ದುಂದುವೆಚ್ಚ ಮಾಡಬೇಡಿ

ಅಮ್ಮನನ್ನು ಭೇಟಿಯಾಗಲು ವಿಮಾನದಲ್ಲಿ ಹೋಗುವುದು ಕಡಿಮೆಯಾಗುತ್ತಿದೆ. ಈಗ ಏರ್‌ ಪೋರ್ಟ್‌ ಗಳಲ್ಲಿ ಮಕ್ಕಳು, ವಯಸ್ಸಾದ ಹೆಂಗಸರು ಮತ್ತು ಕೈಗಳಲ್ಲಿ ಒಳ್ಳೆಯ ಸಿಹಿತಿಂಡಿಗಳ ಡಬ್ಬಿಗಳನ್ನು ಹಿಡಿದು ಹೊರಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. 5 ವರ್ಷಗಳ ಹಿಂದೆ ವಿಮಾನಯಾನದ ದರಗಳು ಕಡಿಮೆಯಾಗಿದ್ದರಿಂದ ಏರ್‌ ಪೋರ್ಟ್‌ ಗಳಲ್ಲಿ ಅಲ್ಪಸ್ವಲ್ಪ ಹಣವಿದ್ದರೂ ತುಂಬಿರುತ್ತಿದ್ದರು. ಅದು ನಿಧಾನವಾಗಿ ಕಡಿಮೆಯಾಗತೊಡಗಿತು. ದೆಹಲಿ ಮುಂಬೈ ಪ್ರವಾಸಕ್ಕೆ ಹಿಂದೆ 2,500 ರೂ. ಇದ್ದದ್ದು, ಈಗ 7,000 ರೂ.ಗಳಿಂದ 9,000 ರೂ.ಗಳವರೆಗೆ ಆಗಿದ್ದು, ಹಲವು ಬಾರಿ ಇದಕ್ಕೂ ದುಬಾರಿ ಆಗಿತ್ತು.

ಇಡೀ ವಿಶ್ವದಲ್ಲೇ ಮುಗ್ಗರಿಸುತ್ತಿರುವ ಆರ್ಥಿಕ ವ್ಯವಸ್ಥೆ ನಮ್ಮ ದೇಶದ ಆರ್ಥಿಕ ಸ್ಥಿತಿಗೆ ವಿಘ್ನ ತಂದೊಡ್ಡಿ ಸಂಪೂರ್ಣವಾಗಿ ಫ್ರೀಜ್ ಮಾಡಿದೆ. ಪಾಪ, ಮನಮೋಹನ್‌ ಸಿಂಗ್‌ ಮತ್ತು ಪಿ. ಚಿದಂಬರಮ್ ಬೆಲೆ ಏರದಿರಲು ಹಾಗೂ ರೂಪಾಯಿ ಬೆಲೆ ಇಳಿಯದಿರಲು ಏನು ಮಾಡಬೇಕೆಂದು ತಿಳಿಯದೆ ತಬ್ಬಿಬ್ಬಾಗಿದ್ದಾರೆ.

ಈ ದೇಶದಲ್ಲಿ ಪ್ರತಿ ಗೃಹಿಣಿಯೂ ಮಾಡುತ್ತಿರುವಂತೆಯೇ ನಮ್ಮ ದೇಶ ಮಾಡುತ್ತಿದೆ. ಮೊದಲ ಬಾರಿ ಹೆಚ್ಚು ಹಣ ಕಂಡ ಮನೆಯವರು ವೈಭವದ ಬದುಕನ್ನು ಸಾಗಿಸುವ ಹೆಸರಿನಲ್ಲಿ ಹೆಚ್ಚು ಹೆಚ್ಚು ಖರ್ಚು ಮಾಡುವ ಯೋಜನೆಗಳನ್ನು ತಯಾರಿಸಿದರು. 5 ಬೆಡ್‌ ರೂಮ್ ಗಳುಳ್ಳ ಒಳ್ಳೆಯ ಫ್ಲಾಟ್‌, ಹೊಳೆಯುವ ಒಂದು ವಾಹನ, ದೊಡ್ಡದಾದ ಟಿ.ವಿ., ಧಾರ್ಮಿಕ ಪ್ರವಾಸ ಅಥವಾ ಮೋಜಿಗಾಗಿ ಪ್ರತಿ ವರ್ಷ 15 ದಿನಗಳ ಟೂರ್‌, ದುಬಾರಿ ಶಾಲೆಗಳಲ್ಲಿ ಮಕ್ಕಳ ಅಡ್ಮಿಶನ್‌, ಪ್ರತಿ ಕೋಣೆಯಲ್ಲೂ ಏರ್‌ ಕಂಡೀಶನರ್‌ ಮತ್ತು ವಾರಕ್ಕೆರಡು ಬಾರಿ ಹೊರಗೆ ಊಟ ಮಾಡುವುದು ಫ್ಯಾಷನ್‌ ಆಗಿಹೋಯಿತು.

ಕೈಗೆ ಬಂದ ಹಣವನ್ನು ಉಳಿಸಬೇಕಾದ ಜನ ಅದನ್ನು ಖರ್ಚು ಮಾಡುವುದರಲ್ಲಿ ತೊಡಗಿದ್ದಾರೆ. ಈ ದೇಶ ಅಮೆರಿಕಾ ಆಗಿಬಿಟ್ಟಿದೆ ಎಂದುಕೊಂಡಿದ್ದಾರೆ. ಎಷ್ಟು ವೇಗವಾಗಿ ಮಾಲ್ ‌ಗಳು ಆರಂಭಗೊಂಡಿವೆಯೋ ಅಷ್ಟು ವೇಗವಾಗಿ ನಮ್ಮ ದೇಶದ ಜನಸಂಖ್ಯೆಯೂ ಹೆಚ್ಚಾಗುತ್ತಿರಲಿಲ್ಲ. ಮಹಿಳೆಯರು ತಮ್ಮ ತಾಯಿ ಉಳಿತಾಯ ಮಾಡುತ್ತಿದ್ದುದನ್ನು ನೋಡಿದ್ದರು. ಆದರೆ ಅವರು ಅದನ್ನು ಮರೆತುಬಿಟ್ಟರು. ಅವರು ಮನೆ, ಸಂಸಾರ ಸಂಭಾಳಿಸುವುದನ್ನು ಬಿಟ್ಟು ಬ್ಯೂಟಿ ಪಾರ್ಲರ್‌ ಗಳಲ್ಲಿ ಮತ್ತು ಬಟ್ಟೆ ಅಂಗಡಿಗಳಲ್ಲಿ ಹೆಚ್ಚು ಸುತ್ತಾಡತೊಡಗಿದರು.

ಅದರ ಪರಿಣಾಮ ಕಣ್ಮುಂದೆಯೇ ಇದೆ. ಮನೆಗಳ ಪರಿಸ್ಥಿತಿ ಹಾಳಾಗುತ್ತಿದೆ ಮತ್ತು ದೇಶದ ಪರಿಸ್ಥಿತಿಯೂ ಹಾಳಾಗುತ್ತಿದೆ. ಸರ್ಕಾರ ಸಾಲದಲ್ಲಿ ಮುಳುಗುತ್ತಿದೆ. ಬೆಲೆಯೇರಿಕೆಯಿಂದಾಗಿ ರೂಪಾಯಿಯ ಅಪಮೌಲ್ಯ ಹೆಚ್ಚಾಗುತ್ತಿದೆ.

ಇಂತಹ ಸಮಯದಲ್ಲಿ ಉಪದೇಶಗಳನ್ನು ಕೊಡುವಂತಿಲ್ಲ. ಜನ ತಮ್ಮ ತಪ್ಪಿನಿಂದ ಪಾಠ ಕಲಿಯಬೇಕಿದೆ. ಉಳಿತಾಯ ಎಂದಿಗೂ ತಪ್ಪಲ್ಲ. ವಸ್ತುಗಳನ್ನು ಖರೀದಿಸಿ, ಮನೆ ಕಟ್ಟಿಸಿ, ಪ್ರವಾಸಗಳಿಗೆ ಹೋಗಿ ಆದರೆ ಉತ್ತರಕಾಶಿಯಂತಹ ಸಣ್ಣ ಪ್ರದೇಶದಲ್ಲಿ 1 ಲಕ್ಷ ಯಾತ್ರಿಗಳು ಪುಣ್ಯ ಸಂಪಾದಿಸುವ ಹೆಸರಿನಲ್ಲಿ ಹೋದಂತೆ ಮಾಡಬೇಡಿ.

ಸಂಪಾದಿಸುವುದು ಮತ್ತು ಖರ್ಚು ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ. ಆದರೆ ಸರಿಯಾದ ರೀತಿಯಲ್ಲಿ ಸಂಪಾದಿಸಬೇಕು ಮತ್ತು ಸರಿಯಾದ ರೀತಿಯಲ್ಲಿಯೇ ಖರ್ಚು ಮಾಡಬೇಕಾಗಿದೆ. ಈ ದೇಶದಲ್ಲಂತೂ ಮಾಲೀಕರು ಮತ್ತು ನೌಕರರು ಎಲ್ಲರೂ ಹೋಳಿ, ದೀಪಾವಳಿ ಆಚರಿಸುತ್ತಾರೆ, ಪಟಾಕಿ ಮತ್ತು ರಾಕೆಟ್‌ ಗಳನ್ನು ಸಿಡಿಸುತ್ತಿರುತ್ತಾರೆ. ಇನ್ನು ಈ ಪರಿಸ್ಥಿತಿ ಬರಲೇಬೇಕಿತ್ತು.

ಈಗ ನಾವು ಎಚ್ಚೆತ್ತುಕೊಳ್ಳುವ ಬಗ್ಗೆ ಅನುಮಾನವಿದೆ. ಈ ದೇಶ ಯಾವಾಗಲೂ ಮುಂದಾಗುವುದನ್ನು ಮೇಲಿರುವ ಭಗವಂತನ ಮೇಲೆ ಒಪ್ಪಿಸುತ್ತಾ ಬಂದಿದೆ. ಆಗಿನಿಂದಲೇ ಕುದುರೆಗಳ ಮೇಲೆ ಬಂದರು ಮತ್ತು ಹಡಗಿನಲ್ಲಿ ಬಂದವರ ಗುಲಾಮರಾಗುತ್ತಾ ಬಂದಿದ್ದೇವೆ. ನಮ್ಮ ಜನ ಹಣ ಬಂದಾಗ ಉಳಿತಾಯ ಮಾಡಿ ಉಪಯೋಗವಾಗುವ ಯಾವುದಾದರೂ ಒಂದರ ಮೇಲೆ ಹೂಡುವ ಬಗ್ಗೆ ಕಲಿಯಲೇ ಇಲ್ಲ.

ಉಳಿತಾಯ ಹಾಗೂ ಉಳಿತಾಯದಿಂದ ಬರುವ ಬಂಡವಾಳವನ್ನು ಇನ್ನಷ್ಟು ನಿರ್ಮಾಣದ ಮೇಲೆ ಹೂಡುವುದು ದೇಶದ ಅಭಿವೃದ್ಧಿಯ ರಹಸ್ಯವಾಗಿದೆ. ದೇಶ ಅಭಿವೃದ್ಧಿಯಾದರೆ ಹಣ ಸಿಗುತ್ತದೆ ಮತ್ತು ವಿಮಾನ ಯಾತ್ರೆ ದುಬಾರಿಯಾಗುವುದಿಲ್ಲ. ಹೊರಗಿನ ಊಟ ಅಗ್ಗವಾಗಿರುತ್ತದೆ. ಇನ್ನೂ ಕಾಲ ಮಿಂಚಿಲ್ಲ, ದುಂದುವೆಚ್ಚ ಮಾಡಬೇಡಿ. ಹೆಚ್ಚು ಸಂಪಾದಿಸಲು ಹಾಗೂ ಕಡಿಮೆ ಖರ್ಚು ಮಾಡಲು ಟೊಂಕ ಕಟ್ಟಿ ನಿಲ್ಲಿ.

ಸಮಾಜದ ತಪ್ಪು ವ್ಯವಸ್ಥೆ

ಡಿಸೆಂಬರ್‌ 16ರ ಬಳಿಕ ನಡೆದ ಹಲ್ಲೆ ಮತ್ತು ಕಾನೂನು ತಿದ್ದುಪಡಿಯ ನಂತರ ಹುಡುಗಿಯರೇನೂ ಸುರಕ್ಷಿತರಲ್ಲ. ಮುಂಬೈನ ಪತ್ರಕರ್ತೆ ಫೋಟೋಗ್ರಾಫರ್‌ ನ್ನು ಹಾಡುಹಗಲೇ ನಿರ್ಜನವಾದ ಬಯಲು ಪ್ರದೇಶದಲ್ಲಿ ಅತ್ಯಾಚಾರಗೈಯಾಯಿತು. ಅದೂ ಅವಳು ಜೊತೆಗಾರನೊಂದಿಗೆ ಇರುವಾಗಲೇ. ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಘಟನೆಯ ಬಗ್ಗೆ ದೇಶಾದ್ಯಂತ ಆಕ್ರೋಶದ ಧ್ವನಿ ಎದ್ದಿರುವಾಗಲೇ ಈ ಘಟನೆ ನಡೆದಿದೆ. ಅಂದರೆ ಜನರ ಪ್ರತಿಭಟನೆ ಏನೂ ಪರಿಣಾಮ ಬೀರಿಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತದೆ. 4 ಯುವಕರು ಒಂದೆಡೆ ಸೇರಿದರೆ ಹುಡುಗಿಯನ್ನು ಭೋಗದ ವಸ್ತು ಎಂದೇ ಪರಿಗಣಿಸಿ ಆಕೆಯನ್ನು ಲೂಟಿ ಮಾಡುತ್ತಾರೆ.

ಮುಂಬೈ ದೇಶದ ಸುರಕ್ಷಿತ ನಗರಗಳಲ್ಲೊಂದು ಎಂದು ಕರೆಸಿಕೊಳ್ಳುತ್ತಿತ್ತು. ಈಗ ಅಲ್ಲೂ ಅಸುರಕ್ಷತೆಯ ಭೀತಿ ಪಸರಿಸುತ್ತಿದೆ. ಇದರಿಂದ ಸ್ಪಷ್ಟವಾಗುವ ಒಂದು ಸಂಗತಿಯೆಂದರೆ, ಒಳ್ಳೆಯ ಶಿಕ್ಷಣ ವ್ಯವಸ್ಥೆಯ ನಡುವೆಯೂ ಅತ್ಯಾಚಾರದ ಘಟನೆಗಳು ಕಡಿಮೆಯಾಗಿಲ್ಲವೆಂದರೆ ಅದರ ತಪ್ಪು ಸಾಮಾಜಿಕ ವ್ಯವಸ್ಥೆಯದ್ದು. ನಮ್ಮ ಮನೆಗಳಲ್ಲೇ ಹುಡುಗಿಯರನ್ನು ಗೌರವಿಸುವುದನ್ನು ಕಲಿಸಿಕೊಡಲಾಗುತ್ತಿಲ್ಲ.

ಅತ್ಯಾಚಾರದ ಘಟನೆ ಹೆಚ್ಚುಕಡಿಮೆ ಎಲ್ಲ ದೇಶಗಳಲ್ಲೂ ಘಟಿಸುತ್ತವೆ. ವಿಕಿಲೀಕ್ಸ್ ನ ಜನಕ ಜೂಲಿಯಸ್‌ ಅಸಾಂಜ್‌ ಅನೇಕ ತಿಂಗಳುಗಳಿಂದ ಲಂಡನ್ನಿನ ಈಕ್ವೆಡಾರ್‌ ನ ಪುಟ್ಟ ಎಂಬೆಸಿಯಲ್ಲಿ ಏಕೆ ಅಡಗಿದ್ದನೆಂದರೆ, ಸ್ವೀಡನ್ನಿನ ಅವನ ಗೆಳತಿ ಅವನ ಮೇಲೆ ಬಲಾತ್ಕಾರದ ಆರೋಪ ಹೊರಿಸಿದ್ದಾಳೆ. ಡಾಮಿನಿಕ್‌ ಸ್ಟ್ರಾಸ್‌ ಕಾನ್‌ ಇಂಟರ್‌ ನ್ಯಾಷನಲ್ ಮಾನಿಟರಿ ಫಂಡ್‌ ಅಧ್ಯಕ್ಷರಾಗಿದ್ದಾಗ, ನ್ಯೂಯಾರ್ಕ್‌ ಹೋಟೆಲ್ ‌ನ ಒಬ್ಬ ಕೆಲಸದವಳು ಆತನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದಳು.

ಅತ್ಯಾಚಾರ ಕೇವಲ ದೈಹಿಕ ಹಸಿವಿನ ಕಾರಣದಿಂದ ಆಗುತ್ತದೆ ಎಂದು ಒಪ್ಪಲಾಗದು. ಏಕೆಂದರೆ ಆಗ ಯಾವ ಹುಡುಗಿಯೂ ಎಲ್ಲೂ ಸುರಕ್ಷಿತಳಾಗಿ ಉಳಿಯುತ್ತಿರಲಿಲ್ಲ. ಇದನ್ನು ವಾಸ್ತವದಲ್ಲಿ ಪುರುಷ ತನ್ನ ಪುರುಷತ್ವ ತೋರಿಸಿಕೊಡುವ ಹಾಗೂ ಮಹಿಳೆಯರಿಗೆ ಅವರ ಅರ್ಹತೆ ತೋರಿಸಿಕೊಡು ಒಂದು ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾನೆ. ಯಾವ ಸಮಾಜದಲ್ಲಿ ಮಹಿಳೆಯನ್ನು ಗೌರವಿಸಲಾಗುತ್ತೋ, ಅಲ್ಲಿ ಮಹಿಳೆಯರ ಅತ್ಯಾಚಾರದ ಪ್ರಕರಣಗಳು ಹೆಚ್ಚು ಕಡಿಮೆ ನಡೆಯುವುದೇ ಇಲ್ಲ ಎನ್ನಬಹುದು. ವಾಸ್ತವದಲ್ಲಿ ಅಂತಹ ಸಮಾಜ ಸಿಗುವುದೇ ಕಷ್ಟ.

ಹೆಣ್ಣು ಬಲಹೀನಳು, ದಯಾಭಿಕ್ಷೆಗಷ್ಟೇ ಅರ್ಹಳು, ಅವಳನ್ನು ಹೊಡೆದುಬಡಿದು ಸದಾ ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು ಇತ್ಯಾದಿ ಕುಶಿಕ್ಷಣ ನೀಡಲಾಗುತ್ತದೆ. ಇದರಲ್ಲಿ ಧರ್ಮದ ಪಾತ್ರ ಹಿರಿದು. ಇನ್ನೊಂದು ಗಮನಾರ್ಹ ಸಂಗತಿ ಎಂದರೆ, ಯಾವ ಜಾತಿಗಳಲ್ಲಿ ಹೆಂಗಸರ ಹಕ್ಕುಬಾಧ್ಯತೆಗಳು ಗಂಡಸರಿಗಿಂತ ಹಿರಿದಾಗಿರುತ್ತವೆಯೋ ಅಲ್ಲಿ ಅತ್ಯಾಚಾರದ ಪ್ರಕರಣಗಳು ಇಲ್ಲವೇ ಇಲ್ಲ ಎನ್ನಬಹುದು.

ಪ್ರತಿಯೊಂದು ಧರ್ಮ ಹೆಂಗಸರ ಹಕ್ಕನ್ನು ಬಲು ಕೆಟ್ಟ ರೀತಿಯಲ್ಲಿ ಕಿತ್ತುಕೊಂಡಿದೆ ಹಾಗೂ ಹೆಂಗಸರು ಅತ್ಯಾಚಾರಕ್ಕೆ ಬಲಿಯಾದಾಗ, ಅವರಿಗೆ ಕರುಣೆಸಹಾನುಭೂತಿ ತೋರಿಸಬೇಕಾದೆಡೆ ತಿರಸ್ಕಾರಕ್ಕೆ ಒಳಪಡಿಸಿದೆ.

ಅತ್ಯಾಚಾರ ಎಂಬುದು ತೀವ್ರತರವಾದ ಒಂದು ಸಾಮಾಜಿಕ ಅಪರಾಧ. ಪ್ರತಿ ಸಲ ಹೆಣ್ಣು ಅತ್ಯಾಚಾರಕ್ಕೆ ಒಳಗಾದಾಗಲೂ ಇಡೀ ಸಮಾಜವೇ ತಲೆ ತಗ್ಗಿಸುವಂತಾಗುತ್ತದೆ. ಎಲ್ಲಿಯವರೆಗೂ ಸಮಾಜ ಇದನ್ನು ಸ್ವೀಕರಿಸುವುದಿಲ್ಲವೋ ಹಾಗೂ ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸುವುದರ ಜೊತೆ ಇದರ ಜವಾಬ್ದಾರಿಯನ್ನು ತಾನು ಹೊರಲು ಸಿದ್ಧವಿಲ್ಲವೋ, ಕಾನೂನು ಹಾಗೂ ಕೋರ್ಟುಗಳಿಂದ ಹೆಚ್ಚಿಗೇನನ್ನೂ ಅಪೇಕ್ಷಿಸುವಂತಿಲ್ಲ.

ಧರ್ಮದ ಉದ್ದೇಶ ಭಕ್ತರ ಗುಲಾಮಗಿರಿ

ಇಸ್ಲಾಂನಲ್ಲಿ ಮಹಿಳೆಯರ ಸುಧಾರಣೆಯ ಕುರಿತಾಗಿ ಮುಸ್ಲಿಂ ಸಮಾಜ ಸುಧಾರಕಿ ಅಮೀನಾ ದೂದ್‌ ಅವರ ಲೆಕ್ಚರ್‌ ನ್ನು ಚೆನ್ನೈ ಪೊಲೀಸರು ಬಲವಂತವಾಗಿ ನಿಲ್ಲಿಸಿದ್ದರೆ, ಅದರಲ್ಲಿ ಆಶ್ಚರ್ಯವಾದರೂ ಏನು? ಧರ್ಮ ಎಂಬುದು ತನ್ನನ್ನು ತಾನು ಎಷ್ಟು ಬಲಿಷ್ಠ ಎಂದು ತೋರಿಸಿಕೊಳ್ಳುತ್ತದೋ, ಅದು ಒಳಗೊಳಗೆ ಅಷ್ಟೇ ಭಯಭೀತವಾಗಿರುತ್ತದೆ. ಎಲ್ಲಾದರೂ ಸುಧಾರಣೆಯ ವಿಷಯ ಎದುರಾದರೆ ಸುಳ್ಳು, ಹಸಿ ಸುಳ್ಳುಗಳು ಬಯಲಿಗೆ ಬಂದುಬಿಟ್ಟರೆ ಎಂದು ಆತಂಕಗೊಳ್ಳುತ್ತದೆ.

ಅನಾದಿ ಕಾಲದಿಂದಲೂ ಧರ್ಮಗಳು ಹೆಂಗಸರನ್ನು ತಮ್ಮ ಮೊದಲ ಬೇಟೆಯಾಗಿಸಿಕೊಂಡಿವೆ. ಇದರಲ್ಲಿ ವಿಡಂಬನೆ ಎಂದರೆ ಹೆಂಗಸರೇ ಈ ಧರ್ಮವನ್ನು ತಲೆಯ ಮೇಲೆ ಹೊತ್ತು ಮುನ್ನಡೆಸುತ್ತಾರೆ. ಇದು ಹೇಗೆ ಎಂದರೆ, ವೇಶ್ಯಾವಾಟಿಕೆಯ ಮಾಲೀಕಳು ತಾನು ಹೆಣ್ಣಾಗಿಯೂ ಸಹ, ಅಮಾಯಕ ಹೆಣ್ಣಿನತ್ತ ಕನಿಕರ ತೋರದೆ, ದೂರದೂರಿನಿಂದ ಏನೋ ಆಮಿಷವೊಡ್ಡಿ ಬಲೆಗೆ ಕೆಡವಿಕೊಂಡು ದೇಹ ದಂಧೆ ಮುಂದುವರಿಸುವಂತೆ…..

ಚೆನ್ನೈನ ಸೆಂಟರ್‌ ಫಾರ್‌ ಇಸ್ಲಾಮಿಕ್‌ ಸ್ಟಡೀಸ್‌ ನ ಪಿ.ಕೆ. ಅಬ್ದುಲ್ ‌ರೆಹಮಾನ್‌ ರಿಗೆ ದುಃಖ ಉಂಟಾಗಿದ್ದು ಏಕೆಂದರೆ, ಯಾರದೋ ಜಬರ್ದಸ್ತ್ ಗದರಿಕೆಯ ಎದುರು ಪೊಲೀಸ್‌ ಖಾತೆ ಗಡಗಡ ನಡುಗಿದ್ದಕ್ಕೆ ಹಾಗೂ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮೌಲ್ವಿಗಳು, ಪೊಲೀಸರು ತಮ್ಮ ಬೂಟಿನಡಿ ಹೊಸಕಿ ಹಾಕಿದ್ದಕ್ಕೆ!

ಹಾಗೆ ನೋಡಿದರೆ ಅಮೀನಾ ದೂದ್‌ ಖಂಡಿತಾ ಇಸ್ಲಾಂ ಧರ್ಮದ ವಿರೋಧಿಯಲ್ಲ. ಆಕೆ ಕೇವಲ ಹೆಂಗಸರಿಗೆ ಸಿಗಬೇಕಾದ ಸಮಾನಹಕ್ಕುಗಳ ಕುರಿತು ಬೇಡಿಕೆ ಮುಂದಿಟ್ಟಿದ್ದಾರಷ್ಟೆ. ಈ ವಿಷಯದಲ್ಲಿ ಇಸ್ಲಾಂ ಧರ್ಮ ಮಾತ್ರವಲ್ಲ, ಹೆಚ್ಚುಕಡಿಮೆ ವಿಶ್ವದ ಎಲ್ಲಾ ಧರ್ಮಗಳೂ ಹೆಂಗಸರಿಂದ ಅವರ ಸಹಜ, ನೈಸರ್ಗಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದರಲ್ಲಿ ಹೆಚ್ಚಿನ ವಿಶ್ವಾಸ ತೋರಿಸುತ್ತವೆ. ಹಿಂದೂ ಧರ್ಮದಲ್ಲಂತೂ ಇಂದೂ ಸಹ ಹೆಣ್ಣನ್ನು ಒಂದು ವಸ್ತುವೆಂಬಂತೆ ಮದುವೆ ಸಂದರ್ಭದಲ್ಲಿ ಕನ್ಯಾದಾನ ಮಾಡಲಾಗುತ್ತದೆ, ಅದನ್ನು ಹಿಂದೂ ಸ್ತ್ರೀಯರು ಕೊಂಡಾಡುತ್ತಿರುತ್ತಾರೆ. ಅಷ್ಟು ಸಾಲದೆಂಬಂತೆ ಈ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಅನೇಕಾನೇಕ ವ್ರತಗಳನ್ನು ನಡೆಸುತ್ತಾರೆ, ಹೆಮ್ಮೆಯಿಂದ ಅದನ್ನು ಭಾರತೀಯ ಸಂಸ್ಕೃತಿ ಎಂದು ಹೆಸರಿಸುತ್ತಾರೆ.

ಧರ್ಮವಂತೂ ತನ್ನ ಭಕ್ತರನ್ನು ಸದಾ ಗುಲಾಮಗಿರಿಯಡಿ ಬಂಧಿಸಿಡಲು ಬಯಸುತ್ತದೆ, ಅದರಲ್ಲೂ ಮುಖ್ಯವಾಗಿ ಹೆಂಗಸರನ್ನು! ಇದರಿಂದ ಆಕೆ ಸದಾಸರ್ವದಾ ಕಂದಾಚಾರಿಗಳ ಕಪಿಮುಷ್ಟಿಯಲ್ಲಿ ವಿಲವಿಲ ಒದ್ದಾಡುತ್ತಾ ಹಣ ಖರ್ಚು ಮಾಡಲಿ ಎಂದು. ಅತ್ತ ಇಸ್ಲಾಂ ಎಷ್ಟು ಬಲಿಷ್ಠ ಎನಿಸಿದೆಯೋ, ಅಲ್ಲಿ ಹೆಚ್ಚು ಹೆಚ್ಚು ಶೋಷಣೆಗಳಾಗುತ್ತವೆ, ಏಕೆಂದರೆ ಅಲ್ಲಿ ಹೆಣ್ಣು ಸದಾ ದೋಷಿಯ ಪಟ್ಟ ಹೊರುತ್ತಾಳೆ. ಇತ್ತ ಹಿಂದೂ ದೈವ ರಾಮ ರಾವಣನನ್ನು ದೋಷಿ ಎಂದುಕೊಂಡನೋ ಇಲ್ಲವೋ, ಸೀತೆಯನ್ನಂತೂ ಅಗ್ನಿಪರೀಕ್ಷೆಯ ಸತ್ವಪರೀಕ್ಷೆಗೆ ಒಳಪಡಿಸಿದ, ಕೊನೆಗೆ ದೇಶಭ್ರಷ್ಟಳನ್ನಾಗಿಸಿದ.

ಅಮೀನಾರಂತೆ ಇಸ್ಲಾಂನಲ್ಲಿ ಸುಧಾರಣೆಯ ದನಿ ತೆಗೆದ ಮಹಿಳೆಯರನ್ನು ಆ ಧರ್ಮ ಸತತ ಬಾಯಿಬಡಿಯುವ ಪ್ರಯತ್ನ ಮಾಡುತ್ತಿರುತ್ತದೆ. ಆಕೆ ತಸ್ಲೀಮಾ ನಸ್ರೀನ್‌ ಅಥವಾ ಜಹಾಂಗೀರ್‌ ಅಸ್ಮಾ ಯಾರೇ ಆಗಿರಲಿ, ಈ ಕ್ರಮ ತಪ್ಪಿದ್ದಲ್ಲ. ಅಂದರೆ ಮಹಿಳೆಯರ ಮೇಲೆ ತಮ್ಮ ಜೋರು ತೋರಿಸಲು ಇಸ್ಲಾಂ ಹೊಂದಿರುವ ಬಲಿಷ್ಠತನ ಇದುವೇ ಏನು?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ