– ರಾಘವೇಂದ್ರ ಅಡಿಗ ಎಚ್ಚೆನ್.
ಬಾಲಿವುಡ್‌ನ ದಂಪತಿಗಳಲ್ಲೊಬ್ಬರಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಜೀವನದ ಅತ್ಯಂತ ಮಧುರ ಕ್ಷಣವನ್ನು ಆಚರಿಸುತ್ತಿದ್ದಾರೆ. ಈ ಸ್ಟಾರ್ ಜೋಡಿಗೆ ಗಂಡು ಮಗುವಿನ ಆಗಮನವಾಗಿದ್ದು, ಇಂದು ಇನ್‌ಸ್ಟಾಗ್ರಾಂ ಮೂಲಕ ಇಬ್ಬರೂ ತಮ್ಮ ಪುಟ್ಟ ಮಗುವಿನ ಆಗಮನದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಕತ್ರಿನಾ ಕೈಫ್ ತಮ್ಮ ಪೋಸ್ಟ್‌ನಲ್ಲಿ “ನಮ್ಮ ಜೀವನದಲ್ಲಿ ದೇವರ ಆಶೀರ್ವಾದವಾಗಿ ಗಂಡು ಮಗುವಿನ ಆಗಮನವಾಗಿದೆ ಎಂದು ಬರೆದಿದ್ದಾರೆ. ಈ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಅವರ ಪತಿ ವಿಕ್ಕಿ ಕೌಶಲ್ ಕೂಡ ಇದೇ ಸಂದೇಶವನ್ನು ತಮ್ಮ ಖಾತೆಯಿಂದ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕ್ಷಣಾರ್ಧದಲ್ಲಿ ದಂಪತಿಗೆ ಶುಭಾಶಯಗಳ ಮಳೆ ಸುರಿಯಿತು. ಬಾಲಿವುಡ್‌ನ ಅನೇಕ ತಾರೆಯರು, ನಿರ್ದೇಶಕರು, ಹಾಗೂ ಅಭಿಮಾನಿಗಳು ಇಬ್ಬರಿಗೂ ಶುಭ ಹಾರೈಸಿದರು. ಕಳೆದ ಸೆಪ್ಟೆಂಬರ್ 23ರಂದು ವಿಕ್ಕಿ–ಕತ್ರಿನಾ ದಂಪತಿಗಳು ತಾವು ಪೋಷಕರಾಗುವುದಾಗಿ ಘೋಷಿಸಿದ್ದರು. ಅದಾದ ನಂತರ ಕತ್ರಿನಾ ಚಿತ್ರರಂಗದಿಂದ ಕೆಲವು ಕಾಲ ವಿಶ್ರಾಂತಿ ತೆಗೆದುಕೊಂಡು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದರು.
ಈ ಜೋಡಿ ಡಿಸೆಂಬರ್ 2021ರಲ್ಲಿ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬಾರ್ವಾರಾ ಪ್ಯಾಲೇಸ್‌ನಲ್ಲಿ ವೈಭವವಾಗಿ ವಿವಾಹವಾಗಿದ್ದರು. ಆ ವಿವಾಹ ಸಮಾರಂಭದಲ್ಲಿ ಕೇವಲ ಕುಟುಂಬ ಮತ್ತು ಹತ್ತಿರದ ಸ್ನೇಹಿತರು ಭಾಗಿಯಾಗಿದ್ದರು.

ಮಗುವಿನ ನಿರೀಕ್ಷೆಯಲ್ಲಿ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್
ಬಾಲಿವುಡ್‌ನ ಜನಪ್ರಿಯ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ದೊಡ್ಡ ಸಂಚಲನ ಮೂಡಿಸಿದೆ. 2021ರಲ್ಲಿ ರಾಜಸ್ಥಾನದಲ್ಲಿ ಅದ್ಧೂರಿ ವಿವಾಹ ಮಾಡಿಕೊಂಡ ಈ ಜೋಡಿ, ನಾಲ್ಕು ವರ್ಷಗಳ ಬಳಿಕ ಪೋಷಕರಾಗುತ್ತಿರುವುದು ಅಭಿಮಾನಿಗಳಿಗೆ ಖುಷಿಯ ಸುದ್ದಿಯಾಗಿದೆ. ಸೆಪ್ಟೆಂಬರ್ 23, 2025ರಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಚಿತ್ರದ ಮೂಲಕ ಈ ಸಂತಸದ ಸುದ್ದಿಯನ್ನು ಅಧಿಕೃತಗೊಳಿಸಿದ್ದಾರೆ. ಕತ್ರಿನಾ ಅವರ ಬೇಬಿ ಬಂಪ್ ತೋರಿಸುವ ಆ ಚಿತ್ರದಲ್ಲಿ ವಿಕ್ಕಿ ಅವರು ಪ್ರೀತಿಯಿಂದ ಅದನ್ನು ಮುಟ್ಟುತ್ತಿರುವುದು ಹೃದಯಸ್ಪರ್ಶಿಯಾಗಿದೆ. ನಮ್ಮ ಜೀವನದ ಅತ್ಯುತ್ತಮ ಅಧ್ಯಾಯದ ಆರಂಭದಲ್ಲಿ ನಾವಿದ್ದೇವೆ. ಈ ಸಮಯದಲ್ಲಿ ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿದೆ ಎಂದು ಕತ್ರಿನಾ ಬರೆದುಕೊಂಡಿದ್ದಾರೆ.
ಕತ್ರಿನಾ ಕೈಫ್ ಅವರು ಬ್ರಿಟಿಷ್ ಮೂಲದ ನಟಿ ಆಗಿದ್ದು, ಬಾಲಿವುಡ್‌ನಲ್ಲಿ ‘ಜಬ್ ತಕ್ ಹೈ ಜಾನ್’, ‘ಏಕ್ ಥಾ ಟೈಗರ್’, ‘ಧೂಮ್ 3’ ಮುಂತಾದ ಹಿಟ್ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದಾರೆ. ವಿಕ್ಕಿ ಕೌಶಲ್ ಅವರು ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’, ‘ಸರ್ದಾರ್ ಉದಮ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದಾರೆ. ಇಬ್ಬರ ನಡುವಿನ ಪ್ರೇಮ ಕಥೆ 2019ರಲ್ಲಿ ಆರಂಭವಾಗಿ, 2021ರ ಡಿಸೆಂಬರ್‌ನಲ್ಲಿ ವಿವಾಹಕ್ಕೆ ಮುಕ್ತಾಯವಾಯಿತು. ಕತ್ರಿನಾ ಅವರು ವಿಕ್ಕಿಗಿಂತ ಏಳು ವರ್ಷ ದೊಡ್ಡವರಾಗಿದ್ದರೂ ವಯಸ್ಸಿನ ಅಂತರವನ್ನು ನಿರ್ಲಕ್ಷಿಸಿ ಪ್ರೀತಿಯನ್ನು ಬೆಳೆಸಿಕೊಂಡರು. ಮದುವೆಯ ನಂತರ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಸಕ್ರಿಯರಾಗಿದ್ದರು ಆದರೆ ಕುಟುಂಬ ಜೀವನಕ್ಕೆ ಪ್ರಾಧಾನ್ಯ ನೀಡುತ್ತಿದ್ದರು.
ಕಳೆದ ಕೆಲ ವಾರಗಳಿಂದಲೂ ಕತ್ರಿನಾ ಗರ್ಭಿಣಿ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಅವರು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದು, ಲಂಡನ್‌ನಲ್ಲಿ ಕಾಣಿಸಿಕೊಂಡಾಗ ಬೇಬಿ ಬಂಪ್ ಗಮನಿಸಿದ ಅಭಿಮಾನಿಗಳು ಈ ಸುದ್ದಿಯನ್ನು ಊಹಿಸಿದ್ದರು. ಇದೀಗ ಅಧಿಕೃತ ಘೋಷಣೆಯೊಂದಿಗೆ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ. ವರದಿಗಳ ಪ್ರಕಾರ ಮಗು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಜನ್ಮ ತಾಳಲಿದೆ ಎಂದು ಹೇಳಲಾಗಿದೆ.
ಈ ಸುದ್ದಿಯ ಹಿಂದೆ ಒಂದು ಆಸಕ್ತಿದಾಯಕ ಅಂಶವೆಂದರೆ ಕತ್ರಿನಾ ಅವರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಭೇಟಿ. 2025ರ ಮಾರ್ಚ್‌ನಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಈ ಪ್ರಸಿದ್ಧ ದೇವಸ್ಥಾನಕ್ಕೆ ಭೇಟಿ ನೀಡಿ, ಸರ್ಪ ಸಂಸ್ಕಾರ ಮತ್ತು ಅಶ್ಲೇಷ ಬಲಿ ಪೂಜೆಗಳನ್ನು ಸಲ್ಲಿಸಿದ್ದರು. ಇದು ಸಾಮಾನ್ಯವಾಗಿ ಸರ್ಪ ದೋಷ ನಿವಾರಣೆಗಾಗಿ ಮಾಡುವ ಪೂಜೆಯಾಗಿದ್ದು ಸಂತಾನ ಭಾಗ್ಯಕ್ಕೆ ಸಂಬಂಧಿಸಿದ ದೋಷಗಳನ್ನು ತೊಡೆದುಹಾಕುವ ನಂಬಿಕೆ ಇದೆ. ಕತ್ರಿನಾ ಅವರು ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ಇದ್ದು, ವಿಶೇಷ ಆಚರಣೆಗಳಲ್ಲಿ ಭಾಗವಹಿಸಿದ್ದರು. ಈ ಭೇಟಿಯ ನಂತರ ಆರು ತಿಂಗಳಲ್ಲೇ ಗರ್ಭಧಾರಣೆ ಸುದ್ದಿ ಬಂದಿರುವುದು ಅಭಿಮಾನಿಗಳಲ್ಲಿ ‘ಪೂಜಾ ಫಲ’ ಎಂಬ ಚರ್ಚೆಗೆ ಕಾರಣವಾಗಿದೆ. ದೇವಸ್ಥಾನದ ಅಧಿಕಾರಿಗಳು ಕತ್ರಿನಾ ಅವರ ಭೇಟಿಯನ್ನು ದೃಢೀಕರಿಸಿದ್ದು, ಅವರು ಸರಳತೆಯಿಂದ ಪೂಜೆ ಸಲ್ಲಿಸಿದ್ದರು ಎಂದು ಹೇಳಿದ್ದಾರೆ.





