ಇದಕ್ಕೆ ಗೇಟ್ ವೇ ಆಫ್ ಕರ್ನಾಟಕ ಎಂತಲೂ ಹೇಳಲಾಗುತ್ತದೆ) ಗದ್ಯ ಶೈಲಿಯಲ್ಲಿ ಸ್ವಚ್ಛವಾದ ಕನ್ನಡ ಅಥವಾ ತುಳು ಮಾತಾಡುವವರನ್ನು ನೋಡಿದಾಗ ನಮಗೆ ಥಟ್ಟನೆ ನೆನಪಾಗುವುದು ಮಂಗಳೂರು. ಅನೇಕ ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ರಾಷ್ಟ್ರಕ್ಕೆ ನೀಡಿ ಕರುನಾಡ ವಾಣಿಜ್ಯ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದೂ ಕೂಡ ಮಂಗಳೂರೇ!
ಅಷ್ಟೇ ಏಕೆ, ಕ್ರಿಕೆಟ್ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಖ್ಯಾತನಾಮರಾಗಿರುವ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ, ರವಿ ಶಾಸ್ತ್ರಿ, ಅನಿಲ್ ಕುಂಬ್ಳೆ ಮೊದಲಾದವರೆಲ್ಲಾ ಕಡಲತಡಿಯ ನಾಡಿನ ಹೆಮ್ಮೆಯ ಕುಡಿಗಳೇ!
ಮಂಗಳೂರಿನ ಮಹಿಮೆ
ಕರ್ನಾಟಕದಲ್ಲಿ ಹೆಚ್ಚು ಅಕ್ಷರಸ್ಥರು, ಸುಶಿಕ್ಷಿತರು, ಶಿಸ್ತುಬದ್ಧರು ಹಾಗೂ ಸುಂದರ ಕಾಯದ ಸ್ತ್ರೀ-ಪುರುಷರಿರುವುದು ಕೂಡ ಮಂಗಳೂರಿನಲ್ಲೇ. `ಐಸ್ ಕ್ರೀಂ ಸಿಟಿ’ ಎಂಬ ಖ್ಯಾತಿ ಇರುವ ನಗರ ಮಂಗಳೂರಲ್ಲದೆ ಬೇರಲ್ಲ. ದಕ್ಷಿಣ ಕನ್ನಡದ ಕೇಂದ್ರವಾದ ಮಂಗಳೂರಿಗೆ ದೇಶದೆಲ್ಲೆಡೆಯಿಂದ ಉತ್ತಮ ರಸ್ತೆ ಸಂಪರ್ಕವಲ್ಲದೆ, ರೈಲು ಮತ್ತು ವಿಮಾನ ಸಂಪರ್ಕ ಇದೆ.
ಅರಬ್ಬೀ ಸಮುದ್ರಕ್ಕೆ ಸೇರಿದ ಪಶ್ಚಿಮ ಕರಾವಳಿಯ ತೀರದ ಮೇಲೆ ಬೆಳೆದಿರುವ ಮಂಗಳೂರು ಸುಂದರ ನಗರ. ಎತ್ತ ನೋಟ ಬೀರಿದರೂ ತೊನೆದಾಡುವ ಹಚ್ಚ ಹಸುರಿನ ತೆಂಗು ಮತ್ತು ಅಡಕೆ ಮರಗಳು ಕಣ್ತುಂಬುತ್ತವೆ. ಗುರುಪುರ ಮತ್ತು ನೇತ್ರಾವತಿ ನದಿಗಳು ಸಂಗಮಿಸಿ ಏಕಮುಖವಾಗಿ ಸಮುದ್ರ ಸೇರುವೆಡೆ ಇರುವ ಈ ರೇವು ಪಟ್ಟಣದ ಪಶ್ಚಿಮ ಮತ್ತು ದಕ್ಷಿಣ ಭಾಗ ಹಿನ್ನೀರಿನಿಂದ ಆವೃತ್ತವಾಗಿದ್ದರೆ, ಆಗ್ನೇಯ ಭಾಗ ಕೃಷಿ ಭೂಮಿಯಿಂದ ಫಲವತ್ತಾಗಿದೆ. ಉತ್ತರ ಮತ್ತು ಈಶಾನ್ಯಗಳ ನಡುವೆ ಸಹ್ಯಾದ್ರಿ ಪರ್ವತದ ಸಾಲುಸಾಲು ಬೆಟ್ಟಗುಡ್ಡಗಳ ನಡುವೆ ಹಸುರಿನಿಂದ ಕಂಗೊಳಿಸುವ ಸುಂದರ ಕಣಿವೆ ಪ್ರದೇಶಗಳಿವೆ.
ಮಂಗಳಾದೇವಿ ಮಂದಿರ
ಆದಿಶಕ್ತಿಯ ಮಂಗಳಾದೇವಿ ಹೆಸರಿನಲ್ಲಿ ಅವತರಿಸಿ ಲೋಕ ಕಂಟಕನಾಗಿದ್ದ ಅಂಡಾಸುರನನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ಮಂಗಳಾಪುರವೆಂದು ಕರೆಸಿ ಕೊಳ್ಳುತ್ತಿದ್ದ ಬಂದರು ನಗರಿ, ಕಾಲಾನಂತರ ರೂಪಾಂತರಗೊಂಡು ಮಂಗಳೂರಾಯಿತು. ಈ ಊರಿಗೆ ಸ್ಪಷ್ಟವಾದ ಪ್ರಾಚೀನ ಇತಿಹಾಸವಿಲ್ಲ. ಆದರೆ, 1505ರಲ್ಲಿ ವಿಜಯನಗರದ ಅರಸರ ಆಳ್ವಿಕೆಗೆ ಒಳಪಟ್ಟಿತೆಂದು ತಿಳಿದುಬರುತ್ತದೆ. ತರುವಾಯ ಪೋರ್ಚುಗೀಸರ ವಶವಾದ ಮಂಗಳೂರು 1763ರಲ್ಲಿ ಹೈದರಾಲಿಯ ಕೈಸೇರಿತು. ಆತನಿಂದ ಬ್ರಿಟಿಷರಿಗೆ, ಬ್ರಿಟಷರಿಂದ ಮತ್ತೆ ಟಿಪ್ಪೂ ಸುಲ್ತಾನ್ ಸುಪರ್ದಿಗೊಳಪಟ್ಟು ಅಂತಿಮವಾಗಿ ಮತ್ತೆ ಬ್ರಿಟಿಷರ ಕೈಸೇರಿ ಮದರಾಸು ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿತು.
ನಗರ ದೇವತೆಯಾದ ಮಂಗಳಾದೇವಿಯ ದೇಗುಲ ನಗರದ ಅಂಚಿನ ಸಮುದ್ರ ತೀರದಲ್ಲಿದೆ. ನಗರದ ಪೂರ್ವ ಸರಹದ್ದಿನಲ್ಲಿರುವ ಕದ್ರಿಯಲ್ಲಿ ಪ್ರಸಿದ್ಧ ಮಂಜುನಾಥ ದೇವಾಲಯವಿದ್ದರೆ, ಹೃದಯ ಭಾಗದಲ್ಲಿ ಅನೇಕ ಮಠ ಮಂದಿರಗಳಿವೆ. ಕದ್ರಿಯಲ್ಲಿ ಶಿವರಾತ್ರಿ ಮತ್ತು ನವರಾತ್ರಿ ಉತ್ಸವಗಳು ಬಹಳ ವಿಜೃಂಭಣೆಯಿಂದ ಜರುಗುತ್ತವೆ. ವೇಷಕಟ್ಟಿ ಇಡೀ ರಾತ್ರಿ ಕುಣಿಯುವ ಯಕ್ಷಗಾನ ಹಾಗೂ ನೀರು ಕಟ್ಟಿದ ಗದ್ದೆಯಲ್ಲಿ ದಷ್ಟಪುಷ್ಟ ರಾಸುಗಳನ್ನು ಓಡಿಸುವ ಪ್ರತಿಷ್ಠೆಯ `ಕಂಬಳ’ ಇಲ್ಲಿನ ವಿಶೇಷಗಳು.
ರೋಸರಿ ಚರ್ಚ್
ನಗರದ ಕೇಂದ್ರ ಭಾಗದಲ್ಲಿರುವ ಬೋಲಾರದ ರೋಸರಿ (ರೋಸೆರಿಯ) ಚರ್ಚ್ ಬಹಳ ಪುರಾತನವಾದುದು. 1526ರಲ್ಲಿ ನಿರ್ಮಾಣಗೊಂಡಿರುವ ಈ ಚರ್ಚ್ ದೊಡ್ಡದಾಗಿರುವುದೇ ಅಲ್ಲದೆ, ಅಷ್ಟೇ ಭವ್ಯವಾಗಿಯೂ ಇದೆ. ಇಟಲಿಯಿಂದ ತಂದಿರುವ ಭಾರೀ ಶಬ್ದ ಮಾಡುವ ನಾಲ್ಕು ಗಂಟೆಗಳನ್ನು ಚರ್ಚ್ ಗೋಪುರಕ್ಕೆ ಅಳವಡಿಸಲಾಗಿದೆ. ವಿಶಾಲವಾದ ಈ ಆರಾಧನಾ ಮಂದಿರವನ್ನು ಗೊಮ್ಮಟ ಮುಕುಟದಂತೆ ಅಲಂಕರಿಸಿದೆ. ಇದರ ಮೇಲಿರುವ ಶಿಲುಬೆಗೆ ಅಳವಡಿಸಲಾಗಿರುವ ಕೆಂಪು ದೀಪಗಳು ರಾತ್ರಿ ವೇಳೆ ನಾವಿಕರಿಗೆ ಸಂಜ್ಞಾ ಜ್ಯೋತಿಗಳಂತೆ (ಲೈಟ್ ಹೌಸ್) ಸಹಕಾರಿಯಾಗಿವೆ.
ಈ ದೇವ ಮಂದಿರದಿಂದ ಸ್ವಲ್ಪ ದೂರದಲ್ಲಿರುವ ಸೇಂಟ್ ಅಲೋಷಿಯಸ್ ಕಾಲೇಜಿನ ಚರ್ಚ್ ನ್ನು 1885ರಲ್ಲಿ ಕೆ. ಜೋಸೆಫ್ ವಿಲ್ಲಿ ಎಂಬುವರು ಕಟ್ಟಿಸಿದರಂತೆ. ರೋಮ್ ನ ಸೇಂಟ್ ಫಿಲಿಪ್ ಚರ್ಚ್ ಮಾದರಿಯಲ್ಲಿರುವ ಈ ದೇವ ಮಂದಿರದೊಳಗಿನ ಮೇಲ್ಛಾವಣಿ ಹಾಗೂ ಗೋಡೆಗಳನ್ನು ಇಟಲಿಯ ಪೋಷಮಿ ಎಂಬ ಕಲಾವಿದ ಬಿಡಿಸಿರುವ ವರ್ಣ ಚಿತ್ರಗಳಿಂದ ಅಲಂಕರಿಸಲಾಗಿದೆ.
ಬೈಬಲ್ ನಲ್ಲಿ ಬರುವ ಮಾನವನ ಸೃಷ್ಟಿಯಿಂದ ಕ್ರಿಸ್ತನ ಜನನದವರೆಗಿನ ಹಾಗೂ ಆತನ ಜೀವನದಲ್ಲಿ ಜರುಗಿದ ಕೆಲವು ಪ್ರಮುಖ ಘಟನಾವಳಿಗಳ ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ. ಚರ್ಚ್ ಮತ್ತು ಆಸುಪಾಸಿನಲ್ಲಿರುವ ಕಾಲೇಜು ಕಟ್ಟಡಗಳು ಭವ್ಯವಾಗಿವೆ.
ಈ ಚರ್ಚ್ ಒಂದು ಮ್ಯೂಸಿಯಂನ್ನೂ ಸಹ ಒಳಗೊಂಡಿದೆ. ಮಂಗಳೂರಿನ ಬಂದರು ಪ್ರದೇಶಕ್ಕೆ ಸೇರಿದಂತೆ ಪುರಾತನವಾದ ಜೀನತ್ ಭಕ್ಷ್ ಜುಮ್ಮಾ ಮಸೀದಿ ಇದೆ. ಇದನ್ನು ಅರಬ್ಬರು ಕಟ್ಟಿಸಿದ್ದೆಂದು ಹೇಳಲಾಗುತ್ತದೆ. ಉಲ್ಲಾಳದಲ್ಲಿ ಜರುಗುವ ಉರುಸ್ ಪ್ರಸಿದ್ಧವಾದುದು.
ಕೋಟೆಕೊತ್ತಲು ನಗರದ ವ್ಯಾಪ್ತಿಯೊಳಗೆ ಹಿಂದೆ ನಾಲ್ಕು ಕೋಟೆಗಳಿದ್ದವಂತೆ. ಬಿದನೂರಿನ ಬಸಪ್ಪ ನಾಯಕ ಕಟ್ಟಿಸಿದ ಮಂಗಳೂರ ಕೋಟೆಯನ್ನು ಟಿಪ್ಪೂ ಕೆಡವಿಸಿದನಂತೆ. ಪೋರ್ಚುಗೀಸರು ಕಟ್ಟಿಸಿದ ಸೇಂಟ್ ಸೆಬಾಸ್ಟಿಯನ್ ಕೋಟೆ, ಲೈಟ್ ಹೌಸ್, ಹಿಲ್ ಪೋರ್ಟ್ ಹಾಗೂ ಉರ್ದ ಹತ್ತಿರ ಬಂಗನಾಯಕ ಕಟ್ಟಿಸಿದ ಬಂಗರಕೋಟೆ ಉಳಿದ ಮೂರು ಕೋಟೆಗಳು. ಇಂದು ಮಂಗಳೂರು ಮತ್ತು ಸೆಬಾಸ್ಟಿಯನ್ ಕೋಟೆಗಳ ಅವಶೇಷಗಳು ಮಾತ್ರ ಕಾಣಸಿಗುತ್ತವೆ. ಗುರುಪುರ ಹೊಳೆಯನ್ನು ಶತ್ರು ದೋಣಿಗಳು ಪ್ರವೇಶಿಸುವುದನ್ನು ತಡೆಗಟ್ಟಲು ಬಳಸಲಾಗುತ್ತಿದ್ದ ಟಿಪ್ಪೂ ಕಟ್ಟಿಸಿದ `ಸುಲ್ತಾನ್ ಬತೇರಿ’ ವಿನಾಶದ ಅಂಚಿನಲ್ಲಿದೆ. ನಗರದ ಮಧ್ಯೆ ಸೇಂಟ್ ಅಲೋಷಿಯಸ್ ಚರ್ಚ್ ಸಮೀಪದಲ್ಲಿ ಐತಿಹಾಸಿಕ ಬಾವುಟ ಗುಡ್ಡದ ಮೇಲೆ ಹಳೆಯ ಲೈಟ್ ಹೌಸ್ ಇದೆ. ಇದರ ಸುತ್ತಲೂ ಸರಿಯಾದ ಪೋಷಣೆಯಿಲ್ಲದ ಸುಂದರ ಉದ್ಯಾನವಿದೆ.
1900ರಲ್ಲಿ ಕಟ್ಟಲಾದ ಹೊಸ ಲೈಟ್ ಹೌಸ್ ನ ಗೋಪುರ 48 ಅಡಿ ಎತ್ತರವಿದ್ದು, 17 ಕಿ.ಮೀ. ದೂರದವರೆಗೂ ಬೆಳಕು ಹೊರಹೊಮ್ಮುವುದಂತೆ. ನಗರದಿಂದ ನಾಲ್ಕು ಕಿ.ಮೀ. ದೂರದಲ್ಲಿ ಟಿಪ್ಪೂ ಸುಲ್ತಾನ್ ಕಟ್ಟಿಸಿದ ಸುಲ್ತಾನ್ ಬತೇರಿ ಇದೆ. ಇದರ ಸಮೀಪದಲ್ಲಿ ಗುಹೆ ಒಂದಿದ್ದು ಅದರೊಳಗಿನಿಂದ ಕೊರೆಯಾಗಿರುವ ಸುರಂಗ ಮಾರ್ಗ ಶ್ರೀರಂಗಪಟ್ಟಣಕ್ಕೆ ಕೊಂಡೊಯ್ಯುತ್ತಿತ್ತೆಂದು ಹೇಳಲಾಗುತ್ತದೆ. ಮಂಗಳೂರಿನಿಂದ 12 ಕಿಮೀ. ದೂರದಲ್ಲಿರು ಪಿಳಿಕುಳ ನಿಸರ್ಗಧಾಮ ಒಂದು ಉತ್ತಮ ವಿಹಾರ ತಾಣವಾಗಿದೆ. `ಮಾನಸ’ ಎಂಬ ಜಲಕ್ರೀಡೆಗಳ ಕೇಂದ್ರ, ವಿಜ್ಞಾನ ಕೇಂದ್ರ, ದೋಣಿ ವಿಹಾರ ಕೇಂದ್ರ, ಪ್ರಾಣಿಗಳ ಉದ್ಯಾನ ಮುಂತಾದವೆಲ್ಲಾ ಇವೆ.
ಸ್ಪೆಷಾಲಿಟಿ
ಮಂಗಳೂರಿನ ವೈಪರೀತ್ಯವೆಂದರೆ, ಅತಿಯಾದ ಹವಾಮಾನ. ಮಳೆಗಾಲದಲ್ಲಿ ಅತಿಯಾದ ಮಳೆ, ಬೇಸಿಗೆಯಲ್ಲಿ ಅಸಾಧ್ಯ ಧಗೆ! ಆದ್ದರಿಂದ ಸ್ಥಳೀಯರು ಛತ್ರಿಯಿಲ್ಲದೆ ಮನೆಯಿಂದ ಹೊರಗೆ ಕಾಲಿಡುವುದೇ ಇಲ್ಲ. ಸಮುದ್ರ ತೀರ ಪಕ್ಕದಲ್ಲೇ ಇರುವುದರಿಂದ ಸರ್ವ ಋತುವಿನಲ್ಲೂ ಉಷ್ಣಾಂಶ ಹೆಚ್ಚಾಗಿರುವ ಮಂಗಳೂರಿನ ವಿಶೇಷವೆಂದರೆ ದಾಹವನ್ನು ತಣಿಸುವ ಐಸ್ ಕ್ರೀಂ! ಶುಚಿ, ರುಚಿಯಾದ ನಾನಾ ಬಗೆಯ ಐಸ್ ಕ್ರೀಂ ಪಾರ್ಲರ್ ಗಳು ನಗರದ ಹೃದಯ ಭಾಗದಲ್ಲಿವೆ! ಇವುಗಳಲ್ಲಿ `ಐಡಿಯಲ್ಸ್ ಪಾರ್ಲರ್’ ಅತ್ಯಂತ ಪ್ರಖ್ಯಾತವಾದುದು. ದ್ರಾಕ್ಷಿ, ಬಾದಾಮಿ, ಗೋಡಂಬಿ ಮತ್ತು ಪಿಸ್ತಾ ಹಾಕಿದ `ಗಡ್ ಬಡ್’ ಅತ್ಯಂತ ಅಪ್ಯಾಯಮಾನ ಐಸ್ ಕ್ರೀಂ.
ಬನ್ನಿ ಬೀಚಿಗೆ
ಸಂಜೆ ವೇಳೆ ರಾಗರಂಜಿತ ಸೂರ್ಯಾಸ್ತ ನೋಡುತ್ತಾ ಸಮುದ್ರದ ಅಲೆ ಮತ್ತು ಚಿಲ್ಲನೆ ಚಿಮ್ಮುವ ನೊರೆಯೊಡನೆ ಆಟವಾಡುತ್ತಾ, ಉಲ್ಲಾಸದಿಂದ ಕಾಲಕ್ಷೇಪ ಮಾಡುವ ವಿಶೇಷ ತಾಣವೇ ಉಲ್ಲಾಳ (ಸೋಮೇಶ್ವರ) ಮತ್ತು ತಣ್ಣೀರ್ ಬಾವಿ ಬೀಚ್. ನಗರದಿಂದ ದಕ್ಷಿಣಕ್ಕೆ 11 ಕಿ.ಮೀ. ದೂರದಲ್ಲಿ ನೇತ್ರಾವತಿ ನದಿ ಅರಬ್ಬೀ ಸಮುದ್ರದೊಡನೆ ಸಲಗ್ನಗೊಳ್ಳುವೆಡೆ ಉಲ್ಲಾಳ ಬೀಚ್ ಇದ್ದರೆ, ನಗರದಿಂದ ಉತ್ತರಕ್ಕೆ 10 ಕಿ.ಮೀ. ದೂರದಲ್ಲಿ ತಣ್ಣೀರ್ ಬಾವಿ ಬೀಚ್ ಇದೆ.
ಉಲ್ಲಾಳ ಬೀಚ್
ಶಿಲಾಮಯವಾಗಿ ಇರುವುದರಿಂದ ಈಜಲು ಅಷ್ಟು ಯೋಗ್ಯವಲ್ಲ. ಆದರೆ, ತಣ್ಣೀರ್ ಬಾವಿ ಬೀಚ್ ಹೆಚ್ಚು ಮರಳಿನ ಹರವನ್ನು ಹೊಂದಿರುವುದರಿಂದ ಈಜಲು ಸುರಕ್ಷಿತವಾಗಿದೆ. ಈ ಎರಡು ಬೀಚ್ ಗಳನ್ನು ಸಂದರ್ಶಿಸದ ಹೊರತು ಮಂಗಳೂರು ಪ್ರವಾಸ ಪೂರ್ಣವಾಗದು.
ಕರ್ನಾಟಕದಲ್ಲೇ ಮಂಗಳೂರಿನ ಸಾರಿಗೆ ವ್ಯವಸ್ಥೆ ಅತ್ಯುತ್ತಮವಾದುದು. ಉತ್ತಮ ಗುಣಮಟ್ಟದ ಅನೇಕ ಹೋಟೆಲ್ ಮತ್ತು ವಸತಿ ಗೃಹಗಳಿವೆ. ಮಂಗಳೂರು ಸಮೀಪದಲ್ಲಿ ಪ್ರಸಿದ್ಧವಾದ ಅನೇಕ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿವೆ.
– ರಾಮಕೃಷ್ಣಾರ್ಪಣಾನಂದ