ಒಳಾಂಗಣ ಅಲಂಕಾರವೆನ್ನುವುದು ಹೊಸ ವಿಷಯವೇನಲ್ಲ. ಬಹಳ ಹಿಂದಿನಿಂದಲೂ ನಮ್ಮ ಹಿರಿಯರು, ಅಮ್ಮಅಜ್ಜಿಯರು ಎಲ್ಲ ಗೃಹ ಕೃತ್ಯಗಳನ್ನೂ ಮಾಡಿ ಮುಗಿಸಿ ಮನೆ ಅಲಂಕರಣವನ್ನೂ ಮಾಡುತ್ತಿದ್ದರು. ಮನೆ ಸುಂದರವಾಗಿ ಕಾಣಬೇಕು, ನೋಡಿದರು ಮೆಚ್ಚಬೇಕೆನ್ನುವ ಭಾವನೆ ಅನಾದಿ ಕಾಲದಿಂದಲೂ ಬಂದದ್ದೇ. ತಮಗೆ ತಿಳಿದ ರೀತಿಯಲ್ಲಿ ಮನೆಯನ್ನು ಅಂದವಾಗಿ ಕಾಣುವಂತೆ ಮಾಡಲು ಶ್ರಮಿಸುತ್ತಿದ್ದರು. ಮನೆಯ ಮುಂಬಾಗಿಲಿಗೆ ತೋರಣ ಕಟ್ಟುವುದು, ಮನೆಯ ಮುಂದೆ ಬಣ್ಣಬಣ್ಣದ ರಂಗೋಲಿ ಬಿಡಿಸುವುದು, ಬಾಗಿಲಿಗೆ ತಾವೇ ಕಸೂತಿ ಮಾಡಿದ ಪರದೆಗಳನ್ನು ಇಳಿಬಿಡುವುದು, ದಿಂಬುಗಳಿಗೆ ಶುಭರಾತ್ರಿ ಅಥವಾ ಗುಡ್ ನೈಟ್ ಎನ್ನುವ ಸಂದೇಶವನ್ನು ಬಣ್ಣ ಬಣ್ಣದ ರೇಷ್ಮೆ ದಾರಗಳಿಂದ ಕಸೂತಿ ಹಾಕುವುದು, ಹೊದಿಕೆಗಳು, ಬಾಗಿಲ ಪರದೆಗಳು ಎಲ್ಲ ಮನೆಯ ಗೃಹಿಣಿಯ ಚಾಕಚಕ್ಯತೆ ಮತ್ತು ಚುರುಕುತನಕ್ಕೆ ಪ್ರತಿಬಿಂಬದಂತಿರುತ್ತಿದ್ದವು.
ಇನ್ನು ವಿನ್ಯಾಸದ ವಿಷಯಕ್ಕೆ ಬಂದಾಗ ನಾಜೂಕಾದ ಕೆತ್ತನೆಯ ಕಂಬಗಳು, ತೊಟ್ಟಿಮನೆ, ಬಾಗಿಲಿಗೆ ಮರದ ಕೆತ್ತನೆ, ಕೊನೆಗೆ ಕುಳಿತುಕೊಳ್ಳುವ ಆಸನಗಳಲ್ಲೂ ಸುಂದರ ಕೆತ್ತನೆ ಮನೆಯ ಸೌಂದರ್ಯಕ್ಕೆ ಪೂರಕವಾಗಿದ್ದರೆ, ನಕಾಶೆಯ ದೀಪಸ್ತಂಭಗಳು, ಹಜಾರದಲ್ಲಿ ಇಳಿಬಿಟ್ಟ ತೂಗುದೀಪಗಳು, ಪಡಸಾಲೆಯಲ್ಲಿ ಗೋಡೆಗೆ ನೇತುಹಾಕಿದ ಸುಂದರ ರವಿವರ್ಮನ ಪಠಗಳು, ಮೂಲೆಯಲ್ಲಿ ತ್ರಿಕೋನಾಕಾರದ ಮೇಜು, ಅದರ ಮೇಲೆ ಹೊಳೆಯುವ ಹಿತ್ತಾಳೆಯ ಹೂಜಿ, ಅದರೊಳಗೆ ನಗು ನಗು ಬಣ್ಣ ಬಣ್ಣದ ಹೂಗಳು ದಿನಕ್ಕೊಂದು ರೀತಿಯಲ್ಲಿ ಸಿಂಗಾರಗೊಳ್ಳುತ್ತಿದ್ದವು. ಕೆಂಪು ಬಣ್ಣದ ಹೊಳೆಯುವ ಕಾವಿ ನೆಲದ ಮೇಲೂ ಸುತ್ತಲೂ ಬಳ್ಳಿಯ ಎಳೆಗಳ ರಂಗೋಲಿಯನ್ನು ಬಿಡಲಾಗುತ್ತಿತ್ತು. ಒಂದೆರಡು ದಿನ ಅಳಿಯದೆ ಇರಬೇಕೆಂದು ಅಕ್ಕಿಹಿಟ್ಟಿನ ರಂಗೋಲಿ ತಯಾರಿಸುತ್ತಿದ್ದರು. ನಮ್ಮಮ್ಮ ಅದನ್ನು ಒಂದು ಬಟ್ಟೆಯಲ್ಲಿ ತೋರು ಬೆರಳಿನಿಂದ ಹಿಡಿದು ಎಳೆಬಿಡುತ್ತಿದ್ದುದ್ದನ್ನು ನಾನೂ ಸಹ ಕಣ್ಣಾರೆ ಕಂಡಿದ್ದೇನೆ. ಕೊನೆಗೆ ಪಾತ್ರೆ ಜೋಡಿಸುವ ಹಲಗೆಯ ಪಠಾರಗಳ ಮೇಲೂ ರಂಗೋಲಿ ಬಿಡುತ್ತಿದ್ದರು. ಹಬ್ಬವೆಂದಾಗ ಅವರ ಆಸಕ್ತಿಗೆ ಗರಿ ಮೂಡುತ್ತಿತ್ತು. ವಾರ, ಹದಿನೈದು ದಿನಗಳ ಮುಂಚೆಯೇ ಸಿದ್ಧತೆ ಪ್ರಾರಂಭವಾಗುತ್ತಿತ್ತು. ಹಬ್ಬದ ದಿನ ಮನೆಯೆಲ್ಲಾ ಸುಂದರವಾಗಿ ಕಂಗೊಳಿಸುತ್ತಿತ್ತು. ಅಂತೂ ವಿನ್ಯಾಸ ಮತ್ತು ಅಲಂಕಾರ ಒಂದಕ್ಕೊಂದು ಪೂರಕವಾಗಿದ್ದಾಗ ಆಕರ್ಷಕ ನೋಟ ಸಾಧ್ಯ.
ಈಗಲೂ ಮನೆಯನ್ನು ಅಂದವಾಗಿಟ್ಟುಕೊಳ್ಳುವ ಮನಸ್ಸು ಪ್ರತಿಯೊಬ್ಬರದು. ಆದರೆ ಅಲಂಕರಿಸುವ ಕಾನ್ಸೆಪ್ಟ್ ಸ್ವಲ್ಪ ಬದಲಾಗಿದೆ. ಮನೆಯನ್ನು ಕಟ್ಟುವಾಗಲೇ ಒಳಾಂಗಣ ವಿನ್ಯಾಸ ಹೇಗಿರಬೇಕೆನ್ನುವುದನ್ನು ನಿರ್ಧರಿಸುತ್ತಾರೆ. ನಿರ್ಮಾಣದ ಹಂತದಲ್ಲೇ ಎಲ್ಲ ನಿರ್ಧಾರವಾದರೆ ಅಳವಡಿಕೆ ಸುಲಭವಾಗುತ್ತದೆ. ಅಲ್ಲದೆ, ಕಾಲಕ್ಕನುಗುಣವಾಗಿ ಬದಲಾವಣೆ ಅನಿವಾರ್ಯ. ಒಂದು ಕಾಲಕ್ಕೆ ಬರಿಯ ಕುಸುರಿ ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದುದು ನಂತರ ಸರಳತೆಗೆ ಜನ ಮಾರುಹೋದರು. ಪಾಶ್ಚಾತ್ಯ ಶೈಲಿಯನ್ನು ಮೆಚ್ಚಿಕೊಂಡರು. ಅವರದೆಲ್ಲಾ ಬಹಳ ಸಿಂಪಲ್, ಆದರೂ ಎಷ್ಟು ಚೆನ್ನ ಎನ್ನುವ ಭಾವನೆ ಮೂಡಿಬಂದಿತು. ಮಾರುಕಟ್ಟೆಗೆ ಹೊಸ ರೀತಿಯ ಸಾಮಾನುಗಳು ಬರಲಾರಂಭಿಸಿದವು. ಹೆಚ್ಚು ಹೆಚ್ಚು ಗಾಜಿನ ಬಳಕೆ ಪ್ರಾರಂಭವಾಯಿತು. ಕಿಟಕಿ ಮತ್ತು ಬಾಗಿಲುಗಳನ್ನು ವಿಶಾಲವಾಗಿರಿಸಲಾರಂಭಿಸಿದರು. ಹಿಂದೆ ನಿವೇಶನಕ್ಕೆ ಅಂತಹ ಬೆಲೆ ಇಲ್ಲದಿದ್ದರಿಂದ ಸ್ಥಳದ ಉಪಯುಕ್ತತೆಗೆ ಅಂತಹ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಆದರೆ ನಿವೇಶನಗಳ ಬೆಲೆಗಳು ಗಗನಕ್ಕೇರಿದಾಗ ಒಂದೊಂದು ಅಂಗುಲ ಬೆಲೆಯುಳ್ಳದ್ದು ಮತ್ತು ಅದನ್ನು ಯಾವ ರೀತಿ ಬಳಸಿಕೊಳ್ಳಬೇಕೆನ್ನುವ ವಿಷಯಕ್ಕೆ ವಿನ್ಯಾಸಕಾರರು ಗಮನ ನೀಡಲಾರಂಭಿಸಿದರು. ಅಂತೆಯೇ ನೋಡಲು ಚೆಂದವಿರಬೇಕು ಮತ್ತು ಖರ್ಚು ಕಡಿಮೆ ಇರಬೇಕು, ಸಣ್ಣ ನಿವೇಶನದಲ್ಲೂ ಚಂದದ ಮನೆ ಕಟ್ಟಬೇಕೆನ್ನುವ ಸಾಲುಗಳು ಬಂದಾಗ ಮತ್ತಷ್ಟು ಬದಲಾವಣೆಗಳು ಮೂಡಿಬಂದವು. ಮನೆಯಲ್ಲಿ ಹೆಚ್ಚಿನ ವಿಭಾಗಗಳನ್ನು ಮಾಡದೆ, ಓಪನ್ ಕಿಚನ್, ಪಡಸಾಲೆ, ಡೈನಿಂಗ್ ಮತ್ತು ಅಡುಗೆಮನೆಯ ಮಧ್ಯೆ ಒಂದು ಆಕರ್ಷಕ ವಿಭಾಗ ಅರ್ಥಾತ್ ಪಾರ್ಟಿಷನ್ ಗಳು ಬಳಕೆಗೆ ಬಂದವು. ಈ ರೀತಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗಿನ ವಾತಾವರಣಕ್ಕೆ, ಪರಿಸ್ಥಿತಿಗೆ ತಕ್ಕಂತೆ ಮಾಡಲಾಯಿತು.
ಮಜಬೂತಾದ ಪೀಠೋಪಕರಣಗಳ ಸ್ಥಾನದಲ್ಲಿ ಸ್ಲೀಕ್ ಅಂದರೆ ಹಗುರವಾದ ಪೀಠೋಪಕರಣಗಳು ಚಾಲ್ತಿಗೆ ಬಂದವು. ತಿಳಿ ಬಣ್ಣದ ಬದಲು ಗಾಢ ಬಣ್ಣಗಳ ಬಳಕೆಯಾಯಿತು. ಯಾವುದೇ ವಿಷಯದಲ್ಲಿ ಏಕತಾನತೆ ಯಾರಿಗೂ ಇಷ್ಟವಾಗದು. ಇರುವುದನ್ನೇ ಸ್ವಲ್ಪ ಬದಲಾವಣೆ ಮಾಡಿದಾಗ ಎಲ್ಲರೂ ವಾಹ್ ಎನ್ನುತ್ತಾರೆ. ಯಾವುದೇ ಫ್ಯಾಷನ್ ನಂತೆ ಮನೆ ಒಳಾಲಂಕಾರ ಸಹ ತನ್ನ ಸ್ವರೂಪ ಬದಲಿಸುತ್ತಲೇ ಇರುತ್ತದೆ. ಅದಕ್ಕನುಗುಣವಾಗಿ ಮಾರುಕಟ್ಟೆಯಲ್ಲಿ ವಸ್ತುಗಳು ತಯಾರಾಗುತ್ತವೆ. ಆದ್ದರಿಂದ ಇಲ್ಲಿ ಇಂತಹುದೇ ಎನ್ನುವ ನಿಯಮವಿಲ್ಲ. ಅವರವರ ಭಾವಕ್ಕೆ ತಕ್ಕಂತೆ, ಆಸಕ್ತಿ ಮತ್ತು ಜೇಬಿಗನುಗುಣವಾಗಿ ರೂಪಿಸುವಿಕೆ ಸಾಧ್ಯ. ದಿನ ಬೆಳಗಾದರೆ ಎಲ್ಲೆಡೆ ಕಟ್ಟಡಗಳು ಮೇಲೇಳುತ್ತಲೇ ಇವೆ. ನಿರ್ಮಾಣ ವೆಚ್ಚ ಎಷ್ಟೇ ಹೆಚ್ಚಾದರೂ, ಕೆಲಸಗಾರರ ವೇತನ ಎಷ್ಟೇ ತುಟ್ಟಿಯಾದರೂ ನಿರ್ಮಾಣ ಕಾರ್ಯ ಮಾತ್ರ ಸಾಗುತ್ತಲೇ ಇವೆ. ಜನಸಂಖ್ಯೆಗನುಗುಣವಾಗಿ ಹೊಸ ಮನೆಗಳು, ಅಪಾರ್ಟ್ ಮೆಂಟುಗಳೂ ಬರುತ್ತಲೇ ಇವೆ.
ಏನೇ ಇರಲಿ, ಯೋಗಿ ಪಡೆದದ್ದು ಯೋಗಿಗೆ ಎನ್ನುವಂತೆ ನಮ್ಮ ಅನುಕೂಲಕ್ಕೆ ತಕ್ಕಂತೆ ನಮ್ಮ ಮನೆಯ ನಿರ್ಮಾಣ ಮತ್ತು ಒಳಾಂಗಣದ ನಿರೂಪಣೆ ಖಂಡಿತ ಸಾಧ್ಯವಿದೆ. ಹೆಚ್ಚು ಹಣ ಖರ್ಚು ಮಾಡಿದರೆ ಮಾತ್ರ ಮನೆ ಸುಂದರವಾಗಿ ಇರಲು ಸಾಧ್ಯ ಎನ್ನುವುದು ತಪ್ಪುಕಲ್ಪನೆ. ಸಣ್ಣ ನಿವೇಶನದಲ್ಲಿ, ಕಡಿಮೆ ಖರ್ಚಿನಲ್ಲೂ ಸಹ ಸುಂದರ ಅನುಕೂಲಕರ ಮನೆ ನಿಮ್ಮದಾಗುವುದು ಸಾಧ್ಯ ಎನ್ನುವ ಪರಿಕಲ್ಪನೆ ಬೆಳಕಿಗೆ ಬಂದಿತು. ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಾಗ ಯಾವುದೂ ಅಸಾಧ್ಯವಲ್ಲ. ಹೊಸ ವರ್ಷದಲ್ಲಿ ಮನಕ್ಕೊಪ್ಪುವ ಮನೆ ನಿಮ್ಮದಾಗಲಿ.
ಓಲ್ಡ್ ಈಸ್ ಗೋಲ್ಡ್ ಎನ್ನುವಂತೆ ಮನೆಯಲ್ಲಿರುವ ಕೆಲವು ಪುರಾತನ ವಸ್ತುಗಳನ್ನು ಬಳಸಿದಾಗ ಅದೂ ಚೆನ್ನವೇ! ಪುರಾತನ ಮತ್ತು ಆಧುನಿಕ ಶೈಲಿಯ ಮೇಳೈಸುವಿಕೆಯಿಂದ ವಿಭಿನ್ನ ಹೊಸ ಶೈಲಿಯ ಹುಟ್ಟು ಪ್ರಾರಂಭವಾಗಿದೆ.
ದಿನನಿತ್ಯ ಹೊಸ ಹೊಸದನ್ನು ನೋಡುತ್ತಲೇ ಇರುತ್ತೀರಾ, ನಿಮ್ಮ ಮನಸ್ಸಿನಲ್ಲಿ ಮೂಡಿದ ಆಕರ್ಷಕ ವಿಷಯಗಳನ್ನು ಗಮನಿಸಿ ನಿಮ್ಮ ಮನೆಯಲ್ಲಿ ಅಳವಡಿಸಿಕೊಳ್ಳಬಹುದು.
ಮಾರುಕಟ್ಟೆಯಲ್ಲಿ ಹೊಸ ಹೊಸ ಪರಿಕರಗಳು ಬರುತ್ತಲೇ ಇರುತ್ತವೆ. ಅದನ್ನು ಸೂಕ್ಷ್ಮವಾಗಿ ಗಮನಿಸಿ ನಿಮ್ಮ ಮನೆಗೆ ಹೊಂದುವಂತಹುದು, ನಿಮ್ಮ ಜೇಬಿಗೆ ಎಟುಕುವುದನ್ನು ಆರಿಸಿಕೊಳ್ಳಿ.
ಮನೆ ಕಟ್ಟಿಸುವ ಗೆಳೆಯ ಗೆಳತಿಯರಿಂದ ಅವರ ಅನುಭವಗಳನ್ನು ತಿಳಿದುಕೊಳ್ಳಿ, ಸಹಾಯಕವಾಗಬಹುದು. ಎಲ್ಲರೂ ಹೇಳಿದ್ದನ್ನೆಲ್ಲಾ ಅನುಸರಿಸಬೇಕು ಎಂದೇನಿಲ್ಲ, ನಿಮಗೆ ಹೊಂದುವಂತಹುದನ್ನು ಅಳವಡಿಸಿಕೊಳ್ಳಿ.
ನಿಮ್ಮ ಮನೆ ಎಷ್ಟು ಸುಂದರವಾಗಿ ಕಾಣುತ್ತದೆ ಎನ್ನುವುದರ ಜೊತೆಗೆ ಅದು ಎಷ್ಟರಮಟ್ಟಿಗೆ ಉಪಯುಕ್ತ ಎನ್ನುವುದೂ ಸಹ ಬಹಳ ಮುಖ್ಯ.
ಇಂದು ಬಹಳ ಅಗತ್ಯ ಎನ್ನುವುದು ನಾಳೆಗೆ ಗೌಣ ಎನ್ನಿಸಬಹುದು ಅಥವಾ ಇಂದು ಬೇಡವಾದದ್ದು ನಾಳೆ ಬೇಕೆನಿಸಬಹುದು, ಆದ್ದರಿಂದ ಹೊಸ ವಿನ್ಯಾಸ ಮಾಡುವಾಗ ದೂರದೃಷ್ಟಿ ಅಗತ್ಯ, ಬೇಕೆಂದಾಗ ಬದಲಿಸಲಾಗದು. ಎಲ್ಲವನ್ನೂ ಮೊದಲೇ ಸರಿಯಾಗಿ ನಿರ್ಧರಿಸಿದಾಗ ಸುಲಭವಾಗುತ್ತದೆ.
ಕೆಲವು ಸಣ್ಣಪುಟ್ಟ ಅಂಶಗಳು ಮನೆಗೆ ವಿಶೇಷ ಮೆರುಗನ್ನು ನೀಡಲು ಸಾಧ್ಯ. ಗೋಡೆಗೆ ಮೂಡಿಸಿದ ಕಲಾಕೃತಿ, ಅವುಗಳಿಗೆ ಸೂಕ್ತ ಬೆಳಕು ಮೂಡಿಸುವಿಕೆಯಿಂದ ಸುಂದರ ನೋಟ ಸಾಧ್ಯವಿದೆ.
ಮನೆಯ ಒಳಾಂಗಣ ಅಲಂಕಾರ ಎನ್ನುವುದು ಬಹಳ ಕ್ಲಿಷ್ಟಕರ ಸಂಗತಿಯೇನಲ್ಲ. ನಿಮ್ಮ ಮನಸ್ಸಿನ ಭಾವನೆಗಳಿಗೆ ಒಂದಷ್ಟು ಕಲಾತ್ಮಕತೆಯ ಟಚ್ ನೀಡಿ ಅಲ್ಲೊಂದಿಷ್ಟು ಸೃಜನಶೀಲತೆ ಮೂಡಿಸಿದಾಗ ನೋಡಿದವರು ಬೆರಗಾಗುವಷ್ಟು ಸುಂದರ ಮನೆ ನಿಮ್ಮದಾಗಬಹುದು. ಅದಕ್ಕೆ ಹೊಸತು ಹಳೆಯದು ಎಂದೇನಿಲ್ಲ. ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಎನ್ನುವಂತೆ ಪುರಾತನ ಮತ್ತು ನವ್ಯತೆಯ ಸಂಗಮ ವಿಶೇಷ ಶೈಲಿಯನ್ನೇ ಮೂಡಿಸಬಹುದು. ನಿಮ್ಮ ಬೇರುಗಳ ಬಗ್ಗೆ ನೀವು ಮರೆತಿಲ್ಲ ಎನ್ನುವ ವಿಚಾರದೊಂದಿಗೆ ನಿಮ್ಮಲ್ಲಿ ಹೊಸದಾದ ಬೆಚ್ಚನೆಯ ಭಾವನೆಗಳನ್ನು ಮೂಡಿಸಿ ನಿಮ್ಮತನವನ್ನು ಹೊರಬಿಂಬಿಸಿ ನಿಮ್ಮಲ್ಲಿ ಧನ್ಯತೆಯ ಭಾವನೆ ಮೂಡಿಸಿ ಪಟ್ಟ ಕಷ್ಟಗಳನ್ನೆಲ್ಲಾ ಮರೆಸಿ ವಿಜಯದ ಸಂತಸ ನಿಮ್ಮಲ್ಲಿ ಮೂಡಿಸುವ ಮನೆ ನಿಮ್ಮದಾಗಲಿ, ಯುಗಾದಿ ನಿಮಗೆ ಆನಂದ ತರಲಿ!
– ಮಂಜುಳಾ ರಾಜ್