ಇದಕ್ಕೆ ಗೇಟ್ ವೇ ಆಫ್ ಕರ್ನಾಟಕ ಎಂತಲೂ ಹೇಳಲಾಗುತ್ತದೆ) ಗದ್ಯ ಶೈಲಿಯಲ್ಲಿ ಸ್ವಚ್ಛವಾದ ಕನ್ನಡ ಅಥವಾ ತುಳು ಮಾತಾಡುವವರನ್ನು ನೋಡಿದಾಗ ನಮಗೆ ಥಟ್ಟನೆ ನೆನಪಾಗುವುದು ಮಂಗಳೂರು. ಅನೇಕ ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ರಾಷ್ಟ್ರಕ್ಕೆ ನೀಡಿ ಕರುನಾಡ ವಾಣಿಜ್ಯ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದೂ ಕೂಡ ಮಂಗಳೂರೇ!
ಅಷ್ಟೇ ಏಕೆ, ಕ್ರಿಕೆಟ್ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಖ್ಯಾತನಾಮರಾಗಿರುವ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ, ರವಿ ಶಾಸ್ತ್ರಿ, ಅನಿಲ್ ಕುಂಬ್ಳೆ ಮೊದಲಾದವರೆಲ್ಲಾ ಕಡಲತಡಿಯ ನಾಡಿನ ಹೆಮ್ಮೆಯ ಕುಡಿಗಳೇ!
ಮಂಗಳೂರಿನ ಮಹಿಮೆ
ಕರ್ನಾಟಕದಲ್ಲಿ ಹೆಚ್ಚು ಅಕ್ಷರಸ್ಥರು, ಸುಶಿಕ್ಷಿತರು, ಶಿಸ್ತುಬದ್ಧರು ಹಾಗೂ ಸುಂದರ ಕಾಯದ ಸ್ತ್ರೀ-ಪುರುಷರಿರುವುದು ಕೂಡ ಮಂಗಳೂರಿನಲ್ಲೇ. `ಐಸ್ ಕ್ರೀಂ ಸಿಟಿ' ಎಂಬ ಖ್ಯಾತಿ ಇರುವ ನಗರ ಮಂಗಳೂರಲ್ಲದೆ ಬೇರಲ್ಲ. ದಕ್ಷಿಣ ಕನ್ನಡದ ಕೇಂದ್ರವಾದ ಮಂಗಳೂರಿಗೆ ದೇಶದೆಲ್ಲೆಡೆಯಿಂದ ಉತ್ತಮ ರಸ್ತೆ ಸಂಪರ್ಕವಲ್ಲದೆ, ರೈಲು ಮತ್ತು ವಿಮಾನ ಸಂಪರ್ಕ ಇದೆ.
ಅರಬ್ಬೀ ಸಮುದ್ರಕ್ಕೆ ಸೇರಿದ ಪಶ್ಚಿಮ ಕರಾವಳಿಯ ತೀರದ ಮೇಲೆ ಬೆಳೆದಿರುವ ಮಂಗಳೂರು ಸುಂದರ ನಗರ. ಎತ್ತ ನೋಟ ಬೀರಿದರೂ ತೊನೆದಾಡುವ ಹಚ್ಚ ಹಸುರಿನ ತೆಂಗು ಮತ್ತು ಅಡಕೆ ಮರಗಳು ಕಣ್ತುಂಬುತ್ತವೆ. ಗುರುಪುರ ಮತ್ತು ನೇತ್ರಾವತಿ ನದಿಗಳು ಸಂಗಮಿಸಿ ಏಕಮುಖವಾಗಿ ಸಮುದ್ರ ಸೇರುವೆಡೆ ಇರುವ ಈ ರೇವು ಪಟ್ಟಣದ ಪಶ್ಚಿಮ ಮತ್ತು ದಕ್ಷಿಣ ಭಾಗ ಹಿನ್ನೀರಿನಿಂದ ಆವೃತ್ತವಾಗಿದ್ದರೆ, ಆಗ್ನೇಯ ಭಾಗ ಕೃಷಿ ಭೂಮಿಯಿಂದ ಫಲವತ್ತಾಗಿದೆ. ಉತ್ತರ ಮತ್ತು ಈಶಾನ್ಯಗಳ ನಡುವೆ ಸಹ್ಯಾದ್ರಿ ಪರ್ವತದ ಸಾಲುಸಾಲು ಬೆಟ್ಟಗುಡ್ಡಗಳ ನಡುವೆ ಹಸುರಿನಿಂದ ಕಂಗೊಳಿಸುವ ಸುಂದರ ಕಣಿವೆ ಪ್ರದೇಶಗಳಿವೆ.
ಮಂಗಳಾದೇವಿ ಮಂದಿರ
ಆದಿಶಕ್ತಿಯ ಮಂಗಳಾದೇವಿ ಹೆಸರಿನಲ್ಲಿ ಅವತರಿಸಿ ಲೋಕ ಕಂಟಕನಾಗಿದ್ದ ಅಂಡಾಸುರನನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ಮಂಗಳಾಪುರವೆಂದು ಕರೆಸಿ ಕೊಳ್ಳುತ್ತಿದ್ದ ಬಂದರು ನಗರಿ, ಕಾಲಾನಂತರ ರೂಪಾಂತರಗೊಂಡು ಮಂಗಳೂರಾಯಿತು. ಈ ಊರಿಗೆ ಸ್ಪಷ್ಟವಾದ ಪ್ರಾಚೀನ ಇತಿಹಾಸವಿಲ್ಲ. ಆದರೆ, 1505ರಲ್ಲಿ ವಿಜಯನಗರದ ಅರಸರ ಆಳ್ವಿಕೆಗೆ ಒಳಪಟ್ಟಿತೆಂದು ತಿಳಿದುಬರುತ್ತದೆ. ತರುವಾಯ ಪೋರ್ಚುಗೀಸರ ವಶವಾದ ಮಂಗಳೂರು 1763ರಲ್ಲಿ ಹೈದರಾಲಿಯ ಕೈಸೇರಿತು. ಆತನಿಂದ ಬ್ರಿಟಿಷರಿಗೆ, ಬ್ರಿಟಷರಿಂದ ಮತ್ತೆ ಟಿಪ್ಪೂ ಸುಲ್ತಾನ್ ಸುಪರ್ದಿಗೊಳಪಟ್ಟು ಅಂತಿಮವಾಗಿ ಮತ್ತೆ ಬ್ರಿಟಿಷರ ಕೈಸೇರಿ ಮದರಾಸು ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿತು.
ನಗರ ದೇವತೆಯಾದ ಮಂಗಳಾದೇವಿಯ ದೇಗುಲ ನಗರದ ಅಂಚಿನ ಸಮುದ್ರ ತೀರದಲ್ಲಿದೆ. ನಗರದ ಪೂರ್ವ ಸರಹದ್ದಿನಲ್ಲಿರುವ ಕದ್ರಿಯಲ್ಲಿ ಪ್ರಸಿದ್ಧ ಮಂಜುನಾಥ ದೇವಾಲಯವಿದ್ದರೆ, ಹೃದಯ ಭಾಗದಲ್ಲಿ ಅನೇಕ ಮಠ ಮಂದಿರಗಳಿವೆ. ಕದ್ರಿಯಲ್ಲಿ ಶಿವರಾತ್ರಿ ಮತ್ತು ನವರಾತ್ರಿ ಉತ್ಸವಗಳು ಬಹಳ ವಿಜೃಂಭಣೆಯಿಂದ ಜರುಗುತ್ತವೆ. ವೇಷಕಟ್ಟಿ ಇಡೀ ರಾತ್ರಿ ಕುಣಿಯುವ ಯಕ್ಷಗಾನ ಹಾಗೂ ನೀರು ಕಟ್ಟಿದ ಗದ್ದೆಯಲ್ಲಿ ದಷ್ಟಪುಷ್ಟ ರಾಸುಗಳನ್ನು ಓಡಿಸುವ ಪ್ರತಿಷ್ಠೆಯ `ಕಂಬಳ' ಇಲ್ಲಿನ ವಿಶೇಷಗಳು.
ರೋಸರಿ ಚರ್ಚ್
ನಗರದ ಕೇಂದ್ರ ಭಾಗದಲ್ಲಿರುವ ಬೋಲಾರದ ರೋಸರಿ (ರೋಸೆರಿಯ) ಚರ್ಚ್ ಬಹಳ ಪುರಾತನವಾದುದು. 1526ರಲ್ಲಿ ನಿರ್ಮಾಣಗೊಂಡಿರುವ ಈ ಚರ್ಚ್ ದೊಡ್ಡದಾಗಿರುವುದೇ ಅಲ್ಲದೆ, ಅಷ್ಟೇ ಭವ್ಯವಾಗಿಯೂ ಇದೆ. ಇಟಲಿಯಿಂದ ತಂದಿರುವ ಭಾರೀ ಶಬ್ದ ಮಾಡುವ ನಾಲ್ಕು ಗಂಟೆಗಳನ್ನು ಚರ್ಚ್ ಗೋಪುರಕ್ಕೆ ಅಳವಡಿಸಲಾಗಿದೆ. ವಿಶಾಲವಾದ ಈ ಆರಾಧನಾ ಮಂದಿರವನ್ನು ಗೊಮ್ಮಟ ಮುಕುಟದಂತೆ ಅಲಂಕರಿಸಿದೆ. ಇದರ ಮೇಲಿರುವ ಶಿಲುಬೆಗೆ ಅಳವಡಿಸಲಾಗಿರುವ ಕೆಂಪು ದೀಪಗಳು ರಾತ್ರಿ ವೇಳೆ ನಾವಿಕರಿಗೆ ಸಂಜ್ಞಾ ಜ್ಯೋತಿಗಳಂತೆ (ಲೈಟ್ ಹೌಸ್) ಸಹಕಾರಿಯಾಗಿವೆ.