ಚಿಕ್ಕ ಪುಟ್ಟ ವಯಸ್ಸಿನಲ್ಲಿ ಮಕ್ಕಳು ಮೈ ಕೈ ತುಂಬಿಕೊಂಡು ದುಂಡಗಿದ್ದರೆ, ನೋಡಲು ಬಲು ಸೊಗಸು, ಎಲ್ಲರೂ ಎತ್ತಿ ಮುದ್ದಾಡುವವರೇ! ಆದೇ ಪುಟಾಣಿಗಳು ಬೆಳೆದಂತೆಲ್ಲ ಸ್ಥೂಲತೆ ಮೈಗೂಡಿಸಿಕೊಂಡರೆ ಅದು ಖಂಡಿತಾ ಆರೋಗ್ಯಕರ ಲಕ್ಷಣವಲ್ಲ. ಬನ್ನಿ, ಮಕ್ಕಳಲ್ಲಿನ ಸ್ಥೂಲಕಾಯತೆಯ ನಿವಾರಣೆ ಹೇಗೆ ಸಾಧ್ಯವೆಂದು ವಿವರವಾಗಿ ತಿಳಿಯೋಣ.

ತೀರ ಹಿಂದುಳಿದ ರಾಷ್ಟ್ರಗಳ ಅಪೌಷ್ಟಿಕ ಮಕ್ಕಳ ಯಾತನೆ ಒಂದೆಡೆ. ಇನ್ನು, ಅಭಿವೃದ್ಧಿಶೀಲ ದೇಶದಳಲ್ಲಿ ಅತೀ ಪೌಷ್ಟಿಕತೆಯ ಫಲವಾಗಿ ಸ್ಥೂಲಕಾಯತೆಯಂತಹ ಶಿಕ್ಷೆಗೆ ಗುರಿಯಾದ ಮಕ್ಕಳ ಸಂಕಷ್ಟ ಮತ್ತೊಂದೆಡೆ. ಈ ಎರಡೂ ಮಕ್ಕಳ ಆರ್ಥಿಕ ಸಾಮಾಜಿಕ ಸ್ಥಿತಿ ಬೇರೆ ಇದ್ದರೂ, ನೋವು ಕಷ್ಟ ಭಿನ್ನವಾಗಿದ್ದರೂ ಸಮಸ್ಯೆ ಒಂದೇ. ಎರಡೂ ಪುಟ್ಟ ಹೃದಯಗಳದೂ ಸಮಾನ ವೇದನೆ. ನಾವೀಗ ಈ ಎರಡನೇ ಸಾಲಿಗೆ ಸೇರುವ ಮಕ್ಕಳ ಯಾತನೆಯ ಬಗ್ಗೆ ಗಮನಹರಿಸೋಣ.

ಮಮತಾ ತಮ್ಮ ಮಗ ಅಮಿತ್‌ ಜೊತೆ ಆಸ್ಪತ್ರೆಗೆ ಬಂದಾಗ ತೀವ್ರ ಬೇಸರದಲ್ಲಿದ್ದರು. ಹುಡುಗ ಹೆಚ್ಚು ತೂಕ ಹೊಂದಿದ್ದಾನೆ ಎನ್ನುವುದಷ್ಟೇ ಅವರ ಸಮಸ್ಯೆ ಆಗಿರಲಿಲ್ಲ. ಏಕೆಂದರೆ ಅವರ ಅಜ್ಜಿ ಅಮ್ಮ ಕೂಡ ದುಂಡು ಮೈ ಹೊಂದಿದ್ದರು. ಮಮತಾ ಕೂಡ ಅತೀ ತೂಕದ ಮಹಿಳೆಯೇ.  ಆದರೆ ಅದು ಅವರ ಮನೆತನದ ದೈಹಿಕ ಲಕ್ಷಣ ಎಂದು ಅವರು ನಂಬಿಕೊಂಡು ಬಂದಿದ್ದರು. ಅದೊಂದು ಸಮಸ್ಯೆ ಎಂದು ಅವರಿಗೆ ಯಾವತ್ತೂ ಅನಿಸಿರಲಿಲ್ಲ. ಮಗ ಅಮಿತ್‌ ತಾನು ಶಾಲೆಗೆ ಹೋಗುವುದಿಲ್ಲ ಎಂದು ಹಟ ಮಾಡಿದಾಗಲೇ ಅವರಿಗೆ ಬೊಜ್ಜಿನ ತೀವ್ರತೆಯ ಅರಿವಾದುದು. ಅಮಿತ್‌ ನನ್ನು ಕರೆದು ಕಾರಣ ಕೇಳಿದಾಗ, ಆತ ತನ್ನ ಸಮಸ್ಯೆಗಳನ್ನು ಒಂದೊಂದಾಗಿ ಬಿಚ್ಚಿಡುತ್ತ ಹೋದ. ಶಾಲೆಯ ಮಕ್ಕಳೆಲ್ಲ ಆಟೋಟಗಳಲ್ಲಿ ಭಾಗಿಯಾದರೆ ಇವನು ಮಾತ್ರ ಯಾವುದೊ ಒಂದು ಮೂಲೆಯಲ್ಲಿ  ಕುಳಿತುಬಿಡುತ್ತಾನೆ, ಏಕೆಂದರೆ ಅವರಂತೆ ಓಡಾಡಲು ಅವನಿಂದ ಸಾಧ್ಯವಾಗುವುದಿಲ್ಲ. ಶಾಲೆಯಲ್ಲಿ ಕುಳಿತುಕೊಳ್ಳುವಾಗ, ವ್ಯಾನ್‌ ನಲ್ಲಿ ಓಡಾಡುವಾಗ ಯಾವತ್ತೂ ಅವನಿಗೆ ಕೊನೆಯ ಆಸನವೇ. ಅವನ ಪಕ್ಕದಲ್ಲಿ ಕುಳಿತುಕೊಳ್ಳಲು ಯಾರೂ ಬರುವುದಿಲ್ಲ. ತನ್ನ ವಯಸ್ಸಿನ ಹುಡುಗರಿಗಿಂತ ಆತ ದೊಡ್ಡವನಂತೆ ಕಾಣುತ್ತಾನೆ. ಆದ್ದರಿಂದ ಎಲ್ಲರೂ ಡುಮ್ಮಣ್ಣ ಎಂದು ರೇಗಿಸುತ್ತಾರೆ. ಇದೆಲ್ಲದರ ಪರಿಣಾಮ ಆತ ಶಾಲೆಗೆ ಹೋಗಲು ನಿರಾಕರಿಸಲು ಆರಂಭಿಸಿದ್ದ.

ಅಮಿತ್‌ ಮೊದಲು ತನ್ನ ದೇಹವನ್ನು ತಾನು ಒಪ್ಪಿಕೊಳ್ಳುವಂತೆ ಮಾಡಲು ಒಂದು ತಿಂಗಳು ಬೇಕಾಯ್ತು. ನಿಮಗೆ ಗೊತ್ತಿರಲಿ, ಮಕ್ಕಳ ಸ್ಥೂಲಕಾಯ ಸಮಸ್ಯೆಗೆ ಸದ್ಯಕ್ಕೆ ಅಂತಹ ಯಾವುದೇ ಚಿಕಿತ್ಸೆ ಇಲ್ಲ. ಸಿಬುಟ್ರಮೈನ್‌ ಮತ್ತು ಓರ್ಲಿಸ್ಟಾಟ್‌ ಎಂಬ ಚಿಕಿತ್ಸೆಗಳಿವೆಯಾದರೂ ಅವೇನಿದ್ದರೂ ಕೊನೆಯ ಹಂತದ ಮಾರ್ಗೋಪಾಯಗಳಷ್ಟೆ. ಆದರೆ ಅದಕ್ಕೂ ಮೊದಲು ಜೀವನ ಶೈಲಿಯಲ್ಲಿ ಬದಲಾವಣೆ ಹಾಗೂ ಆಹಾರ ವ್ಯಾಯಾಮದಿಂದಲೇ ಅದನ್ನು ನಿರ್ವಹಿಸಬೇಕು ಎಂಬುದು ಯಾವುದೇ ವೈದ್ಯರ ಪ್ರಥಮ ಗುರಿಯಾಗಿರುತ್ತದೆ. ಒಂದು ವರ್ಷದ ಅವಧಿಯಲ್ಲಿ ಅಮಿತ್‌ ತನ್ನ ಮಟ್ಟಿಗೆ ದೇಹಭಾರವನ್ನೂ ಇಳಿಸಿಕೊಂಡಿದ್ದಾನೆ. ಈಗ ಅವನ ಮುಖದ ಮೇಲೆ ಗೆಲುವಿನ ನಗೆ!

ಮಕ್ಕಳಲ್ಲಿ ಸ್ಥೂಲಕಾಯವೇ?

ಮಗುವಿನ ವಯಸ್ಸು, ಲಿಂಗ, ಎತ್ತರ ಮತ್ತು ತೂಕದ ಆಧಾರದ ಮೇಲೆ ನಿರ್ಧರಿಸಲಾಗಿರುವ ನಿರ್ದಿಷ್ಟ ತೂಕಕ್ಕಿಂತ ಶೇ.20 ರಷ್ಟು ಹೆಚ್ಚು ತೂಕವಿದ್ದರೆ ಅದನ್ನು ಸ್ಥೂಲಕಾಯತೆ ಎನ್ನಲಾಗುತ್ತದೆ. ಇದೊಂದು ಗಂಭೀರ ಆರೋಗ್ಯ ಸಮಸ್ಯೆ ಎಂದು ಗುರುತಿಸಲಾಗಿದ್ದು, ಭಾರತದಲ್ಲಿ ಶೇ.16ರಷ್ಟು ಮಕ್ಕಳು ಬೊಜ್ಜು ಹೊಂದಿದ್ದಾರೆ. ಇವನ್ನು ಶೇ.31ರಷ್ಟು ಮಕ್ಕಳು ಈ ಸಾಲಿಗೆ ಸೇರುವ ಅಪಾಯದಲ್ಲಿದ್ದಾರೆ. ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಮಕ್ಕಳು ಅತೀ ಪೌಷ್ಟಿಕತೆಯಿಂದ ಸಂಕಷ್ಟಕ್ಕೆ ಗುರಿಯಾಗುತ್ತಿರುವುದು ಹೆಚ್ಚು ಕಂಡಬರುತ್ತಿದೆ. ದೇಹದಲ್ಲಿ ಅನಾವಶ್ಯಕ ಕೊಬ್ಬು ಶೇಖರಣೆಗೊಂಡು ಸ್ಥೂಲಕಾಯತೆ ಹಾಗೂ ಅದಕ್ಕೆ ಸಂಬಂಧಿಸಿದ ರೋಗಗಳಿಗೆ ಒಳಗಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ವರದಿಯಾಗುತ್ತಿದೆ.

ಇದಕ್ಕೆ ಕಾರಣಗಳೇನು?

makkalalli-sthoolakayathe-1

ಕ್ಯಾಲೋರಿ ಅಸಮತೋಲನದ ಪರಿಣಾಮವೇ ಸ್ಥೂಲಕಾಯತೆ. ಮಕ್ಕಳ ಸ್ಥೂಲಕಾಯತೆ ಒಂದು ಜಾಗತಿಕ ಸಮಸ್ಯೆಯಾಗಿ ಬೆಳೆಯುತ್ತಿರುವುದೇನೋ ನಿಜ. ಆದರೆ ಇದಕ್ಕೆ ನಿರ್ದಿಷ್ಟ ಕಾರಣವನ್ನು ಪತ್ತೆಹಚ್ಚುವುದು ಕಷ್ಟ. ಆದರೂ ಈ ಕೆಳಗಿನ ಕೆಲವು ಕಾರಣಗಳನ್ನು ಗುರುತಿಸಲಾಗಿದೆ :

ಆಹಾರ ಕ್ರಮ

ಅಸಮತೋಲಿತ ಆಹಾರ ಪದ್ಧತಿಯೇ ಪ್ರಮುಖ ಕಾರಣ ಎಂದು ಹೇಳಬಹುದು. ನವಯುಗದ ಪಾಲಕರಿಗೆ ಅದರಲ್ಲೂ ತಾಯಿಗೆ ಮಕ್ಕಳ ಊಟ ಉಪಚಾರದ ಬಗ್ಗೆ ಗಮನಹರಿಸಲು ಸಾಧ್ಯವಾಗದೇ ಇರುವುದು, ಶಾಲಾ ಆವರಣದ ಹತ್ತಿರ ಫಾಸ್ಟ್ ಫುಡ್‌, ಜಂಕ್ ಫುಡ್‌ಗಳ ಸುಲಭ ಲಭ್ಯತೆ ಹಾಗೂ ಸರಳವಾಗಿ ಅವುಗಳನ್ನು ಖರೀದಿಸಿ ತಿನ್ನುವ ಆರ್ಥಿಕ ಸೌಲಭ್ಯ ಇದಕ್ಕೆ ಮುಖ್ಯ ಕಾರಣ.

ಕೊಬ್ಬಿನ ಅಂಶವಿರು ವಆಹಾರ ಸೇವನೆ ಬೆಣ್ಣೆ, ತುಪ್ಪ ಇತ್ಯಾದಿ ಹೆಚ್ಚು ಕ್ಯಾಲೋರಿ ಇರುವ ಆಹಾರ ಪಾನೀಯಗಳು ಸಕ್ಕರೆ ಅಂಶವಿರುವ ಲಘು ಪಾನೀಯಗಳ ಸೇವನೆ (ಪೆಪ್ಸಿ, ಕೋಲಾ ಇತ್ಯಾದಿ)

ಜಂಕ್‌ ಫುಡ್‌, ಫಾಸ್ಟ್ ಫುಡ್‌ (ಸಮೋಸಾ, ಚಿಪ್ಸ್, ಪಿಜ್ಜಾ, ಬರ್ಗರ್‌ ಇತ್ಯಾದಿ) ದೈಹಿಕ ಶ್ರಮದ ಕೊರತೆ ಮಕ್ಕಳ ಬೊಜ್ಜಿಗೆ ಮತ್ತೊಂದು ಪರಿಣಾಮಕಾರಿ ಪಾತ್ರ ವಹಿಸುವುದು ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯ ಕೊರತೆ.

ಆಧುನಿಕ ಯುಗದ ಮಕ್ಕಳ ಬಹುದೊಡ್ಡ ಸವಾಲು ಎಂದರೆ ಕಡಿಮೆ ದೈಹಿಕ ಶ್ರಮ ಹಾಗೂ ಹೆಚ್ಚು ಮಾನಸಿಕ ಶ್ರಮ. ಪಠ್ಯ ಚಟುವಟಿಕೆ ಬಿಟ್ಟರೆ ಬಹುತೇಕ ಸಮಯವನ್ನು ಟಿವಿ ಅಥವಾ ಕಂಪ್ಯೂಟರ್‌ ಜೊತೆಗೆ ಕಳೆಯುವ ಮಕ್ಕಳು, ದೈಹಿಕ ಶ್ರಮ ಅಗತ್ಯವಿರುವ ಆಟೋಟಗಳಲ್ಲಿ ಭಾಗವಹಿಸುವುದಿಲ್ಲ. ಇದು ಮಕ್ಕಳಲ್ಲಿ ಬೊಜ್ಜು ಸಮಸ್ಯೆ ಹೆಚ್ಚಲು ತನ್ನದೇ ಆದ ಕೊಡುಗೆ ನೀಡುತ್ತದೆ ಎಂದು ಹೇಳಬಹುದು. ಹೊರಗಿನ ಆಟಗಳಲ್ಲಿ ತೊಡಗಿಕೊಳ್ಳಲು ಹೆಚ್ಚಿನ ಮಕ್ಕಳಿಗೆ ಇಚ್ಛೆ ಇರುತ್ತದೆ. ಆದರೂ ಶಿಕ್ಷಕರು, ಪಾಲಕರು ಅದಕ್ಕೆ ಸೂಕ್ತ ಸಂದರ್ಭ ಹಾಗೂ ಅನುಕೂಲವನ್ನು ಒದಗಿಸಿಕೊಡುವುದಿಲ್ಲ.

ಅನುವಂಶೀಯತೆ

ಅನುವಂಶೀಯತೆ (ಹೆರಿಡಿಟಿ) ಮತ್ತೊಂದು ಕಾರಣ. ಪಾಲಕರು ಹಾಗೂ ಹಿರಿಯರು ಸ್ಥೂಲಕಾಯತೆ ಹೊಂದಿದ್ದರೆ ಅಂತಹ ಕುಟುಂಬದ ಮಕ್ಕಳೂ ಬೊಜ್ಜು ಮೈ ಹೊಂದುವುದು ಸಾಮಾನ್ಯ.

ವೈದ್ಯಕೀಯ ಕಾರಣಗಳು

ಕೆಲವು ಪ್ರಕಾರಗಳ ಔಷಧ ಅಥವಾ ಚಿಕಿತ್ಸೆಗಳಿಂದಲೂ ಮಕ್ಕಳ ತೂಕ ಹೆಚ್ಚಬಹುದು. ಅಲ್ಲದೇ, ಹಾರ್ಮೋನ್‌ ವ್ಯತ್ಯಾಸದಿಂದಲೂ ಸ್ಥೂಲಕಾಯತೆ ಉಂಟಾಗುತ್ತದೆ. ಕಷಿಂಗ್‌ ಸಿಂಡ್ರೋಮ್ ಹಾಗೂ ಹೈಪೊಥೈರಾಯ್ಡ್ ಮಕ್ಕಳ ಸ್ಥೂಲಕಾಯತೆಗೆ ಕಾರಣ ಎನ್ನಲಾಗುತ್ತದೆ.

ಮಾನಸಿಕ ಕಾರಣಗಳು

`ಖಿನ್ನತೆ ಮೊದಲಾ, ಸ್ಥೂಲಕಾಯತೆ ಮೊದಲಾ?’ ಎನ್ನುವುದು ವಿವರಣೆಗೆ ನಿಲುಕದ ಪ್ರಶ್ನೆ. ಕೆಲವು ಸಂದರ್ಭಗಳಲ್ಲಿ ಸ್ಥೂಲಕಾಯತೆ ಹೊಂದಿದ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಇನ್ನೂ ಕೆಲವು ಪ್ರಕರಣಗಳಲ್ಲಿ ಖಿನ್ನತೆಯಿಂದಾಗಿ ಅತೀ ಹೆಚ್ಚು ತಿನ್ನುವ ಹವ್ಯಾಸಕ್ಕೆ ಬಿದ್ದ ಮಕ್ಕಳು ಸ್ಥೂಲಕಾಯತೆಯನ್ನು ಬರಮಾಡಿಕೊಳ್ಳುತ್ತಾರೆ. ಸ್ಥೂಲಕಾಯತೆಯಿಂದ ಆತ್ಮವಿಶ್ವಾಸ ಕಳೆದುಕೊಳ್ಳುವ ಶೇ.19ರಷ್ಟು ಮಕ್ಕಳು ಸದಾ ದುಃಖದಲ್ಲಿರುತ್ತಾರೆ. ಶೇ.48ರಷ್ಟು ಮಕ್ಕಳು ಸದಾ ಬೇಸರದಲ್ಲಿದ್ದರೆ, ಶೇ.21 ಜನ ಅಸ್ಥಿರತೆ, ಅಧೈರ್ಯದಲ್ಲಿರುತ್ತಾರೆ. ಬೊಜ್ಜು ದೇಹದ ಮಕ್ಕಳು ಖಿನ್ನತೆ ಕೀಳರಿಮೆಯಂತಹ ಮಾನಸಿಕ ತೊಳಲಾಟಕ್ಕೂ ಗುರಿಯಾಗುತ್ತಾರೆ ಎಂದು ಅನೇಕ ಸಂಶೋಧನೆಗಳಿಂದ ತಿಳಿದುಬರುತ್ತದೆ. ಮಕ್ಕಳಲ್ಲಿ ಅವರ ದೇಹದ ಬಗ್ಗೆ ಗುಣಾತ್ಮಕ ಮನೋಭಾವವನ್ನು ಬೆಳೆಸುವ ಜೊತೆಗೆ ಅವರ ದೇಹದ ತೂಕವನ್ನು ಕಡಿಮೆ ಮಾಡಲು ಪಾಲಕರು ಶ್ರಮಿಸಬೇಕಾಗುತ್ತದೆ.

ಸ್ಥೂಲಕಾಯದೊಂದಿಗೆ ಬರುವ ದೈಹಿಕ ಸಮಸ್ಯೆಗಳು

makkalalli-sthoolakayathe-2

ಸ್ಥೂಲಕಾಯ ಮಕ್ಕಳನ್ನು ಮೂರು ತಿಂಗಳಲ್ಲಿಯೇ ಗುರುತಿಸಬಹುದು. ಎರಡು ವರ್ಷಗಳ ನಂತರ ಅಂತೂ ಅವರ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬರುವುದರಿಂದ ಕನಿಷ್ಠ ಆನಂತರವಾದರೂ ಈ ಬಗ್ಗೆ ಪಾಲಕರು ಗಮನಹರಿಸಲೇಬೇಕು.

ಹೃದಯ ಸಮಸ್ಯೆ

ಅಧಿಕ ರಕ್ತದೊತ್ತಡ

ಕೆಟ್ಟ ಕೊಲೆಸ್ಟ್ರಾಲ್

ಉಸಿರಾಟದ ತೊಂದರೆ

ಪಿತ್ತಕೋಶ ಸಮಸ್ಯೆ

ಕರುಳು ಕ್ಯಾನ್ಸರ್‌

ಮೂತ್ರಪಿಂಡಗಳ ಅಥವಾ ಅದಕ್ಕೆ ಸಂಬಂಧಿಸಿದ ಸಮಸ್ಯೆ

ದೃಷ್ಟಿಗೆ ಸಂಬಂಧಿಸಿದ ಕಾಯಿಲೆ

ಅಸ್ಥಿ ಸಂಧಿವಾತ ಇತ್ಯಾದಿ

ಮೂಳೆಗಳ ಸಮಸ್ಯೆ (ಚಪ್ಪಟೆ ಕಾಲು, ಮೊಳಕಾಲು ನೋವು)

ಶಿಲೀಂದ್ರ ಸೋಂಕು ಹೆಚ್ಚು ಅಪಾಯ

ಪರಿಹಾರ ಮಾರ್ಗ

ಮಕ್ಕಳ ಸ್ಥೂಲಕಾಯತೆಯನ್ನು ನಿರ್ವಹಿಸಲು ಪ್ರಸ್ತುತ ಪರಿಣಾಮಕಾರಿ ಔಷಧ ಅಥವಾ ಶಸ್ತ್ರಚಿಕಿತ್ಸೆಗಳು ಲಭ್ಯ ಇಲ್ಲ ಎನ್ನುವ ಸತ್ಯವನ್ನು ಪಾಲಕರು ಮೊದಲು ಮನಗಾಣಬೇಕು. 12 ವರ್ಷದ ಒಳಗಿನ ಮಕ್ಕಳಿಗೆ ಓರ್ಲಿಸ್ಟಾಟ್‌ ಹಾಗೂ 16 ವರ್ಷದ ಒಳಗಿನ ಮಕ್ಕಳಿಗೆ ಸಿಬುಟ್ರಮೈನ್‌ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಇದನ್ನು ಕೊನೆಯ ಹಂತದಲ್ಲಿ ಮಾತ್ರ ಸೂಚಿಸಲಾಗುತ್ತದೆ.

ಆದಾಗ್ಯೂ ಮಕ್ಕಳ ಸ್ಥೂಲಕಾಯತೆಯನ್ನು ನೈಸರ್ಗಿಕ ವಿಧಾನದಲ್ಲಿ ನಿರ್ವಹಿಸಬೇಕಾದುದು ಅನಿವಾರ್ಯ. ಅದಕ್ಕಾಗಿ ಮೊದಲು ಊಟ ಉಪಾಹಾರದಲ್ಲಿ ಬದಲಾವಣೆ ತನ್ನಿ :

ಹೆಚ್ಚು ನೀರು ಕುಡಿಯಿರಿ.

ಬೆಳಗಿನ ತಿಂಡಿಗೆ ಮೊಳಕೆ ಕಾಳು, ಧಾನ್ಯಗಳು, ಹಸಿರು ತರಕಾರಿ, ಸೊಪ್ಪು ಸೇವಿಸಿ.

ಸಿಹಿ ಪದಾರ್ಥಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.

ದಿನಕ್ಕೆ ಮೂರು ಬಾರಿ ಊಟದ ಬದಲು ಆರು ಬಾರಿ ಕಡಿಮೆ ಪ್ರಮಾಣದ ಆಹಾರವನ್ನು ಸೇವಿಸಿ.

ದೈಹಿಕ ಚಟುವಟಿಕೆಗಳಲ್ಲಿ ಭಾಗಹಿಸಿ.

ಸರಿಯಾದ ವ್ಯಾಯಾಮ ಮಾಡಿ.

ಗಮನಾರ್ಹ ಸಂಗತಿ

ಸರ್ಕಾರಿ ಶಾಲಾ ಮಕ್ಕಳಿಗೆ (ಶೇ.11.1) ಹೋಲಿಸಿದರೆ ಖಾಸಗಿ ಅಥವಾ ಸಾರ್ವಜನಿಕ ಶಾಲೆಗಳ ಮಕ್ಕಳು (ಶೇ.29) ಹೆಚ್ಚು ಸ್ಥೂಲಕಾಯರಾಗಿರುವುದನ್ನು ಗಮನಿಸಬಹುದು. ಹಾಗೆಯೇ ಶಾಲಾ ಬಾಲಕರಿಗೆ ಹೋಲಿಸಿದರೆ ಬಾಲಕಿಯರು ಹೆಚ್ಚು ಸ್ಥೂಲಕಾಯರಾಗಿರುತ್ತಾರೆ.

ಮಕ್ಕಳಲ್ಲಿ ಬೊಜ್ಜು

ಮಕ್ಕಳು ಬೆಳೆದಂತೆ ಹೆಚ್ಚುವರಿ ಬೊಜ್ಜು ತಾನಾಗಿ ಕರಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಸತ್ಯಾಂಶವೆಂದರೆ ಶೇ.50-70 ಬೊಜ್ಜುಳ್ಳ ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟ ನಂತರ ಸ್ಥೂಲಕಾಯರಾಗಿಯೇ ಉಳಿಯುತ್ತಾರೆ. ಬಾಲ್ಯಾವಸ್ಥೆಯಲ್ಲೇ ಈ ಬಗ್ಗೆ ಸರಿಯಾಗಿ ಗಮನಹರಿಸಿದ ಮತ್ತು ಕಾರ್ಯಪ್ರವೃತ್ತರಾದ ಶೇ.30-50 ಮಕ್ಕಳು ಮಾತ್ರ ಈ ನೆರಳಿನಿಂದ ಆಚೆ ಬರುತ್ತಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ