿಧ ರಾಸಾಯನಿಕಗಳನ್ನು ಸೇರಿಸುತ್ತವೆ. ಇವೆಲ್ಲ ಆರೋಗ್ಯಕ್ಕೆ ಹಾನಿಕಾರಕಾಗಿವೆ.

ಮಂಜಿನ ಉಂಡೆಗಳು

ಬೇಸಿಗೆಯ ಬಿಸಿಯಿಂದ ಪಾರಾಗಲು ಜನ ಮಂಜಿನ ಉಂಡೆಗಳಿಗೆ ಶರಣಾಗುತ್ತಾರೆ. ವಿಶೇಷವಾಗಿ ಶಾಲಾ ಮಕ್ಕಳು. ಮಂಜಿನ ಉಂಡೆಗಳಲ್ಲಿ ವಿಭಿನ್ನ ಬಣ್ಣಗಳಿಂದ ತಯಾರಿಸಿದ ಶರಬತ್‌ ಸೇರಿಸಲಾಗುತ್ತದೆ. ಅವುಗಳಲ್ಲಿ ಬೆರೆಸಿರು ಬಣ್ಣಗಳು ನಿಷೇಧಿತ ಬಣ್ಣಗಳಾಗಿವೆ. ಉದಾಹರಣೆಗೆ ಕೆಂಪು ಬಣ್ಣಕ್ಕೆ ಕಾಂಗೋ ರೆಡ್‌, ರೋಡ್‌ ಮಿನ್‌ ಬೀ, ಹಸಿರು ಬಣ್ಣಕ್ಕೆ ಡೈಮಂಡ್‌ ಗ್ರೀನ್‌. ಈ ಬಣ್ಣಗಳ ಪ್ರತಿಕ್ರಿಯೆಯಿಂದ ಹೊಟ್ಟೆನೋವು, ವಾಕರಿಕೆ, ಹಸಿವಾಗದಿರುವುದು ಉಂಟಾಗುತ್ತದೆ. ಮಂಜಿನ ಉಂಡೆಗಳನ್ನು ಬಹಳ ಕಾಲ ಉಪಯೋಗಿಸಿದರೆ ಕಿಡ್ನಿ, ಲಿವರ್‌, ಸ್ನಾಯುರೋಗ, ಅನೀಮಿಯಾ ಇತ್ಯಾದಿ ಉಂಟಾಗುತ್ತದೆ.

ಕುದಿಸಿದ ನೀರು

ಹಾಗಾದರೆ ಸುರಕ್ಷಿತ ನೀರು ಹೇಗೆ ಸಿಗುತ್ತದೆ? ಡಾ. ಅಮಿತ್‌ ಹೇಳುವಂತೆ ಹಿಂದಿನ ಕಾಲದಲ್ಲಿ ಕುದಿಸಿದ ನೀರು ಅತ್ಯಂತ ಸುರಕ್ಷಿತವೆಂದು ತಿಳಿಯಾಗಿತ್ತು. ಅದೇ ವಾಸ್ತವ. ಈಗ ಬಹಳಷ್ಟು ಕಂಪನಿಗಳು ತಮ್ಮ ವಾಟರ್‌ ಫಿಲ್ಟರ್‌ ನೀರಿನ ಹೋಲಿಕೆಯನ್ನು ಕುದಿಸಿದ ನೀರಿನೊಂದಿಗೆ ಮಾಡುತ್ತಾರೆ. ಇದರಲ್ಲಿ ಇಂಧನದ ಖರ್ಚು ಹೆಚ್ಚಾದರೂ ಆರೋಗ್ಯದ ದೃಷ್ಟಿಯಿಂದ ಹೆಚ್ಚೇನಲ್ಲ.

ಡಾ. ಅಮಿತ್‌ಹೇಳುವಂತೆ ಕುದಿಸಿದ ನೀರಿನ ಸಾಮಾನ್ಯ ಅರ್ಥ ಬರೀ ನೀರನ್ನು ಕುದಿಸುವುದಲ್ಲ. ನೀರನ್ನು ಶುದ್ಧಗೊಳಿಸಲು ವಿಶೇಷ ರೀತಿಯಲ್ಲಿ ಕುದಿಸಬೇಕಾಗುತ್ತದೆ. ನೀರನ್ನು ಕುದಿಸುವಾಗ ಗುಳ್ಳೆಗಳು ಉಂಟಾದ ಮೇಲೆ ಮತ್ತೆ  20 ನಿಮಿಷಗಳವರೆಗೆ ನೀರು ಕುದಿಸಬೇಕು. ನಂತರ ಆ ನೀರನ್ನು ತಣ್ಣಗೆ ಮಾಡಿ ಶೋಧಿಸಿದರೆ ಅದು ಶುದ್ಧ ನೀರು ಎಂದರ್ಥ. ಆ ನೀರು ಎಲ್ಲ ರೀತಿಯ ರೋಗಾಣುಗಳಿಂದ ಸುರಕ್ಷಿತವಾಗಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ನೀರನ್ನು ಕುಡಿಯುವ ಬದಲು ಮನೆಯ ನೀರನ್ನು ತೆಗೆದುಕೊಂಡು ಹೋಗುವುದು ಹೆಚ್ಚು ಸುರಕ್ಷಿತ.

ಶ್ಯಾಮಲಾ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ