`ರೆಕ್ಕೆ ಇದ್ದರೆ ಸಾಕೆ... ಹಕ್ಕಿಗೆ ಬೇಕು ಬಾನು ಬಯಲಲ್ಲಿ ತೇಲುತ ತಾನು ಮ್ಯಾಲೆ ಹಾರೋಕೆ....' ಎಂಬ ಸುಪ್ರಸಿದ್ಧ ಹಾಡನ್ನು ಕೇಳದ ಕನ್ನಡಿಗರಿಲ್ಲ. `ಚಿನ್ನಾರಿ ಮುತ್ತ' ಚಿತ್ರದ ಈ ಹಾಡನ್ನು ತನ್ನ ಸಿರಿಕಂಠದಿಂದ ಹಾಡಿ ಎಲ್ಲರ ಮನದಲ್ಲಿ ನಿಂತ ಬಾಲ ಗಾಯಕಿ ರೇಖಾ ಇಂದು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಯುವ ಪ್ರತಿಭೆ.
ಮಂಗಳಾ ಹಾಗೂ ಅಂಜನ್ ಕುಮಾರ್ ರ ಮಗಳಾಗಿ ರೇಖಾ ಹುಟ್ಟಿದ್ದು ಸೆಪ್ಟೆಂಬರ್ 1981ರಲ್ಲಿ. ಸಂಗೀತ ಕುಟುಂಬದ ಹಿನ್ನೆಲೆ. ತಾಯಿಯನ್ನು ಆಗಲೇ ಕನ್ನಡದ ಉಷಾ ಉತ್ತುಪ್, ಜೂ. ಎಲ್.ಆರ್. ಈಶ್ವರಿ ಅಂತಲೂ ಕರೀತಿದ್ದರು. ಹಳ್ಳಿ ಮೇಷ್ಟ್ರು, ಚೈತ್ರದ ಪ್ರೇಮಾಂಜಲಿ ಹೀಗೆ ಹಲವಾರು ಚಿತ್ರಗಳಲ್ಲಿ ಹಾಡಿರುವರು. ಅವರ ಹಾಡಿನ ಧಾಟಿಯಲ್ಲಿ ಗ್ರಾಮ್ಯಭಾಷೆಯ ಸೊಗಡಿದ್ದು, ಪದಗಳು ಬಹಳ ಸರಾಗವಾಗಿ ಮೂಡಿಬರುತ್ತಿದ್ದದ್ದು ವಿಶೇಷ. ಇಂತಹ ಕಲೆಯನ್ನು ಗುರುತಿಸಿದ ಸಂಗೀತ ನಿರ್ದೇಶಕರು ಇವರಿಗೆ ಬಹಳಷ್ಟು ಗಮನ ನೀಡುತ್ತ ಉದಯೋನ್ಮುಖ ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದವರು. ಇವರ ಗರಡಿಯಲ್ಲಿ ಅದೆಷ್ಟೋ ನವ ತಾರೆಯರು ಇಂದು ತಮ್ಮ ಕಾಲ ಮೇಲೆ ತಾವು ನಿಂತು ಸಂಗೀತ ಕ್ಷೇತ್ರದಲ್ಲಿ ತಮ್ಮ ಸಾಧನೆಯೊಂದಿಗೆ ಗುರುತಿಸಿಕೊಳ್ಳುತ್ತಿರುವರು. ದಂಪತಿಗಳಿಬ್ಬರೂ ಇಳಯರಾಜ ಮೊದಲುಗೊಂಡು ಎಲ್ಲ ಸಂಗೀತ ನಿರ್ದೇಶಕರೊಂದಿಗೆ ಕೆಲಸ ನಿರ್ವಹಿಸಿರುವರು.
ಅಂಜನ್ ರವರ ತಾಯಿ ಶಾರದಾ ದಾಸಿ, ಅಂದಿನ ಕಾಲಕ್ಕೇ ದೇವರ ನಾಮಗಳನ್ನು ರಚಿಸಿ ರಾಗ ಹಾಕಿ ಹಾಡುತ್ತಿದ್ದ ಪ್ರತಿಭಾನ್ವಿತರು. ಅಂತಹ ಒಂದು ಸಂಗೀತದ ಕೌಟುಂಬಿಕ ಹಿನ್ನೆಲೆಯಲ್ಲಿ ಬೆಳೆದು ಇಂದು ಹೊಸ ಪ್ರಯತ್ನದ ಹೆಜ್ಜೆಯೊಂದಿಗೆ ಮುನ್ನಡೆಯಲು ತೊಡಗಿರುವವರು ರೇಖಾ ಮೋಹನ್ (ರೆಮೋ).
ಅಂದು ಬಾಲಗಾಯಕಿಯಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟಾಗ ಆ ಮಗುವಿಗಿನ್ನೂ 3 ವರ್ಷ. ಮನೆಯ ವಾತಾವರಣ ಮುಖ್ಯ ಕಾರಣ. ಮಕ್ಕಳ ಸಾಕ್ಷಿ, ರಕ್ಷಕರೇ ಭಕ್ಷಕರು, ಹೃದಯ ಬಂಧನ...... ಹೀಗೆ ಹಲವಾರು ಸಿನಿಮಾಗಳಲ್ಲಿ ಸೋಲೋ ಸಾಂಗ್ ಹಾಡುತ್ತ ಬೆಳೆದ ಈ ಬಾಲಪ್ರತಿಭೆ ಜಾನಕಿಯಮ್ಮ. ಎಸ್.ಪಿ.ಬಿ. ಮುಂತಾದ ಮಹಾನ್ ಗಾಯಕರುಗಳ ಜೊತೆ ಹಾಡುತ್ತ ತಮ್ಮ ಕೆರಿಯರ್ ಮುಂದುವರಿಸಿದರು. ಹಂಸಲೇಖ ಇವರ ಮುಖ್ಯ ಗುರು, ಇವರೇ ಸ್ಛೂರ್ತಿ. ಆರ್.ಪಿ. ಪಟ್ನಾಯಕ್, ಇಳಯರಾಜಾರವರೊಂದಿಗೆ ಕೋರಸ್ ನಲ್ಲಿ ಹಾಡಿರುವರು. ಸಿ. ಅಶ್ವತ್ಥ್ ರವರೊಂದಿಗೆ ಹಲವಾರು ಸಿಡಿಗಳಲ್ಲಿ ಇವರ ಧ್ವನಿಯಿದೆ.
``ನಾನು ಯಾವುದೇ ಕಾಂಪಿಟಿಷನ್ಸ್ ಅಂತ ಹೋಗಲೇ ಇಲ್ಲ. ಕಾರಣ ನನ್ನ ಮೊದಲನೇ ಹಾಡೇ ಚಿನ್ನಾರಿ ಮುತ್ತದ್ದು. ನನ್ನ ಹೆಸರೂ ನ್ಯಾಷನಲ್ ಅವಾರ್ಡ್ ಗೆ ನೇಮಕ ಆಗಿತ್ತು. ಆದರೆ ಪ್ರಶಸ್ತಿಯೇನೂ ಬರಲಿಲ್ಲ. ಮುಂದೆ ಜನ ನನ್ನನ್ನು ಮಕ್ಕಳ ಹಾಡಿನ ಕಾರ್ಯಕ್ರಮದಲ್ಲಿ ಜಡ್ಜ್ ಆಗಿಯೋ ಅಥವಾ ಅತಿಥಿಯಾಗಿಯೋ ಕರೆದುಬಿಡುತ್ತಿದ್ದರು. ಹಾಗಾಗಿ ನಾನು ಯಾವ ಕಾಂಪಿಟಿಷನ್ ಗೂ ಹೋಗಲೇ ಇಲ್ಲ,'' ಎಂದು ಹೇಳುತ್ತಾರೆ. 1994ರಲ್ಲಿ ಪತ್ರಕರ್ತರ ಅದ್ಧೂರಿ ಕಾರ್ಯಕ್ರಮವೊಂದು ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು. ಆ ಕಾರ್ಯಕ್ರಮಕ್ಕೆ ಇಳಯರಾಜ, ಎಸ್.ಪಿ.ಬಿ.ಯಂತಹ ಮಹಾನ್ ಸಂಗೀತ ದಿಗ್ಗಜರು ಆಗಮಿಸಿದ್ದು ಆ ಸುಸಂದರ್ಭದಲಿ, `ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು....' ಹಾಡನ್ನು ಹಾಡಿ ಎಲ್ಲರಿಂದ ಪ್ರಶಂಸೆ ಪಡೆದರು. ಇದರ ಪರಿಣಾಮ ಮುಂದೆ ಕೆಲವು ಸಿನಿಮಾಗಳಲ್ಲಿ ಹಾಡುವ ಅವಕಾಶ ಅರಸಿ ಬಂದಿತು.